ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
“ಪ್ರೀತಿಸದಿರು..ಜಾತಿಯನೇ ಪ್ರೀತಿಸು”


ಅನಿವಾರ್ಯ ಇದ್ದರೆ
ಅತ್ತು ಬಿಡು
ಮನದ ಭಾವಗಳ
ಅದೆಷ್ಟು ಹೊತ್ತುಹಿಡಿದಿಡುವಿ
ಇಲ್ಲಿ ಒಲವೆಂಬುದು
ಅಳುವ ಕಲಿಸುವ
ಪಾಠಶಾಲೆ
ಒಲವಿನಲಿ ಇದ್ದವರನು
ಎಲ್ಲರೂ
ಕೊನೆಗೆ ಹೆತ್ತವರೂ
ಅಳಿಸುವವರೇ
ಅದಾವ ಕಾಲದ ದುರ್ದೈವವೋ
ದೇವರುಗಳ ಶಾಪವೋ
ಇಲ್ಲಿನ ದೇವರುಗಳೂ
ನೂರೊ ,ಹತ್ತೋ, ಕನಿಷ್ಠ
ಇಬ್ಬಿಬ್ಬರನ್ನಾದರೂ
ಮದುವೆಯಾಗುವದನ್ನು
ಒಪ್ಪಿವೆ
ಮನದಲಿ ಒಲಿದವರನ್ನು
ಮೆಚ್ಚುವದು ಎದೆಯಲಿಟ್ಟು
ಪ್ರೀತಿಸುವದನು
ತಿರಸ್ಕರಿಸಿವೆ
ಒಲಿದ ಕಾರಣಕ್ಕಾಗಿ
ಹೆತ್ತ ಮಕ್ಕಳನ್ನೇ
ನೇಣಿಗೆ ಹಾಕುವವರು
ಮರ್ಯಾದಾ ಹತ್ಯೆಯ
ಹೆಸರಲ್ಲಿ ಕೊಲ್ಲುವವರೂ
ಇದ್ದಾರೆ
ಜೀವ ಕೊಟ್ಟಾದರೂ
ಜಾತಿ ಉಳಿಸುತ್ತಾರೆ
ಜೀವ ಇಲ್ಲವಾಗಿಸುತ್ತಾರೆ
ಈ ದೇಶ ಮನುಷ್ಯ
ಮನುಷ್ಯರನ್ನು
ಪ್ರೀತಿಸುವ, ಒಲಿಯುವ
ಕಲೆಯ ಕಲಿಸಲೇ ಇಲ್ಲ
ವೈ.ಎಂ.ಯಾಕೊಳ್ಳಿ



