ಧಾರಾವಾಹಿ ಸಂಗಾತಿ
ಅರ್ಜುನ ಉವಾಚ
ವಿಶ್ವನಾಥ್ ಎನ್ ನೇರಳೆಕಟ್ಟೆ
ಕೃಷ್ಣದರ್ಶನದ ಹಂಬಲವದು
ಕುದುರೆಯನು ಕಟ್ಟಿಸಿತು


ಚಂಪಕಾನಗರಿಯ ಅರಸ ಹಂಸಧ್ವಜ. ನಿಷ್ಠೆ ನಿಯಮಗಳಿಗೆ ನಿಜಾರ್ಥದ ದೊರೆಯಾಗಿದ್ದವನು. ಇಡಿಯ ಚಂಪಕಾಪುರಕ್ಕೆ ಸರಿಹೊಂದುವ ನಿಯಮಾವಳಿಯನ್ನವನು ರೂಪಿಸಿದ್ದ. ಎಲ್ಲಾ ಪ್ರಜೆಗಳು ಏಕಪತ್ನೀವ್ರತವನ್ನು ಪಾಲಿಸಬೇಕಿತ್ತು. ಕೃಷ್ಣಪೂಜೆಯನ್ನು ಗೈಯ್ಯಬೇಕಿತ್ತು. ದಾನಧರ್ಮಗಳನ್ನು ನಡೆಸಬೇಕಿತ್ತು. ಹೀಗೆ ರಾಜಕೃತ ನಿಯಮಾವಳಿಗಳನ್ನು ಯಾರೂ ಮೀರುವುದಕ್ಕೆ ಸಾಧ್ಯವೇ ಇರಲಿಲ್ಲ. ಪ್ರಜೆಗಳ ಕೆಡುಕಿನ ವರ್ತನೆಯನ್ನು ಸಹಿಸದವನಾಗಿದ್ದ ಹಂಸಧ್ವಜ. ಹಾಗೆಂದು ಕೇವಲ ಪ್ರಜೆಗಳ ಮೇಲೆ ನಿರ್ಬಂಧ ಹೇರಿ ಸುಮ್ಮನಿರುವವನಲ್ಲ ಆತ. ಪ್ರಜೆಗಳಿಗೆ ಇವುಗಳನ್ನು ಬೋಧಿಸುವುದಕ್ಕೂ ಮೊದಲು ತಾನೇ ಪಾಲಿಸಿದವನಾಗಿದ್ದ. ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತಿನಂತೆ ಹಂಸಧ್ವಜನ ಸುಗುಣಗಳನ್ನು ಅಲ್ಲಿನ ಪ್ರಜೆಗಳಲ್ಲಿಯೂ ಕಾಣಬಹುದಾಗಿತ್ತು. ಎಲ್ಲರೂ ಏಕಪತ್ನೀವ್ರತಸ್ಥರಾಗಿದ್ದರು. ಕೃಷ್ಣಪೂಜೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ತಮ್ಮಲ್ಲಿರುವ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ಧನ್ಯಭಾವವನ್ನು ಅನುಭವಿಸುತ್ತಿದ್ದರು. ಹೀಗಿತ್ತು ಚಂಪಕಾನಗರಿ, ನಮ್ಮ ಯಾಗದ ಕುದುರೆ ಅಲ್ಲಿಯ ಧರಣಿಯ ಮೇಲೆ ಕಾಲನ್ನಿರಿಸಿದಾಗ.
ಏಳು ಮಂದಿ ತಮ್ಮಂದಿರಿದ್ದರು ಹಂಸಧ್ವಜನಿಗೆ. ಸುದರ್ಶನ, ಸುಧನ್ವ, ಸುಮನಸ, ಸುರಥ ಎಂಬ ನಾಮಾಂಕಿತ ನಾಲ್ಕು ಮಂದಿ ವೀರ ಪುತ್ರರಿದ್ದರು. ಶಂಖ ಲಿಖಿತ ಎಂಬ ಅಣ್ಣತಮ್ಮಂದಿರು ಹಂಸಧ್ವಜನ ಪುರೋಹಿತರೆನಿಸಿಕೊಂಡಿದ್ದರು. ಇವರಿಬ್ಬರಿಗೂ ಶಾಸ್ತçಪಾಲನೆಯ ವಿಚಾರ ಬಂದಾಗ ಬಾಂಧವ್ಯವಾಗಲೀ, ಆತ್ಮೀಯತೆಯಾಗಲೀ ಮುಖ್ಯವಾಗುತ್ತಿರಲಿಲ್ಲ. ಅದೊಂದು ಸಲ ಲಿಖಿತನ ಆಶ್ರಮಕ್ಕೆ ಬಂದ ಶಂಖ ಅವನಲ್ಲಿ ಕೇಳದೆಯೇ ನೆಲದಲ್ಲಿ ಬಿದ್ದಿದ್ದ ಹಣ್ಣನ್ನು ಎತ್ತಿಕೊಂಡು ತಿಂದ. ಶಂಖನ ವರ್ತನೆಯದು ದೋಷ ಎಂದು ತೀರ್ಮಾನಿಸಿದ ಲಿಖಿತ ಸಹೋದರ ಎನ್ನುವುದನ್ನೂ ಪರಿಗಣಿಸದೆ ಶಿಕ್ಷೆ ಕೊಡಿಸಲು ಹಂಸಧ್ವಜನ ಆಸ್ಥಾನಕ್ಕೆ ಕರೆತಂದಿದ್ದ. ಶಂಖನ ಕೈಗಳನ್ನು ಕತ್ತರಿಸಿಹಾಕುವ ಶಿಕ್ಷೆ ಪ್ರಕಟವಾಯಿತು ಹಂಸಧ್ವಜನ ಕಡೆಯಿಂದ. ಹೀಗೆ ಶಿಕ್ಷೆಗೆ ಒಳಗಾದ ಶಂಖನಿಗೆ ತಪೋಬಲದಿಂದ ಮತ್ತೆ ಕೈ ಮೂಡುವಂತೆ ಮಾಡಿದ ಲಿಖಿತ. ಹೀಗೆ ಸರಿ ತಪ್ಪುಗಳ ವಿವೇಚನೆಗಿಳಿದರೆ ಬೇರಾವುದಕ್ಕೂ ಎಡಗೊಡದ ಕಟ್ಟುನಿಟ್ಟಿನ ಚಿತ್ತದ ಅಣ್ಣತಮ್ಮಂದಿರು ಪುರೋಹಿತರೆನಿಸಿಕೊಂಡು ಹಂಸಧ್ವಜನಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಕುದುರೆಯ ರಕ್ಷಣೆಗಾಗಿ ಚಂಪಕಾನಗರಿಯನ್ನು ಸೇರಿಕೊಂಡ ನಾನು ಪಟ್ಟಣದ ಜನರನ್ನೂ ಹಾಗೆಯೇ ಒಮ್ಮೆ ನೋಡಿದೆ. ಉಣ್ಣುವುದಕ್ಕೆ ಉಡುವುದಕ್ಕೆ ಯಾವ ಕೊರತೆಯೂ ಅಲ್ಲಿನ ಜನರಿಗಿರಲಿಲ್ಲ. ವಸ್ತçಭೂಷಣಗಳಿಂದ, ಅಲಂಕಾರ- ಸುಗಂಧ ದ್ರವ್ಯಗಳಿಂದ ಶೋಭಿಸುತ್ತಿದ್ದರು. ವೀರರು ಎನ್ನುವುದು ಅವರ ನಿಲುವಿನಲ್ಲಿಯೇ ಗೊತ್ತಾಗುವಂತಿತ್ತು.
ಹಾಗೆ ನಾನು ಈಕ್ಷಿಸುತ್ತಿದ್ದಾಗಲೇ ಡಂಗುರದ ದನಿ ಕೇಳಿಬಂತು. ನಮ್ಮ ಕುದುರೆಯನ್ನು ಕಟ್ಟಿಹಾಕುವ ನಿರ್ಧಾರ ಮಾಡಿದ್ದ ಹಂಸಧ್ವಜ. ಅವನು ನಮ್ಮ ಜೊತೆಗಿನ ಯುದ್ಧಕ್ಕೆ ಮನಸ್ಸು ಮಾಡಿದ್ದೇಕೆ ಎಂಬ ವಿಷಯವೂ ಸ್ವಲ್ಪ ಸಮಯದಲ್ಲಿಯೇ ನನ್ನ ಸೇವಕರ ಮೂಲಕ ತಿಳಿದುಬಂತು. ನಮ್ಮ ಯಾಗದ ಕುದುರೆ ಅವನ ನಗರಿಯನ್ನು ಪ್ರವೇಶಿಸಿದ ತಕ್ಷಣವೇ ತನ್ನ ಆಪ್ತ ಸಚಿವರ ಸಭೆಯನ್ನು ಕರೆದನಂತೆ. “ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಅರ್ಜುನನ ಜೊತೆ ಸಂಘರ್ಷಕ್ಕಿಳಿದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ನಮ್ಮ ಈ ಭೂಮಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ಇಷ್ಟರವರೆಗೂ ನಾವು ಯಾರೂ ಕೃಷ್ಣನನ್ನು ಕಂಡವರಲ್ಲ. ಈಗ ಕಾಣುವ ಸುಯೋಗ ಒದಗಿಬಂದಿದೆ. ಕೃಷ್ಣ ಪ್ರತ್ಯಕ್ಷನಾಗಿ ನಮ್ಮನ್ನು ವಿರೋಧಿಸಿದರೂ ಅದು ನಮಗೆ ಸಂತಸವೇ. ಅದಕ್ಕಾಗಿ ಕುದುರೆಯನ್ನು ಕಟ್ಟಿಹಾಕಬೇಕಿದೆ” ಎಂದನಂತೆ. ಅಂದರೆ, ಕೃಷ್ಣದರ್ಶನದ ಹಂಬಲದಿಂದಲೇ ಅವನು ನಮ್ಮ ಯಾಗದ ಕುದುರೆಯ ಚಲನೆಗೆ ತಡೆಯೊಡ್ಡಿದ್ದ. ರಾಜಾಜ್ಞೆ ಹೊರಟ ಮೇಲೆ ಯುದ್ಧ ನಿಶ್ಚಯ ಎನ್ನುವುದು ನನಗೆ ಸ್ಪಷ್ಟವಾಯಿತು.
ಅವನ ಜೊತೆಗೆ ಯುದ್ಧವನ್ನು ಆರಂಭಿಸುವುದಕ್ಕೂ ಮೊದಲು ಅವನ ಬಲಾಬಲಗಳನ್ನು ಅರಿತುಕೊಳ್ಳುವುದು ಬಲುಮುಖ್ಯ ಎನಿಸಿತು. ತಿಳಿದುಕೊಂಡೆ. ಎಪ್ಪತ್ತು ಮಂದಿ ದಳಪತಿಗಳಿದ್ದರು ಅವನ ಸೇನೆಯಲ್ಲಿ. ಒಬ್ಬೊಬ್ಬ ದಳಪತಿಗಳು ಎಪ್ಪತ್ತೊಂದು ಸಾವಿರ ರಥಗಳಿಗೆ, ಇಪ್ಪತ್ತೊಂದು ಸಾವಿರ ಆನೆಗಳಿಗೆ, ಲಕ್ಷ ಕುದುರೆಗಳಿಗೆ, ಲಕ್ಷ ಸೈನಿಕರಿಗೆ ಅಧಿಪತಿಗಳೆನಿಸಿಕೊಂಡಿದ್ದರು. ಹಿರಿದು ಸೈನ್ಯವನ್ನೇ ಎದುರುಹಾಕಿಕೊಳ್ಳಬೇಕಿದೆ ನಾವು ಎನ್ನುವುದು ದೃಢವಾಯಿತು ನನಗೆ.
ಹಂಸಧ್ವಜನೆAಬ ಪ್ರಜಾಪರ ರಾಜನ ಡಂಗುರವನ್ನು ಅಲ್ಲಿನ ಪ್ರಜೆಗಳು ಒಡನೆಯೇ ಪಾಲಿಸಿದರು. ಚತುರಂಗ ಬಲಗಳು ಸಿದ್ಧಗೊಂಡವು. ಯುದ್ಧ ನಡೆಯುವ ತಾಣದೆಡೆಗೆ ನಡೆದುಬರತೊಡಗಿದವು.
ನನಗೆ ವಿಸ್ಮಯ ಮೂಡಿದ್ದು ಯುದ್ಧಕ್ಕೆ ಬರುತ್ತಿದ್ದ ಸೈನಿಕರ ಮೊಗದ ಭಾವನೆಯನ್ನು ಕಂಡಾಗ. ಸಾಮಾನ್ಯವಾಗಿ ಯುದ್ಧಕ್ಕೆ ಬರುವ ಸೈನಿಕರಲ್ಲಿ ವೀರತ್ವ ಮನೆಮಾಡಿರುತ್ತದೆ. ಜೊತೆಗೆ ಅಂಜಿಕೆಯೂ ಇರುತ್ತದೆ. ಆದರೆ ಚಂಪಕಾನಗರಿಯ ಸೈನಿಕರ ಮೊಗದಲ್ಲಿ ಹರ್ಷಭಾವ ತುಂಬಿ ತುಳುಕುತ್ತಿತ್ತು. ಅದರ ಹಿಂದಿನ ಕಾರಣವನ್ನು ತಿಳಿದುಕೊಂಡೆ. ಕೃಷ್ಣ ಪ್ರತ್ಯಕ್ಷವಾಗದೆ ನನಗೆ ಸೋಲುವವನಲ್ಲ ಹಂಸಧ್ವಜ ಎನ್ನುವುದು ಸೈನಿಕರಿಗೆ ಖಚಿತವಾಗಿತ್ತು. ಕೃಷ್ಣದರ್ಶನ ತಮಗೆ ಲಭಿಸುತ್ತದೆ. ತಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬ ಭಕ್ತಿಭಾವದ ಶರಧಿಯಲ್ಲಿ ತೇಲುತ್ತಾ, ಸೊಗಭಾವ ಅನುಭವಿಸುತ್ತಿದ್ದರು ಆ ಸೈನಿಕರು.
ಹೀಗೆ ಯುದ್ಧರಂಗದೆಡೆಗೆ ನಡೆದುಬರುತ್ತಿದ್ದ ಸೈನಿಕರನ್ನು ನೋಡುತ್ತಿದ್ದರು ಉಪ್ಪರಿಗೆಗಳಲ್ಲಿ ನಿಂತ ಅಂಗನೆಯರು. ರಣರಂಗದ ಮೇಲಿನ ಯುದ್ಧಕ್ಕೂ ಮೊದಲು ಶಯನಗೃಹದ ಸರಸಕಾಳಗದೆಡೆಗೆ ಗಂಡನ ಮನಸ್ಸನ್ನು ಸೆಳೆದ ಅದೆಷ್ಟೋ ಕಾಮಿನಿಯರು ಯುದ್ಧ ಮಾಡುವುದಕ್ಕೆ ಬೇಕಾದ ಭರಪೂರ ಉತ್ಸಾಹವನ್ನು ಅವರಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದರು.
ಯುದ್ಧಕ್ಕೆ ಸಿದ್ಧವಾಗಿ ನಾವೂ ನಿಂತೆವು. ಹಂಸಧ್ವಜನ ಸೇನೆಯೂ ನಿಂತಿತು. ಯಾರದೋ ಆಗಮನಕ್ಕೆ ಕಾಯುತ್ತಿರುವಂತೆ, ಅವನೇಕೆ ಇನ್ನೂ ಬಂದಿಲ್ಲ ಎಂದು ಅತ್ತಿತ್ತ ನೋಡುತ್ತಿರುವಂತೆ ಹಂಸಧ್ವಜನ ವರ್ತನೆಯಿತ್ತು. ರಣಕಹಳೆ ಇನ್ನೂ ಮೊಳಗಿರಲಿಲ್ಲ. ಯಾರಿಗಾಗಿ ಕಾಯುತ್ತಿದ್ದಾನೆ ಹಂಸಧ್ವಜ?! ನನಗೆ ಅರ್ಥವಾಗಲಿಲ್ಲ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ

