ಯಶಸ್ಸಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಯಶಸ್ಸಿನ ಪಯಣದ ಹಾದಿ -1”


ಬದುಕಿನಲ್ಲಿ ಏನನ್ನಾದರೂ ಮಹತ್ತರವಾದದನ್ನು ಸಾಧಿಸಬೇಕು, ಯಶಸ್ವಿಯಾಗಬೇಕು, ಸಮಾಜದಲ್ಲಿ ಗಣ್ಯ ಸ್ಥಾನವನ್ನು ಹೊಂದಬೇಕು ಎಂದು ಯಾವ ವ್ಯಕ್ತಿ ಬಯಸುವುದಿಲ್ಲ ಹೇಳಿ? ಬಹುಷಃ ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿ ಈ ಒಂದು ಹಂಬಲ ಇದ್ದೇ ಇರುತ್ತದೆ. ಆದರೆ ಕೇವಲ ಹಂಬಲ ಇದ್ದರೆ ಸಾಲದು ಅದಕ್ಕೆ ತಕ್ಕ ಪ್ರಯತ್ನವು ಬೇಕು.
ವ್ಯಾಯಾಮ ಮಾಡಿದರೆ ದೇಹ ಗಟ್ಟಿಮುಟ್ಟಾಗುತ್ತದೆ ಸ್ನಾಯುಗಳು ಬಲಶಾಲಿಯಾಗುತ್ತವೆ ಸರಳವಾಗಿ ರಕ್ತ ಪರಿಚಲನೆ ಆಗುತ್ತದೆ ಆರೋಗ್ಯ ಸುಧಾರಿಸುತ್ತದೆ ನಿಜ ಹಾಗೆಂದು ಆ ವ್ಯಾಯಾಮವನ್ನು ನಾವು ಮಾಡುವುದು ಬಿಟ್ಟು ನಮ್ಮ ಜೊತೆಗಿರುವವರಿಗೆ ಇಲ್ಲವೇ ಕೆಲಸದವರಿಗೆ ಸಂಬಳ ಕೊಟ್ಟು ವ್ಯಾಯಾಮ ಮಾಡಿಸಿದರೆ ನಮ್ಮ ದೇಹ ಗಟ್ಟಿಯಾಗುವುದಿಲ್ಲ ಅಲ್ವೇ ಸ್ನೇಹಿತರೆ ?
ನಮ್ಮ ತನು ಮನಗಳು ಗಟ್ಟಿಯಾಗಲು ನಾವೇ ಕಸರತ್ತು ಮಾಡಬೇಕು ಹೊರತು ಬೇರೆಯವರಲ್ಲ ಅಂತೆಯೇ ನಮ್ಮ ಬದುಕಿನ ಯಶಸ್ಸಿಗೆ ನಾವುಗಳು ಪ್ರಯತ್ನ ಪಡಬೇಕೆ ಹೊರತು ಇನ್ನೊಬ್ಬರಲ್ಲ.
ನಮ್ಮ ಪಾಲಕರು ನಮಗೆ ಜನ್ಮ ನೀಡಿರುತ್ತಾರೆ ಅವರ ಕನಸಿನ ಕೂಸುಗಳು ನಾವು ನಿಜ ಅವರು ನಮಗೆ ದಾರಿ ತೋರುತ್ತಾರೆ, ಆ ದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತಾರೆ ಹಾಗೂ ಆ ದಾರಿಯಲ್ಲಿ ಸಾಗಲು ಬೇಕಾಗುವ ಎಲ್ಲಾ ರೀತಿಯ ಸಹಾಯ, ಸಹಕಾರಗಳನ್ನು ಒದಗಿಸುತ್ತಾರೆ ಆದರೆ ಆ ದಾರಿಯನ್ನು ನಡೆಯಬೇಕಾದವರು ನಾವೇ ಹೊರತು ಬೇರೆಯವರಲ್ಲ.
ಯಶಸ್ಸು ನಮ್ಮ ಕನಸಿನ ಕೂಸು. ಒಂದೊಮ್ಮೆ ಸತತ ಪರಿಶ್ರಮದ ನಂತರ ಅದನ್ನು ಪಡೆದ ವ್ಯಕ್ತಿ ಧನ್ಯತಾ ಭಾವದಿಂದ ನನ್ನ ಯಶಸ್ವಿಗೆ ನನ್ನ ಪಾಲಕರು, ಗುರುಗಳು, ಒಡಹುಟ್ಟಿದವರು, ಸ್ನೇಹಿತರು, ಬಂಧುಗಳು, ಸಂಗಾತಿ ಮಕ್ಕಳ ಸಹಕಾರ ಕಾರಣ ಎಂದು ಹೇಳಬಹುದು ಆದರೆ ಖುದ್ದು ಪ್ರಯತ್ನ ಪಟ್ಟಿರುವುದು ಮಾತ್ರ ಅವರೇ ಆಗಿರುತ್ತಾರಲ್ಲವೇ?
ಯಶಸ್ಸಿಗೆ ನೂರಾರು ಜನ ಪಾಲುದಾರರು ಆದರೆ ಸೋಲು ಅನಾಥ, ಒಬ್ಬಂಟಿ, ತಬ್ಬಲಿ. ತಮ್ಮದೇ ಬದುಕಿನಲ್ಲಿ ತಾವು ಕೈಗೊಂಡ ನಿರ್ಧಾರಗಳ ಫಲವಾಗಿ ಅನುಭವಿಸುವ ಸೋಲನ್ನು ಯಾರೂ ಕೇವಲ ತಮ್ಮ ಆಯ್ಕೆಯ ಪರಿಣಾಮ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವುದಿಲ್ಲ…. ಬದಲಾಗಿ ತನ್ನ ಬದುಕಿನ ಎಲ್ಲಾ ಅವಘಡಗಳಿಗೆ ನಾನು ಹುಟ್ಟಿರುವ ದೇಶ ಸರಿ ಇಲ್ಲ, ಬದುಕುತ್ತಿರುವ ಪ್ರದೇಶದ ವ್ಯವಸ್ಥೆ ಸರಿಯಾಗಿಲ್ಲ ತನ್ನ ಹೆತ್ತವರು ತನಗೆ ಬೇಕಾದ ರೀತಿಯ ವ್ಯವಸ್ಥೆಗಳನ್ನು ಒದಗಿಸಿ ಕೊಡಲಿಲ್ಲ, ತನ್ನ ಸಹೋದ್ಯೋಗಿಗಳು, ಸಂಗಾತಿ ಕುಟುಂಬ ಹೀಗೆ ತನ್ನ ಸುತ್ತಲಿನ ಎಲ್ಲರೂ ತನಗೆ ಸಹಾಯ ಸಹಕಾರ ನೀಡಲಿಲ್ಲ ಮನೆಯಲ್ಲಿ ತಾವು ಬಯಸಿದ ಅನುಕೂಲತೆಗಳು ಇಲ್ಲ…. ಆದ್ದರಿಂದಲೇ ನನಗೆ ಗೆಲುವು ಅಸಾಧ್ಯವಾಯಿತು ಎಂದು ಹೇಳುತ್ತಾರೆ.
ನನ್ನ ಸೋಲಿಗೆ ಬದುಕಿನಲ್ಲಿ ನನ್ನ ಆಯ್ಕೆಗಳೇ ಕಾರಣ ನನ್ನ ಯೋಜನೆಗಳು ಸರಿಯಾಗಿರಲಿಲ್ಲ. ಮಾಡಬೇಕಾದ ವಯಸ್ಸಿನಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳನ್ನು ನಾನು ಮಾಡಲಿಲ್ಲ ಎಂದು ತಮಗೆ ತಾವೇ ಎಂದೂ ಹೇಳಿಕೊಳ್ಳುವುದಿಲ್ಲ…… ಇಲ್ಲಿಯೇ ಮನುಷ್ಯ ತಪ್ಪುವುದು.
ಇಡೀ ಜಗತ್ತಿಗೆ ನಮ್ಮ ಸೋಲು ಗೆಲುವುಗಳ ಪರಿಭಾಷೆಯನ್ನು ನಾವು ಒತ್ತಿ ಹೇಳಬಹುದು. ಆದರೆ ನಮ್ಮದೇ ಆತ್ಮಕ್ಕೆ, ನಮ್ಮ ಮನಸ್ಸಿಗೆ ನಾವು ಸುಳ್ಳು ಹೇಳಲು, ತಪ್ಪು ಉತ್ತರ ಕೊಡಲು, ಸಮಜಾಯಿಷಿ ಕೊಡಲು ಸಾಧ್ಯವಾಗುತ್ತದೆಯೇ? ಒಂದೊಮ್ಮೆ ಸಾಧ್ಯವಾಗುತ್ತದೆ ಎಂದಾದರೆ ಖಂಡಿತವಾಗಿಯೂ ನಾವು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂದೇ ಅರ್ಥ… ಏಕೆಂದರೆ ನಾವು ಇಡೀ ಜಗತ್ತನ್ನು ಮೋಸ ಮಾಡಬಹುದು, ವಂಚಿಸಬಹುದು ಆದರೆ ವೈಯಕ್ತಿಕವಾಗಿ ನಮ್ಮ ಅಂತರಾತ್ಮವನ್ನು ಎಂದಿಗೂ ವಂಚಿಸಲು ಸಾಧ್ಯವಿಲ್ಲ ಅಲ್ಲವೇ?
ಆದ್ದರಿಂದ ಸ್ನೇಹಿತರೆ…ತಮ್ಮ ಸೋಲು ಗೆಲುವುಗಳಿಗೆ ನಾವೇ ಹೊಣೆಗಾರರಾಗೋಣ. ನಮ್ಮ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ನಾವು ಹಾಕಿಕೊಳ್ಳುವ ಯೋಜನೆಗಳ ಸಾಧಕ ಬಾಧಕಗಳ ಅರಿವು ನಮಗೆ ಇರಬೇಕು. ನಮ್ಮ ಯೋಜನೆಗಳಲ್ಲಿ ಸತ್ವವಿದ್ದರೆ ಹಾಗೂ ನಮ್ಮ ಪ್ರಯತ್ನವನ್ನು ನಾವು 100 ಶೇಕಡ ಹಾಕಿದಲ್ಲಿ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತದೆ ಒಂದೊಮ್ಮೆ ಗೆಲ್ಲದಿದ್ದರೂ ಪರವಾಗಿಲ್ಲ ಸೋಲು ಕಲಿಸುವ ಅನುಭವದ ಪಾಠ ಅದಕ್ಕಿಂತ ದೊಡ್ಡದು. ಮತ್ತೊಂದು ಹೊಸ ಗೆಲುವಿಗೆ ಅದು ನಮ್ಮನ್ನು ತಯಾರು ಮಾಡುತ್ತದೆ… ಆದರೆ ಈ ಬಾರಿ ಹಿಂದಿನ ವಿಫಲತೆಯ ಕಾರಣಗಳು ನಮ್ಮನ್ನು ಜಾಗೃತಗೊಳಿಸಿ
ಹಳೆಯ ತಪ್ಪುಗಳು ಮರುಕಳಿಸದಂತೆ ನಮ್ಮನ್ನು ಎಚ್ಚರಿಸುತ್ತಾ ಹೊಸ ಸಾದ್ಯತೆಗಳ ಕುರಿತು ನಮಗೆ ತಿಳುವಳಿಕೆ ಹೇಳುತ್ತಾ ಹೊಸ ಗೆಲುವಿಗೆ ದಾರಿ ತೋರುತ್ತವೆ.
ಎಷ್ಟೋ ಬಾರಿ ಬದುಕಿನ ಹಾದಿಯಲ್ಲಿ ಏನೆಲ್ಲ ಪ್ರಯತ್ನ ಮಾಡಿಯೂ ಕೂಡ ಯಶಸ್ಸು ದಕ್ಕುವುದಿಲ್ಲ… ಹಾಗೆಂದು ನಿರಾಶರಾಗುವುದು ಬೇಕಿಲ್ಲ. ಯಶಸ್ಸಿನ ಏಣಿಯನ್ನು ಏರುವುದು ಅಷ್ಟು ಸುಲಭವಲ್ಲ ಒಂದೇ ಒಂದು ಹಂತದ ಎಡವುವಿಕೆಯು ಕೂಡ ನಮ್ಮನ್ನು ಇನ್ನಿಲ್ಲದಂತೆ ಕೆಳಗೆ ತಳ್ಳುತ್ತದೆ…. ಆದ್ದರಿಂದ ಬದುಕಿನಲ್ಲಿ ಸದಾ ಜಾಗೃತ ಸ್ಥಿತಿ ನಮ್ಮದಾಗಿರಬೇಕು. ಮತ್ತೆ ಹೊಸ ಉತ್ಸಾಹದಿಂದ ಒಡಗೂಡಿ ಪ್ರಯತ್ನವನ್ನು ಮುಂದುವರಿಸಬೇಕು.
ಬದುಕಿನಲ್ಲಿ ನಮಗೆ ಸದಾ ಎರಡು ಆಯ್ಕೆಗಳಿರುತ್ತವೆ
ಮೊದಲನೆಯದ್ದು ಬದುಕು ಬರುವಂತೆಯೇ ಅದನ್ನು ಸ್ವೀಕರಿಸುವುದು
ಎರಡನೆಯದ್ದು ಬದುಕಿನಲ್ಲಿ ನಮ್ಮದೇ ಆದ ಕೆಲವು ಗುರಿ ಮತ್ತು ಉದ್ದೇಶಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವುದು.
ಮೊದಲನೆಯದ್ದು ಅತ್ಯಂತ ಸುಲಭ.. ಬದುಕು ಬಂದ ರೀತಿಯಲ್ಲಿ ಅದನ್ನು ಸ್ವೀಕರಿಸುತ್ತಾ ಮುಂದೆ ಸಾಗುವುದು. ಬೇರೆ ಯಾವುದೇ ಆಯ್ಕೆಗಳು ಇಲ್ಲದೆ ಇದ್ದಾಗಲೂ ಕೂಡ ನಾವು ಮೊದಲ ಆಯ್ಕೆಯನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಬದುಕಿನಲ್ಲಿ ಯಾವುದೇ ರೀತಿಯ ಏರಿಳಿತಗಳು ಬೇಡ ಎಂದಲ್ಲ ಅದೊಂದು ರೀತಿಯ ಸಂತೃಪ್ತ ಭಾವ ಎಂದು ತೋರಬಹುದು. ಇರುವುದರಿಂದಯೇ ತೃಪ್ತರಾಗುವುದು….ಆದರೆ ಅದೊಂದು ಏಕತಾನತೆಯನ್ನು ಹುಟ್ಟು ಹಾಕುವ ಭಾವ. ಬದುಕಿನ ಒಂದು ಹಂತದಲ್ಲಿ ಈ ರೀತಿಯ ಭಾವ ನಮ್ಮಲ್ಲಿ ನೀರಸತೆಯನ್ನು ಉಂಟು ಮಾಡಿ ನಮ್ಮ ಕುರಿತು ನಮಗೆ ಜಿಗುಪ್ಸೆಯನ್ನು ಹುಟ್ಟಿಸಬಹುದು.
ಬದುಕಿನಲ್ಲಿ ನಾನೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ತೋರಬಹುದು ಇಲ್ಲವೇ ಬೇರೆಯವರು ತಮ್ಮ ಬದುಕಿನಲ್ಲಿ ಸಾಧಿಸಿದ್ದನ್ನು ಕಂಡು ಹೆಮ್ಮೆಪಡುವುದರ ಜೊತೆಗೆ ತಾವು ಪ್ರಯತ್ನ ಪಡಲಿಲ್ಲ ಎಂಬ ಕುರಿತು ಪಶ್ಚಾತಾಪವಾಗಬಹುದು ಇಲ್ಲವೇ ಅವರ ಕುರಿತು ಅಸೂಯೆ ಪಡುವಂತಾಗಬಹುದು ತಮ್ಮಿಂದ ಸಾಧ್ಯವಾಗದ್ದು ಬೇರೆಯವರಿಗೆ ಸಾಧ್ಯವಾಗಿದೆ ಎಂದಾದರೆ ಅವರು ವಾಮ ಮಾರ್ಗವನ್ನು ಅನುಸರಿಸಿದ್ದಾರೆ ಎಂಬ ಕುತ್ಸಿತ ಮನೋಭಾವ ಉಂಟಾಗಬಹುದು….. ಇದನ್ನು ಬಿಟ್ಟರೆ ಇವರಲ್ಲಿ ಅಷ್ಟೇನೂ ದೊಡ್ಡ ಪ್ರಮಾದವಿಲ್ಲ.
ನಿಜವಾಗಿಯೂ ನೀವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಆಶಿಸಿದ್ದರೆ ಸಾಧಿಸಲೇಬೇಕು ಎಂಬ ಹಂಬಲ ನಿಮಗಿದ್ದರೆ ನೀವು ಎರಡನೆಯ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳುತ್ತೀರಿ ಅಂತಹ ಆಯ್ಕೆಯನ್ನು ಕೇವಲ ಬಾಯಿಮಾತಿನ ಇಲ್ಲವೇ ಆ ಕ್ಷಣದಲ್ಲಿ ನೀವು ಮಾಡಿದ ಕ್ಷಣಿಕ ನಿರ್ಧಾರವಾದರೆ ನೀವು ಸೋಲುತ್ತೀರಿ, ಹತಾಶರಾಗಿ ಬೇಗನೆ ಕೈ ಚೆಲ್ಲುತ್ತೀರಿ ಇಲ್ಲವೇ ನಿಮ್ಮ ನಿರ್ಧಾರವನ್ನು ಕೈಬಿಡುತ್ತೀರಿ. ಬದಲಾಗಿ ನಿಮ್ಮ ಗುರಿ ಹಾಗೂ ಉದ್ದೇಶ ನಿಮ್ಮ ಮನದಾಳದ ಭಾವನೆಯಾಗಿ ಪ್ರತಿಕ್ಷಣವೂ ನಿಮ್ಮನ್ನು ಆ ಉದ್ದೇಶಕ್ಕಾಗಿ ತುಡಿಯುವಂತೆ ಕಾರ್ಯಪ್ರವೃತ್ತರಾಗುವಂತೆ ಮಾಡಿದರೆ ಖಂಡಿತವಾಗಿಯೂ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ. ಆ ಸಾಧನೆಗಾಗಿ ತುಡಿಯುವಂತೆ ಕಾರ್ಯ ಪ್ರವೃತ್ತರಾಗುವಂತೆ ಸದಾ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳುತ್ತೀರಿ.
ಸೋಲುಗಳನ್ನು ಸವಾಲುಗಳಾಗಿ ಸ್ವೀಕರಿಸಿ ಬರುವ ಎಲ್ಲಾ ಎಡರು ತೊಡರುಗಳನ್ನು ಸಾಧನೆಯ ಹಾದಿಯ ಕಲ್ಲು ಮುಳ್ಳುಗಳು ಎಂಬಂತೆ ಸಕಾರಾತ್ಮಕವಾಗಿ ಭಾವಿಸಿ ಅವುಗಳನ್ನು ನಿವಾರಿಸಿಕೊಳ್ಳುತ್ತಾ ಮುಂದೆ ಸಾಗುವಿರಿ.
ಗುರಿಯ ಉದ್ದೇಶ ಹಾಗೂ ಸಾಧನೆಗೆ ಕೇವಲ ಬಾಹ್ಯ ಚಟುವಟಿಕೆಗಳು ಮಾತ್ರ ಕಾರಣವಾಗುವುದಿಲ್ಲ ನಮ್ಮ ವೈಯುಕ್ತಿಕ ಬದುಕಿನಲ್ಲಿ ನಾವು ರೂಢಿಸಿಕೊಳ್ಳುವ ಕೆಲಸಗಳು ಕೂಡ ನಮ್ಮ ಯಶಸ್ಸಿನ ಬದುಕಿಗೆ ತಮ್ಮ ಪಾಲನ್ನು ಸಲ್ಲಿಸುತ್ತವೆ. (ಈ ಕುರಿತು ಮತ್ತಷ್ಟು ಮಾತುಕತೆಗಳು ಮುಂದಿನ ಲೇಖನದಲ್ಲಿ)
ವೀಣಾ ಹೇಮಂತ್ ಗೌಡ ಪಾಟೀಲ್



