ಕಾವ್ಯ ಸಂಗಾತಿ
ಚಂದ್ರು ಪಿ ಹಾಸನ್
“ಪ್ರೇಮಗಂಗೆ”


ಪ್ರೇಮಗಂಗೆ ಓ ನನ್ನೊಲವಗಂಗೆ
ಎನ್ನೆದೆಯಾಳದಿ ಜನ್ಮಿಸಿದ ಪ್ರೇಮಗಂಗೆ
ನಿನ್ನ ಚಲನವಲನ ನನ್ನವಳ ಕೂಗಿದೆ
ನೀ ಮಿಡಿದ ಬಡಿತದ ಕಲರವ
ಒಮ್ಮೆ ಕಾಣುವ ಹಂಬಲ ತಂದಿದೆ
ಬಂಜರು ಭೂಮಿಯಲ್ಲಿ ಮಳೆಗರೆದು
ಹಸಿರು ಹಸನಾಗಿ ಹರಡುವಂತೆ
ನಿನ್ನ ನವಿರಾದ ಹರಿವಿನ ಅರಿವು
ಮನದಲ್ಲಿ ಸೊಗಸಾದ ಆಸೆ ಚಿಗುರಿಸಿ
ಪ್ರೇಮದ ಕಾರಂಜಿಯನ್ನು ಚಿಮ್ಮುತ್ತಿದೆ.
ನೀರಿನ ಜುಳುಜುಳು ನಾದ ಕೇಳಿ
ಹಕ್ಕಿಪಿಕ್ಕಿಗಳು ಚಿಲಿಪಿಲಿ ಎನ್ನುವಂತೆ
ಹೃದಯದ ಅರಗಿಣಿ ಬಡಿತವ ಎಬ್ಬಿಸಿ
ಭಾವ ಅಲೆಗಳು ನರನಾಡಿಯಲ್ಲಿ ಹರಡಿ
ನಿನ್ನ ಹೆಸರಿನ ತುಡಿತವ ಮಿಡಿಯುತ್ತಿದೆ
ಸ್ವಚ್ಛಂದದ ನೀರಿನ ಕಣಕಣದ ಹರಿವು
ಧರೆಗೆ ಸೇರಿ ಘಮಘಮಿಸುವಂತೆ
ಎನ್ನ ನೀರೆಯ ಒಲವು ತನುವೆಲ್ಲ ಹರಡಿ
ಮುಖಕಮಲ ಮಿನುಗಿಸಿ ಅಡಗಿದೆಯೇ
ಅಂತರಗಂಗೆ ಓ ನನ್ನ ಪ್ರೇಮಗಂಗೆ
ಚಂದ್ರು ಪಿ ಹಾಸನ್



