ಬಿಡುಗಡೆ
ರುಕ್ಮಿಣಿ ನಾಗಣ್ಣವರ
ನಂಬಿಗಸ್ಥ ಕುನ್ನಿಯಂತೆ ಪಾಲಿದ
ತಲೆತಲೆಮಾರಿನ ಮೌನವನ್ನು
ಮತ್ತೊಮ್ಮೆ ಮುರಿದು
ದವಡೆಯಲ್ಲಿ ಒತ್ತಿ ಹಿಡಿದ
ಸಿಟ್ಟು ಬಳಸಿ ಹೊಟ್ಟೆಬಾಕರ
ಹುಟ್ಟಡಗಿಸಬೇಕಿದೆ
ತುತ್ತು ಅನ್ನಕ್ಕೆ, ತುಂಡು ಭೂಮಿಗೆ
ಕೈ ಕಟ್ಟಿ, ಬಾಯಿ ಮುಚ್ಚಿ,
ಟೊಂಕದಲ್ಲಿರಿಸಿದ
ಸ್ವಾಭಿಮಾನ ಗಾಳಿಗೆ ತೂರಿ
ಜೀತದಾಳಾಗಿ ದುಡಿಯುವ
ಕಾಲ ದೂರಿಲ್ಲ
ಅರಿಯಬೇಕಿದೆ
ಅಗೋ…
ಉರುಳಿಹೋದ ದಿನಗಳು
ಮರುಕಳಿಸುವ ಕರಾಳ
ಕ್ರೌರ್ಯದ ಕೂಗು
ಇತ್ತಲೇ ಹೆಜ್ಜೆ ಇರಿಸಿದೆ
ನರಳಾಟದ ಕೆಂಡದಲಿ
ಅಂಡು ಸುಡುವ ಮೊದಲು
ಎಚ್ಚೆತ್ತುಕೊಳ್ಳಬೇಕಿದೆ
ಕ್ರಾಂತಿಯ ಕಹಳೆ ಮೊಳಗಿಸಿ
ನಮ್ಮವರಿಂದಲೇ ನಾವು
ಬಿಡುಗಡೆ ಹೊಂದಬೇಕಿದೆ..
*****************