ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್


ಅವನು ಬಾಳ ಪುಸ್ತಕಕೆ ಮುನ್ನುಡಿ ಬರೆದಿದ್ದಾನೆ
ಬದುಕಿನ ಪುಟ ಪುಟಕೂ ಚೆನ್ನುಡಿ ಬರೆದಿದ್ದಾನೆ
ಲೋಕದ ಸುಖವೆಲ್ಲ ನನಗೆ ಇರಲೆಂಬ ಹಂಬಲ
ಮುಖಪುಟಕೆ ಬಣ್ಣ ತುಂಬಿ ನಲ್ನುಡಿ ಬರೆದಿದ್ದಾನೆ
ಅನಂತತೆಯ ಹರವಿನಲಿ ನಾನೊಂದು ಬಿಂದು
ಅಕ್ಷರ-ಅಕ್ಷರ ಸರಿಪಡಿಸಿ ಹೊನ್ನುಡಿ ಬರೆದಿದ್ದಾನೆ
ತಾನೆಟ್ಟ ಸಸಿ ಆಗಸದೆತ್ತರಕೆ ಹಬ್ಬಲೆಂಬ ಆಶಯ
ಉಳಿಯಲೆಂದು ಕಾಪಿಟ್ಟು ಜೇನ್ನುಡಿ ಬರೆದಿದ್ದಾನೆ
ಬೆರಗಿನಲ್ಲಿ ಜಗವಿದನು ಓದಬೇಕೆಂಬ ಹರಕೆ ಅವನದು
ಮುಗುದೆ ಅರುಣಾಳ ಬೆನ್ನು ತಟ್ಟಿ ಬೆನ್ನುಡಿ ಬರೆದಿದ್ದಾನೆ
ಅರುಣಾ ನರೇಂದ್ರ



