ಏಕಾಂತವೆಂಬ ಹಿತ

ಕವಿತೆ

ಏಕಾಂತವೆಂಬ ಹಿತ

ಶ್ರೀದೇವಿ ಕೆರೆಮನೆ

Tree on Hill Under Blue Sky and White Clouds

ಇಷ್ಟಿಷ್ಟೇ ದೂರವಾಗುವ
ನಿನ್ನ ನೋಡಿಯೂ ನೋಡಲಾಗದಂತೆ
ಒಳಗೊಳಗೇ ನವೆಯುತ್ತಿದ್ದೇನೆ
ಹೇಳಿಯೂ ಹೇಳಲಾಗದ
ಒಂಟಿತನವೆಂಬ ಕೀವಾದ ಗಾಯಕ್ಕೀಗ
ಮಾಯಲಾಗದ ಕಾಲ
ಮುಲಾಮು ಸವರಲು ನಿರಾಕರಿಸುತ್ತಿದೆ
ಅಸಹಾಯಕಳಾಗಿ ನೋಡುತ್ತಿದ್ದೇನೆ
ನಮ್ಮಿಬ್ಬರ ನಡುವೆ
ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಅಂತರವನ್ನು

ಎಂದೋ ಆಡುವ ಎರಡೇ ಎರಡು
ಮಾತಿನ ನಡುವೆಯೇ
ಒತ್ತರಿಸಿ ಬರುವ ಯಾವುದೋ ರಾಜಕಾರ್ಯ
ಮಾತು ಹಠಾತ್ತನೆ ನಿಂತು
ಒಂದು ನಿಮಿಷ ಎಂದು ಹೊರಟ ನಿನಗೆ
ಕಾಲ ಗಳಿಗೆಗಳ ಹಂಗಿಲ್ಲ
ಕಾದು ಕುಳಿತ ನನಗೆ ಮಾತ್ರ
ಪ್ರತಿ ಕ್ಷಣವೂ ವರುಷವಾಗುತ್ತಿರ ಭಯ

ಮತ್ತೆ ಮಾತನಾಡುವ ಸಮಯಕ್ಕಾಗಿ
ನಾನು ಜಾತಕಪಕ್ಷಿಯಾಗಿ ಕಾಯುತ್ತಿದ್ದರೆ
ಎಂದೂ ಮುಗಿಯದ ನಿನ್ನ ಕೆಲಸಗಳು
ಈ ಜನ್ಮದಲ್ಲಿ ಮಾತನಾಡಲು ಬಿಡದಂತೆ
ಸದಾ ಸತಾಯಿಸುತ್ತವೆ

ಈಗೀಗ ನಿಜದ ಅರಿವಾಗುತ್ತಿದೆ
ಮಾತಿನ ನಡುವಿನ ಒಂದು ನಿಮಿಷ
ಪುರುಸೊತ್ತಿರದ ಕೆಲಸ
ಎಲ್ಲವೂ ನಿನ್ನದೇ ಸೃಷ್ಟಿಯೆಂಬುದು
ಸಮಯವೇ ಸಿಗದು ಎಂಬ ಮಾತಿನ
ಪೊರೆಕಳಚಿ ನಿಜದ ದರ್ಶನವಾಗುತ್ತಿರುವಾಗ
ಭ್ರಮೆಗಳೆಲ್ಲವೂ ಹರಿದು ಬಯಲಾಗುತ್ತಿದೆ

ಹಿಂದೆ ಕಿತ್ತಿಡುವ
ನಿನ್ನ ಹೆಜ್ಜೆ ಗಳಿಗೆ ನೂರಾನೆಯ ವೇಗ
ನನಗೋ ಎದೆಯ ಮಿಡಿತ ಕಿವಿಗಪ್ಪಳಿಸಿ
ಮುಂದಡಿಯಿಡಲಾಗದ ಸರಪಳಿ
ತಡೆಯಲಾರೆ ದೂರವಾಗಲು ಬಯಸುವವರನ್ನು
ಹಿತವೆನಿಸುತ್ತಿದೆ ಈಗೀಗ ಏಕಾಂತವೂ

************************

17 thoughts on “ಏಕಾಂತವೆಂಬ ಹಿತ

    1. ಮಾತು ಬಯಸುವ ಮನ,ಅನುಭವಿಸುವ ವೇದನೆ ಚನ್ನಾಗಿ ಕಾವ್ಯವಾಗಿದೆ.ಒಂಟಿತನ ಹಿತವೆನಿಸುತ್ತಿದೆ‌..ಕವಿತೆ ಚಂದವಿದೆ ಶ್ರೀದೇವಿ ಮೇಡಮ್.

  1. ಸೊಗಸಾದ ಕವಿತೆ ..ಒಂಟಿತನದ ಬೆಗೆಯನ್ನು ವಿವರಿಸಿದ ಬಗೆ ಚೆಂದವಾಗಿ ಮೂಡಿದೆ….ಸೂಪರ್.

  2. ಮುಲಾಮು ಸವರಲು ನಿರಾಕರಿಸುತ್ತಿದೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಅಂತರ…..
    ಈ ಕಾಲವೂ ಹೀಗೆಯೇ ಸಿದ್ಧಾಂತಗಳಿಗೆ ಜೋತುಬಿದ್ದು ಜನಸಾಮಾನ್ಯರ ಉರುಳಿಗೆ ತರುತ್ತಿದೆ….
    ಮುಲಾಮು ಹಚ್ಚಲು ಪುಕ್ಕ ಸಾಕು ಆದರೆ ಕತ್ತಿಯಿಂದ ಸವರಿ ಮತ್ತೆಷ್ಟುಝ ಗಾಯ ಆಗಿಸುವ ಈ ಭರತವರ್ಷದ ಏಕಾಂತದ ಕಾಲ…
    ಕವಿತೆ ಈ ಕಾಲದವನ ಏಕಾಂತದಂತೆ…. ಚಂದ ಬರೆದಿದ್ದೀರಿ ಸಿರಿಯಮ್ಮ

  3. ಚೆಂದದ ಕವಿತೆ, ಸುಂದರ ಅಭಿವ್ಯಕ್ತಿ ಶ್ರೀದೇವಿಯವರೆ

  4. ಕವಿತೆ ಅಪ್ಯಾಯಮಾನವಾಗಿದೆ. ಶಬ್ದಗಳ ಆಯ್ಕೆ ಖುಷಿಕೊಡುತ್ತದೆ.

  5. ಜೀವನದ ನಾಲ್ಕು ಅವಸ್ಥೆ ಯನ್ನು ನೆನಪಿಸುವ ಕವನ

  6. ತುಂಬಾ ಚೆನ್ನಾಗಿ ಭಾವನೆಗಳನ್ನು ವ್ಯಕ್ತಪಡಿಸಿದೆ.

  7. ಬಹಳ ಚೆನ್ನಾಗಿದೆ. ಆಪ್ತವಾಗುವ ಏಕಾಂತ, ಪೊರೆ ಕಳಚಿಸುವ ಸತ್ಯಗಳು…ವೈಯಕ್ತಿಕ ತಲ್ಲಣದ ಅನುಭವ ನೀಡುವ ಕವಿತೆ.

Leave a Reply

Back To Top