ಕಾವ್ಯ ಸಂಗಾತಿ
ಸುಮನಾ ರಮಾನಂದ
“ಮಲ್ಲಿಗೆಯ ಸವಿನುಡಿ”


ಮಾನಿನಿಯ ಆರೈಕೆಯಲರಳುವ
ದುಂಡುಮಲ್ಲೆ ಹೂಗಳು ನಾವು..
ಚಿಗುರ ಹಸಿರೆಲೆಯ ನಡುವಲಿ
ರಾಣಿಯಂತೆ ಮೆರೆಯುವೆವು..!!
ನಾಚಿಹ ನವವಧುವರರ ಕರದಲಿ
ಕಟ್ಟಿದ ಮಾಲೆಯಾಗಿ ನಗುವೆವು..
ಪೂಜಾವೇಳೆಯಲಿ ದೈವದ
ಪಾದಾರವಿಂದದಿ ಧನ್ಯರಾಗಿಹೆವು!!
ಮುಂಜಾವಲಿ ಹೂಮಾಲೆಯಾಗಿ
ದೇವರ ಕೊರಳಲಿ ನಲಿವೆವು..
ಹೆಂಗಳೆಯರ ಮುಡಿಯಲಲಂಕರಿಸಿ..
ಮುಸಂಜೆಯಲಿ ನಲುಗುವೆವು!!
ನಾವಿರುವ ಹೂಬನದ ಸುತ್ತ
ಹರಡುತಲಿದೆ ನಮ್ಮ ಕಂಪು..
ನಮ್ಮನು ಜಡೆಯಲಿರಿಸಿದ ನಲ್ಲನ
ಕಂಡು ನಲ್ಲೆಯ ಕೆನ್ನೆ ಕೆಂಪು!!
ಸುಮನಾ ರಮಾನಂದ,ಕೊಯ್ಮತ್ತೂರು



