ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 

ಸೊಲ್ಲಾಪುರದಲ್ಲಿ ಇರುವ ನಾಲ್ವತವಾಡ ವೀರೇಶ್ವರ ಶರಣರು ಇರುವ ಮಠ

೧೯೧೯ರ ಸಮಯ ….ಜಯದೇವಿ ತಾಯಿಯವರು ೭ ವರ್ಷದ ಮುಗ್ಧ ಬಾಲಕಿ…..
ಅಕ್ಕಮಹಾದೇವಿ  ಶಿವಲಿಂಗವ ಅರಸಿದಂತೆ …. ಜಯದೇವಿ ತಾಯಿಯವರು ಬಾಲ್ಯದಿಂದಲೂ ಸಿದ್ದರಾಮನ‌ ನೆನೆಯುತ ಶಿವನ ಪೂಜೆಯ ಆಟಿಕೆಯ ಸಾಮಗ್ರಿಗಳನ್ನು ಸಂಗ್ರಹಿಸಿ ಅವುಗಳನ್ನು ಜೋಡಿಸಿ ಹೊಂದಿಸಿ ಮಣ್ಣಿನಲ್ಲಿ ಶಿವಲಿಂಗವ ಮಾಡಿ ಅದಕ್ಕೊಂದು ಗುಡಿಯ ಕಟ್ಟಿ ಅಭಿಷೇಕ ನೈವೇದ್ಯ ಮಾಡಿ ಎಲ್ಲ ಗೆಳತಿಯರಿಗೆ ಪ್ರಸಾದ ಹಂಚುವರು…..!!

 ಬರಿ ಪೂಜೆ ಮಾಡುವ ಆಟವು ಗೆಳತಿಯರಿಗೆ ಬೇಸರ . ..!!!!  ಬರಬರುತ್ತ ಜಯದೇವಿಯೊಂದಿಗೆ ಆಟಕ್ಕೆ ಬರಲು ನಿರಾಕರಿಸಲಾರಂಭಿಸಿದರು.  ಬಲು ನೊಂದು ನೋವಾಗಿ ತಾಯಿಗೆ ಹೋಗಿ ಹೇಳುವರು… ಅದನ್ನ‌ ಕಂಡ ತಾಯಿ “ಅವರು ಬರದಿದ್ದರೇನಂತೆ ನಿನ್ನ ಎದೆಯ ಮೇಲೆ ಲಿಂಗವಿಲ್ಲವೇನು ಅದನ್ನೇ ತೆಗೆದು ಪೂಜೆ ಮಾಡು ನಿನಗೆ ಎಷ್ಟು ಸಲ ಬೇಕು ಅಷ್ಟು ಸಲ”ಅಂದರಂತೆ.

ಅಂದಿನಿಂದ  ಪುಟ್ಟ ಜಯದೇವಿ ಲಿಂಗವನ್ನು ತೆಗೆದು ಅಂಗೈಯಲ್ಲಿ ಇಟ್ಟು ಹೂವನ್ನು ಮುಡಿಸಿ ,ಆರತಿ ಬೆಳಗುವವರು……. ಅದು ಅವರ ಆಟವಾಗಿರಲಿಲ್ಲ ….’ಆತ್ಮ ಪರಮಾತ್ಮ ನಡುವಿನ ಮೌನ ಸಂಭಾಷಣೆ….!!!ಹಾಗೆ ಬಹಳ ಹೊತ್ತು ಧ್ಯಾನಸ್ತರಾಗುತ್ತಿದ್ದ ವಿಷಯವನ್ನು ನಮ್ಮೊಂದಿಗೆ ಹೇಳುತ್ತಿದ್ದರು.

“ದಿಟ ಹಸ್ತವೇ ತಾಯಿ ದಿಟ್ಟಿಯು ತಂದೆಯಾಗಿ
ಹುಟ್ಟಿದೆ  ನಾ ನಿನ್ನಲಿಯೇ … ನೆಟ್ಟನೆ ನಿಲುವುದಕೆ”

ಅವರ ಆಡುವ ಆಟ ಒಂದು ಪೂಜೆ ಅಷ್ಟೇ ಅಲ್ಲ ವಚನದಂತೆ ಜೀವಿತ ಸಂಕಲ್ಪವಾಗಿತ್ತು…. !!!

 ಅವರು ಕೇವಲ ವಚನ ಹೇಳುತ್ತಾ ಲಿಂಗ ಪೂಜೆಯ ಆಟವಾಡುತ್ತ ಬೆಳೆದರು .ವಚನಗಳಲ್ಲಿ ಅಡಕವಾದ ಅರ್ಥವನ್ನು ಅರ್ಥೈಸಿಕೊಳ್ಳದ ವಯಸ್ಸಿಲ್ಲವಾದರು ‘ಭಕ್ತಿಯ ಭಾವವನ್ನು ಅರಿತಿದ್ದರು.’

ನಾಲ್ವತವಾಡದ ವೀರೇಶ್ವರ ಶರಣರು

ಆ ಸಮಯದಲ್ಲಿ ವೀರೇಶ್ವರ ಶರಣರು ನಲನಾಲ್ವತವಾಡವನ್ನು ತೊರೆದು ಸಿದ್ದರಾಮನ ಸಿದ್ಧಿ ಸ್ಥಳವಾದ ಸೊಲ್ಲಾಪುರದಲ್ಲಿ ಬಂದು ನೆಲೆಸಿದ್ದರು .ಅಲ್ಲಿ ದಿನಾಲು ಲಿಂಗ ಪೂಜೆ ಮತ್ತು ಪ್ರಸಾದ ದಾಸೋಹ ಸತತವಾಗಿ‌ ನಡೆದೇ ಇರುತ್ತಿತ್ತು.

“ವೀರೇಶ್ವರ ಶರಣರ ‘ಮಠಕ್ಕೆ ತಾಯಿ ಸಂಗವ್ವನವರು ಜಯದೇವಿ ತಾಯಿಯವರನ್ನು ಕರೆದುಕೊಂಡು ಹೋಗುವ ರೂಢಿ ಇತ್ತು. ‌ಅಲ್ಲಿ ಮೊದಲು ಇಷ್ಟಲಿಂಗ ಪೂಜೆ ನಂತರ ಪ್ರಸಾದ ಕೊಡಲಾಗುತ್ತಿತ್ತು.  ಜನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಹೋಗ್ತಾ ಇದ್ದರು.
 ಬಾಲಕಿ ಜಯದೇವಿಗೂ  ಕೂಡ ಅಲ್ಲಿ ಹೋಗುವುದೆಂದರೆ ಬಲು ಇಷ್ಟ…. ಏಕೆಂದರೆ ಅಲ್ಲಿ ಲಿಂಗ ಪೂಜೆಯು ಮಾಡಲಾಗುತ್ತಿತ್ತು .

ಒಂದು ದಿನ ಜಯದೇವಿ ತಾಯಿಯವರು ಆ ಲಿಂಗ ಪೂಜೆಯಲ್ಲಿ ನಿರತರಾದಾಗ ………
ವೀರೇಶ್ವರ ಶರಣರ ಮಠದ ಆವರಣದಲಿ ಎಂದಿನಂತೆ ಅಪರೂಪದ ಶಾಂತಿ ತುಂಬಿ ತುಳುಕುತ್ತಿತ್ತು ….ಬೆಳಗಿನ ಹೊತ್ತಿನ ಸೂರ್ಯ ಕಿರಣಗಳು ಕಲ್ಲಿನ ಕಂಬಗಳ ಮೇಲೆ ಭಕ್ತಿಯ ಹೊಂಬೆಳಕಾಗಿ ಜಾರುತಿದ್ದವು……….!!!

ಮಠದೊಳಗೆ ಪೂಜೆ ಮಾಡುವಾಗ ದಿವ್ಯ ಮೌನ ಆಚರಿಸಲಾಗುತಿತ್ತು. ಮೌನದ ಮಧ್ಯೆ—  ಪುಟ್ಟ ಬಾಲಕಿ ಜಯದೇವಿ, ತನ್ನ ಸಣ್ಣ ಕೈಗಳಲ್ಲಿ ಲಿಂಗವನ್ನು ಹಿಡಿದು, ಅದರಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದರು.ಅವರ ಕಣ್ಣುಗಳಲ್ಲಿ ಲೋಕದ ಆಟವಿಲ್ಲ-ಬಾಲ್ಯದ ಚಂಚಲತೆಯಿಲ್ಲ…… ಇಷ್ಟಲಿಂಗದ ಮೇಲೆ ನೆಟ್ಟ ದೃಷ್ಟಿಯಲ್ಲಿ ಅಪಾರ ತಲ್ಲೀನತೆ ಇತ್ತು… ಅವರು ಜಪಿಸುವ ಶಬ್ದಗಳು ಸ್ಪಷ್ಟವಲ್ಲದಿದ್ದರೂ, ಅವರ ಉಸಿರಿನ ಲಯವೇ ಒಂದು ಪೂಜೆಯಂತಿತ್ತು………..!!!!

 ಹೂವಿನ ದಳಗಳು ಬೆರಳ ನಡುವೆ ಸರಿದು ಬೀಳುತ್ತಿದ್ದವು…..  ಭಕ್ತಿಯ ಪರಾಕಾಷ್ಟೆಯ ಏರಿದ ಭಾವನೆಗಳು ಮುಖದಲ್ಲಿ ಬಿಂಬಿಸುತ್ತಿತ್ತು…….ಆ ಕ್ಷಣದಲ್ಲಿ ಜಯದೇವಿ ಬಾಲಕಿ ಅಲ್ಲ—ಒಂದು ಪ್ರಾರ್ಥನೆಯ  ಸಾಕಾರ ಅಕ್ಕನ ಮೂರ್ತಿಯಂತೆ ಕುಳಿತಿದ್ದರು….!!!

ಅಕ್ಕ ಮಹಾದೇವಿಯ ವಚನದಂತೆ’ ನಿರ್ವಿಕಾರ’- ‘ನಿರ್ಲಿಪ್ತತ’ ಲಿಂಗದಲ್ಲಿ ದೃಷ್ಟಿ ನೆಟ್ಟು ಆತಲ್ಲಿ ಒಂದಾಗಿದ್ದರು. ತಾಯಿ ಮಗು ಅಪ್ಪಿದಂತೆ…. ಮಮತೆಯ ಸರಳತೆಯು  ಕಣ್ಣಲ್ಲಿ  ಭಕ್ತಿಯ ಸೌಮ್ಯ  ಭಾವ ತುಂಬಿ ತುಳುಕಿತ್ತು………!!!

ಅದನ್ನು ಗಮನಿಸಿದ ವೀರೇಶ್ವರ ಶ್ರೀಗಳು ಕ್ಷಣಕಾಲ ಹಾಗೆ ನಿಂತು ಜಯದೇವಿ ತಾಯಿಯವರನ್ನು ವೀಕ್ಷಿಸುತ್ತ ನಿಂತರು. ಶರಣರ ದೃಷ್ಟಿಗೆ ಅದು ಸಾಮಾನ್ಯ ದೃಶ್ಯವಾಗಿರಲಿಲ್ಲ.
 “ಇದು ಬಾಲಿಕೆಯ  “ಆತ್ಮದ ಜಾಗೃತಿ ಸ್ಥಿತಿ ಎಂದರು” ……ಅವರು ಹತ್ತಿರ ಬಂದು, “ಇವರು ಯಾರ ಮಗಳು ??!!ಅಂತ ಕೇಳಿದರಂತೆ…..

ಶಿವಯೋಗದಲ್ಲಿ ನಿರತರಾದಂತಿದ್ದ ಜಯದೇವಿ ತಾಯಿಯವರನ್ನು ನೋಡಿ “ಈ ದೊಡ್ಡವ್ವನ ಲಿಂಗ ನಿಷ್ಠೆ ದೊಡ್ಡದು ನೋಡಿರವ್ವಾ “ಎಂದು ಆನಂದದಿಂದ ನುಡಿದರು .

ಅವರ ಹಾರೈಕೆ ಹುಸಿಯಾಗಲಿಲ್ಲ. ಮುಂದೆ ಮೊಮ್ಮಕ್ಕಳಿಗೆ ದೊಡ್ಡವ್ವಾದರೆ…  ಇಡೀ ನಾಡಿಗೆ- ಕನ್ನಡಿಗರಿಗೆ ದೊಡ್ಡವ್ವ ಆಗಿ ಮೆರೆದರು…!!!

ಹೌದು ಜಯದೇವಿ ತಾಯಿಯವರಿಗೆ ಇಷ್ಟಲಿಂಗವೇ ಅವರ ಲಾಲನೆ, ಭಕ್ತಿಯೇ ಅವರ ಭಾಷೆ….. ವಯಸ್ಸು ಚಿಕ್ಕದಾಗಿರಬಹುದು…, ಅವರ ಭಕ್ತದೊಡ್ಡದಾಗಿತ್ತು..!!
.
ಅಂತೆಯೇ ಜಯದೇವಿ ತಾಯಿಯವರು ಹೇಳ್ತಾರೆ..

ಬೆಳಗಯ್ಯ ಬೆಳಗಯ್ಯ ಮಹಾಲಿಂಗವೇ…
ಜಗದಗಲ ನಿನ್ನ ಕಣ್ಣು /ಮುಗಿಲಗಲ ನಿನ್ನ ನೋಟ!! ಮಿಗಿಲಾದ ಮೂರುತಿಯೆ/ನೋಡಯ್ಯ ಶಿವಲಿಂಗವೆ!! ಜಯ ನಿತ್ಯರೂಪನೆ/ ಜಯ ಸತ್ಯ ಶೋಧನೆ!!
ಜಯಸಿದ್ಧ ರಾಮೇಶನೆ/ ಬೆಳಗಯ್ಯ ಒಳ ಹೊರಗೆ!!
(‘ತಾರಕ ತಂಬೂರಿ’ ಆಯ್ದ ಅನುಭವದ ಪದ
)

 ೧೯೨೦ ರಲ್ಲಿ ವೀರೇಶ್ವರ ಶರಣರು ಲಿಂಗೈಕ್ಯರಾದರು… ಈಡಿ ಸೊಲ್ಲಾಪುರವೇ ದುಃಖ ದಲ್ಲಿ ಮುಳಗಿರುವ ಸಂದರ್ಭ ನೆನಯುತ್ತಿದ್ದರು.

ಜಯದೇವಿ ತಾಯಿ ಅವರ ಬಾಲ್ಯದ ದಿನಗಳು ಅತ್ಯಂತ ಸುಗಮವಾಗಿ ಸುಖಕರವಾಗಿ ತೋಟದ ಮನೆಯಲ್ಲಿಯೂ ಮತ್ತು ಸೊಲ್ಲಾಪುರದ ಹೃದಯ ಭಾಗದಲ್ಲಿದ್ದ ಪಟ್ಟಣದ ದೊಡ್ಡದ ಮನೆಯಲ್ಲಿ  ಕಳೆಯುತ್ತಿದ್ದರು.
ತಾಯಿ ಸಂವ್ವನವರು ಸ್ವಲ್ಪ ಸಿಟ್ಟಿನ ಸ್ವಭಾವದವರು. ಮಾತಿನಲ್ಲಿ ತೀವ್ರತೆ, ಮನಸ್ಸಿನಲ್ಲಿ ಕಾಳಜಿ ಹೊತ್ತವರು… ನೂರಾರು ಜನರ ಕಣ್ಣೀರು ವರಿಸುತ್ತಾ ….ಅವರಿಗೆ ಎಲ್ಲರ ಮೇಲಿದ್ದ ಕಾಳಜಿಯು ಸಿಟ್ಟು ರೂಪದಲ್ಲಿ ಹೊರಹೊಮ್ಮುತ್ತಿತ್ತು.
ಒಮ್ಮೆ ಮಾತು ಏರಿದರೆ, ಮನೆಯ ವಾತಾವರಣವೇ ಗಂಭೀರವಾಗುತ್ತಿತ್ತು.
ಅಂತಹ ಸಮಯದಲ್ಲಿ ಜಯದೇವಿಯವರ ತಂದೆಯವರ ನಗು ತಾಯಿಯ ಸಿಟ್ಟಿಗೆ ಉತ್ತರವಾಗುತ್ತಿತ್ತು.

“ನೀನು ಸಿಟ್ಟಾದರೂ ಒಳ್ಳೆಯವಳೇ” ಎಂಬ ಮೌನದ ಒಪ್ಪಿಗೆ ಅವರ ಕಣ್ಣಲ್ಲಿ ಕಾಣುತ್ತಿತ್ತು. ನಿಧಾನವಾಗಿ ವಿಷಯವನ್ನು ಬೇರೆ ದಿಕ್ಕಿಗೆ ತಿರುಗಿಸುತ್ತಿದ್ದರು.

ತಾಯಿಯ ಕೋಪವನ್ನು ಎದರಿಸುವದಷ್ಟೇ ಅಲ್ಲ….
ಅದನ್ನು ಅಪ್ಪಿಕೊಳ್ಳಲು ಅವರಿಗೆ ಗೊತ್ತಿತ್ತು.
 ತಂದೆಯ ಶಾಂತ ಸ್ವಭಾವ ತಾಯಿಯ ಸಿಟ್ಟಿಗೆ ತಣ್ಣನೆಯ ಗಾಳಿಯಾಗಿ ಬೀಸುತ್ತಿತ್ತು.

ಕೆಲವೊಂದು ಸಲ ಮಕ್ಕಳನ್ನು ತಾಯಿ ಸಂಗವ್ವನವರು ಗದರಿಸಿದರೆ ತಂದೆ ಕರೆದು ಮಕ್ಕಳಿಗೆ  ಸಮಾಧಾನ ಹೇಳುವರು ….ಅವಳು ನಿಮ್ಮನ್ನೆಲ್ಲ ಹೆತ್ತು ಹೊತ್ತು ಬೆಳೆಸಿ ನಿಮ್ಮನೆಲ್ಲ ದೊಡ್ಡವರು ಮಾಡೋಕೆ  ಅದೆಷ್ಟು  ಸಹನೆ  ತ್ಯಾಗಗಳನ್ನು ಅವಳು ಮಾಡಿದ್ದಾಳೆ.
ನಿಮಗೇನಾದರೂ ಗೊತ್ತಾ???!!!!! ಹೆಣ್ಣು ಮಕ್ಕಳ ದೆಹದಲಿ ಆಗುವ ಅಸಮತೋಲನದಿಂದ  ಹಾಗೆ ಆಗುವುದು ಸಹಜ …..ಆಗಾಗ  ಸಿಟ್ಟು ಬರುವುದು ಸಹಜ … !!
ಅವಳ  ಆ ಸಿಟ್ಟಿನಲ್ಲಿ ನಿಮ್ಮ ಬಗ್ಗೆ ಅಪಾರ ಕಾಳಜಿ ವ್ಯಕ್ತವಾಗುವುದಿಲ್ಲವೇ…??!!!. ನೀವು ಅವಳು ಹೇಳಿದಂಗೆ ಕೇಳಬೇಕು ಅದರಿಂದಲೇ ನಿಮಗೆ ಒಳಿತು..ಅಂತ ಮಕ್ಕಳನ್ನು ತಿಳಿ ಹೇಳುವರು. ಮನೆಯ ವಾತಾವರಣ ತಿಳಿಗೊಳಿಸುವರು.

 ಜಯದೇವಿ ತಾಯಿಯವರು ಒಂದೊಂದು ಸಲ ತೋಟದ ಮನೆಯಲ್ಲಿ ಇದ್ದಾಗ ರೈತಾಪಿ ಮಕ್ಕಳೆಲ್ಲರನ್ನು ಕೂಡಿಸಿ ತಾವು ಒಂದು ದೊಡ್ಡ ಕಲ್ಲು ಬಂಡೆಯ ಮೇಲೆ ನಿಂತು ನಾನು ಭಾಷಣ ಮಾಡ್ತೀನಿ ನೀವು ಕೇಳಬೇಕು ಅನ್ನುತ್ತಿದ್ದರು…
.ಮರಗಳೇ ಇವರ ಭಾಷಣಕ್ಕೆ ಸಾಕ್ಷಿಯಾದಂತೆ ನಿಲ್ಲುತ್ತಿದ್ದವು….ಗಾಳಿಯೂ ಮೌನವಾಗಿ ಬಿಡುತ್ತಿತ್ತು …ಅವರ ಶಬ್ದದಲ್ಲಿ ತೊದಲಾಟ ಇದ್ದರೂ
ಅರ್ಥದಲ್ಲಿ ಅಪಾರ ಗತ್ತು ಇರುತೀತ್ತು….!!!

ಕೆಲವೊಮ್ಮೆ ಮಾತು ಮರೆತುಹೋಗುತ್ತಿದ್ದರು…. ಕಣ್ಣು ಮುಚ್ಚಿಕೊಂಡು ತಾಯಿಯ ಮುಖ ನೆನೆಸಿಕೊಳ್ಳುವರು.ಮತ್ತೆ ಮಾತು ಮುಂದುವರಿಸುತ್ತಿದ್ದರು. ಗೆಳತಿಯರು ಕೆಳಗಿಂದಲೇ ಕುಳಿತುಕೊಂಡು ಚಪ್ಪಾಳೆ ತಟ್ಟುತ್ತಿದ್ದರು,
ಅದು ಯಾರಿಗೂ ಆಟ ಅನಿಸುತ್ತಿರಲಿಲ್ಲ.ಒಬ್ಬಳು ಗುಟ್ಟಾಗಿ ಹೇಳಿದಳು—“ನೋಡು… ಇವಳು ಆಟ ಆಡ್ತಾ ಇಲ್ಲ.ನಿಜಕ್ಕೂ ಭಾಷಣ ಮಾಡ್ತಾ ಇದ್ದಾಳೆ.” ಅಂತ ತಮ್ಮೊಳಗೆ ಪಿಸುಗುಟ್ಟುವರು.

ಹೀಗೆ ಭಾಷಣ ಮಾಡುವ ಕಲೆಯನ್ನು ಚಿಕ್ಕಂದಿನಿಂದಲೇ ಅವರಿಗೆ ರೂಢಿ ಇತ್ತು ….
ಮುಂದೆ ಅತ್ಯಂತ ದೊಡ್ಡ ಕನ್ನಡ ಭಾಷಣಕಾರ್ತಿ ವಾಗ್ಮಿಯಾಗಿ ಪರಿಣಮಿಸಿದರು.

ಜಯದೇವಿ ತಾಯಿಯವರು ರೈತ ಮಕ್ಕಳೊಂದಿಗೆ ಆಟವಾಡುತ್ತಾ,  ಸಿದ್ದರಾಮನ- ಇಷ್ಟಲಿಂಗದ ಆರಾಧನೆ ಮಾಡುತ್ತ, ತಾಯಿ ಸಂಗವ್ವಳೊಂದಿಗೆ ಸಭೆ ಸಮಾರಂಭಗಳನ್ನು ಮಾಡುತ್ತಾ, ತಾಯಿಯ ಧೈರ್ಯ ಸ್ಥೈರ್ಯ ಮೈಗೊಡಿಸಿಕೊಂಡು ಸತ್ಯಕ್ಕಾಗಿ ಹೋರಾಡುತ್ತ ಬೆಳೆಯ ಹತ್ತಿದರು….!!

ತಾಯಿ ಸಂಗವ್ವನವರು ಕೈಗೊಳ್ಳುತ್ತಿದ್ದ ಸಮಾಜ ಪರ ಕೆಲಸಗಳು, ಕನ್ನಡ ಅಸ್ಮಿತೆಯ  ಕಾಪಾಡುವ ಕೆಲಸ, ಸ್ವಾತಂತ್ರ್ಯದ ಹೋರಾಟದಲಿ ಕೆಂಪು ಮೂತಿಯವರು ತೋರುವ ತಾರತಮ್ಯಗಳಲ್ಲಿ, ಹೆಣ್ಣು ಮಕ್ಕಳ ವಿಮೋಚನೆ  ಕಾರ್ಯ, ವಚನಗಳ ಪ್ರಚಾರ- ಶರಣ ಪರಂಪರೆಯ ಕಾರ್ಯಗಳನ್ನು ಗಮನಿಸುತ್ತಲೇ ಬೆಳೆಯುತ್ತಿದ್ದ ಕಾಲವದು…….(ಮುಂದಿನವಾರಕ್ಕೆ)


About The Author

Leave a Reply

You cannot copy content of this page

Scroll to Top