ಪುಸ್ತಕ ಸಂಗಾತಿ
ಗಣೇಶ್ ವಂದಗದ್ದೆ
ವಾಣಿ ಭಂಡಾರಿ
“ಮಲ್ನಾಡು ಕವಳ”



ಮಲೆನಾಡಿನ ಮೂಲೆಯಾದ ರಿಪ್ಪನ್ ಪೇಟೆಯಲ್ಲಿ ಜನಿಸಿದ ಶ್ರೀಮತಿ ವಾಣಿ ಭಂಡಾರಿ ಅವರು ಬಹುಮುಖ ಪ್ರತಿಭೆಯ ಸಾಹಿತಿ. ತಮ್ಮ ಶಾಲಾ ದಿನಗಳಿಂದಲೂ ಸಾಹಿತ್ಯ,ಸಂಸ್ಕೃತಿ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿದ್ದ ಶ್ರೀಮತಿ ವಾಣಿಯವರು ಕನ್ನಡದ ಹೆಸರಾಂತ ಲೇಖಕಿಯಾಗಿ ಹೊರಬಂದಿರುವುದಲ್ಲಿ ಆಶ್ಚರ್ಯವೇನಿಲ್ಲ. ಈಗಾಗಲೇ ಇವರ ಲೇಖನಿಯಿಂದ ಕಥೆ, ಕವನ,ಚುಟುಕು, ಗಜಲ್ ,ಭಾವಗೀತೆ ಮುಂತಾದ ಅನೇಕ ಪ್ರಕಾರದ ಕೃತಿಗಳು ಹೊರಬಂದಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಮನೆ ಮಾತಾಗಿದ್ದಾರೆ. ಈಗ ಹೊರ ತರುತ್ತಿರುವ “ಮಲೆನಾಡು ಕವಳ” ಪ್ರಬಂಧ ಸಂಕಲನದಲ್ಲಿ ತಾವು ಕಂಡು, ಕೇಳಿದ ಅನುಭವಿಸಿದ ಘಟನೆಗಳನ್ನು ರಸವತ್ತಾಗಿ ಹೊರ ಚೆಲ್ಲುತ್ತಾ ಹೋಗಿದ್ದಾರೆ.
. ” ಮಲೆನಾಡು ಕವಳ” ಕೃತಿಯನ್ನು ಈಗ ತಾನೇ ಓದಿ ಮುಗಿಸಿದೆ. ಈ ಕೃತಿಯಲ್ಲಿ ಮಲೆನಾಡಿನ ಕವಳದ ತರ ತರದ ಸವಿಯನ್ನು ತರತರವಾಗಿ ಚಿತ್ರಿಸುತ್ತಾ ಹೋಗಿದ್ದಾರೆ. ಅವರಂತೆ ನಾನು ಕೂಡ ಮಲೆನಾಡಿನಿಂದಲೇ ಬಂದಿರುವುದರಿಂದ ನನಗೂ ಕೂಡ ಆ ಕವಳದ ಸವಿ, ಏನು ಎಂಬುದು ಚೆನ್ನಾಗಿ ಅನುಭವ ವಾಗುತ್ತಿದೆ. ಈ ದಿಸೆಯಲ್ಲಿ ಡಾ ಶಂಕರ್ ಶಾಸ್ತ್ರಿ ಎನ್ನುವವರು ಒಂದು “ಕವಳ” ಎಂಬ ಕವನ ಸಂಕಲನವನ್ನು ಹೊರತಂದಿರುತ್ತಾರೆ. ಎರಡು ಕೃತಿಗಳ ಹೂರಣವೂ ಒಂದೇ ತರನಾಗಿದ್ದರು ಡಾ. ಶಾಸ್ತ್ರೀಯವರ ಅನುಭವ ಪದ್ಯ ರೂಪದಲ್ಲಿದ್ದರೆ ಈ ಲೇಖಕಿಯ ಅನುಭವ ಗದ್ಯ ರೂಪದಲ್ಲಿದೆ.
ಸರಿಸುಮಾರು 25 ವಿಷಯಗಳು ಆರಿಸಿಕೊಂಡಿರುವ ಈ ಸಂಕಲನದಲ್ಲಿ ಎಲ್ಲಾ ಘಟನೆಗಳು ಚಿರಪರಿಚಿತವಾದದ್ದೆ. ಎಲ್ಲೂ ಬೇಸರವಾಗುವಂತೆ ಲೇಖನಗಳನ್ನು ಎಳೆದುಕೊಂಡು ಹೋಗಿಲ್ಲ. ಹೇಳಬೇಕಾದ ವಿಷಯಗಳನ್ನು ಚಿಕ್ಕದಾಗಿ ಚೊಕ್ಕದಾಗಿ ನಿರೂಪಿಸುತ್ತಾ ಹೋಗಿರುತ್ತಾರೆ. ಹಾಗಾಗಿ ಕೃತಿ ಮುಂದುವರಿದಂತೆ ಓದುಗರ ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಒಂದೆರಡು ಘಟನೆಗಳನ್ನು ಇಲ್ಲಿ ಮೆಲುಕು ಹಾಕಲು ಪ್ರಯತ್ನಿಸುತ್ತೇನೆ.
ಸಂತೃಪ್ತ ದಾಂಪತ್ಯಕ್ಕೆ ತಾಳ್ಮೆ, ಶ್ರಮ,ತ್ಯಾಗ, ಸಮಾಧಾನ ಮುಂತಾದವು ತುಂಬಾ ಅವಶ್ಯಕ ಎಂಬ ಸೂತ್ರಗಳನ್ನು ಒಪ್ಪುತ್ತಾ ಅದಕ್ಕೆ ನನ್ನ ತಂದೆ ತಾಯಿಯಂದಿರೆ ಉದಾಹರಣೆ ಎನ್ನುತ್ತಾರೆ. ತಮ್ಮ ಅಪ್ಪ ಅಮ್ಮ ಅದೆಷ್ಟು ಅನ್ಯೋನ್ಯವಾಗಿದ್ದರು ಎಂದರೆ ಅಪ್ಪ ಹೋದ ಮೂರೇ ತಿಂಗಳಿಗೆ ಅಮ್ಮನೂ ತನ್ನ ಬದುಕಿನ ಯಾತ್ರೆಯನ್ನು ಮುಗಿಸಿಬಿಟ್ಟಳು ಎನ್ನುತ್ತಾರೆ. ಬಕೆಟ್ ಹಿಡಿಯುವುದರ ಬಗ್ಗೆ ಬರೆಯುತ್ತಾ ಅದು ಜೀವನದ ಒಂದು ಭಾಗವೋ ಎಂಬಂತೆ ಸ್ಪಷ್ಟವಾಗಿ ಹೇಳುತ್ತಾರೆ. ತಾವು ಸೈಕಲ್ ಕಲಿತ ಅನುಭವವನ್ನು ಹಂಚಿಕೊಳ್ಳುತ್ತಾ ಅದೆಷ್ಟು ತಾನು ಅದರೊಂದಿಗೆ ಹೊಂದಿಕೊಂಡಿದ್ದೆ ಎಂಬುದನ್ನು ಹೇಳುತ್ತಾ ನಿರ್ಜೀವ ವಸ್ತುಗಳೇ ಆದರೂ ಅವು ಹೇಗೆ ನಮ್ಮೊಂದಿಗೆ ಸಜೀವ ವಸ್ತುಗಳಂತೆ ಹೊಂದಿಕೊಳ್ಳುತ್ತವೆ ಎಂಬುದನ್ನು ಜೀವಂತವಾಗಿಯೇ ಚಿತ್ರಿಸುತ್ತಾರೆ. ಕೆಲವು ವಸ್ತುಗಳನ್ನು ನಾವು ತುಂಬಾ ಹಚ್ಚಿಕೊಂಡರೆ ಅವು ಜೀವ ಇರುವ ವಸ್ತುಗಳಂತೆ ನಮಗೆ ಕಾಣಿಸುತ್ತದೆ ಅಷ್ಟೇ ಅಲ್ಲ ಅವು ನಮ್ಮ ಜೀವನದ ಒಂದು ಭಾಗವೇ ಆಗಿಬಿಡುತ್ತವೆ ಎನ್ನುತ್ತಾರೆ.
“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ”ಎಂಬ ಅಭಿಪ್ರಾಯವನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತಾ ಮಾನವ ಹೆಣ್ಣಿಗೆ ಎರಡನೇ ಸ್ಥಾನ ಕೊಟ್ಟು, ದೂರ ತಳ್ಳುತ್ತಿರುವುದು ಖಂಡಿತ ಸಾಧುವಲ್ಲ ಎಂದು ವಾದಿಸುತ್ತಾರೆ. ಇವರ ಬರಹಗಳೇ ಹಾಗೆ, ಹೆಚ್ಚಾಗಿ ಹೆಣ್ಣಿನ ಪರವಾಗಿಯೇ ವಾದಿಸುತ್ತಾ ಹೋಗುತ್ತಾರೆ.
ಒಟ್ಟಿನಲ್ಲಿ ಅವರು ವಸ್ತುಗಳಿಗಾಗಿ ಪರದಾಡಲೇ ಇಲ್ಲ ಕೈಗೆ ಸಿಕ್ಕಿದ ವಸ್ತುಗಳನ್ನು ಆರಿಸಿಕೊಂಡು ಅದಕ್ಕೆ ಉಡುಗೆ ತೊಡುಗೆಗಳನ್ನು ತೊಡಿಸಿ ತಮ್ಮ ಹಾಸ್ಯಲೇಪನವನ್ನು ಸವರುತ್ತಾ ನಮ್ಮ ಮುಂದೆ ನೈಜ ಘಟನೆಗಳೋ ಎಂಬಂತೆ ತೆರೆದಿಡುತ್ತಾ ಹೋಗುತ್ತಾರೆ. ಅದು ಗೊರಕೆ ಹೊಡೆಯುವವರ ಕಾಟ, ಬೀದಿ ನಾಯಿಯ ಪುರಾಣ ಮುಯಿಗೆ ಮುಯಿ ತೋರಿಸುವ ಛಲ, ಪಂಕ್ತಿ ಊಟದಲ್ಲಿ ಆಗುವ ತೊಂದರೆ, ಕಟ್ಟೆಯ ಬುಡದಲ್ಲಿ ಪಾರತಕ್ಕನಂತವರ ಹರಟೆ ಪುರಾಣ ಮುಂತಾದವುಗಳನ್ನು ಕಾಣಬಹುದು. ಒಟ್ಟಿನಲ್ಲಿ ಜೀವನದಲ್ಲಿ ನಾವು ಅನುಭವಿಸಿದ, ಎದುರಿಸಿದ ಅನೇಕ ಘಟನೆಗಳನ್ನು ಅವರು ಮೆಲುಕು ಹಾಕುವಂತೆ ಮಾಡಿದ್ದಾರೆ. ಹಾಗಾಗಿ ಈ ಲೇಖನಗಳು ನಮ್ಮನ್ನು ಜೀವಂತವಾಗಿ ಇಡುತ್ತವೆ ಎಂಬ ಮಾತುಗಳು ಖಂಡಿತ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇಂತಹ ಕೃತಿಗಳು ಇವರಿಂದ ಇನ್ನಷ್ಟು ಮಗದಷ್ಟು ಹೊರಬರಲಿ ಎಂದು ಪ್ರೀತಿಯಿಂದ
ಹಾರೈಸುತ್ತೇನೆ.

ಗಣೇಶ್ ವಂದಗದ್ದೆ



