ಕಾವ್ಯಯಾನ
ನೆನಪಿಗೆ ಅಂಜನಾ ಹೆಗಡೆ ಎಲ್ಲ ಮರೆತೆನೆಂದು ಮೈಮರೆತರೂ ಆಗೊಮ್ಮೆ ಈಗೊಮ್ಮೆ ನೆನಪಾಗುವ ಮುಖಗಳಿಗೆ ಮುಖಕೊಟ್ಟು ಮುಂದಕ್ಕೋಡುವಾಗ ಮೈಯೆಲ್ಲ ಮುಳ್ಳು! ನನ್ನದೇ ನೆರಳು ಅಪರಿಚಿತ ಬೆನ್ನಿಗಂಟಿದ ಹಸ್ತಗಳು ಹತ್ತಾರು ದೃಷ್ಟಿಗಳು ಎಲ್ಲ ಅಸ್ಪಷ್ಟ! ಹಳೆಯದನ್ನೆಲ್ಲ ಹರಿದು ಹರಿದು ಹಂಚಿದಂತೆ ಕಾಲಿಗಡರಿದ ಕಲ್ಲು ಕತೆ ಹೇಳುತ್ತಲೇ ಮಣ್ಣಾಗಿ ಹೋದದ್ದು ಅದೇ ವರುಷ ಮಳೆ ಧಾರಾಕಾರ ಸುರಿದದ್ದು ಎಲ್ಲ ಇತಿಹಾಸವೇ ಇರಬೇಕು ಮುಖಗಳೆಲ್ಲ ಕತೆಗಳು ಈಗ! ದೃಷ್ಟಿಗಳೆಲ್ಲ ಬರಿದೇ ನೋಟಗಳು! ಮಣ್ಣಿದ್ದಲ್ಲಿ ಮರ ಮರದ ತುಂಬೆಲ್ಲ ಹೂವು ಹಣ್ಣು ಮಳೆ ಮಾತ್ರ ನಿಂತಿಲ್ಲ ನೆನಪಿಗೆ ತೀರವಿಲ್ಲ ********









