ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ‘ಮಾಹಿತಿ ಹಕ್ಕು ಅಧಿನಿಯಮ-2005 ಒಂದು ವಿಶ್ಲೇಷಣೆ ‘ (The Right to Information Act-2005 An Analysis) ಇದು ಕಾನೂನಿನ ಅರಿವು ಮೂಡಿಸುವ ಗ್ರಂಥಪುಷ್ಪ. ಈ ಕ್ರೃತಿಯು ಸಾರ್ವಜನಿಕ ನಾಗರಿಕರ ಮನಪರಿವರ್ತಿಸಿ, ಪ್ರಚಲಿತ ಕಾಯ್ದೆ ಕಾನೂನುಗಳ ಬಗ್ಗೆ ತಿಳುವಳಿಕೆ ಸ್ಪುರಿಸಿ ಜಾಗ್ರತರನ್ನಾಗಿಸುವಂತಿದೆ.

ಮನುಕುಲದವರಲ್ಲಿ ಜಾತ್ಯಾತೀತ ವರ್ಗ-ವರ್ಣರಹಿತ ಭಾವೖಕ್ಯತಾ ಬಾಂಧವ್ಯ ವರ್ಧಿಸುವ, ಭ್ರಷ್ಟಾಚಾರ ಮುಕ್ತವಾದ ದಟ್ಟ ಪರಿಸರ ಹುಟ್ಟುಹಾಕುವ ಸದಾಶಯವುಳ್ಳ ವಸ್ತುವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ಲೇಖಕರು ವಿಶ್ಲೇಷಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮವನ್ನು ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಪರಿಪಾಲಿಸುವ, ಧ್ಯೇಯೋದ್ದೇಶಗಳಿಂದೊಡಗೂಡಿರುವ ಕೖದೀವಿಗೆಯಂತಿದೆ.

                    ವಿಶ್ರಾಂತ ಮಾನ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗದ ಡಾ.ಶೇಖರ.ಡಿ.ಸಜ್ಜನರ ಅವರು ಈ ಕ್ರೃತಿರತ್ನದ ಕರ್ತೃ.ಲೇಖಕರು  ಗದಗನಲ್ಲಿ 40 ವರ್ಷಗಳಿಂದ ಖ್ಯಾತ ವೖದ್ಯಕೀಯ ವ್ರತ್ತಿ ಪ್ರೀಯರಾಗಿದ್ದರೂ ಕೂಡ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡವರು.  ಕರ್ನಾಟಕ ಮಾಹಿತಿ ಆಯುಕ್ತರಾಗಿಯಲ್ಲದೇ ಪ್ರಭಾರಿ ಮುಖ್ಯ ಮಾಹಿತಿ ಆಯುಕ್ತರಾಗಿಯೂ ನೇಮಕಗೊಂಡು ಸೇವೆ ಸಲ್ಲಿಸಿದ್ದು ಅಭಿನಂದನಾರ್ಹವಾದುದಲ್ಲದೆ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ”ಎಂಬ ಶರಣರ ವಾಣಿಗೆ ಸಾಕ್ಷಿಯಂತಿದೆ.

           ಮೂಲತಃ ವೖದ್ಯರಾದ ಶ್ರೀಯುತರಿಗೆ ಕಾನೂನು ಪರಿಭಾಷೆಯ ಪರಿಚಯ ಅಷ್ಟಾಗಿ ಇರದಿದ್ದರೂ ಕೂಡಾ ವಕೀಲರು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳವರಿಗಿಂತ ಮಿಗಿಲಾಗಿ ಆಸಕ್ತರಾಗಿರುವ ಡಾ.ಶೇಖರವರು ಸತತ ಪರಿಶ್ರಮದಿಂದ ಅಧ್ಯಯನಶೀಲರಾಗಿ ಈ ಕಾನೂನನ್ನು ಸುಲಿದ ಬಾಳೆಯಹಣ್ಣಿನಂದದಿ ಆರ್ಥೖಸಿಕೊಂಡು ಆತ್ಯುತ್ತಮವೆನ್ನಬಹುದಾದ ಅನೇಕ ಮಹತ್ವದ ತೀರ್ಪುಗಳನ್ನಿತ್ತಲ್ಲದೇ ಈ ಕಾನೂನು ಹೆಬ್ಬೊತ್ತಿಗೆಯನ್ನು ಪ್ರಕಟಿಸಿ ಸರ್ವರ ಕೖಗೆಟಕುವಂತೆ ಪರಿಶ್ರಮಿಸಿರುವದು ಕಾನೂನು ಪರಿಪಾಲಿಸುವಂತಹ ಜ್ಞಾನತ್ರಷೆಯುಳ್ಳವರಿಗೆ ಅನುಕರಣೀಯವಾದುದು.ಅವರ ಅನುಭವ ಅಧ್ಯಯನದ ಮೂಸೆಯಲ್ಲಿ ಸಮರ್ಪಕವಾಗಿ ಸ್ರಜಿಸಲ್ಪಟ್ಟಿರುವ ಉತ್ತಮ ದಾರಿದೀಪದಂತಹ ಕ್ರೃತಿಯಿದಾಗಿದೆಯೆಂಬುದರಲ್ಲಿ ಉತ್ಪ್ರೆಕ್ಷೆಯೇನಿಲ್ಲ.

                        ” ಈ ಕ್ರೃತಿಯಲ್ಲಿ ಮಾಹಿತಿ ಎಂದರೇನು ಎನ್ನುವುದರಿಂದ ಪ್ರಾರಂಭವಾಗಿ ಈ ಕಾನೂನಿನ ವ್ಯಾಪ್ತಿ ನಿಯಮಗಳು ನಾಗರಿಕರು ಮಾಹಿತಿ ಪಡೆಯುವ ವಿಧಾನ, ಅಧಿಕಾರಿಗಳ ಕರ್ತವ್ಯಗಳು, ವಿನಾಯಿತಿಯ ಸಂದರ್ಭಗಳು, ಕಡತಗಳ ಸಂರಕ್ಷಣೆ, ಇವುಗಳ ಸಮರ್ಪಕ ವಿವರಣೆಯನ್ನು ಕೊಟ್ಟಿರುವುದಲ್ಲದೆ ರಾಜ್ಯ ಮಾಹಿತಿ ಆಯೋಗ ಕೇಂದ್ರ, ಮಾಹಿತಿ ಆಯೋಗ ಹಾಗೂ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳ ಸಾರಾಂಶಗಳನ್ನು ಉಲ್ಲೇಖಿಸಿದ್ದಾರೆ ಅಲ್ಲದೆ ಸಂಪೂರ್ಣ ಕಾನೂನನ್ನು ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಬರೆದಿರುವರಲ್ಲದೆ  ಟಿಪ್ಪಣಿಗಳನ್ನು ಬರೆಯುವಾಗ ಅವಶ್ಯವಿದ್ದಲ್ಲಿ ಕನ್ನಡವನ್ನು ಬಳಸಿರುವುದು ಇಂಗ್ಲಿಷ್ ಭಾಷೆಯ ಜ್ಞಾನ ಹೆಚ್ಚಿಗೆ ಇಲ್ಲದವರಿಗೆ ಉಪಯುಕ್ತವಾಗಿದೆ. ಹೀಗಾಗಿ ಇದು ಜನಸಾಮಾನ್ಯರ ಅಳವಿಗೆ ನಿಲುಕುವ ಜನಸ್ನೇಹಿ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು” ಎಂಬುದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ.ಅರಳಿ ನಾಗರಾಜ ಅವರ ಅಭಿಪ್ರಾಯವಾಗಿರುತ್ತದೆ.

          ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಕುರಿತು ಬೆಳಗಾಂವಿಯಲ್ಲಿ ಅಧಿಕಾರಿಗಳಿಗೆ ಲೇಖಕರು
ತರಬೇತುದಾರರಾಗಿದ್ದರು.ಈ ಸಂದರ್ಭದಲ್ಲಿ ಡಾ.ಶೇಖರ ಸಜ್ಜನರವರು ನೀಡುತ್ತಲಿರುವ ತರಬೇತಿಯಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರು ತರಬೇತಿಯ ಪ್ರೇರಣೆಯಿಂದ ಪ್ರಭಾವಿತರಾದುದರ ಫಲಶ್ರತಿಯಾಗಿ,ತಾವೇ ಈ ಕಾಯ್ದೆಗಳ ಮಾಹಿತಿ ಕುರಿತು ಸವಿಸ್ತಾರವಾಗಿ ಗ್ರಂಥ ರಚಿಸಿದರೆ ಸಾರ್ವಜನಿಕರಿಗಷ್ಟೇ ಅಲ್ಲದೇ ಕಾನೂನು ವಿದ್ಯಾರ್ಥಿಗಳಿಗೆ,ನ್ಯಾಯವಾದಿಗಳಿಗೆ,ಆಡಳಿತಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ,ಎಲ್ಲ ವರ್ಗಗಳ ಅಧ್ಯಯನಾಸಕ್ತರಿಗೆ ಅತ್ಯುಪಯುಕ್ತವಾದ ಮಾರ್ಗದರ್ಶಕ ಪುಸ್ತಕವಾಗುತ್ತದೆ ಎಂದು ತಮ್ಮ
ಪ್ರಶಂಸಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದುದರಿಂದ, ಈ ಅಮೂಲ್ಯ ಸತ್ಪ್ರೇರಣೆಯ ನುಡಿಗಡಣದಂತೆ,ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಹೊತ್ತಿಗೆಯು ಈಗ ನಾಲ್ಕನೆಯ ಆವ್ರೃತ್ತಿಗಳನ್ನು ಯಶಸ್ವಿಯಾಗಿ ಮುದ್ರಿಸಿ ಲೋಕಾರ್ಪಣೆಗೊಳಿಸಿರುವ ಸಂತ್ರೃಪ್ತಿ ನನಗಿದೆ ಎಂಬುದು ಈ ಕ್ರೃತಿಯ ಲೇಖಕರ ಅಭಿಪ್ರಾಯವಾಗಿರುತ್ತದೆ.

                ನಮ್ಮ ದೇಶ ಸ್ವಾತಂತ್ರ್ಯ ನಂತರ ಅಂಗೀಕರಿಸಿದ ಸಂವಿಧಾನದನ್ವಯ ನಮ್ಮಲ್ಲಿರುವುದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ.ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತದ ಸೂತ್ರವನ್ನು ಹಿಡಿದರು. ಆಡಳಿತದ ಸಂಬಂಧ ಜನಪ್ರತಿನಿಧಿಗಳು, ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳು, ಹೊರಡಿಸುವ ಆದೇಶಗಳು, ಜನಸಾಮಾನ್ಯರ ಮೇಲೆ ವಿವಿಧ ರೀತಿಯ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಆಡಳಿತದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ಹಾಗೂ ನಾಗರೀಕರ ಪಾಲ್ಗೊಳ್ಳುವಿಕೆಯನ್ನು ತರುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟುವ ಸದುದ್ದೇಶದಿಂದ ನಮ್ಮ ಕೇಂದ್ರ ಸರಕಾರವು  ಆತ್ಯುಪಯುಕ್ತವಾದ, ಬ್ರಹ್ಮಾಸ್ತ್ರ ಸ್ವರೂಪವಾದ ಶಾಸನ ” ಮಾಹಿತಿ ಹಕ್ಕು ಅಧಿನಿಯಮ 2005″ ನ್ನು ಅಕ್ಟೋಬರ್ 25 ರಂದು ಜಾರಿಗೆ ತಂದಿತು. ಜಾರಿಗೊಂಡ ಎರಡು ದಶಕಗಳ ಅವಧಿಯಲ್ಲಿ ಈ ಕಾನೂನಿನ ಸದುಪಯೋಗಪಡಿಸಿಕೊಂಡ ನಾಗರಿಕರು ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆ ತಂದು ಭ್ರಷ್ಟ ಆಡಳಿತಗಾರರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಿದ್ದು ಸರ್ವ ವಿಧಿತ ಸಂಗತಿ.

                 ನಮ್ಮ ರಾಜ್ಯದ ಹಾಗೂ ದೇಶದ ನಾಗರಿಕರಿಗೆ ಈ ಕಾಯ್ದೆಯ ಉಪಯೋಗ ಪಡೆದುಕೊಳ್ಳುವವರಿಗೆ ಮತ್ತು ಈ ಕಾಯ್ದೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಾರ್ವಜನಿಕ ಅಧಿಕಾರಿಗಳಿಗೆ ಈ ಕಾಯ್ದೆಯ ಪರಿಚಯ ಮಾಡಿಕೊಳ್ಳುವುದು ಸುಲಭಸಾಧ್ಯವಾಗಿರುವ ನಿಟ್ಟಿನಲ್ಲಿ ಅತ್ಯುಪಯುಕ್ತ ಮಾಹಿತಿ ಗ್ರಂಥವಿದಾಗೀದೆವೆಂಬುದರಲ್ಲಿ ಎರಡು ಮಾತಿಲ್ಲ.

ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ರಾಮಬಾಣ ಬ್ರಹ್ಮಾಸ್ತ್ರಗಳಂತೆ ಉಪಯೋಗಿಸಬಹುದಾದ ಪ್ರಸ್ತುತ ಕಾಯ್ದೆಯ ಸಂಪೂರ್ಣ ಪರಿಚಯವನ್ನು ವಿಶ್ಲೇಷಣಾತ್ಮಕವಾಗಿ ಓದುಗರಿಗೆ ಮಾಡಿಕೊಡುವಲ್ಲಿ ಈ ಕೃತಿಯ ಕರ್ತೃ ಡಾ. ಶೇಖರ. ಡಿ.ಸಜ್ಜನರವರು ಯಶಸ್ವಿಯಾಗಿದ್ದಾರೆ ಎಂಬುದು ಮುನ್ನುಡಿ ಬರಹಗಾರರಾದ ನ್ಯಾಯಮೂರ್ತಿ ಶ್ರೀ. ಅರಳಿ ನಾಗರಾಜರ ಅಭಿಪ್ರಾಯ ಈ ಕ್ರೃತಿಗೆ ಕಳಶಪ್ರಾಯದಂತಾಗಿದೆ.

ಕಾನೂನಿನ ಅರಿವು ಮೂಡಿಸಲು, ಅರ್ಥೖಸಲು ಕಾನೂನು ಪದವೀಧರರೇ ಆಗಿರಬೇಕೆಂದಿಲ್ಲಾ. ಆ ವ್ಯಕ್ತಿಯಲ್ಲಿ ವಿಷಯದ ಬಗ್ಗೆ ಜ್ಞಾನತ್ರೃಷೆ ಅದನ್ನು ಅರ್ಥೖಸುವ   ಉತ್ಸುಕತೆ,ಬದ್ಧತೆ ಮತ್ತು ಸೇವಾಭಾವನೆಯ ವ್ಯಕ್ತಿತ್ವ ಇದ್ದರೆ ಸಾಕು.ತಮ್ಮಲ್ಲಿರುವ ಸಂಪೂರ್ಣ ಜ್ಞಾನದಾಹವನ್ನು ಸಾರ್ವಜನಿಕರಿಗೆ ತಿಳಿಯಪಡಿಸಿದರೆ, ಅಂತರಾಳದಲ್ಲಿ ಹುದುಗಿರುವಂತಹ ಆ ಅಪೂರ್ವ ಜ್ಞಾನವು ಬಾವಿಯೊಳಗಿರುವ ನೀರಿನ ಸೆಲೆಯಂತೆ ಧಾರಾಕಾರವಾಗಿ ಸುರಿಯುತ್ತಾ ಇಮ್ಮಡಿ ಮುಮ್ಮಡಿಗೊಳ್ಳುತ್ತಲಿರುತ್ತದೆಂಬುದನ್ನರಿತ  ಡಾ.ಸಜ್ಜನರವರು 2011 ರಿಂದ ಐದು ವರ್ಷಗಳವರೆಗೆ ಆಯುಕ್ತರಾಗಿ ರಾಜ್ಯದ ಜನರ ಸೇವೆಯನ್ನು ಮಾಡಿದ್ದುದರ ಪ್ರತೀಕವಾಗಿ ಒಟ್ಟು ಆರು ಅಧ್ಯಾಯಗಳುಳ್ಳ ಈ ಗ್ರಂಥ ಸಾರ್ವಜನಿಕರಿಗೆ ಕೖಗೆಟಕುವಂತಾಗಿರುವದು ಸ್ತುತ್ಯಾರ್ಹವಾದುದು ಎಂಬುದಾಗಿ ಇನ್ನೋರ್ವ ನ್ಯಾಯಮೂರ್ತಿಗಳಾದ ಶ್ರೀ.ಜಿ.ಎಸ್.ಪಲ್ಲೇದ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರೃತಿಯ ಮೂಲಕ ತಮ್ಮ ಅಪಾರ ಅನುಭವವನ್ನು ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಗ್ರಂಥದ ನಾಲ್ಕು ಆವ್ರೃತ್ತಿಗಳನ್ನು ಪ್ರಕಟಿಸಿ ಸಾರ್ವಜನಿಕ ರಂಗದ ಪರವಾಗಿರುವ ತಮ್ಮ ಅನುಪಮ ಬದ್ಧತೆಯನ್ನು ಆಚರಣೆಗೊಳಿಸುವ ಮುಖೇನ ಕ್ರೃತಿಯ ರೂಪದಲ್ಲಿ  ಪ್ರದರ್ಶಿಸಿರುವದು ದಾಖಲಾರ್ಹವೇ ಸರಿ.

                ಸರ್ಕಾರಿ ವ್ಯವಸ್ಥೆಯಲ್ಲಿನ ಆಡಳಿತ ಹಾಗೂ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕಾನೂನಿನ ಅರಿವುಳ್ಳವರಾಗಬೇಕಾಗಿದೆ.  ಪಾರದರ್ಶಕತೆಯಿಂದ ಕೂಡಿರುವದರ ಮಾಹಿತಿ ಬಗ್ಗೆ ತಿಳುವಳಿಕೆ ಅಧಿಕವಾಗಿಸಿಕೊಳ್ಳುವ ಸದುದ್ದೇಶದಿಂದಾಗಿಯೇ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.ಇದಕ್ಕೂ ಮೊದಲು ಬ್ರಿಟೀಷರ ಕಾಲದಲ್ಲಿ ಆಫೀಸಿಯಲ್ ಸಿಕ್ರೇಟ್ Act 1923 ರಲ್ಲಿ ಜಾರಿಯಲ್ಲಿತ್ತು.ಇದು ಆಡಳಿತ ಮತ್ತು ಅಧಿಕಾರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು.ದೇಶದಲ್ಲಿ ಮಾಹಿತಿ ಹಕ್ಕು ಜಾರಿಯಾದಾಗಿನಿಂದ ದೇಶದ ಅನೇಕ ಹಗರಣಗಳು ಹೊರಗೆ ಬರುವಂತಾಯಿತು.ಇದರ ಪರಿಣಾಮವಾಗಿ ಸರಕಾರ ಬದಲಾವಣೆಯಾದವು.ದೆಹಲಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗ ಮೊದಲ ಬಾರಿಗೆ ಅರ್ಜಿ ಹಾಕಿದವರೇ ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ಅರವಿಂದ ಕ್ರೇಜಿವಾಲ ಅವರು.ಇದರ ಪರಿಣಾಮದಿಂದಾಗಿ ಕಲ್ಲಿದ್ದಲು 2 ಜಿ ಸ್ಪ್ರೆಕ್ಟ್ರಂ, ಕಾಮನ್ ವೆಲ್ತ್ ಹಗರಣಗಳು ಬಹಿರಂಗಗೊಂಡವು. ‘ಪರಿವರ್ತನೆ ಜಗದ ನಿಯಮ’ ಎಂಬ ಉಕ್ತಿಯಂತೆ ಈ ಸಣ್ಣ ಕಾಯ್ದೆ ಸರಕಾರವನ್ನೇ ಬದಲಾಯಿಸಿತು.

              ಇಂದಿನ ದಿನಮಾನದಲ್ಲಿ ಕಾನೂನಿನ ಅರಿವು ಮೂಡಿಸುವದು ತುಂಬಾ ಅತ್ಯವಶ್ಯಕವಾಗಿರುತ್ತದೆ.ಮಾಹಿತಿ ಹಕ್ಕು ಕಾಯ್ದೆ 2005 ಇಲ್ಲದ ಸಂದರ್ಭದ ದೇಶವನ್ನು ನೆನಪಿಸಿಕೊಂಡರೆ ಬೇಜಾರಾಗುವದು ಸರ್ವರ  ಸಹಜಾನುಭವ.ಈ ಕಾಯ್ದೆ ಜಾರಿಯಲ್ಲಿದ್ದರೂ ಕೂಡಾ ಜಾತೀಯತೆ,ಭ್ರಷ್ಟಾಚಾರ ನಿಯಂತ್ರಣಕ್ಕೆ ಬಾರದಂತಾದುದು ಖಂಡನಾರ್ಹ.ಈ ಕಾಯ್ದೆ ಕುರಿತು ಅಪಾರ ಜನತೆಗೆ ತಿಳುವಳಿಕೆಯಿಲ್ಲದಿರುವದು ವಿಷಾದನೀಯ ಸಂಗತಿ.ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿಗಳ ಶಾಲೆ ಕಾಲೇಜ ಹಾಗೂ ಆಯಾ ಸಂಘಸಂಸ್ಥೆಗಳ ಸಂಘಟನೆಗಳಲ್ಲಿ ಆಗಾಗ ತರಬೇತಿ ಶಿಬಿರ, ಕಾರ್ಯಾಗಾರ,ಉಪನ್ಯಾಸ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ‘ಸರ್ವೆ ಜನಃ ಸುಖಿನೋ ಭವಂತು’ ಎಂಬ ಹೇಳಿಕೆಯಂತೆ ಸಾರ್ವಜನಿಕರಲ್ಲಿ ಸ್ನೇಹಿ ಪರಿಸರ ಹುಟ್ಟುಹಾಕುತ್ತಾ ಸರ್ವರಿಗೂ ‘ಸಮಪಾಲು ಸರ್ವರಿಗೂ ಸಮಬಾಳು’ ತತ್ವದಂತೆ ಮುಗ್ಧ ಜನತೆಯಲ್ಲಿ ಜಾಗ್ರತಿ ಬಲಪಡಿಸುತ್ತಾ, ಗಮನ ಸೆಳೆಯುವಂತಾದರೆ ಮಾತ್ರ, ನಮ್ಮ ದೇಶ ನಂಬರ್ ಒನ್ ಸ್ಥಾನ ಪಡೆಯುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.

         ಪ್ರಾಮಾಣಿಕತೆಯ ಸದುದ್ದೇಶವುಳ್ಳ ಸಾರ್ವಜನಿಕ ಹಿತಾಸಕ್ತಿ ಹೊಂದಿದ ನಾಗರಿಕರು ಈ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ಆಡಳಿತದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ನಿಷ್ಪಕ್ಷಪಾತತನ ಮುಂತಾದವುಗಳನ್ನು ತರುವುದರ ಮೂಲಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಹಂತಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ವ್ಯಾಪಕವಾಗಿರುವ ಅದರ ನಿರ್ಮೂಲನೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಹೋಗಿರುವ, ಭ್ರಷ್ಟಾಚಾರವನ್ನು ಸಮರ್ಪಕವಾಗಿ ನಿಯಂತ್ರಿಸುವುದು ಸಾಧ್ಯ. ನಮ್ಮ ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಭ್ರಷ್ಟಾಚಾರ. ಅದೊಂದು ಮಾತ್ರ ನಿರ್ಮೂಲನಗೊಂಡರೆ ಅಥವಾ ಗಣನೀಯವಾಗಿ ನಿಯಂತ್ರಣಕ್ಕೆ ಬಂದರೆ ನಮ್ಮ ದೇಶ ವಿಶ್ವದ ಯಾವ ರಾಷ್ಟ್ರಕ್ಕೂ ಕಡಿಮೆಯಿಲ್ಲದಂತೆ ಸರ್ವತೋಮುಖ ಶ್ರೇಯೋಭಿವ್ರೃದ್ಧಿ ಸಾಧಿಸುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.

          ಮಾಹಿತಿ ಹಕ್ಕು ಅಧಿನಿಯಮ-2005 ಕ್ಕೆ 2019 ನೇ ಇಸ್ವಿಯಲ್ಲಿ ತಿದ್ದುಪಡಿ ತರಲಾಗಿದೆ.ಕಲಂ 13,16,27 ಗಳಲ್ಲಿ ಮಾತ್ರ ತಿದ್ದುಪಡಿ ಮಾಡಲಾಗಿದ್ದು,ಸದರ ತಿದ್ದುಪಡಿ-2019(24 OF 2019) ಯು ದಿ.01-08-2019 ರಂದು ಅಂಗೀಕಾರಗೊಂಡು,24-10-2019 ರಂದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ.ಜಮ್ಮು ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ಸಂವಿಧಾನದ ಅನುಚ್ಛೇದ-370 ನ್ನು, ತೆರವುಗೊಳಿಸಲಾಗಿದ್ದು (34 OF 2019 w.e.f. 31-10-2019), ಇವೆಲ್ಲವುಗಳನ್ನೂ ಈ ಆವ್ರೃತ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ ದೇಶದಲ್ಲಿ 20 ವರ್ಷಗಳಿಂದ ಜಾರಿಯಲ್ಲಿದ್ದರೂ ಕೂಡಾ ಇನ್ನೂ ಸಾರ್ವಜನಿಕರಲ್ಲಿ ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಅನೇಕ ದ್ವಂದ್ವಗಳು ಹಾಗೂ ಕಾಯಿದೆಯ ಬಗ್ಗೆ ಸ್ಪಷ್ಟತೆಯ ಅರಿವು ಇಲ್ಲದೆ ಇರುವುದರಿಂದ ಅವಶ್ಯಕತೆಯಿರುವವರು ಡಾ.ಸಜ್ಜನ ಅವರನ್ನು ಸಂಪರ್ಕಿಸಿ ಅನೇಕ ದ್ವಂದ್ವ ಹಾಗೂ ಸಂದೇಹಗಳಿಗೆ ಮಾಹಿತಿ ಪಡೆಯುತ್ತಲಿರುವಂತೆ ಇಲ್ಲವೇ ಈ ಕ್ರೃತಿಯನ್ನು ಅಧ್ಯಯನಗೖದು ಉಪಯುಕ್ತ ಮಾಹಿತಿವುಳ್ಳವರಾಗುವಂತಾಗಲು ಈ ಹೆಬ್ಬೊತ್ತಿಗೆಯು ತುಂಬಾ ಸಹಾಯಕಾರಿಯಾಗುವದಂತೂ ಖಚಿತ.
ಅನೇಕ ಕಾನೂನು ತಜ್ಞರು, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಹಾಗೂ ಹಾಲಿ ಆಯುಕ್ತರುಗಳು ಈ ಕ್ರೃತಿಯ ಮಾಹಿತಿ ಅಧ್ಯಯನಗೖದು ಮೆಚ್ಚುಗೆ ಅಭಿವ್ಯಕ್ತಪಡಿಸಿರುವರಲ್ಲದೆ,ಕರ್ನಾಟಕದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ವಜುಭಾಯಿ ವಾಲಾರವರೂ ಕೂಡಾ ವೖದ್ಯರಾದ ಡಾ. ಶೇಖರ ಸಜ್ಜನರವರು ಕಾನೂನು ಗ್ರಂಥ ರಚಿಸಿರುವದಕ್ಕೆ ಹ್ರೃತ್ಪೂರ್ವಕವಾಗಿ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನದ ಸಂಗತಿಯೇ ಸರಿ.

             2005ರಲ್ಲಿ ಜಾರಿಗೊಂಡ ಈ ಮಾಹಿತಿ ಹಕ್ಕನ್ನು ಈ ವರೆಗೂ ಸಂಪೂರ್ಣವಾಗಿ ಯಾರು ಅರ್ಥೈಸಿಕೊಂಡಿಲ್ಲ.ಮಾಹಿತಿ ಕೇಳುವವರು ಮತ್ತು ಪೂರೈಸುವವರು ಇಂದಿಗೂ ಸರಿಯಾದ ಮಾರ್ಗದರ್ಶನ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿ ಅವರ ಎಲ್ಲ ಸಂದೇಹಗಳಿಗೆ ನಿವಾರಣೆ ನೀಡಬಲ್ಲ ಉಪಯುಕ್ತ ಕೃತಿಯೆನಿಸಿದೆ. ಅದರಲ್ಲಿಯೂ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯಗಳ ತೀರ್ಪುಗಳ ಉಲ್ಲೇಖ, ಕೇಂದ್ರ- ರಾಜ್ಯ ಮಾಹಿತಿ ಆಯೋಗಗಳ ತೀರ್ಪುಗಳ ಉಲ್ಲೇಖ, ಸರಕಾರದ ಸುತ್ತೋಲೆಗಳು ಇತ್ಯಾದಿ ಸಮಗ್ರ ಮಾಹಿತಿಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಹೀಗಾಗಿ ಇದೊಂದು ಸಮಯೋಚಿತ, ಸಾರ್ವಜನಿಕ ಹಿತಾಸಕ್ತಿ ಹೊಂದಿದ ಉಪಯುಕ್ತ ಕ್ತೃತಿಯಾಗಿದ್ದು, ತನ್ಮೂಲಕ ಕಾಯ್ದೆ ಸದ್ಬಳಕೆಯಾಗುವದರಲ್ಲಿ ಸಂಶಯವಿಲ್ಲ ಎಂಬುದು ಘನ ಕರ್ನಾಟಕ ಉಚ್ಛ ನ್ಯಾಯಾಲಯ,ಮಾಜಿ ಅಧ್ಯಕ್ಷರು,ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ,ಬೆಂಗಳೂರು ಮಾಜಿ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಶ್ರೀ.ಚಂದ್ರಶೇಖರಯ್ಯ (ನಿ)
ಅವರ ಅಭಿಪ್ರಾಯವಾಗಿರುತ್ತದೆ.

           ವೖದ್ಯಕೀಯ ಕ್ಷೇತ್ರದಿಂದ ಕಾನೂನು ಕ್ಷೇತ್ರಕ್ಕೆ ದಾಪುಗಾಲಿಟ್ಟು ಅಲ್ಲಿಯ ವಿಷಯಗಳನ್ನರಗಿಸಿಕೊಂಡು ಕಾನೂನು ಗ್ರಂಥ ರಚಿಸಿರುವರಲ್ಲದೆ ಇದು ನಾಲ್ಕನೆಯ ಆವ್ರತ್ತಿಯಲ್ಲಿ ಪಾದಾರ್ಪಣೆಗೊಂಡಿರುವದು ಅಂತರ್ಜಾಲದ ಹಾವಳಿಯ ತಂತ್ರಜ್ಞಾನದ ಈ ಯುಗದಲ್ಲಿ ಓದುಗರ ಸಂಖ್ಯೆಯು ಕ್ಷೀಣಿಸುತ್ತಲಿದೆ ಎಂಬ ಹೇಳಿಕೆ ಅಲ್ಲಗಳೆದಿರುವದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಾಖಲಾರ್ಹ ಇತಿಹಾಸವಲ್ಲದೆ ಮತ್ತಿನ್ನೇನು!! ಎಂಬ ನುಡಿಮುತ್ತು ಸಹ್ರೃದಯರ ಹ್ರದಯಾಂತರಾಳದಿಂದ ಹೊರಹೊಮ್ಮಿದ ಪ್ರಶಂಸಾರ್ಹ ಅನಿಸಿಕೆಯಾಗಿರುತ್ತದೆ.
ಸಂಜೀವಿನಿ ಆಸ್ಪತ್ರೆಯ ರೂವಾರಿಗಳಾದ ಡಾ.ಶೇಖರ ಅವರ ಜೇಷ್ಠ ಕುಲದೀಪಕರಾದ ಡಾ.ಪ್ರವೀಣ.
ಎಸ್.ಸಜ್ಜನರವರು ಈ ಕ್ರೃತಿಯ ಪ್ರಕಾಶಕರು. ಒಟ್ಟು 528 ಪುಟಗಳುಳ್ಳ ಇದರ ಬೆಲೆ ಕೇವಲ ಒಂದುಸಾವಿರ ರೂ.ಗಳು ಮಾತ್ರ. ಗದಗನ ವಿಕ್ರಮ ಪ್ರಕಾಶನದಡಿಯಲ್ಲಿ ಪ್ರಕಟವಾಗಿರುವ,ಅನ್ವರ್ಥ ನಾಮದಂತೆ  ಅರ್ಥಪೂರ್ಣವಾದ  ಶೀರ್ಷಿಕೆಯು ಈ ಗ್ರಂಥಪುಷ್ಪಕ್ಕೆ ಔಚಿತ್ಯಪೂರ್ಣವಾಗಿರುತ್ತದೆಯಲ್ಲದೆ ಓದುಗರನ್ನು ಓದಿಸಿಕೊಂಡು ಹೋಗುವಂತಹ ಭಾಷಾಶೖಲಿಯು ಮನಂಬುಗುವಂತಿದೆ.

             ಒಟ್ಟಾರೆ ಹೇಳುವದಾದರೆ ಪ್ರತಿಯೊಬ್ಬರೂ ಕಾನೂನಿನ ಅರಿವುಳ್ಳವರಾಗಿ ಅತ್ಯಾಚಾರ ಭ್ರಷ್ಟಾಚಾರ,ಸ್ವಾರ್ಥಲಾಲಸೆ ಅಶಾಂತಿ ಅನ್ಯಾಯ ಅಸಮಾನತೆ ಅಮಾನವೀಯತೆ ದುರಹಂಕಾರ ದ್ವೇಷಾಸೂಯೆ ಮೌಢ್ಯಾಚರಣೆ ಇತ್ಯಾದಿಗಳಿಂದ
ಮುಕ್ತ ದೇಶ ನಮ್ಮ ಭಾರತ ಮಹಾನ್ ದೇಶವನ್ನಾಗಿಸಲು ಸ್ಪೂರ್ತಿಯ ಸೆಲೆಯಂತಿರುವ ಈ ಕ್ರೃತಿಯನ್ನು ಸರ್ವರೂ ಓದಿ ಜಾಗ್ರತರಾಗಿ  ಎಚ್ಚತ್ತುಕೊಂಡು ಕಾನೂನುಭ್ರಷ್ಟರನ್ನು ಸಂರಕ್ಷಿಸದೆ ಶಿಕ್ಷಿಸುವಂತಾಗಲು ಸೂಕ್ತ  ಕ್ರಮಗಳನ್ನು ಕೖಗೊಳ್ಳಲು ಹಾಗೂ ಏನಾದರೂ ಲೋಪದೋಷವುಳ್ಳವುಗಳನ್ನುಗಮನಕ್ಕೆ ತಂದು ಅರುಹಿದರೆ ಮುಂಬರುವ ಆವ್ರೃತ್ತಿಗಳಲ್ಲಿ ತಿದ್ದುಪಡಿಗೊಳಿಸಲು ತುಂಬಾ ಸಹಾಯಕಾರಿಯಾದಂತಾಗುತ್ತದೆಯಲ್ಲದೆ ಲೇಖಕರ ಕಠಿಣ ಪರಿಶ್ರಮವೂ ಸಾರ್ಥಕವಾಗುವದರಲ್ಲಿ ಎಳ್ಳಷ್ಟೂ ಸಂಶಯವಿಲ್ಲವೆಂಬುದು ಅಕ್ಷರಶಃ ವಾಸ್ತವಿಕವಾದ ಸಂಗತಿ ತಾನೆ!!.


About The Author

Leave a Reply

You cannot copy content of this page

Scroll to Top