Anyone but the Spouse
ವಾಸ್ತವ ಸಂಗತಿಗಳ ಯಥಾವತ್ ನಿರೂಪಣೆ
ಪುಸ್ತಕ:Anyone but the Spouse
ಸಣ್ಣ ಕಥೆಗಳು
ಲೇಖಕಿ:ಪೂರ್ಣಿಮಾ ಮಾಳಗಿಮನಿ
Anyone but the Spouse ಪೂರ್ಣಿಮಾ ಮಳಗಿಮನಿಯವರು ಇಂಗ್ಲಿಷ್ ನಲ್ಲಿ ಬರೆದು ಪ್ರಕಟಿಸಿರುವ ಸಣ್ಣ ಕಥಾ ಸಂಕಲನ. ಪಾಶ್ಚಾತ್ಯ ಸಂಸ್ಕೃತಿಯ ನೇರ ಪ್ರಭಾವಕ್ಕೊಳಗಾಗಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಗಂಡು- ಹೆಣ್ಣುಗಳ ನಡುವಣ ಸಂಬಂಧ, ವೈವಾಹಿಕ ವ್ಯವಸ್ಥೆ ಮತ್ತು ಕೌಟುಂಬಿಕ ಬದುಕುಗಳಲ್ಲಿ ಆಗಿರುವ ಬದಲಾವಣೆಯ ಯುಕ್ತಾಯುಕ್ತತೆಯ ಕುರಿತು ಈ ಕಥೆಗಳು ತಣ್ಣಗೆ ಸಂಶೋಧನೆ ನಡೆಸುವಂತಿವೆ.
ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳು ೧೮೭ ಪುಟಗಳನ್ನು ಆವರಿಸಿಕೊಂಡಿವೆ. ಮೊದಲ ಕಥೆ The Travel Blogger ಮೂರು ಬಾರಿ ಪ್ರೇಮ ವಿಫಲಳಾಗಿ ನಿರಾಶಳಾದ ದೀಪಿಕಾ ಎಂಬ ಕಥಾನಾಯಕಿ ನಾಲ್ಕನೆಯ ಬಾರಿ ಪ್ರದೀಪ ಎಂಬ ಒಬ್ಬ ವಿವಾಹಿತ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಯಾಗಿ ಪ್ರೀತಿಯೊಳಗೆ ಬೀಳುವುದರ ಕುರಿತಾದ ಕಥೆ. ಅದು ಪರಸ್ಪರ ಪ್ರೀತಿಯೇ ಆದರೂ ಪ್ರದೀಪನ ಮನಸ್ಸಿನ ತುಂಬಾ ಅಂಜಿಕೆ ಹಿಂಜರಿಕೆಗಳಿರುತ್ತವೆ. ತನ್ನ ಹೆಂಡತಿಯೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿರುವ ಆತ ಕಥಾನಾಯಕಿಯೊಂದಿಗೆ ಕೂಡುವ ಮುಕ್ತ ಅವಕಾಶ ಸಿಕ್ಕಿದರೂ ಮುಂದೆ ಹೆಜ್ಜೆ ಇಡಲಾಗದೆ ಮಗನಿಗೆ ಹುಷಾರಿಲ್ಲವೆಂದು ಫೋನ್ ಬಂದ ಕೂಡಲೇ ಹಿಂದಿರುಗಿ ಮನೆಗೆ ಹೋಗುತ್ತಾನೆ. ಕೆಲವು ದಿನಗಳ ತನಕ ಅವನ ಸುದ್ದಿಯೇ ಇಲ್ಲದಾಗ ಕಥಾನಾಯಕಿ ಅವನ ಆಫೀಸಿಗೆ ಹೋಗಿ ವಿಚಾರಿಸಿದಾಗ ಅವನ ಗೆಳೆಯ ಅವನು ಬೈಕ್ ಅಪಘಾತದಲ್ಲಿ ಸತ್ತು ಹೋಗಿರುವ ಸುದ್ದಿ ತಿಳಿಸುತ್ತಾನೆ.ಕಥೆಯ ಕೊನೆಯ ಪಂಚ್ ಏನೆಂದರೆ ಪ್ರದೀಪನ ಗೆಳೆಯ ತಾನು ಮಾಡಿದ ತಪ್ಪಿನ ಬಗ್ಗೆ ದೀಪಿಕಾಳಲ್ಲಿ ಹೇಳಿಕೊಳ್ಳುವುದು.ಕಥಾನಾಯಕ ತಾನು ದೀಪಿಕಾಳ ಬಳಿಗೆ ಹೊಗಲೇ ಎಂದು ಕೇಳಿದಾಗ ತಾನು ಅವನನ್ನು ಒತ್ತಾಯಿಸಿ ಕಳುಹಿಸಲು ಕಾರಣ ಕಥಾನಾಯಕನ ಮಗ ತನ್ನ ಮಗನೇ ಆಗಿರುವುದು. ತನ್ನ ಅಪರಾಧಿ ಪ್ರಜ್ಞೆಯಿಂದ ಬಿಡುಗಡೆ ಹೊಂದುವುದು ಅವನ ಉದ್ದೇಶ. ಜೀವನವೆಂಬ ಯಾತ್ರೆಯಲ್ಲಿ ಇಂಥ ಬ್ಲಾಗುಗಳು ಸದಾ ಸೃಷ್ಟಿಯಾಗುತ್ತಲೇ ಇರುತ್ತವೇನೋ ಎಂಬ ಧ್ವನಿ ಇಲ್ಲಿದೆ.
Take no logical love ಅನ್ನುವ ಕಥೆ ಗಂಡು ಹೆಣ್ಣುಗಳ ನಡುವಣ ಸಂಬಂಧದ ವಿಚಾರದಲ್ಲಿ ಆಧುನಿಕ ಜಗತ್ತಿನಲ್ಲಿ ಹೊಸ ತಲೆಮಾರಿನ ಹದಿಹರೆಯದವರ ಮನಸ್ಥಿತಿಯನ್ನು ಚಿತ್ರಿಸುತ್ತದೆ. ವಿವಾಹಪೂರ್ವದ ಲೈಂಗಿಕ ಸಂಬಂಧವನ್ನು ನಿಷೇಧಿಸಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಕಥಾನಾಯಕಿ ಶೆಹರ್ ಒಂದೆಡೆಯಾದರೆ ನಿಸರ್ಗದ ಕೂಗನ್ನು ಸ್ವೀಕರಿಸಿ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವುದೇ ಆರೋಗ್ಯಕರವೆಂದು ಹೇಳುವ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವ ವರ್ಗವನ್ನು ಪ್ರತಿನಿಧಿಸುವ ಟೀನಾ ಇನ್ನೊಂದೆಡೆ. ಬಾಯ್ ಫ್ರೆಂಡ್ಸ್ ಇಲ್ಲದಿರುವ ಶೆಹರಳನ್ನು ಲೈಂಗಿಕ ವಿಚಾರದಲ್ಲಿ ಏನೂ ತಿಳಿಯದ ಪೆದ್ದಿಯೆಂದು ಗೇಲಿ ಮಾಡಿ ಅವಳನ್ನು ನೋಯಿಸುವವರೇ ಇರುವ ಗುಂಪಿನಲ್ಲಿ ಇರಲಾಗದೆ ಬದಲಾಗಲು ಪ್ರಯತ್ನಿಸುವ ಶೆಹರ್ ಕೊನೆಗೂ ತಾನು ಕಂಡುಕೊಳ್ಳುವ ಬಾಯ್ ಫ್ರೆಂಡಿನಿಂದ ಬಯಸುವುದು ಲೈಂಗಿಕ ಸುಖದ ಜತೆಗೆ ಹೃದಯದ ಪ್ರೀತಿಯನ್ನು. ಆದರೆ ಆಗಲೇ ಸಾಕಷ್ಟು ಲೈಂಗಿಕ ಬಯಕೆಗಳನ್ನು ತೀರಿಸಿಕೊಂಡಿರುವ ಆ ಹುಡುಗ ಅವಳಿಗೆ ಮಾನಸಿಕವಾದ ಪ್ರೀತಿ ಕೊಡುವಲ್ಲಿ ವಿಫಲನಾಗುತ್ತಾನೆ.
ವಿವಾಹಿತ ಸ್ತ್ರೀಯೊಬ್ಬಳಲ್ಲಿ ಅನುರಕ್ತನಾಗಿ ಅವಳಿಗಾಗಿ ಹಂಬಲಿಸುವ ವಿವಾಹಿತನಾದ ಒಬ್ಬ ವ್ಯಕ್ತಿಯು ಪ್ರೇಮ ನಿವೇದನೆ ಮಾಡಲು ಹೊರಟಾಗ .ತನ್ನ ಗಂಡ ಕಾಯಿಲೆಯಿಂದ ನರಳುತ್ತ ಮಲಗಿರುವುದರಿಂದ ಈತ ತನ್ನ ಮೇಲೆ ಸಹಾನುಭೂತಿ ತೋರಿಸುತ್ತಿದ್ದಾನೆಂದು ಅನುಮಾನಿಸಿ ಆಕೆ ಅವನನ್ನು ತಿರಸ್ಕರಿಸುವ ಕಥೆ Lift.
ಸುಖೀಸಂಸಾರವೆಂದು ನೋಡಿದವರು ತಿಳಿದುಕೊಳ್ಳುವ ಲಾವಣ್ಯ, ರಂಜಿತರ ಬದುಕಿನಲ್ಲಿ ಬಿರುಕು ಮೂಡುವುದು ರಂಜಿತನಿಂದಾಗಿಯೇ. ಸುಂದರಿಯೂ ಪ್ರತಿಭಾವಂತೆಯೂ ಆದ ಹೆಂಡತಿಯ ಬಗ್ಗೆ ಒಳಗೊಳಗೇ ಮೆಚ್ಚುಗೆಯಿದ್ದರೂ ಅದನ್ನು ತೆರೆದ ಮನಸ್ಸಿನಿಂದ ಹೇಳಲು ಅವನ ‘ಮೇಲ್ ಈಗೋ’ ಬಿಡುವುದಿಲ್ಲ. ಹೆಂಡತಿ ಕಟ್ಟಿಕೊಟ್ಟ ಬುತ್ತಿಯಿಂದ ರುಚಿಯಾದ ಪದಾರ್ಥಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡು ತಿಂದಾಗ ಅವರು ಎಷ್ಟು ಹೊಗಳಿದರೂ ಅದನ್ನು ಹೆಂಡತಿಯಲ್ಲಿ ಹೇಳದವನು. ಆಫೀಸಿನಿಂದ ಪತ್ರಿಕೆಗೊಂದು ಜಾಹಿರಾತು ಕೊಡಲು ಸುಂದರಿಯೊಬ್ಬಳ ಚಿತ್ರ ಬೇಕೆಂದು ಹೇಳಿದಾಗ ಲಾವಣ್ಯಳಿಗೆ ಹೇಳದೆಯೇ ಅವಳ ಚಿತ್ರ ಬರೆದು ಬೇರೆ ಹೆಸರಿನಲ್ಲಿ ಪ್ರಕಟಿಸುವ ರಂಜಿತ್ ಹೆಂಡತಿಯ ಮುಂದೆ ಮಾತ್ರ ಭಾವೋನ್ಮಾದಕ ಭಂಗಿಯಲ್ಲಿರುವ ಆ ಚಿತ್ರವನ್ನು ಯಾರು ಬರೆದಿರಬಹುದು ಎಂದು ಸಂದೇಹ ವ್ಯಕ್ತ ಪಡಿಸುತ್ತಾನೆ. ಆದರೆ ಅವನು ನಿರೀಕ್ಷಿಸಿದ್ದಕ್ಕೆ ವ್ಯತಿರಿಕ್ತವಾಗಿ ಲಾವಣ್ಯ ಆ ಚಿತ್ರಕಾರನ ಬಗ್ಗೆ ಭಾವುಕಳಾಗಿ ಕನಸು ಕಾಣುತ್ತಿರುವುದನ್ನು ಗಮನಿಸಿದ ರಂಜಿತ್ ನಿಜವನ್ನು ಹೇಳಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ ಲಾವಣ್ಯ ಸಂತುಷ್ಟಳಾಗುತ್ತಾಳೆ.
ಹೀಗೆಯೇ ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿಯರ ನಡುವೆ ಸಂಬಂದ ಸೌಹಾರ್ದಯುತವಾಗಿಯೇ ಇದ್ದರೂ ಸಣ್ಣ ಪುಟ್ಟ ಕಾರಣಗಳಿಗಾಗಿ ಅಥವಾ ಬದುಕಿನ ಏಕತಾನತೆಯಿಂದ ಬದಲಾವಣೆಯನ್ನು ತಮಗರಿವಿಲ್ಲದೆಯೇ ಒಳಮನಸ್ಸಿನಿಂದ ಬಯಸುವುದು,ಒಂದಷ್ಟು ಕಾಲ ದೂರಾಗಿ ಅನಂತರ ಮತ್ತೆ ಒಂದಾಗುವುದು – ಇಂಥ ವಸ್ತುಗಳುಳ್ಳ ಒಟ್ಟು ಹತ್ತು ಕಥೆಗಳು ಇಲ್ಲಿವೆ.(Dull Student ಎಂಬ ಒಂದು ಪುಟ್ಟ ಕತೆಯ ಹೊರತಾಗಿ).ಒಟ್ಟಿನಲ್ಲಿ ಮುಕ್ತ ಲೈಂಗಿಕತೆ, ವಿವಾಹ ಪೂರ್ವ ಮತ್ತು ವಿವಾಹ ಬಾಹಿರ ಸಂಬಂಧಗಳು ಮನುಷ್ಯ ಸಹಜವೆಂಬ ಭಾವನೆ ಇಲ್ಲಿದ್ದರೂ ಅವು ಕ್ಷಣಿಕವೆಂದೂ, ಭಾರತೀಯ ಸಮಾಜವು ಇದುವರೆಗೆ ಪಾಲಿಸಿಕೊಂಡು ಬಂದ ವೈವಾಹಿಕ ವ್ಯವಸ್ಥೆಯ ವಿರುದ್ಧ ಹೋಗದೆ ಕುಟುಂಬದೊಳಗಿನ ಪ್ರೀತಿಯ ಸಂಬಂಧಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳುವು ದರಲ್ಲೇ ಬೆಚ್ಚಗಿನ ಸುರಕ್ಷೆಯಿರುವುದೆಂದೂ ಈ ಎಲ್ಲ ಕಥೆಗಳು ಧ್ವನಿಸುತ್ತವೆ.
ಪೂರ್ಣಿಮಾ ಅವರು ಬಳಸುವ ಕಥನ ತಂತ್ರದಲ್ಲಿ ಹೇಳಿಕೊಳ್ಳುವಂಥ ಹೊಸತನವಿಲ್ಲದಿದ್ದರೂ ಅವರ ನಿರೂಪಣಾಶೈಲಿ ಅತ್ಯಂತ ಸೊಗಸಾಗಿದೆ. ಭಾಷೆಯು ಸರಳವೂ ಸುಂದರವೂ ಆಗಿದ್ದು ಕಥೆಗಳು ಸುಖವಾಗಿ ಓದಿಸಿಕೊಂಡು ಹೋಗುತ್ತವೆ. ಅಮೆರಿಕನ್ ಇಂಗ್ಲಿಷ್ ನ ಮೂಲಕ ಇವತ್ತಿನ ಯುವಜನತೆಯ ಶಬ್ದ ಭಂಡಾರದೊಳಗೆ ಸರ್ವೇಸಾಮಾನ್ಯವಾಗಿರುವ, ಹಳಬರಿಗೆ ಅಪರಿಚಿತವೆಂದು ಅನ್ನಿಸಬಹುದಾದ ಅನೆಕ ಪದಗಳು, ಪದಪುಂಜಗಳು, ಮತ್ತು ಸಂಕ್ಷಿಪ್ತ ಮೊಬೈಲ್ ಮೆಸೇಜ್ ಭಾಷೆಗಳು ಇಲ್ಲಿ ಯಥೇಷ್ಟವಾಗಿವೆ. ಯಾವುದೇ ಘೋಷಿತ ಸಿದ್ದಾಂತಗಳಿಗೆ ಅಂಟಿಕೊಳ್ಳದೆ ವಾಸ್ತವ ಸಂಗತಿಗಳನ್ನು ಯಥಾವತ್ತಾಗಿ ನಿರೂಪಿಸಿ ಕುತೂಹಲವನ್ನು ಹಿಡಿದಿಟ್ಟುಕೊಂಡೇ ಸಾಗುವ ಈ ಕಥೆಗಳು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತವೆ..
****************************************
ಡಾ.ಪಾರ್ವತಿ ಜಿ.ಐತಾಳ್
ವಾಸ್ತವ ಸಂಗತಿಗಳ ಕಥೆಗಳಿಗೆ ವಾಸ್ತವ ನೆಲೆಯ ಪ್ರೌಢ ವಿಮರ್ಶೆ… ಈರ್ವರಿಗೂ ಅಭಿನಂದನೆಗಳು…
ಪಾರ್ವತಿ ನಿಮ್ಮ ವಿಶ್ಲೇಷಣೆ ತುಂಬ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕ ಪರಿಚಯ ಆಯಿತು. ಖಂಡಿತವಾಗಿ ಓದುತ್ತೇನೆ.
ಬಹಳ ಒಳ್ಳೆಯ ಮಾತುಗಳು.
ಕತೆಗಳನ್ನು ಓದಲಿಕೆ ಪ್ರೇರೇಪಿಸುತ್ತದೆ
A wonderful review by Dr. Parvathi G. Aithal about the book, motivating to read it. Yes, I am curious to read the book.