ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂದಿಹೆವು ಬಹುದೂರ ಗೆಳತೀ
ನೋಡೊಮ್ಮೆ ಹಿಂದೆ…
ಇದೆ ಹಾದಿಯಲಿ ಹಾದು ಹೋದವರು…
ಜೀತದೆತ್ತುಗಳೂ ನಮ್ಮವಂತೆಯೆ
ಘಣ ಘಣ ಗಂಟೆಯ ಮಾಲೆ
ಘಮ ಘಮ ಮಲ್ಲಿಗೆ ಕೊರಳಲೆ
ಅರಿಶಿನ ಕುಂಕುಮ ನೊಸಲಲಿ
ಕೊಂಬಿಗೆ ಗೊಂಡೆಯ ಚೆಂಡು…

ಒಳಗೆ…
ಉಸಿರೊತ್ತುವ ವಜ್ರದ ನತ್ತು
ಕೊರಳೆಳೆವ ಮುತ್ತಿನ ಹಾರ
ಕೈ ತುಂಬ ಬಳೆಭಾರ
ಮಣ ಭಾರ ಒಡ್ಯಾಣ
ಗುಟ್ಟು ಬಿಟ್ಟು ಕೊಡುವುದಣ್ಣ
ಬೆಳ್ಳಿ ಬಿಗಿ ಕಾಲಂದುಗೆ
ಕಳ್ಳ ಕಾಕರ ಭಯ
ಮಾನನಷ್ಟದ ಭಯ
ಸೊಲ್ಲೆತ್ತಿದರೆ ಗೋಣು
ಮುರಿವರೆನ್ನುವ ಭಯ
ಪಟ್ಟೆಸೀರೆಯನುಟ್ಟು ಮುದುರಿ
ಕುಳಿತವರು ಮೂಲೆಯಲಿ
ಸೆರಗೊಳಗೆ ಸದ್ದಾಗದಂತ್ತವರು
ತಮ್ಮ ಸಾರ್ಥದ ಗಮ್ಯವೆತ್ತ ?
ಉಸಿರೆತ್ತಿ ಕೇಳಲಾರದೆ
ಹೊದ್ದ ಮುಸುಕಿನೊಳಗೆ
ಕಾಲಕ್ಕೆ ಸಂದುಹೋದವರು

ಇಂದು –
ನಮಗಿಲ್ಲ ಒಡವೆ ಹೆಣ ಭಾರ
ಬಿಚ್ಚು ನಗುವೆ ನಮ್ಮ ಕಂಠೀಹಾರ
ಧೈರ್ಯ ಸ್ಥೈರ್ಯವೆ ಷೋಡಶ ಸಿಂಗಾರ
ಕಾವ ದೇವರದು ವಿದ್ಯೆಬುದ್ಧಿಯ ಸಾರ
ಹರಿದು ಬಂದೆವು ಗೆಳತೀ
ಆ ಕಪ್ಪು ಭೀತಿಯ ಪರದೆ
ಹೀರೋಣವೀ ಸ್ವಚ್ಛಂದ ಗಾಳಿ
ಹೂಡೋಣ ನಮ್ಮ ಎತ್ತುಗಳ ನಾವೆ
ಕಟ್ಟೋಣ ನಮ್ಮ ಇಹಪರಾರ್ಥವ ನಾವೆ
ಸವೆಸೋಣ ಏರುಪೇರಿನ ದಾರಿ
ಸೇರೋಣ ನಮ್ಮ ಗಂತವ್ಯ ನಾವೇ


About The Author

1 thought on “ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ””

Leave a Reply

You cannot copy content of this page

Scroll to Top