ಧಾರಾವಾಹಿ ಸಂಗಾತಿ-108
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ

“ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು.
ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು.
ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ?
ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು.
ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು.




