ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಿನ ಬೆಳಗ್ಗೆ ವಾಕಿಂಗಿಗೆ ಹೋಗುವಾಗ ಆ ಮನೆ ಅದೇಕೊ ನನ್ನನ್ನು ಸೂಜಿ ಗಲ್ಲಿನಂತೆ ಸೆಳೆಯುತ್ತಿತ್ತು.  ಹಳೆಯದಾದ ದೊಡ್ಡ ಹಂಚಿನಮನೆ. ಸುತ್ತಲು ವಿಶಾಲವಾದ ಜಾಗದಲ್ಲಿ ಹುಲ್ಲು ಕಡ್ಡಿ ಬೆಳೆದಿತ್ತು. ಒಂದೆರಡು ಮಾವಿನ ಗಿಡಗಳು ಬೊಳಾಗಿದ್ದವು. ಚಿಕ್ಕುಗಿಡದಲ್ಲಿ ಹಣ್ಣುಗಳಾಗಿದ್ದರೂ ಅದನ್ನಾರೂ ಹರಿದಂತೆ ಕಾಣಿಸುತ್ತಿರಲಿಲ್ಲ. ಸುತ್ತಲು ಹುಲ್ಲಿನ ಪೊದೆ. ಗಿಡಗಳ ಮದ್ಯೆ ಒಂದು ಹುತ್ತು ಬೆಳೆದಿತ್ತು. ಕಂಪೌಂಡಿಗೆ ಸುಣ್ಣಬಣ್ಣವಿಲ್ಲದೇ ಹಾಳಾಗಿತ್ತು. ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಮನೆಗೆ ಬೀಗ ಹಾಕಲಾಗಿತ್ತು. ಬಹುಶಃ ಆ ಮನೆಯಲ್ಲಿ ಯಾರು ಇರುತ್ತಿರಲಿಲ್ಲವೆಂದು ಕಾಣುತ್ತದೆ. ಹೋಗುವಾಗ ಬರುವಾಗೊಮ್ಮೆ ಆ ಮನೆಯನ್ನೆ ಸ್ವಲ್ಪ ಹೊತ್ತ ನೋಡುತ್ತ ನಿಲ್ಲುತ್ತಿದ್ದೆ‌.

ಅಂದು ಆ ಮನೆಯ ಮುಂದೆ ನೋಡುತ ನಿಂತಾಗ ನನ್ನದೇ ಯೊಚನಾಲಹರಿಯಲ್ಲಿ ಮುಳಗಿಹೋಗಿದ್ದೆ. ಒಂದಾನೊಂದು ಕಾಲದಲ್ಲಿ ಈ ಮನೆ ಅಜ್ಜ ಅಜ್ಜಿ ಮಗ ಹೆಂಡತಿ ಮೊಮ್ಮಕ್ಕಳಿಂದ ಮನೆ ತುಂಬಿರಬಹುದು. ಮನೆಯ ಅಂಗಳ ನಂದನವನವಾಗಿದಿತ್ತು. ತರಹ ತರಹದ ಹಣ್ಣುಗಳ ಗಿಡಗಳು. ತರತರಹದ ಹೂಗಳ ಗಿಡಗಳು ಅಂಗಳದಲ್ಲಿ ಬೆಳದಿದ್ದವೇನೊ, ಬೆಳಗಿನ ಜಾವ ಹಕ್ಕಿಗಳ ಕಲರವದ ನೀನಾದ, ಮದ್ಯಾಹ್ನದಲ್ಲಿ ದುಂಬಿಗಳ ಜೇಂಕಾರ, ತರತರಹದ ಪಾತರಗಿತ್ತಿಗಳ ಹಾರಾಟವಿತ್ತೇನೊ. ಹೌದು ಒಂದಾನೊಂದು ಕಾಲದಲ್ಲಿ ಸಜ್ಜನರ ಗೂಡಿಂದ ಸುಂದರವಾದ ಹೂದೋಟದಿಂದ ಎಲ್ಲರ ಮನಗೆದ್ದಿತೇನೊ ಎಂದು ಯೋಚಿಸುತ ಕನಸಿನ ನನ್ನ ಲೋಕದಿಂದ ಹೊರಬಂದಾಗ ಮನೆ ನೋಡಿ ಬಸವಣ್ಣನವರ ವಚನವೊಂದು ಕಣ್ಮುಂದೆ ಹಾದು ಹೋಯಿತು.

ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ
ಮನೆಯೊಳಗೆ ರಜ ತುಂಬಿ…..

 ಎನ್ನುವ ವಚನ ಮನದಲ್ಲೆ ಗುಣಗುಣಿಸುತ್ತಾ ನಡೆದೆ.

ಹೀಗೇಯೆ ಒಂದು ವಾರದ ನಂತರ ಆ ಮನೆಯ ಮುಂದೆ ಹಾದು ಹೋಗುವಾಗ ಮನೆಯ ಬಾಗಿಲು ತೆಗೆದಂತೆ ಮನೆಯಲ್ಲಿ ಯಾರೊ ಇದ್ದಂತನಿಸಿತು. ಮನೆಯ ಗೇಟಿನ ಸಮೀಪ ನಿಂತು ನೋಡತೊಡಗಿದೆ. ಒಳಗಿಂದ ಒಬ್ಬ ಎಪ್ಪತ್ತರ ಆಸು ಪಾಸಿನ ಒಬ್ಬ ವ್ಯಕ್ತಿ ಹೊರಗಡೆ ಬಂದು ಮನೆಯ ವಿಶಾಲವಾದ ಹುಲ್ಲು ಕಸ ಕಡ್ಡಿ ಬೆಳೆದ ವರಾಂಡವನ್ನು ದಾಟುತ್ತ ಗೇಟ ಕಡೆಗೆ ಬಂದರು.

ನಾನು ನೋಡುತ್ತ ನಿಂತಿದ್ದನ್ನು ನೋಡಿದ ಆ ವ್ಯಕ್ತಿ “ಬನ್ನಿ ಸರ್ ಒಳಗೆ ಯಾರ‌ಬೇಕಾಗಿತ್ತು” ಎಂದು ಕೇಳಿದರು.

ನಾನು “ಏನೂ ಬೇಕಿಲ್ಲ ಸರ್. ದಿನಾ ನಾನು ಇದೆ ಮಾರ್ಗದಲ್ಲಿ ವಾಕಿಂಗಿಗೆ ಹೋಗುತ್ತೇನೆ. ನಿಮ್ಮ ಮನೆ ಯಾವಾಗಲೂ ಬೀಗ ಹಾಕಿರುತ್ತತ್ತು. ಇವತ್ತು ಯಾರೊ ಇದ್ದ ಹಾಗೆ ಅನಿಸಿತು ಅದಕೆ ನೋಡಿದೆ. ನನ್ನ ಹೆಸರು ಮಹಾಲಿಂಗ ಪಾಟೀಲ ಅಂತ. ಇಲ್ಲಿಯೇ ಕೆನರಾ ಬ್ಯಾಂಕನಲ್ಲಿ ಕ್ಲರ್ಕ ಆಗಿ ಕೆಲಸ ಮಾಡುತ್ತಿದ್ದೇನೆ…..ಅಂದ್ಹಾಗೆ ನಿಮ್ಮ ಹೆಸರೇನು ಸರ್…. ನೀವು ಏನ್ ಮಾಡಿಕೊಂಡಿದಿರಾ” ಎಂದು ಕೇಳಿದೆ.

ಆ ವ್ಯಕ್ತಿ “ಪಾಟೀಲರೆ… ನನ್ನ ಹೆಸರು… ವೆಂಕಟೇಶ ದೇಸಾಯಿ ಅಂತ. ನಾನು ಸ್ಕೂಲ ಮಾಸ್ತರು. ಹೆಡಮಾಸ್ಟರಾಗಿ ರಿಟೈರ್ಡಾಗಿ ಈಗ ಹತ್ತು ವರ್ಷವಾಯಿತು. ನಡಿರಿ ನಾನು ವಾಕಿಂಗಗೆ ಹೋಗುತ್ತಿದ್ದೇನೆ. ನನಗೂ ಕಂಪನಿ ಸಿಕ್ಕಂಗಾಯಿತು” ಎಂದು ನನ್ನ ಜೊತೆಗೆ ಬಂದರು.

ಒಂದು ವಾರದ ಹತ್ತಿರವಾಗಿತ್ತು ನಾನು ಅವರ ಮನೆಯ ಬಳಿಗೆ ಹೋಗುತ್ತಲೇ ದೇಸಾಯಿ ಮಾಸ್ತರರು ನನ್ನ ಜೊತೆಯಾಗುತ್ತಿದ್ದರು. ಹಲವು ಸಲ ನಿವೂ ಇದುವರೆಗೆ ಎಲ್ಲಿದ್ದಿರಿ. ಇಷ್ಟು ದೊಡ್ಡ ಮನೆ ಸುತ್ತಲು ವಿಶಾಲವಾದ ಜಾಗ ಬಿಟ್ಟು ಹೋಗುವಂತ ಪರಿಸ್ಥಿತಿ ಏನು? ಮನೆಯ ವರಾಂಡದಲೆಲ್ಲಾ ಹುಲ್ಲು ಕಡ್ಡಿ ಬೆಳೆದಿದೆ. ಬಹುಶಃ ನಿಮಗೆ ಮಕ್ಕಳಾರು ಇಲ್ಲವೇ? ಅಥವಾ ನಿಮ್ಮ ಮದುವೆಯೇ ಆಗಿಲ್ಲವೇ? ಎಂದು ಅನೇಕ ಪ್ರಶ್ನೆಗಳನ್ನು ಕೇಳಬೇಕೆಂದರೂ ಸಮಯ ಬಂದಾಗ ಅವರೆ ಹೇಳುತ್ತಾರೆ ಎಂದು ಸುಮ್ಮನಾದೆ.

ಒಂದು ದಿನ ಹಾಗೆ ನನ್ನ ಕೆಲಸದ ಬಗ್ಗೆ, ಮತ್ತು ಹೆಂಡತಿ ನನಗಿಬ್ಬರೂ ಆರತಿಗೊಬ್ಬಳು ಕೀರ್ತಿಗೊಬ್ಬ ಇಬ್ಬರು ಮಕ್ಕಳು. ನಮ್ಮ ಮನೆ ಸಣ್ಣದಾದರೂ ನಂದನವನದಂತಿದೆ ಎಂದು ಹೇಳಿದೆ. ಇದೆ ಅವಕಾಶವೆಂದು ನಿಮಗೆ ಎಷ್ಟು ಮಕ್ಕಳು ಅಥವಾ ನೀವು ಬ್ರಹ್ಮಚಾರಿಯಾ? ಮನೆ ಅಷ್ಟೂ ದೊಡ್ಡದಿದ್ದರೂ ಸುತ್ತ ಮುತ್ತಲು ಕಸ ಬೆಳೆದು ನೋಡುವರಾರು ಇಲ್ಲ ಅಥವಾ ನಿಮಗೆ ಮಕ್ಕಳೆ ಇಲ್ಲವೇ? ಎಂದಾಗ ದೇಸಾಯಿ ಮಾಸ್ತರು

 “ಅಯ್ಯೊ ಬ್ರಹ್ಮಚಾರಿ ಏನಿಲ್ಲ ನನಗೆ ಮದುವೆಯಾಗಿ ಎರಡು ಗಂಡು‌ಮಕ್ಕಳು ಇದ್ದಾರೆ. ಆದರೆ ಏನೂ ಮಾಡುವದು ಮಕ್ಕಳ ಮನಸ್ಸಿನೊಳಗೆ ಆಸೆ, ದುರಾಸೆ, ಅಸಹನೆ, ತಾತ್ಸಾರದ ಕಸ ಬೆಳೆದಾಗ , ನನ್ನವರು, ನನ್ನದು ಎನ್ನುವ ಭಾವನೆಯೇ ಇಲ್ಲದಾದಾಗ ಮನೆ ಏನು ಹಸನಾಗಿದ್ದಿತು. ಇನ್ಮೂ ಮನೆ ಹೊರಗೆ ಕೇಳಬೇಕೆ ಯಾರೂ ನೋಡದಂತಾಗಿ ಕಸ ಕಡ್ಡಿ ಬೆಳೆಯುವದು ಸಹಜವೇ ತಾನೆ…..  ಸಣ್ಣವರಿದ್ದಾಗ ಮಕ್ಕಳು ಮರಿ ಅಂತ ಅವರಿಗೋಸ್ಕರ ಅವರ ಭವಿಷ್ಯಕ್ಕೊಸ್ಕರ ಎನೆಲ್ಲಾ ಜವಾಬ್ದಾರಿಗಳನ್ನ, ಕಷ್ಟಗಳನ್ನ ಅನುಭವಿಸುತ್ತೇವೆ. ಆದರೆ ಅದೇ ಕಷ್ಟ ಕಾರ್ಪಣ್ಯಗಳು ನಾವು ವಯಸ್ಸಾದಾಗ ಮಕ್ಕಳು ನಮಗಾಗಿ ಹೊರವರು ಎನ್ನುವದು ಭ್ರಮೆ, ಸುಳ್ಳು ನಿರೀಕ್ಷೆ” ಎಂದರು. ಅವರು ತಮ್ಮ ಕಥೆ ಹೇಳ ತೊಡಗಿದರು.

********

ನಾನು ಸ್ಕೂಲ ಮಾಸ್ತರರಾಗಿ ಸೇರಿಕೊಂಡೆ. ಅಪ್ಪನಿಂದ ಬಳುವಳಿಯಾಗಿ ಬಂದ ಊರಲ್ಲಿಯ ಎರಡು ಎಕರೆ ಹೊಲ. ಈ ವಿಶಾಲ ಮನೆಗೆ ವಿಶಾಲಮ್ಮ ನನ್ನ ಮಡದಿಯಾಗಿ ಬಂದಳು. ನನ್ನ ಕಷ್ಟ ಸುಖಗಳಲ್ಲಿ ಜೊತೆಯಾದಳು. ನನಗೆ ಇಬ್ಬರು ಮುದ್ದಾದಗಂಡು ಮಕ್ಕಳಾದರು. ರಘುರಾಮ ಮತ್ತು ಶ್ರೀರಾಮ ಎಂದು ಹೆಸರಿಟ್ಟೆ. ಇಬ್ಬರಿಗೂ ಎರಡು ವರ್ಷಗಳ ಅಂತರ. ಇಬ್ಬರನ್ನು ಊರಲ್ಲಿಯ ಎರಡು ಎಕರೆ ಹೊಲ‌ಮಾರಿ ಚೆನ್ನಾಗಿ ಓದಿಸಿದೆ. ಮೊದಲನೇಯ ಮಗ ತಾಲೂಕ‌ ಛೇರಿಯಲ್ಲಿ
ಗುಮಾಸ್ತನಾದ. ಎರಡನೇಯವ ಇಂಜನೀಯರಿಂಗ ಓದಿ ಮುಂಬೈಯಲ್ಲಿ ಉದ್ಯೊಗ ಅರಸಿ ಹೊರಟ. ಮೊದಲನೇಯ ಮಗ ನನ್ನ ಜೊತೆಯೇ ಇದೆ ಮನೆಯಲ್ಲಿ ಇರತೊಡಗಿದ.

ಇಬ್ಬರಿಗೂ ಶ್ರೀಮಂತ ಕುಟುಂಬದ ಸುಂದರ ಹುಡಗಿಯರನ್ನು ನೋಡಿ ಮದುವೆ ಮಾಡಿದೆ. ಮೊದಲನೆಯ ರಘುರಾಮನ ಹೆಂಡತಿ ಬಹಳ ದುರಾಶೆಯ, ತಳಕು ಬಳುಕಿನ ಬದುಕಿಗೆ ಮಾರು ಹೋದ ಹುಡಗಿಯಾಗಿದ್ದಳು. ಅವಳು ಗಂಡನಿಗೆ ಫ್ರಿಜ್, ವಾಸಿಂಗ ಮಶಿನ್, ಬೆಲೆ ಬಾಳುವ ರೇಷ್ಮೆ ಬಟ್ಟೆ, ಒಡವೆಗಾಗಿ ಗಂಡನನ್ನ ಪೀಡಿಸ ತೊಡಗಿದಳು. ಹೆಂಡತಿಯ ಆಶೆಗೆ ಮಗ ರಘುರಾಮ ಲಂಚ ಪಡೆಯತೊಡಗಿದ. ಒಮ್ಮೆ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ. ಹೆಂಡತಿ ತವರು ಮನೆ ಸೇರಿದಳು.  ಹಾಗೊ ಹೀಗೊ ಮಾಡಿ ಮಗನನ್ನು ಬಿಡಿಸಿಕೊಂಡು ಬಂದೆ.

ತೀವ್ರ ಆಘಾತಕ್ಕೆ ಒಳಗಾದ ಮಗ ಆತ್ಮ ಹತ್ಯೆ ಮಾಡಿಕೊಂಡ. ಎರಡನೇಯ ಮಗ ಇದ್ದು ಇಲ್ಲದಂತವ. ಎಷ್ಟೊಂದು ಓದಿಸಿ ದೊಡ್ಡ ಸಂಪಾದನೆ ತರುವಂತ ಇಂಜನೀಯರನ್ನಾಗಿ ಮಾಡಿದೆ. ಆದರೆ ಆ ಮಗನ ಮನೆಗೆ ಹೋದರೆ ಅಲ್ಲಿ ನಮ್ಮನ್ನು ಅಸಹನೆಯಿಂದ, ತಾತ್ಸಾರದಿಂದ ನೋಡುತ್ತಿದ್ದರು. ಬೇಡವೆಂದು ಇಲ್ಲಿಯೇ ಉಳಿದೇವು. ಹೆಂಡತಿ ನಾನು ಚೆನ್ನಾಗಿ ಇರುವವರೆಗೆ ಮನೆ ಮನೆಂಗಳ ಎಲ್ಲವೂ ಚೆನ್ನಾಗಿ ನೋಡಿಕೊಂಡು ಹೋಗುತ್ತಿದ್ದೇವು.

ಆದರೆ ನನ್ನ ಹೆಂಡತಿಗೆ ಅಸ್ತಮಾ ಸೇರಿತು. ಆಗ ನನ್ನ ಮಗನಾಗಲಿ ಸೊಸೆಯಾಗಲಿ ನಮ್ಮ ಕಡೆ ಬನ್ನಿ ನೋಡುತ್ತೇವೆ ಅನ್ನಲೇ ಇಲ್ಲ. ನನಗೆ ಕೈಲಾದಷ್ಟು ಹೆಂಡತಿಯನ್ನು ಗುಣಪಡಿಸಲು ಆಸ್ಪತ್ರೆಗೆ ತೊರಿಸಿದೆ. ಆದರೆ ಅವಳು ಉಳಿಯಲಿಲ್ಲ.  ನನ್ನ ಹೆಂಡತಿ ತೀರಿ ಹೋಗಿ ಈಗ ನಾಲ್ಕೈದು ವರ್ಷಗಳಾಗಿವೆ. ನನಗೂ ವಯಸ್ಸಾಗಿದ್ದರಿಂದ ಇಲ್ಲಿ ಒಬ್ಬನೇ ಇರಲಾಗದೆ ಅನಿವಾರ್ಯವಾಗಿ ಮಗನ ಮನೆಯಲ್ಲಿದ್ದೇನೆ. ಸೊಸೆಯ ತಾತ್ಸಾರ, ಅಸಹನೆಯ ನಡೆಯನ್ನು ಸಹಿಸಿಕೊಂಡು ಇನ್ನೂ ಬದುಕಿದ್ದೇನೆ.

ಮಗ ಮನೆಯನ್ನು ಮಾರಿ ಬಿಡು ಅಪ್ಪಾ ಅನ್ನುತ್ತಿದ್ದಾನೆ. ನಾಡು ಬಾ ಅನ್ನುತ್ತೆ ಕಾಡು ಹೋಗು ಅನ್ನುತ್ತೆ.  ಅದೇಕೊ ಮನಸ್ಸಿಗೆ ನನ್ನ ವಿಶಾಲಳು ನನ್ನನ್ನು ಕರೆದಂತೆ ಬಾಸವಾಯಿತು. ಅವಳ ಪೊಟೊ ಇದೆ ಮನೆಯಲ್ಲಿದೆ. ಅದನ್ನು ತೆಗೆದುಕೊಳ್ಳಲು ಹಾಗೆಯೆ ಮನೆ ಮಾರುವದಕ್ಕೆ ಎಜಂಟರನ್ನು ವಿಚಾರಿಸಲು ಒಂದುವಾರ ಇದ್ದು ಹೋದರಾಯಿತು ಎಂದು ಬಂದೆ. ಇಲ್ಲಿಗೆ ಬಂದ ಮೇಲೆ ಅದೇಕೊ ಮಗನ ಆತ್ಮ ಹತ್ಯೆ, ಹೆಂಡತಿಯ ಸಾವಿನ ಹಳೆಯ ನೆನಪುಗಳು ಕಾಡಿದವು. ನಿನ್ನೆ ಒಬ್ಬ ಎಜೆಂಟನಿಗೆ ಮನೆಯನ್ನು ಮಾರುವ ಬಗ್ಗೆ ತಿಳಿಸಿದ್ದೇನೆ.  ನಾಳೆ ಮಗನ ಹತ್ತಿರ ಹೊರಟಿದ್ದೇನೆ. ಎಂದು ತಮ್ಮ ಕಥೆ ಹೇಳಿದರು.

ನಾನು “ಮನೆಗೆ ಒಮ್ಮೆ ಬಂದು ಹೋಗಿ ಸರ್” ಎಂದು ಅಹ್ವಾನಿಸಿದೆ.

“ಇಲ್ಲ ನಾಳೆ ಬೆಳಿಗ್ಗೆಯೇ ಹೊರಡುತ್ತಿದ್ದೇನೆ. ನೋಡೊಣ ದೇವರು ನಿಮ್ಮನ್ನು ಮತ್ತೊಮ್ಮೆ ಕಾಣುವ ಭಾಗ್ಯ ಬರೆದಿದ್ದಿರೆ ಖಂಡಿತಾ ಭೇಟಿ ಆಗೋಣ” ಎನ್ನುತಿರಲು ಅವರ ಮನೆ ಗೇಟು ಬಂತು. ದೇಸಾಯರು ಕೈಯಲ್ಲಿ ಕೋಲು ಹಿಡಿದು ಗೇಟ ಬಾಗಿಲು ತೆಗೆದು ಒಳ ಹೊರಟರು ಹಿಂದೆಯೇ ಅವರನ್ನು ನೋಡುತ ಸ್ವಲ್ಪ ಹೊತ್ತು ನಿಂತೆ.  

*******

 ಅದೇಕೊ ಅವರ ಕಥೆ ಕೇಳಿ ಮನಕೆ ಬೇಸರವಾಗಿ ಒಂದೆರಡು ದಿನ ವಾಕಿಂಗಗೆ ಹೋಗಲು ಮೂಡೆ ಬರಲಿಲ್ಲ. ಹೆಂಡತಿ “ಏಕೆ ವಾಕಿಂಗೆ ಹೋಗುವದಿಲ್ಲವೇ? ಏನಾದರೂ ತೊಂದರೆಯಾ” ಎಂದಾಗ. “ಏನಿಲ್ಲ ಆಮೇಲೆ ಹೇಳುತ್ತೇನೆ” ಎಂದು ವಾಕಿಂಗೆ ಹೊರಟೆ. ನನ್ನ ಕಾಲಗಳದೇಕೊ ದೇಸಾಯರ ಮನೆ ಹತ್ತಿರ ಬಂದಾಗ ತಾವಾಗಿಯೇ ನಿಂತು ಕೊಂಡವು.  ಮನದೊಡೆಯ ಮನೆಯೊಳಗೆ ಇರಲಿಲ್ಲ. ಮನವೇಕೊ ಬಾರವಾದಂತೆನಿಸಿತು. ಬಾಗಿಲ ಬಳಿ ಬಂದಾಗ ಬಾಗಿಲಿಗೆ ಕೀಲಿ ಹಾಕಿತ್ತು.

ಮೊದಲ ಅನೇಕ ಬಾರಿ ನೋಡಿದಾಗ ಮನದಲ್ಲಿ ಗುಣಗಣಿಸುತ್ತಿದ್ದ ಬಸವಣ್ಣನವರ ವಚನ  ದೂರದ ಗಾಳಿಯಲ್ಲಿ ತೇಲಿ ಬಂದು ಕಿವಿಯಲ್ಲಿ ಗುನುಗುನಿಸಿದಂತೆ ಭಾಸವಾಯಿತು.

 *ಮನೆಯೊಳಗೆ* *ಮನೆಯೊಡೆಯನಿದ್ದಾನೊ*
 *ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ*
 *ಮನೆಯೊಳಗೆ ರಜ ತುಂಬಿ*
 *ಮನೆಯೊಳಗೆ* *ಮನೆಯೊಡೆಯನಿದ್ದಾನೊ*
 *ಇಲ್ಲವೊ ತನುವಿನಲ್ಲಿ ಹುಸಿ ತುಂಬಿ*
 *ಮನದೊಳಗೆ ವಿಷಯ ತುಂಬಿ* *ಮನದೊಳಗೆ* [ *ಮನದೊ]ಡೆಯನಿದ್ದಾನೊ*
 *ಇಲ್ಲವೊ ಇಲ್ಲ*
 *ಕೂಡಲಸಂಗಮದೇವಾ* .


About The Author

2 thoughts on ““ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ”

  1. Best story ದೇಸಾಯಿ ಯವರು ವಲ್ಲದವರ ಜತೆ ಹೊಂದಾಣಿಕೆ ಮಾಡಿಕೊಬಾರದಿತ್ತು ಎಷ್ಟೇ ತ್ರಾಸ್ ಇರಲಿ ತಮ್ಮ ಮನೆಯಲ್ಲೇ ಇರಬೇಕಿತ್ತು

  2. ಕಥೆ ತುಂಬಾ ಚೆನ್ನಾಗಿದೆ ಎಲ್ಲರ ಮನ ಮುಟ್ಟುವ ಕಥೆ

Leave a Reply

You cannot copy content of this page

Scroll to Top