ಅಂಕಣ ಬರಹ ಕಬ್ಬಿಗರ ಅಬ್ಬಿ ಹಣತೆ ಹಚ್ಚಿದ ಅಕ್ಷರ ದೀಪ ನಮ್ಮ ಅಜ್ಜಿ ಹಚ್ಚಿ ಹಣತೆ ಬೆಳಕಲ್ಲಿ ತೆರೆದಳು ರಾಮಾಯಣ. ಹಣತೆ ಸಣ್ಣಗೆ ಬೆಳಗುವಾಗ ರಾಮ ಪುಟು ಪುಟು ಹೆಜ್ಜೆ ಹಾಕುತ್ತಿದ್ದ.ಜತೆಗೆ ಇನ್ನೂ ಮೂರು ತಮ್ಮ ತಮ್ಮ ತಮ್ಮಂದಿರು. ಎಷ್ಟು ಪ್ರೀತಿ ಮುಗ್ಧ ಬೆಳಕಿತ್ತು. ಕತೆ ಕೇಳುತ್ತಾ ನಮಗೆಲ್ಲ ಪುಳಕ. ಹಣತೆಯ ಬೆಳಕೂ ರಾಮನೂ ಜತೆ ಜತೆ ಬೆಳೆದರು. ವಿಶ್ವಾಮಿತ್ರನ ಕೈ ಹಿಡಿದು ಅಣ್ಣ ತಮ್ಮ ಗುರು ತೋರಿದ ಕಾಡುಹಾದಿಯಲ್ಲಿ ತಿಳಿವಿನ ಬೆಳದಿಂಗಳಿತ್ತು. ಕೆಂಗಣ್ಣ ದೈತ್ಯೆ ತಾಟಕಿಯ ಘೋರ ಆರ್ಭಟಕ್ಕೆ ಹಣತೆಯ ಪುಟ್ಟ ಜ್ವಾಲೆ ಕೆಂಪು ಕೆಂಪು ಓಲಾಡಿತು.ಅಜ್ಜಿ ಚಾಳೀಸು ಸರಿಪಡಿಸಿ ಪುಸ್ತಕದೊಳಗೇ ನೋಟ ನೆಟ್ಟರು. ಆ ಪುಸ್ತಕದೊಳಗೆ ಯಜ್ಞವಿತ್ತು. ಮಾರೀಚನಿದ್ದ, ಯಜ್ಞಕ್ಕೆ ನೆತ್ತರು ಸುರಿಯುತ್ತ ಆಗಸದಲ್ಲಿ. ಹಣತೆಯ ಬೆಳಕಲ್ಲಿ ಆತ ತುಂಬಾ ಭಯಾನಕನಂತೆ ಕಂಡ. ಅಜ್ಜೀ ಅಜ್ಜೀ..ಭಯವಾಗುತ್ತಿದೆ ಅಂದು ಮಕ್ಕಳು ಅಜ್ಜಿಯ ಮಡಿಲಲ್ಲಿ ಮುಖಮುಚ್ಚಿ ರಕ್ಷಣೆ ಪಡೆದರು.ರಾಮ ಬಾಣ ಹೂಡಿ, ಮಾರೀಚ ಯೋಜನ ದೂರ ಸಮುದ್ರಕ್ಕೆ ಬಿದ್ದ. ಹಣತೆಯ ಬೆಳಕೂ ಶಾಂತವಾಯಿತು. ಜನಕನ ರಾಜ ಭವನ ಬೆಳಗಿತು ಪುಟ್ಟ ಹಣತೆ. ಸೀತೆ ಬೆಳಗಿದಳು ಎಷ್ಟು ಚಂದ, ರಾಮ ಸ್ವಯಂವರದೀಪದ ಬೆಳಕಲ್ಲಿ. ಕತೆ ಕೇಳುತ್ತಾ ಹುಡುಗಿಯರು ಸೀತೆಯಂತೇ ಕಂಡರು. ರಾಗರತಿಯ ಮತ್ತೇರಿದ ದೀಪ ಜ್ವಾಲೆ ನಡು ಬಳುಕಿಸಿ ನಲಿಯಿತು. ಪರಶುರಾಮನ ಕೋಪಾಗ್ನಿಗೆ, ಪುಸ್ತಕದ ಅಕ್ಷರಗಳು ಅಜ್ಜಿಯ ವರ್ಣನೆಗೆ ಕೆಂಪಡರಿದ್ದವು. ಸಮಚಿತ್ತ ವಿನಯದ ತಂಪಿಗೆ ಬೆಳಕು ನಂದಲಿಲ್ಲ. ರಾಮ! ರಾಮ! ಮಂಥರೆ ಮೇಲೆ ದೀಪದ ಬೆಳಕು ಹೊಗೆ ಸುತ್ತಿ ಪುಸ್ತಕದೊಳಗೆಲ್ಲ ನೆರಳು ಹೊಗೆಯಾಡಿತು ರಾಮ ಕಾಡಿಗೆ ಹೊರಟ. ಅಜ್ಜಿ ದೀಪದ ಬತ್ತಿ ಸರಿಪಡಿಸಿದರು. ಬೆಳಕು ಸ್ಪಷ್ಟವಾದಾಗ ಕೈಕೇಯಿ ಮನಸ್ಸು ಹೊಗೆ ಮುಕ್ತ. ದಶರಥನ ಜೀವ ಅಕ್ಷರಗಳಿಂದ ಮುಕ್ತವಾದಾಗ ಅಜ್ಜಿ ದೀಪದ ಉಸಿರು ಆರಿಸಿದರು. ಮಲಗಿ ಮಕ್ಕಳೇ!. ಮುಂದಿನ ಕತೆ ನಾಳೆಗೆ. ಅಜ್ಜಿ ಪುನಃ ಹಚ್ಚಿದರು ಹಣತೆ. ಸುತ್ತಲೂ ಅಂಧಕಾರ. ಪುಸ್ತಕದೊಳಗೆ ದಂಡಕಾರಣ್ಯದ ಚಿತ್ರ. ಅಜ್ಜಿ ಓದುತ್ತಿದ್ದಂತೇ ದೀಪದ ಬೆಳಕಲ್ಲಿ ಋಷಿ ಮುನಿಗಳ ಆಶ್ರಮ, ತಪಸ್ಸು, ಅಕ್ಷರಗಳಾದವು. ಕುಣಿಯುತ್ತ ಬಂತು ಚಿನ್ನದ ಜಿಂಕೆ. ಚಂಚಲವಾಯಿತು ಹಣತೆ. ರಾಮನ ಕಳಿಸಿದಳು ಸೀತೆ, ಜಿಂಕೆಯ ಬಣ್ಣದ ಹಿಂದೆ. ‘ಹಾ ಸೀತೇ..ಹಾ ಲಕ್ಷ್ಮಣಾ’.. ಮರಣಾಕ್ರಂದನ, ಬೆಳಕು ಮುಗ್ಧವಾಗಿತ್ತು ಸೀತೆ ಲಕ್ಷ್ಮಣರೇಖೆ ದಾಟಿದ್ದಳು ಸೀತಾಪಹರಣ ಮಾಡಿದ ರಾವಣನ ಮೇಲೆ ಬೆಳಕಿನ ನೆರಳು ಕರ್ರಗೆ ಚೆಲ್ಲಿತ್ತು. ಅಜ್ಹಿಯ ಕಣ್ಣು ತೇವವಾಗಿ ಅಕ್ಷರಗಳು ಮಂದವಾದವು. ಕಿಷ್ಕಿಂಧೆಯಲ್ಲಿ ವಾಲಿ ಸುಗ್ರೀವ ನಡುವೆ ಎಷ್ಟೊಂದು ಪ್ರೀತಿಯಿತ್ತು. ಕಿಟಿಕಿಯಿಂದ ಗಾಳಿ ಬೀಸಿ, ಹಣತೆ ಬೆಳಕು ತುಯ್ದಾಡಿತು. ವಾಲಿಯ ಮನಸ್ಸಿನ ಮೇಲೆ ಶಂಕೆಯ ನೆರಳು ಬಿತ್ತು.ಸಹೋದರದ ಪದಸಂಧಿ ವಿಂಗಡಿಸಿತು. ಹನುಮನ ಮೇಲೆ ಬೆಳಕು ಚೆಲ್ಲಿತು ಹಣತೆ. ಸೀತಮ್ಮನ ಹುಡುಕುತ್ತ ಸಾಗರ ಹಾರಿದ ಕತೆ ಕೇಳುತ್ತಾ ನಾನೂ ನನ್ನ ಹಿಂಭಾಗ ಸವರಿದೆ! ಬಾಲ ಸಿಗಲಿಲ್ಲ. ಅಜ್ಜಿ ಅಂದರು..ದೀಪಕ್ಕೆ ಎಣ್ಣೆ ತುಂಬಲು, ಬತ್ತಿ ನೇರ ಮಾಡಲು. ಬೆಳಕ ಏಕಾಗ್ರ ಚಿತ್ತ. ಸಂಕ ಕಟ್ಟುವತ್ತ ಕೋಟಿ ಮರ್ಕಟ ಮನಸ್ಸು ಏಕಾಗ್ರ, ರಾಮ! ರಾಮ!. ರಾಮ ರಾವಣ ಪದಗಳು ಸಮಸಮ ಹೊಳೆಯುತ್ತಿದ್ದವು. ಎರಡೂ ಪಾತ್ರಗಳು ಹಣತೆಯ ಬೆಳಕ ಹೀರಿ ಬೆಳೆಯುತ್ತಿದ್ದವು. ಅಸ್ತ್ರ ಶಸ್ತ್ರ ಶಾಸ್ತ್ರಗಳು ಪುಸ್ತಕದೊಳಗೆ ಸಾಲುಗಳು ದೀಪ ದೀಪ್ತಿಯಲ್ಲಿ ಬೆಳಗಿದವು. ರಾಮ ತೆರೆದ ತನ್ನ ಆದಿತ್ಯ ಹೃದಯ.ಒಳಗೆ ತುಂಬಾ ಬೆಳಕು ತುಂಬಲು. ರಾವಣನ ಹೃದಯ ಉಕ್ಕಿನ ಕವಚ. ಒಳಗೆ ಬೆಳಕು ತಲಪಲಿಲ್ಲ. ರಾವಣನ ಕತೆ ಮುಗಿಯಿತು. ರಾಮ ಲಕ್ಷ್ಮಣ ಸೀತೆ ಪುಷ್ಪಕ ವಿಮಾನವೇರಿ ಅಯೋಧ್ಯೆಗೆ ಬಂದಾಗ, ಅಜ್ಜಿಯ ರಾಮಾಯಣ ಪುಸ್ತಕದೊಳಗೆ ಸಾಲು ಸಾಲು ಹಣತೆ ಬೆಳಗಿ ಪುಟ್ಟ, ಮಕ್ಕಳ ಕಣ್ಣೊಳಗೆ ದೀಪಾವಳಿ!. ದೀಪ ಮತ್ತು ಬೆಳಕನ್ನು ಸೃಜನಶೀಲ ಮನಸ್ಸು ಹಲವು ಪ್ರತಿಮೆಗಳಾಗಿ ಕಾಣುತ್ತವೆ. ಬೆಳಕು ಮನಸ್ಸನ್ನು ಬೆಳಗುವಾಗ ಅದರ ಆಯಾಮಗಳು ನೂರಾರು. ಮನಸ್ಸಿನ ಕ್ಯಾನುವಾಸ್ ನಲ್ಲಿ ಚಿತ್ರಗಳು ಮೂಡಲು ಬೆಳಕು ಸಾಧನ ತಾನೇ. ನಾಟಕದ ಪಾತ್ರಗಳ ಭಾವಾಭಿವ್ಯಕ್ತಿಯೂ ಬೆಳಕಿನ ಬಣ್ಣಗಳನ್ನು ಸಂಯೋಜಿಸಿ ಅದಕ್ಕೆ ಹೊಸ ರೂಪ ಕೊಡುವುದೂ ಒಂದು ಕಲೆಯೇ. ಹಾಗಾಗಿ, ವಸ್ತುವನ್ನು ನಾವು ನೋಡುವ ಬಗೆಯಲ್ಲಿ ಬೆಳಕಿನ ಪಾತ್ರ ಅತ್ಯಂತ ಪ್ರಮುಖವಾದದ್ದೂ ಹೌದು,ಸಾಪೇಕ್ಷವಾದದ್ದೂ ಹೌದು. ಹಾಗೆ ಅಚಾನಕ್ಕಾಗಿ ಫ್ಲಾಷ್ ಆಗುವ ಬೆಳಕಲ್ಲಿ ರೂಪ ಹೇಗಿರಬಹುದು?. ಬೇಂದ್ರೆಯವರ “ಸ್ವರೂಪ ದೀಪ” ಕವಿತೆಯ ಸಾಲುಗಳು ಹಣತೆಯ ಬೆಳಕಲ್ಲಿ ಹೀಗೆ ಹೊಳೆಯುತ್ತವೆ. “ಬೆಳಕೀಗೆ ಕತ್ತಲೆ ಕೊಟ್ಟಾಗ ಮುದ್ದು ಮೂಡ್ಯಾನೋ ಚಂದಿರ ಹಗಲು ಹೋಯಿತು ಜಾರಿ ಬಟಾ ಬಯಲೆಲ್ಲಾ ಚುಕ್ಕಿಯ ಮಂದಿರ ಚಕಮಕ್ಕಿ ಹಾರೀ ಕಂಡಿತೋ ಮಾರಿ ಎಂದಿನದೀ ನೋಟ ಮೈಯೊಳಗ ಮೈಯೋ ಕೈಯೊಳಗ ಕೈಯೋ ಕರುಳಾಟ ಮರುಳಾಟ” ರಾತ್ರೆಯ ಕತ್ತಲಲ್ಲಿ ಆಗಸದ ಚಿತ್ತಾರದ ಅಡಿಯಲ್ಲಿ, ಚಕಮಕ್ಕೀ ಹಾರಿದಾಗ ನೋಟದೊಳಗೆ ಮೂಡುವ ಚಿತ್ರಕ್ಕೆ ಪ್ರಾಪ್ತವಾಗುವ ಸ್ವರೂಪ ದೀಪದ ಮೇಲೆ ಅವಲಂಬಿತ,ಅಲ್ಲವೇ. ಒಲವು, ಜ್ಞಾನ ಎಲ್ಲವೂ ಬೆಳಕೇ. ದೀಪ ಹಚ್ಚುವುದೆಂದರೆ ಪ್ರಕಾಶಿಸುವುದೆಂದರೆ ಅದರಲ್ಲಿ ಋಣಾತ್ಮಕ ಅಂಶಗಳಿಗೆ ಎಡೆಯೇ ಇಲ್ಲ. “ನೀ ಬಂದು ನಿಂದಿಲ್ಲಿ ದೀಪ ಹಚ್ಚಾ..” ಎಸ್ ವಿ ಪರಮೇಶ್ವರ ಭಟ್ಟ ಅವರು ಬರೆದ ಕವನದ ಪ್ರತೀ ಸಾಲುಗಳು ಸಾಲುದೀಪಾಕ್ಷರಗಳು. “ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ ದೇಹದ ಗೂಡಲಿ ನಿನ್ನೊಲವು ಮೂಡಲಿ ಜಗವೆಲ್ಲ ನೋಡಲಿ ದೀಪ ಹಚ್ಚಾ ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ ನನ್ನ ಮನದಂಗಳದಿ ದೀಪ ಹಚ್ಚಾ ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ ಪ್ರೀತಿಯ ರತಿಗೆ ನೀ ಬೆಳಕಿನ ಆರತಿ ಬೆಳಗಿ ಕಲ್ಲಾರತಿ ದೀಪ ಹಚ್ಚಾ ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ ಸುಜ್ಞಾನಪ್ರದೀಪ ದೀಪ ಹಚ್ಚಾ ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ ತೇಜೋರೂಪನೆ ದೀಪ ಹಚ್ಚಾ ವಿಶ್ವಮೋಹಿತಚರಣ ವಿವಿಧವಿಶ್ವಾಭರಣ ಆನಂದದ ಕಿರಣ ದೀಪ ಹಚ್ಚಾ” ಪ್ರೀತಿ, ಒಲವು, ಆತ್ಮಜ್ಯೋತಿ, ಮನಸ್ಸೊಳಗಿನ ಭಾವ, ಬದುಕು, ಜ್ಞಾನ, ಆನಂದ, ಇವೆಲ್ಲ ಕವಿಗೆ ದೀಪದ ಬೆಳಕಾಗಿ ಹಬ್ಬವಾಗುತ್ತೆ. ಅಕ್ಷರಗಳು ಜ್ಞಾನದ,ಕಲೆಯ, ಚಿಂತನೆಯ, ಸೃಜನಾತ್ಮಕ ಪ್ರಕ್ರಿಯೆಯ ಜೀವಕೋಶಗಳು ತಾನೇ. ಹಾಗಾದರೆ ಭಾಷೆ?. – ಡಿ. ಎಸ್. ಕರ್ಕಿ ಅವರ ಈ ಪದ್ಯದಲ್ಲಿ ಕನ್ನಡವೂ ದೀಪವೇ. “ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ” ಭಾಷೆಯೂ ದೀಪ, ಅದರ ಸಿರಿವಂತಿಕೆಯೂ ದೀಪ ಅದರೊಳಗೆ, ಅದರ ಮೂಲಕ ಮತ್ತು ಅದರತ್ತ ಇರುವ ಒಲವೂ ದೀಪವೇ. ಉರಿಸಿದಾಗ ಕರ್ಪೂರದಂತೆ ಭಾಷೆಯ ಕಂಪೂ ಹರಡುತ್ತದೆ,ಅಲ್ಲವೇ. ನರನರವನೆಲ್ಲ ಹುರಿಗೊಳಿಸಿ ಭಾಷೆಯ ಮುಲಕ ಹೊಸತನ ತುಂಬುವುದು ದೀಪೋಜ್ವಲನವೇ. “ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ” ಎಂಬ ಸಾಲುಗಳು ಅಸ್ಮಿತೆಯ ದೀಪ ಹಚ್ಚುತ್ತೆ. ಬೇಂದ್ರೆಯವರ “ಚೈತನ್ಯದ ಪೂಜೆ” ಎಂಬ ಕವನದಲ್ಲಿ ದೀಪದೊಳಗಿನ ವಿಶ್ವಾತ್ಮ ಚೈತನ್ಯದ ಜ್ಯೋತಿಯಿದೆ. “ಚೈತನ್ಯದ ಪೂಜೆ ನಡೆದSದ ನೋಡS ತಂಗಿ।। ಅಭಂಗದ ಭಂಗೀS ।। ಪ ।। ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ.” ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲ ಅವನದೇ ರೂಪ ಎನ್ನುತ್ತಾ, ಬೇಂದ್ರೆಯವರು ಚೈತನ್ಯದ ಆರಾಧನೆಯ ಮಾರ್ಗ ಕ್ಕೆ ಬೆಳಕು ಚೆಲ್ಲುತ್ತಾರೆ. ಕೆ.ಎಸ್ ನರಸಿಂಹ ಸ್ವಾಮಿಯವರು ಬರೆದ “ದೀಪವು ನಿನ್ನದೆ,ಗಾಳಿಯೂ ನಿನ್ನದೆ,ಆರದಿರಲಿ ಬೆಳಕು ” ಎನ್ನುವ ಸಾಲುಗಳು, ದೀಪವನ್ನು ಏಳು ಬೀಳುಗಳನ್ನು ಅನುಭವಿಸುತ್ತಾ ಸಾಗುವ ಬದುಕಿಗೆ ಪ್ರತಿಮೆಯಾಗಿಸುತ್ತಾರೆ. ಅವರ ದೀಪಾವಳಿ ಕವನವೂ ಹಾಗೆಯೇ ದೀಪವನ್ನು ಹಲವು ರೂಪಕವಾಗಿ ಬೆಳಗಿಸುತ್ತೆ. ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಅನ್ನುತ್ತಾ ಅವರು ದೀಪಕ್ಕೆ ಹೊಸ ವ್ಯಾಖ್ಯಾನ ಕೊಡುವ “ಬಲ್ಮೆ ತೋಳಿಗೆ ದೀಪ” ಎಂಬ ಸಾಲು ಬರೆಯುತ್ತಾರೆ. ಅವರ ಈ ಸಾಲುಗಳನ್ನು ಗಮನಿಸಿ!. “ಸಹನೆ ಅನುಭವ – ದೀಪ ಬದುಕಿನಲ್ಲಿ ಕರುಣೆ ನಂದಾದೀಪ ಲೋಕದಲ್ಲಿ” ಅಕ್ಷರಗಳನ್ನು ದೀಪವಾಗಿ ಕಾಣುತ್ತಾ ಅವರು ಬರೆಯುತ್ತಾರೆ.. “ಕತ್ತಲೆಯ ಪುಟಗಳಲಿ ಬೆಳಕಿನಕ್ಷರಗಳಲಿ, ದೀಪಗಳ ಸಂದೇಶ ಥಳಥಳಿಸಲಿ !” ದೀಪದ ಬಗ್ಗೆ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ಬರೆದ ಕವನ ಅನನ್ಯ ಭಾವದ ಒಲುಮೆಯ ದೀಪವೇ. “ಮಾನವನೆದೆಯಲಿ ಆರದೆ ಉರಿಯಲಿ. ದೇವರು ಹಚ್ಚಿದ ದೀಪ ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ” ಹಮ್ಮು ಬಿಮ್ಮುಗಳ ಮರುಳುಗಾಡಿನಲಿ ಎಲ್ಲೋ ಥಣ್ಣನೆ ಚಿಲುಮೆ ತಾಪವ ಹರಿಸಿ ಕಾಪಾಡುವುದು ಒಳಗೇ ಸಣ್ಣಗೆ ಒಲುಮೆ.” ಇವುಗಳಿಗೆಲ್ಲ ಭಿನ್ನವಾಗಿ ಶಿವರುದ್ರಪ್ಪನವರು ಬರೆದ ಕವನ “ನನ್ನ ಹಣತೆ” “ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ ನಾನೂ; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ.” ಹಣತೆಯ ಬೆಳಕಲ್ಲಿ, ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಆಸೆಯಿಂದ, ಹಣತೆ ಹಚ್ಚುವ ಕವಿ, ಜೀವಪ್ರೇಮವನ್ನೂ ಜೀವನಪ್ರೇಮವನ್ನೂ, ವಾಸ್ತವಾನುಭವದ ಸತ್ಯವನ್ನು ಮಾತ್ರ ಅವಲಂಬಿಸುತ್ತಾರೆ. ಅಕ್ಷರಗಳ ಮೂಲಕ ಅನುಭೂತಿ ಹುಡುಕುವ, ನಮ್ಮ ಈ ಪ್ರಯತ್ನದಲ್ಲಿ, ಅಕ್ಷರಮಾಲೆ, ದೀಪದ ಸಾಲುಗಳು. ಈ ಅಕ್ಷರ ದೀಪಾವಳಿಯ ಶುಭಾಶಯಗಳು, ನಿಮಗೆಲ್ಲರಿಗೂ. ****************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಅಂಕಣ ಬರಹ ಕಬ್ಬಿಗರ ಅಬ್ಬಿ ನಿಮಗೆ ತಿಳಿಸಾರು ಗೊತ್ತೇ? ಅದೊಂದು ಕೋಣೆ, ರಸಾವಿಷ್ಕಾರದ ಕೋಣೆ ಅದು!. ಅದನ್ನು ಜನರು ಈ ಕೋಣೆಯನ್ನು ಮನೆ ಅಂತಲೇ ಕರೆಯೋದಕ್ಕೆ, ಬಹುಷಃ ಈ ಕೋಣೆಯ ತಾಯ್ತನವೇ ಕಾರಣ ಅನ್ಸುತ್ತೆ. ಮಗುವಿಗೆ ಅಮ್ಮ ಊಡುವ ಎದೆ ಹಾಲಿನ ಹಾಗೆಯೇ, ಈ ಕೋಣೆ ಮನೆ ಮಂದಿಗೆಲ್ಲ ಉಣಿಸುವುದು ಬದುಕು. ‘ಅಡುಗೆ ಮನೆ’ ಯಲ್ಲಿ ಜೀವಜಲ ಬಿಂದುವಾಗಿ ಹರಿಯುತ್ತೆ. ಹಸಿರು ತರಕಾರಿಗಳು ನೆಲಹಾಸಿನಲ್ಲಿ ತಣ್ಣಗೆ ಕಾಯುತ್ತವೆ. ನೆಲದೊಳಗೆ ಬೇರಿಳಿಸಿ ಪಿಷ್ಟಅಹಾರ ಸಂಗ್ರಹಿಸಿ ಬಲಿತ ಗಡ್ಡೆಗಳೂ ಜತೆಗೆ. ಅಡುಗೆ ಮನೆಯ ಉಗ್ರಾಣಗಳಲ್ಲಿ, ಮನುಷ್ಯ ತಿನ್ನಲೇ ಹುಟ್ಟಿದ್ದೋ ಎಂಬಂತಹಾ ಧಾನ್ಯಗಳು. ಅವುಗಳಲ್ಲಿ ಕೆಲವಕ್ಕೆ ಕಪ್ಪು ಬಣ್ಣ, ಕೆಲವಕ್ಕೆ ಬಿಳಿ. ನಡು ನಡುವಿನ ಗೋಧಿ ಬಣ್ಣದವುಗಳೂ ಪುಡಿಯಾಗಲು ಕಾಯುತ್ತವೆ. ಕಡಲು ಅತ್ತೂ ಅತ್ತೂ ಉಪ್ಪಾದ ನೀರನ್ನು ಸೋಸಿ ಆವಿಯಾಗಿಸಿದಾಗ ಉಳಿದ ಉಪ್ಪುಪ್ಪಾದ ಭಾವ ಪಿಂಗಾಣಿ ಪಾತ್ರೆಯಲ್ಲಿದೆ. ( ಉಳಿದ ಪಾತ್ರೆಯಲ್ಲಿ ಉಪ್ಪು ತುಂಬಿದರೆ, ಅದು ಪಾತ್ರೆಯನ್ನು ತನ್ನ ಸ್ವ-ಭಾವ ದಿಂದ ಪುಡಿಗಟ್ಟುತ್ತೆ). ಬಲಿತ ಕಬ್ಬನ್ನು ಚರ ಚರಾ ಅಂತ ಗಾಣದ ತಿರುಗಾಲಿಗಳ ನಡುವೆ ಕ್ರಷ್ ಮಾಡಿ ನಮಗೆ ಸಿಹಿ ಅನ್ನಿಸುವ ರಸವಾಗಿಸಿ ಮಂದಗಟ್ಟಿಸಿ, ನಮಗಿಷ್ಟವಾದ ಆಕಾರದಲ್ಲಿ ( ಷಟ್ಕೋನವೋ, ದುಂಡಾಕಾರವೋ) ಅದನ್ನು ಅಚ್ಚಾಗಿಸಿದ ಬೆಲ್ಲ ಡಬ್ಬಿಯೊಳಗೆ ಅತಿಥಿಗಳ ಬಾಯಿ ಸಿಹಿ ಮಾಡಲು ಬಂದಿಯಾಗಿವೆ. ಮತ್ತೆ, ಜಿಹ್ವೆಯ ಜೀವೋತ್ಪತ್ತಿಗೆ ಅಗತ್ಯವಾದ ರಾಸ ರಸದ ಖಾರ, ದಿನ ದಿನವೂ ಬದುಕಲು ರುಚಿ ಹೆಚ್ಚಿಸುವ ಹುಣಿಸೇ ಹುಳಿ, ಪಾಕಕ್ಕೆ ಮುತ್ತಿಡುವ ಒಗ್ಗರಣೆಗೆ ಅಗತ್ಯದ ಸಾಸಿವೆ, ಹೀಗೇ ಹಲವು ಚೀಜ್ ಗಳು ಈ ಮನೆಯನ್ನು ಗ್ಲಾಮರಸ್ ಮಾಡಿವೆ. ಮರೆತೆನಲ್ಲ! ಅಲ್ಲಿ ಒಲೆಯಿದೆ. ಒಲೆಯಲ್ಲಿ ಬೆಂಕಿ, ಬೇಯಿಸುವುದಕ್ಕೆ. ನನ್ನಮ್ಮ ಒಲೆಯ ಪಕ್ಕದಲ್ಲಿ ಸ್ಥಾಪನೆಯಾಗಿ ಬದುಕಿಡೀ, ಆ ಒಲೆಯ ಕಿಚ್ಚಲ್ಲಿ ಆಹಾರವನ್ನು ಬೇಯಿಸುತ್ತಾ ಪಕ್ವವಾದವಳು. ಅನ್ನ ಬೆಂದಿದೆಯೇ ಎಂದು ಒಂದೇ ಅಗುಳನ್ನು ಒತ್ತಿ ಹೇಳಬಲ್ಲ ತಾಕತ್ತು, ಈ ಪಾಕತ್ತಿನಿಂದಲೇ ಬಂದದ್ದು. ಒಲೆಯ ಮೇಲಿನ ಅಟ್ಟದಲ್ಲಿ, ಶತಮಾನಗಳ ಹೊಗೆ ತಾಗಿದಂತಹ ಮಸಿಹಿಡಿದ ಸಾಲು ಭರಣಿಗಳು. ಅವುಗಳೊಳಗೆ ಶೇಖರಿಸಿ ಇಟ್ಟ ಬಗೆಬಗೆಯ ಉಪ್ಪಿನಕಾಯಿಗಳು. ಮಾವಿನ ಮಿಡಿ ಯೌವನದ ಗೊರಟು ಕಟ್ಟುವ ಮೊದಲೇ ಕೊಯಿದು, ಉಪ್ಪಲ್ಲಿ ಕಾದಿರಿಸಿ ಮುರುಟಿದಾಗ ಅದಕ್ಕೆ ಮೆಣಸಿನ ಪಾಕ ಸೇರಿಸಿ ಶೇಖರಣೆ ಮಾಡುವುದು. ಉಪ್ಪಿನ ಕಾಯಿ ಹಾಕುವಾಗಲೂ ಯೋಚನೆಗಳನ್ನು ಹದಬರಿಸುವಾಗಲೂ, ಮೈಮನಸ್ಸು ಕೊಳೆಯಾಗಬಾರದು. ಉಪ್ಪಿನಕಾಯಿ ಕೊಳೆತು ಹಾಳಾಗಬಾರದಲ್ಲಾ. ಅಡುಗೆ ಮನೆ ಅಮ್ಮನವರ ಗುಡಿ. ಅದರ ನೆಲವೇ ಸ್ತ್ರೀ ಪಾದ ಸ್ಪರ್ಶದ ನೆಲೆ. ಅಲ್ಲಿ ತೊಳೆದ ಅಕ್ಕಿಯ ನೀರಿಗೆ ತಿಳಿ ತಿಳಿಯಾದ ತಿಳಿವಿದೆ. ತುಂಬಿದ ಪಾತ್ರೆಯೊಳಗೆ ಸೌಟು ತಿರುಗಿಸುವಾಗ, ರಸ ಸ್ವರಕ್ಕೆ ಪ್ರಕೃತಿಸಹಜ ಸ್ವರೂಪವಿದೆ . ಒಳಗೆ ಜೋಡಿಸಿಟ್ಟ ಪಾತ್ರೆಗಳ ಸಾಲುಗಳಲ್ಲಿ ಒಳಸೌಂದರ್ಯವಿದೆ. ಒಂದೇ ಅಗುಳನ್ನು ಒತ್ತಿ ಅನ್ನ ಬೆಂದಿದೆಯೇ ಎನುವಷ್ಟು ಅನುಭೂತಿ ಇದೆ. ಅಂತಹ ಜೀವಕಟ್ಟುವ ಕಾಯಕದ ನಡುವೆ ಕವನ ಹುಟ್ಟದೇ?. ವೈದೇಹಿ ಅವರ ಈ ಕವನ ನೋಡೋಣ. ** ** *** ತಿಳಿದವರೇ… ಹೇಳಿ ಕಾವ್ಯದ ಬಗ್ಗೆ ತಿಳಿದವರೇ ಹೇಳಿ. ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು. ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕ್ಕೂ ಬೇಕು ಒಳಗೊಂದು ಜಲತತ್ವ – ಗಂಧತತ್ವ – ಕುದಿದು ಹದಗೊಂಡ ಸಾರತತ್ವ… ಹೀಗೆ – ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ ನಂಗದೆಯೂ ನಂಗದಂತಿದ್ದ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ. ಕಾದರೇನು? ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ ಬಡಿಸುವ ಝಣ್ ಝಣ್ ನಡಿಗೆಯವರ ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು ಬೆಳಗಿಂದ ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ ಕುದಿಕುದಿದು ಬತ್ತಿ ರಾತ್ರಿಯಾದರೂ ಹಳಸದೆ ಕಾವ್ಯದ ಬಗ್ಗೆ ದೊಡ್ಡಕ್ಕೆ ತಿಳಿದವರೇ ಹೇಳಿ. ಗೊತ್ತೇ ತಿಳಿಸಾರು ನಿಮಗೆ? ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ †* *** *** ‘ತಿಳಿದವರೇ …ಹೇಳಿ’ ಎನ್ನುವ ಈ ಶೀರ್ಷಿಕೆ ಒಂದು ವಿಜ್ಞಾಪನೆ ಮಾತ್ರವೇ?. ಅಥವಾ ಅದು, ಜ್ಞಾನಾಕಾಂಕ್ಷೀ ವಿದ್ಯಾರ್ಥಿಯ ಹಂಬಲವೇ?.ಅಥವಾ, ತಿಳಿದವರಿಗೆ ಹಾಕಿದ ಸವಾಲೇ?. “ಕಾವ್ಯದ ಬಗ್ಗೆ ತಿಳಿದವರೇ ಹೇಳಿ. ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು.” ಕಾವ್ಯ ಎನ್ನುವುದು ಕ್ಲಿಷ್ಟ ಅಭಿವ್ಯಕ್ತಿ. ಅದಕ್ಕೆ ಅದರದ್ದೇ ಆದ ವಿನ್ಯಾಸ, ಅರ್ಥದಿಗಂತ ಎಲ್ಲವೂ ಇದೆ. ಕಾವ್ಯದ ತಿಳಿವು ಅಂದರೆ ಏನು? . ಕಾವ್ಯ ಎಂದರೆ ಮಿದುಳು ಪೆಟ್ಟಿಗೆಯೊಳಗೆ ಬೀಗ ಹಾಕಿಡುವ ವಸ್ತುವೇ?. ತನಗೆ ಕಾವ್ಯ ತಿಳಿದಿದೆ ಎನ್ನುವಾಗ, ಕಾವ್ಯದ ವ್ಯಾಪ್ತಿಯನ್ನು ಘಮಂಡು ಸೀಮಿತಗೊಳಿಸದೇ?. ‘ಕಾವ್ಯ ತಿಳಿದವರೇ ಹೇಳಿ’ ಎನ್ನುವಾಗ ಅಕ್ಷರ ಪದರದ ಕೆಳಗೆ ವಿಡಂಬನೆಯ ಧ್ವನಿ ಕೇಳಿಸುತ್ತೆ. ‘ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು ‘ ಅಂತ ವೈದೇಹಿ ಅವರ ಉಸಿರು, ಉಸುರುತ್ತಿದೆ. ಅಡುಗೆ ಮನೆಯಲ್ಲಿ ತಿಳಿಸಾರು ತಯಾರು ಮಾಡುವ ಸ್ತ್ರೀ ಸಂವೇದನೆಯ ದನಿಯದು. ಅದಷ್ಟೇ ಅಲ್ಲ. ತಿಳಿಸಾರು, ಪ್ರಯೋಗ ಸಿದ್ಧ ಜ್ಞಾನ. ಕಾವ್ಯ ಬೆಳೆದು ನಿಲ್ಲುವುದು ಕಲ್ಪನೆ ಮತ್ತು ಚಿಂತನೆಗಳ ಚಪ್ಪರವಾಗಿ. ಹಲವು ಬಾರಿ ಕಾವ್ಯದ ಅಭಿವ್ಯಕ್ತಿ, ಸಿದ್ಧಾಂತದ ಪ್ರತಿಪಾದನೆ ಅಥವಾ ನಿರಾಕರಣೆಯೂ ಆಗಿರುತ್ತೆ. ಪ್ರಯೋಗ ಸಿದ್ಧ ‘ತಿಳಿಸಾರು’ ವಿನ ಜ್ಞಾನಕ್ಕೂ ಕಾವ್ಯದ ಥಿಯರೆಟಿಕಲ್ ಹೈಪಾಥಿಸಿಸ್ ಗೂ ನಡುವೆ ಪ್ರಶ್ನೋತ್ತರದ ಪ್ರತೀಕ ಮೇಲಿನ ಸಾಲೇ?. ‘ತಿಳಿಸಾರು’ ಆಹಾರ. ಆಹಾರವಿದ್ದರೆ ಮನುಷ್ಯ ಜೀವಿಸಬಲ್ಲ. ಕಾವ್ಯ ಜ್ಞಾನದಿಂದ ಹಸಿವು ತಣಿದೀತೇ?. ದೇಹದ ಪೋಷಣೆ ಮತ್ತು ಅಸ್ತಿತ್ವ ಕವಿತೆಯಿಂದ ಸಾಧ್ಯವಿಲ್ಲ. ಅದಕ್ಕೆ ಆಹಾರ ಬೇಕು. ಹಾಗಿದ್ದರೆ, ಅಸ್ಥಿತ್ವಕ್ಕೆ ಅಗತ್ಯವಾದ ವಾಸ್ತವ ವಸ್ತುಗಳು ಜೀವನದ ಮೊದಲ ಆದ್ಯತೆ ಅನ್ನಬಹುದೇ?. ಇನ್ನೂ ಗಹನವಾಗಿ ಯೋಚಿಸಿದರೆ, ‘ತಿಳಿ ಸಾರು’ ವಿನ ‘ತಿಳಿ’ ಎಂದರೆ ಅರಿವು. ತಿಳಿ ಎಂದರೆ ಸ್ಪಷ್ಟತೆ, ಸ್ಫುಟತೆ ಮತ್ತು ಪಾರದರ್ಶಕತೆ. ಕ್ರಿಯಾಪದವಾದಾಗ, ಈ ಎಲ್ಲವನ್ನೂ ಪಡೆಯುವ ದೃಷ್ಟಿ ಮತ್ತು ಪ್ರಕ್ರಿಯೆ. ಸಾರು ಎಂದರೆ ಘೋಷಣೆ ಅಂತಲೂ ಪ್ರಸಾರ ಮಾಡು ಅಂತಲೂ, ವಿಸ್ತರಿಸು ( spread, ಅಂಗಳಕ್ಕೆ ಸೆಗಣಿ ಸಾರಿಸುವುದು) ಅಂತ ಬಹುಅರ್ಥಗಳಿವೆ. ತಿಳಿಸಾರು ಎಂದರೆ ಅರಿವನ್ನು ಪಸರಿಸು, ಸ್ಪಷ್ಟವಾಗಿ ಸ್ಪುಟವಾಗಿ ವಿಸ್ತರಿಸಿ ಕಾಣು ಅಂತ ಅನ್ವಯಿಸಬಹುದು. ಹಾಗಾದರೆ, ಕಾವ್ಯ ಎಂಬ ಕ್ಲಿಷ್ಟಕರ, ಪ್ರತಿಮಾತ್ಮಕ ಗೂಡುಕಟ್ಟುವ ಅಭಿವ್ಯಕ್ತಿ ಗೊತ್ತಿಲ್ಲ. ಸರಳ, ಪ್ರಾಯೋಗಿಕ, ಸ್ಪುಟ,ಪಾರದರ್ಶಕ ದೃಷ್ಟಿಯೂ, ಅದನ್ನು ಅನಿರ್ಬಂಧವಾಗಿ ಹರಡಿ ವಿಸ್ತರಿಸಿ ಹಂಚುವುದು ಗೊತ್ತು ಅನ್ನುವ ಅರ್ಥವೇ?. “ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕ್ಕೂ ಬೇಕು ಒಳಗೊಂದು ಜಲತತ್ವ – ಗಂಧತತ್ವ – ಕುದಿದು ಹದಗೊಂಡ ಸಾರತತ್ವ… ಹೀಗೆ -“ ‘ತಿಳಿಸಾರು’ ವಿಗೆ ಬೇಕು ಜಲತತ್ವ, ಗಂಧ ತತ್ವ ಮತ್ತು ಕುದಿದು ಹದಗೊಂಡ ಸಾರ ತತ್ವ.ಜಲತತ್ವ ,ಗಂಧತತ್ವ ಮತ್ತು ಸಾರತತ್ವ, ಇವು ಮೂರೂ ನೀರು, ಪರಿಮಳ, ಇತರ ವ್ಯಂಜನಗಳನ್ನು ಸರಿ ಮಾತ್ರೆಯಲ್ಲಿ ಬೆರೆಸಿ, ಕುದಿಸಿ ಸಾರವನ್ನು ಸಮತೋಲಿಸುವ ಹದಬರಿಸುವ ಕ್ರಿಯೆ ಎನ್ನುವುದು ಸಾಲುಗಳ ಹೊರತತ್ವ.! ಜಲತತ್ವ ದ ಜಲದ ಮೂಲ ಸ್ವರೂಪ, ಹರಿಯುವುದು. ಅಧಿಕ ಗುರುತ್ವಾಕರ್ಷಣೆಯ ಪೊಟೆನ್ಶಿಯಲ್ ( ಎತ್ತರ) ನಿಂದ ಕಡಿಮೆ ಪೊಟೆನ್ಶಿಯಲ್ ( ತಗ್ಗು) ನತ್ತ ಹರಿಯುತ್ತೆ. ಜ್ಞಾನವೂ ಹಾಗೆಯೇ, ಹೆಚ್ಚು ಅರಿವಿನ ಸ್ಥಾನದಿಂದ ( ಗುರು) ಕಡಿಮೆ ಅರಿವಿನ ‘ಖಾಲಿ’ ( ವಿದ್ಯಾರ್ಥಿ) ಯತ್ತ ಹರಿಯುತ್ತೆ. ಜಲದ ಇನ್ನೊಂದು ಸ್ವಭಾವ, ಅದಕ್ಕೆ ಸ್ಥಿರ ಆಕಾರ ಇಲ್ಲ. ಅದು ತುಂಬಿದ ಪಾತ್ರೆಯ ಆಕಾರ ಅದಕ್ಕೆ. ( ಹಾಗಂತ ಅದು ನಿರಾಕಾರ ಅಲ್ಲ). ಜಲವನ್ನು ನೀವು ಮಥಿಸಬಹುದು ಅನ್ನುವುದು ಇನ್ನೊಂದು ತತ್ವ. ಜಲವನ್ನು ನಿರಂತರ ಕುದಿಸಿದಾಗ ಅದು ಆವಿಯಾಗಿ ತನ್ನ ತನವನ್ನು ಕಳೆದುಕೊಳ್ಳುತ್ತೆ. ಹಾಗಾಗಿ ಅದನ್ನು ಅಗತ್ಯಕ್ಕಿಂತ ಹೆಚ್ಚು ಕುದಿಸಬಾರದು! ಯಾವುದೇ ಗ್ರಹದಲ್ಲಿ ಜೀವಿಗಳು ಇರಬಹುದೇ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಮೊದಲು ಹುಡುಕುವುದು, ಅಲ್ಲಿ ಜಲವಿದೆಯೇ ಅಂತ. ಹಾಗಾಗಿ ಜಲತತ್ವ ಎನ್ನುವುದು ಜೀವ ತತ್ವ, ಸೃಷ್ಟಿತತ್ವಕ್ಕೂ ಪ್ರತಿಮೆಯೇ. ‘ಗಂಧ ತತ್ವ’ ದ ಗಂಧ ಎಂದರೆ ಪರಿಮಳ. ಪರಿಮಳ ಆಕರ್ಷಣೆಯೂ. ಗಂಧ ಎಂದರೆ ವಾಸನೆ, ಸ್ವಭಾವ. ಕರ್ಮಸಿದ್ಧಾಂತದ ಪ್ರಕಾರ, ವಾಸನೆಯ ಮೂಲದಲ್ಲಿ ಸಂಗ್ರಹಿತವಾದ ಕರ್ಮ, ಇಂದ್ರಿಯಗಳನ್ನು ಪೋಲರೈಸ್ ಮಾಡುವುದರಲ್ಲಿದೆ. ಗಂಧ ಎನ್ನುವುದು ಅನುವಂಶಿಕವೂ ( ಜೆನೆಟಿಕ್) ಆಗಬಗಹುದು. ಗಂಧ ಎನ್ನುವುದು ಗಂಧದ ಕೊರಡು ಅಂತ ತಗೊಂಡರೆ, ಕೊರಡನ್ನು ತಳೆದಷ್ಟೂ ಇನ್ನೂ ಪರಿಮಳ, ಸೂಸುವ ತತ್ವ ಅದು. ನಿರಂತರ ಪೀಡನೆಗೊಳಗಾದರೂ ಸಹಿಸಿ ಪರಿಮಳವನ್ನು ಹರಡುವ ತ್ಯಾಗ ಮತ್ತು ಸಮರ್ಪಣೆಯ ತತ್ವ. ‘ಕುದಿದು ಹದಗೊಂಡ ಸಾರತತ್ವ’ ಷಡ್ರಸಗಳನ್ನು ಅಗತ್ಯ ಮಾತ್ರೆಯಲ್ಲಿ ಬೆರೆಸಿದರೆ ‘ತಿಳಿಸಾರು’ ಆಗಲ್ಲ. ಅದನ್ನು ಕುದಿಸ ಬೇಕು. ಎಲ್ಲಾ ಸಾರಗಳೂ ಹದವಾಗಿ ಬೆರೆಯಬೇಕು. ಸಾರಗಳು ಇಂದ್ರಿಯಗ್ರಾಹ್ಯವಾಗುವಷ್ಟು ಪರಿಷ್ಕರಿಸಲ್ಪಡಬೇಕು. ಹದ ಎನ್ನುವುದು ಸಮತೋಲನ. ಚಲನಶೀಲ ಪ್ರಕ್ರಿಯೆಗಳು ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಸಮತೋಲನಕ್ಕೆ ( equilibrium) ಬರುತ್ತವೆ. ಆ ಸಮತೋಲನದಲ್ಲಿ ನೋಟಕ್ಕೆ,ಸ್ವಭಾವಕ್ಕೆ ಸ್ಥಿರತೆಯಿರುತ್ತೆ. ಚಂಚಲತೆಯಿಂದ ಸ್ಥಿರತೆಯತ್ತ ದಾರಿಯಲ್ಲಿ ಮಂಥನವಿದೆ. ಇಲ್ಲಿ ‘ತಿಳಿಸಾರು’ ಬದುಕಿಗೆ, ಕಾವ್ಯಕ್ಕೆ, ಕಲೆಗೆ, ಸೃಜನಶೀಲ, ಪ್ರಯೋಗಾತ್ಮಕ ಪ್ರಯತ್ನಕ್ಕೆ ಹೋಲಿಕೆಯಾದಂತೆ ಅನಿಸುತ್ತೆ. “ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ ನಂಗದೆಯೂ ನಂಗದಂತಿದ್ದ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ. ಕಾದರೇನು?” ಮೂಲೆಯಲ್ಲಿ ಸದಾ ಉರಿಯುತ್ತಿರುವ ಬೂದಿ ಮುಚ್ಚಿದ ಒಲೆಯ ಮೇಲೆ, ಈ ತಿಳಿ ಸಾರಿನ ಪಾತ್ರೆ. ಹೊರಗೆ ತಣ್ಣಗಿನ ಬಿಳಿ ಬಿಳಿ ಬೂದಿ. ಒಳಗೆ ಉರಿಯುವ ಕೆಂಡ. ಸಾರು ಕಾಯುತ್ತಿದೆ. ಅಂದರೆ ಬಿಸಿಯಾಗುತ್ತಿದೆ ಅಂತ ಒಂದು ಅರ್ಥವಾದರೆ, ಸಾರು ಏನನ್ನೋ ನಿರೀಕ್ಷೆ ಮಾಡುತ್ತಿದೆ ಅಂತ ಇನ್ನೊಂದು ಅರ್ಥ. ಈ ಪ್ರಕ್ರಿಯೆಯ ನಂತರ ಏನು? ಎನ್ನುವ ಪ್ರಶ್ನೆ ಕೇಳುವುದು, ಬಹುಷಃ, ಈ ಕಾಯುವಿಕೆ ಮತ್ತು ಕಾಯುವ ವ್ಯಕ್ತಿಯತ್ತ ಸಮಾಜಕ್ಕೆ ಅಸಡ್ಡೆಯಿದೆ ಅಂತಾನೇ?. “ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ ಬಡಿಸುವ ಝಣ್ ಝಣ್ ನಡಿಗೆಯವರ ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು ಬೆಳಗಿಂದ” ಸಮಾಜದ ದೈಹಿಕ ಜಗತ್ತು ಮಾಂಸದಡುಗೆ, ರುಚಿ, ಆಡಂಬರ,ಅಬ್ಬರ ಇತ್ಯಾದಿಗಳನ್ನು ಸವಿಯುತ್ತೆ. ಕಿಡಿ ಮಿಂಚು ವಗ್ಗರಣೆ ಎಂಬುದು ಅಪೂರ್ವ ಪರಿಕಲ್ಪನೆ. ಪುರುಷ ಪ್ರಧಾನ ಸಮಾಜದ ಮಧುಶಾಲೆಯಲ್ಲಿ, ಝಣ್ ಝಣ್ ನಡಿಗೆಯ ಮಧುಬಾಲೆ ಎಲ್ಲರಿಗೂ ಆಕರ್ಷಣೆ. ( ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ನೀಳ್ಗವಿತೆಯನ್ನು ಇಲ್ಲಿ ನೆನೆಯಬಹುದು). ಆ ಅಬ್ಬರದಲ್ಲಿ ನಮ್ಮ ಅಡುಗೆ ಮನೆಯಲ್ಲಿ ದಿನರಾತ್ರೆ ಕಾದು, ಬೆಂದ ತೆಳುದೇಹದ ( ಹೊಳಪು ದೀಪ್ತಿಯ) ಅಮ್ಮ ಮತ್ತು, ಆಕೆ ಕುದಿಸಿದ ತಿಳಿಸಾರು ಬೆಳಗಿನಿಂದ ಕಾಯುತ್ತಿದೆ. ಹಾಗೆಯೇ ಇತ್ತು ಬೆಳಗಿನಿಂದ ಎಂದರೆ, ಆರಂಭದಿಂದಲೂ ರುಚಿಕೆಡದ ಬದುಕು. ಇಲ್ಲಿ ತಿಳಿಸಾರು ಮತ್ತು ಮನೆಮಂದಿಗಳ ಬದುಕು ಕಟ್ಟುವ ಸ್ತ್ರೀಯರ ನಡುವೆ ಸಾಮ್ಯತೆ ಕಾಣಿಸುತ್ತೆ. “ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ ಕುದಿಕುದಿದು ಬತ್ತಿ ರಾತ್ರಿಯಾದರೂ ಹಳಸದೆ” ದಿನವಿಡೀ ಕುದಿ ಕುದಿದು ಬತ್ತಿದೆ ತಿಳಿಸಾರು, ನಂದದೆಯೂ ನಂದಿದಂತಿದ್ದ ಕೆಂಡದೊಲೆಯ ಮೇಲೆ, ಮತ್ತು ಅದರ ರುಚಿ ಉಳಿಸಿಕೊಂಡಿದೆ. ಅಡುಗೆಗುಡಿಯಮ್ಮನೂ ಬದುಕಿನುದ್ದಕ್ಕೂ ( ಬೆಳಗಿನಿಂದ ರಾತ್ರಿತನಕ) ಕುದಿ ಕುದಿದು ದೇಹ ಬತ್ತಿದರೂ ಸ್ತ್ರೀ ಸಹಜ ಸಕಲ ಗುಣಗಳನ್ನು ಉಳಿಸಿಕೊಂಡು ಸ್ವಲ್ಪವೂ ಹಳಸದೇ ( ಹೊಸತನವನ್ನು ಕಾಪಿಟ್ಟು), ಹೊರಗೆ ನಂದಿದಂತೆ ಕಂಡರೂ ಹೃದಯದೊಳಗೆ ಸದಾ ಬೆಳಗುವ ಮಮತೆಯ ನಂದಾದೀಪ ಬೆಳಗುತ್ತಾ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ. “ಕಾವ್ಯದ ಬಗ್ಗೆ ದೊಡ್ಡಕ್ಕೆ
ಅಂಕಣ ಬರಹ ಕಬ್ಬಿಗರ ಅಬ್ಬಿ ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!. ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ ದಣಿದು ಹೊರ ಜಾರುವ ಮಂದ ಬೆಳಕು. ಮನೆ ಕಟ್ಟಲು ಜಾಗ ಕಡಿಮೆ ಅಂತ ಸಾಲುಮನೆಗಳು ಗೋಡೆಗಳನ್ನು ಹಂಚಿಕೊಂಡಿವೆ. ಹ್ಞಾ! ಅಲ್ಲಿದೆ ನೋಡಿ, ವಾಂಖೇಡೆ ಸ್ಟೇಡಿಯಂ. ಈ ಅಂಗಣದಲ್ಲಿ ಐದಡಿಯ ಹುಡುಗ ಸಚಿನ್ ಸಿಕ್ಸರ್ ಹೊಡೆದಾಗ ಸಾವಿರ ಚಪ್ಪಾಳೆಗಳು ಅನುರಣಿಸಿತ್ತು. ಆತ ಸೊನ್ನೆಗೆ ಔಟಾದಾಗ ಜನ ಅವಹೇಳನದಿಂದ ಕಿರುಚಿದ್ದೂ ಇಲ್ಲಿಯೇ. ವಿಮಾನ ರೆಕ್ಕೆ ತಗ್ಗಿಸಿ ಎಡಕ್ಕೆ ವಾಲಿ, ಮೂತಿ ತಿರುಗಿಸುವಾಗ, ಕೆಳಗಿನ ರೆಡ್ ಲೈಟ್ ನ ರಸ್ತೆಗಳು, ಹತ್ತಿರವಾದಂತೆ ಕಂಡಿತು. ಇಲ್ಲಿ ಕೆಂಪು ದೀಪಗಳು ಮೊಟ್ಟೆಯಿಟ್ಟು, ಕಾಯದಕಾವು ಕೊಟ್ಟು, ಮರಿಯಾಗುವಾಗ ಬೆಳಕಿನ ಹೆಣ್ಣು-ಬಣ್ಣಕ್ಕೆ ಕಣ್ಣೀರು ಬೆರೆತು ರಾಡಿ ರಾಡಿಯಾಗಿ ಹರಡುತ್ತೆ. ಹರಡಿದ ವರ್ಣ ಕೊಲಾಜ್ ಆರ್ಟ್ ಅನ್ನೋವವರೂ ಇದ್ದಾರೆ. ಚಿತ್ರ ಚಲಿಸುತ್ತಾ ಚಲನಚಿತ್ರವಾಗಿ ಬಾಕ್ಸ್ ಆಫೀಸ್ ಹಿಟ್ ಕೂಡಾ ಆಗಿದೆ. ಆಗಸದ ಕಣ್ಣಿಗೆ, ಬುಸ್ ಬುಸ್ ಅಂತ ಬುಸುಗುಟ್ಟುತ್ತಾ ಓಡುವ ಉಗಿಬಂಡಿಗಳು ಸಹಸ್ರ ಪದಿಯಂತೆ ನಿಧಾನವಾಗಿ ತೆವಳುವಂತೆ ಕಂಡವು. ಇರುವೆ ಸಾಲಿನಂತೆ ರಸ್ತೆ ತುಂಬಾ ವಾಹನಗಳು. ಕರ್ರಗೆ ಹೊಗೆ ಕಾರ್ಖಾನೆಯ ಚಿಮಿಣಿಯಿಂದ, ರಜನೀಕಾಂತ್ ಸಿನೆಮಾದಲ್ಲಿ ಧೂಮದ ಉಂಗುರ ಬಿಟ್ಟ ಹಾಗೆ ಸುತ್ತಿ ಸುಳಿದು ವಿದ್ಯುತ್ ದೀಪಗಳ ನಡುವೆ ಕತ್ತಲನ್ನು ಕಪ್ಪಾಗಿಸಲು ಪ್ರಯತ್ನ ಮಾಡುತ್ತವೆ. ಸಹಸ್ರಾರು ವರ್ಷಗಳಿಂದ ದಡದಿಂದ ಬಿಡುಗಡೆಗೆ ಎಡೆಬಿಡದೆ ಅಲೆಯಾಗಿ ಅಪ್ಪಳಿಸಿ ಪ್ರಯತ್ನಿಸಿ ಉಪ್ಪುಪ್ಪಾದರೂ ಸೋಲೊಪ್ಪದ ಕಡಲಿನ ನೀರು, ಇಡೀ ಪೇಟೆಯ ಬೆಳಕನ್ನು ಪ್ರತಿಫಲಿಸಿ ತನ್ನೊಳಗೆ ಬಿಂಬವಾಗಿಸಿ ಬೆಚ್ಚಗಿದ್ದಂತೆ ಕಂಡಿತು. ಮುಂಬಯಿಯಲ್ಲಿ ಅತ್ಯಂತ ದೊಡ್ಡ ಸ್ಲಮ್ ಇದೆ ಅಂತಾರೆ. ಆದರೆ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಕುಳಿತ ಕಣ್ಣುಗಳಿಗೆ ಈ ಗುಡಿಸಲುಗಳು, ನಿರ್ಲಕ್ಷಿಸುವಷ್ಟು ಚಿಕ್ಕವು. ಷಹರದ ಅಂಡರ್ ಗ್ರೌಂಡ್ ಚಟುವಟಿಕೆಗಳು ಮನಸ್ಸಿನ ಒಳಪದರದ ವ್ಯಭಿಚಾರೀ ಭಾವದ ಹಾಗೆ, ವಿಮಾನದ ನೇರ ಕಣ್ಣಿಗೆ ಕಾಣಿಸಲ್ಲ. ಪ್ಲೀಸ್ ಟೈ ಯುವರ್ ಸೀಟ್ ಬೆಲ್ಟ್. ವಿಮಾನ ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಆಗಲಿದೆ ಅಂತ ಪೈಲಟ್ ಗೊಗ್ಗರು ಇಂಗ್ಲಿಷ್ ನಲ್ಲಿ ಕೊರೆದಾಗ ಪೇಟೆಯ ನೋಟದಿಂದ ಕಣ್ಣು ಒಳ ಸೆಳೆದು ವಿಮಾನದ ಚೌಕಟ್ಟಿನ ಒಳಗೆ ಸ್ಥಿರನಾದೆ. ಹೌದಲ್ಲಾ! ಇದೇ ಮುಂಬಯಿ ನಗರದ ಬಗ್ಗೆ ಜಿ.ಎಸ್.ಶಿವರುದ್ರಪ್ಪ ನವರು ಬರೆದ ಕವಿತೆ ನೆನಪಾಯಿತು. ಕೇಳುವಿರಾ.. ** ** ** ** ಮುಂಬೈ ಜಾತಕ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ: ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು. ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ: ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು. ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು ಸುಸ್ತಾಗಿ ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು. *** *** **** ಕವಿತೆಯ ಹೆಸರೇ ಮುಂಬೈಯ ಜಾತಕ. ಜಾತಕ ಎಂದರೆ ಹುಟ್ಟು, ಸಾವು ಇವಿಷ್ಟರ ನಡುವಿನ ಬದುಕಿನ ಚಿತ್ರವನ್ನು ಸೂತ್ರರೂಪದಲ್ಲಿ ಹಿಡಿದಿಟ್ಟ ಚಿತ್ರಸಮೀಕರಣ. ಕವಿತೆ ಮುಂಬಯಿ ನಗರದ ಬದುಕಿನ ಹಲವು ಘಟ್ಟಗಳನ್ನು ಒಂದೊಂದಾಗಿ ತೆರೆದಂತೆ ನಗರದ ಫಿಸಿಯಾಲಜಿ ಮತ್ತು ಸೈಕಾಲಜಿ ಎರಡರ ಪರಿಚಯವಾಗುತ್ತೆ. ಇಲ್ಲಿ ಅತ್ಯಂತ ಮುಖ್ಯ ಅಂಶವೆಂದರೆ, ಕವಿ ಪಟ್ಟಣವನ್ನು ಒಳ್ಳೆಯದು, ಕೆಟ್ಟದು ಎಂಬ ಬೈಪೋಲಾರ್ ದೃಷ್ಟಿಕೋನದಿಂದ ನೋಡುವುದೇ ಇಲ್ಲ. ಸರಿ- ತಪ್ಪುಗಳು, ಯಾವಾಗಲೂ ಮನುಷ್ಯನ ಪರಿಸ್ಥಿತಿಗೆ ಸಾಪೇಕ್ಷವಾಗಿರುವುದರಿಂದ, ಈ ಕವಿತೆಯ ಧ್ವನಿಗೆ ಸಮತೋಲನವಿದೆ. ಹುಟ್ಟಿದ್ದು: ಆಸ್ಪತ್ರೆಯಲ್ಲಿ ಯಾರು ಹುಟ್ಟಿದ್ದು! ಹಳೆಯ ಕಾಲದಲ್ಲಿ ಹಳ್ಳಿಯಲ್ಲಿ ಮನೆಯಲ್ಲಿಯೇ ಹೆರಿಗೆಯ ವ್ಯವಸ್ಥೆ ಇತ್ತು. ಹಳ್ಳಿಯಲ್ಲಿ ಮನೆಗೆ ಬಂದು ಹೆರಿಗೆ ಮಾಡಿಸುವ ಹೆಂಗಸು, ಮಗುವಿನ ಜೀವನದುದ್ದಕ್ಕೂ, ಎರಡನೇ ಅಮ್ಮನ ಥರ ವಿಶೇಷ ಅಟ್ಯಾಚ್ಮೆಂಟ್ ಮತ್ತು ಸ್ಥಾನಮಾನ ಪಡೆಯುತ್ತಾಳೆ. ಆ ಹೆಂಗಸು, ಆಗಾಗ ತಾನು ಹೆರಿಗೆ ಮಾಡಿದ ಮಕ್ಜಳನ್ನು ನೋಡಿ ಖುಷಿ ಪಡುವುದು ಅತ್ಯಂತ ಸಾಮಾನ್ಯ. ಅದೊಂದು ಭಾವನಾತ್ಮಕ ಸಂಬಂಧ. ಆದರೆ ನಗರದಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ. ಅದೊಂದು ವ್ಯವಸ್ಥೆ. ಒಂದು ಥರಾ ಈ ಕಡೆ ಬಾಗಿಲಿಂದ ಗರ್ಭವತಿಯರು ಒಳ ಹೋದರೆ, ಆ ಕಡೆ ಬಾಗಿಲಿಂದ ಅಮ್ಮ ಮತ್ತು ಮಗು ಹೊರಗೆ ಬರುವಂತಹ ಇಂಡಸ್ಟ್ರಿಯಲ್ ವ್ಯವಸ್ಥೆ. ಇಲ್ಲಿ ಭಾವನಾತ್ಮಕ ಸಂಬಂಧ ಇಲ್ಲ. ಆಸ್ಪತ್ರೆಗೆ ಹಣ ಕಟ್ಟಿದರೆ, ಹೆರಿಗೆ ಮಾಡಿಸಿ ಕಳಿಸುತ್ತಾರೆ. ಹಾಗೆ, ಮಗುವಿನ ಹುಟ್ಟಿನಲ್ಲಿಯೇ ನಗರಸ್ವಭಾವವಿದೆ. ಹಾಗೆ ಹುಟ್ಟಿದ ಮಕ್ಕಳು ಬೆಳೆದು ನಗರದ ಪ್ರಜೆಗಳಾಗುತ್ತಾರೆ. ಅಂದರೆ ನಗರವೇ ಆಗುತ್ತಾರೆ. ಹಾಗೆ ನೋಡಿದಾಗ ತಿಳಿಯುತ್ತೆ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಅನ್ನುವಾಗ, ನಗರಕ್ಕೆ ನಗರವೇ ಹುಟ್ಟಿದ್ದು ಆಸ್ಪತ್ರೆಯಲ್ಲಿ ಅಂತ. ” ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ “ ಬಸ್ಸು,ಟ್ರಾಂ, ಕಾರು, ಎಲೆಕ್ಟ್ರಿಕ್ ಟ್ರೈನ್ ಗಳು ಸದಾ ಚಲನಶೀಲವಾದ, ಸದಾ ಗಿಜಿಗುಟ್ಟುವ, ವ್ಯವಸ್ಥೆಯ ಸಂಕೇತ. ಮುಂಬಯಿಯಲ್ಲಿ ಅಮ್ಮಂದಿರೂ ದಿನವಿಡೀ ಕೆಲಸಕ್ಕಾಗಿ ಚಲಿಸುವಾಗ ಕಂಕುಳಲ್ಲಿ ಮಗು! ಹಳ್ಳಿಯಲ್ಲಿ ಪ್ರಾಣಿ ಪಕ್ಷಿಗಳ ಜತೆಗೆ ಬೆಳೆದರೆ, ಮುಂಬಯಿ ಯಲ್ಲಿ ಬೆಳವಣಿಗೆಯ ಸಂಗಾತಿ, ಯಂತ್ರಗಳು. ಅದರ ಪರಿಣಾಮ ಮನಸ್ಸಿನ ಮೇಲೆ ಏನು ಎಂಬುದು ಓದುಗನ ಗ್ರಹಿಕೆಗೆ ಬಿಟ್ಟದ್ದು. ” ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ “ ಸಾಧಾರಣವಾಗಿ ಹಳ್ಳಿಯ ಮನೆಯಲ್ಲಿ ದನ, ಅದರ ಹಾಲು ಕರೆದು ಮಗುವಿಗೆ ಕುಡಿಸುತ್ತಾರೆ. ಮಗು ಬೆಳೆದು ಮಾತಾಡಲು ತೊಡಗಿದಾಗ ಆ ದನವನ್ನು ಮಗುವಿಗೆ ಗೋಮಾತೆ ಎಂದು ಪರಿಚಯಿಸುವ ಪರಿಪಾಠ. ಆ ಮಗು ಮತ್ತು ದನದ ನಡುವೆ ಒಂದು ಅನೂಹ್ಯ ಸಂಬಂಧ ಬೆಳೆಯುತ್ತೆ. ಮುಂಬಯಿಯಲ್ಲಿ ಹಾಗಲ್ಲ. ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟಲೀ ಹಾಲು!. ಮಗುವಿಗೆ ಹಾಲಿನ ಉಗಮವೇ ಒಂದು ಬಾಟಲಿಯಂತಹ ವಸ್ತುವಾದ ಹಾಗೆ. ಗೋಮಾತೆಯ ಜಾಗದಲ್ಲಿ ಬಾಟಲಿ. ಗ್ರೈಪ್ ಸಿರಪ್, ಹಾರ್ಲಿಕ್ಸು ಎಲ್ಲವೂ, ಜಾಹೀರಾತು ಜಗತ್ತಿನ ಪೇಯಗಳು. ಮಗು ಮತ್ತು ಅಮ್ಮ ಎಲ್ಲರೂ ಜಾಹೀರಾತಿನ ಮೇಲೆ ವಿಶ್ವಾಸವಿಟ್ಟು ಮಗುವಿನ ಬೆಳವಣಿಗೆಯ ಪೋಷಕಾಂಶಗಳ ನಿರ್ಧಾರ ಮಾಡುತ್ತಾರೆ. ” ಕಂಡಿದ್ದು: ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆಯ ಮೇಲೆ ಸರಿವ ನೂರಾರು ಕೊರಳು “ ಕಾಣುವುದು ಎಂದರೆ ದರ್ಶನ. ಬೆಳಗಿನಿಂದ ಸಂಜೆಯ ತನಕ ಎಂದರೆ, ಒಂದು ದಿನವೂ ಆಗಬಹುದು, ಹುಟ್ಟಿನಿಂದ ಸಾವಿನ ತನಕದ ಬದುಕೂ ಆಗಬಹುದು. ಲಕ್ಷ ಲಕ್ಷ ಚಕ್ರದ ಉರುಳು, ಕಾಲಚಕ್ರವೇ, ಋತುಚಕ್ರವೇ, ಬದುಕಿನ ಏರಿಳಿತವೇ, ನಗರದ ಚಲಿಸುವ ವಾಹನಗಳ ಚಕ್ರಗಳು ಉರುಳುವ ಚಲನಶೀಲತೆಯೇ, ಅಥವಾ ಕೊರಳಿಗೆ ಉರುಳಾಗುವ ಹಲವಾರು ಸಮಸ್ಯೆಗಳೇ?. ಸುಶಾಂತ್ ಸಿಂಗ್ ಹಾಕಿಕೊಂಡ ಉರುಳೇ?. ಅವಸರದ ಹೆಜ್ಜೆ ಹಾಕುವುದು, ಕಾಲುಗಳು. ಜತೆಗೇ ಸರಿಯುವುದು ಕೊರಳು. ಕೊರಳು ಎಂದರೆ ಧ್ವನಿ, ಮಾತು,ಅಭಿಪ್ರಾಯ ಸಿದ್ಧಾಂತ ಇತ್ಯಾದಿಗಳಾಗಿ ಅನ್ವಯಿಸಲು ಸಾಧ್ಯ. ನಡಿಗೆಯ ವೇಗಕ್ಕೆ ಪ್ರಾಮುಖ್ಯತೆ. ಕೊರಳಿನ ದನಿಗಲ್ಲ ಅನ್ನುವುದು ಒಂದರ್ಥವಾದರೆ, ಚಲನಶೀಲ ವ್ಯವಸ್ಥೆಗೆ ಸಾಪೇಕ್ಷವಾಗಿ ಸಿದ್ಧಾಂತ, ಅಭಿವ್ಯಕ್ತಿ, ಚಲಿಸುತ್ತೆ. ” ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು.” ಜೀವನದ ಶಾಲೆಯಲ್ಲಿ ನಡೆದ ಪ್ರತೀ ಹೆಜ್ಜೆ ಪಠ್ಯ. ಮೇಲಿನ ಪ್ಯಾರಾದಲ್ಲಿ ಅಷ್ಟೂ ಪ್ರತಿಮೆಗಳೇ. ಅವುಗಳನ್ನು ಓದುಗರ ಚಿಂತನೆಗೆ ಬಿಡಲೇ?. ಬೇರೂರು, ಹೀರು ಎನ್ನುವ ಕವಿಯ ಭಾವ ಚಲನಶೀಲ ಬದುಕು ಹಂಬಲಿಸುವ ಸ್ಥರತೆಯೇ?. ಬೇರೂರದಿದ್ದಲ್ಲಿ ಹೀರುವುದು ಹೇಗೆ. ಜೀವನದ ಸಾರವನ್ನು ಹೀರಲು ಚಲನಶೀಲತೆಯಷ್ಟೇ ಸ್ಥಿರಪ್ರಜ್ಞೆಯೂ ಆಳ ಚಿಂತನೆಯೂ ಅಗತ್ಯವೇ. ತಾಯಿ, ತಂದೆ, ವಿದ್ಯೆಯ ಬಗ್ಗೆ ಕವಿ ಸೂಚ್ಯವಾಗಿ ತಿಳಿಸುವ ಸಾಲುಗಳು ನಿಮ್ಮ ಸೃಜನಶೀಲ ಚಿಂತನೆಗೆ ಹಲವು ರೂಪದಲ್ಲಿ ಕಾಣ ಬಹುದು. ” ಜೀವನ: ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು. ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು ಸುಸ್ತಾಗಿ ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.” ಈ ಸಾಲುಗಳಲ್ಲಿ ಪ್ರತಿಯೊಂದು ಪದವೂ ರೂಪಕ ಅಥವಾ ಪ್ರತಿಮೆ. ಬಟ್ಟೆಯಲ್ಲಿ ಮೈ ತುರುಕಿ ಓಡುವುದು! ಎಂತಹಾ ಕಲ್ಪನೆ ಅಲ್ಲವೇ. ಬಟ್ಟೆಗೆ ಹೊಂದುವಂತೆ ದೇಹವನ್ನು ಫಿಟ್ ಮಾಡುವ ಜರೂರತ್ತು. ಬಟ್ಟೆ ಎಂದರೆ ದಾರಿ ಎಂಬ ಅರ್ಥ ತಗೊಂಡರೆ, ಬದುಕಿನ ದಾರಿ ಹೇಗಿದೆಯೋ ಅದಕ್ಕೆ ಸರಿಯಾದ ದೇಹಶಿಸ್ತು ಅಗತ್ಯ. ಆಫೀಸ್ ೫೦ ಕ.ಮೀ.ದೂರದಲ್ಲಿ ಇದ್ದರೆ, ಬೆಳಗಿನ ಜಾವ ಎದ್ದು ಮೂಡುವ ಸೂರ್ಯನಿಗೆ ಬೆನ್ನು ಹಾಕಿ, ಆಫೀಸಿನತ್ತ ರೈಲುಗಾಡಿ ಹತ್ತಿ ಚಲಿಸಬೇಕು. ನಿದ್ದೆ ಬೇಡುವ ದೇಹವನ್ನು ದಂಡಿಸಿ, ಹೊಂದಿಸಿ, ಬದುಕಿನ ಬಟ್ಟೆಗೆ ತುರುಕಬೇಕು. ‘ಸಾಯಂಕಾಲ ರೆಪ್ಪೆಯ ಮೇಲೆ ಹತ್ತು ಮಣ ಭಾರ ಹೊತ್ತು’ ಬದುಕಿನ ಸಾಯಂಕಾಲವೇ? ಅನುಭವದ ಭಾರವೇ?. ಕಲಿತ, ನಂಬಿದ ಸಿದ್ಧಾಂತದ/ ನಂಬಿಕೆಗಳ ಭಾರವೇ. ಆ ಭಾರದಿಂದ ಮುಂದಿನ ದರ್ಶನದ ಬಾಗಿಲಾದ ರೆಪ್ಪೆ ಮುಚ್ಚುತ್ತಾ ಇದೆಯೇ?. “ಬಾಡಿಗೆ ಮನೆಯ ನೆರಳು” ಅನನ್ಯ ಅಭಿವ್ಯಕ್ತಿ. ಇಹ ಲೋಕವೇ ಬಾಡಿಗೆ ಮನೆಯೇ?. “ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು”
ಅಂಕಣ ಬರಹ ಕಬ್ಬಿಗರ ಅಬ್ಬಿ ರಾಗದ ಬೆನ್ನೇರಿ ಬಂತು ಭಾವನಾ ವಿಲಾಸ ಕರ್ನಾಟಕ ಸಂಗೀತದಲ್ಲಿ’ ಕದನ ಕುತೂಹಲ’ ಅನ್ನೋ ರಾಗ ಇದೆ. ಈ ರಾಗದ ಸ್ವರಗಳನ್ನು ಸಾಕಷ್ಟು ವೇಗವಾಗಿ ಹಾಡುತ್ತಾರೆ. ಸಮುದ್ರಮಥನದ ಸಮಯದಲ್ಲಿ ಆಕಡೆ ರಾಕ್ಷಸರು,ಈ ಕಡೆ ದೇವತೆಗಳು ಅಮೃತಕ್ಕಾಗಿ ಕಡಲನ್ನು ಕಡೆಯುವಾಗಲೂ, ಎರಡೂ ವಿರುದ್ಧ ಪಂಗಡಗಳ ನಡುವೆ ಕದನವೇ. ಮನಸ್ಸೊಳಗೂ ಅಷ್ಟೇ, ಯಾವುದೇ ಹೊಸ ಆವಿಷ್ಕಾರದ ಬೆಣ್ಣೆ ಮೂಡುವುದು, ವಿರುದ್ಧ ಚಿಂತನೆಗಳ ಮಂಥನದಿಂದಲೇ. ಈ ರಾಗವನ್ನು ನೀವು ಆಲಿಸುವಾಗ ಒಂದು ಮಂಥನದ ಅನುಭವ ಆಗುತ್ತೆ. ರಾಗ ಎಂದರೆ ಒಂದು ನಿರ್ದಿಷ್ಟ ಆಯ್ಕೆಯ ಸ್ವರಗಳನ್ನು ಬೇರೆ ಬೇರೆ ಕಾಂಬಿನೇಷನ್ ಗಳಲ್ಲಿ ಹಾಡುವುದು. ಸ ರಿ ಗ ಮ ಪ ದ ನಿ ಎಂಬ ಸಪ್ತ ಸ್ವರಗಳು. ಅವುಗಳಲ್ಲಿ ಎರಡು ಅಥವಾ ಮೂರು ಬಗೆಯ ರಿ, ಗ ಮ, ಧ, ನಿ ಗಳಿವೆ. ರಿ : ಶುದ್ಧ ರಿ ( ರಿ1), ಚತುಶ್ರುತಿ ರಿ ( ರಿ2) ಶಟ್ಶ್ರುತಿ ರಿ ( ರಿ3) ಗ : ಶುದ್ಧ ಗ ( ಗ1), ಸಾಧಾರಣ ಗ ( ಗ2), ಅಂತರ ಗ ( ಗ3) ಮ : ಶುದ್ಧ ಮ ( ಮ1), ಪ್ರತಿ ಮ ( ಮ2) ಧ : ಶುದ್ಧ ಧ ( ಧ1), ಚತುಶ್ರುತಿ ಧ ( ಧ2) ಶಟ್ಶ್ರುತಿ ಧ ( ಧ3) ನಿ : ಶುದ್ಧ ನಿ ( ನಿ1), ಕೈಶಿಕಿ ನಿ ( ನಿ2), ಕಾಕಲಿ ನಿ ( ನಿ3) ಸ ಮತ್ತು ಪ ಗಳನ್ನು ಆಧಾರಕ್ಕಾಗಿ ( ರೆಫರೆನ್ಸ್) ಉಪಯೋಗಿಸುವುದರಿಂದ, ಅವುಗಳಲ್ಲಿ ಒಂದೇ ವಿಧ. ಈ ಸ್ವರಗಳ ಲಿಸ್ಟ್ ನಿಂದ, ನಾವು ಬೇಕಾದಂತೆ ಸ್ವರಗಳನ್ನು ಹೆಕ್ಕಿ ಮಾಲೆ ಕಟ್ಟಿದರೆ ಅದು ಒಂದು ರಾಗವಾಗುತ್ತೆ. ಉದಾಹರಣೆಗೆ, ಸ, ರಿ1, ಗ1, ಮ1, ಪ, ಧ1, ನಿ1, ಹೆಕ್ಕಿದರೆ ಅದೊಂದು ರಾಗ. ಹೀಗೆ ನೂರಾರು ಕಾಂಬಿನೇಷನ್ ಗಳನ್ನು ಮಾಡುವ ಮೂಲಕ ನಮಗೆ ಅಷ್ಟೂ ರಾಗಗಳ ಸಾಂಗತ್ಯ ಸಿಗುತ್ತೆ. ಇಲ್ಲಿ ವೈಜ್ಞಾನಿಕವಾಗಿ ನೋಡಿದರೆ, ಸ್ವರ ಎಂದರೆ ಒಂದು ಫ್ರೀಕ್ವೆನ್ಸಿ. ರಾಗದಲ್ಲಿ ಮೇಲೆ ಹೇಳಿದಂತೆ ಹಲವು ಫ್ರೀಕ್ವೆನ್ಸಿ ಗಳ ಮಾಲೆ ಇದೆ. ಮನುಷ್ಯನ ಕಿವಿಯ ಮೂಲಕ ಗ್ರಾಹ್ಯವಾಗುವ ಒಂದೊಂದು ಫ್ರೀಕ್ವೆನ್ಸಿ ಯೂ ಮಿದುಳಿನಲ್ಲಿ ಒಂದೊಂದು ಸಂವೇದನೆಯಾಗಿ ಮನಸ್ಸನ್ನು ಸ್ಪರ್ಶಿಸುತ್ತೆ. ಈ ಸಂವೇದನೆಯ ಸಾಹಿತ್ಯಿಕ ಹೆಸರೇ ಭಾವ. ಯಾವುದೇ ಭಾಷೆಯನ್ನು ಮತ್ತು ಸಾಹಿತ್ಯವನ್ನು ಮೀರಿ, ಸ್ವರಗಳು, ಮನಸ್ಸೊಳಗೆ ಭಾವ ಸ್ಪಂದನೆ ಮಾಡಬಲ್ಲವು. ಶಿವರಂಜಿನಿ ಅಂತ ಒಂದು ರಾಗವಿದೆ. ಇದರ ಆಲಾಪನೆಯನ್ನು ನೀವು ಆಲಿಸಿದರೆ ಶೋಕದ ಆರ್ದ್ರ ಭಾವ, ಭಕ್ತಿಯ ಸಮರ್ಪಣಾ ಭಾವ, ವಿರಹದ ನೋವಿನ ಅನುಭವ ಆಗುತ್ತೆ. ಹಾಗೆಯೇ ಮೋಹನ, ಯಮನ್ ಇತ್ಯಾದಿ ರಾಗಗಳು ಪ್ರೀತಿಯ ಉತ್ಕಟತೆಯಲ್ಲಿ, ಒಲವ ಧಾರೆಯಲ್ಲಿ ಮಿಂದ ಅನುಭೂತಿ ಕೊಡುತ್ತದೆ. ಸಾಹಿತ್ಯದ ಪದಗಳು ತಮ್ಮ ಅರ್ಥಗಳ ಮೂಲಕ, ಭಾವಕ್ಕೆ ಲಿಪಿಯಾದರೆ, ರಾಗಗಳು, ಭಾವದ ಅಮೂರ್ತ, ಅವರ್ಣನೀಯ ಅನುಭೂತಿ ಸ್ಫುರಿಸುತ್ತವೆ. ಈಗ ಭಾವಪೂರ್ಣ ಸಾಹಿತ್ಯದ ಭಾವಕ್ಕೆ ಹೊಂದುವ ರಾಗದಲ್ಲಿ, ಆ ಕವಿತೆಯನ್ನು ಹಾಡಿದರೆ!. ಅದು ರುಚಿಯಾದ ಅನ್ನ ಸಾರಿಗೆ, ಘಮಗಮ ತುಪ್ಪ ಬಡಿಸಿದ ಹಾಗೆ. ಸಾಹಿತ್ಯದ ಭಾವವನ್ನು ಚಿಂತನಶೀಲ ಮನಸ್ಸು ರಸಹಿಂಡುವಾಗ, ರಾಗದ ಸ್ವರಗಳು ಅದೇ ಹೊತ್ತಿಗೆ ಶ್ರವಣ ಮಾಧ್ಯಮದ ಮೂಲಕ ಎದೆಯೊಳಗೆ ಸ್ಪಂದನೆಯ ಲಬ್ ಡಬ್ ಆಗುತ್ತವೆ. ಹಾಡಿನ ಜತೆಗಿನ ಇತರ ವಾದ್ಯಗಳು, ಲಯ ಕಂಪನಗಳು ನಮ್ಮೊಳಗೆ ಒಂದು ಹೊಸ ಲೋಕ ಸೃಷ್ಟಿ ಮಾಡುತ್ತವೆ. ಈಗ, ಈ ಹಾಡು, ನಾಟಕದ್ದೋ, ಚಲನ ಚಿತ್ರದ್ದೋ, ಅಥವಾ ನಾಟ್ಯದ್ದೋ ಆಗಿದ್ದರೆ, ಭಾವೋತ್ಕರ್ಷಕ್ಕೆ ಮೂರನೆಯ ಆಯಾಮ ಸಿಗುತ್ತೆ. ಬರೇ ಅಭಿನಯದಿಂದಲೂ ಭಾವ ಪ್ರಕಟ ಮಾಡಲೂ ಬಹುದು, ಭಾವ ಸಂವಹನ ಮಾಡಬಹುದು ತಾನೇ. ಹಾಲುಗಲ್ಲದ ಬೊಚ್ಚುಬಾಯಿಯ ಮಗುವಿನ ಮುಗುಳು ನಗು ಸಂವಹಿಸುವ ಭಾವಕ್ಕೆ ಸಾಹಿತ್ಯ ಇದೆಯೇ?. ರಾಗ, ಕವಿತೆ ಮತ್ತು ಅಭಿನಯ ( ಶ್ರವಣ, ಭಾಷೆ ಮತ್ತು ದೃಶ್ಯ, ಮಾಧ್ಯಮ) ಈ ಮೂರೂ ವಿಧಾನದಿಂದ ನಮ್ಮ ಮನಮುಟ್ಟುವ ಪ್ರಯತ್ನ, ಸಿನೆಮಾ ಮತ್ತು ನಾಟಕದ ಹಾಡುಗಳದ್ದು. ಆ ಮೂಲಕ, ಮೂರೂ ರೀತಿಯಲ್ಲಿ ಹಾಡಿನ ಪ್ರಸ್ತುತಿ, ನಮ್ಮೊಳಗೆ ಕಲ್ಪನಾಶಕ್ತಿಯ ನಾಲ್ಕನೇ ಆಯಾಮವನ್ನು ಸೃಜಿಸುತ್ತೆ. ಅದು ತುಂಬಾ ಹೊಸತಾದ ಅವರ್ಣನೀಯವಾದ ಪಿಕ್ಚರೈಸೇಷನ್ ನ ಕದ ತೆರೆಯುತ್ತೆ. ಈ ಅನುಭವ ವ್ಯಕ್ತಿಯ ಹಳೆ ನೆನಪುಗಳ ಜತೆಗೆ ಅತ್ಯಂತ ಯುನೀಕ್ ಆಗಿರುತ್ತೆ. ಲಂಕೇಶ್ ಬರೆದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ. ಈ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಎಸ್ ಪಿ. ಬಾಲಸುಬ್ರಹ್ಮಣ್ಯಂ. ಹಾಡಿನಲ್ಲಿ ಪುನಃ ಪುನಃ ‘ ಕೆಂಪಾದವೋ’ ಎಂಬ ಸಾಲು ಇಂಪು ಲಹರಿಯಾಗಿ ಹರಿಯುತ್ತೆ. ( ಚಲನ ಚಿತ್ರ: ಎಲ್ಲಿಂದಲೋ ಬಂದವರು, ಸಂಗೀತ : ವಿಜಯ ಭಾಸ್ಕರ್) ** *** ** ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ ಊರು ಕಂದಮ್ಮಗಳು ಕೆಂಪಾದವೋ ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ ನುಡಿ ನುಡಿದು ಹೋದಾಗ ಪಚ್ಚಯ ತೆನೆಯಂತ ಭೂಮಿಯು ಎಲ್ಲಾನು ಕೆಂಪಾದವೋ ನನಗಾಗ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ** *** ** ಕೆಂಪು ಬಣ್ಣ, ಕ್ರಾಂತಿಯ ಬಣ್ಣ. ಪರಿವರ್ತನೆಯ ಬಣ್ಣ. ಕ್ರಾಂತಿ, ರಕ್ತಕ್ರಾಂತಿಯೇ ಆಗಬೇಕೆಂದಿಲ್ಲ. ಜಗತ್ತಿನ ಪ್ರತೀ ಜೀವವೂ ಬದಲಾವಣೆಗೆ ಹಾತೊರೆಯುತ್ತೆ. ಪ್ರಕೃತಿಯಲ್ಲಿ ಎರಡು ರೀತಿಯ ಬದಲಾವಣೆಯನ್ನು ಕಾಣಬಹುದು. ಮೊದಲನೆಯದ್ದು,ನಿಧಾನವಾದ, ನಿರಂತರವಾದ ಬದಲಾವಣೆ. ನಮಗೆ ದಿನ ದಿನ ,ಕ್ಷಣ ಕ್ಷಣ ಕಳೆದಂತೆ ವಯಸ್ಸಾಗುತ್ತಲ್ಲ,ಹಾಗೆ. ನಮ್ಮೊಳಗೆ ಅರಿವಿಲ್ಲದೆಯೇ ನಡೆಯುವ ಜೆನೆಟಿಕ್ ಬದಲಾವಣೆಗಳೂ ಅತ್ಯಂತ ಸೂಕ್ಷ್ಮ. ಜೀವ ವಿಕಾಸಕ್ಕೆ ಅದು ಮೂಲ. ಎರಡನೆಯ ಬದಲಾವಣೆ ಪ್ರಳಯದಂತಹಾ ಬದಲಾವಣೆ. ಪ್ರಕೃತಿಯಲ್ಲಿ ಯಾವಾಗಲೂ ಮಲ್ಟಿಪೋಲಾರ್ ಪ್ರಕ್ರಿಯೆಗಳ ನಡುವೆ ಒಂದು ಸಮತೋಲನ ಇರುತ್ತೆ. ಆ ಸಮತೋಲನ ಯಾವುದೋ ಕಾರಣಕ್ಕೆ ( ಕೆಲವೊಮ್ಮೆ ಮಾನವ ನಿರ್ಮಿತ) ಸಮತೋಲನ ತಪ್ಪಿ, ಅಸಮತೋಲನ ಬೆಳೆಯುತ್ತಾ ಹೋಗುತ್ತೆ. ಈ ಅಸಮತೋಲನ, ಹೊರಲಸಾಧ್ಯ ಹೊರೆಯಾದಾಗ, ಹಠಾತ್ತಾದ, ಶಕ್ತಿಯುತವಾದ, ಭೂಕಂಪದಂತಹಾ ಘಟನೆ ನಡೆದು ಒಂದು ಕ್ಷಣಕ್ಕೆ ಎಲ್ಲವೂ ಅಲ್ಲೋಲಕಲ್ಲೋಲವಾಗಿ ಹೊಸ ಸಮತೋಲನಕ್ಕೆ ವ್ಯವಸ್ಥೆ ದಾಟಿಬಿಡುತ್ತೆ. ಇಂತಹ ವಿಪ್ಲವಕಾರೀ ಬದಲಾವಣೆಯಲ್ಲಿ ಸಾಕಷ್ಟು ,ಸಾವು ನೋವು ಸಂಭವಿಸುತ್ತೆ. ಹೇಗೇ ಇರಲಿ. ಬದಲಾವಣೆ ಮತ್ತು ವಿಕಾಸ ( evolution) ಜಗತ್ತಿನ ಭೂತ,ವರ್ತಮಾನ ಮತ್ತು ಭವಿಷ್ಯದ ಅಂಗ. ಬದಲಾವಣೆಗಾಗಿ ಗಿಡ,ಮರ, ಭೂಮಿ,ಬಾನು, ಪಚ್ಚೆ ಪೈರು ಎಲ್ಲವೂ ಹಾತೊರೆಯುವುದನ್ನು ,ಲಂಕೇಶ್ ಅವರು ಕೆಂಪಾದವೋ ಎಲ್ಲ ಕೆಂಪಾದವೋ ಅನ್ನುವ ಸಾಲುಗಳಲ್ಲಿ ಬಿಂಬಿಸಿದ್ದಾರೆ. ಹಾಡು ಕೇಳಿದಂತೆ, ಈ ಬದಲಾವಣೆಯತ್ತ ತುಡಿತ ಮನಸ್ಸೊಳಗೆ ತೀವ್ರವಾಗಲು,ಇದರ,ಸಂಗೀತ, ಹಾಡಿದ ಬಗೆ, ಲಯ ಕೂಡಾ ಕಾರಣ ಅಲ್ಲವೇ. ಈ ಕವಿತೆಯಲ್ಲಿ ಜನಪದ ಧ್ವನಿ ಹಾಡಿಗೆ ನೆಲದ ಪರಿಮಳ ಕೊಡುತ್ತೆ. ಈ ಕವಿತೆಯ ಕೊನೆಯ ಸಾಲು, “ನನಗಾಗ ಕೆಂಪಾದವೋ” ಲಂಕೇಶ್ ಅವರು ಅನುಭವ, ಸಿದ್ಧಾಂತ, ಮತ್ತು ಚಿಂತನೆ, ವ್ಯಕ್ತಿ ಕೇಂದ್ರಿತ ಎಂದು ನಂಬಿದಂತಿದೆ. ಕವಿತೆಯಲ್ಲಿ ಹೇಳಿದ ಅಷ್ಟೂ ವಿಷಯಗಳು ಕೆಂಪಾದವೋ ಅಂತ ಕಂಡದ್ದು ವ್ಯಕ್ತಿಯ ಮನಸ್ಸಿಗೆ. ಲಂಕೇಶ್ ಅವರು ಇದೇ ಚಿತ್ರಕ್ಕೆ ಬರೆದ ಇನ್ನೊಂದು ಕವಿತೆ “ಎಲ್ಲಿದ್ದೆ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವ” ಹಾಡಾಗಿ ಹರಿದದ್ದು, ಎಸ್.ಪಿ.ಬಿ. ಅವರ ನಾದಬಿಂದುವಿನಿಂದಲೇ. ಜಾನಪದ ಶೈಲಿಯ ಭಾವಗೀತೆಗಳ ಸಂಕಲನ,ದೊಡ್ಡರಂಗೇ ಗೌಡರ, ಮಾವು- ಬೇವು. ಮಾವಿನ ತಳಿರು ಜನಪದ ಹಬ್ಬಗಳ ತೋರಣವಾದರೆ ಬೇವು ಬೆಲ್ಲ, ಬದುಕಿನ ಸಮತತ್ವ. ಈ ಆಲ್ಬಮ್ ನ ಅಷ್ಟೂ ಹಾಡುಗಳು ಹಳ್ಳಿಯ ಶುಭ್ರ ಪರಿಸರದ ಮನಸ್ಸಿನ, ಸಂಭ್ರಮದ, ಪ್ರೀತಿ, ಪ್ರೇಮಗಳ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂಬಂತೆ ರಸಿಕ ಮನಸ್ಸಿಗೆ ಮುಟ್ಟುತ್ತವೆ. ಇಂತಹ ಹಾಡುಗಳಿಗೆ ಅಶ್ವಥ್ ಅವರು ರಾಗ ಸಂಯೋಜನೆ ಮಾಡಿ, ಎಸ್.ಪಿ ಬಿ. ಅವರು ಹಾಡಿದರೆ, ಅದು ಜೀವ ಭಾವದ ಔತಣ. ಅದರ ಒಂದು ಹಾಡು ಹೀಗಿದೆ. ** *** ** ಮುಂಜಾನೆ ಮಂಜೆಲ್ಲ ಚಂದಾಗೈತೆ ಸಂಗಾತಿ ತುಟಿ ಹಂಗೆ ಹವಳsದ ಮಣಿ ಹಂಗೆ ಹೊಳಪಾಗೈತೆ… ಸಂಪಿಗೆ ತೂಗಿ ಚೆಂಡು ಹೂ ಬಾಗಿ ನೇಸರ ನಗೆಸಾರ ಶುರುವಾಗೈತೆ ಸೂಲಂಗಿ ತೆನೆಗೆ ಬಾಳೆಲೆ ಕೊನೆಗೆ ತಂಗಾಳಿ ಸುಳಿದಾಡಿ ಹಾಡಾಗೈತೆ ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ.. ಮೋಡದ ದಂಡು ಓಡೋದ ಕಂಡು ರಂಗೋಲಿ ವೈನಾಗಿ ಬರೆದ್ಹಂಗೈತೆ ಆಕಾಶದ ಬದಿಗೆ ಗುಡ್ಡದ ತುದಿಗೆ ಹೊಂಬಿಸಿಲು ರಂಗಾಗಿ ಬೆಳಕಾಗೈತೆ ಮೈದುಂಬಿ ಮನಸೋತು ಮೆರೆದಂಗೈತೆ.. ** *** ** ಇದರ ಪ್ರತಿಯೊಂದು ಪದಗಳೂ ರಾಗ ಹೀರಿ ಗಾಯಕನ ಕಂಠದಿಂದ ಹೊಮ್ಮಿದಾಗ, ಭಾವ ಕಳೆಗಟ್ಟುತ್ತೆ. ಭಾವಮಧುವಿನ ಉನ್ಮತ್ತವಾದ ಸ್ಥಿತಿಯಿಂದ ಹೊರಬರಲಾಗದ ಸ್ಥಿತಿ ರಸಿಕ ಕೇಳುಗನದ್ದು. ಬಾಲಸುಬ್ರಹ್ಮಣ್ಯಂ ಅವರ ರೇಶ್ಮೆ ಸ್ಪರ್ಶದ ಕಂಠ, ತಗ್ಗು ಸ್ಥಾಯಿಯಿಂದ ತಾರಸ್ಥಾಯಿಗೆ ಕ್ಷಣಗಳಲ್ಲಿ ಏರಿಳಿಯುವ ಪ್ರತಿಭೆ ಮತ್ತು ಎದೆತುಂಬಿ ಹಾಡುವ ಸಮರ್ಪಣೆ, ಚೆನ್ನಾಗಿ ಹದ ಬಂದ ಸಕ್ಕರೆ ಪಾಕದ ನೂಲೆಳೆಯ ಧಾರೆಯಂತೆ ಕಡಿಯದೆ ಹರಿಯುವ ಸರಾಗ, ಕವಿತೆಯ ಅರ್ಥಕ್ಕೆ ವ್ಯೋಮದವಕಾಶ ಒದಗಿಸುತ್ತವೆ. ರಾಗಸ್ವರಗಳು ಮಿಡಿದಾಗ ಅಂತರಂಗದ ತಂತಿಗಳಲ್ಲಿ ಭಾವ ಅನುರಣಿಸುತ್ತವೆ. ಹೀಗೆಯೇ ‘ ಪರಸಂಗದ ಗಂಡೆ ತಿಮ್ಮ ‘ ಚಿತ್ರದಲ್ಲಿ, ದೊಡ್ಡ ರಂಗೇ ಗೌಡರ ಕವಿತೆ ಹೀಗಿದೆ. “ನೋಟದಾಗೆ ನಗೆಯಾ ಮೀಟೀ ಮೋಜಿನಾಗೆ ಎಲ್ಲೆಯ ದಾಟೀ. ಮೋಡಿಯ ಮಾಡಿದೋಳ ಪರಸಂಗ ಐತೇ ಪರಸಂಗ ಐತೇ.. ಮೋಹಾವ ತೋರಿದೋಳ ಪರಸಂಗ ಐತೇ ಪರಸಂಗ ಐತೇ… ಬರಡಾ..ದ ಬದ್ಕೀ..ಗೆ ಹೊಸಾ ನೇಸ್ರು ಅರಳೈತೇ.” ರಾಜನ್-ನಾಗೇಂದ್ರ ಅವರ ರಾಗ ಸಂಯೋಜನೆಯಲ್ಲಿ ಈ ಕವಿತೆಗೆ ನಾದಭಾವ ತುಂಬಿದ್ದು ಎಸ್. ಪಿ.ಬಿ. ದೊಡ್ಡರಂಗೇಗೌಡರ ಹಳ್ಳಿಯ ಭಾವಚಿತ್ರವನ್ನು ಕಣ್ಣಿಗೊತ್ತಿದ ನಂತರ, ಕೆ.ಎಸ್ ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಪ್ರೇಮಗೀತೆಯತ್ತ ಹೊರಳೋಣವೇ.. ** *** *** ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು || ಹುಣ್ಣಿಮೆಯ ರಾತ್ರಿಯಲಿ ಉಕ್ಕುಹುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ನೇವುದಂತೆ ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುಹು ಕನಸಿನಂತೆ, ನಿನ್ನೊಳಿದೆ ನನ್ನ ಮನಸು ಅಲೆ ಬಂದು ಕರೆಯುಹುದು ನಿನ್ನೊಲುಮೆ ಅರಮನೆಗೆ ಹೊರಗಡಲ ರತ್ನಪುರಿಗೆ ಅಲೆ ಇಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ ಒಳಗುಡಿಯ ಮೂರ್ತಿಮಹಿಮೆ, ನಿನ್ನೊಳಿದೆ ನನ್ನ ಮನಸು *** *** **** ಈ ಹಾಡಿಗೆ ಸಂಗೀತ ಅಶ್ವಥ್ ಅವರದ್ದು. ಹಾಡು ಮೈಸೂರು ಮಲ್ಲಿಗೆ ಚಲನಚಿತ್ರದ್ದು. ಬಾಲಸುಬ್ರಹ್ಮಣ್ಯಂ ಅವರು ಈ ಹಾಡನ್ನು ಪ್ರೇಮದ ಆರಾಧಕನಾಗಿ ಹಾಡಿದ್ದಾರೆ. ಈ ಹಾಡುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆಯೇ?!. ಇವುಗಳನ್ನು ಅನುಭವಿಸಬೇಕು. ಇವುಗಳ ಭಾವದಬ್ಬಿಯಲಿ ಮೀಯಬೇಕು,ಕರಗಬೇಕು. ಅದು ಸಾಧ್ಯವಾಗುವುದೇ ಗಾಯಕನ ಪ್ರಸ್ತುತಿಯಿಂದ,ರಾಗ ಸಂಯೋಜನೆಯಿಂದ. ಗಾಯಕ, ನಟ, ಕವಿ,ಚಿತ್ರಕಾರ, ಇಂತಹ ಕಲಾವಿದರು, ಭಾವನೆ ,ಸಂವೇದನೆ ಮತ್ತು ಕಲ್ಪನೆಯ ಪ್ರತಿಭಾಸಂಪನ್ನರು. ಬ್ರಹ್ಮ, ಜೀವ ಸೃಷ್ಟಿ ಮಾಡಿದರೆ ಕಲಾವಿದರು ಜೀವಭಾವ ಸೃಷ್ಟಿಕರ್ತರು. ಅಮ್ಮ ಮತ್ತು ಅಪ್ಪ,ಎರಡೂ ಏಕಕಾಲದಲ್ಲಿ ಆಗಬಲ್ಲವರೆಂದರೆ ಕಲಾವಿದರೇ. ಹಾಗಾಗಿ
ಕಬ್ಬಿಗರ ಅಬ್ಬಿ.-13 ಗಗನ ಚುಂಬಿ ಮತ್ತು ಲಿಫ್ಟು ಸರ್ಗೇಯಿ ಬೂಬ್ಕಾ ,ಎಂಬ ಸೋವಿಯತ್ ಯುನಿಯನ್ ನ ಹುಡುಗ ಉದ್ದ ಕೋಲು ಹಿಡಿದು ಪೋಲ್ ವಾಲ್ಟ್ ಹಾರಲು ಸಿದ್ಧನಾಗಿದ್ದ. ಇದೊಂದು ಥರದ ಹೈ ಜಂಪ್ ಸ್ಪರ್ಧೆ. ಈ ಆಟದಲ್ಲಿ ಒಂದು ಕೋಲಿನ ಸಹಾಯದಿಂದ ಜಿಗಿಯಲಾಗುತ್ತೆ, ಆ ಕೋಲನ್ನು ಹಾರುಗೋಲು ಎಂದು ಕರೆಯೋಣ. ಹೈಜಂಪ್ ಮಾಡೋವಾಗ ಮೊದಲೇ ನಿರ್ಧರಿಸಿದ ಎತ್ತರದಲ್ಲಿ ನೆಲಕ್ಕೆ ಸಮಾನಾಂತರವಾಗಿ ಒಂದು ಕೋಲು ( ಅಳೆಗೋಲು) ಇಟ್ಟಿರುತ್ತಾರೆ. ಉದ್ದದ ಹಾರುಗೋಲು ಹಿಡಿದು, ಓಡುತ್ತಾ ಬಂದು, ಕೋಲನ್ನು ಹೈ ಜಂಪ್ ನ ಎತ್ತರದ ಅಳೆಗೋಲಿನ ಹತ್ತಿರ ಬಂದಾಗ ನೆಲಕ್ಕೂರಿ, ಹಾರುಕೋಲಿನ ಸಹಾಯದಿಂದ ಎತ್ತರಕ್ಕೆ ಜಿಗಿದು,ಅಳೆಗೋಲಿನ ಆಚೆಗೆ ಧುಮುಕುವ ಆಟ ಅದು. ಸಾಧಾರಣವಾಗಿ, ಕೋಲನ್ನೆತ್ತಿ ಓಡಿ ಬರುವಾಗ, ವೇಗದಿಂದ ಉತ್ಪನ್ನವಾದ ಶಕ್ತಿಯನ್ನೆಲ್ಲಾ ಮೊಣಕಾಲು ಮತ್ತು ತೊಡೆಗಳ ಸ್ನಾಯುಗಳಿಗೆ ನೀಡಿ, ದೇಹವನ್ನು ಆಕಾಶದತ್ತ ಚಿಮ್ಮಿಸಬೇಕು. ಅಷ್ಟಾದರೆ ಸಾಕೇ?. ಆಕಾಶದಲ್ಲಿದ್ದಾಗಲೇ ಊರಿದ ಏರುಕೋಲನ್ನು ಗಟ್ಟಿಯಾಗಿ ಹಿಡಿದು, ಹೈಜಂಪ್ ನ ಅಳೆಗೋಲಿನ ಹತ್ತಿರ ದೇಹ ತಲಪಿದಾಗ, ಎದೆಯುಬ್ಬಿಸಿ ಬಿಗಿದ ರಟ್ಟೆಯ ಸಹಾಯದಿಂದ ದೇಹವನ್ನು ನೆಲಕ್ಕೆ ಸಮಾನಾಂತರವಾಗಿ (parallel) ಬ್ಯಾಲೆನ್ಸ್ ಮಾಡಿ ಅಳೆಗೋಲನ್ನು ಸ್ಪರ್ಷಿಸದೆಯೇ ಮುಂದಕ್ಕೆ ಹೊರಳಿ ಅಳೆಗೋಲನ್ನು ದಾಟಿ ಆಚೆಕಡೆಯ ಮರಳು ಹಾಸಿಗೆ ಮೇಲೆ ಬೀಳಬೇಕು. ಬುಬ್ಕಾ ಹಾರಲು ಆರಂಭದ ಬಿಂದುವಿನಲ್ಲಿ ನಿಂತಾಗ ಅಮ್ಮನ ಮಾತುಗಳು ಕಿವಿಯೊಳಗೆ ಅನುರಣಿಸುತ್ತಿದ್ದವು. ಶಾಲೆಯಲ್ಲಿದ್ದಾಗ ಹೈಜಂಪ್ ಸ್ಪರ್ಧೆಯಲ್ಲಿ ಸೋತಾಗ ಆಕೆ ಹೇಳಿದ ಮಾತುಗಳವು. ” ಮಗನೇ! ನೀನು ಸೋತಿಲ್ಲ! ನೀನು ಜಿಗಿದ ಮಟ್ಟ ಕಡಿಮೆಯಿತ್ತಷ್ಟೇ..ಜಿಗಿಯುವ ಎತ್ತರವನ್ನು ದಿನಕ್ಕೆ ಕೂದಲೆಳೆಯಷ್ಟೆತ್ತರ ಹೆಚ್ಚು ಮಾಡುತ್ತಾ ಹೋಗು! ಜಗತ್ತು ಕಾಯುತ್ತೆ ನಿನ್ನ ಗೆಲುವಿಗಾಗಿ!” ಹಾಗೆ ಎತ್ತರದಿಂದ ಎತ್ತರಕ್ಕೆ ಹಾರಿದ ಹುಡುಗ ಬುಬ್ಕಾ, ತನ್ನ ಮೊದಲ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಜಿಗಿಯಲು ನಿಂತಿದ್ದ. ಕ್ರಿ.ಶ. 1983 ನೇ ಇಸವಿ, ಹೆಲ್ಸಿಂಕಿಯಲ್ಲಿ ನಡೆದ ಸ್ಪರ್ಧೆ ಅದು. ಸ್ಟಾರ್ಟ್!… ಹಾರಲು ಸಿಕ್ಕಿದ ಗ್ರೀನ್ ಸಿಗ್ನಲ್! ಬ್ಯುಗಿಲ್ ಮೊಳಗಿತ್ತು! ಬೂಬ್ಕಾ ಹಾರು ಕೋಲನ್ನು ಎತ್ತಿ ಹಿಡಿದು ಓಡ ತೊಡಗಿದ. ಆ ಹೆಜ್ಜೆಗಳಲ್ಲಿ ಚಿರತೆಯ ಧೃಡತೆ. ಕಣ್ಣುಗಳು ಹಾರಬೇಕಾದ ಅಳೆಗೋಲನ್ನು ನೋಟದಲ್ಲೇ ಸೆರೆಹಿಡಿದು ಗುರಿ ಸಮೀಪಿಸಿದ ಬೂಬ್ಕಾ. ಕೋಲನ್ನು ನೆಲಕ್ಕೂರಿ ನೆಲಕ್ಕೆ ಎರಡೂಪಾದಗಳ ಸಂಯೋಜಿತ ಜಿಗಿತುಳಿತಕ್ಕೆ ರಾಕೆಟ್ಟಿನಂತೆ ಆತನ ದೇಹ ಆಗಸಕ್ಕೆ ಚಿಮ್ಮಿತ್ತು. ಬೂಬ್ಕಾ ಕೊನೆಯ ಕ್ಷಣದಲ್ಲಿ ಒಂದು ಅದ್ಭುತ ತಂತ್ರ ಉಪಯೋಗಿಸಿದ್ದು ಇಂದಿಗೂ ಮನೆಮಾತು. ಸಾಧಾರಣವಾಗಿ ನೆಲಕ್ಕೆ ದೇಹದುದ್ದವನ್ನು ಸಮಾನಾಂತರ ಮಾಡಿ ಅಳೆಗೋಲಿನ ಅತ್ತಕಡೆ ಹೊರಳುವ ಬದಲು,ಈ ಕನಸುಗಾರ, ಬಿದಿರ ಕೋಲಿನ ತುದಿಯಲ್ಲಿ ಅಂಗೈ ಊರಿ, ತಲೆ ಕೆಳಗೆ ಕಾಲು ಮೇಲೆ ಮಾಡಿದ ಪೋಸ್ಚರ್ ನಲ್ಲಿ ರಟ್ಟೆಯಲ್ಲಿ ಇದ್ದ ಅಷ್ಟೂ ಬಲ ಸೇರಿಸಿ ದೇಹವನ್ನು ಎರಡನೇ ಬಾರಿ ಎತ್ತರಕ್ಕೆ ಚಿಮ್ಮಿಸಿದ್ದ. ಅಂದು ಆತ ಹಾರಿದ ಎತ್ತರ ವಿಶ್ವ ದಾಖಲೆಯನ್ನು ಮುರಿದು ಹೊಸತು ಬರೆದಿತ್ತು. ಆ ನಂತರದ ಎರಡು ದಶಕಗಳಲ್ಲಿ ಆತ 34 ಬಾರಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದ!. ಆರು ಬಾರಿ ವಿಶ್ವ ಚಾಂಪಿಯನ್, ಒಂದು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಆತನ ಕೊರಳೇರಿದ್ದವು ಮನುಷ್ಯ ಚೇತನವೇ ಊರ್ಧ್ವ ಮುಖಿ. ಸಾಧನೆಯ ಶಿಖರದ ಎತ್ತರ ಏರಿಸುತ್ತಲೇ ಇರುವ ಹಟಮಾರಿ ಪ್ರಜ್ಞೆ. ಹೀಗೇ ಏರುವಾಗ, ಏರುವ ವಿಧಾನ, ಏರುವ ಎತ್ತರ, ಗುರಿ, ಇವುಗಳ ಜತೆಗೆ, ಬದುಕಿಗೆ ಮತ್ತು ಸಮಾಜಕ್ಕೆ, ಈ ಚಾರಣ ಧಮಾತ್ಮಕವೇ, ಋಣಾತ್ಮಕವೇ ಎಂಬ ಜಿಜ್ಞಾಸೆ ಹುಟ್ಟುತ್ತೆ. ದಿನಕ್ಕೊಂದು ದಾಖಲೆ ಮಾಡುವ, ಮರುದಿನ ಇನ್ನಾರೋ ಮುರಿಯುವ ಓಟ. ವಿಜ್ಞಾನ, ತಂತ್ರಜ್ಞಾನವೂ ಅಷ್ಟೇ. ಗಗನಕ್ಕೆ ಸವಾಲೆಸೆಯುವ ಗಗನ ಚುಂಬೀ ಕಟ್ಟಡಗಳು, ಸಮುದ್ರದಾಳದಲ್ಲಿ ಓಡುವ ರೈಲು, ಜಾಣ ಫೋನ್ ಮೂಲಕ ಭೂಮಿಯ ಆ ಭಾಗದ ಅಮೆರಿಕಾದ ಮೊಮ್ಮಗುವಿಗೆ ಹೈದರಾಬಾದ್ ನಿಂದ ಹ್ಯಾಪ್ಪೀ ಬರ್ತ್ ಡೇ ಹಾಡುವ ಅಜ್ಜಿ, ಇತ್ಯಾದಿ ನಮ್ಮ ವಿಕಸನ? ದ ಕಹಾನಿಗಳು. ಅನವರತ ಪ್ರಯತ್ನದಲ್ಲಿ ಫಲಿಸಿದ ಅವಿಷ್ಕಾರಗಳು ನಮ್ಮನ್ನು ಮಂಗಳನ ಅಂಗಳಕ್ಕೆ ತಲಪಿಸಿದೆ. ಅದೇ ಹೊತ್ತಿಗೆ ಓಟದಲ್ಲಿ ನೋಟ ನೆಟ್ಟ ಕನ್ನಡಕದ ಹಿಂದಿನ ಕಣ್ಣುಗಳಿಗೆ ಪಕ್ಕದಲ್ಲಿ ಹಸಿವಿನಿಂದ ಅಳುವ ಮಗುವಿನ ಮುಖ ಕಾಣಿಸುತ್ತಿಲ್ಲವೇ?. ವೃದ್ಧಾಶ್ರಮದಲ್ಲಿ ಹಣ ಕಟ್ಟಿ ಬಿಟ್ಟು ಬಂದ ವಯಸ್ಸಾದ ತಂದೆತಾಯಂದಿರ ಒಬ್ಬಂಟಿತನದಿಂದ ಸುಕ್ಕಿದ ಕೆನ್ನೆಗಳಲ್ಲಿ ಜಾರಿ, ಆರಿ ಹೋಗುವ ಕಣ್ಣೀರ ಬಿಂದುಗಳ ಅರಿವಿಲ್ಲವೇ?. ಹೀಗೇ ಬನ್ನಿ, ಇಲ್ಲಿದೆ ಸುಬ್ರಾಯ ಚೊಕ್ಕಾಡಿಯವರ ಕವಿತೆ. *** *** *** ಲಿಫ್ಟು ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು. ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದುಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ. ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ. ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು. ಅರಿವಿರದ ಯಾವುದೋ ಬಂದು ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ. *** *** *** ಕವಿತೆಯ ಹೆಸರು ಲಿಫ್ಟು. ಈ ಪದ ಆಂಗ್ಲಪದ. ಮೆಟ್ಟಿಲು ಹತ್ತುವ ಬದಲು, ನಿಂತಲ್ಲಿಯೇ ಮೇಲೆತ್ತುವ ಯಂತ್ರ! ಎಂದಾಗ ಇದು ನಾಮ ಪದ. ಮೇಲಕ್ಕೆತ್ತುವ ಕ್ತಿಯಾಸೂಚಕವಾಗಿ ಇದು ಕ್ರಿಯಾ ಪದವೂ ಹೌದು. ತಂತ್ರಜ್ಞಾನ, ಮನುಷ್ಯನ ಹತ್ತುವ ಇಳಿಯಿವ, ತೊಳೆಯುವ, ನಡೆಯುವ, ಓಡುವ ಇತ್ಯಾದಿ ಹಲವು ಕ್ತಿಯೆಗಳನ್ನು ಸುಲಭ ಮಾಡಲು, ಯಂತ್ರಾವಿಷ್ಕಾರ ಮಾಡಿದೆ. ಎಷ್ಟೆಂದರೆ, ಯಂತ್ರಗಳಿಲ್ಲದೆ ಬದುಕು ಅಸಾಧ್ಯ ಎನ್ನುವಷ್ಟು. ಮನುಷ್ಯನ, ವಿಕಸನದ ಹಲವು ಘಟ್ಟಗಳನ್ನು ವರ್ಗೀಕರಿಸುವಾಗ, ಶಿಲಾಯುಗ, ಲೋಹಯುಗ, ಹೀಗೆಯೇ ಮುಂದುವರೆದರೆ, ಈ ಯಂತ್ರಯುಗವೂ ಒಂದು ಮಹಾ ಲಂಘನವೇ. ಹಾಗಾಗಿ, ಈ ಕವಿತೆಯ ಶೀರ್ಷಿಕೆ, ಯಂತ್ರಯುಗದ ಅಷ್ಟೂ ಅಂಶಗಳ ಅಭಿವ್ಯಕ್ತಿ. ಕವಿತೆ ಓದುತ್ತಾ ಹೋದಂತೆ, ಈ ಶೀರ್ಷಿಕೆ, ಯಂತ್ರಯುಗದ ಮೊದಲು ಮತ್ತು ನಂತರದ ಸಾಮಾಜಿಕ ಪ್ರಕ್ರಿಯೆಗಳ ಮತ್ತು ಸಮಗ್ರಪ್ರಜ್ಞೆಗಳ ತಾಕಲಾಟವನ್ನೂ ಚಿತ್ರಿಸುತ್ತೆ. “ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು.” ಮನುಷ್ಯ ತನ್ನ ಪ್ರಯತ್ನದಿಂದ ಏರುತ್ತಲೇ ಹೋದ. ಗಗನ ಚುಂಬಿ ಎನ್ನುವುದು ಆಗಸಕ್ಕೆ ಮುತ್ತಿಡುವ ಎತ್ತರದ ಕಟ್ಟಡ. ಹತ್ತಲು ಉಪಯೋಗಿಸಿದ್ದು ಲಿಫ್ಟ್ ಎಂಬ ಯಂತ್ರ. ಎರುತ್ತಾ ಹೋದಂತೆ, ನೆಲ ಕಾಣಿಸಲ್ಲ. ನೆಲ ಎಂಬುದು, ಮೂಲ, ಆಧಾರಕ್ಕೆ ಪ್ರತಿಮೆ. ಏರುತ್ತಾ ಹೋದಂತೆ ತನ್ನ ಅಡಿಪಾಯವೇ ಮರೆತುಹೋಗಿ,ಅದರ ಸಂಪರ್ಕ ಕಡಿದುಹೋಯಿತು. ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಆಕೃತಿ ಇದೆ. ಈ ಪದವನ್ನು ಕವಿ ಉಪಯೋಗಿಸಿ ಕವಿತೆಗೆ ಅಚಾನಕ್ ಆಗಿ ಹೊಸ ದಿಕ್ಕು ಕೊಡುತ್ತಾರೆ. ಈಜಿಪ್ಟ್‌ನಲ್ಲಿ ಪಿರಮಿಡ್ ಒಳಗೆ ಮೃತದೇಹವನ್ನು ” ಮಮ್ಮಿ” ಮಾಡಿ ಸಮಾಧಿ ಮಾಡುತ್ತಿದ್ದರು. ಅಂದರೆ ಈ ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಇದ್ದರೆ, ಈ ಕಟ್ಟಡದ ನೆಲತಲದಿಂದ ಹತ್ತಿದ್ದು,ಬದುಕಿನ ಆದಿ ಮತ್ತು ಪಿರಮಿಡ್ ನಲ್ಲಿ, ಏಕಾಂತದಲ್ಲಿ, ತನ್ನ ತಾನೇ ಏಕಾಂತದಲ್ಲಿ ಸಮಾಧಿಯಾದ ಬದುಕಿನ ಅಂತ್ಯವೇ. ಹತ್ತುತ್ತಾ, ಕೊನೆಗೆ ನೆಲದ ಸಂಪರ್ಕ ಕಸಿದುಕೊಳ್ಳುವುದು ಎಂದರೆ, ಭೌತಿಕ ಜಗತ್ತಿನ ಸಂಪರ್ಕವಾದ,ದೇಹ ತೊರೆಯುವ ಕ್ರಿಯೆಯೇ?. ಪಿರಮಿಡ್ ಆಕೃತಿಯೊಳಗೆ ಜೀವಿಸುವ ದೇಹ, ಜೀವವಿದ್ದೂ ಸತ್ತಂತೆ,ಎಂಬ ಅರ್ಥವನ್ನೂ ಈ ಸಾಲುಗಳು ಪಡೆಯಬಹುದು ತಾನು ಏರಲು ಆರಂಭಿಸಿದ ಮೂಲ ಆಧಾರ, ತಂದೆ,ತಾಯಿ, ಶಾಲೆ,ಗುರುಗಳು, ಸಮಾಜ ಇವುಗಳ ಸೂತ್ರಗಳನ್ನು ಕಡಿದುಕೊಂಡು, ಏರಿದ ದಾರಿಯನ್ನು ಮರೆತು ಡಿಸ್ಕನೆಕ್ಟ್ ಆಗಿ ಬದುಕುವ ಜೀವನ, ಜೀವಮುಖೀ ಜೀವನವೇ? ಅಲ್ಲಾ,ಪಿರಮಿಡ್ ಒಳಗಿನ “ಮಮ್ಮಿ” ಬದುಕೇ?. ಇನ್ನೊಂದು ರೀತಿ ಅರ್ಥೈಸುವುದಿದ್ದರೆ, ಭೌತಿಕ ಬದುಕನ್ನು ತ್ಯಜಿಸಿ, ಧ್ಯಾನಮಾರ್ಗದತ್ತ ಏರಿದ ಸಂತನ ಅನುಭವಕ್ಕೆ, ತುದಿಯಲೇಕಾಂತದಲಿ, ಧ್ಯಾನಕ್ಕೆ ಅಣಿಯಾಗುವ ಪ್ರಯತ್ನ ಇದು. ಈ ಅರ್ಥಕ್ಕೆ ಕವಿತೆಯ ಉಳಿದ ಸಾಲುಗಳ ಸಮರ್ಥನೆ ದೊರಕುವುದಿಲ್ಲ. “ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದು ಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ.” ಈ ಗಗನಚುಂಬಿಯ ಮೇಲೆ ನೆಲದಲ್ಲಿ ನಡೆಯುವ ಅಷ್ಟೂ ಸಮಾಜಮುಖೀ ಶಬ್ಧಗಳು ಇಲ್ಲ. ಸ್ಪಂದನೆಯಿಲ್ಲ, ಬಂಧು ಬಳಗಗಳ,ಸಮಾಜದ ಕಟ್ಟುಪಾಡುಗಳಿಲ್ಲ. ಸಂಬಂಧಗಳ ಕಡಿದು ಮುನ್ನಡೆದಾಯ್ತು ಅಂತ ಕವಿವಾಣಿ. ಸಂಬಂಧ ಅದರಷ್ಟಕ್ಕೇ ಕಡಿದು ಹೋದದ್ದಲ್ಲ. ಎತ್ತರಕ್ಕೆ ಏರುವ ಭರದಲ್ಲಿ,ಆರೋಹಿಯೇ ಕಡಿದದ್ದು. ಇಲ್ಲೊಂದು ಧರ್ಮ ಸೂಕ್ಷ್ಮ ಇದೆ!. ಸಂಬಂಧಗಳ ಬಂಧ ಕಡಿಯದಿದ್ದರೆ ಹತ್ತಲು ಬಹುಷಃ ಕಷ್ಟವಾಗುತ್ತಿತ್ತು. ಆ ಸೂತ್ರಗಳು ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿದ್ದವು. ಬಿಂದಾಸ್ ಆಗಿ ಅಷ್ಟೆತ್ತರ ಏರಲು ಸಂಪೂರ್ಣ ಸ್ವಾತಂತ್ರ್ಯ ಬೇಕಿತ್ತು. ಆದರೆ ಪ್ರಶ್ನೆ, ಏರಿದ ಎತ್ತರಕ್ಕೆ ಅರ್ಥ ಇದೆಯೇ?. ಬಹುಜನಬಳಗದ ಬಂಧನದಿಂದ, ಕಸಿದುಕೊಂಡು ತನ್ನದೇ ಆದ ಚಿಕ್ಕ ಕುಟುಂಬಕ್ಕೆ ಸೀಮಿತವಾದ, ತಾನು,ತನ್ನ ಸಾಧನೆ ಮತ್ತು ತನ್ನ ಬದುಕಿನ ಮಿತಿಯೊಳಗೆ ಸ್ವರ್ಗ ಹುಡುಕುವ ಪ್ರಯತ್ನ ಇದು. “ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ” ಈ ಗಗನಚುಂಬಿ ಕಟ್ಟಡದ ತುದಿಗೆ ತಲಪಿದ ವ್ಯಕ್ತಿಗೆ, ಕಟ್ಟಡದ ತಳಪಾಯವಾದ ಹಳೆಯ ಮೌಲ್ಯಗಳು ಅಪಮೌಲ್ಯವಾಗಿವೆ. ಇಲ್ಲಿ ಅಪಮೌಲ್ಯ ಎಂಬ ಪದ ವ್ಯಾಪಾರೀ ಜಗತ್ತಿನ ಕರೆನ್ಸಿಯನ್ನು ಡಿವೇಲ್ಯುವೇಷನ್ ಅನ್ನೋ ಶಬ್ಧ. ಲಿಫ್ಟ್ ಎಂಬ ಯಾಂತ್ರಿಕ ವ್ಯವಸ್ಥೆಯಲ್ಲಿ ಮೇಲೇರುತ್ತಾ ಹೋದಂತೆ, ಕುರುಡು ಕಾಂಚಾಣ ಮುಖ್ಯವಾಗಿ, ಮೌಲ್ಯಗಳು ತಳದಲ್ಲಿ ಬಿದ್ದಿವೆ ಅನಾಥವಾಗಿ. ತುದಿಯಲ್ಲಿ ತಾನು,ತನ್ನದು ಎಂಬ ಸ್ವಾರ್ಥವೇ ಮುಖ್ಯವಾಗಿ, ಆರ್ಟಿಫಿಶಿಯಲ್ ಆದ ಹಸಿರಿನ ವ್ಯವಸ್ಥೆ, ಹೂ ಕುಂಡದಲ್ಲಿ ಸಸಿ ಊರಿ ನಿರ್ಮಿಸಿ, ಅದನ್ನೇ ನೆಲದ ಮರಗಳಾಗಿ ಕಾಣುವ ಅವಸ್ಥೆ ಇದು. ಕವಿ ರೂಪಕವಾಗಿ,’ತಾನು ತನ್ನದು ಎಂಬ ಸಸಿ’ ಎನ್ನುತ್ತಾರೆ!. ತುದಿಹಂತದಲ್ಲಿ ಅಂತ ಕವಿ ಸೂಕ್ಷ್ಮವಾಗಿ ಹೇಳುವುದೇನು?. ಇಂತಹ ಬೆಳವಣಿಗೆಗೆ ಅಂತ್ಯವಿದೆ. ಇಂತಹ ಬೆಳವಣಿಗೆ ಕೊನೆಯಾಗುವುದು,ತಾನು ಮತ್ತು ತನ್ನದು ಎಂಬ “ಸಿಂಗ್ಯುಲಾರಿಟಿ” ಯಲ್ಲಿ ಎಂದೇ? “ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು.” ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಗಗನ ಚುಂಬಿ ಎತ್ತರಕ್ಕೆ ಏರಿದರೂ ಆ ಹತ್ತಿದ ದಾರಿ ಮರೆತು, ಯಾಂತ್ರೀಕೃತ, ಯಾಂತ್ರಿಕ ಬದುಕಿಗೆ ಮನುಷ್ಯ ಒಗ್ಗಿಕೊಳ್ಳುವ, ಒಪ್ಪಿಸಿಕೊಳ್ಳುವ, ಅವಸ್ಥೆಯ ಚಿತ್ರಣ. ಕಾಂಚಾಣದೇಕಾಂತ! ಇದಕ್ಕೆ ವಿವರಣೆ ಬೇಕೇ?! “ಅರಿವಿರದ ಯಾವುದೋ ಬಂದು ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ.” ಈ ಪ್ಯಾರಾ ಓದುವಾಗ, ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ನ ಗಗನಚುಂಬಿ ಅವಳಿ ಟವರ್ ಮೇಲೆ ಆದ ಅಟ್ಯಾಕ್ ನ ನೆನಪು ಬರುತ್ತೆ. ಗಗನಚುಂಬಿ ಕಟ್ಟಡ ಅದರ ಎತ್ತರದಲ್ಲಿ ಏರಿ ವಾಸವಾದವರು ಒಪ್ಪಲಿ ಬಿಡಲಿ, ಅದು ನಿಂತಿರುವುದಂತೂ ನೆಲದ ಮೇಲೆ. ಅರಿವಿರದ ಯಾವುದೇ ಹೊಡೆತಕ್ಕೆ, ಕಟ್ಟಡ ತುದಿಯಲುಗಿ ಕುಸಿಯುತ್ತೆ. ಈ ಅರಿವಿರದ ಹೊಡೆತ, ಭೂಕಂಪವೂ ಆಗಬಹುದು. ಕುಸಿಯುವುದೂ ಒಂದು ಕ್ರಾಂತಿಯೇ. ಆ ಹಠಾತ್ ಬದಲಾವಣೆಯ
ಅಂಕಣ ಬರಹ ಕಬ್ಬಿಗರ ಅಬ್ಬಿ–12 ಬಸರೀಕಟ್ಟೆ ಮತ್ತು ಬೂದಿಕಟ್ಟೆ ನಡುವಿನ ಈ ವಿಸ್ಮಯ ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ. ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, ಹೊಸ ಗಮ್ಯದತ್ತ ಗಮನ. ಐದಡಿ ಎತ್ತರದ ಆ ಯುವಕ ಬರೇ ತನ್ನ ಹೊರೆ ಮಾತ್ರವಲ್ಲ, ತನಗೆ ಸಂಬಳ ಕೊಡುವ ಒಡೆಯನದ್ದೂ, ಪಾತ್ರೆ ಪಗಡಿ, ಆಹಾರ ಅಷ್ಟನ್ನೂ ಹೊತ್ತು ಇನ್ನೂ ಎತ್ತರಕ್ಕೆ, ಪರ್ವತದ ತುದಿಗೆ ಏರುವ ಕನಸು. ಇನ್ನೊಂದು ದಿನ ನಡೆದರೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಹತ್ತಿದ ಖ್ಯಾತಿ ಅವರಿಗೆ. ರಾತ್ರಿಯಿಡೀ ಗೌರೀ ಶಂಕರ ಶಿಖರದ ಕನಸು. ಬಾಲ್ಯದಲ್ಲಿ ಅಮ್ಮ ಕಂಡ ಕನಸಿನ ನೆನಪು. ಹೌದು ! ಆತನ ಹೆಸರು ತೇನ್ ಸಿಂಗ್ ! ತೇನ್ ಸಿಂಗ್ ನೋರ್ಗೆ. ವಾತಾವರಣ ವಿಪರೀತವಾದರೆ ಹತ್ತಲೂ ಕಷ್ಟ,ಇಳಿಯಲೂ ಕಷ್ಟ. ಆದರೆ ಆ ಬೆಳಗ್ಗೆ ಆಕಾಶ ಶುಭ್ರವಾಗಿತ್ತು. ನೀಲಾಕಾಶ ಕೊಡುವ ಹುರುಪು ಜಗತ್ತಿನ ಇನ್ನಾವುದೂ ಕೊಡದು. ಶುದ್ಧವಾದ ಹಿಮಗಡ್ಡೆ ಕರಗಿಸಿ,ಚಹಾ ಮಾಡಿ ಒಡೆಯ ಎಡ್ಮಂಡ್ ಹಿಲರಿಗೆ ಬ್ರೆಡ್ ಜತೆಗೆ ಕುಡಿಸಿ, ತಾನೂ ಸೇವಿಸಿ, ಪುನಃ ಒಂದೊಂದಾಗಿ ಹೆಜ್ಜೆಯಿಡುತ್ತಾ ಸಾಗಬೇಕು. ಆಕ್ಸೀಜನ್ ನ ಕೊರತೆಯಿಂದ ಅರ್ಧ ಹೆಜ್ಜೆಗೇ ಏದುಸಿರು ಬರುತ್ತೆ. ಮಧ್ಯಾಹ್ನದ ಹೊತ್ತಿಗೆ ಒಂದು ಎತ್ತರದ ಹಿಮದ ಕೋಡುಗಲ್ಲು ಶಿಖರದ ತುದಿಗೆ ಅಡ್ಡವಾಗಿ. ತೇನ್ ಸಿಂಗ್ ಕೊಡಲಿಯಿಂದ ಅದರಲ್ಲಿ ಮೆಟ್ಟಿಲು ಕಡಿಯುತ್ತಾನೆ. ಕೊನೆಯ ಒಂದಾಳೆತ್ತರದ ಏರು ಮೆಟ್ಟಿಲು ಕಡಿಯಲಾಗದಷ್ಟು ಕಡಿದಾಗಿತ್ತು . ತೇನ್ ಸಿಂಗ್, ತನ್ನ ಭುಜವನ್ನೇ ಮೆಟ್ಟಿಲಾಗಿಸಿ ನಿಲ್ಲುತ್ತಾನೆ. ಹಿಲರಿ ಹೆಗಲಿಗೆ ಪಾದ ಇಟ್ಟು ಮೇಲೆ ಹತ್ತಿ ಕೇಕೇ ಹಾಕುತ್ತಾನೆ. ತೇನ್ ಸಿಂಗ್ ನನ್ನು ಕೈ ಹಿಡಿದು ಮೇಲೆ ಹತ್ತಲು ಸಹಾಯ ಮಾಡುತ್ತಾನೆ. ಅದುವರೆಗೆ ಯಾರೂ ಮಾಡದ ಸಾಹಸ ಅವರಿಬ್ಬರೂ ಮಾಡಿದ್ದರು! ಅದು ತುದಿಯ ತುದಿ. ಜಗತ್ತಿನ ಸಹಸ್ರಾರ ಚಕ್ರ. ನಂಬಲಾಗದ ಸಾಧನೆಯ ಶಿಖರ ಏರಿದ ಕ್ಷಣವದು. ತೇನ್ ಸಿಂಗ್ ನ ಮೊದಲ ಪ್ರಯತ್ನವೇ ಅದು?. ಅಲ್ಲ. ಅದು ಆತನ ಹನ್ನೊಂದನೇ ಪ್ರಯತ್ನ. ಯಾಕೆ ಮನುಷ್ಯ ಹೀಗೇ ಸೋತು,ಪುನಃ ಸೋತು, ಮತ್ತೆ ಸೋತು,ಛಲ ಬಿಡದೆ ಪ್ರಯತ್ನ ಮಾಡುತ್ತಾನೆ?. ಬದುಕಲ್ಲಿ ಏನಿದೆ? ಬದುಕು ಎಂದರೆ ಏನು?. ಆ ರಾಜಕುಮಾರರು ಇಬ್ಬರೂ ಹಲವು ದಿನಗಳ ಕಾಲ ಕಾದಿದರು, ಇಬ್ಬರೂ ಭರತ ಭೂಖಂಡ ಕಂಡ ಅತ್ಯಂತ ಶಕ್ತಿಶಾಲಿ, ನಿಪುಣ ಯೋಧರು. ಮಲ್ಲ ಯುದ್ಧದಿಂದ ಹಿಡಿದು, ದೃಷ್ಟಿ ಯುದ್ಧದ ವರೆಗೆ. ದಿನಗಳು ತಿಂಗಳುಗಳು ಕಳೆದವು. ಯುದ್ಧ ಮುಗಿದಾಗ, ಬಾಹುಬಲಿ ಎಲ್ಲಾ ಯುದ್ಧದಲ್ಲೂ ಗೆದ್ದಿದ್ದ. ಅಣ್ಣ ಭರತ,ಸೋತಿದ್ದ. ಇನ್ನೇನು ಸಿಂಹಾಸನದಲ್ಲಿ ಕೂರಬೇಕು ಅನ್ನುವಾಗ,ಆತ ಕೊನೆಯದೊಂದು ಯುದ್ಧ ಮಾಡಿದ. ಆ ಯುದ್ಧ ತನ್ನೊಳಗಿನ ಯುದ್ದ. ಅದರಲ್ಲಿ ಆತ ಗೆದ್ದು, ತನ್ನ ರಾಜ ಪೋಷಾಕು,ಕಿರೀಟಗಳನ್ನು ಕಳಚಿ ರಾಜಮಹಲಿನಿಂದ ಗೋಮಟನಾಗಿ ಹೊರನಡೆದ. ಆತನನ್ನು ಗೋಮಟೇಶ್ವರ ಅಂತ ಕರೆದರು. ಆತ ಇಂದಿಗೂ ಲಕ್ಷ ಮನಸ್ಸುಗಳ ರಾಜ್ಯವನ್ನು ಆಳುತ್ತಾನೆ! ಯಾಕೆ ನಡೆದ ಹೀಗೆ?. ಬದುಕು ಎಂದರೆ ಹೀಗಾ? ರಾಮೇಶ್ವರದ ಜಲಾಲುದ್ದೀನ್ ನ ಮಗ ಅಬ್ದುಲ್ ಕಲಾಂ, ಕಠಿಣ ಪರಿಶ್ರಮ ಮಾಡಿ, ಎಂಜಿನಿಯರ್ ಆಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದಾಗ, ಅಮ್ಮ ಕರೆದು ಹೇಳುತ್ತಾರೆ, “ಮಗನೇ, ನಿನಗೆ ಮದುವೆ ಮಾಡೋಣವೇ?” ಕಲಾಂ,ಒಪ್ಪದೇ,ವಿಜ್ಞಾನ ಮತ್ತು ಸಂಶೋಧನೆಗೆ ಜೀವನವನ್ನು ಅರ್ಪಿಸುತ್ತಾರೆ. ಇದು ಬದುಕಿನ ಯಾವ ಆಯಾಮ?. ಅದು ಎಪ್ರಿಲ್ ತಿಂಗಳು. ಕಾರ್ಗಿಲ್ ಶಿಖರಗಳ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ಡೇರೆ ಹೊಡೆದು ಗನ್ ಹಿಡಿದು ನಿಂತ ಹೊತ್ತು, ಕರ್ನಾಟಕದ ವೀರ ಯೋಧ, ಮೇಜರ್ ಅಶೋಕ್, ಹುಟ್ಟೂರಿನಿಂದ ೩೦೦೦ ಕಿಲೋಮೀಟರ್ ದೂರ ತನ್ನ ಸೈನಿಕ ಟುಕಡಿಯ ಜತೆಗೆ ಅಂತಹ ಒಂದು ಶಿಖರವನ್ನು ಹತ್ತುವ ಸಾಹಸ ಮಾಡುತ್ತಾರೆ. ಸೇನೆಯಲ್ಲಿ ಒಂದು ನಿಯಮವಿದೆ. ತಂಡವನ್ನು ಮುನ್ನಡೆಸುವಾಗ, ನಾಯಕ ಮುಂಚೂಣಿಯಲ್ಲಿರಬೇಕು. ಹಾಗೆಯೇ ಮೇಜರ್ ಅಶೋಕ್ ಮುಂದೆ,ಸಿಪಾಯಿಗಳು ಹಿಂದೆ, ಶಿಖರದ ಕಲ್ಲು ಬಂಡೆಗಳನ್ನು ಏರುವಾಗ,ಪಾಕಿಸ್ತಾನದ ಸೈನಿಕರ ಕಣ್ಣು ತಪ್ಪಿಸಿ ಏರ ಬೇಕು. ಅದೂ ರಾತ್ರೆಯ ಕತ್ತಲಲ್ಲಿ. ನಾವೆಲ್ಲಾ, ಎ.ಸಿ. ರೂಂ ನಲ್ಲಿ ಬೆಚ್ಚಗೆ ನಿದ್ರಿಸುವಾಗ, ಅಶೋಕ್, ಕಲ್ಲುಗಳ ತರಚುಗಾಯದಿಂದ ಸೋರುವ ನೆತ್ತರು, ಲೆಕ್ಕಿಸದೆ ಎದೆಯೂರಿ, ಹಲ್ಲಿಯಂತೆ ಪರ್ವತದ ಎಲ್ಲೆಗೆ ಕಚ್ಚಿಹಿಡಿದ ಹಲ್ಲಿಯಂತೆ ಹತ್ತಿದರು. ಮೇಲೇರಿ, ಮುಖಕ್ಕೆ ಮುಖ ಕೊಟ್ಟ ಯುದ್ಧದಲ್ಲಿ ತನ್ನ ತಂಡದ ಹಲವು ಸೈನಿಕರನ್ನು ಕಳೆದು ಕೊಂಡರೂ ಧೈರ್ಯದಿಂದ ಕಾದಿ, ವೈರಿ ಸೈನಿಕರನ್ನು ಸದೆಬಡಿದು ಭಾರತದ ಪತಾಕೆಯನ್ನು ಹಾರಿಸುತ್ತಾರೆ. ಬದುಕು ಹೀಗಿರಬೇಕು ಎಂಬ ವಜ್ರಕಠೋರ ಸಂಕಲ್ಪದ ಬದುಕು ಅದು. ದೇಶ ಮತ್ತು ದೇಶದ ಪ್ರಜೆಗಳಾದ ನಮ್ಮ ನಿಮ್ಮ ರಕ್ಷಣೆಗೋಸುಗ ತನ್ನ ಪ್ರಾಣ ತ್ಯಾಗ ಮಾಡುವ ಅತ್ಯಂತ ಕಠಿಣ ನಿರ್ಧಾರದ ಬದುಕು. ಹಾಗಿದ್ದರೆ ಬದುಕಿನ ವ್ಯಾಖ್ಯೆ ಏನು?. ಬೇಂದ್ರೆ ಅವರು ಬದುಕು ಮಾಯೆಯ ಮಾಟ ಅಂತ ಹೀಗೆ ಬರೀತಾರೆ. “ಬದುಕು ಮಾಯೆಯ ಮಾಟ ಮಾತು ನೊರೆ-ತೆರೆಯಾಟ ಜೀವ ಮೌನದ ತುಂಬ ಗುಂಬ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು” ಕವಯಿತ್ರಿ ವಿಜಯಲಕ್ಷ್ಮಿ ಅವರ ಕವಿತೆ ಬದುಕಿನ ಇಂತಹ ಗಹನ ವಿಷಯದತ್ತ ತೆರೆಯುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತೆ. *** *** **** ಬದುಕು ಕಲೆ ಬದುಕೇ ಒಂದು ಪಾಠ. ಬದುಕುವುದೇ ಒಂದು ಕಲೆ. ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಓದಿ ಕಲಿಯುವ ಕಲೆಯೇ…. ಬದುಕು? ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು. ಬದುಕುತ್ತಾ ಹೋದಂತೆ ಬದುಕುವುದ ಕಳಿಸುವುದು ಬದುಕು ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕು ವುದ ಕಲಿಸುವುದು ಬದುಕು . ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು. ಓದಿ ಕಲಿಯುವ ಕಲೆಯೇ..ಬದುಕು? ** *** *** ನಿತ್ಯಸತ್ಯದ ಪಾಠವೇ ಬದುಕು ಎನ್ನುವಾಗ, ಕ್ಷಣಕ್ಷಣಗಳೂ ಅನುಭವ ಮೇಷ್ಟ್ರಾಗಿ, ಕಲಿಸುತ್ತವೆ. ಬದುಕುವುದು ಕಲೆ ಎನ್ನುವಾಗ, ಮನುಷ್ಯನ ಕ್ರಿಯೇಟಿವಿಟಿ ಮತ್ತು ರಾಚನಿಕ ಸೌಂದರ್ಯದತ್ತ ಮನಸ್ಸು ಕೇಂದ್ರಿಸುತ್ತೆ. ‘ಬದುಕುತ್ತಾ ಹೋದಂತೆ ಬದುಕ ಕಲಿಸುವುದು ಬದುಕು’ ! ಬದುಕು ಅನುಭವವೂ ಹೌದು, ಆ ಅನುಭವ ಭವಿಷ್ಯದ ದಾರಿದೀಪವೂ ಹೌದು.ವರ್ತಮಾನದಲ್ಲಿ ನಿಂತಾಗ, ಭೂತಕಾಲದ ಬದುಕು ಜ್ಞಾನ, ಭವಿಷ್ಯಕಾಲಕ್ಕೆ ಅದೇ ದಿಗ್ದರ್ಶಕ. ವಿಜಯಲಕ್ಷ್ಮಿ ಅವರ ಈ ಕವಿತೆ ಒಂದು ತತ್ವ ಪದದಂತಹ ಕವಿತೆ. ತತ್ವಶಾಸ್ತ್ರದ ಬಿಂದುಗಳನ್ನು ಒಂದೊಂದಾಗಿ ಅಳುವ ಮಗುವಿನ ನಾಲಿಗೆಗೆ ಹಚ್ಚುವ ಜೇನಿನಂತೆ ಹೇಳ್ತಾ ಹೋಗುತ್ತಾರೆ. ಓದಿ ಕಲಿಯುವ ಕಲೆಯೇ ಬದುಕು? ಎಂಬುದು ಪ್ರಶ್ನೆ ಅಂತ ಅನಿಸುವುದಿಲ್ಲ. ಅದು ಕವಯಿತ್ರಿಯ ಧೃಡವಾದ ನುಡಿ. “ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “ “ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ.” ( ಶಿವರಾಮ ಕಾರಂತ) ಹೀಗೆ, ಬದುಕಿನ ಬಗ್ಗೆ ಶಿವರಾಮ ಕಾರಂತರು ಹೇಳುವ ಮಾತೂ ಈ ಕವಿತೆಯ ಆಶಯಕ್ಕೆ ಪೂರಕ. “ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು “ ನಡೆ, ಓಡು, ಜಿಗಿ, ಹಾರು, ಇವುಗಳೆಲ್ಲ ಕ್ರೊನೊಲಾಜಿಕಲ್ ಕ್ರಿಯೆಗಳು. ಒಂದರ ಕಲಿಕೆ ನಂತರದ್ದಕ್ಕೆ ಆವಶ್ಯಕ. ಮೊದಲ ಪ್ಯಾರಾದ ಬದುಕು ಕಲಿಸುವ ಬದುಕು ಎಂಬ ಕಲಿಕೆಯ ನಿರಂತರತೆಯನ್ನು ಇಲ್ಲಿ ಉದಾಹರಣೆ ಕೊಟ್ಟು ಪಾಠ ಮಾಡಿದ್ದಾರೆ, ಕವಯಿತ್ರಿ ಟೀಚರ್. ಗೋಪಾಲಕೃಷ್ಣ ಅಡಿಗರು ತಮ್ಮ ‘ಯಾವ ಮೋಹನ ಮುರಳಿ ಕರೆಯಿತೋ’ ಕವಿತೆಯ ಪ್ರಸಿದ್ಧ ಸಾಲುಗಳಿವು ” ವಿವಶವಾಯಿತು ಪ್ರಾಣ; ಹಾ ಪರವಶವು ನಿನ್ನೀ ಚೇತನ; ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” ಮನುಷ್ಯ ಪ್ರಜ್ಞೆಗೆ a exploration ಅನ್ನುವುದು ಮೂಲಸ್ವಭಾವ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’ ಅನ್ನುವಾಗ ಬದುಕಿನ ದಿಶೆ ನಿರ್ಧರಿಸುವ ಚಾಲಕಶಕ್ತಿಯನ್ನು ಅವರು ದರ್ಶಿಸುತ್ತಾರೆ. ಪುನಃ ಕವಿತೆಗೆ ಬರೋಣ. ” ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು”. ದಿಶೆ ಮತ್ತು ಗುರಿಯನ್ನೂ ದಾರಿಯಲ್ಲಿ ತಂದಿರಿಸುವಾಗ, ಅನುಭವದ ಜತೆಗೇ ವ್ಯವಸ್ಥಿತ ಚಿಂತನೆ ಮತ್ತು ಪ್ಲಾನಿಂಗ್, ಭವಿಷ್ಯದತ್ತ ಮನಸ್ಸಿನ ಪ್ರೊಜೆಕ್ಷನ್ ಗಳ ಜತೆಯಾಟ ಕಾಣುತ್ತೇವೆ. ಮನುಷ್ಯನ ಯುನಿಕ್ ಸಾಮರ್ಥ್ಯ ಇದು. ಬದುಕು ಕಲಿಸುವ ಬದುಕಿನಲ್ಲಿ, ಸಮಯಪ್ರಜ್ಞೆಯಿಂದ ಬದುಕಿನ ಭವಿಷ್ಯದ ಪ್ರತೀ ಹೆಜ್ಜೆಯನ್ನೂ, ಭೂತಕಾಲದ ಹೆಜ್ಜೆಗಳು ಅನಾವರಣಗೊಳಿಸಿದ ಅರಿವಿನ ಮಾರ್ಗದರ್ಶನದಲ್ಲಿ ಇಡಬೇಕೆಂಬ ಈ ಸಾಲುಗಳನ್ನು ಗಮನಿಸಿ ” ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು “ ಕ್ಷಣ ಕ್ಷಣವೂ ಅರಿವನ್ನು ಎಚ್ಚರದಲ್ಲಿ ಇರಿಸಬೇಕು ( being aware every moment) ಅಂತಲೂ ಭಾವವಿದೆ. ” ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು” ಕರ್ಮ ಯೋಗದ ಪ್ರಕಾರ, ನಿಷ್ಕಾಮ ಕರ್ಮವೂ ಮೋಕ್ಷ ಸಾಧನ ಅನ್ನುತ್ತಾನೆ ಕೃಷ್ಣ. ಸಾಮಾನ್ಯವಾಗಿ ನೋಡಿದರೆ, ದೇಹ,ಕೆಲಸ ಮಾಡುತ್ತಾ ಕಲಿಯುತ್ತೆ. ಜಡತ್ವದಿಂದ ದೇಹ ಹೊರಬರಲು ಸದಾ ದೇಹವನ್ನು ಕ್ರಿಯಾಶೀಲ ವಾಗಿರಿಸುವುದು ಅಗತ್ಯ ಅನ್ನುವ ಧ್ವನಿ ಕವಿತೆಯದ್ದು. ಮೋಹಕ್ಕೆ ಭಕ್ತಿಯ ಅಲೆ ಅನ್ನುತ್ತಾ ಕವಯಿತ್ರಿ, . ಮೋಹ ಒಂದು ದ್ರವದ ಹಾಗೆ. ಸ್ವತಂತ್ರವಾಗಿ ಬಿಟ್ಟರೆ ದಿಕ್ಕು ದೆಸೆಯಿಲ್ಲದೆ ಹರಿಯುತ್ತೆ. ಅನಿಯಂತ್ರಿತವಾಗಿ ಹರಿಯುತ್ತೆ. ಮೋಹವನ್ನು ಭಕ್ತಿಯಾಗಿ ಚಾನಲೈಸ್ ಮಾಡಿದರೆ ಅದು ಏಕಮುಖಿಯಾಗಿ ಪಾಠ ಕಲಿಸುತ್ತೆ ಅನ್ಸುತ್ತೆ. “ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು “ ಪ್ರೀತಿ, ಬದುಕಿನ ಪುಟಗಳಿಗೆ ಬಣ್ಣ ತುಂಬಿದರೆ, ಜಿದ್ದು, ಸೋಲಿನಿಂದ ಪುನಃ ಪ್ರಯತ್ನದತ್ತ ಗುರುವಾಗುತ್ತೆ. ಹಿತ್ತಲ ಗಿಡದಲ್ಲೂ ಮದ್ದು ಹುಡುಕುವ ಸಂಶೋಧನಾ ಮನೋಭಾವ ಬದುಕಿನ ಬಹುಮುಖ್ಯ ಮೇಷ್ಟ್ರು. ತತ್ವ ಶಾಸ್ತ್ರ ಅಧ್ಯಾತ್ಮ ದಲ್ಲಿ ಕೊನೆಯಾಗುವ ಮುಂದಿನ ಸಾಲುಗಳನ್ನು ನೋಡಿ ” ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು” ದೇಹ,ಬದುಕು ನಶ್ವರ, ಈಶ್ವರ ಜ್ಞಾನವೇ
ಕಬ್ಬಿಗರ ಅಬ್ಬಿ ೧೧. ಹಸಿವಿನಿಂದ ಹಸಿರಿನತ್ತ ಹಸಿವಿನಿಂದ ಹಸಿರಿನತ್ತ “Generations to come will scarce believe that such a one as this ever in flesh and blood walked upon this earth” .(Albert Einstein, About Mahatma Gandhi) ” ಮುಂದಿನ ಪೀಳಿಗೆಯ ಮಕ್ಕಳು ಆಶ್ಚರ್ಯ ಪಡುವ ದಿನ ಬರಲಿದೆ, ಇಂತಹಾ ಮನುಷ್ಯ ದೇಹ, ಈ ಭೂಮಿಯ ಮೇಲೆ ನಡೆದಾಡಿರಬಹುದೇ?” ( ಆಲ್ಬರ್ಟ್ ಐನ್ ಸ್ಟೈನ್ ,ಮಹಾತ್ಮಾ ಗಾಂಧಿ ಅವರ ಕುರಿತು). ಅಹಿಂಸಾ ಸತ್ಯಾಗ್ರಹದ ಮೂಲಕ ಗಾಂಧೀಜಿ ಅವರ ಹೋರಾಟದಿಂದ ಪ್ರೇರಣೆ ಪಡೆದು, ಐನ್‍ಸ್ಟೈನ್ ಮೇಲಿನ ಮಾತುಗಳನ್ನು ಹೇಳಿದ್ದು ಕಳೆದ ಶತಮಾನದ ಮಧ್ಯಭಾಗದಲ್ಲಿ. ವಿಪರ್ಯಾಸವೆಂದರೆ, ಜಪಾನ್ ನ ಮೇಲೆ ಅಮೆರಿಕಾ ಸುರಿದ ಅಣು ಬಾಂಬ್ ತಯಾರಿಸಿದ ವಿಜ್ಞಾನಿಗಳ ತಂಡದಲ್ಲಿ ಐನ್‍ಸ್ಟೈನ್ ಮುಖ್ಯ ವಿಜ್ಞಾನಿಗಳಾಗಿದ್ದರು!. ಅಣು ಬಾಂಬ್ ನಿಂದ ಮನುಷ್ಯ ಮನುಷ್ಯನನ್ನೇ ನಾಶಮಾಡುವ ಕ್ರೌರ್ಯವನ್ನು ನೋಡಿ ಜಗತ್ತಿನ ಎದೆಯೇ ನಡುಗಿತ್ತು. ನಮ್ಮದೊಂದು ತತ್ವವಿತ್ತು, ನೆನಪಿದೆಯೇ! “ವಸುಧೈವ ಕುಟುಂಬಕಂ” ಅಂತ. ಕುವೆಂಪು ಅವರ ಕನಸು ‘ವಿಶ್ವ ಮಾನವ’ ಇದಕ್ಕಿಂತ ಬೇರೆಯಲ್ಲ. ಆದರೆ ಕಳೆದ ಶತಮಾನದ ಪ್ರತಿಯೊಂದು ಹೆಜ್ಜೆಯ ಮಾನವ ಸಂಕುಲದ ಇತಿಹಾಸ ರಕ್ತಸಿಕ್ತ. ಭೂಮಿ ಮತ್ತದರ ವಾತಾವರಣದ ಹೊದಿಕೆಯೊಳಗೆ ೭೦೦ ಕೋಟಿ ಮನುಷ್ಯರು ಮತ್ತು ಅದಕ್ಕಿಂತ ಲಕ್ಷ ಪಟ್ಟು ಜಾಸ್ತಿ ಜೀವಸಂಕುಲಗಳು ಒಂದೇ ಬಾನನ್ನು ಹಂಚಿ ಬದುಕುತ್ತಿದ್ದೇವೆ. ಈ ಬಯೋ ಡೈವರ್ಸಿಟಿಯೊಳಗೆ ಒಂದು ಸೂಕ್ಷ್ಮ ಸಮತೋಲನ ಇದೆ. ಹಾಗೆಯೇ, ವಾತಾವರಣದಲ್ಲಿ ಮೋಡ,ಗಾಳಿ, ಭೂಮಿಯೊಳಗೆ ಒತ್ತಡ, ಭೂಕಂಪನದ ಅಲೆಗಳು, ಸಾಗರದೊಳಗೆ ನೀರಿನ ಪ್ರವಾಹಗಳು, ಭೂಮಿ,ಚಂದ್ರ, ಸೂರ್ಯಾದಿಗಳ ಚಲನೆಯ ನಿರ್ದಿಷ್ಟ ತತ್ವಗಳು, ಎಲ್ಲ ಚಲನಶೀಲತೆಯಲ್ಲಿಯೂ ಅದರಷ್ಟಕ್ಕೇ ಹದ ಹುಡುಕಿ ಸಮೀಕೃತವಾಗಿವೆ. ಇಂತಹಾ ಸಂದರ್ಭದಲ್ಲಿ ಮನುಷ್ಯ, ತನ್ನ ಆಧಿಪತ್ಯದ ಅಮಲಿನಲ್ಲಿ ನಡೆಸುವ ವೈಪರೀತ್ಯಗಳು, ಒಟ್ಟೂ ಸಮತೋಲನವನ್ನು ಹೇಗೆ ಸ್ಥಾನಪಲ್ಲಟ ಮಾಡುತ್ತೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ. ಇಂದಿನ ಅಂಕಣದಲ್ಲಿ ಮನುಷ್ಯ ಮತ್ತು ಪ್ರಾಣಿ ಸಸ್ಯ ಸಂಕುಲಗಳ ನಡುವೆ, ಹಾಗೂ ಮನುಷ್ಯ ಮನುಷ್ಯನ ನಡುವೆ ಮತ್ತು ಮನುಷ್ಯನ ಮನಸ್ಸೊಳಗಿನ ಹಲವು ಧ್ರುವಗಳ ನಡುವಿನ ತಿಕ್ಕಾಟ ದ ಬಗ್ಗೆ ಅವಲೋಕನದ ಪ್ರಯತ್ನ ಮಾಡುವೆ. ಅಮೆರಿಕಾದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಾನು ಸಂಶೋಧನೆ ಮಾಡಲು ಹೋಗಿದ್ದಾಗ, ಓರ್ವ ಚೀನೀ ಸಂಶೋಧಕ ನನ್ನ ಲ್ಯಾಬ್ ಮೇಟ್ ಆಗಿದ್ದ. ಆತನ ಹತ್ತಿರ ಒಂದು ಟಿನ್ ತುಂಬಾ ಅರೆ ಒಣಗಿಸಿದ ಮಾಂಸದ ಹಸಿ ತುಣುಕುಗಳು. ಹಸಿವಾದಾಗ ಆ ತುಣುಕುಗಳನ್ನು ಅತ ಜಗಿದು ತುಂಬಾ ರಸಭರಿತವಾಗಿದೆ ಅಂತ ಚಪ್ಪರಿಸುತ್ತಿದ್ದ. ಅದು ಅವರಿಗೆಲ್ಲಾ ಸಾಮಾನ್ಯವೇ ಆಗಿತ್ತು. ವಿವೇಚನೆಯಿಲ್ಲದೆ ಸೃಷ್ಟಿಯಲ್ಲಿರುವ ಇನ್ನೊಂದು ಜೀವಿಯನ್ನು ತಿನ್ನುವುದು ಮನುಷ್ಯಸಹಜವೇ? ಎರಡನೆಯ ಉದಾಹರಣೆ ಇನ್ನೊಂದು ಆಯಾಮದ್ದು. ವ್ಯಾಪಾರೀ ಜಗತ್ತು ತನ್ನ ಉತ್ಪಾದನೆಯನ್ನು ಹೆಚ್ಚಿಸಲು, ಹಣ ಸಂಪಾದಿಸಲು, ಲಾಭ ಪಡೆಯಲು ನಡೆಸುವ ಅಮಾನವೀಯ ಕತೆ ಇದು. ಕೆಲವು ವರ್ಷಗಳ ಹಿಂದೆ mad cow disease ಎಂಬ ರೋಗ ಮನುಷ್ಯರಲ್ಲಿ ಹಬ್ಬಿತು. ಇದು ದನದ ಮಾಂಸ ತಿಂದವರಲ್ಲಿ ಕಾಣಿಸಿತ್ತು. ದನಕ್ಕೆ ಈ ರೋಗ ಎಲ್ಲಿಂದ ಬಂತು? ಎಂದು ಶೋಧಿಸಿದಾಗ ದನಕ್ಕೆ ತಿನ್ನಲು ಕೊಟ್ಟ ಕುರಿ ಮಾಂಸದಿಂದ ಬಂತು ಎಂದು ತಿಳಿಯಿತು. ಹೌದು, ನೀವು ಸರಿಯಾಗಿ ಓದಿದ್ದೀರಿ. ದನ ಹೆಚ್ಚು ಹಾಲು ಕೊಡಲು ಮತ್ತು ದನ ದಷ್ಟಪುಷ್ಟವಾಗಿ ಬೆಳೆದ ಮೇಲೆ ಅದರ ಮಾಂಸ ಮಾರುವಾಗ ಮಾಂಸದ ತೂಕ ಹೆಚ್ಚಾಗಲು, ಮಾತು ಬಾರದ ದನಕ್ಕೆ ಕುರಿ ಮಾಂಸ ತಿನಿಸಿದ ಮನುಷ್ಯರ ಹಣದ ಲಾಭದ ಆಸೆಗೆ ಏನು ಹೇಳೋಣ. ಇಂತಹ ಅನೈಸರ್ಗಿಕ ವಿಧಾನಗಳನ್ನು ಪ್ರಕೃತಿಯ ಮೇಲೆ ಹೇರಿದ ಮನುಷ್ಯನಿಗೆ ಮ್ಯಾಡ್ ಕೌ ಡಿಸೀಸ್ ಬಂದದ್ದಲ್ಲಿ ಆಶ್ಚರ್ಯವೇನು?. ಇನ್ನೊಂದು ಉದಾಹರಣೆ ಇತ್ತೀಚಿನದ್ದು. ಚೀನಾ ವುಹಾನ್ ನಲ್ಲಿ ದೇಶದ ಜೀವಂತ ಪ್ರಾಣಿಗಳ ಭಾರೀ ದೊಡ್ಡ ಮಾರ್ಕೆಟ್ ಇದೆ ಅಲ್ಲಿ. ಸಾವಿರಾರು ಕಾಡು ಪ್ರಾಣಿಗಳನ್ನು ಜೀವಂತ ಹಿಡಿದು ಪಂಜರ, ಗೂಡೊಳಗಿಟ್ಟು, ಮಾರುವ ಮಾರುಕಟ್ಟೆ, ಇದಕ್ಕೆ ಆಂಗ್ಲರು Wet market ಅಂತಾರೆ. ಅಂತಹ ನೂರಾರು ಮಾರ್ಕೆಟ್ ಚೀನಾದಲ್ಲಿದೆ. ಅಲ್ಲಿನ ಬಾವಲಿಯಿಂದ ಮನುಷ್ಯನಿಗೆ, ಕೊರೊನಾ ವೈರಸ್ಸು ಬಂತು ಎಂಬುದು ಇದುವರೆಗೆ ಜಗತ್ತು ನಂಬಿದ ಸತ್ಯ. ಇವುಗಳು ಮನುಷ್ಯನಿಗೆ ತಿನ್ನಲೆಂದೇ ಸೃಷ್ಟಿಯಾದವು ಎಂಬಂತೆ, ಸಿಕ್ಕಿದ ಬಡ ಪ್ರಾಣಿಗಳನ್ನು, ಕಡಿದು ತಿಂದು ತೇಗಿದ್ದು ಮಾನವನ ಹೆಗ್ಗಳಿಕೆ. ಕಳೆದ ಒಂದು ವರ್ಷದಿಂದ ಜಗತ್ತಿನ ಮನುಷ್ಯ ಸಮಾಜವನ್ನು ಕಟ್ಟಿ ಹಾಕಿದ ಕೊರೊನಾ,ಬರಲು ಮನುಷ್ಯನ ಈ ಮನೋಭಾವ ಕಾರಣವಲ್ಲವೇ?. ಪ್ಯಾಂಟು, ಕೋಟು ತೊಟ್ಟು ಆಧುನಿಕ ನಾಗರಿಕತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಸಮಾಜದ, ಕ್ರೌರ್ಯವನ್ನು ನೋಡ ಬೇಕಾದರೆ ಕಸಾಯಿಖಾನೆಯಲ್ಲಿ ಪ್ರಾಣಿಗಳನ್ನು ಜೀವಂತ ತಲೆ ಕೆಳಗಾಗಿ ತೂಗು ಹಾಕಿ ನೇಲಿಸಿ ಚರ್ಮ ಸುಲಿಯುವ ( ಹೀಗೆ ಉತ್ಪಾದಿಸುವ ಮಾಂಸ ರುಚಿಕರವಂತೆ) ಉತ್ಪಾದನಾ ಲೈನ್ ಗಳನ್ನು ನೋಡಿಬಂದರೆ ಸಾಕು. ಅಂತಹ ಸಾವಿರಾರು ಉತ್ಪಾದನಾ ಘಟಕಗಳು ಭಾರತದಲ್ಲಿಯೂ ಇವೆ. ಪಂಚೆ ಕಚ್ಚೆ ಕಟ್ಟಿ ನೆಲದಲ್ಲಿ ಮಲಗಿ ಪ್ರಕೃತಿಯ ಜತೆಗೆ ಜೀವನ ನಡೆಸುವ ಹಳ್ಳೀ ಮಂದಿ ನಾಗರಿಕರೋ, ಮೇಲೆ ಹೇಳಿದ ಅಮಾನವೀಯ ಆಧುನಿಕರು ನಾಗರಿಕರೋ ಎಂಬ ಪ್ರಶ್ನೆ ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಕಾಡುತ್ತೆ. ಇಂತಹ ಅಮಾನವೀಯ ಕಾಲಘಟ್ಟದಲ್ಲಿ ನಿಂತು, ಕವಿ, ತನ್ನ ಸ್ಪಂದನೆಯನ್ನು ಹರಿಯಬಿಟ್ಟರೆ, ಬರುವ ಕವಿತೆ, ಕೆ. ವಿ. ತಿರುಮಲೇಶ್ ಅವರ “ನೂರು ಮಂದಿ ಮನುಷ್ಯರು” ನೂರು ಮಂದಿ ಮನುಷ್ಯರು ಒಮ್ಮೆ ನೂರು ಮಂದಿ ಮನುಷ್ಯರು ಆಸಿಕ್ಕಿಬಿದ್ದರು ಒಂದು ದ್ವೀಪದಲ್ಲಿ ಮೊದಲು ಅವರು ಅಲ್ಲಿನ ಸಸ್ಯಗಳನ್ನು ತಿಂದರು ನಂತರ ಅಲ್ಲಿನ ಪ್ರಾಣಿಗಳನ್ನು ಮುಗಿಸಿದರು ನಂತರ ತಮ್ಮಲ್ಲೊಬ್ಬರನ್ನು ವಾರಕ್ಕೊಂದರಂತೆ ತಿಂದರು ಕೊನೆಗುಳಿದವನು ಒಬ್ಬನೇ ಒಬ್ಬ ಅವನು ಮೊದಲು ತನ್ನ ಪಾದದ ಬೆರಳುಗಳನ್ನು ತಿಂದ ನಂತರ ಪಾದಗಳನ್ನು ತಿಂದ ನಂತರ ತನ್ನ ಕೈಬೆರಳುಗಳನ್ನು ತಿಂದ ನಂತರ ಕೈಗಳನ್ನು ತಿಂದ ನಂತರ ಕಿವಿ ಕಣ್ಣು ಮೂಗುಗಳನ್ನು ಒಂದೊಂದಾಗಿ ತಿಂದ ಕೊನೆಗೆ ತನ್ನ ತಲೆಯನ್ನೇ ತಿನ್ನತೊಡಗಿದ ಅರೇ! ಇದು ಹೇಗೆ ಸಾಧ್ಯ ಎಂದು ಕೇಳದಿರಿ ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ ಈಗ ಇಂಥಾ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ. ** *** ** ಇದರ ಶೀರ್ಷಿಕೆ “ನೂರು ಮಂದಿ ಮನುಷ್ಯರು” ಈ ಕವನ ಓದಿದ ನಂತರ, ನಿಮಗೇ ಪ್ರಶ್ನೆ ಹುಟ್ಟುತ್ತದೆ, ಇವರು ಮನುಷ್ಯರೇ?. ಶೀರ್ಷಿಕೆ ಹಾಗಿದ್ದರೆ ವಿಡಂಬನಾತ್ಮಕವೇ?. ತಿರುಮಲೇಶ್ ಅವರ ಎಲ್ಲಾ ಕವಿತೆಗಳ ಹಾಗೆಯೇ ಈ ಕವಿತೆಯೂ ಓದಲು ಸುಲಭ. ಓದುತ್ತಾ ಓದುತ್ತಾ ನಮ್ಮನ್ನು ಚಿಂತನೆಯ ಸುಳಿಗೆ ಸೆಳೆದು ತಿರು ತಿರುಗಿಸಿ ತಿಳಿಸಿ ಹೇಳುತ್ತೆ. ದಿನವಿಡೀ ಕಾಡುತ್ತೆ. ಕವಿತೆ ಬೆಳೆಯುತ್ತಾ ಹೋದಂತೆ ಪ್ರಶ್ನೆಗಳು ಉದ್ಭವವಾಗುತ್ತವೆ. ಉತ್ತರ ಹೇಳುವತ್ತ ಚಿತ್ತವಲ್ಲ, ಶಿಷ್ಟ ದಾರಿಯಿಂದ ವಿಶಿಷ್ಟ ಹಾದಿಗೆ ಹೊರಳಿಸುವ ಪ್ರಯತ್ನ. ಕವಿತೆಯುದ್ದಕ್ಕೂ ಒಂದು ಅತ್ಯಂತ ಕಾಮನ್ ಡಿನಾಮಿನೇಟರ್, ಹಸಿವು ಮತ್ತು ತಿನ್ನುವುದು. ಊಟ, ಲೈಂಗಿಕ ಕ್ರಿಯೆ ಮತ್ತು ನಿದ್ದೆ, ಇವು ಮೂರು, ದೇಹಕ್ಕೆ ಮಾತ್ರ ಸಂಬಂಧಿಸಿದ್ದು. ಇವು ಮನುಷ್ಯನ ಪ್ರಾಣಿ ಗುಣಗಳು. ತಿನ್ನುವ ಕ್ರಿಯೆಯಲ್ಲಿ ಹಸಿವಿಗೆ ದಾಸನಾದವ ಏನೂ ತಿನ್ನಬಲ್ಲ. ಪ್ರಾಣಿಗಳ ತಿನ್ನುವ ಕ್ರಿಯೆ, ಬದುಕುಳಿಯುವುದಕ್ಕಾಗಿ ಅತ್ಯಂತ ಅಗತ್ಯ. ಜೀವವುಳಿಸುವುದಕ್ಕಾಗಿ ಸಸ್ಯ, ಪ್ರಾಣಿ, ತನ್ನ ಸಹಚರರು, ಕೊನೆಗೆ ತನ್ನನ್ನೂ ತಿನ್ನುವುದರಲ್ಲಿ ಕವಿತೆ ಮುಗಿಯುತ್ತದೆ. ತನ್ನನ್ನೂ ತಿನ್ನುವ ಈ ಕವಿತೆಯ ಸಾಲುಗಳು ಫ್ಯಾಂಟಸಿಕಲ್ ಆಗಿರುವುದು ಕವಿತೆಯ ಆಶಯಕ್ಕೆ ರೂಪ ಕೊಡಲು ಮಾಡಿದ ಪ್ರಯತ್ನ. ಎರಡನೆಯ ಅಂಶ, ಮನುಷ್ಯನ ಆಕ್ರಮಣಕಾರಿ ಮನೋಭಾವ. ಆತ, ಮೊದಲು ಸಸ್ಯಗಳನ್ನು, ಆಮೇಲೆ ಪ್ರಾಣಿಗಳನ್ನು, ತಿನ್ನುತ್ತಾ ಮುಂದುವರೆಯುತ್ತಾನೆ. ಮನುಷ್ಯನ ಸ್ವಕೇಂದ್ರಿತ ಮನೋಭಾವ, ಮತ್ತು ತನ್ನದಲ್ಲದ ಎಲ್ಲವನ್ನೂ ಆಕ್ರಮಿಸುವ ಮತ್ತು ತನ್ನದಾಗಿಸುವುದನ್ನು ಈ ಸಾಲುಗಳು ಸೂಚಿಸುತ್ತವೆ. ತಿಂದ ಆಹಾರ ಸ್ವಂತದ ಜೀವಕೋಶಗಳಾಗುತ್ತವೆ. ಇಲ್ಲಿ expansionist ( ವಿಸ್ತಾರವಾದ) ಮನೋಭಾವದ ಛಾಯೆಯನ್ನು ಕಾಣಬಹುದು. ರಾಜ, ತನ್ನ ರಾಜ್ಯ ವಿಸ್ತಾರ ಮಾಡುತ್ತಾನೆ, ಇತರ ದೇಶಗಳನ್ನು ತನ್ನ ದೇಶದೊಳಗೆ ವಿಲೀನ ಮಾಡುತ್ತಾನೆ, ಕೊನೆಗೆ ಒಂದು ದೊಡ್ಡ ಸಾಮ್ರಾಜ್ಯ ಕಟ್ಟುತ್ತಾನೆ. ಆಮೇಲೆ ಆತನಿಗೆ ದಂಡೆತ್ತಿಹೋಗಲು ಬೇರೇನೂ ಉಳಿದಿಲ್ಲ. ಆಗ, ಆತ ತನ್ನ ಈ ಆಕ್ರಮಣಕಾರಿ ಮನೋಭಾವ ಬದಲಿಸದಿದ್ದರೆ, ತನ್ನೊಳಗೇ ಅಂತರ್ಯುದ್ಧ ಮಾಡುತ್ತಾನೆ. ತನ್ನ ತಲೆಯನ್ನೇ ತಿನ್ನತ್ತಾನೆ. ಮೂರನೆಯ ಅಂಶ, ಮನುಷ್ಯ ಮತ್ತು ಪ್ರಕೃತಿಗಳ ನಡುವಿನ, ಚಲನಶೀಲ ಸಂಘರ್ಷ. ಕವಿತೆಯ ಮೊದಲೆರಡು ಹಂತಗಳಲ್ಲಿ, ಸಸ್ಯವನ್ನೂ ಪ್ರಾಣಿಗಳನ್ನು ಮನುಷ್ಯ ತಿಂದು ಮುಗಿಸುತ್ತಾನೆ. ಮುಗಿಸುತ್ತಾನೆಯೇ? ಸಾಧ್ಯವೇ? ಕೊರೊನಾ ಅನುಭವದ ಬೆಳಕಿನಲ್ಲಿ ನೋಡಿದರೆ, ಮನುಷ್ಯ ಪ್ರಕೃತಿಯ ಮೇಲೆ ಹತೋಟಿ ಸಾಧಿಸಿದ ಎಂದರೆ ತಪ್ಪಾಗುತ್ತದೆ. ಅಲ್ಲವೇ. ಆ ಪ್ರಶ್ನೆ ಕವಿತೆಯಲ್ಲಿ ಮನುಷ್ಯನ attitude ನೋಡುವಾಗ ನಮ್ಮನ್ನು ಕಾಡುತ್ತೆ. ನನ್ನ ಮಟ್ಟಿಗೆ, ನಮಗೆ ಪರಿಹಾರ, ತೀರ್ಪು ಇತ್ಯಾದಿ ಕೊಡುವುದು ಕವಿತೆಯ ಉದ್ದೇಶ ಅಲ್ಲ. ನಮ್ಮೊಳಗಿನ ಸಂವೇದನೆಯನ್ನು ಎಬ್ಬಿಸಿ ಜಾಗೃತಗೊಳಿಸುವತ್ತ ಕಾವ್ಯದೃಷ್ಟಿ ಅನ್ಸುತ್ತೆ. ಮನುಷ್ಯನ ಹೊಸತನ್ನು ಅರಸುವ ಮನೋಭಾವ, ಆಕ್ರಮಣಕಾರೀ ಮನೋಭಾವವಾಗಿ ಪರಿವರ್ತನೆಗೊಂಡಾಗ, ಅಸಂಖ್ಯ ಜೀವ ಜಾಲಗಳ ನಡುವಿನ ಮತ್ತು ನಿರಜೀವ ಕಾಯಗಳೊಳಗಿನ ಡೈನಾಮಿಕ್ಸ್ ನ ಸೂಕ್ಷ್ಮ ತಂತುಗಳನ್ನು ಕತ್ತರಿಸಿ, ಬ್ರಹ್ಮಾಂಡದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನದ ಚಿತ್ರಣವಿದು. ಆದರೆ, ಓ ನನ್ನ ಚೇತನಾ, ಅನಂತದ ಒಡೆಯನಾಗುವ ಬದಲು ಅನಂತವೇ ತಾನಾಗುವ ಕನಸು ಕವಿಪ್ರಜ್ಞೆಯದ್ದು. ಕವಿತೆಯಲ್ಲಿ ಮನುಷ್ಯ ಮೊದಲು ಕಾಲಿನ ಬೆರಳುಗಳನ್ನು, ಕೊನೆಗೆ, ಮೂಗು ಕಿವಿ, ಕಣ್ಣು ತಿನ್ನುತ್ತಾನೆ. ಮೂಗು,ಕಿವಿ,ಕಣ್ಣು ಮನುಷ್ಯನ ಸಂವೇದನೆಯ ಇಂದ್ರಿಯಗಳು. ಮನುಷ್ಯ ಸಂವೇದನೆ ಕಳೆದು ಕೊಂಡಾಗ, ಕಣ್ಣಿದ್ದೂ ಕುರುಡ, ಕಿವಿಯಿದ್ದೂ ಕಿವುಡನಾಗುತ್ತಾನೆ. ಆತ ಎಷ್ಟು ಸ್ವಕೇಂದ್ರಿತನಾಗುತ್ತಾನೆ ಎಂದರೆ ಇತರರ ಸಮಸ್ಯೆಗೆ ಅಂಧನಾಗುತ್ತಾನೆ. ಕೊನೆಗೆ ಆತ ತನ್ನ ತಲೆಯನ್ನು ತಿನ್ನುತ್ತಾನೆ. ಅಂದರೆ, ತನ್ನ ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪರಿಸ್ಥಿತಿಗೆ ದಾಸನಾಗುತ್ತಾನೆ. ಕೊನೆಯದಾಗಿ, ಮೇಲಿನ ಕವನದ ನೂರು ಮನುಷ್ಯರು, ಒಂದು ವಿಭಾಗ. ಅದನ್ನು ಒಂದು ವರ್ಗ ಅಂತ ಇಟ್ಟುಕೊಳ್ಳೋಣ. ಆ ವರ್ಗವನ್ನು ಬಿಟ್ಟು ಉಳಿದವೆಲ್ಲಾ, ಇನ್ನೊಂದು ವರ್ಗ. ಈ ಎರಡೂ ವರ್ಗಗಳ ಸಂಘರ್ಷ, ಮೊದಲು. ಕಾರಣ ಅಸ್ಥಿತ್ವದ ಪ್ರಶ್ನೆ. ಒಮ್ಮೆ, ಹೊರಗಿನ ವರ್ಗ ಮತ್ತು ಸ್ವವರ್ಗದ ತಿಕ್ಕಾಟ ಮುಗಿದಾಗ, ಇರುವ ಒಂದೇ ವರ್ಗ ಒಡೆದು ಕಾದುತ್ತದೆ. ಹೀಗೇ ಸಂಘರ್ಷ ಮುಂದುವರೆದು ಉಳಿಯುವುದು ಒಬ್ಬ. ಆತ ತನ್ನೊಳಗೇ ತಿಕ್ಕಾಟ ನಡೆಸಿ ಕೊನೆಗೆ ತಲೆಯನ್ನೂ ತಿಂದು ಏನೂ ಉಳಿಯುವುದಿಲ್ಲ. ಅಂದರೆ ಸ್ವಕೇಂದ್ರಿತ ವರ್ಗ ಸಂಘರ್ಷದ ಕೊನೆ ಸರ್ವನಾಶವೇ?. ಈ ಕವಿತೆ ಕೊನೆಯಲ್ಲಿ ಕವಿ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸುವುದು ಹೀಗೆ. ” ಇದು ಹೇಗೆ ಸಾಧ್ಯ ಎಂದು ಕೇಳದಿರಿ ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ ಈಗ ಇಂಥಾ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ.” ನಿಯಂತ್ರಿತ, ವಿದ್ಯಮಾನ, ಅನಿಯಂತ್ರಿತ ವಿಸ್ಪೋಟವಾಗುವುದರ ನಡುವೆ ಇರುವ ಗೆರೆಯ ಅರಿವಿಲ್ಲದೆ, ಚಲನಶೀಲ ಜಗತ್ತಿನ ಸೂಕ್ಷ್ಮ ತೋಲನದ ಕಂಟ್ರೋಲ್ ಸಿಸ್ಟಮ್ ನ ಮೇಲೆ ಬೆರಳಾಡಿಸುವುದು, ವಿನಾಶದ ಕದ ತೆರೆದಂತೆ,ಅಲ್ಲವೇ. ಮೊನ್ನೆ ಜೈಪುರದ ಮರುಭೂಮಿ ಪ್ರದೇಶದಲ್ಲಿ ೧೭ ಸೆಂಟಿಮೀಟರ್ ಮಳೆ ಬಂತು. ಜೈಪುರದ ಬೀದಿಗಳಲ್ಲಿ ಬಂದ ಪ್ರವಾಹ ಹೊಳೆಯ ಥರಾ, ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ದೃಶ್ಯ ನೋಡಿದೆ. ಮರುಭೂಮಿಯಲ್ಲಿ ಇಷ್ಟೊಂದು ಮಳೆ ಇತಿಹಾಸದಲ್ಲಿ ದಾಖಲಾಗಿಲ್ಲ. ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ, ಕೇರಳದ ಮುನಾರ್ ನಲ್ಲಿ ಗುಡ್ಡಗಳು ಜಾರಿ ಚಹಾ
ಕಬ್ಬಿಗರ ಅಬ್ಬಿ -9 ಕನಸು ಕಲಿಸುವ ಕವಿತೆಗಳು ಆಫೀಸ್‌ನಲ್ಲಿ ದಿನವಿಡೀ ದುಡಿದು, ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿ ಮನೆಗೆ ಬಂದಾಗ, ಬಿಸಿ ಬಿಸಿ ಕಾಫಿಯ ಜತೆಗೆ ಭಾವ ಗೀತೆ ಕೇಳುತ್ತೇನೆ. ಕುದಿದು ಕೆನೆಗಟ್ಟಿದ ಮನಸ್ಸನ್ನು ತಣಿಸಿ, ತಂಪು ಐಸ್ ಕ್ರೀಂ ಮಾಡುವ ಶಕ್ತಿ ಈ ಕವಿತೆಗಳಿಗೆ. ಹಾಡು ಕೇಳುತ್ತಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಅಂತ ಸ್ಮೃತಿ ಪಟಲದಿಂದ ಅಕ್ಷಿಪಟಲಕ್ಕೆ ಚಿತ್ರಗಳು ಪ್ರೊಜೆಕ್ಟ್ ಆಗಿ, ಕನಸುಗಳಿಗೆ ರೆಕ್ಕೆ ಮೂಡುತ್ತವೆ. ಬದುಕಿನಲ್ಲಿ ವೈಫಲ್ಯಗಳು ಹಲವು. ಆದರೂ ನೂರರಲ್ಲಿ ತೊಂಭತ್ತೊಂಭತ್ತು ಮಂದಿ ವೈಫಲ್ಯವನ್ನು ಜಿಗಿಹಲಗೆ ಮಾಡಿ ಮುಂದಕ್ಕೆ ಚಿಮ್ಮಿ ಹಾರಲು ಪ್ರಯತ್ನ ಮಾಡುತ್ತಾರೆ. ಅಂತಹ ಒಂದು ಪ್ರಯತ್ನಕ್ಕೆ ಹುಮ್ಮಸ್ಸು ಕೊಡುವ ಶಕ್ತಿ ಹಾಡುಗಳಿಗಿವೆ. ಬೇಸರವಾದಾಗಲೂ ಖುಷಿಯಾದಾಗಲೂ ಮನಸ್ಸಿಗೆ ಸಮತೋಲನ, ಸಮೋಲ್ಲಾಸ ತರುವ ಮ್ಯಾಜಿಕ್ ಕವಿತೆಗಳು ಮಾಡಬಲ್ಲವು. ಕವಿತೆಗೆ ಗೇಯತೆ ಕೂಡಿದಾಗ ಅದು ಹಾಡಿನ ಸ್ಥಿತಿ ತಲಪುತ್ತದೆ. ತಕ್ಕಮಟ್ಟಿನ ಲಯಗಾರಿಕೆ ಅದಕ್ಕೆ ಬೇಕು, ಪ್ರಾಸಗಳೂ ಗರಿಗರಿ ಚಕ್ಕುಲಿಯನ್ನು ಕುರುಕಿದ ಹಾಗೆ, ಮನಸ್ಸಿಗೆ ಆಹ್ಲಾದಕರ. ಕೆ.ಎಸ್.ನ. ಅವರ ಕವಿತೆಗಳು ಕನ್ನಡದ ಅತ್ಯುತ್ಕೃಷ್ಟ ಗಜಲ್ ಗಳು. ಪ್ರೇಮ ಹೇಗೆ ಸರ್ವಕಾಲಿಕವೋ ಹಾಗೆಯೇ ಈ ಹಾಡುಗಳು ಕೂಡ. ಕವಿತೆ ಕಟ್ಟುವಾಗ, ಕವಿತೆಗೊಂದು ವಸ್ತು, ವಾಸ್ತು ಮತ್ತು ದೇಹ ಕೊಟ್ಟು ಅದರೊಳಗೆ ಆತ್ಮಾರ್ಥ ಪ್ರತಿಷ್ಠೆ ಮಾಡುತ್ತೇವೆ. ಮೈಸೂರು ಮಲ್ಲಿಗೆಯಲ್ಲಿ ಇದಲ್ಲದೇ ಇನ್ನೊಂದು ಅದ್ಭುತ ಅಂಶವಿದೆ. ಅದು ಕವಿತೆಯ ದನಿ ( ಧ್ವನಿಯಲ್ಲ). ಕವಿತೆಯುದ್ದಕ್ಕೂ, ಈ ದನಿ ನಮ್ಮ ಜೊತೆ ಮಾತಾಡುತ್ತೆ, ಪಿಸುಗುಟ್ಟುತ್ತೆ, ಸಂವೇದನೆಯ ತಂತಿ ಮೀಂಟುತ್ತೆ. ಉದಾಹರಣೆಗೆ ಕೆ.ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಸಿರಿಗೆರೆಯ ನೀರಲ್ಲಿ ಹಾಡು, ನೋಡಿ. ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ಗುಡಿಯ ಗೋಪುರಗಳಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು ಮರೆತಾಗ ತುಟಿಗೆ ಬಾರದೆ, ಮೊಡ ಮರೆಯೊಳಗೆ ಬೆಳದಿಂಗಳು ನಿನ್ನ ಹೆಸರು ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು ಮೈಸೂರು ಮಲ್ಲಿಗೆ ಸಂಕಲನದ ಹೆಸರಲ್ಲೇ ಮಲ್ಲಿಗೆಯಿದೆ. ಮಲ್ಲಿಗೆಯೊಳಗೆ,ಆಕೆ ಇದ್ದಾಳೆ. ಆಕೆಯ ಪರಿಮಳ ಇದೆ, ಆಕೆಯ ಸೌಂದರ್ಯವಿದೆ, ಹುಡುಗಿಯ ಸೂಕ್ಷ್ಮ ಪ್ರಜ್ಞೆಗಳು, ಹುಡುಗಿಯ ನಿಷ್ಕಲ್ಮಶ ಮನಸ್ಸು, ಮಲ್ಲಿಗೆಯ ಪಕಳೆಗಳೇ ನಾಲ್ಕು ದಿಕ್ಕಿಗೆ ನೋಟ ನೆಟ್ಟ ಆಕೆಯ ಕನಸುಗಳು. ನಿಷ್ಕಲ್ಮಶ ಮನಸ್ಸು ಎನ್ನುವಾಗ, ಕೆ.ಎಸ್.ನ. ಅವರ ಕವಿತೆಯ ಇನ್ನೊಂದು ಅಂಶವನ್ನು ಸೂಚಿಸಿದ್ದೇನೆ. ಅವರ ಕವಿತೆಯ ಪ್ರೇಮ,ಆದರ್ಶ ಪ್ರೇಮ. ನಿಜ ಜೀವನದಲ್ಲಿ, ಇದು ಅಪೂರ್ವ ,ಅಪರೂಪ. ಈ ಕಾವ್ಯಧ್ವನಿ, ಸಮಾಜದ ಸಂಬಂಧಗಳೊಳಗೆ ಪೊಸಿಟಿವಿಟಿಯನ್ನು ಬಿತ್ತಿ ಬೆಳೆಸುತ್ತದೆ. ಎಷ್ಟು ಚಿಂತೆ, ಒತ್ತಡಗಳ ನಡುವೆಯೂ ಈ ಹಾಡುಗಳನ್ನು ಕೇಳಿದರೆ, ಬದುಕಿಗೆ ಬೆಳಗು ತೆರೆಯುತ್ತದೆ. ಅದೇ ಹೊತ್ತಿಗೆ, ವಿಮರ್ಶೆಯ ದೃಷ್ಟಿಯಿಂದ, ಇದು ಅವರ ಕಾವ್ಯದ ಸೋಲು ಎಂದರೂ, ಕೆ.ಎಸ್.ನ.ಅವರು ತಲೆಗೆಡಿಸದೆ, ಪ್ರೇಮಿಸಿದರು, ಬದುಕಿದರು, ಕವಿತೆಗಳಿಗೆ ಜೇವ ಕೊಟ್ಟರು. ಮೇಲಿನ ಕವಿತೆ ಕವಿಗೆ ಆತನ ಮನದನ್ನೆಯ ಕಡೆಗಿರುವ ಉತ್ಕಟ ಪ್ರೀತಿಯ ಉಲಿಕೆ. ಈ ಕವಿತೆಯಲ್ಲಿ ಅದ್ಭುತವಾದ ಪ್ರತಿಮೆಗಳು ಇವೆ. ಈ ಕವಿತೆಯಲ್ಲಿ ನನ್ನಅನುಭವಕ್ಕೆ ಎಟುಕಿದ ಹಲವು ಅಂಶಗಳು ಜೀವಮುಖೀ ಚೇತನದ ನಿತ್ಯರೂಪೀ ದರ್ಶನಗಳು. “ಸಿರಿಗೆರೆಯ ನೀರಲ್ಲಿ, ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು..” ಕೆರೆ ಎಂಥದ್ದು !! ಸಿರಿಗೆರೆ.. ಅಂದರೆ, ಕೆರೆತುಂಬ, ನೀರಲ್ಲ, ಸಿರಿ. ಸಿರಿ ಅಂದರೆ, ಶ್ರೀ, ಸಂಪತ್ತು. ಸಂಪತ್ತು ತುಂಬಿದ ಕೆರೆಯಲ್ಲಿ, ಶ್ರೀಮಂತಿಕೆಯ ಉಸುಕಲ್ಲಿ,ಶ್ರೀಮಂತಿಕೆಯ ನೀರ ಮೇಲೆ ಎಲೆಯತ್ತಿ.,ಅದರಿಂದ ಹೊರಗೆ ತಲೆಯೆತ್ತಿ ನಿಂತ ತಾವರೆಯ ಕೆಂಪುಬಣ್ಣದಲ್ಲಿ ಆಕೆಯ ಹೆಸರಿದೆ. ಬಣ್ಣವನ್ನು,ಇಲ್ಲಿ ಸ್ವಭಾವ,ಗುಣ ಅಂತ ತೆಗೆದುಕೊಳ್ಳಬಹುದು. ಅಂತಹ ಶ್ರೀಮಂತಿಕೆಯೊಳಗೆ ( ಆ ಶ್ರೀಮಂತಿಕೆ, ಧನಸಂಪತ್ತೇ ಆಗಬೇಕಿಲ್ಲ, ಅದು,ವಿದ್ಯೆ ಸೌಂದರ್ಯ, ಬುಧ್ದಿ, ಇತ್ಯಾದಿ,ಎಲ್ಲವೂ ಆಗಬಹುದು) ಹುಟ್ಟಿದ ಆ ಹುಡುಗಿ,ಶ್ರೀಮಂತೆ. ತಾವರೆ ಹೂವು, ಮತ್ತು ಎಲೆಗಳ ಮೇಲೆ ನೀರು ಅಂಟಲ್ಲ. ಹೂ,ನೀರನ್ನು ಮೀರಿ ಮೇಲಕ್ಕೆ ತಲೆಯೆತ್ತಿ ನಿಲ್ಲುತ್ತೆ. ಹಾಗೆಯೇ ಕವಿಯ ಮನಸ್ಸು ಕದ್ದ ಗೆಳತಿ, ತನ್ನ ಶ್ರೀಮಂತಿಕೆಯ ಜತೆ ಅಟ್ಯಾಚ್ಮೆಂಟ್ ಇಲ್ಲದೆ, ಶ್ರೀಮಂತಿಕೆಯನ್ನು ಮೀರಿ ನಿಂತ ಗುಣಸ್ವಭಾವವಾಗಿ, ಕವಿಗೆ ಕಾಣುತ್ತಾಳೆ,ಆಪ್ತಳಾಗುತ್ತಾಳೆ. ಇಲ್ಲಿ,ಸಿರಿ ಅನ್ನುವ ಪದಕ್ಕೆ, ಸೌಂದರ್ಯ ಎಂಬ ಅರ್ಥ ನೀಡಿ ಈ ಮೇಲಿನ ಪ್ಯಾರಾ ಪುನಃ ಓದಿ ಕೊಂಡರೆ, ಆಹಾ, ಎಂತ ಸಿರಿವಂತ ಕವಿತಾ ಸಾಲುಗಳು !! “ಗುಡಿಯ ಗೋಪುರದಲ್ಲಿ,ಮೆರೆವ ದೀಪಗಳಲ್ಲಿ,ಬೆಳಕಾಗಿ ನಿನ್ನ ಹೆಸರು.” ಗುಡಿಯ ಗೋಪುರದಲ್ಲಿ, ಎಂದರೆ,ಎತ್ತರಕ್ಕೆ, ಎಲ್ಲರಿಗೂ ಬೆಳಕು ತಲಪುವ ಹಾಗೆ ಅನ್ನ ಬಹುದೇ?. ಗುಡಿಯೊಳಗೆ ಉರಿಯುವ ದೀಪ, ಗರ್ಭಗುಡಿಯಷ್ಟಕ್ಕೇ ಬೆಳಕು ಚೆಲ್ಲ ಬಹುದು. ಆದರೆ, ಗುಡಿಯ ಗೋಪುರದಲ್ಲಿ ಹಚ್ಚಿದ ದೀಪ,ದೂರ ದೂರಕ್ಕೆ ಬೆಳಕು ಚೆಲ್ಲುತ್ತದೆ. ಗುಡಿಯ ಗೋಪುರದಲ್ಲಿ ಬೆಳಗುವ ದೀಪಕ್ಕೆ ಗರ್ಭಗುಡಿಯ ತಡೆಗೋಡೆಗಳಿಲ್ಲ. ಸ್ವತಂತ್ರ ಅದು. ದಿಕ್ಕುಗಳ ಪ್ರತಿಬಂಧವೂ ಅದಕ್ಕಿಲ್ಲ. ಎಲ್ಲಾ ದಿಕ್ಕಿಗೂ ಸಮಪಾಲಿನ ಚೇತನವಿಸ್ತರಣೆ ಅದರದ್ದು. ಹಾಗೆಯೇ, ಬೆಳಕು ಎಂದರೆ ದಾರಿ ತೋರುವ ಪ್ರಜ್ಞೆ ಎನ್ನೋಣವೇ, ಅರಿವು ಎನ್ನೋಣವೇ. ಹೇಗಿದ್ದಾಳೆ ಹೇಳಿ! ನಮ್ಮ ಈ ಹುಡುಗಿ. ಸಕಲದಿಕ್ಕಲ್ಲೂ ದಾರಿ ತೋರುತ್ತಾಳೆ. ಎಲ್ಲಾ ನೋಟಗಳ ಅರಿವಿನ ದಾರಿಯಾಗುತ್ತಾಳೆ. “ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು.” ಕೆ ಎಸ. ನ. ಅವರ ಒಟ್ಟೂ ಕವಿತೆಗಳಲ್ಲಿ, ಹಳ್ಳಿಗಳ ಬೇರೆ ಬೇರೆ ಪಾತ್ರಗಳು, (ಜೋಯಿಸರು, ಶ್ಯಾನುಭಾಗರು, ಹೊಲ,ಬೇಲಿ, ತೊಟ್ಟಿಲು ಇತ್ಯಾದಿ) ನಮ್ಮ ಕಣ್ಣಿಗೆ ಕಟ್ಟುವಷ್ಟು ಆಪ್ತ, ರಿಯಲ್ ಪಾತ್ರಗಳು. ಚಿಕ್ಕಂದಿನಲ್ಲಿ ಕರುಗಳ ಜತೆ ಆಟವಾಡಿದ ಮಕ್ಕಳಿಗೆ ಅನನ್ಯ ಅನುಭವ ಸಿಗುತ್ತದೆ. ದನಕರು, ಮುಗ್ಧತೆಗೆ ಇನ್ನೊಂದು ಹೆಸರು. ಕರುಗಳಿಗೆ ಅಷ್ಟೇ ತುಂಟತನ. ಅಂತಹಾ ಕರುವಿನ ಕಣ್ಣುಗಳು, ಶುಧ್ದ ದರ್ಪಣಗಳ ಹಾಗೆ. ಆ ಕಣ್ಣೊಳಗೆ ಮೂಡುವ ಸಮಾಜದ ಪ್ರತಿಬಿಂಬಗಳು, ಇದ್ದದ್ದು ಇದ್ದ ಹಾಗೇ, ಚತುರ ಬುಧ್ದಿಯ ಮಾಡಿಫಿಕೇಷನ್ ಇಲ್ಲದೇ, ರೂಪುಗೊಳ್ಳುತ್ತವೆ. ಚುರುಕು ತುಂಟ, ಮುಗ್ಧ ಕಣ್ಣುಗಳಿಗೆ ಜಗತ್ತು ಸುಂದರ, ಜಗತ್ತೇ ಪ್ರೀತಿ. ಅಂತಹ ಕಣ್ಣುಗಳು ಈ ಕವಿಯ,ಹುಡುಗಿಯದ್ದು. ಆ ಕಣ್ಣುಗಳ ಮುಗ್ಧತೆಗೆ ಸ್ಪಟಿಕದ ಸ್ಪಷ್ಟತೆ, ಸೌಂದರ್ಯವೂ ಇದೆ ಅಂತ ಬೇರೆ ಹೇಳ ಬೇಕಿಲ್ಲ ತಾನೇ. “ತಾಯ ಮೊಲೆಯಲ್ಲಿ ಕರು,ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ,ನಿನ್ನ ಹೆಸರು.” ನಾನು ಚಿಕ್ಕಹುಡುಗನಾಗಿದ್ದಾಗ, ಅಮ್ಮ ಹಾಲು ಕರೆಯುತ್ತಿದ್ದಳು, ನನಗೆ ಕರು ಬಿಡುವ ಕೆಲಸ. ದನ ತನ್ನ ಮೊಲೆಯಿಂದ ಹಾಲು ಸುಲಭವಾಗಿ ಹರಿಸುವುದಿಲ್ಲ. ಮೊದಲು, ಆ ಗೋಮಾತೆಯ ಕರು, ತನ್ನ ಮುದ್ದಾದ ಮಂಡೆಯಿಂದ ಮೃದುವಾಗಿ ಕೆಚ್ಚಲಿಗೆ ಗುದ್ದುತ್ತದೆ. ಆ ಮೇಲೆ ಕರು ಹಸುವಿನ ಮೊಲೆ ಚೀಪುತ್ತೆ. ಇನ್ನೂ ಹಾಲು ಬಂದಿಲ್ಲ ಅಂದರೆ, ಅದು ತನ್ನ ಮೃದು ತಲೆಯಿಂದ ನವಿರಾಗಿ ತಾಯಿ ಕೆಚ್ಚಲಿಗೆ ಇನ್ನೂ ಗುದ್ದುತ್ತದೆ ( ಇದು ತಾಯಿಗೆ ನೋವಾಗುವಷ್ಟು ಜೋರಾಗಿ ಅಲ್ಲ) ಆಗ ದನ ತನ್ನ ಮೊಲೆಯಿಂದ ಕರುವಿಗೆ ಹಾಲೂಡುತ್ತದೆ. ಹಾಗೆ ಹಾಲು ಕುಡಿಯುವ ಕರುವಿನ ಕಟವಾಯಿಯಿಂದ ಹಾಲು ತೊಟ್ಟಿಕ್ಕುವ ಅಂದವನ್ನು ಕಂಡ ಅದೃಷ್ಟವಂತ ನಾನು. ಆ ಹಾಲು ತಾಯಿಯ, ಮಾತೃತ್ವಕ್ಕೆ, ಮಮತೆಗೆ, ಇನ್ನೊಂದು ಹೆಸರು. ಆ ಕರುವಿನ ಬಾಯಿಯಿಂದ ತೊಟ್ಟಿಕ್ಕುವ ಹಾಲಿನಲ್ಲಿ ಕವಿಗೆ ಆಕೆ ಕಂಡರೆ, ಆ ಹುಡುಗಿಯಲ್ಲಿ, ಎಂತಹ ಮಮತೆ.ಎಂತಹಾ ಮಡಿಲು ತುಂಬಿ ಪ್ರೀತಿ. ಇದಕ್ಕಿಂತ ಉತ್ಕೃಷ್ಟ ರೂಪಕ ಬೇಕೇ. “ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು” ಹೂಬನದ ಬಿಸಿಲಿನಲ್ಲಿ ಅನ್ನುವಾಗ ಗಮನಿಸಿ, ಬನತುಂಬಾ ಹೂಗಳು, ಅವುಗಳ ಮೇಲೆ ಚಿಗುರುಕಿರಣಗಳು, ಇದು ವಸಂತ ಭಾವ. ಪ್ರೀತಿ ಹುಟ್ಟಲು, ಪ್ರಕೃತಿಯ ಮಡಿಲು. ಗಂಡು ನವಿಲು ಸುಮ್ಮನೇ ಕುಣಿಯಲ್ಲ. ಅದು ತನ್ನ ಪ್ರೇಮಿಕೆಯನ್ನು ಪ್ರಣಯಕ್ಕೆ ಕರೆಯುವ ಬಗೆಯಿದು. ಆ ಹೆಣ್ಣು ನವಿಲೇನು ಕಡಿಮೆಯೇ. ಪರಿ ಪರಿಯಾಗಿ ಕರೆದ ಇನಿಯನಿಗೆ ಪರೀಕ್ಷೆ ಹಚ್ಚುವಾಕೆ ಅವಳು. ಗಂಡುನವಿಲು, ತನ್ನ ಜೀವಿತದಲ್ಲಿ ಸಂಗ್ರಹಿಸಿದ ಗರಿಗಳ ಸಿರಿಹೊರೆಯನ್ನು ಅರ್ಧ ಚಂದ್ರಾಕಾರವಾಗಿ ಅರಳಿಸಿ ಹೆಜ್ಜೆಯಿಡುತ್ತದೆ. ಆ ಹೆಜ್ಜೆಗಳು ಸಮತೋಲನದ ಹೆಜ್ಜೆ ( ನವಿಲಿನ ದೇಹದ ಹತ್ತು ಪಟ್ಟು ದೊಡ್ಡ ಗರಿಗಳ ಕೊಡೆ), ಗಾಂಭೀರ್ಯದ ಹೆಜ್ಜೆ. ನಿಸರ್ಗದೊಳಗಿನ ಅನ್ಯೋನ್ಯತೆಯ ಲಯ ಆ ಹೆಜ್ಜೆಗಳಿಗೆ . ಇದು ಸಂಪೂರ್ಣ ಸಮರ್ಪಣೆಯ ನೃತ್ಯ. ನೃತ್ಯಕ್ಕೆ ತನ್ನ ಸೌಂದರ್ಯವನ್ನು, ಜ್ಞಾನವನ್ನು ಜೀವವನ್ನು ಅರ್ಪಿಸಿದ ದನಿ. ಅಂತಹಾ ಸಮತೋಲನದ, ಗಾಂಭೀರ್ಯದ, ಅನ್ಯೋನ್ಯತೆಯ, ಸಮರ್ಪಣಾ ಭಾವದ, ದನಿಯಲ್ಲಿ ಕವಿಗೆ, ಆಕೆ ಕಾಣಿಸುತ್ತಾಳೆ. “ಹೊಂದಾಳೆ ಹೂವಿನಲಿ,ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು.” ಹೂವು ಅಂತಿಂತ ಹೂವಲ್ಲ. ಹೊಂದಾಳೆ ಹೂವು. ಚಿನ್ನದ ಬಣ್ಣ ಅದಕ್ಕೆ !! ಅದರ ಪರಿಮಳ ಹೇಗಿರಬಹುದು, ಆ ಹೂ, ಗಾಳಿಯಲ್ಲಿ ತೊನೆಯುತ್ತಾ ಹರಡುವ ಪರಿಮಳ, ಉಯ್ಯಾಲೆ ಆಡುವ ಕಲ್ಪನೆ ನೋಡಿ. ಹೂವು ಉಯ್ಯಾಲೆ ಆಡುವುದಲ್ಲ, ಪರಿಮಳ ಉಯ್ಯಾಲೆ ಆಡುವುದು. ಪರಿಮಳದ ಅಲೆ ಅದು. ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ನಾಸಿಕಾಗ್ರಕ್ಕೆ ರುಚಿಸಿಕ್ಕದಷ್ಟು ಕಡಿಮೆ, ಹೀಗೆ ಪರಿಮಳದ ಅಲೆ,ಅಲೆಅಲೆಯಾಗಿ ಪಸರಿಸುವಾಗ, ರಸಿಕ ನಾಸಿಕದ ಅನುಭೂತಿಯ ಪರಿಕಲ್ಪನೆ. ಆ ಉಯ್ಯಾಲೆ, ರಸ ತರಂಗವಾಗಿ ಆಕೆ ಆಡುವ ರೂಪ ಕವಿಗೆ ಕಂಡದ್ದು, ರವಿಗೆ ಕಾಣಲೇ ಇಲ್ಲ !! ಕವಿ ಅಷ್ಟೂ ರಸಿಕ!! ಉಯ್ಯಾಲೆ ಪುನಃ ಪುನಃ ಆವರ್ತಿಸುವ, ಆಂದೋಳಿಸುವ ಕ್ರಿಯೆ. ಪ್ರೀತಿ ಎಂಬ ಎತ್ತರ, ಮುನಿಸು ಎಂಬ ತಳಮಟ್ಟ, ಇವೆರಡರ ನಡುವೆ ತೊನೆಯುವ, ಪುನಃ ಪುನಃ ಆವರ್ತಿಸುವ ಈ ಕಗರಿಯೆಯಾಗಿ ಕವಿ,ಪ್ರೇಮಿಕೆಯನ್ನು ಕಾಣುತ್ತಾರೆ. “ಮರೆತಾಗ ತುಟಿಗೆ ಬಾರದೆ, ಮೋಡ ಮರೆಯೊಳಗೆ, ಬೆಳದಿಂಗಳು ನಿನ್ನ ಹೆಸರು “ ಈ ಎರಡು ಸಾಲುಗಳು, ಮತ್ತು ಮುಂದಿನೆರಡು ಸಾಲುಗಳು ಕವಿಯ ಮನಸ್ಸಿನ ಬಟ್ಟಲಲ್ಲಿ ಮೂಡುವ ಕಲ್ಪನೆಗಳು. ಬೆಳದಿಂಗಳ ರಾತ್ರಿಯಲ್ಲಿ, ಆಗಸದಲ್ಲಿ ಮೋಡ ಕವಿದರೆ, ಚಂದಿರ ಕಣ್ಣುಮುಚ್ಚಾಲೆ ಆಡುತ್ತಾನೆ. ಬೆಳದಿಂಗಳು, ಅಂದರೆ ಬಿಳೀ ಚಂದಿರ ಅಂತಾನೂ ಹೇಳಬಹುದು ( ತಿಂಗಳು ಎಂದರೆ ಚಂದ್ರ ಎಂಬ ಅರ್ಥ ಇದೆ) ಕವಿಯ ಪ್ರೇಮಾಗಸಕ್ಕೆ ಆಗಾಗ ಮೋಡ ಕವಿದು ಆಕೆ ಪ್ರೀತಿಯಿಂದ ಕಣ್ಣುಮುಚ್ಚಾಲೆ ಆಡುತ್ತಾಳೆ, ಈಗ ಕಂಡಳು ಅನ್ನುವಾಗ ಮರೆಯಾಗುತ್ತಾಳೆ, ಸರಿ, ಇನ್ನು ಈಕೆ ದರ್ಶನ ಕೊಡಲ್ಲ ಅಂತ ಕವಿ ನಿರಾಶನಾದಾಗ, ಹೇಯ್ ಇಲ್ಲಿದ್ದೀನಿ ಕಣೋ! ಅಂತ ಕುಣಿಯುತ್ತಾಳೆ !. “ನೆನೆದಾಗ, ಕಣ್ಣ ಮುಂದೆಲ್ಲ, ಹುಣ್ಣಿಮೆಯೊಳಗೆ, ಹೂಬಾಣ ನಿನ್ನ ಹೆಸರು.” ಇದೂ ಕವಿಮಾನಸದಲ್ಲಿ ನಡೆಯುವ ಪ್ರೇಮಕ್ರಿಯೆ. ಕವಿ ಆಕೆಯನ್ನು ಮರೆತರೆ, ಕಾಮದೇವ ಬಿಡುತ್ತಾನೆಯೇ. ಪ್ರೀತಿಭಾವದಿಂದ, ಪ್ರಣಯಭಾವಕ್ಕೆ ದಾಟುವ ಸೂಕ್ಷ್ಮ ದಾರಿಯನ್ನು ಕವಿಗೆ ಮನ್ಮಥನ ಹೂಬಾಣ ಕಲಿಸುತ್ತದೆ. ಆ ಹೂಬಾಣದಲ್ಲಿ ಪ್ರಣಯರೂಪಿಯಾಗಿ ಆಕೆ ತನ್ನ ಇನಿಯ ಕವಿಯನ್ನು ಕಾಡುತ್ತಾಳೆ. ಹೀಗೆ, ಕೆ.ಎಸ್. ನ ಹಾಡು, ಬರೆಯುವುದಿಲ್ಲ, ಹಾಡೇ ಆಗಿ ಬಿಡುತ್ತಾರೆ. ಪ್ರೇಮದ ಅಕ್ಷರವಾಗುವುದಿಲ್ಲ, ಪ್ರೇಮಕ್ಕೆ ಉಸಿರಾಗುತ್ತಾರೆ. ಅದಕ್ಕೇ ಅವರ ರಚನೆಗಳು ಬರೇ ಕವಿತೆಗಳಲ್ಲ, ಹಾಡುಗಳು. ಸಂಗೀತ ಭಾವದ ಕಾವ್ಯ ಝರಿಗಳು. ನವ್ಯ ಕವಿತೆಗಳು ಮನಸ್ಸನ್ನು ಚಾಲೆಂಜ್ ಮಾಡಿ, ಚಿಂತನೆಗೆ ಹರಿತ ತರುವ ಕೆಲಸ ಮಾಡಿದರೆ, ಕೆ.ಎಸ್ ನ ಅವರ ಭಾವಗೀತೆಗಳು, ಮನಸ್ಸನ್ನು ನವಿರಾಗಿ ಆವರಿಸಿ, ಕನಸು ಕಟ್ಟಲು ಕಲಿಸುತ್ತವೆ. ಸ್ವಸ್ಥ, ಪ್ರೀತಿತುಂಬಿದ ಸಮಾಜವನ್ನು
ಕಬ್ಬಿಗರ ಅಬ್ಬಿ -9
ಕಬ್ಬಿಗರ ಅಬ್ಬಿ -8 ಬಂಧ ಮತ್ತು ಸ್ವಾತಂತ್ರ್ಯದ ನಡುವೆ ಹದ ಹುಡುಕುತ್ತಾ. ಶ್ರೀ ಹರಿ ಕೋಟಾದ ರಾಕೆಟ್ ಉಡ್ಡಯನ ಕೇಂದ್ರವದು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಗಣಕಯಂತ್ರದ ಪರದೆಯೇ ಕಣ್ಣಾಗಿ ಕುಳಿತಿದ್ದಾರೆ. ಮಹಿಳಾ ವಿಜ್ಞಾನಿಯ ಇಂಪಾದ ಮತ್ತು ಅಷ್ಟೇ ಸಾಂದ್ರವಾದ ದನಿಯಿಂದ ನಿಧಾನವಾಗಿ ಮತ್ತು ಖಚಿತವಾಗಿ…ಹತ್ತು..ಒಂಭತ್ತು…ಎಂಟು.. ಹೌದು. ಅದು ಕೌಂಟ್ ಡೌನ್! ಉಪಗ್ರಹದ ಭಾರ ಹೊತ್ತ ರಾಕೆಟ್ ಸಾಕಮ್ಮನ ಮಡಿಲಿಂದ ಎದೆಯುಬ್ಬಿಸಿ ಹಾರಬೇಕು.ಒಂದು….ಸೊನ್ನೆ!!.ಅದೋ ಅದೋ..ಅಧೋಮುಖದಿಂದ ಬೆಂಕಿ ಹೊಗೆ ಚಿಮ್ಮಿತು, ರಾಕೆಟ್ಟು ಜಿಗಿಯಿತು ಅನಂತಕ್ಕೆ. ವ್ಯೋಮಗಮನಕ್ಕೆ ಮೊದಲ ಜಿಗಿತ.ಸಾಕೇ?. ಸಾಲದು!. ಭೂಮಿತಾಯಿಯ ಪ್ರೇಮ ಬಂಧನದಿಂದ ದಾಟಿಹೋಗಲು ಸುಲಭವೇ. ತಾಯಿ ಅವಳು. ಮಗು ಮಡಿಲು ಬಿಟ್ಟು ಹೋಗಲು ಮನಸ್ಸು ಒಪ್ಪಲ್ಲ. ವೇಗ..ಹೆಚ್ಚಿಸಬೇಕು.. ನೇರವಾಗಿ ಹಾರಿದರೆ ವೇಗ ವೃದ್ಧಿಸಲು ಮಾತೆಯ ಕೊಂಡಿ ಕಳಚಲು ಕಷ್ಟ. ಹಾಗೇ ಪ್ರೀತಿಯಿಂದ ಓಡಿ ಒಂದರ್ಧ ಪ್ರದಕ್ಷಿಣೆ ಹಾಕಿ ಭೂಮಿತಾಯಿಯ ಒಲವಿನ ವೃತ್ತಕ್ಕೆ ಹೊರಮುಖಿಯಾಗಿ ಹಾರುತ್ತಾ, ವಿಮೋಚನಾ ವೇಗ( escape velocity) ಪಡೆದು ಹಾರಿದಾಗ..ಅದು ಕೊನೆಯ ಲಂಘನ. ಭೂತಾಯಿಯ ಆಕರ್ಷಣೆಯಿಂದ ಬಿಡುಗಡೆ!ವ್ಯೋಮದಲ್ಲಿ, ನಿರ್ವಾತ! ಹಾರಲು ತಡೆಯೇ ಇಲ್ಲ! ಅಂತಹ ಬಿಡುಗಡೆ ಅದು! ಇನ್ನೊಂದು ಉದಾಹರಣೆ ಕೊಡುವೆ!. ಆಕೆ ಗರ್ಭಿಣಿ. ಅಮ್ಮನಾಗುವ ತವಕ. ದಿನಗಳು ಕಳೆದು ಮಗು ಬೆಳೆದು..ಹೆರಿಗೆ ಆಗದಿದ್ದರೆ?. ಆಗಲೇ ಬೇಕು. ಮಗು ಗರ್ಭದ ಕೋಶದೊಳಗಿಂದ ತಾಯಿ ದೇಹದ ಬಂಧ ಬಿಡಿಸಿ, ಜನ್ಮಿಸಿದಾಗ ಮೊದಲ ಕೆಲಸ, ಹೊಕ್ಕುಳ ಬಳ್ಳಿ ತುಂಡರಿಸುವುದು. ಅದು ಮಗುವಿನ ದೇಹಕ್ಕೆ ಸ್ವತಂತ್ರವಾಗಿ ಎದೆ ಬಡಿಯಲು, ಉಸಿರಾಡಲು ಸಿಗುವ ಸ್ವಾತಂತ್ರ್ಯ. ಸಹಜ ಕ್ರಿಯೆಯಾದರೂ ಸಣ್ಣ ವಿಷಯ ಅಲ್ಲ,ಅದು. ಪಲ್ಲಣ್ಣ ಗಾಳಿಪಟ ಹಾರಿಸ್ತಿದ್ದಾರೆ. ಅದರ ದಾರ ಒಲವು. ಆದರೆ ದಾರವನ್ನು ಗಟ್ಟಿಯಾಗಿ ಹಿಡಿದರೆ ಗಾಳಿಪಟ ಹಾರಲ್ಲ! ದಾರವನ್ನು ಬಿಡಬೇಕು! ಮತ್ತೆ ಹಿಡಿಯಬೇಕು. ಗಾಳಿಪಟ ಒಂದಷ್ಟು ಹಾರಿದಾಗ ಪುನಃ ದಾರವನ್ನು ತನ್ನತ್ತ ಸೆಳೆಯಬೇಕು, ಮತ್ತೆ ಬಿಡಬೇಕು. ಹೀಗೆ ನಿರಂತರವಾಗಿ ಎಳೆದೂ ಬಿಟ್ಟೂ, ಎಳೆದೂ ಬಿಟ್ಟೂ ನೂರಾರು ಬಾರಿ ಮಾಡಿದಾಗ ಗಾಳಿಪಟ ಆಗಸದ ಎತ್ತರದಲ್ಲಿ ಪಟಪಟಿಸಿ ಏರೋಡೈನಮಿಕ್ಸ್ ನ ಪಾಠ ಮಾಡುತ್ತೆ. ಹಕ್ಕಿ ಗೂಡಲ್ಲಿ ಮರಿಗಳಿಗೆ ರೆಕ್ಕೆ ಪುಕ್ಕ ಬಲಿತು ಹಾರುವ ವರೆಗೆ ಅಮ್ಮ ಹಕ್ಕಿ , ಮರಿಕೊಕ್ಕಿನೊಳಗೆ ಕಾಳಿಕ್ಕುತ್ತೆ. ಒಂದು ದಿನ ಅಚಾನಕ್ಕಾಗಿ ಹಕ್ಕಿ ಮರಿ ರೆಕ್ಕೆ ಬೀಸುತ್ತೆ, ಆಗಸಕ್ಕೆ ಹಾರುತ್ತೆ.ಬಂಧ, ಬಂಧನ ಮತ್ತು ಸ್ವಾತಂತ್ರ್ಯ ಇವುಗಳು ಜೀವ ನಿರ್ಜೀವ ಜಗತ್ತಿನ ಚಲನತತ್ವದ ಸಮೀಕರಣಗಳ ಚರಸಂಖ್ಯೆಗಳು. ಹಾಗಿದ್ದರೆ ಪ್ರೀತಿ ಬಂಧನವೇ. ಅಗತ್ಯವೇ ಅನಗತ್ಯವೇ?. ಮೀರಾ ಜೋಶಿಯವರ ಕವನ “ಮರಳು ಗೂಡಿಗೆ” ಇಂತಹ ಒಂದು ಹದ ಹುಡುಕುವ ಪ್ರಯತ್ನ. ಕವಿತೆ ಓದಿದಂತೆ ಅದಕ್ಕೆ ಅಧ್ಯಾತ್ಮಿಕ ದೃಷ್ಟಿಕೋನ ಪ್ರಾಪ್ತವಾಗುವುದು ಕವಿತೆಯ ಇನ್ನೊಂದು ಮುಖ. ಮೊದಲು ಕವಿತೆ ನೋಡೋಣ. ** *** *** ಮರಳು ಗೂಡಿನತ್ತ ಎನ್ನಂಗಳದಲಿ ಮೊಟ್ಟೆಯೊಡೆದುಮರಿಯೊಂದು ಹೊರ ಬಂದಿತ್ತುಕೋಮಲ ನಿಸ್ಸಹಾಯಕಬಯಸಿದರೂ ಹಾರಲಾರದು ಹಾಲುಣಿಸಿ ನೀರುಣಿಸಿಕಾಳುಗಳಕ್ಕರದಿ ತಿನಿಸಿಬೆಳೆಯುವದ ನೋಡುತಲಿದ್ದೆನೋಡಿ ನಲಿಯುತಲಿದ್ದೆ ಪಿಳಿ ಪಿಳಿ ಬಿಡುವ ಕಣ್ಣಿನಲಿಇಣುಕಿದಾ ಮುಗ್ಧತೆಕಂಡಾಗ ಹೃದಯದಲಿಸೂಸಿತು ಮಮತೆ ಬೆಳೆ ಬೆಳೆದಂತೆ ಗರಿಗೆದರಿನನಗೇನೋ ಭಯಹಾರಿಹೋಗುವದೇನೋ ಎಂಬಕಳವಳ ವ್ಯಾಕುಲ ಅಂತೆಯೇ ಪಂಜರದಲಿಟ್ಚೆಎಲ್ಲ ಸುಖವ ಕೊಟ್ಟೆಸದಾ ಕಣ್ಣಿನ ಕಾವಲಿಟ್ಟೆಹಾರದೆಂದು ಸಂಭ್ರಮ ಪಟ್ಚೆಒಂದು ದಿನ ಪ್ರೀತಿಯುಕ್ಕಿ ಅಂಜಲಿಯಲ್ಹಿಡಿದುಮುದ್ದು ಮಾಡುತಲಿದ್ದೆಹೃದಯ ಸಮೀಪದಲ್ಲಿಟ್ಟು ಸುಖಿಸುತಿದ್ದೆಭಾವಾವೇಶದಲಿ ಎಲ್ಲಿಯೋ ನೋಡುತಿದ್ದೆ ಹಕ್ಕಿಯನಿಡಲು ಪಂಜರದಲಿಪ್ರೇಮ ಸೂಸುತ ನೋಡಿದೆ ಕೈಗಳಲಿಅಂಜಲಿ ಯಾವಾಗಲೋ ಸಡಿಲಿಸಿತ್ತುಹಕ್ಕಿ ಗರಿಗೆದರಿ ಹಾರಿ ಹೋಗಿತ್ತು ಅತ್ತಿತ್ತ ಅರಸಿದೆವ್ಯರ್ಥ ನೋಟ ಹರಿಸಿದೆಪಂಜರ ಚಿತೆಯೇರಿತುಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿಎಂದಾದರೂ ಮರಳಿ ಬರಬಹುದೇನೋಹೊಸದೊಂದು ಗೂಡಿಗೆ ** *** *** ಈ ಕವಿತೆಯಲ್ಲಿ ಕವಿಯ ಅಂಗಳದಲ್ಲಿ ಅನಾಥ ಮೊಟ್ಟೆ, ಅದು ಮರಿಯಾಗುತ್ತೆ. ಹಕ್ಕಿ ಮರಿ.ಕವಿ ಆ ಮರಿಯನ್ನು ಸಾಕಿ ಸಲಹುತ್ತಾಳೆ.ಕವಿಗೆ ಹಕ್ಕಿಯತ್ತ ಎಷ್ಟು ಪ್ರೇಮ!. ಹಾರಿ ಹೋದರೆ! “ಬೆಳೆ ಬೆಳೆದಂತೆ ಗರಿಗೆದರಿನನಗೇನೋ ಭಯಹಾರಿಹೋಗುವದೇನೋ ಎಂಬಕಳವಳ ವ್ಯಾಕುಲ” ಈ ಕವಿತೆಯಲ್ಲಿ ಕವಿ ಪ್ರಶ್ನಿಸದಿದ್ದರೂ ಮನಕ್ಕೆ ಬರುವ ಪ್ರಶ್ನೆ ..ಹಾರಲು ಬಿಡಬೇಕೇ ಬೇಡವೇ?ಅಂತೂ ಕವಿ ಒಂದು ಪಂಜರ ತಂದು….. “ಅಂತೆಯೇ ಪಂಜರದಲಿಟ್ಚೆಎಲ್ಲ ಸುಖವ ಕೊಟ್ಟೆಸದಾ ಕಣ್ಣಿನ ಕಾವಲಿಟ್ಟೆಹಾರದೆಂದು ಸಂಭ್ರಮ ಪಟ್ಚೆ” ಇಲ್ಲಿರುವ ವಿಪರ್ಯಾಸ ಗಮನಿಸಿ. ಕವಿಗೆ, ಹಕ್ಕಿಯ ಮೇಲೆ ಪ್ರೇಮ. ಹಕ್ಕಿ ಹಾರಿ ಹೋಗುವ,ತನ್ನ ಆಧೀನದಿಂದ ದಾಟಿಹೋಗುವುದನ್ನು ಸುತರಾಂ ಒಪ್ಪಲಾರ. ಆದರೆ ಹಕ್ಕಿ!. ಹಾರಲೇ ಹುಟ್ಟಿದ ಜೀವವದು. ಪಂಜರ ಅದಕ್ಕೆ ಬಂಧನ. ಹಾಗೊಂದು ದಿನ ಬೊಗಸೆಯಲ್ಲಿ ಹಕ್ಕಿ ಹಿಡಿದು ಪ್ರೇಮದಲ್ಲಿ ಮೈಮರೆತಾಗ ಹಕ್ಕಿ ಹಾರಿ ಹೋಗುತ್ತೆ.ಕವಿ ಪಂಜರವನ್ನು ಕಳೆದು ಮುಂದೊಂದು ದಿನ ಹಕ್ಕಿ ಬರಬಹುದೇನೋ ಎಂದು ಕಾಯತ್ತಾನೆ.ಇದಿಷ್ಟು ನೇರವಾದ ಅರ್ಥ. ಇದರೊಳಗೆ ಅಡಕವಾಗಿರುವ ಧರ್ಮ ಸೂಕ್ಷ್ಮವನ್ನು ಗಮನಿಸಿ. ಕವಿಯ ಪಂಜರದೊಳಗೆ ಹಕ್ಕಿ, ಅದು ಕವಿಯ ಪ್ರೇಮ. ಹಕ್ಕಿಗೆ ಅದು ಬಂಧನ. ಹಾಗಿದ್ದರೆ,ಪ್ರೇಮ ಬಂಧನವೇ, ಪ್ರೇಮವಿರಬಾರದೇ?ಸಮಾಜದಲ್ಲಿ ಹಲವಾರು ಅಮ್ಮಂದಿರು, ಮಕ್ಕಳನ್ನು ಅತಿಯಾಗಿ ಪ್ರೀತಿಸಿ ( pampered child), ಮಕ್ಕಳ ಬೆಳವಣಿಗೆ ಆಗದಿರುವ ಸಾಮಾಜಿಕ ಸಮಸ್ಯೆಯನ್ನು ಕವಿ ಎಷ್ಟು ಚಂದ ಕಟ್ಟಿ ಕೊಟ್ಟಿದ್ದಾನೆ. ಹಾಗಿದ್ದರೆ ಪ್ರೇಮ ಎಂದರೆ ಪೂರ್ಣ ಸ್ವಾತಂತ್ರ್ಯವೇ?. ಪೂರ್ಣ ಸ್ವಾತಂತ್ರ್ಯ ಅನುಭವಿಸಿದ ಮಕ್ಕಳು ದಾರಿ ತಪ್ಪಿ ವ್ಯಸನಗಳಿಗೆ ದಾಸರಾದದ್ದೂ ಕಾಣಿಸುತ್ತೆ. ನಾನು ಮೊದಲೇ ಹೇಳಿದ ಗಾಳಿಪಟದ ಉದಾಹರಣೆಯಲ್ಲಿ ಹೇಳಿದ ಹಾಗೆ,ಹಿಡಿದೂ ಬಿಟ್ಟೂ ಪುನಃ ಪುನಃ ಮಾಡಿದಾಗಲೇ ಗಾಳಿಪಟ ಹಾರುತ್ತೆ ಎತ್ತರದಲ್ಲಿ.ಭೂಮಿಯ ಗುರುತ್ವಾಕರ್ಷಣ ಶಕ್ತಿ ಇಲ್ಲದಿದ್ದರೆ ನಮಗೆ ನೆಲದಲ್ಲಿ ನೇರವಾಗಿ ಧೃಡವಾಗಿ ನಿಲ್ಲಲು, ನಿಯಂತ್ರಣದಲ್ಲಿ ಚಲಿಸಲು ಆಗಲ್ಲ. ಗುರುತ್ವಾಕರ್ಷಣ ಶಕ್ತಿ ಅಧಿಕವಾದರೆ ಮಲಗಿದಲ್ಲೇ ಬಂದಿಯಾಗುತ್ತೇವೆ. ಹಾಗೆಯೇ ಪ್ರೇಮದ ಕಾಂತೀಯ ಶಕ್ತಿಯನ್ನು ಅತ್ಯಂತ ವಿವೇಚನೆಯಿಂದ ಪ್ರಯೋಗಿಸುವುದು, ಮಗುವಿನ ಬೆಳವಣಿಗೆಗೆ ಅಗತ್ಯ. ಮಗು ಬೆಳೆದ ಮೇಲೆ ಅದರ ಕಾಲಲ್ಲಿ ನಿಲ್ಲುವ, ರೆಕ್ಕೆ ಬೀಸಿ ಹಾರುವುದರಲ್ಲಿ, ಹಾರಲು ಬಿಡುವುದರಲ್ಲಿ ನಾವೆಲ್ಲರೂ ಸಂಭ್ರಮ ಪಡಬೇಕು ತಾನೇ. ಈಗ ಕವಿತೆಯ ಎರಡನೆಯ ಅರ್ಥಸಾಧ್ಯತೆಗೆ ಬರೋಣ. ” ಎನ್ನಂಗಳದಿ ಮೊಟ್ಟೆಯೊಡೆದು ಮರಿಯೊಂದು ಹೊರ ಬಂದಿತ್ತು” ಅಂಗಳ ಎಂಬ ಪದದ ವ್ಯಾಪ್ತಿ ದೊಡ್ಡದು. ಅದು ಚಿಂತಕನ ಮನದಂಗಳ ಆಗಬಹುದು. ಮನದಂಗಳದಲ್ಲಿ ಮೊಟ್ಟೆಯೊಡೆದುಮರಿ ಹೊರಬರುವುದು ಒಂದು ಹೊಸ ಚಿಂತನೆ, ಐಡಿಯಾ, ಭಾವನೆ, ಕವಿತೆ,ಕನಸು ಆಗಬಹುದು.ಇವಿಷ್ಟನ್ನೂ ಮನಸ್ಸಿನೊಳಗೆ ಬೆಳೆಸುತ್ತೇವೆ. ನಮ್ಮ ಯೋಚನೆಯನ್ನು, ಅತ್ಯಂತ ಪ್ರೀತಿಸುತ್ತೇವೆ. ಅವುಗಳನ್ನು ಸಿದ್ಧಾಂತ ಎಂಬ ಪಂಜರದೊಳಗೆ ಬಂದಿಯಾಗಿಸಿ ಖುಷಿ ಪಡುತ್ತೇವೆ. ಒಂದು ದಿನ ನಂಬಿದ ಸಿದ್ಧಾಂತ ಮುರಿದಾಗ ಚಿಂತನೆಗೆ ಸ್ವಾತಂತ್ರ್ಯ ಸಿಕ್ಕಿ ಅದು ನಾಲ್ಕೂ ದಿಕ್ಕುಗಳಿಗೆ ಹರಿಯುತ್ತೆ. ಇಂತಹ ಸ್ವಸಿದ್ಧಾಂತದೊಳಗೆ ಬಂದಿಯಾದ ಹೊರಬರಲಾರದ ಅದೆಷ್ಟು ಚಿಂತಕರು ನಮ್ಮ ಸುತ್ತುಮುತ್ತಲೂ.ಹಾಗೆ ಬಂದಿಯಾದವರು, ಬೆಳವಣಿಗೆ ಸ್ಶಗಿತವಾಗಿ ಕಾಲಗರ್ಭದೊಳಗೆ ಕಾಣೆಯಾಗುವುದನ್ನೂ ಕಾಣುತ್ತೇವೆ. ಒಮ್ಮೆ ಚಿಂತನೆ ಕವಿತೆಯಾಗಿಯೋ, ಕಲೆಯಾಗಿಯೋ,ಚಿತ್ರವಾಗಿಯೋ ಹೊರಬಂದರೆ ಹಳೆಯ ಪಂಜರದ ಪಳೆಯುಳಿಕೆಗಳನ್ನು ದಹಿಸಿ ಮನಸ್ಸನ್ನು ಹಸಿಯಾಗಿಸಿ, ಇನ್ನೊಂದು ಚಿಂತನೆಯ ಹಕ್ಕಿ ಗೂಡುಕಟ್ಟಲು ಅನುವು ಮಾಡಿಕೊಡಬೇಕು. ಇನ್ನು ಮೂರನೆಯ ಅರ್ಥಕ್ಕೆ ಬರೋಣ. ಕವಿತೆಯ ಶೀರ್ಷಿಕೆ ” ಮರಳು ಗೂಡಿಗೆ”ಮರಳು ಎಂಬುದು ವಾಪಸ್ ಬರುವುದು ಎಂಬ ಸಾಧಾರಣ ಅರ್ಥ, ಮೇಲೆ ಹೇಳಿದ ಎರಡೂ ಇಂಟರ್ಪ್ರಿಟೇಷನ್ ಗಳಿಗೆ ಹೊಂದುತ್ತದೆ.ಆದರೆ ಮರಳು ಗೂಡಿಗೆ ಎಂಬುದು ಮರಳಿನಿಂದ ಮಾಡಿದ ಗೂಡಿಗೆ ಎಂಬ ಅರ್ಥವೂ ಇದೆ ತಾನೇ.ಮರಳು ಒದ್ದೆಯಾದಾಗ ಗೂಡು ಮಾಡಿದರೆ ನಿಲ್ಲುತ್ತೆ. ಮರಳಿಂದ ನೀರಿನ ಅಂಶ ಒಣಗಿದಾಗ ಅದು ಕುಸಿಯುತ್ತೆ. ಅಷ್ಟೂ ತಾತ್ಕಾಲಿಕ ಅದು. ನಶ್ವರ ಅದು. ಪುರಂದರ ದಾಸರ ಗಿಳಿಯು ಪಂಜರದೊಳಗಿಲ್ಲ ಎಂಬ ಪದ್ಯದಲ್ಲಿ, ಒಂಭತ್ತು ಬಾಗಿಲ ಮನೆ ಅಂತ ಈ ಪಂಜರವನ್ನು ವರ್ಣಿಸುತ್ತಾರೆ. ಈ ಮರಳು ಮನೆ ಅದೇ ಪಂಜರವೇ?ಪದ್ಯದ ಅಷ್ಟೂ ಸಾಲುಗಳೂ ದೇಹ,ಆತ್ಮವನ್ನು ಸಲಹುವಂತೆಯೇ ಇದೆ. ಕೊನೆಯ ಪ್ಯಾರಾದಲ್ಲಿ, ಗಮನಿಸಿ. “ಪಂಜರ ಚಿತೆಯೇರಿತುಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿಎಂದಾದರೂ ಮರಳಿ ಬರಬಹುದೇನೋಹೊಸದೊಂದು ಗೂಡಿಗೆ” ಅಸ್ತಿಪಂಜರ, ಆತ್ಮದ ಹಕ್ಕಿ ಬಿಟ್ಟು ಹೋದಾಗ ಚಿತೆಯೇರುತ್ತೆ. ಆತ್ಮ ಪುನಃ ಹೊಸ ಗೂಡು ಹುಡುಕಿ ಮರಳಿ ಬರುವುದೇ. “ಪುನರಪಿ ಜನನಂ ಪುನರಪಿ ಮರಣಂಪುನರಪಿ ಜನನೇ ಜಠರೇ ಶಯನಂ” ಎಂಬ ಶಂಕರಾಚಾರ್ಯರ ಗೀತೆಯ ಸಾಲುಗಳ ಹಾಗೆ ಆತ್ಮ ಗೂಡಲ್ಲಿ ವಾಸ ಹೂಡುತ್ತೆ. ಗೂಡು ಬಿಟ್ಟು ಹೊಸ ಗೂಡಿಗೆ ವಾಪಸ್ಸಾಗುತ್ತೆ.ಇಲ್ಲಿನ ಗೂಡು,ಮರಳು ಗೂಡು.ನಶ್ವರವೂ ಹೌದು. ಪುನಃ ಪುನಃ ಮರಳಬೇಕಾದ ಗೂಡೂ ಹೌದು. *********************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ ಬರುತ್ತೆ.ಸ್ಪಂದನೆ ಮತ್ತು ಪ್ರತಿಸ್ಪಂದನೆ ಕಲ್ಲಿನೊಳಗಿನ ಪರಮಾಣು ಕೂಡಾ ಮಾಡುತ್ತೆ.ನೋಟದ ವ್ಯಾಪ್ತಿಗೆ ಸಿಕ್ಕಿದ ಅಷ್ಟನ್ನೂ ಕವಿಯ ಪ್ರಜ್ಞೆ ಬಾಚಿ ಎದೆಗಿಳಿಸುತ್ತೆ.ಮನುಷ್ಯ ಜಗತ್ತಿನ ನೋವು ನಲಿವು, ಶೋಷಣೆಗಳು, ಕಪ್ಪು ಬಿಳುಪು, ಹೆಣ್ಣು ಗಂಡು, ಬೇಧಭಾವಗಳು ಕವಿಗೂ ಕಾಣಿಸುತ್ತೆ, ಇತರರಿಗೂ ಕಾಣಿಸುತ್ತೆ. ಆದರೆ ದಿನಾಲೂ ಬೆಳಗ್ಗೆ ಕೂಗುವ, ಈ ದಿನ ಹಾಜರು ಹಾಕದ ಕೋಗಿಲೆ,ಚಿಟ್ಟೆಯ ರೆಕ್ಕೆಯಲ್ಲಿರುವ ಚುಕ್ಕಿಗಳ ಡಿಸೈನ್,ರಸ್ತೆಯಗಲಿಸಲು ಕಡಿದ ಮರದ ಕಾಂಡದಿಂದ ಜಿನುಗುವ ಕಣ್ಣೀರು,ನೀರ ಹರಿವು ನಿಂತು ಏದುಸಿರು ಬಿಡುತ್ತಿರುವ ನದೀ ಪಾತ್ರ,ಎಂಡೋಸಲ್ಫಾನ್ ಸ್ಪ್ರೇ ಯಿಂದ ಸತ್ತು ಬೀಳುವ ಜೇನು ನೊಣ,ಕಾರಿನ ಹೊಗೆ, ಗಗನ ಚುಚ್ಚುವ ಕಟ್ಟಡ,ಎಲ್ಲವೂ ಕವಿ ಹೃದಯಕ್ಕೆ ತುಂಬಾ ಚುಚ್ಚುತ್ತೆ. ಪರಿಸರದ ಪರಿವರ್ತನೆಗಳು, ಪರಿಸರದ ಮೇಲೆ ಮನುಷ್ಯನ ಯಾಂತ್ರಿಕ ಮನೋಭಾವದ ಅತ್ಯಾಚಾರ, ಮತ್ತು ಅದರಿಂದಾಗಿ, ಪರಿಸರದಲ್ಲಿ ನಢೆಯುತ್ತಿರುವ ಅಸಮತೋಲನ, ಅತಿವೃಷ್ಟಿ,,ಅನಾವೃಷ್ಟಿ ಕವಿಯನ್ನು ದರ್ಶಿಸಿ, ದರ್ಶನವಾಗಿ ಇಳಿದು ಬಂದಾಗ ಕವಿತೆ ಒಳಗೊಳಗೇ ಅಳುತ್ತೆ. ಅಂತಹ ಒಂದು ಎದೆತಟ್ಟುವ ಕವಿತೆ, ಚಂದಕಚರ್ಲ ರಮೇಶ್ ಬಾಬು ಅವರು ಪುಟಕ್ಕಿಳಿಸಿದ್ದಾರೆ. ಈ ಕವಿತೆಯಲ್ಲಿ, ಕೋಗಿಲೆ, ಮನುಷ್ಯನಲ್ಲಿ ಕ್ಷಮೆ ಕೇಳುತ್ತೆ. ಕೋಗಿಲೆಯ ಮಾತುಗಳು ಹೀಗಿವೆ. ಕ್ಷಮೆ ಇರಲಿ ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ ಹೀಗೆ ಬನ್ನಿಇಲ್ಲಿ ಒಂದು ಸಮಯದಲ್ಲಿನಿಸರ್ಗದ ಮಡಿಲಾದದಟ್ಟ ಕಾಡೊಂದಿತ್ತುಗಿಡಮರ ಹೂವು ಹಣ್ಣುಗಳಿಂದನಮ್ಮೆಲ್ಲರ ತಂಗುದಾಣವಾಗಿತ್ತುಈಗ ಇದು ಬರೀ ಅವಶೇಷ ಭೂಮಿಇಲ್ಲಿಗೆ ವಸಂತನ ಆಗಮನದಸುಳಿವು ಸಿಗುವುದಿಲ್ಲಕುರುಹೂ ಕಾಣುವುದಿಲ್ಲಆದಕಾರಣ ಏನೂ ಕಾಣದಿದ್ದರೆಕ್ಷಮೆ ಇರಲಿ ಹೀಗೆ ಬನ್ನಿಕೆಲವಾರು ದಶಕಗಳ ಹಿಂದೆ ಇಲ್ಲಿವನಜೀವಿಗಳ ಸಂಭ್ರಮವಿತ್ತುಪಶು ಪಕ್ಷಿಗಳ ಜಾತ್ರೆಯಿತ್ತುಹಸಿರುವನ ಸಿರಿಯ ನಡುವೆಅವುಗಳ ಜೀವನವೂ ಹಸಿರಾಗಿತ್ತುಈಗ ಇದು ಬರೇ ಬೀಡುಗುಡ್ಡ ದಿನ್ನೆಗಳ ನಾಡು ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ ವಸಂತನ ಆಗಮನದಕಾತರ ತೋರುವ ನಿಮಗೆನಿರಾಶೆ ಮಾಡುತ್ತಿದ್ದಕ್ಕೆಕ್ಷಮೆ ಇರಲಿನೀವು ಮುಂದುವರೆಸಿಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ *** *** *** ಕೋಗಿಲೆಯ ಸ್ವಗತ ಈ ಕವಿತೆ. ವಸಂತವನದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಪ್ರೇಕ್ಷಕರಿಗೆ ತೋರಿಸುವ ಕೆಲಸ ಕೋಗಿಲೆಯದ್ದು. ವಸಂತ ಎಂದರೆ ಪ್ರಕೃತಿ ನಳನಳಿಸಿ, ಹೂ ಅರಳಿಸಿದ ಹಸಿರು ಲಂಗ ತೊಟ್ಟು ಇನಿಯನಿಗಾಗಿ ಕಾದು ಪ್ರೇಮಿಸಿ,ಕಾಮಿಸಿ, ನಲಿದು ಗರ್ಭವತಿಯಾಗುವ ಕಾಲ. ಸೃಷ್ಟಿ ಕ್ರಿಯೆ ಔನ್ನತ್ಯವನ್ನು ಮುಟ್ಟುವ, ಕಲಾತ್ಮಕವಾಗುವ, ಜೀವರಾಶಿಗಳು ಸಂಭ್ರಮಿಸುವ ಕಾಲ. ಮಾವಿನ ಮರ ಹೂ ಬಿಡುತ್ತೆ,ಕೆಲವೆಡೆ ಚಿನ್ನದ ತಳಿರಾಗಿ ಮೆದು ಮೆದುವಾದ ಎಲೆ ಚಿಗುರಿ, ಕೋಗಿಲೆಗೆ ಹಬ್ಬವೋ ಹಬ್ಬ! ಇಂತಹ ಜೀವೋತ್ಸವವನ್ನು, ಕವಿ ವಸಂತವನದ ‘ ವಸ್ತುಪ್ರದರ್ಶನ’ ಅಂತ ಹೆಸರಿಟ್ಟು ಕರೆಯುವಾಗಲೇ ಜೀವರಾಶಿಗಳು ಹೆಣವಾಗಿ ಮಸಣ ಹುಡುಕುವುದರ ಚಿತ್ರಣದ ಅರಿವಾಗುತ್ತೆ. ವಸ್ತು ಪ್ರದರ್ಶನ, ಮಾನವ,ತನ್ನ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಮಾನವ ನಿರ್ಮಿತ ಎಂದರೆ ಅದು ನಿರ್ಜೀವ ವಸ್ತುವೇ. ‘ವಸಂತವನದ ವಸ್ತುಪ್ರದರ್ಶನ’ ಎಂಬ ಈ ಸಾಲಿನ ಮೊದಲ ಪದ ಜೀವತತ್ವ,ಎರಡನೆಯ ಪದ ನಿರ್ಜೀವ ತತ್ವ. ಈ ಕವಿತೆ ಅಷ್ಟೂ ದ್ವಂದ್ವಗಳನ್ನು, ಜೀವದಿಂದ ನಿರ್ಜೀವತ್ವದತ್ತ ನಡೆದ ದಾರಿಯನ್ನು ಎರಡೇ ಪದದಲ್ಲಿ ಸೆರೆಹಿಡಿಯಿತಲ್ಲಾ. ಇದು ಕವಿಸಮಯ. “ನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು” ಕೋಗಿಲೆಯ ಸೆಲ್ಫ್ ಇಂಟ್ರೊಡಕ್ಷನ್ ನಲ್ಲಿ, ಗತವೈಭವದ ನೆನಪಿನ ಸುಖವಿದೆ. ಕವಿತೆ ಹಾಗೆ ಆರಂಭವಾಗುತ್ತೆ. ಕೋಗಿಲೆಯ ಸ್ವರ ವಸಂತಾಗಮನಕ್ಕೆ ರೂಪಕವೂ ಆಗಿದೆ. “ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ” ವಸಂತನ ಆಗಮನ ಸೂಚಿ, ಕೋಗಿಲೆಯ ಕೊರಳ ಕುಹೂ. ಮೇಲಿನ ಸಾಲಿನಲ್ಲಿ, ಹೇಳುವಂತೆ, ಕೋಗಿಲೆಗೆ ಇತ್ತೀಚೆಗೆ ಮಾವಿನ ತಳಿರು ಸಿಗುತ್ತಿಲ್ಲ. ಹುಡುಕಿ ಸಾಕಾಗಿದೆ. ತಳಿರು ಮೆದ್ದರೇ ಕೋಗಿಲೆಗೆ ಸ್ವರ. ತಳಿರು ತಿನ್ನದೆ ಸ್ವರ ಹೊರಡಲ್ಲ ಕೋಗಿಲೆಗೆ.ವಸಂತಾಗಮನದ ಮಾರ್ಗ ಸೂಚಿ ಕೂಗಿಲ್ಲ ಎಂದರೆ, ವಸಂತಾಗಮನವೇ ಆಗುತ್ತಿಲ್ಲ. ಮನುಷ್ಯನಿಗೆ ಅದರ ಪರಿವೆಯೂ ಇಲ್ಲ! ಆತ ಸ್ಪಂದನಾರಹಿತ ಸ್ವಾರ್ಥಿ ಜೀವ.ಆತನಿಗೆ ವಸ್ತು ಪ್ರದರ್ಶನ ನಡೆದರೆ ಸಾಕು ತಾನೇ. ಮುಂದುವರೆದು ಕೋಗಿಲೆ ಅಳುತ್ತೆ. ಬಿಕ್ಕಿ ಬಿಕ್ಕಿ ಅಳುತ್ತೆ. “ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ” ವಸ್ತುಪ್ರದರ್ಶನ ತೋರಿಸಲು ಕೋಗಿಲೆಗೆ ಮಾತು ಹೊರಡುತ್ತಿಲ್ಲ. ಅದು ಬಿಕ್ಕುತ್ತಿದೆ. ಬಿಕ್ಕಿ ಬಿಕ್ಕಿ ಅಳುವ ನಡುವೆ ಮಾತುಗಳು ತುಂಡು ತುಂಡಾಗಿ ನೋವಿನಲ್ಲಿ ಅದ್ದಿ ಅರ್ಧ ಪದಗಳಾಗಿ, ಉಳಿದರ್ಧ ಎಂಜಲಿನ ಜತೆ ಗಂಟಲು ಸೇರಿ ಮಾತಾಡಲಾಗಲ್ಲ. ದನಿಯ ಒತ್ತಿ ಹಿಡಿದು,ಅಳು ಕಟ್ಟಿ ಹೊರಡುತ್ತಿಲ್ಲ. “ಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ” ಕೋಗಿಲೆ, ಪ್ರೇಕ್ಷಕನಿಗೆ, ವಿನಂತಿಸುತ್ತೆ. ಎಲ್ಲಾದರೂ ವನಸಿರಿ ನಳನಳಿಸಿದ್ದು ಕಂಡರೆ ತಿಳಿಸಿ, ಮತ್ತೆ ನನ್ನ ದನಿಗೊಂದು ನವಜೀವನ ಬಂದೀತು, ಅಂತ. ಹೋಗಿ ಬನ್ನಿ ನಮಸ್ಕಾರ ಎಂದು ಕೋಗಿಲೆ ಪ್ರೇಕ್ಷಕನಿಗೆ ಹೇಳುವಾಗ ನಮಸ್ಕಾರದೊಳಗೆ,ಮನುಷ್ಯಜಗತ್ತಿನತ್ತ ತಿರಸ್ಕಾರ ಭಾವನೆಯಿದೆಯೇ?. ಇಷ್ಟೊಂದು ನಿರಾಶೆಯಲ್ಲೂ ‘ನವ ಜೀವನ ಬಂದೀತು’ ಎಂಬ ಆಶಾಭಾವದೊಂದಿಗೆ ಕೋಗಿಲೆಯ ಕವಿತೆ ಮುಗಿಯುತ್ತೆ. ಕವಿತೆಯ ಶೀರ್ಷಿಕೆ ವಿಡಂಬನಾತ್ಮಕ. ಮನುಷ್ಯ ಕೋಗಿಲೆಯಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಮನುಷ್ಯನ ಸ್ವಕೇಂದ್ರಿತ ಮನಸ್ಸು ಸ್ಪಂದನೆಯನ್ನೇ ಮರೆತು ಒಣವಾದಾಗ, ಕೋಗಿಲೆಯೇ ಕ್ಷಮೆ ಕೇಳುವಂತಾಗಿದೆ. ಆದರೆ ಕವಿಯ ಪ್ರಜ್ಞೆ ಹೊಸತೊಂದು ಅನುಭವಕ್ಕೆ ತೆಗೆದುಕೊಂಡಾಗ, ಅದೇ ಕೋಗಿಲೆಯ ಕವಿತೆ ಹೇಗೆ ಬದಲಾಗುತ್ತೆ ಅಂತ ನೋಡಿ!.ಕರೋನಾ ಲಾಕ್ ಡೌನ್ ಆದಾಗ, ಮನುಷ್ಯನ ಇಂಟರ್ಫಿಯರೆನ್ಸ್ ಇಲ್ಲದೇ, ವನಪುಷ್ಪಗಳು ನಳನಳಿಸಿದಾಗ ಕೋಗಿಲೆಯ ಕನಸು ನನಸಾಗುತ್ತೆ. ರಮೇಶ್ ಬಾಬು ಅವರ ಕರೋನ ಸಮಯದ ಕೋಗಿಲೆಯ ಉಲ್ಲಾಸದ ಮಾತುಗಳು ಹೀಗಿವೆ. ತಳಿರು ಮೆದ್ದ ಕೋಗಿಲೆ ಪ್ರತಿವರ್ಷದಂತೆಯುಗಾದಿಯಂದುವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗಹರಡಿದ ರಂಗಸ್ಥಳದಿನವಿಡೀ ಮನತುಂಬಿಸಾಗಿತು ಗಾನಕೊರೋನಾದ ಖಬರಿಲ್ಲಆಡಳಿತದ ಅರಿವಿಲ್ಲಕಾಲುಷ್ಯ ಕಾಣದ್ದೇ ಮಾನದಂಡಅಂದಿನಿಂದ ಇಂದಿಗೂಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ ! ** *** **** ಈ ಸಾಲುಗಳನ್ನು ನೋಡಿ! “ವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗ “ ಬಹುಷಃ ಕೋಗಿಲೆಯಷ್ಟೇ ನಿಮಗೂ ಖುಶಿಯಾಗಿರಬೇಕು!‘ತನ್ನ ಉಸಿರು ಕಟ್ಟಲಿಲ್ಲ ದನಿ ಗೊಗ್ಗರಾಗಲಿಲ್ಲ’ ಅಂತ ಕೋಗಿಲೆ ಮನುಷ್ಯಾಕ್ರಮಣದಿಂದ ಕಳೆದ ಕೊರಳು ಮರುಪಡೆದ ಸಂತಸ ವ್ಯಕ್ತಪಡಿಸುತ್ತದೆ. ಇಲ್ಲಿ ಕೋಗಿಲೆ, ವಸಂತನಿಗೆ ರೂಪಕ. ವಸಂತ ಪ್ರಕೃತಿಗೆ ಪ್ರತಿಮೆ. ಹಾಗೆ ಕೋಗಿಲೆಗೆ ಸ್ವರ ಬಂದಿದೆ ಎಂದರೆ ಪ್ರಾಕೃತಿಕ ಸಮತೋಲನ ವಾಪಸ್ಸಾಗಿದೆ ಅಂತ. ಉಬ್ಬಸ ಕಳೆದ ನಿಸರ್ಗ ಅನ್ನುವಾಗ, ಇದೇ ಧ್ವನಿ. ಸಾಧಾರಣವಾಗಿ ವಾತಾವರಣ ಕಲುಷಿತಗೊಂಡಾಗ ಉಬ್ಬಸ. ವಾತಾವರಣ ನಿರ್ಮಲವಾದಾಗ,ಪ್ರಕೃತಿಯ ಉಬ್ಬಸ ಕಳೆದಿದೆ. “ಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ !” ಎಡೆಬಿಡದೆ ಸಂಭ್ರಮದಿಂದ ತಳಿರುಮೆದ್ದ ಕೋಗಿಲೆ ಸ್ವರದೌತಣ ಕೊಡುತ್ತೆ. ನೀವೆಲ್ಲಾ ಗಮನಿಸಿರಬಹುದು, ಕೊರೊನಾ ಲಾಕ್ ಡೌನ್ ನಲ್ಲಿ, ಮನುಷ್ಯ ಬಂದಿಯಾದಾಗ, ನಿಸರ್ಗಕ್ಕೆ ಸ್ವಾತಂತ್ರ್ಯ ದಿನದ ಸಂಭ್ರಮ. ಯಾಕೆ ಹೀಗೆ?. ಮನುಷ್ಯ ತಾನು ಮತ್ತು ಪ್ರಕೃತಿಯ ನಡುವೆ ಗೋಡೆ ಕಟ್ಟಿ, ಉಳಿದೆಲ್ಲಾ ಜೀವಸಂಕುಲಗಳನ್ನು ನಿಕೃಷ್ಟವಾಗಿ ನೋಡಿ, ಇಟ್ಟಿಗೆ ಪಟ್ಟಣ ಕಟ್ಟಿದ. ಆ ಪಟ್ಟಣ, ಪಶ್ಚಿಮ ಘಟ್ಟದ ಸಾಲುಗಳಲ್ಲಿ ನಡೆಯುತ್ತಿರುವ ಗುಡ್ಡಕುಸಿತದಡಿಯಲ್ಲಿ ಭೂಗರ್ಭದಲ್ಲಿ ಪಳೆಯುಳಿಕೆಯಾಗುತ್ತಿದೆ . ಕೊರೊನಾದಂತಹ ಕಣ್ಣಿಗೆ ಕಾಣಿಸದ ವೈರಾಣು ದಾಳಿಗೆ ಸಿಕ್ಕಿ ಸ್ತಬ್ಧವಾಗಿದೆ. ಭಾರತೀಯ ಜೀವನಶೈಲಿ ಹೀಗಿತ್ತೇ?. ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || (ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಅವೆಲ್ಲವೂ ಈಶನಿಂದ ಆವೃತವಾದದ್ದು. ಅದನ್ನು ಯಾವತ್ತೂ ನಿನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಡ. ಯಾವ ಸಂಪತ್ತನ್ನೂ ಬಯಸಬೇಡ) ಜಗತ್ತಿನ ಕಣ ಕಣದಲ್ಲಿ, ಜೀವವಿರಲಿ ನಿರ್ಜೀವ ವಸ್ತುವಾಗಿರಲಿ,ಎಲ್ಲದರಲ್ಲೂ ಈಶನನ್ನು ಕಾಣುವ ಆ ಮೂಲಕ ನಮ್ಮನ್ನೇ ಕಾಣುವ ದರ್ಶನ ನಮ್ಮದು.ನಮಗೆ ಸ್ವಾತಂತ್ರ್ಯ ಹೇಗೆ ಇಷ್ಟವೋ, ಹಾಗೆಯೇ ಉಳಿದ ಜೀವಜಾಲದ ಸ್ವಾತಂತ್ರ್ಯವನ್ನು ಗೌರವಿಸಿ ಸಹಬಾಳ್ವೆ , ಉಸಿರಿನಷ್ಟೇ ಸಹಜವಾಗಲಿ. ******************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ







