ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್


ನಿನ್ನ ಪಥದಲಿ ನಾನಿರುವೆ ಎಂದು ನಂಬುವುದು ಹುಸಿ ಮಾತು
ನನ್ನ ದಾರಿಯಲಿ ನಿನ್ನ ಹೆಜ್ಜೆಗಳಿವೆ ಎಂದು ತಿಳಿಯುವುದು ಹುಸಿಮಾತು
ನೀನಾಡಿದ ಮಾತುಗಳಲಿ ಮಿಥ್ಯದ ನರ್ತನ ವಿಜೃಂಭಿಸಿರಬಹುದು
ನಿನ್ನೊಂದಿಗಿದ್ದ ಸಮಯದಲಿ ಮುಖವಾಡ ಧರಿಸಿಲ್ಲವೆನ್ನುವುದು ಹುಸಿಮಾತು
ಯಾವ ಕೋನದಿಂದ ನೋಡಿದರೂ ಸಂಪೂರ್ಣ ಕೇಂದ್ರ ಸೆಳೆಯದು
ಕಣ್ಣೆರಡು ನೋಟ ಅದೇ ಆದರೂ ಗ್ರಹಿಕೆ ಒಂದೇ ಆದೀತೆನ್ನುವುದು ಹುಸಿ ಮಾತು
ಒಂದೇ ದೋಣಿಯ ಪಯಣಿಗರು ನಿಜವದು ಇಲ್ಲವೆನ್ನಲಾಗದು
ಜಗದ ಕಟು ವಾಸ್ತವದ ಜೊತೆ ನಿನ್ನನ್ನೂ ಲೋಕ ಒಪ್ಪಿಕೊಳ್ಳುವುದು ಹುಸಿಮಾತು
ಹಕ್ಕುಗಳನ್ನು ಚಲಾಯಿಸುತ್ತಲೇ ನಡೆದಲ್ಲಿ ಪ್ರೀತಿ ಗೆ ಅಲ್ಲಿ ಜಾಗವಿಲ್ಲ #ಅನು
ಕೇಳಿ ಯಾಚಿಸಿ ಕಾಡಿಸಿ ಪಡೆವ ಸುಖ ಸಂತಸ ನಿಜವೆನ್ನುವುದು ಹುಸಿಮಾತು
ಅನಸೂಯ ಜಹಗೀರದಾರ



