ಕಥಾ ಯಾನ

ಕಥೆ

ಸ್ವಾತಂತ್ರ್ಯ

ಡಾ.ಪ್ರೇಮಲತ ಬಿ.

Low Angle Photo of Airplane

ನನಗೀಗ ೧೯ ವರ್ಷ. ಕೆಲವೊಮ್ಮೆ ಆಲೋಚನಾ ಲಹರಿಯಿಂದ ನಾನು ಇತರರಿಗಿಂತ ವಿಭಿನ್ನ ಮಿಡಿತಗಳನ್ನು ಹೊಂದಿರುವಂತೆ ಅನಿಸಿದರೂ ತಾರುಣ್ಯದ ದಿನಗಳ ಎಲ್ಲ ಭಾವನೆಗಳ ಉಗಮದ ಪ್ರತಿ ಅನುಭವ ನನಗಾಗಿದೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಕಾರಣದಿಂದಲೋ ಏನೋ, ಪ್ರೀತಿ-ಪ್ರೇಮದ ಅಲೆಗಳಲ್ಲಿ, ಡಿಸ್ಕೋ-ಕುಡಿತಗಳ ಅಮಲಿನಲ್ಲಿ ಕೊಚ್ಚಿಹೋಗುವ ಉನ್ಮಾದಕ್ಕಾಗಿ ಮನಸ್ಸು ತೀವ್ರವಾಗಿ ಮಿಡಿದಿಲ್ಲ. ಬದಲು ಸಮಾಜದಲ್ಲಿ ಮುಕ್ತತೆಯನ್ನು ಕಾಣುವ, ಸ್ವಾತಂತ್ರದ ಸಂಪೂರ್ಣ ಸ್ವೇಚ್ಚೆಗಾಗಿ ನನ್ನ ಮನಸ್ಸು ತುಮಲಗೊಳ್ಳುತ್ತದೆ. ಧೀಮಂತ ಯುವ ಶಕ್ತಿಯನ್ನು ಬಳಸಿ ಈ ಸಂಕುಚಿತ ಸಮಾಜವನ್ನು ಬದಲು ಮಾಡಬೇಕೆಂಬ ಉತ್ಕಟೇಚ್ಛೆ ನನ್ನಲ್ಲಿ ಯಥೇಚ್ಚವಾಗಿದೆ.

ಒಬ್ಬ ಸುಂದರ ಯುವತಿಯನ್ನು ಕಂಡರೆ ಮನಸ್ಸು ಪುಳಕಗೊಳ್ಳುಷ್ಟೇ ಸಹಜವಾಗಿ ಸಮಾಜದಲ್ಲಿನ, ಅನೀತಿ, ಅಧರ್ಮ, ಲಂಚಕೋರತನ, ಶಿಕ್ಷಣದಲ್ಲಿರುವ ರಾಜಕೀಯ ಇವುಗಳನ್ನು ಕಂಡಾಗ ಕೆಡುಕೆನಿಸುತ್ತದೆ.ಧಮನಿ, ಧಮನಿಗಳಲ್ಲಿ ಹರಿವ ರಕ್ತ ಬಿಸಿಯಾಗಿ ಅಸಹಾಯಕತೆಯ ನಿಟ್ಟಿಸುರಾಗಿ ಹೊರಬಂದು ಆತ್ಮಸಾಕ್ಷಿ ನನ್ನನ್ನು ಹಿಂಸಿಸುತ್ತದೆ.ಬೆಟ್ಟಗಳನ್ನು ಹತ್ತಲು, ನದಿಗಳನ್ನು ಈಜಲು,ಬಯಲಿನಲ್ಲಿ ನಿರ್ಭಿಡೆಯಾಗಿ ಓಡಲು, ಕಾಡಿನಲ್ಲಿ ಒಂಟಿಯಾಗಿ  ಅಲೆಯಲು ಅದಮ್ಯ ಉತ್ಸಾಹ ಹೊಂದಿರುವ ನನ್ನಂತಹವರ ಮಿಡಿತಗಳು, ರಸ್ತೆಯಲ್ಲಿ ಸಂಕೋಚಪಡದೆ, ಹೆದರದೆ ನಡೆಯಲೂ ಆಗದಿರುವ ಈ ವ್ಯವಸ್ಥೆಯಲ್ಲಿ ಹಾಗೇ ತಣ್ಣಗಾಗಿಬಿಡುತ್ತವೆ. ಇದು ನಿರಾಶಾವಾದವಲ್ಲ. ಬದುಕಿನ ಕ್ರೂರ ಸತ್ಯ!

ಇದಕ್ಕೆ ವಿರುದ್ಧವಾಗಿ ಸೊಲ್ಲೆತ್ತಿದರೆ ಆತ್ಮಹತ್ಯೆಯ ಹೆಸರಲ್ಲಿ ಅವರ ಹತ್ಯೆ. ಹಾಡುಹಗಲಲ್ಲೇ ಗುಂಡು. ವ್ಯವಸ್ಠಿತ ಜಾಲದ ಮಾಯೆಯಲ್ಲಿ ಎಲ್ಲ ಮಾಹಿತಿ,ಪರಿಣತಿಗಳ ವಿಪರ್ಯಾಸ. ಮಾಧ್ಯಮಗಳ ಹುಟ್ಟಡಗಿಸಿ, ಪರ-ವಿರೋಧಗಳ ಮಾರುಕಟ್ಟೆಯನ್ನು ಸೃಷ್ಟಿಸಿ ಅಪಹಾಸ್ಯವಾಗುತ್ತಿರುವ ಈ ದೇಶದ ಯುವ ತರುಣನಾಗಿ ನಾನೇನು ಮಾಡಬಲ್ಲೆ??

ಅಖಂಡವಾಗಿ ನಿಂತಿರುವ ದೊಡ್ಡ ದೇಶ ನನ್ನದು. ಆದರೆ ಇಲ್ಲಿ ಬದಲಾವಣೆಯ ಹರಿಕಾರರು ಯಾರದರೂ ಇದ್ದಾರೆಯೇ? ಅಂತವರಿಗಾಗಿ ನಾನು ಹುಡುಕಿ ಅಲೆಯಲೇ? ಈ ವ್ಯವಸ್ಥಿತ ಭ್ರಷ್ಟಾಚಾರ ನನ್ನ ಮನಸ್ಸುನ್ನು ಆಲೆಗಳೇ ಇಲ್ಲದಸಮುದ್ರವಾಗಿ ಯಾಂತ್ರಿಕತೆಯನ್ನು ರೂಢಿಸಿಕುಳ್ಳುವಂತೆ ಮಾಡುವ  ಮೊದಲು, ನನ್ನ ಭವಿಷ್ಯವನ್ನು ಹೇಗೆ ತಿರುಗಿಸಲಿ? ಇಂದಿನ ಸ್ವತಂತ್ರ ದಿನಾಚರಣೆಯ ಯಾವ ಭಾಷಣಕಾರರಲ್ಲೂ ನಾನು ಬದಲಾವಣೆಯ ಕಿಡಿಯಿರಲಿ, ಕಾವನ್ನೂ ಕಾಣಲಿಲ್ಲ.ಕಳೆದ ಹತ್ತು ವರ್ಷಗಳಲ್ಲಿ ಸ್ವಾತಂತ್ರ ದಿನಾಚರಣೆಯ ಬಗ್ಗೆ ಪುಳಕಿತಗೊಳ್ಳುವ ದಿನಗಳಿಂದ ಬದಲಾಗಿ, ನಿರಾಶಗೊಳ್ಳುವ ಆತಂಕಕ್ಕೆ ಸಿಲುಕಿಕುಳ್ಳುತ್ತಿದ್ದೇನೆ. ದೇವರೇ ರಕ್ಷಿಸು.”..

“ಹತ್ತಾರು ವರ್ಷದ ಅವೇ ಹಳೇ ಬಟ್ಟೆಗಳನ್ನು ಅದೇನಂತ ಹಾಕ್ಕೋತಿಯೋ?ಬಿಸಾಕಿ,ಬೇರೆ ಹೊಲಿಸಿಕೋ…. “ನಡುಮನೆಯಲ್ಲಿ ಬಟ್ಟೆ ಮಡಿಚಿಡುತ್ತಿದ್ದ ಅಮ್ಮ ಕೂಗಿದಳು.

“ಅವೇನು ಹರಿದಿಲ್ಲವಲ್ಲಮ್ಮ..? ಹೊಸದ್ಯಾಕೆ ಬೇಕು?”-ಹರೆಯದ ದಿನಗಳನನ್ನ ಹಳೇ ದಿನಚರಿ ಪುಸ್ತಕದಲ್ಲಿ ಸ್ವತಂತ್ರ ದಿನಾಚರಣೆಯ ದಿನ ಬರೆದದ್ದನ್ನು ಓದುವುದನ್ನು ನಿಲ್ಲಿಸಿ, ತಲೆ ಎತ್ತಿ ಕೂಗಿ ದಬಕ್ಕನೆ ಇಹಲೋಕಕ್ಕೆ ಬಂದೆ.ಇವತ್ತು ಕೂಡ ಇನ್ನೊಂದು ಸ್ವತಂತ್ರ ದಿನಾಚರಣೆ. ಹಾಗೆಂದೇ ನನ್ನಲ್ಲಿ ಈ ತಾದಾನ್ಮ್ಯತೆ.

 ಅಮ್ಮ ಹೇಳುತ್ತಿದ್ದುದು ಸರಿಯೆಂದು ಗೊತ್ತಿದ್ದರೂ ಹತ್ತು ವರ್ಷಗಳಿಂದ ಹೇಳುತ್ತಿದ್ದ ಅದೇ ಉತ್ತರ ಹೇಳಿದೆ.ಅಮ್ಮನಲ್ಲವೇ…..ದಬಾಯಿಸಿಬಿಡಬಹುದು!

“ಈಗೆಲ್ಲ ಈ ತರದವನ್ನು ಜನ ಹಾಕ್ಕೊಳಲ್ಲ.ಫ್ಯಾಷನ್ ಬದಲಾಗಿದೆ. ಜನ ಆಡ್ಕೊಂಡ್ ನಗ್ತಾರೆ….” ಅಮ್ಮನೇನು ಬಿಡುವವಳಲ್ಲ.

“ಆಡ್ಕೊಂಡ್ ನಗಲಿ ಬಿಡು.ನಾನು ಯಾರಿಗೇನು ತೊಂದರೆ ಮಾಡ್ತಿಲ್ವಲ್ಲ.ಈ ಜನರಿಗೆ ಯಾರು ಅವರಿಗೆ ಹಾನಿ ಮಾಡ್ತಿದ್ದಾರೆ ಅನ್ನೋ ಅರಿವಿದ್ರೆ ತಾನೆ..”

“ಏನೋಪ್ಪ..,ಬೇಕಾದಷ್ಟು ದುಡೀತೀಯ.ವಯಸ್ಸಿದೆ,ಎಲ್ಲರಂಗಿರು ಅಂತ ಹೇಳಿದೆ… “ಅಮ್ಮ ಅಲ್ಲಿಗೆ ಸುಮ್ಮನಾದಳು. ಮನಸ್ಸಲ್ಲಿ ಏನೆಂದುಕೊಂಡಳೋ ಯಾರಿಗೆ ಗೊತ್ತು?

ಭಾರತ ಬಿಟ್ಟು ೧೫ ವರ್ಷವಾಯ್ತು.ಇಪ್ಪತ್ತೈದು ವರ್ಷದ ವಯಸ್ಸಿನಲ್ಲಿ ಇದ್ದ ಆಕಾರದಲ್ಲೇ ಈಗಲೂ ಇದ್ದೇನೆ.ಮನಸ್ಥಿತಿ, ಕಾಲಗತಿಯಲ್ಲೂ…..

ಹರಿಯದ ಬಟ್ಟೆಗಳನ್ನು ಎಸೆಯದೆ,ಬೆಳೆಸಿಕೊಂಡ ಭಾವನೆಗಳನ್ನು ಹರಿದುಕೊಳ್ಳದೆ ಗಡಿಯಾರದಂತೆ ಪ್ರತಿ ಆಗಷ್ಟ್ ಗೆ ಸರಿಯಾಗಿ ಭಾರತಕ್ಕೆ ಮರಳಿದ್ದೇನೆ. ಅದೇ ಹಳೆಯ ಬಟ್ಟೆಗಳನ್ನು ಅಲೆಮಾರಿನಿಂದ ತೆಗೆದು ಉಟ್ಟು, ಪರಕಾಯ ಪ್ರವೇಶ ಮಾಡಿದಂತೆ ಹುದುಗಿಕೊಂಡಿದ್ದೇನೆ.ಕಾಲಕ್ರಮದಲ್ಲಿ ನಾನೊಂದಾಗಿದ್ದಾಗ ನನಗನಿಸಿದ್ದ ಎಲ್ಲ ಭಾವನೆಗಳಿಗೆ ಮರುಜೀವ ನೀಡಿ ಅಪ್ಯಾಯಕರವಾದ ಹಲವು ಭಾವನೆಗಳನ್ನು ಮೆಲುಕು ಹಾಕಲು ತವಕಿಸುತ್ತೇನೆ.

Selective Focus Photo of Airplane Window

ನಡುಮನೆಯಲ್ಲಿ ಅಮ್ಮ ಮಾತನಾಡುತ್ತಿದ್ದಳು.

“ಚೆನ್ನಾಗಿದ್ದೀರ? …ಹೌದು.. ಮಗ-ಸೊಸೆ ಬಂದು ಒಂದು ವಾರ ಆಯ್ತು. ಇಲ್ಲ. ಸೊಸೆ ಮಕ್ಕಳನ್ನು ಕರ್ಕೊಂಡು ಅವರಮ್ಮನಮನೆಗೆ ಹೋಗಿದ್ದಾಳೆ….ಇಂಗ್ಲೆಂಡಿನಲ್ಲೇ ಇರಲ್ವಂತೆ. ಬರ್ತೀನಿ ಅಂತಾನೆ ಇರ್ತಾನೆ..ಅದೇನು ಮಾಡ್ತಾನೋ ಗೊತ್ತಿಲ್ಲ… ನನಗೇನೋ ಬರ್ತಾನೆ  ಅನ್ನಿಸುತ್ತೆ.ಅದ್ರೂ ಹೇಳಕ್ಕಾಗಲ್ಲ…ದೇವರಿಟ್ಟಂತೆ ಅಗ್ಲಿ ಬಿಡಿ ಗಂಗ, ನನ್ನ ಕೈ ಲೇನಿದೆ ಹೇಳಿ…”

ಅಮ್ಮ ತನ್ನ ಗೆಳತಿ ಗಂಗಾಂಬಿಕೆಯ  ದೂರವಾಣಿ ಕರೆಗೆ  ಕಿವಿಯೊಡ್ಡಿದ್ದಳು. ನನ್ನ ಅಕ್ಕ ಮತ್ತು ಭಾವ ಇದೇ ದೇಶದಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿರುವುದರಿಂದ ಅಮ್ಮನ ಬಗ್ಗೆ ಆತಂಕವಿಲ್ಲ, ಭಾವ ಅಮ್ಮನ ಕೊನೆಯ ತಮ್ಮನೂ ಆಗಿರುವುದರಿಂದ ಅಳಿಯ ಎಂಬ ಹಂಗಿಲ್ಲ. ಗಂಡುಮಗ ಜೊತೆಯಲ್ಲಿಲ್ಲದ ಕೊರತೆ ಅಮ್ಮನ ಮಾತಲ್ಲಿ ಕಾಣಿಸುತ್ತಿತ್ತು. ಆದರೆ, ನಿರಾಸೆಯನ್ನು ಹತ್ತಿಕ್ಕಿ, ನಿರುಮ್ಮಳವಾಗಿ ಗೆಳತಿಯ ಜೊತೆ ಅಮ್ಮ ಮಾತು ಮುಂದುವರಿಸಿದಳು.

“ಬೆಂಗಳೂರಲ್ಲಿ ಬೇಕದಷ್ಟು ಆಸ್ತಿ ಮಾಡಿದ್ದಾರಲ್ಲ…ಹೌದು… ಒಂದು ಫ್ಲಾಟ್ ಇದೆ, ಮನೆ ಇದೆ.ಎರಡನ್ನೂ ಬಾಡಿಗೆಗೆ ಕೊಟ್ಟಿದ್ದಾನೆ.ಬೇಕಾದಷ್ಟು ಬಾಡಿಗೆ ಬರುತ್ತೆ.ಲಂಡನ್ನಿನಲ್ಲೇನು…ಅವರಿಗೆ ಬೇಕಾದಂತೆ ಸಂಬಳ…ಕೈಗೊಂದು,ಕಾಲಿಗೊಂದು ಆಳು…ಎರಡೆರಡು ಕಾರು…ಗೊತ್ತಲ್ಲ, ಆ ದೇಶದ ದುಡ್ಡಿಗೆ ಡಾಲರಿಗಿಂತ ಭಾರೀ ಬೆಲೆಯಂತಲ್ಲ……?“

ನಾಲ್ಕನೇ ತರಗತಿಗೆ ಓದು ನಿಲ್ಲಿಸಿ, ೧೬ ಕ್ಕೆಲ್ಲ ಮದುವೆಯಾದ ಅಮ್ಮನಿಗೆ ಯಾವ ಕೊರತೆಯೂ ಇರಲಿಲ್ಲ. ಕೈ ತುತ್ತು ನೀಡಿ ಬೆಳೆಸಿದ ಮಗನ ಅಗಲಿಕೆಯ ನೋವನ್ನು ಅವನ ದುಡ್ಡಿನ ಬಗೆಗಿನ ಬೊಗಳೆಯಲ್ಲಿ ಮುಳುಗಿಸಿ.ಗೆಳತಿಯ ಮುಂದೆ ತೇಲಿಬಿಡುತ್ತಿದ್ದಾಳೆ. ಸಂಬಂಧಗಳು ಸಮುದ್ರದ ಎರಡೆರಡು ದಿಕ್ಕಿನಲ್ಲಿ ಹರಡಿಕೊಂಡರೂ ಹಣದ ಮೇಲ್ಮೈ ಅಡಿ ಅಗಲಿಕೆಯ ನೋವನ್ನು ಬಚ್ಚಿಟ್ಟು ಸಮಾಜದಲ್ಲಿ ಮೂಗೆತ್ತಿ ನಡೆವ ಅಮ್ಮನ ಕುಶಲತೆಗೆ ತಲೆಬಾಗಬೇಕೇನೋ……!

ಅಮ್ಮನನ್ನು ಬಿಗಿದಪ್ಪಿ ಬಾಚಿ ಕೂರಬೇಕೆಂದು ಎಷ್ಟೋ ಸಾರಿ ಅನ್ನಿಸುತ್ತದೆ,ತಂದೆ ತೀರಿದ ಮೇಲೆ ಮೊಮ್ಮಕ್ಕಳ ಸ್ಪರ್ಷ ಬಿಟ್ಟರೆ ಅವಳಿಗೆ ಬೇರಿಲ್ಲ. ಹಾಗೆ ಮಾಡಿದರೆ ಅವಳು ಕೊಸರಿಕೊಂಡರೂ ಒಳಗೊಳಗೆ ಸಂತಸ ಪಡುತ್ತಾಳೆಂದೂ ನನಗನಿಸಿದೆ. ಆದರೆ ಪರಸ್ಪರ ವರ್ಷಕ್ಕೊಮ್ಮೆ ಎದುರಾದಾಗ ಹಸ್ತವನ್ನು ಅದುಮಿಕ್ಕಿದ್ದಕ್ಕಿಂತ ಹೆಚ್ಚು ಮಾಡಿಲ್ಲ. ಪರದೇಶಿಯಾದ ನಾನು ಒಂದಿಷ್ಟೂ ಸ್ವದೇಶಿತನವನ್ನು ಬಿಟ್ಟಿಲ್ಲ.

“ ಅಯ್ಯೋ ನೀನೇನೋ…ನೀನು, ನಿನ್ನ ಮಕ್ಳು ಎಲ್ಲ ಹೋಟೆಲಿನಲ್ಲಿ ನಮ್ಮ ತರಾನೇ ತಿಂದಿರಲ್ಲೋ…ಶಾರದಮ್ಮನ ಮಗಳು- ಗಂಡ ಅಮೆರಿಕದಿಂದ  ಬಂದಾಗ ನೀನು ನೋಡಬೇಕಿತ್ತು…. ಅವರ ಊಟದ ಕಟ್ಟುಪಾಡೇನು… ನೀರಿನ ವ್ಯವಸ್ಠೆಯೇನು…ಇಡೀ ಮೂರು ವಾರ ಅವರ ಮನೆಯಲ್ಲಿ ನಡೆದದ್ದು ಮುಂದಿನ ಮೂರು ತಿಂಗಳ ಕಾಲ ನಮ್ಮ ಮಹಿಳಾ ಸಂಘದಲ್ಲಿ ಚರ್ಚೆಯಾಯ್ತು…”

ಅಂತ ಅಮ್ಮ ಒಮ್ಮೆ ಹೇಳಿದ್ದಳು.ಅಮ್ಮನ ಈ ಮಾತಲ್ಲಿ ನಿರಾಶೆಯ ಸುಳಿವಿತ್ತು ಎನ್ನುವಲ್ಲಿ ನನಗೆ ಸಂಶಯವಿರಲಿಲ್ಲ. ಅಮ್ಮ ನನ್ನ ಬಗ್ಗೆ ಏನು ತಾನೇ ಹೇಳಿಕೊಳ್ಳಲು ಸಾಧ್ಯವಿತ್ತು? ನನ್ನಲ್ಲಿ ಪರದೇಶದ ದುಡ್ಡಿನ ಯಾವ ಗತ್ತುಗಳೂ ಇರಲಿಲ್ಲ.

Time Lapse Photography of White Commercial Airplane

ಒಮ್ಮೊಮ್ಮೆ ಈ ಜಟಿಲ ಸಮಾಜ ಪರದೇಶದಿಂದ ಬಂದ ಭಾರತೀಯರು ಪಾಸ್ಚಿಮಾತ್ಯರ ರೀತಿಯೇ ವರ್ತಿಸಲಿ ಎಂದು  ನಿರೀಕ್ಷಿಸುತ್ತದೆ. ಅದನ್ನು ನೋಡುವ ಅರೆಕ್ಷಣದ ಮನರಂಜನೆಯನ್ನು ಬಿಟ್ಟರೆ ಅದರಿಂದ ಇವರಿಗೆ ಗಿಟ್ಟುವುದಾದರೂ ಏನು?ಭಾರತೀಯತೆಯಲ್ಲಿ ಮೀಯಲು ಸಾವಿರಾರು ಮೈಲಿ ಹಾರಿಬರುವ ನಮಗೆ ಕೆಲವೊಮ್ಮೆ ನಿರಾಶೆ ಕಟ್ಟಿಟ್ಟ ಬುತ್ತಿ.ಪರದೇಶದಲ್ಲಿ ಭಾರತೀಯರಂತಿರುವ ನಮಗೆ,ಭಾರತಕ್ಕೆ ಮರಳಿದಾಗ ಪಾಶ್ಚಾತ್ಯರಂತೆ ವರ್ತಿಸಬೇಕಾದ ಹಿಂಸೆ ! ವಿದೇಶದಲ್ಲಿರುವಾಗ ಭಾರತೀಯರು ಎಂಬುದನ್ನು ಮರೆತು ಬಿಳಿಯರಿಗಿಂತ ಬೆಳ್ಳಗೆ ವರ್ತಿಸಿ,ಭಾರತದಲ್ಲೂ ಅದೇ ಚಮಕ್ ತೋರಿಸುವ ಭಾರತೀಯರು ಇವರಿಗೆ ಮಾದರಿ? ಭಾರತದ ಇಂದಿನ ಸಮಾಜದಲ್ಲಿ ಪಾಶ್ಚಾತ್ಯರ ಅಂಧ ಅನುಕರಣೆ ಊಟ, ಉಡಿಗೆ, ತೊಡಿಗೆಗಳಲ್ಲಿ ಹಾಸು ಹೊಕ್ಕಿದೆ.

ಇತ್ತೀಚೆಗೆ ಗೆಳೆಯರ ಸಮಾವೇಶದಲ್ಲಿ ಅಮೆರಿಕಾದ ಉಡುಗೆ ತೊಟ್ಟು, ಸಂಜೆಯಲ್ಲಿ ಕರಿಕಪ್ಪು ಕನ್ನಡಕ ತೊಟ್ಟು, ಹೆಂಡತಿಗೆ ತುಂಡುಲಂಗ ಉಡಿಸಿಕೊಂಡು ಬಂದಿಳಿದ ಗೆಳೆಯ ರವಿಯ ಸಂಸಾರದ ಜೊತೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಸಾಲುಗಟ್ಟಿ ಸರತಿಗೆ ಕಾದ ನನ್ನ ಭಾರತೀಯ ಮಿತ್ರರ ಬಗ್ಗೆ ಕನಿಕರವಾಯ್ತು,   ಮರುಕ್ಷಣ ಫೇಸ್ಬುಕ್ಕಿನಲ್ಲಿ, ವ್ಹಾಟ್ಸಪ್ಪಿನಲ್ಲಿ ಅಮೆರಿಕಾದ ತಮ್ಮ ಮಿತ್ರರ ಜೊತೆ ತೆಗೆಸಿಕೊಂಡ ಚಿತ್ರಗಳ ರವಾನೆ ಮಾಡುತ್ತಿದ್ದರು.ಭಾರತದಲ್ಲಾದರೂ ಭಾರತೀಯ ಉಡುಗೆ ಉಡುವ ಅವಕಾಶ ಇದೆ  ಎಂದು ತಿಳಿದು ಅಪ್ಪಟ ಭಾರತೀಯ ತೊಡುಗೆಯಲ್ಲಿದ್ದ ನಮ್ಮನ್ನು  ಕೇಳುವವರಿರಲಿಲ್ಲ. ಕನ್ನಡದಲ್ಲಿ ಮಾತಾಡುತ್ತಿದ್ದವರು ಬಹುಶಃ ನಾವಿಬ್ಬರೇ!

ಊಟಕ್ಕೆ ಫ್ರೆಂಚ್ ಮೆನ್ಯು. ಜೊತೆಗೆ ಪಿಜ್ಜ, ಬರ್ಗರ್ರು ಗಳೇ…. ಮನೆ ಬಿಟ್ಟು ಹೊರಹೋದರೆ ಇಂಗ್ಲೆಂಡಿನಲ್ಲಿ ಇಂತವೇ ಊಟಗಳ ಹೊರತು ಇನ್ನೊಂದು ಸಿಗುವುದಿಲ್ಲ. ಭಾರತದಕ್ಕೆ ಬಂದಾಗಲೂ ಫ್ರೆಂಚ್,ಇಟಲಿಯ ಊಟ ಮಾಡಲು ನನಗೂ-ಸುಮಿಗೂ ಬೋರು ಹೊಡೆದಿತ್ತು. ತಮ್ಮ ಜಾನಿ –ವಾಕರ್ ಬಾಟಲ್ ಗಳನ್ನು ಮುಖದ ಮುಂದೆ ಹಿಡಿದುಕೊಂಡು ಫ್ಹೋಟೊ ಕ್ಲಿಕ್ಕಿಸಿಕೊಂಡು ರೊಯ್ಯನೆ ವಾಟ್ಸಪ್ಪಿಗೆ ರವಾನಿಸುವುದನ್ನು ಮಾತ್ರ ಮರೆಯದ ಗೆಳೆಯರು ಸಂತೋಷವಾಗಿರುವುದನ್ನು ಬಿಟ್ಟು ತೋರಿಕೆಯ ಆಟಗಳಲ್ಲಿ ಸಂತೋಷ ಕಾಣುವುದನ್ನು ಕಂಡೆವು. ಬಾಯಿ ತುಂಬಾ ಮನಸ್ಪೂರ್ವಕವಾಗಿ ಮಾತಾಡಿ , ಹಳೆಯ ದಿನಗಳನ್ನು ನೆನೆದು ಮನಸಾರೆ ನಗೋಣ ಅಂತ ಬಂದ ನನಗೆ ಪೆಚ್ಚಾದದ್ದು ಸುಮಿಗೂ ತಿಳಿಯಿತೇನೋ. ಅವಳು ಅದನ್ನು ತೋರಿಸಲಿಲ್ಲ.

ನೂರಾರು ವರ್ಷಗಳ ತಮ್ಮ ಸಾಮಾಜಿಕ ದಿನಚರಿಯಲ್ಲಿ ಸಹಜವಾಗಿ ಮುಳುಗಿರುವ ಪಾಶ್ಚಿಮಾತ್ಯರು…ಅವರ ಅಂಧ ಅನುಕರಣೆಯಲ್ಲಿ ಅಂತಹಃಕರಣ ಕಳೆದುಕೊಳ್ಳುತ್ತಿರುವ ಭಾರತೀಯ ಸಮಾಜಕ್ಕೆ ಏನಾಗಿದೆ…?ಪ್ರತಿ ಆಂಗ್ಲನಲ್ಲಿ ತಾನು ಆಂಗ್ಲನೆಂದು ಇರುವ ಹೆಮ್ಮೆ,ಭಾರತೀಯನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕೀಳಿರಿಮೆಗಳ ವ್ಯತ್ಯಾಸ ಡಣಾಡಾಳಾಗಿ ಕಾಣುತ್ತದೆ.ಇದನ್ನೇ ಬಳಸಿಕೊಂಡು ಕಳೆದ ಹತ್ತು ವರ್ಷಗಳಲ್ಲಿ ಕುಸಿಯುತ್ತಿರುವ ತಮ್ಮ ದೇಶದ ಮಾರುಕಟ್ಟೆಗಳನ್ನು ಮತ್ತೆ ಬೆಳೆಸಿಕೊಳ್ಳಲು ಭಾರತದಂತಹ ದೇಶಗಳಿಗೆ ಬರುತ್ತಿರುವ ಮಾರುಕಟ್ಟೆಯ ಸರದಾರರು ಭಾರತೀಯರಿಗೆ ಮೂಗುದಾರ ಹಾಕಿ ಗುಲಾಮಗಿರಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಕತ್ತೆಗಳಿಗೆ ಕೋಲಿದ್ದವನೇ ಮಾಲೀಕ….

ಮನಸ್ಸು ಹಿಂದಕ್ಕೆ ಓಡಿತು….

 ಗಾಂಧೀಜಿಯ ಆತ್ಮ ಚರಿತ್ರೆ ನನ್ನ ಮೆಲೆ ಗಾಢ ಪರಿಣಾಮ ಬೀರಿತ್ತು. ಇಂಗ್ಲೆಂಡಿಗೆ ಹೊರಟಾಗ  ಯಾವ ಪರಿಸ್ಥಿ ತಿಯಲ್ಲೂ ಬದಲಾಗದ ಹಠಮಾರಿ ಸ್ವಭಾವದ ಗಾಂಧಿಗೆ ಇಂಗ್ಲೆಂಡಿನಲ್ಲಿ ಓದಿನ ಬಳಿಕವೇ ಭಾರತದ ಸ್ವತಂತ್ರದ ಅರಿವು ಮೂಡಿತೆಂಬ ಸಮಜಾಯಷಿ ಹೇಳಿಕೊಂಡಿದ್ದೆ.ತರಭೇತಿಯ ನೆಪದಲ್ಲಿ ಹೊರಟು, ಹೊಟ್ಟೆ ಪಾಡಿನ ಹೆಸರಲ್ಲಿ ಇನ್ನೂ ಪರದೇಶದಲ್ಲೇಇದ್ದೇನೆ.ಯಾವ ಗಿಂಬಳವೂ ಇಲ್ಲದೆ, ತೆರಿಗೆ ವಂಚಿಸದೆ ಕೂಡಿಟ್ಟ ಪ್ರತಿ ಪೌಂಡನ್ನು ಭಾರತದ ರೂಪಾಯಿಯಾಗಿಸಿ ಭಾರತದಲ್ಲಿ ನೆಲವನ್ನು ಕೊಂಡು ಭಾರತೀಯನಾಗಿ ಹಿಂತಿರುಗುವ ಕನಸನ್ನು ಮುಂದುವರಿಸಿದ್ದೇನೆ.ಆದರೆ ಕಾರಣವೇ ಇಲ್ಲದೆ ಸಾವಿರಾರು ಪಟ್ಟು ಜಿಗಿದ ಭಾರತದ ಕರಾಳ ಮಾರುಕಟ್ಟೆಗೆ ನನ್ನ ದುಡಿಮೆ ಸಾಕಾಗಲಿಲ್ಲ.ತೆಗೆದ ಸಾಲಗಳಿಗೆ ಈಗಲೂ ಹಣ ತುಂಬುತ್ತಿದ್ದೇನೆ…

ಮನೆಯಿಂದ ನಡೆದು ಹತ್ತಿರದಲ್ಲಿರುವ ಸ್ಟೇಡಿಯಂ ತಲುಪಿದೆ. ಜನಜಂಗುಳಿ ಸೇರಿತ್ತು. ಹಲವಾರು ಪೋಷಕ ವೃಂದದ ಜೊತೆ ಇದ್ದವರೆಲ್ಲ ಬರೀ ಪಡ್ಡೆ ಹುಡುಗರು.

ಸ್ವಯಂ ಸೇವಕರು, ನಿವೃತ್ತರಾದ ಶಿಕ್ಷಕರು, ಬಿಳೀ ಟೋಪಿ ತೊಟ್ಟ ದೇಶ ಭಕ್ತರು ನಿಧಾನವಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೇನೋ?

“ಎಕ್, ದೋ,ತೀನ್..ಚಾ..ರ್…”

ರಂಗು ರಂಗಿನ ಬಣ್ಣದ ಬಟ್ಟೆ ತೊಟ್ಟ ವಿವಿಧ ಶಾಲೆಗಳ ಮಕ್ಕಳು ಸ್ವತಂತ್ರ ದಿನಾಚರಣೆಯ ಕವಾಯತಿನಲ್ಲಿ ತೊಡಗಿಕೊಂಡಿದ್ದರು. ಈ ದಿನ ನಾನು ಪ್ರತಿ ವರ್ಷದಂತೆ ಸ್ಟೇಡಿಯಂನಲ್ಲಿ ತಪ್ಪದೆ ಹಾಜರ್. ಒಂದೊಮ್ಮೆ ನಾನು ಈ ಮಕ್ಕಳಲ್ಲಿ ಒಬ್ಬನಾಗಿದ್ದೆ. ಹೀಗೇ ಕವಾಯತು ಮಾಡಿ, ನಮ್ಮ ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದೆ. “ನಿಮಗೇಕೆ ಕೊಡಬೇಕು ಕಪ್ಪ…., ನೀವೇನು ಇಷ್ಟರಾ..ಒಡೆಯರಾ…” -ಎಂದು ಕೇಳುವ ಕಿತ್ತೂರು ರಾಣಿಯ ಪಾಠವನ್ನು ಓದುವಾಗ ಕಣ್ಣೀರು ಹಾಕಿದ್ದೆ. ಈಗ ಪ್ರತಿ ವರ್ಷಕ್ಕೊಮ್ಮೆ ಇಂಗ್ಲೆಂಡಿನ ಜನತೆಗೆ ಸೇವೆ ಸಲ್ಲಿಸಿ ಗಳಿಸಿದ ದುಡ್ಡಿನಲ್ಲಿ ಸ್ವತಂತ್ರ ಭಾರತದ ಮಾರುಕಟ್ಟೆಯಲ್ಲಿ ಸಿಗದ ಸೌಲಭ್ಯಗಳಿಗಾಗಿ, ನಿಯತ್ತಿಗಾಗಿ, ಸಮಾನತೆಗಾಗಿ ತಪ್ಪದೆ ಕಪ್ಪವನ್ನು(ತೆರಿಗೆ) ಕಟ್ಟಿ ಧನ್ಯನಾಗುತ್ತಿದ್ದೇನೆ.ಇದು ನಾನು  ಭಾರತದ ಪಟ್ಟಭದ್ರ ಹಿತಾಸಕ್ತಿಗಳಿಂದ ಗಳಿಸಿದ ಮುಕ್ತಿಗಾಗಿಯೂ ಇರಬಹುದು!

ಎಲ್ಲರೂ  ಆಶೆಗಳನ್ನು ಕೈಬಿಟ್ಟಿದ್ದಾರೆ. ಮಾಧ್ಯಮಗಳು ರಾಜಕೀಯದ ಉಧ್ಯಮಿಗಳ ಕೈ ವಶವಾಗಿದೆ! ನ್ಯಾಯಾಲಯಗಳು ಕಣ್ಣಿಲ್ಲದೆ ಕೆಲಸ ಮಾಡುತ್ತಿವೆ.ಪೋಲಿಸರು ತಮಗೇ ದಕ್ಕಿರದ ನ್ಯಾಯ, ಸ್ವಾತಂತ್ರಗಳಿಗೆ ಹೋರಾಡುವಲ್ಲಿ ಕೂಡ ಹತಾಶರಾಗಿ ರಾಜೀನಾಮೆ ಕೊಡುತ್ತಿದ್ದಾರೆ.ಶಿಕ್ಷಣ ಖರೀದಿಗಿದೆ.ಹೊಸದಾಗಿ ಹರಿದಾಡುತ್ತಿರುವ ವಾಣಿಜ್ಯ ಬೆಳವಣಿಗೆಗೆ ಪ್ರತಿಯಾಗಿ ಬೆಳೆಯದ ಸೌಲಭ್ಯಗಳಿಂದ ಇಡೀ ವ್ಯವಸ್ಥೆ ನಲುಗಿದೆ. ಇವರ ಮಧ್ಯೆ ದೇವರ ಹೆಸರಿನ ದೊಡ್ಡ ದಂಧೆ ನಡೆದಿದೆ. ಪ್ರಜೆಗಳಿಗೆ ದ್ವನಿ ನೀಡಿಲ್ಲದ ಪ್ರಪಂಚದ ಅತಿದೊಡ್ಡ ಪ್ರಜಸತ್ತಾತ್ಮಕ ದೇಶ ನಮ್ಮನ್ನು  ಕುಬ್ಜರನ್ನಾಗಿಸುತ್ತದೆ. ಹಗಲಿರುಳು ಇಲ್ಲಿ  ಜೀವಗಳು ಮಿಡಿಯುತ್ತವೆ,ದುಡಿಯುತ್ತವೆ,ನಲುಗುತ್ತವೆ,ಸಾಯುತ್ತವೆ.ಅನಿವಾಸಿಯಾಗಿ ಅತಂತ್ರತೆಯನ್ನು ಒಪ್ಪಿಕೊಳ್ಳಲು ಸ್ವತಂತ್ರ ಭಾರತ ನಮ್ಮನ್ನು ಪ್ರೇರೇಪಿಸುತ್ತಿದೆ.ಅನಿವಾಸಿಯನ್ನು ಅನಿವಾಸಿಯಾಗಿಯೇ ಉಳಿಸಿಬಿಡುತ್ತದೆ.

ನಾನೊಬ್ಬ ಅತಿ ಸಂವೇದನಾಶೀಲ.ಭಾರತ ಬಿಟ್ಟು ಹೋದ ದಿನವೇ ನನ್ನ ಮನಸ್ಸಿನ ಗಡಿಯಾರ ನಿಂತುಹೋಗಿದೆ. ಅದಕ್ಕೇ ಈ ತುಮುಲ. ಕೆಲವೊಮ್ಮೆ ಈ ಯೋಚನಾಲಹರಿಗಳನ್ನು ತಡೆಯುವುದು ಕಷ್ಟವಾಗುತ್ತದೆ. ಪ್ರತಿ ದಿನ ಭಾರತದ ರಾಜಕೀಯ ವಿಚಾರಗಳನ್ನು ಹಿಂದಿ ಚಾನಲ್ಲುಗಳಲ್ಲಿ ತಪ್ಪದೆ ನೋಡಿ ನನ್ನ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತೇನೆ. ಎಲ್ಲಿಯೋ ಒಂದೆಡೆ ನನ್ನ ಆಶಾವಾದ ಇನ್ನೂ ಜೀವಂತವಾಗಿರುವ ಕಾರಣ, ಕಣ್ಣುಗಳು ಬದಲಾವಣೆಗಳಿಗಾಗಿ ಹುಡುಕುತ್ತಿರುತ್ತವೆ.

ಇಲ್ಲಿಯೇ ಇದ್ದಿದ್ದರೆ,ಒಂದೊಂದಾಗಿ ನನ್ನ ಸಂವೇದನೆಯ ಅಲೆಗಳು ಅಳಿಸಿಹೋಗಿರುತ್ತಿದ್ದವು.ಕರಾಳ ಸಮಾಜ ನಿಧಾನವಾಗಿ ನನ್ನನ್ನು ತನ್ನ ಕಾಲ ಬುಡಕ್ಕೆ ಬಗ್ಗಿಸಿಕೊಳ್ಳುತಿತ್ತು.  ಭಾರತದ ಹೊರಗೆ ಸುಧಾರಿಸಿದ ಮುಂದುವರೆದ ಇತರೆ ಸಮಾಜ,ವ್ಯವಸ್ಥೆ ಇರುವುದೇ ನನ್ನ ಅನುಭವಕ್ಕೆ ಬರುತ್ತಿರಲಿಲ್ಲ. ಮನಸ್ಸು ಕೂಡ ಮಣಿದಿರುತಿತ್ತು. ನನ್ನ ಇತರೆ ವಿದೇಶಿ ಗೆಳೆಯರ ಮನಸ್ಸಿದ್ದಿದ್ದರೆ, ದ್ವಂದ್ವಗಳೇ ಇಲ್ಲದೆ ನೆಮ್ಮದಿಯಾಗಿ ಕಂದು ವರ್ಣದ ಪ್ರಜೆಯಾಗಿ ತಲೆಬಾಗುತ್ತಿದ್ದೆ.

“ಟ್ರ್ ಣ್..ಣ್……ಣ್… “ನನ್ನ ಮೊಬೈಲ್ ಹೊಡೆದುಕೊಂಡಿತು.ವಿಚಾರ ಸರಣಿ ಕಡಿಯಿತು.

“ರೀ… ಶ್ಯಾಂ ಗೆ ಜ್ವರ…. ಕೈ ಕಾಲು ನೋವು ಅಂತ ಬೇರೆ ಹೇಳ್ತಿದ್ದಾನೆ. ಡಾಕ್ಟರ ಹತ್ರ ಕರಕೊಂಡು ಹೋಗ್ತಿದ್ದೀನೆ. ಅರ್ಧ ಗಂಟೆ ಬಿಟ್ಟು ಫೋನ್ ಮಾಡಿ.”

“ಹೌದಾ? ಯಾಕೆ ಅಷ್ಟಕ್ಕೇ ಡಾಕ್ಟರ್? ಒಂದೆರಡು ದಿನ ಜ್ವರದ ಮಾತ್ರೆ ಕೊಡು…”

“ಇಲ್ಲರೀ,ಜೊತೆಗೆ  ಮಂಡಿ,  ಕೀಲುಗಳು ನೋವು ಅಂತಿದ್ದಾನೆ. ಈ ಚಿಕನ್ ಗುನ್ಯ, ಡೆಂಗ್ಯೂ… ಗಳೆಲ್ಲ ಇದಾವಲ್ಲ. ಮೊನ್ನೆ ಸೊಳ್ಳೆ ಕಚ್ಚಿದ್ದು  ದಪ್ಪಗೆ ಆಗಿತ್ತು, ಇನ್ನೂ ಹೋಗಿಲ್ಲ. ಜೀಕ ವೈರಸ್ ಕೂಡ ಬಂದಿತೆ ಅಂತ ಓದಿಲ್ವ, ಇಲ್ಲಿ ಡಾಕ್ಟರ್ರುಗಳನ್ನು ಬೇರೆ ನಂಬಂಗಿಲ್ಲ… ಅರ್ಧ ಗಂಟೆ ಬಿಟ್ಟು ….” ಜನ ಜಂಗುಳಿಯ, ವಾಹನಗಳ ಅಪಾರ ಶಬ್ದ,ಹಾರನ್ನುಗಳ ಭರಾಟೆಯಲ್ಲಿ ಮಿಕ್ಕದ್ದು ಕೇಳಲಿಲ್ಲ. ಎದ್ದು ಹೊರಟೆ.

ಆ  ಕ್ಷಣ ನನ್ನ ರಕ್ತ ಮತ್ತೆ ಕುದೀತು. ಇಷ್ಟೊಂದು ಜನ. ಏನೆಲ್ಲ ಪ್ರತಿಭೆ. ನಮ್ಮ ದೇಶದ ಎಲ್ಲರಿಗೂ ಪಾಶ್ಚಿಮಾತ್ಯರಿಗೆ ಸಮಾನವಾಗಿ ಬದುಕುವ  ಸೌಲಭ್ಯಗಳು, ಅವಕಾಶ ಸಿಗಬೇಕು.ಇವರಲ್ಲಿ  ಮುಂದುವರಿದ ದೇಶದ ಜನರಲ್ಲಿ ಇರುವ ಎಲ್ಲವೂ ಇದೆ. ದುಡಿಯುವ ಬಲ, ಪ್ರತಿಭೆ, ಸಂಖ್ಯೆ ಜೊತೆಗೆ ಸಾತ್ವಿಕತೆ ಕೂಡ. ವ್ಯವಸ್ಠೆ ಬದಲಾಗಿ, ಆಡಳಿತ ಹಿಡಿದವರ ಹುನ್ನಾರಗಳು ಬದಲಾದರೆಮಾಡಲಾರದ್ದೇನಿದೆ?

ಈ ಭ್ರಷ್ಟ ರಾಜಕಾರಣಿಗಳೆಲ್ಲ ವಿದೇಶಕ್ಕೆ ಚಿಕಿತ್ಸೆಗೆ ಓಡುವಾಗ ನಮ್ಮ ಜನರ ಬಗ್ಗೆ ಯೋಚಿಸ್ತಾರಾ? ದೇಶದಲ್ಲಿರೋ ಕಪ್ಪುಹಣ ಹೊರತೆಗೆದ್ರೆ, ಧರ್ಮವನ್ನು ರಾಜಕೀಯ ಮಾಡದಿದ್ರೆ ಆಳ್ವಿಕೆ ಸಾದ್ಯವೇ ಇಲ್ಲವೇ? ಸ್ವತ್ರಂತ್ರ ಬಂದ ೭೦ ವರ್ಷಗಳಾದರೂ ಭಾರತ ಅವೇ ಬಿರುಕುಗಳಿಂದ ಯಾಕೆ ನಲುಗುತ್ತಿದೆ? ಇದೀಗ ಹಿಂದಿಗಿಂತಲೂ ಸಂಕುಚಿತ ಭಾವನೆಗಳಿಗೆ ಸಂಚಲನೆ ಸಿಕ್ಕಿದೆ. ಭಾರತೀಯರೇ ಭಾರತೀಯರನ್ನು ಮುಕ್ಕುವ ರಾಜಕಾರಣ ಮುಂದುವರೆದಿದೆ. ಇದು ಇಲ್ಲಿನ ಎಲ್ಲರಿಗೂ ಗೊತ್ತು. ಆದರೆ,ಎಲ್ಲರೂ ಇನ್ನೊಬ್ಬ ಗಾಂಧಿಗೆ ಕಾಯುತ್ತಿದ್ದಾರೆ ಅನ್ನಿಸಿತು. ಹಿಂದೆ ಹೋಗಲೋ ಮತ್ತೊಮ್ಮೆ ಗುಂಡಿಕ್ಕುವ ತಿಕ್ಕಲಿಗೋ…ಯಾರಿಗೆ ಗೊತ್ತು?

ಮನೆಯತ್ತ ದಾಪು ಗಾಲು ಹಾಕಿದೆ. ಡಾಂಬರು ಇಲ್ಲದ ರಸ್ತೆಗಳು ಬದಲಾಗುವುದು ಯಾವಾಗಲೋ? ಭಾರತ ಮುಂದುವರೀತಾ ಇದೆ ಅಂತ ಕೇಳಿದಾಗಲೆಲ್ಲ ಮನಸ್ಸು ನಲಿಯುತ್ತದೆ. ಹೆಮ್ಮೆಯಿಂದ ಬೀಗುತ್ತದೆ. ಭಾರತಕ್ಕೆ ಬಂದಾಗಲೆಲ್ಲ ಇಲ್ಲಿ ಹೆಚ್ಚಾದ, ಗಗನಕ್ಕೆರಿರುವ ಬೆಲೆಗಳನ್ನು ನೋಡಿ ಆಶ್ಚರ್ಯವಾಗುತ್ತದೆ, ಅಂತೆಯೇ ಜನರ ಬದುಕನ್ನು ಬದಲಿಸಬಲ್ಲ ಶೌಚಾಲಯಗಳು, ಜೀವಗಳನ್ನು ಉಳಿಸಬಲ್ಲ ಚಿಕಿತ್ಸಾಲಯಗಳು, ಶುದ್ಧ ಕುಡಿಯುವ ನೀರು, ಹಳ್ಳಗಳಿಲ್ಲದ ರಸ್ತೆಗಳನ್ನು ಕಾಣದೆ ಮನಸ್ಸು ನಿರಾಶೆಗೊಳ್ಳುತ್ತದೆ. ಪಾದಾಚಾರಿ ರಸ್ತೆ ಖಂಡಿತಾ ಇಲ್ಲ. ಮೈಮೇಲೆ ಬರುವ ವಾಹನಗಳನ್ನು ನೋಡಬೇಕಾ ಅಥವಾ ರಸ್ತೆಯ ಮಧ್ಯೆ ಇರುವ ಗುಂಡಿಗಳನ್ನು ನೋಡಬೇಕಾ  ತಿಳಿಯದೆ ನಮ್ಮ ಬದಲಾಗದ ವ್ಯವಸ್ಥೆಯನ್ನು ವಾಚಾಮ ಗೋಚರ ಜೋರಾಗಿ ಬಯ್ದೆ. ಅರೆಕ್ಷಣ ಸಮಾಧಾನವಾಯ್ತು. ಆ ಕ್ಷಣ ವಿದೇಶವಾಸಿಯಾದರೂ ಭಾರತದ ಪ್ರತಿ ಸಾಮಾನ್ಯ ಮಧ್ಯಮ ವರ್ಗದ ಪ್ರಜೆಗಳಲ್ಲಿ ನಾನೂ ಒಂದಾಗಿದ್ದೆ. ನನಗೆ ಅಡ್ಡಲಾಗಿ ನಿಧಾನವಾಗಿ ರಸ್ತೆಯನ್ನು ಜನರ ಜೊತೆಯೇ ದಾಟಿ ಓಡಿದ ಹೆಗ್ಗಣ ನನಗೆ ಅಸಹ್ಯ ತರಲಿಲ್ಲ.

ಮನೆ ತಲುಪಿ ಮುಂದಿನ ಕೆಲಸಗಳಿಗೆ ಒಪ್ಪಿಸಿಕೊಂಡೆ.

ಶ್ಯಾಂ ಚೇತರಿಸಿಕೊಂಡ. ಹೊರಡೋ ದಿನ ಆಟವಾಡುತ್ತಲೇ ಬಂತು. ಅಮ್ಮನ ಕಣ್ಣಲ್ಲಿ ಮತ್ತೆ ನೀರು.

ನಮ್ಮ ವಿಮಾನ ಗಗನಕ್ಕೆ ತೇಲಿದಂತೆ ನನ್ನ ಮನದಲ್ಲಿ ಕೊನೆಗೆ ಉಳಿದದ್ದು ಅಮ್ಮನ ಕಣ್ಣುಗಳು ಮಾತ್ರ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ನಾನು ಅಮ್ಮನಿಗೆ ಹೇಳಿದ್ದೆ…“ಅಮ್ಮ, ನೀನು ಹೇಳೋದ್ ಸರಿ, ನಾನು ಅದೇ ಹಳೇ ಬಟ್ಟೆ ಹಾಕಿದ್ರೆ ಇಲ್ಲಿನ ಜನ ಖಂಡಿತ ನಗ್ತಾರೆ. ಬೇರೆ ಬಟ್ಟೆ ಹೊಲಿಯಕ್ಕೆ ಆಂಟನಿಯತ್ರ ಅಳತೆ, ದುಡ್ಡು ಕೊಟ್ಟು ಬಂದಿದೀನಿ. ಮನೇಗೆ ಬಟ್ಟೆ ತಂಡಿಟ್ಟಿರು. ಮುಂದಿನ ವರ್ಷ ನಾನು ಬಂದಾಗ ಹಾಕ್ಕೊಳಕ್ಕೆ ಆಗುತ್ತೆ…. ಹಳೇವನ್ನು ಯಾರಾದ್ರು ೧೮-೧೯ ವರ್ಷದವರು ಗೊತ್ತಿದ್ರೆ ಕೊಡು…”

ಅಮ್ಮನ ಕಣ್ಣಲ್ಲಿ ಅಚ್ಚರಿ ಕಂಡರೂ, ಮಗ ತನ್ನ ಮಾತನ್ನು ಕೊನೆಗೂ ಕೇಳಿದ ತೃಪ್ತಿಯಿತ್ತು. ಅಮ್ಮನಅಪಾರ ಸಮಾಧಾನ,  ಅಲ್ಪ ತೃಪ್ತಿಗಳಲ್ಲಿ ಬಹುತೇಕ ಭಾರತವೇ ಕಂಡಿತ್ತು.

******************************

.

Leave a Reply

Back To Top