ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
“ಹೃದಯ ಒಡೆದಾಗ”


ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;
ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ!
ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;
ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ!
ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;
ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು!
ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ ಪುಟಗಳ ನವಿರಾಗಿ ತಿರುಗಿಸುವುದು!
ಪ್ರೀತಿ ಏಕಾಂಗಿಯಾಗಿ ಖಾಲಿ ಪ್ರತಿಧ್ವನಿಯಲ್ಲಿ ದುಃಸ್ವಪ್ನಗಳ ಕಂಡಂತೆ ಊಳಿಡುವುದು!
ಭಗ್ನ ಪ್ರೇಮಿಯಷ್ಟೇ ಏಕಾಂತದ ನಿಶ್ಶಬ್ದದಲ್ಲಿ ತನ್ನೊಂದಿಗೇ ಮಾತಾಡುವುದು!
ಭ್ರಮೆಯ ಮಾತುಗಳ ಪ್ರತಿ ಪದದಲ್ಲೂ ನಿನ್ನದೇ ನೆನಪು ಮಧುರವಾಗಿ ತುಳುಕುವುದು!
ನಿನ್ನ ನೆನಪು ಹುಟ್ಟು ಮಚ್ಚೆಯಂತೆ ಬರಡು ಹೃದಯವನ್ನು ಸುದೀರ್ಘವಾಗಿ ಆಳುವುದು!
ಕಣ್ಣೀರೇ ಒಲವಿನ ಭಾಷೆಯಾಗಿ ಪ್ರೇಮದ ಸಿಹಿಕಹಿಯ ಮುಚ್ಚುಮರೆಯಿಲ್ಲದೆ ಹಾಡುವುದು!
ಪ್ರೀತಿಸಿದ ಹೃದಯ ವಿಚಿತ್ರ ಯಾತನೆಯ ಘಮಲು ಅದರ ಸ್ವಭಾವವೇ ಅರ್ಥವಾಗದು;
ವಿರಹದ ಗಾಯದ ಉರಿಯನ್ನೆಲ್ಲ ನಿನ್ನ ಪ್ರೀತಿಯ ಗುರುತಿನ ಸ್ಮಾರಕವಾಗಿ ಸ್ಮರಿಸುವುದು!
ಟಿ.ಪಿ.ಉಮೇಶ್



