ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು”
ನೆನಪುಗಳ ಸಂಗಾತಿ ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು” ಕಾಲೇಜು ದಿನಗಳ ಸವಿ ನೆನಪುಗಳೇ ಹಾಗೆ.. ನಮ್ಮ ಕಾಲೇಜು ಓದು ಮುಗಿದ ನಂತರವೂ ಕೆಲವು ಘಟನೆಗಳು.. ಮರೆಯಲಾಗುವುದಿಲ್ಲ ಗೆಳೆಯರ ಜೊತೆ ಆ ದಿನಗಳ ಆಟ, ಕೋಪ, ಮುನಿಸು, ಲವ್.. ನಮ್ಮ ಹೀರೋಯಿಜಂ ಇವೆಲ್ಲವೂ ಆಗಾಗ ನೆನಪಾಗುತ್ತಲೆ ಇರುತ್ತದೆ.. ಒಮ್ಮೊಮ್ಮೆ ಮತ್ತೆ ಆ ಲೈಫ್ ಬರಬಾರದೆ ಎನಿಸುತ್ತದೆ..ಆದರೆ ನನ್ನ ಕಾಲೇಜು ಲೈಫ್ನನಗೆ ಮರೆಯಲಾಗದೆ ಉಳಿದುಹೋಗಿದೆ.. ಈ ಘಟನೆ ನನ್ನನ್ನು ಸದಾ ಕಾಡುತ್ತಿದೆ.. ಸೆಕೆಂಡ್ ಇಯರ್ ಡಿಗ್ರಿಯಲ್ಲಿ ಓದುವಾಗ ನಾನು ಸಹ ಪ್ರೀತಿಯ ಅಲೆಯಲ್ಲಿ ಸಿಲುಕಿದ್ದೆ ನನ್ನ ಪ್ರೀತಿ ಅವಳ ಬಳಿ ನಿವೇದಿಸಲಾಗದೆ ಒದ್ದಾಡುತ್ತಿದ್ದೆ.. ಅದೆಷ್ಟೋ ಸಂಧರ್ಭ ಸಿಕ್ಕರು ಹೇಳಲಾಗದೆ ತಡವರಿಸುತ್ತಿದ್ದೆ.. ಗೆಳೆಯರು ದೈರ್ಯ ತುಂಬಿದರೂ ಆಕೆಯ ಮುಂದೆ ನಿಂತು ಹೇಳುವ ದೈರ್ಯ ನನಗೆ ಬರಲಿಲ್ಲ..!ಅದೊಂದು ದಿನ ಕಾಲೇಜಿನಲ್ಲಿ ಪ್ರವಾಸ ಕಾರ್ಯಕ್ರಮ ಏರ್ಪಾಡಾಗಿತ್ತು.. ಗೋವಾ ಪ್ರವಾಸಕ್ಕೆ ಹೊರಡಲು ಇಚ್ಚಿಸುವ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಕೊಡಬೇಕೆಂದು ನೋಟೀಸ್ ಬೋರ್ಡ್ ನಲ್ಲಿ ಮಾಹಿತಿ ಹಾಕಿದ್ದರು, ಅದಾಗಲೇ ಗೋವಾ ಟ್ರಿಪ್ ಗೆ ಹೋಗಿ ಬಂದಿದ್ದ ನನಗೆ ಮತ್ತೆ ಹೋಗುವ ಆಸಕ್ತಿ ಇರಲಿಲ್ಲ..ಆದರೆ ದಿನ ಕಳೆದಂತೆ ಗೆಳೆಯರ ಒತ್ತಾಯ ಅಲ್ಲದೇ ನನ್ನ ಹುಡುಗಿಯ ಹೆಸರು ಪಟ್ಟಿಯಲ್ಲಿರುವುದು ಗೊತ್ತಾಗಿ ಅವಳಿಗಾಗಿ ಹೋಗಬೇಕು ಈ ಪ್ರವಾಸದಲ್ಲಿಯೇ ನನ್ನ ಪ್ರೀತಿ ಹೇಳಿ ಅವಳ ಮನಸು ಗೆಲ್ಲಬೇಕೆಂಬ ಆಲೋಚನೆ ಮಾಡಿಕೊಂಡೆ..ಅಂತೂ ಗೆಳೆಯರ ಜೊತೆ ಖುಷಿಯಿಂದ ಬಸ್ ಹತ್ತಿದ್ದಾಯಿತು. ಅದೊಂದು ಎಂದೂ ಮರೆಯಲಾರದ ಪ್ರವಾಸ.. ಒಂದು ವಾರದ ಪ್ರವಾಸದ ಮದ್ಯೆ ಮದ್ಯೆ..ಹಸಿರು ಕಾಡು, ಜಲಪಾತ ಹೊಸ ವಾತವರಣದಲ್ಲಿ ಆಕೆಯನ್ನು ಮಾತನಾಡಿಸುವ ಫೋಟೊ ತೆಗೆಯುವ ಪ್ರಯತ್ನ ನನ್ನದು.. ಇದು ಗೆಳೆಯರಿಗೆ ಗೊತ್ತಿದ್ದ ಕಾರಣ ಅವರು ನನ್ನನ್ನು ಹುರಿದುಂಬಿಸುತ್ತಿದ್ದರು.ಅದಾಗಲೇ ಆಕೆಯ ಹಲವು ಫೋಟೊಗಳು ತೆಗಿದಿದ್ದೆ ಅವಳ ಗೆಳತಿ ಈಗಾಗಲೇ ನನಗೆ ಪರಿಚಯವಿದ್ದ ಕಾರಣ ಅವಳಿಗೆ ಫೋಟೋಗಳನ್ನು ತೋರಿಸಿದ್ದೆ.. ಅವಳ ಗೆಳತಿ ನನ್ನ ಕ್ಯಾಮರಾ ಕೈ ಚಳಕಕ್ಕೆ ಫಿದಾ ಆಗಿದ್ದಳು.. ಮೆಲ್ಲಗೆ ಅವಳ ಬಳಿ ನನ್ನ ಮನದ ಬಯಕೆಯನ್ನು ಹೇಳಿಕೊಂಡು ಅವಳ ಪರಿಚಯ ಮಾಡಿಸಲು ದುಂಬಾಲು ಬಿದ್ದೆ..ಪ್ರವಾಸದ ಮೂರನೇ ದಿನ ನಾನು ಅವಳ ಗೆಳತಿಯ ಜೊತೆಗೆ ಸೇರಿ ನನ್ನ ಹುಡುಗಿಯ ಪರಿಚಯ ಮಾಡಿಕೊಂಡೆ.. ತಿಂಡಿ ತಿನ್ನುವ ಸಂದರ್ಭದಲ್ಲಿ ನಾನು ತೆಗಿದಿದ್ದ ಕೆಲವು ಫೋಟೊಗಳನ್ನು ಆಕೆಗೆ ತೋರಿಸಿದೆ..ಅವಳಿಗೆ ನಾನು ತೆಗೆದ ಅವಳ ಫೋಟೊಗಳ ನೋಡಿ ಬಹಳ ಖುಷಿಯಾಗಿ ಫೋಟೊ ಪ್ರಿಂಟ್ ಆದಮೇಲೆ ತನಗೆ ಕೊಡಬೇಕೆಂದು ಕೇಳಿಕೊಂಡಳು.. ನಾನು ಖುಷಿಯಿಂದ ಸರಿ ಎಂದಿದ್ದೆ ಹಾಗೆ ಪರಿಚಯ ಮಾತು, ಹಾಗೆ ನಮ್ಮಿಬ್ಬರ ಗೆಳೆತನದ ನೋಟ, ಕಣ್ಣೋಟ..ನಗು ಮುಂದುವರೆಯಿತು.. ಹೀಗೆ ಗೋವಾ ಪ್ರವಾಸ ನಮ್ಮಿಬ್ಬರ ಪ್ರೇಮ ಪ್ರಕರಣಕ್ಕೆ ವೇಧಿಕೆ ಆಯಿತು.. ನಾವಿಬ್ಬರು ಬಹಳ ಹತ್ತಿರವಾದೆವು.. ಏಕಾಂತದ ವೇಳೆ ನನ್ನ ಪ್ರೀತಿಯನ್ನು ಆಕೆಯಲ್ಲಿ ನಿವೇಧಿಸಿಕೊಂಡೆ..ತನ್ನ ಕಣ್ಣಿಲ್ಲಿಯೇ ಆಕೆ ಒಪ್ಪಿಗೆ ಸೂಚಿಸಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ..ಹೀಗೆ ಆ ದಿನಗಳು ನನ್ನ ಪಾಲಿಗೆ ಅಮೂಲ್ಯ.. ಆದರೆ ವಿಧಿಯಾಟ ಬೇರೆಯೇ ಆಗಿತ್ತು ನಾವು ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ನಡು ರಾತ್ರಿಯ ಸಮಯ ಘಾಟ್ ಸೆಕ್ಷನ್ ನ ಭಯಾನಕ ತಿರುವಿನಲ್ಲಿ ನಮ್ಮ ಬಸ್ ಊಹಿಸಲಾಗದ ರೀತಿಯಲ್ಲಿ ಬಾರಿ ಅಪಘಾತಕ್ಕೆ ಒಳಗಾಗಿ ಕಂದಕಕ್ಕೆ ಉರುಳಿ ಬಿತ್ತು.. ದೊಡ್ಡ ಚೀತ್ಕಾರ, ಘೋರ ಆಕ್ರಂಧನ ನರಳಾಟ.. ನಿಧಾನವಾಗಿ ನಾನು ಪ್ರಜ್ಞೆ ಕಳೆದುಕೊಂಡೆ..! ಕಣ್ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ಇದ್ದೆ ಮೈ ಕೈ ನೋವು, ಕಾಲು ಕೈಗೆ ಬ್ಯಾಂಡೇಜ್..ವೈದ್ಯರು ಬಂದು ಪರೀಕ್ಷೆ ಮಾಡಿ ಹೋದರು.. ಏನಾಯಿತು.. ಬಸ್ ಅಪಘಾತದಲ್ಲಿ ನನಗೆ ಪೆಟ್ಟಾಗಿದೆ, ಇನ್ನು ಉಳಿದವರೆಲ್ಲಿ ನನ್ನ ಪ್ರೀತಿಯ ಹುಡುಗಿ ಎಲ್ಲಿದ್ದಾಳೆ..! ಹೇಗಿದ್ದಾಳೆ..!? ಅವಳಿಗೇನಾಯಿತು ಕಣ್ಣಲ್ಲಿ ನೀರು ಜಿನುಗಿತು..ನಮ್ಮ ಕಾಲೇಜು ಉಪಾದ್ಯಾಯರುಗಳು ಬಂದಿದ್ದರು ನನ್ನನ್ನು ಸಮಾಧಾನ ಪಡಿಸಿ ಮಾತನಾಡಿದರು..ಬಸ್ ಅಪಘಾತದಲ್ಲಿ ನಿನಗೆ ಪೆಟ್ಟಾಗಿದೆ ನೀನು ಧೈರ್ಯವಾಗಿರು ನಿಮ್ಮ ತಂದೆ ತಾಯಿ ಬರುತ್ತಿದ್ದಾರೆ.. ಗಾಭರಿಯಾಗಬೇಡ ಎಂದು ಹೇಳಿ ಹೊರಟು ಹೋದರು.ನನಗೇನಾದರು ಸರಿ ಅವಳು ಹೇಗಿದ್ದಾಳೆ..? ಯಾರನ್ನು ಕೇಳುವುದು ಈಗೇನು ಮಾಡುವುದು ಅವಳದೇ ನೆನಪು.. ಅಪಘಾತದಲ್ಲಿ ಅವಳಿಗೇನಾದರು ಆಯಿತೆ..! ಗೆಳೆಯರು ಎಲ್ಲಿ ಹೋದರು.. ನರ್ಸ್ ಇಂಜೆಕ್ಷನ್ ಕೊಡುತ್ತಿದ್ದರು ಹಾಗೆ ನಿದ್ದೆಯು ಆವರಿಸಿಕೊಂಡಿತು..ಮರುದಿನ ಆಸ್ಪತ್ರೆಯಿಂದ ಬಿಡುಗಡೆಯಾದೆ.. ಅಪ್ಪ ಅಮ್ಮನೊಂದಿಗೆ ಮನೆ ಸೇರಿದೆ, ಅಮ್ಮ ಅಳುತ್ತಿದ್ದರು.. ಅಪ್ಪ ನಿಟ್ಟುಸಿರುಬಿಟ್ಟು ಸುಮ್ಮನಾದರು.. ಗೆಳೆಯ ರವಿ ಮನೆಗೆ ಬಂದಾಗ ನನಗಾಗಿದ್ದ ನೋವಿನಲ್ಲಿಯೂ ಸಂತೋಷ.. ಅಮ್ಮ ಟೀ ತಂದು ಕೊಟ್ಟರು.. “ಇಂದುಕಾಲೇಜಿನಲ್ಲಿ ಪ್ರವಾಸದಲ್ಲಿ ಮಡಿದ ವಿದ್ಯಾರ್ಥಿಗಳಿಗೆ ಶೃದ್ದಾಂಜಲಿ ಸಭೆ ಇದೆ.. ಅದು ಹೇಳಿ ಹೋಗಲು ಬಂದೆ.. ನೀನು ಹುಷಾರಾಗು ಎಂದಾಗ ನನಗೆ ಶಾಕ್..!ಎಷ್ಟು ಜನ ಸತ್ತರು..? ಏನೇನಾಯಿತು ರವಿ ನಿಜ ಹೇಳು..?ದಯವಿಟ್ಟು ನನ್ನನ್ನು ಏನು ಕೇಳಬೇಡ ಎಂದು ಮುಖ ಮುಚ್ಚಿಕೊಂಡು ದುಃಖಿಸಿದ ರವಿ.. ಪತ್ರಿಕೆಯೊಂದನ್ನು ನನ್ನ ಮುಂದಿಟ್ಟು ಹೋದ*ಗೋವಾ ಪ್ರವಾಸ ಮುಗಿಸಿ ಬರುತ್ತಿದ್ದ ಕಾಲೇಜು ಬಸ್ ಭೀಕರ ಅಪಘಾತ..*ನಡುಗುವ ಕೈಗಳು ಕಣ್ತುಂಬಾ ನೀರು.. ಪತ್ರಿಕೆ ಓದಲು ಭಯವಾಗುತ್ತಿತ್ತು ಅಮ್ಮಾ.. ಎಂದು ಕೂಗಿದೆ ಓಡಿ ಬಂದ ಅಮ್ಮ ನನ್ನನ್ನು ತಬ್ಬಿ ಸಂತೈಸಿದಳು..!ಈಗ ನಾನು ಪತ್ರಕರ್ತರುಗಳ ಮುಂದೆ ಕುಳಿತಿರುವೆ.. ಹಲವಾರು ಸುದ್ದಿ ವಾಹಿನಿಗಳು ನನ್ನ ಕತೆಯನ್ನು ಬಿತ್ತರಿಸಿವೆ.. ಈಗಾಗಲೇ ನನ್ನ ಕತೆಯನ್ನು ಎಲ್ಲಾ ಕಡೆ ತೋರಿಸಿದೆ.. ನನಗೆ ಕೆಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವವಿಸಿವೆ… ಅಮರ ಪ್ರೇಮಿ ಎಂದು ಹೊಗಳಿದ್ದಾರೆ..ರಾಜೇಶ್ ಮಾತನಾಡುತ್ತಿದ್ದರು“ನನಗಾಗಿ ಇಷ್ಟು ದೂರ ಬಂದು ನನ್ನ ಕತೆ ಕೇಳಿ ನಾಲ್ಕು ಒಳ್ಳೆಯ ಮಾತು ಹೇಳಿ ನನ್ನ ಬಗ್ಗೆ ಬರೆದ ನಿಮಗೆಲ್ಲರಿಗೂ ಅನಂತ ಕೋಟಿ ಧನ್ಯವಾದಗಳನ್ನು ಅರ್ಪಿಸುತ್ತೇನೆ..ನಾನೀಗ ಸಣ್ಣದೊಂದು ವ್ಯಾಪಾರ,ವಹಿವಾಟು ಮಾಡುತ್ತಿದ್ದೇನೆ ನನಗೆ ಮದುವೆ ಆಗಿದೆ.. ಅಮ್ಮ ಅಪ್ಪ ತೀರಿಕೊಂಡರು.. ಅಪಘಾತದಲ್ಲಿ ಕಾಲು ಮುರಿದುಕೊಂಡು ಅಂಗವಿಕಲನಾದರು ಸ್ವಾಭಿಮಾನದಿಂದ ಬದುಕುತ್ತಿರುವೆ.. ನಾನೀಗ ತೃಪ್ತಿಕರವಾಗಿ ಜೀವನ ನಡೆಸುತ್ತಿದ್ದೇನೆ, ಅದಕ್ಕೆ ಕಾರಣ ನಾನು ನನ್ನ ಪ್ರೀತಿಯನ್ನು ಉಳಿಸಿಕೊಂಡಿದ್ದು.. ಹತ್ತು ವರುಷಗಳ ಹಿಂದೆ ನಡೆದ ಅಪಘಾತದಲ್ಲಿ ನನ್ನ ಗೆಳೆಯರು, ಸಹಪಾಠಿಗಳು ಸಾವಿಗೀಡಾದರು ನಾನು ಹೀಗೆ ಅಂಗವಿಕಲನಾದೆ ಆದರೆ ಯಾವ ದೇವರ ದಯೆಯೋ ಕಾಣೆ ನನ್ನ ಪ್ರೀತಿಯಲ್ಲಿ ಗೆದ್ದೆ..ಅಂದು ನಾನು ಪ್ರೀತಿಸಿದ ಹುಡುಗಿಗೆ ಗೋವಾ ಪ್ರವಾಸದಲ್ಲಿ ನನ್ನ ಪ್ರೀತಿಯನ್ನು ಹೇಳಿಕೊಂಡಿದ್ದೆ.. ಆದರೆ ಅಪಘಾತದಲ್ಲಿ ಆ ಹುಡುಗಿಯ ತಲೆಗೆ ಪೆಟ್ಟಾಗಿ ಅವಳು ಜೀವಶ್ಚವವಾಗಿ ಆಸ್ಪತ್ರೆಯಲ್ಲಿದ್ದಾಗ ನಾನು ಅಪ್ಪ ಅಮ್ಮನ ಜೊತೆ ಆಕೆಯಿದ್ದ ಆಸ್ಪತ್ರೆಗೆ ಹೋಗಿ ಅವಳ ಪೋಷಕರ ಬಳಿ ಮಾತನಾಡಿ ವಿಷಯ ತಿಳಿಸಿ ಅಂತಿಮವಾಗಿ ಅವರ ಒಪ್ಪಿಗೆಯೊಂದಿಗೆ ನನ್ನ ಪ್ರೀತಿಯ ಗೆಳತಿಯನ್ನು ಮದುವೆಯಾಗಿದ್ದೇನೆ..ನಮ್ಮಿಬ್ಬರದೂ ಸುಖೀ ಸಂಸಾರ.. ನೋಡಿ ಈಕೆಯೆ ನನ್ನ ಪ್ರೀತಿಯ ಗೆಳತಿ ನನ್ನ ಧರ್ಮಪತ್ನಿ ಸುಮಲತ ಎಂದು ಪತ್ರಕರ್ತರಿಗೆ ಸುಮಲತಳನ್ನು ಪರಿಚಯಿಸುತ್ತಾನೆ.. ರಾಜೇಶ್ ನಿಜಕ್ಕೂ ಮಾನವೀಯತೆಗೆ ತಾನು ಪ್ರೀತಿಸಿದ ತನ್ನ ಪ್ರೀತಿಗೆ ಬಹು ದೊಡ್ಡ ಗೌರವ ನೀಡಿ ಪ್ರೀತಿಯ ಮಹತ್ವವನ್ನು ಸಾರಿ ಹೇಳುತ್ತಾರೆ.. ವೀಲ್ ಚೇರ್ ಮೇಲೆ ಕುಳಿತ ಸುಮಲತಳನ್ನು ರಾಜೇಶ್ ಪರಿಚಯ ಮಾಡಿಸುತ್ತಾರೆ..ಮಾತು ಕಳೆದುಕೊಂಡು ಕೈ ಕಾಲುಗಳ ಸ್ವಾದೀನ ಇಲ್ಲದೆ ವೀಲ್ ಚೇರ್ ನಲ್ಲಿ ಕುಳಿತಿರುವ ಸುಮಲತಳನ್ನು ಕಂಡ ಪತ್ರಕರ್ತರು, ಟೀವಿ ವಾಹಿನಿಗಳು ಒಂದು ಕ್ಷಣ ಮೌನಕ್ಕೆ ಜಾರುತ್ತಾರೆ.. ಕಣ್ಣಿನಲ್ಲಿ ಜೀವ ಇಟ್ಟುಕೊಂಡು ಉಸಿರಾಡುತ್ತಿರುವ ನಿಶ್ಚಲ ಬದುಕಿನ ಪಯಣಿಗಳಂತೆ ಕಾಣುವ ಸುಮಲತ ಮತ್ತು ಆಕೆಯ ಬಾಳಿಗೆ ಬೆಳಕು ನೀಡಿ ಪ್ರೀತಿಯ ಬದುಕಿಗೆ ಜೀವ ತುಂಬಿದ ನಾವಿಕ ರಾಜೇಶ್ ತನ್ನ ಅಂಗವೈಕಲ್ಯತೆಯನ್ನು ಮೀರಿ ನಿಂತು ಮಾನವತೆಯ ದೇಗುಲದ ಮಹಾನ್ ದೈವಿಕರಂತೆ ಗೋಚರಿಸುತ್ತಾರೆ.. ಲೈವ್ ಟೀವಿ ನೋಡುತ್ತಿರುವ ಅಸಂಖ್ಯಾತ ವೀಕ್ಷಕರು ತಮಗರಿವಿಲ್ಲದಂತೆಯೇ ಕಣ್ಣೀರು ಜಿನುಗಿಸುತ್ತಾರೆ.. ಎಲ್ಲೆಲ್ಲೂ ಚಪ್ಪಾಳೆ ನವ ದಿಗಂತದಲ್ಲಿ ಬಣ್ಣದೋಕುಳಿ.. ಈ ಅಮರಜೀವಿಗಳ ಪಾಲಿಗೆ ಸಣ್ಣ ಹನಿಗಳು ಸುರಿಸಿ ಆರತಿ ಎತ್ತುತ್ತದೆರಾಜೇಶ್ ಮತ್ತು ಸುಮಲತ ತಮ್ಮ ಅಂಗ ವೈಕಲ್ಯವನ್ನು ಮೀರಿ ನಿಂತು ತಮ್ಮ ಪ್ರೇಮದ ಪ್ರೀತಿಯ ಪರಾಕಾಷ್ಠೆ ಅಮರಕಾವ್ಯದ ಪ್ರೇಮ ಬರಹಕ್ಕೆ ಸಾಕ್ಷಿಯಾಗಿ ಹೊಸದೊಂದು ಮುನ್ನುಡಿ ಬರೆದು ಪ್ರೇಮಲೋಕದ ದೃವ ತಾರೆಗಳಾಗಿ ಪ್ರಜ್ವಲಿಸುತ್ತಾರೆ. ರಾಜ ಶೇಖರ್. ಕೆ
ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು” Read Post »




