ಕಾವ್ಯಸಂಗಾತಿ
“ಬದುಕಿನ ಬಂಡಿಯ ಬರಹಗಾರ”
ಜಯಶ್ರೀ.ಭ.ಭಂಡಾರಿ


ಕನಸು ಕಂಗಳ ಹುಡುಗಿ ಕವಿತೆ ನಾನು
ಮನವ ಕದ್ದು ಮಧುವ.ತಂದವ ನೀನು
ಹೇಗೋ ಬಂದೆ ಮೆದುವಾದೆ ನಾನು
ಅಮೃತ ಧಾರೆ ಎರೆದು ಬಂಧುವಾದೆ
ನಯನದಲಿ ನಿನ್ನದೇ ಹೊನ್ನ ಬೆಳಕು
ಕೆನ್ನೆಯ ರಂಗಿನಲಿ ಹೊಳಪಿನ ತಳುಕು
ಮುಂಗುರುಳಿಗೆ ಸೋತ ಮಾಯಗಾರ
ಮನದ ಬೇಗೆ ನೀಗಿ ನಿಧಿಯಾದವನು.
ಬಾಳಪಥಕೆ ಮುನ್ನುಡಿ ಬರೆದು ಜೊತೆಯಾದೆ
ಭರವಸೆ ತುಂಬುತ ಬದುಕಿನ ಬವಣೆ ನೀಗಿದೆ.
ಒಲವು ಗೆಲುವುಗಳ ಸರಸ ಸರದಾರ ನೀನಾದೆ
ದಿನದ ಕಾವ್ಯ ರಾಣಿಗೆ ಮಧುರ ಸಾಹಿತ್ಯವಾದೆ
ನೀನೆಲ್ಲೋ ನಾನಲ್ಲೆ ರಾಗವಾಗಿ ಬಳಿ ಬಂದೆ
ಮೈಮರೆತು ಬರೆಯುವ ಪರಿಕಂಡು ಬೇಸರಿಸಿದೆ
ಮುಂಗುರುಳ ಸರಿಸಿ ಮುತ್ತ ನೀಡಲು ಅವಸರಿಸಿದೆ
ಕವಿತೆ ಹುಟ್ಟುವ ಹೊತ್ತು ಕಾಡದೆ ದೂರ ಇರಬಾರದೆ
ನೀನೆ ನನ್ನ ಪಾಲಿನ ಕವಿತೆ ಬೇರೆ ಏನು ಬೇಕಿಲ್ಲ
ಮಡಿಲಲ್ಲಿ ತಲೆ ಇಟ್ಟು ಮಲಗುವೆ ಯಾರ ಹಂಗಿಲ್ಲ
ದಿನವೂ ಅದೇ ಹಾಡು ಅದೇ ಕಥೆ ದೂರ ನೂಕೆಲ್ಲ
ನಿನಗೆ ನಾನು ನನಗೆ ನೀನು ಸಂಸಾರ ನೊಗಕ್ಕೆ ಸಾಕಲ್ಲ
ರಾತ್ರಿ ರಾಣಿ ಅರಳಿ ಘಮಿಸುತ್ತಿದೆ ನೋಡಬಾರದೇ
ಸುಂದರ ಮೋಹಕ ಕ್ಷಣಕ್ಕೆ ಮುಖ ತಿರುಗಲಾರದೇ ನಕ್ಷತ್ರಗಳು ಮುಸಿ ಮುಸಿ ನಗುತಿವೆ ಕೇಳಬಾರದೇ
ಬರೆದು ಮುಗಿಸುವ ಮುನ್ನ ಹೇ ಗೆಳತಿ ನಗಬಾರದೆ
ಜಯಶ್ರೀ.ಭ.ಭಂಡಾರಿ.



