ಜೀವನ ಸಂಗಾತಿ
ಶಿವಲೀಲಾ ಶಂಕರ್
“ಹೆತ್ತವರು..ಯಾರಿಗೆ ಭಾರ ಯೋಚಿಸಿ!”


ನಾವು ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ವಯಸ್ಸಾದವರ ಬಗ್ಗೆ ಅದೆಷ್ಟು ಕಾಳಜಿಯಿಂದ ಮರುಕ ವ್ಯಕ್ತಪಡಿಸುತ್ತೆವೆ.ಅಯ್ಯೋ.. ಪಾಪ ಮಗ,ಮಗಳು,ಸೋಸೆ ಇಂತವಳು…ಸಾಕಷ್ಟು ಉತ್ತೇಜಕ ಕಾಮೆಂಟ್ ಹಾಕುತ್ತ ಮನದ ಮೂಲೆಯ ಅಭಿವ್ಯಕ್ತಿ ಹೊರ ಹೊಮ್ಮಿಸುತ್ತೆವೆ..ಅಲ್ಲಗೆ ಮುಗಿತು ನಮ್ಮ ಮಾತು ಕಥೆಗಳು.ಆದರೆ ದೀಪದ ಬುಡದಲ್ಲಿ ಕತ್ತಲೆ ಅಷ್ಟೇ.. ವೃದ್ಧ ದಂಪತಿಗಳು ತಮ್ಮ ಇಳಿವಯಸ್ಸಿನಲ್ಲಿ ಒದ್ದಾಡುವುದು, ಪೇಚಾಡುವುದು ಬೇಕಿತ್ತಾ? ಎಂಬ ಮಾತಿಗೆ ಉತ್ತರ ಕೊಡುವವರು ಯಾರು?.ಮನಸ್ಸು ಒಮ್ಮೆ ಭಾರವಾಗಿ ಮಗ್ಗುಲಾಗಿದ್ದು ಇದೆ.ತಂದೆ ತಾಯಿಗೆ ಮಕ್ಕಳು ಒಂದೇ. ಆದರೆ ಮಕ್ಕಳಿಗೆ ತಂದೆ-ತಾಯಿ ಬೇರೆ ಬೇರೆ..ಹತ್ತಿರವಾಗುವುದು ಯಾವಾಗ? ಅಂದರೆ ಆಸ್ತಿ ಪಾಸ್ತಿ ಯಾರಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಸಂಬಂಧಗಳು ಸಾಪ್ಟ್ ಆಗಿ ಹ್ಯಾಂಡಲ್ ಮಾಡುವಂತಹ ಮನೋಭಾವಕ್ಕೆ ಒಳಗಾಗಿರುತ್ತಾರೆ.ಆಗ ಹೆತ್ತವರು ಭ್ರಮೆಯಲ್ಲಿ..ಮಕ್ಕಳು ನಮ್ಮವರೆಂಬ ಆತ್ಮ ವಿಶ್ವಾಸದ ಸಾಗರದಲ್ಲಿ.
ನಾವು ಚಿಕ್ಕವರಿದ್ದಾಗ ಅಪ್ಪ ಅಮ್ಮ ನಮ್ಮ ಬೆಳೆಸಿದ ರೀತಿ,ಅವರು ಕಷ್ಟ ಪಟ್ಟದಿನವನ್ನು ನೆನೆದರೆ ಸಾಕು!. ಅವರ ರೆಟ್ಟೆಗಳು,ಹರಿದ ಚಪ್ಪಲಿ,ಹರಿದ ಅಂಗಿಗಳು,ಅರೆಹೊಟ್ಟೆಯ ದಿನಗಳು.ಅವರಿಗೆಲ್ಲ ಕಾಮನ್.. ಯಾಕೆಂದರೆ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿ ಕನಸು ಎಲ್ಲವೂ ನಿರ್ಭರ.ಇಳಿವಯಸ್ಸಿನಲ್ಲಿ ಆಸರಾಗುವರೆಂಬ ಅತಿಆಸೆ.ತಮ್ಮ ಕರ್ತವ್ಯ ಪ್ರಜ್ಞೆಯನ್ನು ಚಾಚು ತಪ್ಪದೆ ಪಾಲಿಸಿದ್ದರ ಪ್ರತಿಫಲ ನಾವೆಲ್ಲ ಪ್ರಪಂಚಕ್ಕೆ ಗುರುತಿಸಲ್ಪಡುವ ವಿಶೇಷ ವ್ಯಕ್ತಿಗಳಾಗಿ ರೂಪುಗೊಂಡಿದ್ದು.ಇಷ್ಟೆಲ್ಲಾ ಆದರೂ ನಮ್ಮ ಅಸಹಜ ಗುಣದಿಂದ ನಾವು ಭಿನ್ನವಾಗಿಯೇ ಬೆಳೆದು ನಿಂತಿದ್ದೆವೆ.ಅವರು ನೆಟ್ಟ ಮಾವಿನ ಮರ ನೀಡಿದ ಫಲ ಸಿಹಿಯಾಗದೇ ಕಹಿಯ ಫಲವಾದರೆ ಪ್ರಾಣಿ ಪಕ್ಷಿಗಳ ಗತಿಯೇನು? ಹೌದರಿ…ಜವಾಬ್ದಾರಿ ಹೊರುವ ಕಾಯಕವನ್ನು ಕೈಗೆತ್ತಿಕೊಂಡು ನೆಡದವರಿಗೆ ಭಗವಂತ ರಕ್ಷಣೆ ಖಂಡಿತ ನೀಡುವನು..ಅದೆಷ್ಟೋ ಸಾಂತ್ವಾನ ನೀಡಿದರೂ ಅದ್ಯಾಕೋ… ಮನಸ್ಸು ‘ವಿಲವಿಲ’ ವೆಂದು ಒದ್ದಾಡುತ್ತಿದೆ.ಮಕ್ಕಳು ಮುಪ್ಪಿನಲಿ..ಇದ್ದು ಇಲ್ಲದಂತಾಗುವ ಗಳಿಗೆ ಯಾವ ಜೀವಿಗೂ ಬೇಡ! ನೂರು ದೇವರ ಅನುಗ್ರಹಕ್ಕೆ ನೂರಾರು ದೇವಾಲಯ ಅಲೆದು,ಬೇಡಿ ಬಯಸಿ ಜನ್ಮಕೊಟ್ಟ ಹಸುಗೂಸಿಗೆ ಬೆನ್ನೆಲುಬಾಗಿ ನಿಂತು,ಸಲುಹಿ,ರಟ್ಟೆಯಲ್ಲಿ ಬಲಬರುವ ತನಕವೂ ರೆಸ್ಟಲೆಸ್ ಆಗಿ ದುಡಿದು ದಣಿವಾರಿಸಲು ಬಯಸದ ಕಂಗಳಿಗೆ,ಅದ್ಯಾವ ಪೊರೆ ಮೆತ್ತಿತ್ತೊ ಕಾಣೆ?. ಮನೆಯಂಗಳದಲಿ ನಲಿದಾಡುವ ಪುಟ್ಟ ಜೀವಕ್ಕೊಸ್ಕರ ಎಲ್ಲವನ್ನೂ ಮರೆತು ದುಡಿದಿದ್ದು ಯಾಕಂತ ಅರ್ಥವಾಗುವ ಸಮಯ ಬರದೆ ಹೋದರೆ ಆ ಬದುಕಿಗೆ ಅರ್ಥವೇನು?.. ಎಷ್ಟೊಂದು ಪರಿಣಾಮವನ್ನು ಬೀರಿತು ನಮ್ಮೆದೆಯೊಳಗೆ..ಆದರೆ ಅದ್ಯಾವ ಭಾವವೂ ಕೂಡ ನಮಗೀಗ ಅರಿವಿಗೆ ಬೇಕಿಲ್ಲ!.
ದಿನಕಳೆದಂತೆಲ್ಲ ದೇಹಕ್ಕೊ,ಮನಸ್ಸಿಗೂ ಬಿರುಕುಗಳು ಮೂಡುವ ಕಾಲಘಟ್ಟ.ಯೌವ್ವನದ ಹೇಳ ಹೆಸರಿಲ್ಲದಂತೆ,ಸಂತೆಯೊಳು ಮಾಯವಾದಂತೆ.ಹಿಡಿದಿಟ್ಟುಕೊಳ್ಳುವ ಸಾಹಸ ಯಾರಿಂದ ಸಾಧ್ಯವಾದಿತು!. “ಯಯಾತಿ” ಪ್ರಸಂಗವೊಂದು ಇದಕ್ಕೆ ಸಾಕ್ಷಿಯಾದಿತು.ಸುಖ,ವೈಭೋಗ ಎಷ್ಟು ದಿನ,ವರುಷ ಅನುಭವಿಸಲು ಸಾಧ್ಯ?.ಮುಪ್ಪು ಸದ್ದಿಲ್ಲದೆ ಮೈಗಂಟಿಕೊಳ್ಳುವ ಜಾದೂಗಾರ!.ಅಲ್ಲಿಯೇ ನೋಡಿ ನಮಗಿರುವ ಕಿಮ್ಮತ್ತು ಅಂದರೆ ಸತ್ಯ ದರ್ಶನ !. ಹೌದು ನಾವೆಲ್ಲ ಏನನ್ನೂ ಸಾಧಿಸದೆ…ಒಂದಿಷ್ಟು ಆಸ್ತಿ ಪಾಸ್ತಿ ಹೊಂದಿದ್ದು..ಮಗ,ಮಗಳಿಗೆ ಕಷ್ಟ ಬರಬಾರದೆಂದು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ. ಮಕ್ಕಳ ಭವಿಷ್ಯಕ್ಕೆ ಆಕಾರನೀಡುವಲ್ಲಿ ಯೌವ್ವನ ಯಾವಾಗ ಮುಪ್ಪಾಗಿ ಪರಿಣಮಿಸಿತೋ ಅರಿವಿಗೆ ಬರಲಿಲ್ಲ.ತಾಕತ್ತು ಎಲ್ಲಿಯವರೆಗೆ?.. ಮಗ,ಮಗಳು ಬಲಿಷ್ಠರಾಗುವ ತನಕ.ಅಲ್ಲಿಗೆ ಒಂದು ಧೀರ್ಘಕಾಲದ ಅಧ್ಯಾಯ ಮುಕ್ತಾಯವಾದಂತೆ.ನಿರೀಕ್ಷೆಯ ಮಹಾಪೂರವೇ ಹರಿದುಬಂದಿತೆಂಬ ಕನಸು.ಅಪ್ಪ ಅಮ್ಮ ಮಕ್ಕಳನ್ನು ತಿದ್ದಿ ತೀಡಿ ಆನಂದ ಕಂಡ ಜೀವಗಳು.ತಮ್ಮ ತ್ಯಾಗಕ್ಕೆ ಫಲ ಸಿಗುದೆಂಬುದು ಊಹೆ ಅಷ್ಟೇ!.
ರೆಕ್ಕೆ ಬಲಿತ ಮರಿಗಳು ಗೂಡು ಬಿಟ್ಟು ಹಾರಿಹೋದಂತೆ.ವಿದ್ಯೆ, ಸಂಸ್ಕಾರ, ಉದ್ಯೋಗ ಎಲ್ಲವೂ ದಕ್ಕಿದ ಮೇಲೆ ಅಂದರೆ,ಹೊಳೆ ದಾಟಿದ ಮೇಲೆ ಅಂಬಿಗನ ಮರೆತಂತೆ!. ಮಕ್ಕಳ ಬದುಕಿಗೆ ಎಣಿಯಾದ ತಂದೆ ತಾಯಿ ಕೊನೆಗೊಂದು ದಿನ ಮೂಲೆಗುಂಪು.ಇದು ಕಾಲಚಕ್ರದ ಪರಿಣಾಮವೂ,ವಿಧಿಯ ಆಟವೋ,ಅಥವಾ ಬೆಳೆಸುವುದರಲ್ಲಿ ಹೆಚ್ಚು ಪ್ರಾಮಾಣಿಕರಾಗಿದ್ದೋ ಗೊತ್ತಿಲ್ಲ.ಯಾರಾದರೇನು? ಸಮಯಕ್ಕೆ ಆಗದ ಹಣವಾದರೇನು? ನೆಂಟರಾದರೇನು? ಮಕ್ಕಳಾದರೇನು?. ನೋವು ನೋವೆ!. ಅದನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹೌದು..ಇದೆಲ್ಲ ಯಾಕೆ? ಹೆತ್ತವರ ಎದೆಗೊದ್ದು ಬದುಕುವ ಅವಕಾಶ ಗಿಟ್ಟಿಸಿಕೊಂಡ ಮಕ್ಕಳು.ಕೇವಲ ಅವರ ಆಸ್ತಿಗಾಗಿಯೇ ಹೊರತು ಹೆತ್ತವರ ಆರೈಕೆಗಲ್ಲ. ಮನಸ್ಸು ಭಾರವಾದಿತು ಒಂದುಕ್ಷಣ!. ಹೆಣ್ಣಾಗಲಿ,ಗಂಡಾಗಲಿ ನಡೆದುಕೊಳ್ಳುವ ರೀತಿಗೆ ಕರುಳು ಚುರ್ ಅನ್ನುತ್ತೆ. ಮಕ್ಕಳಿಗೆ ಹೆತ್ತವರು ಭಾರವಾದರೆ ಬೇರಾವ ಮಾತಿದೆ?. ಕೂಲಿನಾಲಿ ಮಾಡಿ,ತಾವು ಉಪವಾಸವಿದ್ದು ನಮಗೆ ತುತ್ತು ನೀಡಿ ಬೆಳೆಸಿದ ಅವರಿಗೆ…ಊಟ ಹಾಕದೆ ಕೊಂದ ಮಕ್ಕಳ ಬಗ್ಗೆ ಆಕ್ರೋಶವಿದೆ…ಹೌದು.ವಯಸ್ಸಾದ ಮೇಲೆ ದುಡಿಯುವ ಕ್ಷಮತೆ ಕ್ಷೀಣಿಸುತ್ತದೆ ಎಂಬ ಸಣ್ಣ ಅಂಶ ಅರಿವಿಗೆ ಬಾರದಿದ್ದರೆ ಈ ಜನ್ಮಕೆ ಬೆಲೆಯಿಲ್ಲ!.ಹೆತ್ತವರು ಯಾರಿಗೆ ಭಾರ ಯೋಚಿಸಿ!.
ನಿಜ ಅಲ್ವಾ…ವಯಸ್ಸಾದವರು ಕಾಯಿಲೆಗೆ ಬಿದ್ದರೆ ಅವರನ್ನು ಮನೆಯಿಂದ ಹೊರದೂಡುವುದು..ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ನನ್ನಪ್ಪನ ಹೋರಾಟ ಇದಷ್ಟುದಿನ ಒಮ್ಮೆ ಹಸಿವ ನೀಗಿಸಲು ಕಠಿಣ ಪರಿಶ್ರಮದ ಬಾಗಿಲು ತಟ್ಟಿದವ,ಒಂದು ಪೈಸೆಯು ಸಾಲವಿಲ್ಲದೆ ನಿವೃತ್ತಿಯಾದವ..ಕೈಗಡ ಸಾಲವೂ ಉಳಿಸಿಕೊಳ್ಳದವ..೧೦ ರೂಪಾಯಿಯಲ್ಲೆ ಬದುಕುವುದು ಹೇಗೆ ಎಂಬುದನ್ನು ಬಲ್ಲವ..ತನಗಾಗಿ ಕೂಡಿಡುವ ಕನಸು ಕಂಡವನಲ್ಲ.ಕಲಿಯುವ ಆಸೆ ಹೊತ್ತ ನನಗೆ ಕಲಿಯಲು ಬಿಂದಾಸ್ ಆಗಿ ಬಿಟ್ಟವ.ಅವನ ಭರವಸೆ,ನಂಬಿಕೆ ಉಳಿಸಿಕೊಂಡು ಕಲಿತ ಫಲ ಇವತ್ತು ನಾನು ಉಣ್ಣುವ ಅನ್ನವೆಂದರೆ ತಪ್ಪಾಗದು..ಅಪ್ಪ ಅಮ್ಮರನ್ನು ನೋಡಿಕೊಳ್ಳುವ ಭಾಗ್ಯ ನನ್ನದು..ಅವರು ಸ್ವಾವಲಂಬಿ ನಿಲುವಿನ ವ್ಯಕ್ತಿಗಳು.. ಆದರೆ ಮುಪ್ಪು,ಕಾಯಿಲೆ ಯಾರ ಮನೆ ಸೊತ್ತು?… ಅದು ಬಂದಾಗಲೇ ಯಾರು? ಯಾರಿಗೆ? ಹತ್ತಿರವಾಗುತ್ತಾರೆ ಎಂಬುದು?…. ಮಗನಾದವ ಕೈ ಚೆಲ್ಲಿದ ಮೇಲೆ…ಮಗಳಾಗಿ ನನ್ನ ಕರ್ತವ್ಯ ಮಾಡುವುದು ಪುಣ್ಯವೆಸರಿ..
ಅಪ್ಪ…ಕಲ್ಲು ತಿಂದು ಕಲ್ಲು ಕರುಗಿಸಿದ ದೇಹ…ಕೆಮ್ಮು,ದಮ್ಮು,ಕಫಕ್ಕೆ ನಲುಗಿದ್ದ…ನಮ್ಮ ಯಜಮಾನ್ರು,ಇನ್ನೋರ್ವ ಸಹೋದರ ಡಾಕ್ಟರ್ ದಂಪತಿಗಳು,ನನ್ನ ಮಕ್ಕಳು ಅಜ್ಜನ ಸೇವೆ ಮಾಡಲು ಎಚ್ಚರಿದ್ದವರು.ಅವ್ವ ಸಾಕಷ್ಟು ಪ್ರಯತ್ನ ಮಾಡಿ ಒಂದು ಚೇತರಿಕ ಹಂತಕ್ಕೆ.ತಂದಿದ್ದರು.ನಮಗೆಲ್ಲ 81 ರ ಅಪ್ಪನ ಮಾತು ಖಡಕ್…ಅವನ ಒದ್ದಾಟ,ನೋವು ಅನುಭವಿಸುವುದು ಕಂಡಾಗೆಲ್ಲ ಕಣ್ಣೀರ ಹೊರತು ಮತ್ತೇನಿಲ್ಲ..ಗಂಜಿ ಕುಡಿಸುವಾಗ ಅವನ ಅಸಹಾಯಕ ಸ್ಥಿತಿ ಯಾರಿಗೂ ಈ ನೋವು ಬೇಡ ಅನ್ನುತ್ತಿದ್ದರು.ಹಾಗಂತ ಮಲಗಿದವರಲ್ಲ.. ಓಡಾಡುತ್ತಿದ್ದರು.ರೂಮನ್ನು ಹೀಟರ್ ಮೂಲಕ ಗರಂ ಇಟ್ಟರೂ,ಅದ್ಯಾಕೆ ಈ ಸಲ ವಿಪರೀತ ಚಳಿ ನಡುಕ..ರಕ್ತ ಹಾಕಿಸಿ ಇನ್ನೇನು ಗುಣಮುಖರಾದರೂ ಅನ್ನುವ ಮೂರುದಿನ ಅವರು ತನ್ನ ಪೂರ್ವಜರ ಹೊಲದಲ್ಲಿಯ ದೃಶ್ಯಾವಳಿಗಳನ್ನು ಹೇಳತೊಡಗಿದ್ದ…ವಯಸ್ಸಾದ ಮೇಲೆ ಹಿರಿಯರು ಪುಟ್ಟ ಮಕ್ಕಳಂತೆ ಅನ್ನೊ ಮಾತು ಅಕ್ಷರಶಃ ಸತ್ಯ.
ಮನೆಯವರು ಉಸಿರಾಟಕ್ಕೆ ತೊಂದರೆಯಾದಿತೆಂದು ಚಕ್ ಮಾಡಿಸಿ ರಕ್ತ ಪರೀಕ್ಷೆ,ಎಕ್ಷರೆ ತಗಿಸಿಕೊಂಡು ಕರೆತಂದಿದ್ದರು.ಮನೆಯ ಅಂಗಳ ಕಟ್ಟೆಯ ಮೇಲೆ ಕುಳಿತು ಗಂಜಿ ಕುಡಿದು,,ಮೆಡಿಸಿನ್ ತಗೊಂಡು ಸ್ವಲ್ಪ ಹೊತ್ತಿಗೆ ಇಹಲೋಕ ತ್ಯಜಿಸಿದರು… ಆಗ ನಾನು ಶಾಲೆಯಲ್ಲಿ!. ಬೆಳಿಗ್ಗೆ ಮಾತಾಡಿದ್ದೆ ಬಂತು.ಒಂದು ಸುಳಿವು ಕೊಡದೆ ನನ್ನಪ್ಪ ಮೌನಕ್ಕೆ ಜಾರಿದ್ದ.
ಒಟ್ಟಾರೆ ಹೇಳುವುದಾದರೆ, ಹೆತ್ತವರನ್ನು ಮಕ್ಕಳು ಭಾರವಾಗಿ ನೋಡಬಾರದು…ಅವರಿಗಾಗಿ ಸಮಯ ಕಳೆಯಬೇಕು..ಅವರು ತಮ್ಮ ಸುಖಸಂತೋಷವನ್ನು ತ್ಯಾಗ ಮಾಡಿ ನಮ್ಮ ಬದುಕ ಕಟ್ಟಿರುವಾಗ.. ಇಳಿವಯಸ್ಸಿನಲ್ಲಿ ನಾವುಗಳು ಅವರ ಆತ್ಮ ಬಲವಾಗದಿದ್ದರೆ ಏನು ಪ್ರಯೋಜನ?. ಹೆಣ್ಣಿರಲಿ,ಗಂಡಿರಲಿ ಯಾರಾದರೇನು? ಕರ್ತವ್ಯ ಮಾಡಲೇಬೇಕು..ಅವರ ಆಶೀರ್ವಾದ ನಮಗೆ ಶ್ರೀರಕ್ಷೆ..ಆದರೆ ನಾನು ನನ್ನ ಮಕ್ಕಳು ಹೆಂಡತಿಯಂತ ಇದ್ದರೆ ಅವರೆಲ್ಲಿ ಹೋಗಬೇಕು? ಮೌಲ್ಯಗಳನ್ನು ಬಿತ್ತುವುದು ಬರಿ ಶಾಲೆಯ ಕೆಲಸವಲ್ಲ, ಮನೆಯಿಂದ ಬರಬೇಕಾದ ಸಂಸ್ಕಾರ! ತಂದೆ ತಾಯಿ ಇದ್ದ ಮನೆಗೆ ಹೆಣ್ಣು ಕೊಡುದಿಲ್ಲ ಅನ್ನೊ ವಿಷಯ ಒಂದಾದರೆ,ಮಗನಾದವ ತಂದೆಯ ಆಸ್ತಿ ಪಾಸ್ತಿ ಗಾಗಿ ಮಾತ್ರ ಬರುವುದು..ಹತ್ತು ಹಲವಾರೂ ರೂಪಗಳು ಹೆತ್ತವರನ್ನು ಪೀಡಿಸಲು!. ಇದ್ದಾಗ ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿ,ಅವರು ಖುಷಿಯಿಂದ ಇರುವಂತೆ ನೋಡಿ.. ಅಂದರೆ ಅವರು ಇಲ್ಲದಾಗ ಮಾಡುವ ‘ತಿಥಿ’ ಊಟಕ್ಕೆ ಬೆಲೆ ಬಂದಿತು!. ಆಡಂಬರದ ಬದುಕಿಗಿಂತ ಸಾಮರಸ್ಯದ ಜೀವನ ಬಹುಮುಖ್ಯ… ಏನಂತಿರಿ?.
ಶಿವಲೀಲಾ ಶಂಕರ್




Nice teacher❤️
ಹೆತ್ತವರು ಯಾರಿಗೆ ಭಾರ ಯೋಚಿಸಿ !
ಈಗಿನ ದಿನಗಳಲ್ಲಿ ಬಹಳ ಜನ ಭಾರ ಎಂಬಂತೆ ಕಾಣುವರು,ಅಂಥವರಿಗೆ ದಾರಿದೀಪ ಈ ಲೇಖನ ಚೆನ್ನಾಗಿದೆ ಮೇಡಮ್
ತುಂಬಾ ಚೆನ್ನಾಗಿದೆ ಮೇಡಂ
Nice madam
Super madam
ತುಂಬಾ ಚೆನ್ನಾಗಿ ಬರೆದಿದ್ದೀರಿ