ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ವಿ.ಜೇ. ನಾಯಕ ಅವರ ತರುವಾಯ ಜಿಲ್ಲಾ ಘಟಕದ ಅಧ್ಯಕ್ಷಗಾದಿಯೇರಿದ ಟಿ.ಕೇ.ಮಹಮೂದ ಎಂಬ ಹಿರಿಯರು ಇಪ್ಪತ್ತೊಂದು ವರ್ಷಗಳ ಕಾಲ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ಜಿಲ್ಲಾಧ್ಯಕ್ಷರಾಗಲೀ, ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಹಿರಿಯರಾಗಲೀ, ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಾಗಲೀ, ಘಟಕವನ್ನು ಕ್ರಿಯಾಶೀಲ ಚಟುವಟಿಕೆಗಳಿಂದ ಮುನ್ನಡೆಸುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—43 ಆತ್ಮಾನುಸಂಧಾನ ಜಿ.ಸಿ. ಕಾಲೇಜಿನಲ್ಲೊಂದು ‘ಅಭಿನಯ ಮಂಟಪ’ ಅಂಕೋಲೆಯಲ್ಲಿ ಮಾನ್ಯ ದಿನಕರ ದೇಸಾಯಿ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ “ಕೆನರಾ ವೆಲ್‌ಫೇರ್ ಟ್ರಸ್ಟ್” ಎಂಬ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಹುಟ್ಟುಹಾಕಿದ ಜನತಾ ವಿದ್ಯಾಲಯಗಳೆಂಬ ಪ್ರೌಢಶಾಲೆಗಳು ಜಿಲ್ಲೆಯಲ್ಲಿ ಅಕ್ಷರ ಜ್ಯೋತಿ ಬೆಳಗಿಸುವ ಮಹತ್ವದ ಕಾರ್ಯಾಚರಣೆಗೆ ತೊಡಗಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾದದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಒಂದು ಸುವರ್ಣಮಯ ಕಾಲಾವಧಿ. ಇದರ ಮುಂದಿನ ಹೆಜ್ಜೆಯಾಗಿ ಸ್ಥಾಪನೆಗೊಂಡದ್ದೇ ಅಂಕೋಲೆಯ ‘ಗೋಖಲೆ ಸೆಂಟನರಿ ಕಾಲೇಜ್’ ಎಂಬ ಮಹಾವಿದ್ಯಾಲಯ. ತಮ್ಮ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ಆಯ್ಕೆಯಲ್ಲಿಯೂ ತುಂಬಾ ಕಾಳಜಿಪೂರ್ವಕ ಪರಿಶೀಲನೆ ನಡೆಸುವ ಮಾನ್ಯ ದೇಸಾಯಿಯವರು ಅತ್ಯಂತ ದಕ್ಷ ಪ್ರಾಮಾಣಿಕ ಪ್ರತಿಭಾ ಸಂಪನ್ನರನ್ನೇ ಆಯ್ಕೆ ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಸೇವೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತ ಪ್ರತಿಯೊಂದು ಸಂಸ್ಥೆಯೂ ಯಶಸ್ವಿಯಾಗಿ ಬೆಳವಣಿಗೆ ಹೊಂದುವಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಕೇ.ಜಿ.ನಾಯ್ಕ ಎಂಬ ದಕ್ಷ ಆಡಳಿತಗಾರನೊಬ್ಬನನ್ನು ಗೋಖಲೆ ಸೆಂಟನರಿ ಕಾಲೇಜಿನ ಪ್ರಥಮ ಪ್ರಾಂಶುಪಾಲರನ್ನಾಗಿ ಆಯ್ಕೆ ಮಾಡಿದ್ದು, ಅವರ ಆಡಳಿತದಲ್ಲಿ ಕಾಲೇಜು ಕೆಲವೇ ಕೆಲವು ವರ್ಷಗಳಲ್ಲಿ ತನ್ನ ಶೈಕ್ಷಣಿಕ ಸಾಧನೆಗಳಿಂದಲೇ ರಾಜ್ಯಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರ ಪಡಿಸಿದ್ದು ಚರಿತ್ರಾರ್ಹ ಸಂಗತಿಯಾಗಿದೆ. ಕೇ.ಜಿ.ನಾಯ್ಕ ಜಿಲ್ಲೆಗೆ ಅಪರಿಚಿತರೇನಲ್ಲ. ಮೂಲತಃ ಇದೇ ಜಿಲ್ಲೆಯ ಕುಮಟಾ ತಾಲೂಕಿನ ಹನೇಹಳ್ಳಿಯೆಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಹನೇಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಧಾರವಾಡ ಇತ್ಯಾದಿಯಾಗಿ ಜಿಲ್ಲೆಯ ಹೊರಗಿದ್ದುಕೊಂಡೇ ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿಗಳನ್ನು ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದವರು. ಬಹುಶಃ ಇದೇ ಕಾರಣದಿಂದ ಜಿಲ್ಲೆಯ ಬಹುಜನ ಸಮುದಾಯಕ್ಕೆ ಅಪರಿಚಿತರಾಗಿದ್ದವರು. ಇದು ಕೇ.ಜಿ.ನಾಯ್ಕರ ಪ್ರಾಂಶುಪಾಲ ಹುದ್ದೆಯ ಆಡಳಿತ ವ್ಯವಹಾರಗಳಿಗೆ ವರವಾಗಿಯೇ ಪರಿಣಮಿಸಿತು ಎಂಬುದು ಮುಂದಿನ ಅವರ ಕಾರ್ಯಕ್ಷಮತೆಯನ್ನು ಕಾಣುವಾಗ ಯಾರಿಗಾದರೂ ಮನವರಿಕೆಯಾಗುತ್ತದೆ.  ಅಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಮಾನ್ಯ ಅಡಕೆಯವರಲ್ಲಿ ತಮ್ಮ ಬೇಡಿಕೆಯನ್ನು ಸಲ್ಲಿಸಿ ಸಮರ್ಥ ಆಡಳಿತಗಾರನೋರ್ವನನ್ನು ನೀಡುವಂತೆ ದೇಸಾಯಿಯವರು ಮಾಡಿದ ಮನವಿಗೆ ಸ್ಪಂದಿಸಿದ ಮಾನ್ಯ ಅಡಕೆ ಸಾಹೇಬರು ಅಂಕೋಲೆಗೆ ನೀಡಿದ ಕೊಡುಗೆಯೇ ಶ್ರೀಮಾನ್ ಕೇ.ಜಿ.ನಾಯ್ಕ ಎಂಬ ಗೋಖಲೆ ಶತಾಬ್ಧಿ ಮಹಾವಿದ್ಯಾಲಯದ ಪ್ರಪ್ರಥಮ ಪ್ರಾಂಶುಪಾಲರು. ತೆಳ್ಳಗೆ-ಬೆಳ್ಳಗೆ ತುಂಬಾ ಎತ್ತರದ ನಿಲುವಿನ, ಸದಾ ಗಾಂಭೀರ್ಯವೇ ಮೂರ್ತಿವೆತ್ತಂತೆ ತೋರುವ ಕೇ.ಜಿ.ನಾಯ್ಕರು ತಮ್ಮ ಸಂಸ್ಥೆಯ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡೇ ಇರುತ್ತಿದ್ದರು. ಅವರ ಪೂರ್ವಾನುಮತಿ ಇಲ್ಲದೆ ಅಧ್ಯಾಪಕರಾಗಲಿ, ಸಿಬ್ಬಂದಿಗಳಾಗಲಿ, ವಿದ್ಯಾರ್ಥಿಗಳಾಗಲಿ, ಸರಕಾರಿ ಅಧಿಕಾರಿಗಳಾಗಲೀ ಅವರ ಚೇಂಬರ್ ಪ್ರವೇಶಿಸುವ ಅವಕಾಶವಿರಲಿಲ್ಲ. ಇದು ಹಲವರಿಗೆ ತಲೆನೋವಿನ ಸಂಗತಿಯೆನಿಸಿದರೂ ಪ್ರಾಚಾರ್ಯ ಹುದ್ದೆಯ ಘನತೆಯನ್ನು ಅವರಂತೆ ಕಾಪಾಡಿಕೊಂಡ ಇನ್ನೊಬ್ಬ ವ್ಯಕ್ತಿ ಅಪರೂಪಕ್ಕೆ ಅಪರೂಪವಾಗಿಯೂ ನನಗೆ ಕಂಡಿಲ್ಲ. ಮುಂಜಾನೆ ಹನ್ನೊಂದು ಗಂಟೆಗೆ ಅವರು ಕಾಲೇಜ್ ಕ್ಯಾಂಪಸ್ಸಿಗೆ ಬಂದರೆ ಪಾಠ ಪ್ರವಚನಗಳ ಧ್ವನಿ- ಪ್ರತಿಧ್ವನಿಗಳಲ್ಲದೆ ಬೇರೆ ಯಾವ ಸದ್ದುಗದ್ದಲವನ್ನೂ ಅವರು ಸಹಿಸುತ್ತಿರಲಿಲ್ಲ. ಅವರೊಮ್ಮೆ ಕಾರಿಡಾರಿನಲ್ಲಿ ನಿಂತು ಅತ್ತಿತ್ತ ಕಣ್ಣು ಹಾಯಿಸಿದರೆ ಒಂದು ನರಪಿಳ್ಳೆಯೂ ತರಗತಿಯಿಂದ ಹೊರಗೆ ಕಾಣಿಸುವುದು ಸಾಧ್ಯವಿರಲಿಲ್ಲ. ವರ್ತಮಾನದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಯ ಆವರಣವನ್ನು ಪ್ರವೇಶಿಸಿದರೂ ಇಂಥ ಅನುಭವವನ್ನು ಪಡೆಯುವುದು ಸಾಧ್ಯವೇ ಇಲ್ಲ. ಆದರೆ ಮಾನ್ಯ ಕೇ.ಜಿ.ನಾಯ್ಕ ಅವರು ಅದು ಹೇಗೆ ಅಂದಿನ ದಿನಗಳಲ್ಲಿ ಅಂಥ ಗಾಂಭೀರ್ಯವನ್ನು ಕಾಯ್ದುಕೊಂಡರು? ಎಂದು ಯೋಚಿಸಿದರೆ ಅಚ್ಚರಿಯೇ ಆಗುತ್ತದೆ. ಕಾಲೇಜಿನಂಥ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳನ್ನಲ್ಲದೇ ಪಠ್ಯೇತರ ವಿಷಯಗಳಲ್ಲಿಯೂ ಕಲಿಕೆಯ ಆಸಕ್ತಿ ತೋರಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಖಂಡಿತ ಸಾಧ್ಯವಿಲ್ಲ. ಕೇ.ಜಿ ನಾಯ್ಕರು ಆಡಳಿತದಲ್ಲಿ ದಕ್ಷತೆ ತೋರುವುದರೊಂದಿಗೆ ಕಠಿಣ ಶಿಸ್ತನ್ನು ಪಾಲಿಸುತ್ತಿದ್ದರು. ಅದರ ಜೊತೆಯಲ್ಲಿಯೇ ಅವರ ವ್ಯಕ್ತಿತ್ವದಲ್ಲಿ ವಿಶಾಲ ದೃಷ್ಠಿಕೋನ ಮತ್ತು ದೂರದರ್ಶಿತ್ವ ಅಡಗಿತ್ತು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಸ್ಥೆಯು ಕೊಡಬಹುದಾದ ಎಲ್ಲ ಅವಕಾಶಗಳನ್ನು ಪೂರೈಸಬೇಕೆಂಬ ಜವಬ್ದಾರಿಯಿತ್ತು. ಇಂಥ ಸಂದರ್ಭದಲ್ಲಿ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಅದನ್ನು ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಯಿತ್ತು. ಕಾಲೇಜಿನ ಪಠ್ಯೇತರ ಚಟುವಟಿಕೆಗಳಿಗಾಗಿಯೇ ‘ಯೂನಿಯನ್’, ‘ಜಿಮಖಾನಾ’ ಎಂಬ ಎರಡು ವಿಭಾಗಗಳು ಕ್ರಿಯಾಶೀಲವಾಗಿದ್ದವು. ಅವು ತುಂಬ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದವು. ಕೇ.ಜಿ. ನಾಯ್ಕ ಅವರ ಇನ್ನೊಂದು ವ್ಯಕ್ತಿ ವಿಶೇಷವೆಂದರೆ ಗುಣ ಗ್ರಾಹಿತ್ವ. ಯಾವ ಅಧ್ಯಾಪಕರಿಂದ ಯಾವ ಕೆಲಸವನ್ನು ಯಶಸ್ವಿಯಾಗಿ ಮಾಡಿಸಬಹುದೆಂಬ ಸೂಕ್ಷ್ಮಜ್ಞತೆ ಇರುವುದರಿಂದ ನಿರ್ದಿಷ್ಟ ವಿಭಾಗಕ್ಕೆ ಸೂಕ್ತ ವ್ಯಕ್ತಿಗಳನ್ನೇ ಆಯ್ದು ಜವಾಬ್ದಾರಿಯನ್ನು ಒಪ್ಪಿಸುತ್ತಿದ್ದರು. ಆರಂಭದ ದಿನಗಳಲ್ಲಿ ಹೆಚ್ಚಿನ ಕಾಲಾವಧಿಗೆ ಯೂನಿಯನ್ / ಜಿಮಖಾನಾ ವಿಭಾಗದ ಜವಾಬ್ದಾರಿಯನ್ನು ಪ್ರೊ. ವಿ.ಎ.ಜೋಷಿ ಮತ್ತು ಪ್ರೊ.ಎಂ.ಪಿ.ಭಟ್ ನಿಭಾಯಿಸಿದ್ದಾರೆ. ಪ್ರಸಕ್ತ ಕಾಲಾವಧಿಯ ಚರ್ಚಾ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಜಿಲ್ಲೆಯ ತುಂಬ ಇತರ ಶಿಕ್ಷಣ ಸಂಸ್ಥೆಗಳ ಗಮನ ಸೆಳೆಯುವಂತೆ ಇರುತ್ತಿದ್ದವು. ಕ್ರೀಡಾ ವಿಭಾಗದಲ್ಲಿ ಪ್ರತಿ ವರ್ಷವೂ ಎಂಟರಿಂದ ಹತ್ತರವರೆಗೂ ವಿವಿಧ ಕ್ಷೇತ್ರದ ಕ್ರೀಡಾಪಟುಗಳು “ಯೂನಿವರ್ಸಿಟಿ ಬ್ಲೂ” ಎನ್ನಿಸಿಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದರು,. ಉದಯ ಪ್ರಭು ಎಂಬ ವಿದ್ಯಾರ್ಥಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದು ನಿಲ್ಲುವಲ್ಲಿ ಪ್ರಾಚಾರ್ಯ ಕೇ.ಜಿ ನಾಯ್ಕ ಮತ್ತು ಪ್ರೊ. ಎಂ.ಪಿ.ಭಟ್ ಅವರ ಕೊಡುಗೆ ತುಂಬಾ ಸ್ಮರಣೀಯವಾದುದೇ ಆಗಿದೆ. ಯೂನಿಯನ್ ಮತ್ತು ಜಿಮಖಾನಾ ವಿಭಾಗಗಳ ಕಾರ್ಯಕ್ಷೇತ್ರಗಳ ಆಚೆಗೂ ಚಟುವಟಿಕೆಗಳನ್ನು ವಿಸ್ತರಿಸಬೇಕೆಂದು ಕೇ.ಜಿ.ನಾಯ್ಕರು ಸದಾ ಚಿಂತನೆ ನಡೆಸುತ್ತಿದ್ದರು. ಸಹ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ಸಲಹೆಗಳು ದೊರೆತಾಗ ಪರಿಪೂರ್ಣ ಸಹಕಾರ ನೀಡಿ ಕಾರ್ಯರೂಪಕ್ಕೆ ತರುತ್ತಿದ್ದರು. ಅದರ ಫಲಶೃತಿಯಾಗಿ ಹುಟ್ಟಿಕೊಂಡ ಮಹತ್ವದ ವೇದಿಕೆಗಳೆಂದರೆ ‘ಅಭಿನಯ ಮಂಟಪ’, ‘ಫೋಟೋ ಕ್ಲಬ್’ ಮತ್ತು ‘ಲೇಡಿಸ್ ಫೋರಂ’. ವಿದ್ಯಾರ್ಥಿನಿಯರ ವೈಯಕ್ತಿಕ ಸಮಸ್ಯೆಗಳು ಮತ್ತು ಯೋಗಕ್ಷೇಮದತ್ತ ಗಮನ ಹರಿಸಲು ಸೂಕ್ತ ವೇದಿಕೆಯಾದದ್ದು ‘ಲೇಡಿಸ್ ಫೋರಂ’. ಅದನ್ನು ಸ್ಥಾಪಿಸುವುದರೊಂದಿಗೆ ವಿದ್ಯಾರ್ಥಿನಿಯರ ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಿದ್ದು ಇದರ ಜವಾಬ್ದಾರಿಯನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಾಂತಾ ಥಾಮಸ್ ಬಹು ದೀರ್ಘ ಕಾಲ ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳಲ್ಲಿ ಫೋಟೋಗ್ರಾಫಿಯ ಅರಿವು ಮತ್ತು ಆಸಕ್ತಿಯನ್ನು ಬೆಳೆಸುವುದಕ್ಕಾಗಿಯೇ ಕಾಲೇಜಿನಲ್ಲಿ ‘ಫೋಟೋ ಕ್ಲಬ್’ ಒಂದನ್ನು ಸ್ಥಾಪಿಸಲಾಯಿತು. ಈ ಮಹತ್ವದ ಸಲಹೆ ಮತ್ತು ಯೋಜನೆಯನ್ನು ಪ್ರಾಚಾರ್ಯರ ಗಮನಕ್ಕೆ ತಂದ ರಸಾಯನ ಶಾಸ್ತ್ರ ಅಧ್ಯಾಪಕ ಪ್ರೊ.ವಿ.ಆರ್. ವೇರ್ಣೇಕರ್ ಮತ್ತು ಸಸ್ಯಶಾಸ್ತ್ರ ವಿಭಾಗದ ಪ್ರೊ.ಆರ್.ಬಿ ನಾಯ್ಕ ಎಂಬ ಅಧ್ಯಾಪಕರಿಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಹತ್ತಾರು ವರ್ಷಗಳವರೆಗೆ ನೂರಾರು ವಿದ್ಯಾರ್ಥಿಗಳು ಫೋಟೋಗ್ರಾಪಿಯ ಕಲಿಕೆಯ ಪ್ರಯೋಜನ ಪಡೆಯುವ ಅವಕಾಶವನ್ನು ಪ್ರಾಚಾರ್ಯ ಕೇ.ಜಿ. ನಾಯ್ಕ ಪೂರೈಸಿದರು. ಯೂನಿಯನ್ ವಿಭಾಗದ ‘ಕಲಾಮಂಡಲ’ದ ಅಧ್ಯಕ್ಷರಾಗಿ ಬಹಳಷ್ಟು ವರ್ಷ ಕಾರ್ಯನಿರ್ವಹಿಸಿದ್ದ ಪ್ರೊ. ಮೋಹನ ಹಬ್ಬು ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಮತ್ತು ನಾಟಕ ಕಲಿಕೆಯ ಅವಕಾಶ ಕಲ್ಪಿಸಲು ಒಂದು ಪ್ರತ್ಯೇಕ ವೇದಿಕೆಯ ಅವಶ್ಯಕತೆಯಿರುವುದನ್ನು ನಮ್ಮ ಪ್ರಾಚಾರ್ಯರ ಗಮನಕ್ಕೆ ತಂದರು. ಅದಕ್ಕೆ ಒಪ್ಪಿಕೊಂಡ ಪ್ರಾಚಾರ್ಯರು ಅಗತ್ಯವಾದ ಎಲ್ಲ ನೆರವನ್ನೂ ನೀಡುವ ಭರವಸೆಯೊಂದಿಗೆ ವೇದಿಕೆಗೆ ಪ್ರೊ.ಹಬ್ಬು ಅವರೇ ಸೂಚಿಸಿದ “ಅಭಿನಯ ಮಂಟಪ” ಎಂಬ ಹೆಸರಿನೊಂದಿಗೆ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಾರಂಬ ಮಾಡಿಸಿದ್ದರು. ಆರಂಭದ ಎರಡು ವರ್ಷಗಳ ಕಾಲ ಇಂಗ್ಲೀಷ್ ವಿಭಾಗದ ಅಧ್ಯಾಪಕರಾದ ಎಸ್.ಎಸ್.ನಾಯಕ ವೇದಿಕೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೆ, ಮುಂದಿನ ಹಲವು ವರ್ಷಗಳ ಕಾಲ ನಾನು “ಅಭಿನಯ ಮಂಟಪದ”ದ ಜವಾಬ್ದಾರಿ ವಹಿಸಿಕೊಂಡಿದ್ದೆ. ಯಕ್ಷಗಾನ ಕಲಿಕೆಗೆ ಅಗತ್ಯವಾದ ಹಿಮ್ಮೇಳದ ವಾದ್ಯಪರಿಕರಗಳಾದ ಮೃದಂಗ, ಚಂಡೆ, ಶೃತಿ ಪೆಟ್ಟಿಗೆ, ತಾಳ ಇತ್ಯಾದಿಗಳನ್ನೆಲ್ಲ ಪೂರೈಸಿಕೊಟ್ಟ ನಮ್ಮ ಪ್ರಾಚಾರ್ಯರು ನಿರ್ದಿಷ್ಟ ದಿನಾಂಕಗಳಲ್ಲಿ ಕಲಿಕೆಯ ವೇಳಾಪತ್ರಿಕೆಯನ್ನು ಸಿದ್ಧಪಡಿಸುವಂತೆ ಮಾಡಿ ತರಬೇತಿ ನೀಡುವ ಭಾಗವತ, ಮದ್ದಳೆಗಾರರ ಸಂಭಾವನೆಗೂ ಆರ್ಥಿಕ ನೆರವನ್ನು ನಿರಂತರವಾಗಿ ಒದಗಿಸಿಕೊಟ್ಟಿದ್ದರು. ಆರಂಭದ ದಿನಗಳಲ್ಲಿ ಹಿರಿಯರಾದ ಬುದ್ದು ಭಾಗ್ವತ ವಂದಿಗೆ, ಬಾಬಣ್ಣ ಮಾಸ್ತರ ವಂದಿಗೆ, ಕೃಷ್ಣ ಮಾಸ್ಕೇರಿ ಮುಂತಾದ ಮಹನೀಯರು ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯ ತರಬೇತಿ ನೀಡಿದ್ದರು. ಇಂದು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ವೃತ್ತಿಯಲ್ಲಿದ್ದೂ ಹವ್ಯಾಸಿ ಯಕ್ಷಗಾನ ಭಾಗವತರೆಂದು ಹೆಸರು ಮಾಡಿರುವ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಅವರು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಇದೇ ಅಭಿನಯ ಮಂಟಪದ ಸದಸ್ಯರಾಗಿ ಮಾರ್ಗದರ್ಶನ ಪಡೆದಿದ್ದರು. ವಿದ್ಯಾರ್ಥಿಯಾಗಿರುವಾಗಲೇ ಗೆಳೆಯರ ಬಳಗದೊಂದಿಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸುತ್ತಿದ್ದರು. ವಿದ್ಯಾರ್ಥಿ ಭಾಗವತರಾಗಿಯೇ ಬೊಮ್ಮಯ್ಯ ಗಾಂವಕರರು ಕಾಲೇಜಿನಲ್ಲಿ ‘ತಾಳಮದ್ದಲೆ’ ಕಾರ್ಯಕ್ರಮವೊಂದನ್ನು ಸಂಘಟಿಸಿ “ಭೀಷ್ಮ ವಿಜಯ” ಪ್ರಸಂಗವನ್ನು ಸಾದರಪಡಿಸಿದ್ದರು. ಈ ತಾಳಮದ್ದಲೆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರೊ. ಕೇ.ವಿ.ನಾಯಕ ಡಾ. ಶ್ರೀಪಾದ ಶೆಟ್ಟಿ ಮತ್ತು ನಾನು ಅರ್ಥಧಾರಿಗಳಾಗಿ ಭಾಗವಹಿಸಿದ್ದೆವು. ಬೊಮ್ಮಯ್ಯ ಗಾಂವಕರ ತನ್ನ ಗೆಳೆಯರ ಬಳಗದೊಂದಿಗೆ ಸಾದರ ಪಡಿಸಿದ “ರುಕ್ಮಿಣೀ ಸ್ವಯಂವರ” ಎಂಬ ಯಕ್ಷಗಾನ ಪ್ರದರ್ಶನ ಬಹುಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂದು ವೃತ್ತಿಯಿಂದ ಪ್ರಸಿದ್ಧ ನ್ಯಾಯವಾದಿಯಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ ಕಾರವಾರದ ನಾಗರಾಜ ನಾಯಕ ನಮ್ಮ ಕಾಲೇಜಿನ ‘ಅಭಿನಯ ಮಂಟಪ’ದ ಸದಸ್ಯರಾಗಿದ್ದರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಗೆಳೆಯರೊಂದಿಗೆ ಕಾಲೇಜಿನಲ್ಲಿ ಪ್ರದರ್ಶನಗೊಂಡ ‘ಲವ-ಕುಶ’ ಪ್ರಸಂಗದ ಕುಶನ ಪಾತ್ರನಿರ್ವಹಣೆಯಲ್ಲಿ ನಾಗರಾಜ ನಾಯಕ ತೋರಿದ ಕಲಾವಂತಿಕೆಯು ಬಹು ಜನರ ಮೆಚ್ಚುಗೆ ಗಳಿಸಿದ್ದು ಒಂದು ಸುಂದರ ನೆನಪಾಗಿದೆ. ಸೂರ್ವೆಯ ಶಿಕ್ಷಕ ರಾಜೇಶ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಹೊಸ್ಕೇರಿ ಹೊನ್ನಪ್ಪ ನಾಯಕ, ಶಿಕ್ಷಕರಾಗಿರುವ ಶೀಳ್ಯ ರಮಾನಂದ ನಾಯಕ, ನಿತೀಶ ನಾಯಕ ಮುಂತಾದವರೆಲ್ಲ ಯಕ್ಷರಂಗದಲ್ಲಿ ಹೆಸರು ಮಾಡಿರುವುದಕ್ಕೆ ಕಾಲೇಜಿನ ‘ಅಭಿನಯ ಮಂಟಪ’ ಮಹತ್ವದ ಕೊಡುಗೆ ನೀಡಿದೆ ಎಂದು ನಾನು ಭಾವಿಸಿದ್ದೇನೆ. ಅಂದಿನ ದಿನಗಳಲ್ಲಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವೆಂದರೆ ಎರಡು ದಿನಗಳ ಉತ್ಸವವೇ ಆಗಿರುತ್ತಿತ್ತು. ಮೊದಲ ದಿನ ರಾಜ್ಯಮಟ್ಟದ ಖ್ಯಾತ ಸಾಹಿತಿಗಳು ಮುಖ್ಯ ಅಥಿತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ನೀಡುವ ಉಪನ್ಯಾಸ, (ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬೀಚಿ, ಶ್ರೀರಂಗ, ವಿ.ಕೃ.ಗೋಕಾಕ್ ಮುಂತಾದವರು) ವಿದ್ಯಾರ್ಥಿಗಳ ಯೂನಿಯನ್/ಜಿಮಖಾನಾ ಪ್ರಶಸ್ತಿಗಳು, ಮೆರಿಟ್ ಪ್ರಶಸ್ತಿ ಪತ್ರಗಳ ವಿತರಣೆ, ಕೊನೆಯಲ್ಲಿ ಕಾಲೇಜಿನ ಕಲಾಮಂಡಲ ಸಾದರಪಡಿಸುವ ಮನರಂಜನೆ ಕಾರ್ಯಕ್ರಮಗಳು ಇರುತ್ತಿದ್ದವು. ಎರಡನೆಯ ದಿನದ ರಾತ್ರಿಯಿಡೀ ಅಭಿನಯ ಮಂಟಪದ ಕಲಾವಿದರಿಂದ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳು ಇರುತ್ತಿದ್ದವು. ರಾಜೇಂದ್ರ ನಾಯಕ ಸಗಡಗೇರಿ, ಮನೋಹರ ನಾಯಕ ಜಮಗೋಡ, ತೇಜಸ್ವಿ ನಾಯಕ, ಗೋಕರ್ಣ, ಪೂರ್ಣಿಮಾ ಗಾಂವಕರ, ವಿಶ್ವಭಾರತಿ ನಾಯಕ, ದಾಮೋದರ ನಾಯ್ಕ ಮುಂತಾದ ವಿದ್ಯಾರ್ಥಿ ಕಲಾವಿದರು ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅಧ್ಯಾಪಕರಲ್ಲಿ ಪ್ರೊ. ಹಬ್ಬು, ದಫೇದಾರ, ಎಲ್.ಎನ್. ನಾಯ್ಕ ಮತ್ತು ನಾನು ಪಾತ್ರಧಾರಿಗಳಾಗಿ ವಿದ್ಯಾರ್ಥಿಗಳ ಜೊತೆ ಸೇರುತ್ತಿದ್ದೆವು. ಅಂದು ನಾವು ಪ್ರದರ್ಶಿಸಿದ ‘ಜಾತ್ರೆ’ ‘ಕಂಬನಿ’ ಮುಂತಾದ ನಾಟಕಗಳು ನಮ್ಮೆಲ್ಲರಿಗೂ ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ೧೯೬೬ ರಿಂದ ಆರಂಭಿಸಿ ಪ್ರಾಚಾರ್ಯ ಕೇ.ಜಿ.ನಾಯ್ಕರು ನಿವೃತ್ತಿ ಹೊಂದಿದ ೧೯೯೧ ರವರೆಗಿನ ಕಾಲಾವಧಿಯಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳೂ ನಿರಂತರವಾಗಿ ನಡೆಯುವಂತೆ ಎಲ್ಲರೂ ಸಹಕಾರ ನೀಡಿ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ತದನಂತರದ ದಿನಗಳಲ್ಲಿ ಈ ಮಹತ್ವದ ವೇದಿಕೆಗಳಲ್ಲಿಯೂ ಕಟ್ಟುನಿಟ್ಟಿನ ಕಾರ್ಯಕ್ರಮ ಸಂಘಟನೆ  ನಡೆಯಲಿಲ್ಲ. ಕಾಲಕ್ರಮೇಣ ನಾವೆಲ್ಲರಿದ್ದೂ ನಮ್ಮ ಕಣ್ಣೆದುರೇ ಈ ಮಹತ್ವದ ವೇದಿಕೆಗಳು ನಿಷ್ಕಿçಯವಾದದ್ದು ಒಂದು ದುರಂತವೆಂದೇ ಹೇಳಬೇಕು. ಏನಿದ್ದರೂ ಪದವಿ ಮಹಾವಿದ್ಯಾಲಯದಂಥ  ಸಂಸ್ಥೆಯ ಆವರಣದಲ್ಲಿ ಇಂಥ ಮಹತ್ವದ ವೇದಿಕೆಗಳು ಉದಯವಾದದ್ದು ಹಲವು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ನಮ್ಮ ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತುಂಬಾ ಮಹತ್ವದ ಕೊಡುಗೆ ನೀಡಿದೆ ಎಂಬುದರಲ್ಲಿ ಯಾವುದೇ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—42 ಆತ್ಮಾನುಸಂಧಾನ ಅಂಕೋಲೆಯ “ಕರ್ನಾಟಕ ಸಂಘ” ಮತ್ತು ನಾನು ೧೯೫೦ ರ ದಶಕದ ಆರಂಭದಲ್ಲಿಯೇ ಹುಟ್ಟಿ ಅಂಕೋಲೆಯ ಸಾಮಾಜಿಕ ಪರಿಸರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿದ ಅಂಕೋಲೆಯ “ಕರ್ನಾಟಕ ಸಂಘ” ವೆಂಬ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯು ನನ್ನಂಥ ಹಲವರಿಗೆ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವೇದಿಕೆಯಾದದ್ದು ಅಂಕೋಲೆಯ ಇತಿಹಾಸದಲ್ಲಿಯೇ ಒಂದು ಅಭೂತಪೂರ್ವ ಕಾಲಾವಧಿ ಎನ್ನಬಹುದು. ೧೯೫೨ ರಲ್ಲಿ ಸ್ಥಾಪನೆಗೊಂಡು ಅಂಕೋಲೆಯ ಸಾಹಿತ್ಯ-ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಸಹಸ್ರಾರು ಜನರ ಆಶೋತ್ತರಗಳನ್ನು ಈಡೇರಿಸುತ್ತಲೇ ಬದುಕಿಗೆ ಸಾಂಸ್ಕೃತಿಕ ಶ್ರೀಮಂತಿಕೆಯ ಮೆರುಗನ್ನು ನೀಡಿದ ಕರ್ನಾಟಕ ಸಂಘದ ಹುಟ್ಟು ಬೆಳವಣಿಗೆಯಲ್ಲಿ ಈ ನೆಲದ ಹಲವು ಮಹನೀಯರ ಕನಸು ಮತ್ತು ಪರಿಶ್ರಮಗಳಿವೆ. ಅಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ವಿದ್ವಾಂಸರಾದ ತೀ.ನಂ.ಶ್ರೀಕಂಠಯ್ಯನವರಿಂದ ಉದ್ಘಾಟನೆಗೊಂಡ ಕನಾಟಕ ಸಂಘದ ಮೊದಲ ಅಧ್ಯಕ್ಷರಾಗಿ ಶ್ರೀ ಸ.ಪ.ಗಾಂವಕರ, ಉಪಾಧ್ಯಕ್ಷರಾಗಿ ಶ್ರೀ ಎಸ್.ವಿ.ಪಿಕಳೆ, ಕಾರ್ಯದರ್ಶಿಯಾಗಿ ಯು. ರಾಜಗೋಪಾಲಾಚಾರ್ ಕಾರ್ಯ ನಿರ್ವಹಿಸುತ್ತ ಸಂಘಕ್ಕೆ ಭದ್ರ ಬುನಾದಿ ಹಾಕಿದರು. ಈ ಪರಂಪರೆಯ ಮುಂದುವರಿಕೆಯಾಗಿ ಸಂಘವು ಸಂಘ-ಸಂಸ್ಥೆಗಳ ನೋಂದಣಿ ನಿಯಮದಂತೆ ನೋಂದಾಯಿಸಲ್ಪಟ್ಟ ೧೯೮೪-೮೫ ನೇ ವರ್ಷದಿಂದ ವರ್ಷಾವಧಿಯ ಆಡಳಿತದಲ್ಲಿ ಪ್ರಾಚಾರ್ಯ ಕೆ.ಜಿ.ನಾಯ್ಕ, ಪತ್ರಕರ್ತ ಅಮ್ಮೆಂಬಂಳ ಆನಂದ, ಮುಖ್ಯಾಧ್ಯಾಪಕ ವಿ.ಜೇ.ನಾಯಕ ವಂದಿಗೆ, ಶಾಂತಾರಾಮ ನಾಯಕ ಹಿಚ್ಕಡ, ವಿಷ್ಣು ನಾಯ್ಕ, ಶ್ಯಾಮ ಹುದ್ದಾರ, ಕಾಳಪ್ಪ ನಾಯಕ, ಮೋಹನ ಹಬ್ಬು, ವಸಂತ ಮಹಾಲೆ ಮುಂತಾದ ಮಹನೀಯರು ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತ ಸಂಘದ ಸಾಹಿತ್ಯಿಕ ಸಾಂಸ್ಕೃತಿಕ ರಥವನ್ನು “ಬೆಳ್ಳಿಹಬ್ಬ”, “ಸುವರ್ಣ ಮಹೋತ್ಸವ” ಇತ್ಯಾದಿ ಸಂಭ್ರಮಗಳ ಕಡೆಗೆ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸತ್ಪರಂಪರೆಯಲ್ಲಿ ೧೯೯೭-೯೮, ೧೯೯೮-೯೯, ೧೯೯೯-೨೦೦೦ ಇಸ್ವಿಯ ಮೂರು ಕಾಲಾವಧಿಗೆ ಸಂಘದ ಅಧ್ಯಕ್ಷನಾಗಿ ನನ್ನ ಅಳಿಲು ಸೇವೆ ಸಲ್ಲಿಸುವ ಸುವರ್ಣಾವಕಾಶ ನನಗೆ ದೊರೆತದ್ದು ನನ್ನ ಜೀವಿತಾವಧಿಯ ಬಹುದೊಡ್ಡ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಕರ್ನಾಟಕ ಸಂಘದ ಆಶ್ರಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತ ೧೯೮೦ ರಿಂದ ೨೦೦೦ ದ ಕಾಲಾವಧಿಯ ಎರಡು ದಶಕಗಳಲ್ಲಿ ಪಡೆದ ಹಿರಿಯ ಕವಿ-ವಿದ್ವಾಂಸರ ಒಡನಾಟ, ಮಾರ್ಗದರ್ಶನ, ವಿಚಾರಧಾರೆಗಳಿಂದ ಪ್ರೇರಣೆ ಪಡೆದು ಒಬ್ಬ ಬರಹಗಾರನಾಗಿ ನನ್ನನ್ನು ನಾನು ರೂಪಿಸಿಕೊಳ್ಳುವುದು ಸಾಧ್ಯವಾಯಿತು. ಕರ್ನಾಟಕ ಸಂಘವು ನನಗೆ ಮತ್ತು ನನ್ನಂಥ ಅನೇಕರಿಗೆ ಸಾಹಿತ್ಯಿಕ ಒಲವು ಮತ್ತು ಸೃಜನಶೀಲತೆಗೆ ಬಹು ದೀರ್ಘಕಾಲದ ಪೋಷಕಾಂಶಗಳನ್ನು ಪೂರೈಸಿದೆ. ಈ ದಿಸೆಯಲ್ಲಿ ನಾವೆಲ್ಲರೂ ಅಂಕೋಲೆಯ ಕರ್ನಾಟಕ ಸಂಘಕ್ಕೆ ಆ ಜನ್ಮ ಋಣಿಗಳಾಗಿದ್ದೇವೆ. ಕರ್ನಾಟಕ ಸಂಘದಿಂದ ಪಡೆದ ಸಾಂಸ್ಕೃತಿಕ ಪ್ರಭಾವ ಕೂಡ ನಮ್ಮ ಬದುಕಿನಲ್ಲಿ ಮಹತ್ವದ ಪರಿಣಾಮ ಬೀರಿತು. ನಾನು ಒಬ್ಬ ರಂಗ ಕಲಾವಿದನಾಗಿ ರೂಪುಗೊಳ್ಳಲು ಅಪೂರ್ವ ಅವಕಾಶ ದೊರೆಯಿತು. ೧೯೮೫ ರ ವರ್ಷಾವಧಿಯಲ್ಲಿ ಕರ್ನಾಟಕ ಸಂಘ ಏರ್ಪಡಿಸಿದ ನಾಟಕೋತ್ಸವ ಮತ್ತು ತನ್ನಿಮಿತ್ತ ನಡೆದ ರಂಗ ತರಬೇತಿ ಶಿಬಿರಗಳು ರಂಗಾಸಕ್ತರಿಗೆ ತುಂಬ ಪ್ರಯೋಜನಕಾರಿಯಾದವು. ಸಂಘದ ಹಿರಿಯ ಸದಸ್ಯರಾಗಿದ್ದ ವಿ.ಜೇ.ನಾಯಕ ವಂದಿಗೆ ಅವರು ಅಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಇದ್ದ ಸಂದರ್ಭ ಅದು. ಅವರು ಅಕಾಡೆಮಿಯ ನೆರವನ್ನು ದೊರಕಿಸಿಕೊಟ್ಟು ಇಂಥ ಕಾರ್ಯಕ್ರಮ ಸಂಯೋಜನೆಗೆ ಅವಕಾಶ ಕಲ್ಪಿಸಿದ್ದರು. ಅದೇ ಕಾಲಘಟ್ಟದಲ್ಲಿ ಮೈಸೂರಿನ ‘ಶ್ರೀನಿವಾಸ’ ಎಂಬ ಯುವ ರಂಗತಜ್ಞರೊಬ್ಬರು ಅಂಕೋಲೆಗೆ ಬಂದು ‘ಬೀದಿನಾಟಕ-ಪ್ರಯೋಗ’ದ ಕುರಿತು ಇಲ್ಲಿನ ರಂಗಾಸಕ್ತರಿಗೆ ತರಬೇತಿ ನೀಡಿದರು. ಇಲ್ಲಿ ತರಬೇತಿ ಪಡೆದ ಬಹಳಷ್ಟು ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ಅಂಕೋಲೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬೀದಿ ನಾಟಕಗಳನ್ನು ಪ್ರದಶಿಸಿ ಜನಜಾಗೃತಿ ಮೂಡಿಸಲು ಅವಕಾಶವಾಯಿತು. ಇದೇ ಕಾಲಾವಧಿಯಲ್ಲಿ ರಾಜ್ಯದಾದ್ಯಂತ ಚುರುಕುಗೊಂಡ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಅಂಕೋಲೆಯ ಹಲವು ಬರಹಗಾರರು ಸಕ್ರಿಯರಾದರು. ಬೀದಿ ನಾಟಕ ಪ್ರದರ್ಶನದ ಉದ್ದೇಶದಿಂದಲೇ ‘ಬಸಂತ’ ಕಲಾವಿದರ ತಂಡವೊಂದು ರೂಪುಗೊಂಡಿತು. “ಬಂಡಾಯ ಸಂಘಟನೆ ತಂಡ” ಎಂಬುದು ಅದರ ವಿಸ್ತೃತ ರೂಪ. ಈ ತಂಡದಲ್ಲಿ ನಾನು, ಹಿರಿಯರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಡಾ. ಶ್ರೀಪಾದ ಶೆಟ್ಟಿ, ಸದಾನಂದ ನಾಯಕ, ಕೃಷ್ಣಾ ನಾಯಕ, ಪ್ರಕಾಶ ಕಡಮೆ, ನರೇಶ ದೇಸಾಯಿ, ಶ್ಯಾಮ ಹುದ್ದಾರ, ಮಂಗೇಶ ಶೆಟ್ಟಿ, ಸುರೇಂದ್ರ ದಫೇದಾರ, ಪ್ರೊ. ನಿರಂಜನ, ಅನಂತ ನಾಯ್ಕ ಮುಂತಾದ ಕಲಾವಿದರು ತುಂಬ ಆಸಕ್ತಿಯಿಂದ ತೊಡಗಿಕೊಂಡಿದ್ದೆವು. ‘ಬಸಂತ’ ಕಲಾವಿದರ ತಂಡವು ಹಲವು ವರ್ಷಗಳವರೆಗೆ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸುತ್ತ ಜನಪ್ರಿಯ ಬೀದಿನಾಟಕ ತಂಡವೆಂದು ಪ್ರಸಿದ್ಧಿ ಪಡೆದುಕೊಂಡಿತ್ತು. ತಂಡವು ಪ್ರದರ್ಶಿಸಿದ ಸರಾಯಿ ಸೂರಪ್ಪ, ಕತ್ತೆ ಮೋತಿ ಪ್ರಸಂಗ, ನಾಯಿಗಳು, ರೇಶನ್ ಕಾರ್ಡ್, ಒಂದು ಹನಿ ರಕ್ತ, ಸಾವಸುತ್ತ, ವಂದೇ ಮಾತರಂ ಮುಂತಾದ ನಾಟಕಗಳು ತುಂಬ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾವಿದರು ಕೂಡ ಜನಪ್ರಿಯತೆ ಪಡೆಯಲು ಅವಕಾಶವಾಯಿತು. ಬೀದಿ ನಾಟಕಗಳ ಜೊತೆ ಜೊತೆಯಲ್ಲಿಯೇ ಇದೇ ಕಾಲಾವಧಿಯಲ್ಲಿ ಕರ್ನಾಟಕ ಸಂಘವು ಹಲವಾರು ರಂಗ ನಟಕಗಳನ್ನು ಪ್ರದರ್ಶಿಸಿದ್ದು ಬಹುತೇಕ ನಾಟಕಗಳಲ್ಲಿ ನಾನು ಮುಖ್ಯ ಪಾತ್ರಧಾರಿಯಾಗಿ ಅವಕಾಶ ಪಡೆದದ್ದು ಕೂಡ ಸ್ಮರಣೀಯವೆನಿಸುತ್ತದೆ. ಕರ್ನಾಟಕ ಸಂಘವು ಪ್ರದರ್ಶಿಸಿದ ‘ಜೈಸಿದ ನಾಯ್ಕ್’ ನಾಟಕದ ಸಿದ್ಧ ನಾಯ್ಕ, ಮಾರಿಕೊಂಡವರು ನಾಟಕದ ಪೊಲೀಸ್ ಅಧಿಕಾರಿ, ‘ಕಟ್ಟು’ ನಾಟಕದ ಮುಂಗೋಪಿ ಯುವಕ, ‘ಒಂದು ಕತ್ತೆಯ ಕಥೆ’ ನಾಟಕದ ನವಾಬ, ‘ಜಾತ್ರೆ’ ನಾಟಕದ ಅಧಿಕ ಬುದ್ಧಿಯ ಮಹಾರಾಜ, ‘ಇವ ನಮ್ಮವ’ ನಾಟಕದ ಕನ್ನಮಾರಿ, ಮೊದಲಾದ ಪಾತ್ರಗಳು ರಂಗ ಕಲಾವಿದನಾಗಿ ನನಗೆ ತುಂಬ ಜನಪ್ರಿಯತೆ ಮತ್ತು ಗೌರವವನ್ನು ತಂದು ಕೊಟ್ಟಿವೆ. ನಾವು ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ‘ಕಟ್ಟು’ ಎಂಬ ಏಕಾಂಕ ನಾಟಕವು ಪ್ರಥಮ ಬಹುಮಾನ ಪಡೆದು ರಾಜ್ಯ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಪ್ರದಶನಗೊಳ್ಳುವ ಅವಕಾಶ ಪಡೆದುಕೊಂಡಿತ್ತು! ‘ಒಂದು ಕತ್ತೆಯ ಕಥೆ’ ನಾಟಕವು “ಏಕ-ಥಾ ಗದಾ” ಎಂಬ ಹಿಂದಿ ನಾಟಕವೊಂದರ ಕನ್ನಡ ಅನುವಾದ. ಅದನ್ನು ಪ್ರೊ. ಮೋಹನ ಹಬ್ಬು  ಕನ್ನಡಕ್ಕೆ ಅನುವಾದಿಸಿ ರಂಗಪ್ರಯೋಗಕ್ಕೆ ಅನುವು ಮಾಡಿಕೊಟ್ಟು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇದು ಅಂಕೋಲಾ, ಕಾರವಾರ, ಮಂಚಿಕೇರಿ (ಯಲ್ಲಾಪುರ) ಭಟ್ಕಳ ಇತ್ಯಾದಿ ಜಿಲ್ಲೆಯ ಹಲವು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ಈ ಕಾಲಾವಧಿಯಲ್ಲಿ ಪ್ರೊ. ಮೋಹನ ಹಬ್ಬು ಅವರು ಬರೆದ ‘ಸಾವ ಸುತ್ತ’ ಮತ್ತು ನಾನು ರಚಿಸಿದ ‘ವಂದೇ ಮಾತರಂ’ ಎಂಬ ಎರಡು ಬೀದಿ ನಾಟಕಗಳನ್ನು ಪ್ರಕಟಿಸುವ ಮೂಲಕ ಕರ್ನಾಟಕ ಸಂಘವು ಮೊದಲ ಬಾರಿಗೆ ಪುಸ್ತಕ ಪ್ರಕಟಣೆಯ ಪ್ರಯೋಗ ಮಾಡಿದ್ದು ಮತ್ತು ಆ ಮೂಲಕ ನಮ್ಮನ್ನು ಪ್ರೋತ್ಸಾಹಿಸಿರುವುದು ಅವಿಸ್ಮರಣೀಯ ಸಂದರ್ಭವಾಗಿದೆ. ಒಟ್ಟಾರೆಯಾಗಿ ಕರ್ನಾಟಕ ಸಂಘದ ಸದಸ್ಯರಾದ ಪ್ರತಿಯೊಬ್ಬರು ಇಲ್ಲಿಯ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಂದ ಒಂದಲ್ಲ ಒಂದು ವಿಧದಲ್ಲಿ ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡಿದ್ದಾರೆ. ನನ್ನ ‘ಕಾಲೇಜು ಉಪನ್ಯಾಸಕ’ ಎಂಬ ಒಂದು ವ್ಯಕ್ತಿತ್ವಕ್ಕೆ ಕಲಾವಿದ, ಲೇಖಕ ಇತ್ಯಾದಿ ಪೂರಕವಾದ ಇನ್ನಷ್ಟು ಮುಖಗಳು ಅಭಿವ್ಯಕ್ತಗೊಂಡು ಸಾಮಾಜಿಕವಾಗಿ ನಾನು ಗುರುತಿಸಲ್ಪಡುವುದಕ್ಕೆ ಗೌರವಾರ್ಹನಾಗುವುದಕ್ಕೆ ಕರ್ನಾಟಕ ಸಂಘವು ಮಹತ್ವದ ಕೊಡುಗೆ ನೀಡಿದೆ ಎಂಬುದು ನಿಸ್ಸಂದೇಹ. ಪ್ರೀತ್ಯಾದರಗಳಿಂದಲೇ ನನ್ನನ್ನು ಸಂಘದ ಒಳಗು ಮಾಡಿಕೊಂಡ ಇಲ್ಲಿನ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ನಾನು ಯಾವತ್ತೂ ಋಣಿಯಾಗಿರುವೆ. ಹಾಗೆಯೇ ನನ್ನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ನಾಟಕಕಾರರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಚಂದ್ರಶೇಖರ ಕಂಬಾರ, ವ್ಯಾಸ ದೇಶಪಾಂಡೆ, ಎ.ಎನ್.ಮೂರ್ತಿರಾವ್ ಅವರ ಕೊಡುಗೆಯನ್ನೂ ಸ್ಮರಿಸದಿರಲಾರೆ. ನಮ್ಮ ನಾಟಕಗಳನ್ನು ನಿರ್ದೇಶಿಸಿ ನಮ್ಮ ಅಭಿನಯ ಸಾಮರ್ಥ್ಯಕ್ಕೆ ಸಾಣೆ ಹಿಡಿದ ನಿರ್ದೇಶಕರಾದ ಮೈಸೂರಿನ ಶ್ರೀನಿವಾಸ, ಹೊನ್ನಾವರದ ಡಾ. ಶ್ರೀಪಾದ್ ಭಟ್, ವಿಷ್ಣು ನಾಯ್ಕ, ಮೋಹನ ಹಬ್ಬು ಮೊದಲಾದ ಹಿರಿಯರೆಲ್ಲರೂ ನನ್ನ ಕಲಾವಿದ ವ್ಯಕ್ತಿತ್ವದ ಹಿಂದಿನ ಶಕ್ತಿಗಳು ಎಂದು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವೆ ********************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—41 ಆತ್ಮಾನುಸಂಧಾನ ಅಧ್ಯಾಪಕ ವೃತ್ತಿಯ ಆರಂಭದ ದಿನಗಳು ೧೯೭೫ ರ ಜುಲೈ ಒಂದರಂದು  ನಾನು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕರ್ತವ್ಯಕ್ಕೆ ಹಾಜರಾದೆ. ಅಂದು ನನ್ನ ಜೊತೆಯಲ್ಲಿಯೇ ನಮ್ಮ ನಾಡು ಮಾಸ್ಕೇರಿಯವರೇ ಆದ ಶ್ರೀ ಎನ್.ಎಚ್.ನಾಯಕ. ಜೀವಶಾಸ್ತ್ರ ವಿಭಾಗಕ್ಕೆ, ಅಂಕೋಲಾ ತಾಲೂಕಿನ ಬಾಸಗೋಡಿನ ಶ್ರೀ ವಿ.ಆರ್.ಕಾಮತ ರಸಾಯನ ಶಾಸ್ತ್ರ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿದರು. ನಮ್ಮ ಕಾಲೇಜಿನ ಆಡಳಿತ ಕಚೇರಿಯಲ್ಲಿ ನಮ್ಮ ಹಾಜರಾತಿಯ ಪ್ರಕ್ರಿಯೆ ನಡೆಯುವಾಗ ಬಹುತೇಕ ಎಲ್ಲ ಸಿಬ್ಬಂದಿಗಳ ಕೌತುಕದ ದೃಷ್ಠಿಯೊಂದು ನನ್ನ ಮೇಲೆ ಇರುವುದು ಸ್ಪಷ್ಟವಾಗಿ ನನ್ನ ಗಮನಕ್ಕೆ ಬರುತ್ತ ನನಗೆ ಅತೀವ ಮುಜುಗರವನ್ನುಂಟು ಮಾಡುತ್ತಿತ್ತು. ಇತರರ ಅಂಕಪಟ್ಟಿ ಮತ್ತಿತರ ದಾಖಲಾತಿಗಳನ್ನು ಸಹಜವಾಗಿ ಪರಿಶೀಲಿಸಿ ಹಾಜರು ಪಡಿಸಿಕೊಳ್ಳುವ ಆಫೀಸು ಸಿಬ್ಬಂದಿ ನನ್ನನ್ನು ಅಪಾದ ಮಸ್ತಕ ಮತ್ತೆ ಮತ್ತೆ ಪರಿಶೀಲಿಸಿ ನನ್ನ ದೈಹಿಕ ಚಹರೆಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ನೋಡುತ್ತಲೇ ನಾನು ಬೇಡ ಬೇಡವೆಂದರೂ ಬೆವೆತು ಹೋಗಿದ್ದೆ. ಕೇವಲ ಉಪ್ಪಿನಾಗರ, ಕಲ್ಲು ಕಣಿಗಳ ಕಾಯಕದಲ್ಲಿ ಬದುಕು ಕಟ್ಟಿಕೊಂಡ ಆಗೇರ ಸಮುದಾಯದ ಈ ಹುಡುಗ ತುಂಬಿದ ತರಗತಿಗಳನ್ನು ಹೇಗೆ ನಿಭಾಯಿಸಬಲ್ಲ? ಎಂಬ ಪ್ರಶ್ನೆಯ ಕುತೂಹಲದಲ್ಲಿಯೇ ಅವರೆಲ್ಲರೂ ನನ್ನ ಸಮಗ್ರ ಚಹರೆಯ ಪರೀಕ್ಷೆಗೆ ಇಳಿದಂತೆ ತೋರುತ್ತಿತ್ತು. ಅಚ್ಚರಿಯೆಂದರೆ ಈ ಪರಿಸರದ ಸೂಕ್ಷ್ಮ ವನ್ನು ನಾನು ಮಾತ್ರವೇ ಗಮನಿಸಿದೆ ಎನ್ನುವಂತೆಯೂ ಇರಲಿಲ್ಲ. ಕಚೇರಿಗೆ ಸಂಬಂಧಿಸದೆ ಅಲ್ಲಿದ್ದ ಇತರರಿಗೂ ಈ ಅನುಭವ ತಟ್ಟಿದೆ ಎಂಬುದು ನನಗೆ ಆ ಬಳಿಕ ತಿಳಿಯಿತು. ಬೇರೆ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಕಚೇರಿಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಸನ್ನಿವೇಶದ ಸೂಕ್ಷ್ಮ ವನ್ನು ನನ್ನಂತೆಯೇ ಗ್ರಹಿಸಿದ್ದರು. ಕಚೇರಿಯಲ್ಲಿ ಕೌಂಟರಿನ ಆಚೆ ನಿಂತು ನಮ್ಮ ಹಾಜರಾತಿ ಪ್ರಕ್ರಿಯೆಯನ್ನು ಗಮನಿಸುತ್ತಿದ್ದ ಹಿರಿಯ ಶಿಕ್ಷಕ ಮಹನೀಯರಿಗೂ ಇದೇ ಅನುಭವವಾಗಿದ್ದು ನಮ್ಮ ತಂದೆಯವರನ್ನು ಭೇಟಿಯಾದಾಗ ಕಚೇರಿಯ ದೃಶ್ಯಾವಳಿಗಳನ್ನು ತಾವು ಕಂಡಂತೆಯೇ ವಿವರಿಸಿದ್ದಾರೆ. ಇದರ ಪರಿಣಾಮ ಅಂದಿನ ಸನ್ನಿವೇಶದ ಹಿಂದಿರುವ ಭಾವನೆಗಳು ಮತ್ತದರ ಕಾರಣಗಳು ಇಂದಿಗೂ ನನ್ನ ಸ್ಮರಣೆಯಲ್ಲಿ ಜೋಪಾನವಾಗಿಯೇ ಉಳಿದುಕೊಂಡವು. ಇದನ್ನು ನಾನಿಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ… ಅಂದಿನ ಸಾಮಾಜಿಕ ವಾಸ್ತವದಲ್ಲಿ ಸಮಾಜದ ಕಟ್ಟಕಡೆಯ ಸಮುದಾಯವನ್ನು ಗಮನಿಸುವ ರೀತಿಗಳು ಹೇಗಿದ್ದವು? ಮತ್ತು ಇಂಥಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸುವ ನನ್ನಂಥವನ ಮುಂದಿರುವ ಸವಾಲುಗಳು ಯಾವವು? ಎಂಬುದನ್ನು ಗ್ರಹಿಸುವುದಕ್ಕಾಗಿ ಮಾತ್ರ ಇದನ್ನು ನಾನಿಲ್ಲಿ ಪ್ರಸ್ತಾಪಿಸಿದ್ದೇನೆ. ಅಧ್ಯಾಪಕ ವಲಯದಲ್ಲಿ ವ್ಯತಿರಿಕ್ತ ಎನ್ನಿಸುವ ಯಾವ ಸನ್ನಿವೇಶಗಳೂ ನನಗೆ ಕಾಣಿಸಲಿಲ್ಲ. ಬಹಳಷ್ಟು ಜನ ಅಧ್ಯಾಪಕರು ನನಗೆ ಪಾಠ ಹೇಳಿದ ಗುರುಗಳೇ ಆಗಿದ್ದರು. ಸಮಾನ ವಯಸ್ಕರಲ್ಲಿ ನನಗಿಂತ ಒಂದಾರು ತಿಂಗಳು ಮೊದಲೇ ಉಪನ್ಯಾಸಕರಾಗಿ ತೊಡಗಿಸಿಕೊಂಡ ಇಂಗ್ಲಿಷ್ ವಿಭಾಗದ ಎಸ್.ಎಚ್.ನಾಯಕ ಮತ್ತು ಎನ್.ವಿ.ನಾಯಕ ಪ್ರೀತಿಯ ಸ್ನೇಹಿತರೇ ಆದರು. ಇದೆಲ್ಲವೂ ನನಗೆ ಲವಲವಿಕೆಯಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಲು ಪ್ರೇರಣೆಯಾದವು. ತರಗತಿಗೆ ಪೂರಕವಾದ ಪಠ್ಯ-ಪುಸ್ತಕ ಮತ್ತು ವೇಳಾ ಪತ್ರಿಕೆ ಹಂಚುವಿಕೆಯಲ್ಲೂ ನನ್ನ ಹಿರಿಯ ಅಧ್ಯಾಪಕರು ನನ್ನ ವಿನಂತಿಯನ್ನು ಮನ್ನಿಸಿ ಅವಕಾಶ ನೀಡಿದರು. ವಿಭಾಗ ಮುಖ್ಯಸ್ಥರಾದ ವಿ.ಎ.ಜೋಷಿಯವರಾಗಲೀ, ಸಹ ಅಧ್ಯಾಪಕರಾದ ಕೇ.ವಿ. ನಾಯಕರಾಗಲೀ ಈರ್ವರೂ ನನಗೆ ಕಲಿಸಿದ ಗುರುಗಳೇ ಆದುದರಿಂದ ನನ್ನ ಕುರಿತು ಪ್ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಲೇ ನನ್ನ ನೆರವಿಗೆ ನಿಂತರು. ಆರಂಭದ ದಿನಗಳಲ್ಲಿ ಪ್ರತಿ ತರಗತಿಯ ಪಾಠಕ್ಕೆ ಬೇಕಾದ ಸಿದ್ಧತೆ, ಪೂರಕ ವಿಷಯಗಳ ಸಂಗ್ರಹ ಎಲ್ಲವನ್ನೂ ಟಿಪ್ಪಣಿಯಾಗಿ ಬರೆದುಕೊಂಡು ನನ್ನ ಇಬ್ಬರೂ ಗುರುಗಳಿಗೆ ತೋರಿಸಿ ಅವರ ಸಲಹೆ ಸೂಚನೆಗೊಂದಿಗೆ ಪರಿಷ್ಕರಿಸಿಕೊಂಡೇ ತರಗತಿಗೆ ಹೋಗುತ್ತಿದ್ದೆ. ಕನ್ನಡೇತರ ಹಿಂದಿ, ಸಂಸ್ಕೃತ, ಇಂಗ್ಲೀಷ್ ವಿಷಯಗಳ ಕುರಿತಾಗಿಯೂ ನನ್ನ ಹಿರಿಯ ಗುರುಗಳೊಡನೆ ಚರ್ಚಿಸುತ್ತಿದ್ದೆ. ಹಿಂದಿಯ ಕೆ.ಪಿ. ಕುಲಕರ್ಣಿ, ಸಂಸ್ಕೃತ ಮತ್ತು ಕ್ರೀಡಾ ವಿಷಯವಾಗಿ ಪ್ರೊ.ಎಂ.ಪಿ.ಭಟ್ಟ, ಇಂಗ್ಲೀಷಿಗೆ ಸಂಬಂಧಿಸಿ ಪ್ರೊ.ಎಂ.ಎನ್ ಡಂಬಳ್ ಮತ್ತು ಗೆಳೆಯ ಎಸ್.ಎಚ್.ನಾಯಕ ಅಗತ್ಯ ಮಾಹಿತಿಗಳನ್ನು ಎಲ್ಲ ಸಂದರ್ಭಗಳಲ್ಲೂ ನೀಡುತ್ತಿದ್ದರು. ನಾನೇ ಓದಿ ಸಂಗ್ರಹಿಸಿಕೊಳ್ಳಲು ಗ್ರಂಥ ಭಂಡಾರದಲ್ಲಿ ಸಮೃದ್ಧ ಪುಸ್ತಕ ಸಂಗ್ರಹವೂ ಇತ್ತು. ಅಲ್ಲಿನ ಗ್ರಂಥಪಾಲಕ ಎಸ್.ಆರ್.ಉಡುಪಿಯವರಾಗಲೀ, ಅವರ ಸಹಾಯಕರಾಗಿದ್ದ ಹಿರಿಯ ಲೇಖಕ ಶ್ಯಾಮ ಹುದ್ದಾರರಾಗಲಿ ನಾನು ಬಯಸಿದ ಪುಸ್ತಕವನ್ನು ಹುಡುಕಿಕೊಡುವಲ್ಲಿ ತುಂಬಾ ಮುತುವರ್ಜಿಯಿಂದ ಸಹಕರಿಸುತ್ತಿದ್ದರು. ಅಂದಿನ ದಿನಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುತ್ತಿತ್ತು. ಅದರಲ್ಲಿಯೂ ಕನ್ನಡ ವಿಷಯ ಆಯ್ಕೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಆಸಕ್ತಿ ಹೊಂದಿರುತ್ತಿದ್ದರು. ಕೆಲವು ತರಗತಿಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಪಾಠ ಮುಗಿದು ಚರ್ಚೆಯ ಸಮಯವಿದ್ದರೆ ಹಲವರು ಹಲಬಗೆಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದಕ್ಕೆ ಸಮರ್ಪಕ ಉತ್ತರ ಹೇಳಲೂ ಸಿದ್ಧತೆ ಇರಬೇಕು. ಈ ಎಲ್ಲ ಎಚ್ಚರದಿಂದಲೇ ನಾನು ಹೆಜ್ಜೆ ಹೆಜ್ಜೆಗೂ ನನ್ನನ್ನು ಪರಿಷ್ಕರಿಸಿಕೊಳ್ಳುವುದು ಅನಿವಾರ್ಯವೂ ಆಯಿತು. ನನ್ನ ಯಕ್ಷಗಾನ ಕಲೆಯ ಅಭಿರುಚಿ ಮತ್ತು ಅನುಭವಗಳು ಸ್ಪಷ್ಟವಾದ ಮಾತುಗಾರಿಕೆಗೆ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದ್ದೂ ಸುಳ್ಳಲ್ಲ. ಅದಕ್ಕೆ ಪೂರಕವಾಗಿ ದೈವಾನುಗ್ರಹದಿಂದ ದೊರೆತ ನನ್ನ ಕಂಠತ್ರಾಣವೂ ನಾನು ನನ್ನ ಪಾಠಕ್ರಮದಲ್ಲಿ ಶಿಸ್ತು ಮತ್ತು ಆಕರ್ಷಣೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಯಿತು. ಆದರೂ ಬಹುದೊಡ್ಡ ವಿದ್ಯಾರ್ಥಿ ಸಮುದಾಯದಲ್ಲಿ ನಮ್ಮ ಕಣ್ಣಳತೆಗೆ ಮೀರಿ ಅಲ್ಲಿ ಇಲ್ಲಿ ಆತಂಕಪಡುವ ಸಣ್ಣಪುಟ್ಟ ಕಿತಾಪತಿಗಳೂ ನಡೆಯುತ್ತಿದ್ದವು. ಒಂದೊಂದು ಗಂಟೆಯ ತರಗತಿ, ಒಂದಾದ ಮೇಲೊಂದರಂತೆ ದಿನವೂ ನಾಲ್ಕು ಗಂಟೆಗಳ ಕಾಲ ಪಾಠ ಮಾಡುವ ಧಾವಂತದಲ್ಲಿ ನಾನು ಬೆವೆತು ಹೋಗುತ್ತಿದ್ದೆ. ಇಂಥ ಸ್ಥಿತಿಯಲ್ಲಿ ತರಗತಿಯನ್ನು ಪ್ರವೇಶಿಸಿದ ನನ್ನನ್ನು ನೋಡಿ ಕೆಲವು ವಿದ್ಯಾರ್ಥಿಗಳು “ಅದೆ ಕಲ್ಲ ಖಣಿಗೆ ಹೋಗಿ ಸೀದಾ ಬಂದ ನೋಡು…..”  ಎಂದೋ “ಉಪ್ಪಿನಾಗರದಲ್ಲಿ ಉಪ್ಪು ತೆಗೆದು ಹಾಕೇ ಬಂದನೇನೋ…” ಎಂದೂ ನನ್ನ ಜಾತಿ ಕಸುಬನ್ನು ಎತ್ತಿ ಉದ್ಗರಿಸುವುದನ್ನು ಕೆಲವು ವಿದ್ಯಾರ್ಥಿಗಳೇ ಬಂದು ನನಗೆ ಹೇಳುತ್ತಿದ್ದರು. ಅದನ್ನು ಕೇಳುವಾಗ ತುಂಬ ಸಂಕಟದ ಅನುಭವವಾಗುತ್ತಿದ್ದರೂ ಕ್ರಮೇಣ ಅವೆಲ್ಲ ‘ಸಾಮಾನ್ಯ’ವೆಂದೇ ಜೀರ್ಣಿಸಿಕೊಳ್ಳುವುದನ್ನು ರೂಢಿಮಾಡಿಕೊಂಡೆ. ಉದ್ಯೋಗ ಆರಂಭಿಸಿದ ಬಳಿಕ ಕೆಲವು ದಿನ ಊರಿಂದಲೇ ಬಸ್ಸಿನಲ್ಲಿ ಬಂದು ಹೋಗುತ್ತಿದ್ದೆ. ಆದರೆ ಅಂಕೋಲೆಯಲ್ಲಿಯೇ ಒಂದು ಬಾಡಿಗೆ ಮನೆಮಾಡಿಕೊಂಡು ಉಳಿಯುವುದು ತುಂಬಾ ಅನಿವಾರ್ಯವೆನ್ನಿಸಿತು. ಇದೇ ಉದ್ದೇಶದಿಂದ ಬಾಡಿಗೆ ಮನೆಯೊಂದರ ಅನ್ವೇಷಣೆಗೆ ತೊಡಗಿದೆ. ಹಲವಾರು ಕಡೆಗಳಲ್ಲಿ ವಿಚಾರಿಸಿದರೂ ಏನಾದರೊಂದು ಕಾರಣ ನೀಡಿ ವಿಷಾದ ವ್ಯಕ್ತಪಡಿಸುತ್ತಿದ್ದರು. ಬಹಳ ಪ್ರಯತ್ನದ ಬಳಿಕ ಜಾತೀಯ ಕಾರಣವೇ ಇಲ್ಲಿನ ನಿರಾಕರಣೆಯ ಹಿಂದಿನ ರಹಸ್ಯವೆಂದು ಅರಿವಾಯಿತು. ಆ ದಿನಗಳಲ್ಲಿ ನನ್ನ ಜಾತಿ ಬಂಧುಗಳಲ್ಲಿ ಸುವ್ಯವಸ್ಥಿತ ಮನೆಗಳೂ ಇರಲಿಲ್ಲ. ಬಹುತೇಕ ಹುಲ್ಲಿನ ಛಾವಣಿ ಹೊಂದಿದ ಗುಡಿಸಲುಗಳೇ ಅಧಿಕ ಸಂಖ್ಯೆಯಲ್ಲಿ ಇದ್ದವು. ಅಪರೂಪದ ಕೆಲವು ಹಂಚಿನ ಮನೆಗಳಿದ್ದರೂ ಬಾಡಿಗೆಗೆ ಬಿಟ್ಟುಕೊಡುವಷ್ಟು ಸ್ಥಳಾವಕಾಶಗಳೂ ಇರುತ್ತಿರಲಿಲ್ಲ. ಇದರಿಂದ ಮನೆ ದೊರಕಿಸುವುದೇ ದುಸ್ತರವಾಯಿತು. ಅಂಥ ಸಂದರ್ಭದಲ್ಲಿ ಅಂಕೋಲೆಯಲ್ಲಿ ಎಕ್ಸೆಸೈಜ್ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಸಮೀಪದ ಹಾರವಾಡಾ ಊರಿನ ನಾಗಪ್ಪ ಆಗೇರ ಎಂಬ ಗ್ರಹಸ್ಥರು “ಜಾತಿಯ ಕಾರಣದಿಂದಲೇ ನಮಗೆ ಯಾರೂ ಮನೆ ಬಾಡಿಗೆ ಕೊಡಲು ಒಪ್ಪುವುದಿಲ್ಲ. ನೀವು ಮುಸ್ಲಿಂರ ಮನೆಗಳಲ್ಲಿ ಕೇಳಿ ನೋಡಿ ಸಿಗಬಹುದು…” ಎಂದು ಸಲಹೆ ನೀಡಿದರು. ನನಗೆ ಮುಸ್ಲಿಂ ಸಮುದಾಯದ ಕುರಿತು ಅಷ್ಟೊಂದು ಪ್ರೀತಿ-ವಿಶ್ವಾಸಗಳಿರಲಿಲ್ಲ. ಅದಕ್ಕೆ ಕಾರಣವೇನೋ ತಿಳಿಯದು. ಬಾಲ್ಯದಲ್ಲಿಯೇ ಬನವಾಸಿಯಲ್ಲಿ ಖಾಜಿ ಮಾಸ್ತರರ ಅನುಕಂಪವನ್ನೂ, ಮುಲ್ಕೀ ಅಭ್ಯಾಸ ಮಾಡುವಾಗ ಗಂಗಾವಳಿಯ ಅಬ್ದುಲ್ ಮಾಸ್ತರರ ಪ್ರೀತ್ಯಾದರಗಳನ್ನು ಅನುಭವಿಸಿದ್ದೆ ಆದರೂ ಮುಸ್ಲಿಂ ಸಮುದಾಯದ ಕುರಿತು ಕಾರಣವೇ ಇಲ್ಲದ ಭಯದಿಂದ ಆತಂಕ ಪಡುತ್ತಿದ್ದೆ. ಆದರೀಗ ಪರಿಸ್ಥಿತಿಯ ಅನಿವಾರ್ಯತೆಯಿಂದ ಮುಸ್ಲಿಂರು ಹೆಚ್ಚು ನೆಲೆಸಿದ “ಮುಲ್ಲಾಬಾಡ” ಎಂಬ ಏರಿಯಾದಲ್ಲಿ ಮನೆ ಹುಡುಕಲು ನಿರ್ಧರಿಸಿದೆ. ಕೊನೆಗೆ ಸ್ವಜಾತಿ ಬಂಧು ನಾಗಪ್ಪ ಆಗೇರ ಎಂಬ ಗೆಳೆಯನಿಂದಲೇ ಒಂದು ಮನೆ ದೊರಕಿಸುವಲ್ಲಿ ಸಫಲನಾದೆ. ಬಂದರ ರಸ್ತೆಯ ಒಂದು ಅಂಚಿನಿಂದ ಆರಂಭಗೊಳ್ಳುವ “ಮುಲ್ಲಾಬಾಡ” ಎಂಬ ಮುಸ್ಲಿಂರ ನೆಲೆಯಲ್ಲಿ “ನಿಜಾಮ ಸಾಬ ಮತ್ತು ಆಶಾಬಿ ನಿಜಾಮ ಖಾನ” ಎಂಬ ವೃದ್ದ ದಂಪತಿಗಳ ಬಾಡಿಗೆ ಮನೆಯೊಂದು ಸುಲಭವಾಗಿ ದೊರೆಯಿತು. ಮನೆಯ ಅಂಗಳದಲ್ಲಿಯೇ ಸಾರ್ವಜನಿಕ ಬಾವಿ, ಮನೆಯ ಹಿಂಭಾಗದಲ್ಲಿ ಶೌಚಗ್ರಹ ಇತ್ಯಾದಿ ಅನುಕೂಲಗಳಿದ್ದವು. ವೃದ್ಧ ನಿಜಾಮ ಸಾಹೇಬರು ಸನಿಹದ ಕುಂಬಾರಕೇರಿಯಲ್ಲಿ ಪಾತ್ರೆ ರಿಪೇರಿ, ಕಲಾಯಿ ಇತ್ಯಾದಿ ಮಾಡಿಕೊಡುವ ಸಣ್ಣ ವರ್ಕ್ಶಾಪ್ ಇಟ್ಟುಕೊಂಡಿದ್ದರು. ನನಗೆ ನೀಡಿದಂತೆಯೇ ಮತ್ತೆರಡು ಕುಟುಂಬಗಳಿಗೆ ಬಾಡಿಗೆ ಮನೆ ನೀಡಿದುದರಿಂದ ವೃದ್ಧ ದಂಪತಿಗಳಿಗೆ ಆದಾಯಕ್ಕೆ ಕೊರತೆಯೇನೂ ಇರಲಿಲ್ಲ. ಮೊಮ್ಮಕ್ಕಳಲ್ಲಿ ಹೈಸ್ಕೂಲು ಓದು ಮುಗಿಸಿದ ‘ನೂರಜಹಾನ’ ಎಂಬ ಹುಡುಗಿ ಅವಳ ತಮ್ಮ ‘ರಫೀಕ್ ಶೇಖ್’ ಎಂಬ ಪ್ರಾಥಮಿಕ ಶಾಲೆ ಕಲಿಯುವ ಹುಡುಗ ಅಜ್ಜ-ಅಜ್ಜಿಯ ಜೊತೆಯಲ್ಲೇ ಉಳಿದು ಅವರಿಗೆ ನೆರವಾಗುತ್ತಿದ್ದರು. ತಿಂಗಳಿಗೆ ಮೂವತ್ತು ರೂಪಾಯಿಗಳ ಬಾಡಿಗೆಯ ಕರಾರಿನ ಮೇಲೆ ನನ್ನ ಬಾಡಿಗೆ ಮನೆಯ ವಾಸ್ತವ್ಯ ಆರಂಭವಾಯಿತು. ************************** ರಾಮಕೃಷ್ಣ ಗುಂದಿ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ ಒಂದು ಹೆಮ್ಮೆ ಮತ್ತು ಸೊಗಸು! ಬಹುತೇಕ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷ ಕಾಣಸಿಗುವ ಬೇಂದ್ರೆ, ಕಣವಿ, ಪುಟ್ಟಪ್ಪ, ಚಂಪಾ, ಗಿರಡ್ಡಿ, ಪಟ್ಟಣ ಶೆಟ್ಟಿ ಮುಂತಾದ ಮಹನೀಯರ ಮಾತು ಕತೆಗಳೆಲ್ಲ ಎಷ್ಟು ಹರ್ಷದಾಯಕವಾಗಿದ್ದವೆಂದರೆ ನನ್ನ ಜೇಬಿನ ಖಾಲಿತನ ಎಂದೂ ನನಗೆ ಕಷ್ಟದಾಯಕವಾಗಿ ಕಾಡಲೇ ಇಲ್ಲ.           ಎರಡು ವರ್ಷ ಪೂರ್ತಿ ಕಳೆಯಲು ನಮ್ಮ ತಂದೆಯವರಿಂದ ನಾನು ಪಡೆದದ್ದು ಕೇವಲ ಎಂಟುನೂರು ರೂಪಾಯಿಗಳು ಮಾತ್ರ. ನನ್ನ ಊಟಕ್ಕೆ, ಬಟ್ಟೆಗೆ ಸಾಕು ಎನ್ನಿಸುವಷ್ಟು ಸ್ಕಾಲರ್ ಶಿಪ್ ಸಿಗುತ್ತಿತ್ತಲ್ಲ? ಅಪ್ಪ ಕಳುಹಿಸಿದ ಅಷ್ಟೂ ಹಣಕ್ಕಾಗಿ ಅವರು ಪಟ್ಟ ಶ್ರಮ ಎಷ್ಟೆಂಬುದು ನನಗೆ ತಿಳಿಯದ ಸಂಗತಿಯೇನೂ ಅಲ್ಲ. ತಿಂಗಳಿಗೆ ದೊರೆಯುವ ಎಪ್ಪತ್ತೋ ಎಂಭತ್ತು ರೂಪಾಯಿಗಳ ಮಾಸ್ತರಿಕೆಯ ಸಂಬಳದಲ್ಲಿ ಸಾಲದ ಕಂತು ಕಳೆದು ಕೈಗೆ ಬರುವ ಕಾಸಿನಲ್ಲೇ ತಮ್ಮ ತಂಗಿಯರ ಹೊಟ್ಟೆ ಬಟ್ಟೆ ಓದು ಬರಹದ ಖರ್ಚು ಹೊಂದಿಸಲು ಅಪ್ಪ ಪಡಬಾರದ ಬವಣೆ ಪಡುತ್ತಿದ್ದರು. ಆದರೂ ನನ್ನ ಮೇಲಿನ ಭರವಸೆ ಮತ್ತು ವಿಶ್ವಾಸದಿಂದ ನನಗೆ ಓದಿನ ಅವಕಾಶ ಕಲ್ಪಿಸಿಕೊಟ್ಟ ಅಪ್ಪ ನನ್ನ ಪಾಲಿನ ನಿಜವಾದ ದೇವರೇ ಅಂದರೆ ಅತಿಶಯೋಕ್ತಿಯಲ್ಲ.           ಮೊದಲ ವರ್ಷದ ಅಂಕಗಳಿಕೆಯ ಆಧಾರದಿಂದ ಅಂತಿಮ ವರ್ಷದ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸವಂತೂ ನನಗಿತ್ತು. ಕಾಲೇಜು ಉಪನ್ಯಾಸಕನಾಗಲು ಕನಿಷ್ಟ ಅರ್ಹತೆಗೆ ಅಷ್ಟು ಅಂಕಗಳು ಸಾಲುತ್ತಿದ್ದ ಕಾಲಮಾನ ಅದು. ಹೇಗೂ ನಾನು ಕಾಲೇಜು ಉಪನ್ಯಾಸಕನಾಗಬಹುದೆಂಬ ಆತ್ಮವಿಶ್ವಾಸದಿಂದಲೇ ಪ್ರೀತಿಯ ಧಾರವಾಡಕ್ಕೆ ವಿದಾಯ ಹೇಳಿದ್ದೆನಾದರೂ ಮನಸ್ಸಿನ ಮೂಲೆಯಲ್ಲಿ “ಇಲ್ಲಿಯೇ ಬಂದು ಉಪನ್ಯಾಸಕನಾಗಬೇಕು” ಎಂಬ ಕನಸೊಂದು ಅಂತರಂಗದಲ್ಲಿ ಚಿಗುರೊಡೆದಿತ್ತು.           ಪರೀಕ್ಷೆಯ ಫಲಿತಾಂಶ ಮತ್ತು ನಿರೀಕ್ಷಿತ ಅಂಕಗಳು ಬಂದಾದ ಬಳಿಕ ಉದ್ಯೋಗ ಅನ್ವೇಷಣೆಯ ಪ್ರಯತ್ನದಲ್ಲೇ ಆರೇಳು ತಿಂಗಳು ಕಳೆದವು. ಅಂದು ತೀರಾ ಅಪರೂಪವಾಗಿ ನಮ್ಮೂರಿನಂಥ ಕುಗ್ರಾಮಗಳಿಗೆ ತಲುಪುವ ಪತ್ರಿಕೆಗಳಲ್ಲಿ ಉದ್ಯೋಗ ಜಾಹೀರಾತು ನೋಡುವುದು ಅದಕ್ಕೆ ಅರ್ಜಿ ಹಾಕಿ ಕಾಯುವುದು ಒಂದು ಆಟದಂತೆ ನಡೆಯುತ್ತಿತ್ತು.           ಬೇಸರ ನೀಗಿಸುವ ಗೆಳೆಯರ ಗುಂಪು, ಆಚೀಚೆ ನಡೆಯುವ ಬಯಲಾಟಗಳ ವೀಕ್ಷಣೆ ಮತ್ತು ತೊಡಗುವಿಕೆಯಿಂದ ದಿನ ಕಳೆಯುವುದೆಂದೂ ಕಷ್ಟವಾಗುತ್ತಿರಲಿಲ್ಲ ಆಗಲೇ ನಾನು ಬಿ.ಎ ಪದವಿ ಪಡೆದ “ಗೋಖಲೆ ಸೆಂಟನರಿ ಕಾಲೇಜ್ ಅಂಕೋಲಾದಲ್ಲಿ ಕನ್ನಡ ಉಪನ್ಯಾಸಕರ ಹುದ್ದೆ ಖಾಲಿ ಇದೆ” ಎಂಬ ಜಾಹೀರಾತು ಕಣ್ಣಿಗೆ ರಾಚಿತು!           ನನಗೆ ಇದು ಹಲವಾರು ಕಾರಣಗಳಿಂದ ಇಷ್ಟದ ಸಂಗತಿಯಾಗಲಿಲ್ಲ. ಏಕೆಂದರೆ ಗೋಖಲೆ ಸೆಂಟನರಿ ಕಾಲೇಜು ದಿನದಿಂದ ದಿನಕ್ಕೆ ಪ್ರತಿಷ್ಠೆಯ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತ ನಡೆದಿತ್ತು. ಮಾನ್ಯ ದಿನಕರ ದೇಸಾಯಿಯವರ ಸಂಕಲ್ಪ ದಂತೆ ಎಲ್ಲ ವಿಧದಲ್ಲಿಯೂ ಜಿಲ್ಲೆಯಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾಗಿ ಮುನ್ನಡೆಯುತ್ತಿತ್ತು. ಅಲ್ಲಿರುವ ಎಲ್ಲ ಅಧ್ಯಾಪಕರೂ ಅಧ್ಯಾಪಕ ವೃತ್ತಿಗೆ ಪರಿಪೂರ್ಣ ನ್ಯಾಯ ಸಲ್ಲಿಸುವ ವಿದ್ಯಾಸಂಪನ್ನರಾಗಿದ್ದರು. ಕೆಲವೇ ವರ್ಷಗಳಾದರೂ ವಿದ್ಯಾರ್ಥಿಯಾಗಿ ನಾನು ಜಿ.ಸಿ.ಕಾಲೇಜಿನಲ್ಲಿ ಕಂಡ ಶಿಸ್ತು ಘನಸ್ಥಿತಿಯ ಭಾಗವಾಗುವ ಅರ್ಹತೆ ನನಗೆ ಸಾಧ್ಯವಾಗಿದೆಯೆ? ಎಂಬ ಪ್ರಶ್ನೆ ಹುಟ್ಟಿದ ಕ್ಷಣದಿಂದ ನಾನು ಅಧೀರನಾದೆ.           ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ ಸಮುದಾಯ. ಬಹುಪಾಲು ಮೇಲ್ವರ್ಗದ ಮೇಲ್ಜಾತಿಯ ಕುಟುಂಬದ ಮಕ್ಕಳು. ಅಂಥ ವಿದ್ಯಾರ್ಥಿ ಸಮುದಾಯವು ತೀರ ಕೆಳಸ್ತರದ ದಲಿತ ಆಗೇರ’ ಜಾತಿಯ ಹುಡುಗ ಪಾಠ ಹೇಳಲು ನಿಂತರೆ ಹೇಗೆ ಸ್ವೀಕರಿಸಬಹುದು?…. ಎಂಬಿತ್ಯಾದಿ ಪ್ರಶ್ನೆಗಳು ಭಯವಾಗಿ ಕಾಡತೊಡಗಿಸಿದಾಗ ನಾನು ಇಲ್ಲಿಗೆ ಅರ್ಜಿ ಹಾಕುವುದೇ ಬೇಡವೆಂದು ನಿರ್ಧರಿಸಿ ಸುಮ್ಮನಾದೆ.           ಅದೇ ಸಮಯಕ್ಕೆ ನನ್ನ ತಮ್ಮ ನಾಗೇಶ, ಗೆಳೆಯ ಹೊನ್ನಪ್ಪ, ಗಣಪತಿ, ನಾರಾಯಣ ಮುಂತಾದವರು ಅದೇ ಕಾಲೇಜಿನಲ್ಲಿ ಪಿ.ಯು ತರಗತಿಗೆ ಪ್ರವೇಶ ಪಡೆದಿದ್ದರು.           ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರೂ, ನನ್ನ ಗುರುಗಳೂ ಆದ ಪ್ರೊ.ವಿ.ಎ.ಜೋಷಿಯವರಿಗೆ ನಾನು ಎಂ.ಎ ಪಾಸು ಮಾಡಿದ ಸಂಗತಿ ತಿಳಿದಿತ್ತಲ್ಲ? ಅವರು ನನ್ನ ಅರ್ಜಿ ಕಳಿಸುವಂತೆ ನನ್ನ ತಮ್ಮ ನಾಗೇಶನ ಮೂಲಕ ಸಂದೇಶ ಕಳಿಸುತ್ತಲೇ ಇದ್ದರು. ನಾನು “ಹಾಂ…ಹೂಂ” ಅನ್ನುತ್ತಲೇ ದಿನ ಕಳೆಯುತ್ತಿದ್ದೆ. ಕೊನೆಗೊಮ್ಮೆ ಸ್ವತಃ ನನ್ನ ಗುರು ಜೋಷಿಯವರೇ ಮಾದರಿ ಅರ್ಜಿಯೊಂದನ್ನು ಬರೆದು ಕಳುಹಿಸಿ ಅಂತೆಯೇ ಅರ್ಜಿ ಬರೆದು ಅಂಕಪಟ್ಟಿ ಜಾತಿ ಸರ್ಟಿಫಿಕೇಟ್ ಲಗ್ತಿಸಿ ಕಳಿಸುವಂತೆ ಕೊನೆಯ ಸಂದೇಶ ಕಳುಹಿಸಿದರು.           ನನಗೇನೂ ಇಲ್ಲಿ ಉಪನ್ಯಾಸಕನಾಗುವ ಧ್ಯೇಯವಾಗಲೀ, ಆತ್ಮ ವಿಶ್ವಾಸವಾಗಲೀ ಖಂಡಿತವಾಗಿಯೂ ಇರಲಿಲ್ಲ. ನಾನು ಒತ್ತಾಯ ಪೂರ್ವಕವಾಗಿ ಇಲ್ಲಿಯೇ ಕೆಲಸ ಮಾಡಬೇಕೆಂದು ತಂದೆಯವರು ಕೂಡಾ ಬಯಸಲಿಲ್ಲ. ಅವರು ನಿರ್ಲಿಪ್ತರಾಗಿದ್ದರು.           ಆದರೆ ನಾನು ಅರ್ಜಿ ಸಲ್ಲಿಸಿದ ಸಂಗತಿ ತಿಳಿದ ಬಳಿಕ ಅದಕ್ಕೆ ಪೂರಕ ಪ್ರಯತ್ನಗಳು ಬೇಕೆಂದು ಬಯಸಿ ತಮ್ಮ ಶಕ್ತ್ಯಾನುಸಾರ ಕೆಲವು ವ್ಯಕ್ತಿಗಳ ಪ್ರಭಾವ ಬಳಸುವ ಪ್ರಯತ್ನ ಮಾಡಿದರು. ಅವುಗಳಲ್ಲಿ ಮುಖ್ಯವಾದುದೆಂದರೆ ಕಾಲೇಜು ಪ್ರಾಚಾರ್ಯರಾದ ಕೆ.ಜಿ ನಾಯ್ಕರನ್ನು ಕಂಡು ಮಾತನಾಡುವುದು.           ಅಪ್ಪ ಹನೇಹಳ್ಳಿಯಲ್ಲಿ ಹಾಸ್ಟೆಲ್ಲಿನಲ್ಲಿ ಇದ್ದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನ ತರಗತಿಯಲ್ಲಿಯೇ ಹನೇಹಳ್ಳಿಯವರೇ ಆದ ಕೆ.ಜಿ.ನಾಯ್ಕ ಓದುತ್ತಿದ್ದರಂತೆ. ಈ ಬಾಲ್ಯ ಸ್ನೇಹದ ನೆನಪು. ಈಗ ಪ್ರಯೋಜನಕ್ಕೆ ಬರಬಹುದೆಂಬ ಆಸೆಯಿಂದ ನಾನು ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅಪ್ಪ ಅಂಕೋಲೆಯ ಲಕ್ಷ್ಮೇಶ್ವರ ಭಾಗದಲ್ಲಿ ಇರುವ ಕೆ.ಜಿ.ನಾಯ್ಕರ ಮನೆಯನ್ನು ಹುಡುಕಿ ಹೊರಟರು. ಅವರಿಗೆ ವಿಷಯವನ್ನು ವಿವರಿಸಿ ತುಂಬಾ ಹೆಮ್ಮೆಯಿಂದ ಮಗನ ಕುರಿತು ಹೇಳಿ ಸಹಾಯ ಮಾಡುವಂತೆ ವಿನಂತಿಸಿ ಬಂದರು.           “ಇಂಟ್ರೂ ಚೆನ್ನಾಗಿ ಮಾಡ್ಲಿಕೆ ಹೇಳು… ಒಳ್ಳೇ ತಯಾರಿಲಿ ರ್ಲಿ…” ಎಂಬ ಸಂದೇಶ ನೀಡಿ ಅವರು ಅಪ್ಪನನ್ನು ಬೀಳ್ಕೊಟ್ಟಿದ್ದರು. “ಇದು ಆಗ್ತದೆ” ಎಂಬ ವಿಶ್ವಾಸದಲ್ಲೇ ಅಪ್ಪ ಮನೆಗೆ ಬಂದಿದ್ದರು.           ನಮ್ಮ ನೆರೆಯ ಅಡಿಗೋಣ ಎಂಬ ಊರಿನಲ್ಲಿ ಗೌರವಾನ್ವಿತ ಹಿರಿಯ ವ್ಯಕ್ತಿಯೊಬ್ಬರಿದ್ದರು. ಅವರು ಪಟೇಲ ನಾರಾಯಣ ನಾಯಕರು. ನಾರಾಯಣ ನಾಯಕರು ಊರಿನ ಪಟೇಲರಾಗಿ ಗೌರವದಿಂದ ಕಾರ್ಯನಿರ್ವಹಿಸುತ್ತಿದ್ದರು. ಅದರ ಜೊತೆಗೆ ಗಿಡಮೂಲಿಕೆಗಳ ಆಯುರ್ವೇದ ಔಷಧಿಯ ಕುರಿತಾಗಿಯೂ ಪರಿಣತಿ ಹೊಂದಿದ್ದರು. ಸುತ್ತಲಿನ ಹಳ್ಳಿಗಳಿಗೂ ಇಂಥ ಔಷಧಿಗಳನ್ನು ಪೂರೈಸುತ್ತ ಜನಾನುರಾಗಿಯಾಗಿದ್ದರು. ಈ ಗೌರವಗಳ ಜೊತೆಯಲ್ಲಿಯೇ ಯಕ್ಷಗಾನದ ಕಟ್ಟಾ ಅಭಿಮಾನಿಯಾದ ನಾಯಕರು ಯಕ್ಷಗಾನ ತಾಳಮದ್ದಳೆಯಲ್ಲಿ ಸೊಗಸಾಗಿ ಅರ್ಥ ಹೇಳುವ ಕಲಾ ಸಂಪನ್ನತೆಯನ್ನು ಪಡೆದಿದ್ದರು.           ಇತ್ತೀಚಿನ ಕೆಲ ವರ್ಷಗಳಲ್ಲಿ ನಾನು ಯಕ್ಷಗಾನ ಪಾತ್ರಗಳನ್ನು ಮಾಡುತ್ತ, ಹೊಸ ಪ್ರಸಂಗಗಳನ್ನು ಬರೆದು ಪ್ರದರ್ಶನ ನಡೆಸಿದುದನ್ನು ಕಣ್ಣಾರೆ ಕಂಡ ನಾರಾಯಣ ನಾಯಕರು ನಮ್ಮ ತಂದೆಯವರ ಮುಂದೆ ಹಲವು ಬಾರಿ ನನ್ನ ಪ್ರತಿಭೆಯ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದ್ದರು.           ಬಹಳ ವಿಶೇಷ ಸಂಗತಿಯೆಂದರೆ, ಅಡಿಗೋಣದ ಈ ಗೌರವಾನ್ವಿತ ಹಿರಿಯರಾದ ನಾರಾಯಣ ನಾಯಕರ ಹಿರಿಯ ಮಗಳನ್ನೇ ಜಿ.ಸಿ.ಕಾಲೇಜಿನ ವರ್ತಮಾನದ ಪ್ರಾಚಾರ್ಯರಾದ ಕೆ.ಜಿ.ನಾಯ್ಕ ಅವರು ಕೈ ಹಿಡಿದಿದ್ದರು. ಇದನ್ನು ಅರಿತಿದ್ದ ತಂದೆಯವರು, ಅಡಿಗೋಣ ನಾರಾಯಣ ನಾಯಕರಿಂದಲೂ ಅವರ ಅಳಿಯ ಕೆ.ಜಿ.ನಾಯ್ಕರಿಗೆ ಒಂದು ಮಾತು ಹೇಳಿಸಬಹುದೆಂದು ಯೋಚಿಸಿ ನಾಯಕರ ಮನೆಗೂ ಹೋಗಿ ವಿಷಯವನ್ನು ನಿವೇದಿಸಿ ನನ್ನ ಕುರಿತು ವಿನಂತಿಸಿ ಬಂದರು.           ಕೆ.ಜಿ.ನಾಯ್ಕರ ಗಾಂಭೀರ್ಯ ಮತ್ತು ಶಿಸ್ತನ್ನು ವಿದ್ಯಾರ್ಥಿಯಾಗಿ ಗಮನಿಸಿದ್ದ ನನಗೆ ಮಾವನಿಂದ ಅವರು ಪ್ರಭಾವಿತರಾಗಬಹುದೆಂಬ ವಿಶ್ವಾಸವೇನೂ ಕಾಣಲಿಲ್ಲ. ಅಷ್ಟಕ್ಕೂ ಇಷ್ಟು ಜವಾಬ್ದಾರಿಯ ಕೆಲಸವನ್ನು ಕೇವಲ ನಮ್ಮ ಮೇಲಿನ ಪ್ರೀತಿಗಾಗಿ ನಾರಾಯಣ ನಾಯಕರು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂಬ ವಿಶ್ವಾಸವೂ ನನಗಿರಲಿಲ್ಲ.           ತಂದೆಯವರು ತಮ್ಮ ಪಾಲಿನ ಪ್ರಯತ್ನ ತನ್ನ ಕರ್ತವ್ಯವೇ ಎಂಬ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದಷ್ಟೆ ನಾನು ಭಾವಿಸಿದ್ದೆ. ನಿಜವಾಗಿ ನನ್ನ ಅಂತರಾತ್ಮದಲ್ಲಿ ನಾನು ಅಂಕೋಲೆಯ ಕಾಲೇಜಿನಲ್ಲಿ ಉಪನ್ಯಾಸಕನಾಗುವುದಾಗಲೀ, ಒಂದುವೇಳೆ ಆಯ್ಕೆಯಾದರೂ ನಾನಿಲ್ಲಿ ಕರ್ತವ್ಯ ನಿರ್ವಹಿಸುವುದು ಖಂಡಿತ ಸಾಧ್ಯವೇ ಇಲ್ಲವೆಂದೂ ನನಗೆ ದೃಢವಾಗಿತ್ತು.           ಇದೇ ಕಾರಣದಿಂದ ನನಗೆ ಸಂದರ್ಶನಕ್ಕೆ ಹೋಗಲು ಅಂಜಿಕೆಯೇನೂ ಆಗಲಿಲ್ಲ. ಹಲವು ಬಾರಿ “ನಾನು ಸಂದರ್ಶನಕ್ಕೆ ಹೋಗದೇ ಇರುವುದೇ ಸರಿ” ಎಂದೂ ಯೋಚಿಸುತ್ತಿದ್ದೆ. ಅದನ್ನು ನನ್ನ ತಮ್ಮಂದಿರು, ಗೆಳೆಯರ ಮುಂದೆ ಬಾಯಿಬಿಟ್ಟು ಹೇಳುತ್ತಿದ್ದೆ.           ಕಾಲೇಜಿನಲ್ಲಿ ಜೋಷಿ ಗುರುಗಳು ನನ್ನ ತಮ್ಮ ಕಂಡಾಗಲೆಲ್ಲ ಸಂದರ್ಶನದ ನೆನಪು ಮಾಡುತ್ತಲೇ ಇರುತ್ತಿದ್ದರಂತೆ. ಒಂದು ಬಾರಿ ನನ್ನ ತಮ್ಮನೇ ಗುರುಗಳ ಮುಂದೆ ನನ್ನ ಉದ್ದೇಶವನ್ನು ಬಾಯಿಬಿಟ್ಟು ಹೇಳಿದ್ದಾನೆ. ಗುರುಗಳು ಹಠ ಬಿಡದೇ ಎಚ್ಚರಿಕೆ ನೀಡಿ,           “ಏನ್ ಹುಚ್ ಅದಾನವ…..ಇಂಟ್ರೂಕ್ ಬಂದ್ರ ಅವನ್ನೆ ಆಯ್ಕೆ ಮಾಡ್ತಾರಂತ ಯಾರು ಹೇಳ್ಯಾರವಂಗ? ಏನೂ ತಾನೊಬ್ನೇ ಅಂಥಾ ಮೆರಿಟ್ ಇದ್ದಾವರಂಗ ಆಡ್ತಾನ…. ಬಾಯಿ ಮುಚಗೊಂಡ ಅಟಂಡಾಗನ್ನು ಅವಗ$$$$….” ಎಂದು ತಮ್ಮದೇ ಶೈಲಿಯಲ್ಲಿ ದಬಾಯಿಸಿ ಕಳಿಸಿದ್ದರಂತೆ.           ಸಂದರ್ಶನದ ದಿನಾಂಕ ಬಂತು. “ಯಾವ ಬಿಢೆಯೂ ಇಲ್ಲದೆ ಗೊತ್ತಿದ್ದ ಪ್ರಶ್ನೆಗೆ ಉತ್ತರಿಸಿ ಬರಬೇಕು. ಇಲ್ಲಿ ನೌಕರಿ ಮಾಡುವ ಆಸೆಯಂತೂ ಇಲ್ಲ, ಧೈರ್ಯ ಮೊದಲೇ ಇಲ್ಲ!” ಎಂದು ನಾನು ಗಟ್ಟಿ ಮನಸ್ಸು ಮಾಡಿದ್ದರಿಂದ ಧೈರ್ಯದಿಂದಲೇ ಸಂದರ್ಶನಕ್ಕೆ ಹೋದೆ.           ಕನ್ನಡಕ್ಕೆ ಏಳೆಂಟು ಜನ ಅಭ್ಯರ್ಥಿಗಳಿದ್ದರೂ ನನಗೆ ಪರಿಚಿತರಾದ ಸುತ್ತಲಿನ ಅಭ್ಯರ್ಥಿಗಳೇ ಆಗಿದ್ದರು. ಅಂಕಗಳಲ್ಲಿ ಪೈಪೋಟಿಯಿಲ್ಲ. ಒಬ್ಬನೇ ಒಬ್ಬ ಯುವಕ ತುಂಬ ಸುಂದರನಾಗಿದ್ದ. ಎತ್ತರದ ಆಳ್ತನ, ಆಕರ್ಷಕವಾಗಿ ಡ್ರೆಸ್ ಮಾಡಿಕೊಂಡಿದ್ದ. ಅವನ ಚೆನ್ನಾಗಿ ಪಾಲಿಶ್ ಮಾಡಿದ ಶೂ ಗಳು, ಕೊರಳಿಗೆ ಕಟ್ಟಿದ ಟೈ’ ಎಲ್ಲವೂ ಅಂಕೋಲೆಯ ಈ ಪರಿಸರದಿಂದ ಭಿನ್ನವಾಗಿ ಆತ ಬೇರೆಯೇ ಆಗಿ ಕಾಣುತ್ತಿದ್ದ. ನಾನು ಆಚೀಚೆ ವಿಚಾರಿಸಿದಾಗ ಆತ ಬೆಂಗಳೂರ-ಬಾಂಬೇ ಕಡೆಯಲ್ಲಿ ಎಂ.ಎ ಓದಿ ಬಂದವನಂತಲೂ, ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣನಾಗಿರುವನೆಂದೂ, ಆದರೆ ಮೂಲತಃ ನಮ್ಮದೇ ಹನೇಹಳ್ಳಿಯವನೆಂದೂ ತಿಳಿಯಿತು. (ಹೆಸರು ಮರೆತಿದ್ದೇನೆ ಆದರೆ ಆತ ಗಾಂವಕರ ಎಂಬ ಸರ್ ನೇಮ್ ಹೊಂದಿದ್ದು ನೆನಪಿನಲ್ಲಿದೆ) ಯಾವ ಲೆಕ್ಕದಲ್ಲಿಯೂ ಈತ ಯೋಗ್ಯ ಆಯ್ಕೆಯಾಗುತ್ತಾನೆ ಎಂದು ನಿರುಮ್ಮಳನಾಗಿ ಸಂದರ್ಶನದ ಸರತಿಗಾಗಿ ಕಾದೆ.           ಕೆನರಾ ವೆಲಫೇರ ಟ್ರಸ್ಟಿನ ಅಧ್ಯಕ್ಷರಾದ ಡಾ. ದಿನಕರ ದೇಸಾಯಿ, ಕಾರ್ಯದರ್ಶಿಗಳಾದ ದಯಾನಂದ ನಾಡಕರ್ಣಿ, ವಾಮನ ಪೈ ಮೊದಲಾದ ಸದಸ್ಯರೊಂದಿಗೆ ಪ್ರಾಚಾರ್ಯ ಕೆ.ಜಿ.ನಾಯ್ಕ, ವಿಷಯ ತಜ್ಞರಾಗಿ ವಿಭಾಗ ಮುಖ್ಯಸ್ಥ ಪ್ರೊ.ಜೋಷಿ ಮುಂತಾದ ಮಹನೀಯರನ್ನು ಒಳಗೊಂಡ ಸಂದರ್ಶನ ಸಮಿತಿಯ ಮುಂದೆ ಹೇಗೂ ಧೈರ್ಯ ಮಾಡಿ ನಿಂತೆ.           ಆಗೇರರು-ಹಾಲಕ್ಕಿ-ಮುಂತಾದ ಹಿಂದುಳಿದ ಸಮುದಾಯವನ್ನು ಅತಿಯಾಗಿ ಹಚ್ಚಿಕೊಂಡಿದ್ದ ದೇಸಾಯಿಯವರಿಗೆ ನಾನು ಆಗೇರ ಜಾತಿಯಲ್ಲಿ ಹುಟ್ಟಿ ಮೊದಲ ಎಂ.ಎ ಪದವೀಧರನೆಂಬುದೇ ಅಚ್ಚರಿ ಆನಂದದ ಸಂಗತಿ ಎನಿಸಿದ್ದು ಅವರ ಮುಖಭಾವ ಮಾತುಗಳಲ್ಲೇ ವ್ಯಕ್ತವಾಯಿತು.           ಜೋಷಿಯವರು ವಿಷಯಕ್ಕೆ ಸಂಬಂಧಿಸಿದಂತೆ  ಸಾಹಿತ್ಯ ಚರಿತ್ರೆಯ ಕುರಿತಾಗಿಯೇ ಪ್ರಶ್ನೆ-ಉಪಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಪ್ರಾಚಾರ್ಯ ಕೆ.ಜಿ ನಾಯ್ಕರು ಮಾತ್ರ ಯಕ್ಷಗಾನವನ್ನು ಬಿಟ್ಟು ಬೇರೆ ಏನನ್ನು ಕೇಳಲಿಲ್ಲ. ಯಕ್ಷಗಾನ ಕಲೆಯ ಕುರಿತು, ಯಕ್ಷಗಾನದ ಛಂದಸ್ಸು ಇತ್ಯಾದಿಗಳಿಂದ ಪ್ರಸಂಗ ರಚನೆಯ ಕೌಶಲ್ಯ, ನಾನು ಇದುವರೆಗೆ ಮಾಡಿದ ಪಾತ್ರಗಳು, ಹಿಮ್ಮೇಳದ ಯಾವ ವಾದ್ಯ ನುಡಿಸಬಲ್ಲೆ ಇತ್ಯಾದಿ ಪ್ರಶ್ನೆಗಳನ್ನೇ ಬಿಟ್ಟೂ ಬಿಡದೇ ಕೇಳಿ ನನ್ನಲ್ಲಿ ಪ್ರತಿ ಹಂತದಲ್ಲೂ ಉತ್ತರಿಸುವ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ನಾಡಿನ ಕ್ರಾಂತಿಕಾರಿ ಕವಿ, ರೈತ ಚಳುವಳಿಯ ನಾಯಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಸೂಯನನ್ನು ಬೆಳಗಿಸಿದ ಮಾನ್ಯ ಡಾ|| ದಿನಕರ ದೇಸಾಯಿಯವರ ಕೃಪಾ ದೃಷ್ಟಿಗೆ ಪಾತ್ರನಾದ ಬಾಲಕ ಸಣ್ಣು ಅವರ ಆಶ್ರಯದಲ್ಲೇ ಇದ್ದುಕೊಂಡು ಇಂಟರ್ ಮೀಡಿಯೇಟ್ ವರೆಗೆ ಶಿಕ್ಷಣ ಪಡೆದದ್ದು ಬಹುದೊಡ್ಡ ಅದೃಷ್ಟವೇ ಸರಿ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಕೆಲವೇ ದಿನಗಳಲ್ಲಿ ಒಂದು ದಿನ “ನಾಗಮ್ಮತ್ತೆ ರಾತ್ರಿ ಮಲಗಿದವಳು ಮುಂಜಾನೆ ನಾಪತ್ತೆಯಾಗಿದ್ದಾಳೆ” ಎಂಬ ಆತಂಕದ ಸುದ್ದಿ ತಂದರು. ಅಪ್ಪ ನಮ್ಮ ದಾಯಾದಿ ಇಬ್ಬರು ಚಿಕ್ಕಪ್ಪಂದಿರೊಂದಿಗೆ ಹಿಲ್ಲೂರಿಗೆ ಹೋದರು. ಅಲ್ಲಿ ಮತ್ತೆರಡು ದಿನಗಳವರೆಗೆ ಬೆಟ್ಟ, ಗುಡ್ಡ, ನದಿ, ಕೆರೆ, ಬಾವಿ ಇತ್ಯಾದಿ ಎಲ್ಲ ಕಡೆಗಳಲ್ಲಿಯೂ ಹುಡುಕಾಟ ಮಾಡಿದ್ದಾರೆ. ಆಗಲೂ ಮಂತ್ರವಾದಿಗಳು “ಅವಳು ಬದುಕಿದ್ದಾಳೆ… ಉತ್ತರ ದಿಕ್ಕಿನಲ್ಲಿ ಇದ್ದಾಳೆ…” ಇತ್ಯಾದಿ ಭವಿಷ್ಯ ನುಡಿದು ಹುಡುಕಾಟದ ತಂಡವನ್ನು ಅಲೆದಾಡಿಸಿ ನೋಡಿದರಲ್ಲದೆ ಅತ್ತೆಯು ಎಲ್ಲಿಯೂ ಕಾಣಸಿಗಲಿಲ್ಲ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಒಮ್ಮೆ ಕಾರವಾರದಲ್ಲಿ ‘ಗಂಡಭೇರುಂಡ’ ಚಲನ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನನ್ನು ಕರೆಸಿಕೊಂಡ ಕೃಷ್ಣಮೂರ್ತಿ ಚಿತ್ರತಂಡದ ಭೇಟಿಗೆ ಅವಕಾಶ ಪಡೆದುಕೊಂಡಿದ್ದ. ಅಂದು ಕಾರವಾರದ ಪ್ರತಿಷ್ಠಿತ ಗೋವರ್ಧನ ಹೋಟೆಲಿನಲ್ಲಿ ನಾಯಕ ನಟರಾದ ಶ್ರೀನಾಥ, ಶಂಕರನಾಗ್, ಖಳನಟ ವಜ್ರಮುನಿ ಮತ್ತು ನಾಯಕಿ ಜಯಮಾಲಾ ಅವರ ಜೊತೆಯಲ್ಲಿ ಒಂದೆರಡು ಗಂಟೆಗಳ ಕಾಲ ಸಮಯ ಕಳೆದದ್ದು ಒಂದು ಅವಿಸ್ಮರಣೀಯ ಸಂದರ್ಭವೇ ಆಗಿತ್ತು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಈ ಅಸಹಾಯಕ ಸಂದರ್ಭದಲ್ಲಿ ನನ್ನ ಜೈಹಿಂದ್ ಹೈಸ್ಕೂಲು ಸಹಪಾಠಿ ಪ್ರಭು ಎಂಬಾತ ಸಹಾಯಕ್ಕೆ ನಿಂತ. (ಕ್ಷಮೆ ಇರಲಿ ಅವನ ಹೆಸರು ಮರೆತಿದ್ದೇನೆ). ಅಂಕೋಲೆಯ ಮಠಾಕೇರಿಯ ಜಿ.ಎಸ್.ಬಿ ಸಮುದಾಯದ ಪ್ರಭು ನನಗೆ ಹೈಸ್ಕೂಲು ದಿನಗಳಲ್ಲಿ ತುಂಬಾ ಆತ್ಮೀಯನಾಗಿದ್ದವನು. ಆತ ನನಗೆ ವಾಸ್ತವ್ಯದ ವ್ಯವಸ್ಥೆಯಾಗುವವರೆಗೆ ನಿಜಲಿಂಗಪ್ಪ ಹಾಸ್ಟೆಲ್ಲಿನ ತಮ್ಮ ಕೊಠಡಿಯಲ್ಲಿಯೇ ಉಳಿಯಲು ಅವಕಾಶ ನೀಡಿದ. ಇದಕ್ಕೆ ಅವನ ರೂಮ್‌ಮೇಟ್ ಕೂಡ ಆಕ್ಷೇಪವೆತ್ತದೆ ಸಹಕರಿಸಿದ. ಇಬ್ಬರ ಉಪಕಾರ ಬಹು ದೊಡ್ಡದು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಕೃಷ್ಣಮೂರ್ತಿ ಹೆಗಡೆ ಪ್ರತಿಷ್ಠಿತ “ಶಿಂತ್ರಿ ಬಿಲ್ಡಿಂಗ್” ನಲ್ಲಿ ಬಾಡಿಗೆ ರೂಮು ಮಾಡಿಕೊಂಡಿದ್ದ. ಇತರ ಬ್ರಾಹ್ಮಣ ಹುಡುಗರು ಸಪ್ತಾಪುರ ಇತ್ಯಾದಿ ಕಡೆಗಳಲ್ಲಿ ರೂಮು ಪಡೆದಿದ್ದರು. ಒಮ್ಮೆಯಂತೂ ಅವರಲ್ಲಿ ಯಾರೋ ತನ್ನ ಕುರಿತು ಸಲ್ಲದ ಮಾತನಾಡಿದರೆಂದು ಕೋಪಗೊಂಡ ಕೃಷ್ಣಮೂರ್ತಿ ಹೆಗಡೆ ರಾತ್ರಿ ವೇಳೆ ಅವರ ರೂಮಿಗೆ ಹೋಗಿ ರಂಪ ಮಾಡಿದ ಸಂಗತಿ ಮರುದಿನ ಕನ್ನಡ ವಿಭಾಗದಲ್ಲಿಯೇ ಚರ್ಚೆಯ ಸಂಗತಿಯಾಗಿತ್ತು!

Read Post »

You cannot copy content of this page

Scroll to Top