ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ಪರಮಾತ್ಮನ ಪರಮ ಪಯಣವದು ಪ್ರಿಯಪುರದ ಕಡೆಗೆ…

ಹಸ್ತಿನಾವತಿಗೆ ತೆರಳುವ ಅಸುರಾರಿಯ ತಯಾರಿ ಮೊದಲ್ಗೊಂಡಿತು. ಕೃತವರ್ಮನನ್ನು ಕರೆಸಿದ ಕೃಷ್ಣಪ್ರಭು. ದ್ವಾರಕೆಯ ಪುರಜನರೆಲ್ಲಾ ತನ್ನ ಜೊತೆಗೆ ಹಸ್ತಿನಾವತಿಗೆ ಬರಲಿ ಎಂಬ ಬಯಕೆ ಭಕ್ತಪ್ರಿಯನದ್ದು. ಡಂಗುರವ ಹೊಡೆಸುವ ಕಾರ್ಯವನ್ನು ಕೃತವರ್ಮನಿಗಿತ್ತ ಕೃಷ್ಣ. ತಂದೆ ವಸುದೇವ, ಸಹೋದರ ಬಲರಾಮ ದ್ವಾರಕೆಯಲ್ಲಿಯೇ ಇದ್ದುಕೊಂಡು ಆಡಳಿತವನ್ನು ನೋಡಿಕೊಳ್ಳಲಿ. ಪ್ರದ್ಯುಮ್ನ, ಗದ, ಸಾಂಬ, ಅನಿರುದ್ಧ, ಸಾತ್ಯಕಿ ಮೊದಲಾದವರೆಲ್ಲರೂ ತನ್ನ ಜೊತೆ ಧರ್ಮಜನ ಪುರಕ್ಕೆ ಬರಲಿ ಎಂಬ ಕೃಷ್ಣವಾಣಿ ಮೊಳಗಿತು. ಜೊತೆ ಬರಲಿರುವ ಸ್ತ್ರೀಯರ ಸಿಂಗಾರಕ್ಕಾಗಿ ಭಂಡಾರದಲ್ಲಿರುವ ಹೊಸಬಗೆಯ ವಸ್ತು ಒಡವೆ ವಸ್ತ್ರಗಳನ್ನು ತೆಗೆಯಿಸುವ ನಿರ್ಣಯ ಮಾಡಿದ ವಸುದೇವಸುತ. 

    ಡಂಗುರ ಮೊಳಗಿತು. ಕೃಷ್ಣನಾಜ್ಞೆಯ ಉಲಿಗೆ ತಲೆದೂಗುವವರಾದರು ಪುರಜನರು. ಒಂದು ಮೆದುದನಿಯನ್ನು ಇಡಿಯ ಜನಸಮೂಹ ಪಾಲಿಸುವುದಾದರೆ ಆ ದನಿಗಿರುವ ಶಕ್ತಿ ಎಂತಹದ್ದು ಎನ್ನುವ ಅರಿವಾಗುತ್ತದೆ. ಎಲ್ಲರ ಮನವನ್ನೂ ಒಲಿಸಬಲ್ಲ ಮಾಧುರ್ಯವಿತ್ತು ಮೋಹನನೆದೆಯಿಂದ ಮೂಡಿಬಂದಿದ್ದ ಮೋಹಕ ಧ್ವನಿಗೆ. 

    ಎಲ್ಲರೂ ಹೊರಟರು. ದ್ವಾರಕೆಯ ಸ್ತ್ರೀಗಡಣವದು ಸಂತಸದಿಂದ ಸಿಂಗರಿಸಿಕೊಂಡಿತು. ಎಲ್ಲರನ್ನೂ ಕೂಡಿಕೊಂಡು ಹೊರಟ ಶ್ರೀಕೃಷ್ಣ. ದ್ವಾರಕಾಪುರದ ಜನರ ಹಸ್ತಿನಾವತಿಯೆಡೆಗಿನ ಮೆರವಣಿಗೆಗೆ ಶ್ರೀಹರಿಯ ನೇತೃತ್ವವೆಂಬ ಮುನ್ನುಡಿಯ ಬರವಣಿಗೆ. ಶಾಸ್ತçಗಳನ್ನು ಆಧಾರವಾಗಿರಿಸಿಕೊಂಡ ಬ್ರಾಹ್ಮಣ ಸಮೂಹವಿತ್ತು ಭಕ್ತಪ್ರಿಯನ ಜೊತೆಗೆ. ಶಸ್ತಾçಸ್ತçಗಳನ್ನು ಜೊತೆಗಿರಿಸಿಕೊಂಡ ಕ್ಷಾತ್ರಗಣವಿತ್ತು ಕೃಷ್ಣನ ಒಡನೆ. ವೈಶ್ಯರಿದ್ದರು ಸಂಭಾರ ಸುವಸ್ತುಗಳೊಂದಿಗೆ. ಶೂದ್ರರಿದ್ದರು ಸೇವೆಯನು ನೀಡುತ ಅನಿತೂ ಮಂದಿಗೆ. ನಟನೆ ಮಾಡುವವರಿದ್ದರು. ನಗಿಸುವವರಿದ್ದರು. ವಿಟರಿದ್ದರು. ವೈದಿಕರಿದ್ದರು. ಸರಸ ಮಾತುಗಳನ್ನಾಡುವವರಿದ್ದರು. ನವರಸಗಳ ತೋರುವವರಿದ್ದರು. ಕಾಮಿನಿಯರಿದ್ದರು. ಮುನಿಗಳಿದ್ದರು. ಬಹುಬಗೆಯ ಭಾವಗಳನ್ನೂ, ಚಿಂತನೆಗಳನ್ನೂ ಹೊತ್ತು ನಡೆವಂತೆ ಚಲಿಸುತ್ತಿತ್ತು ಶ್ರೀಕೃಷ್ಣ ಮುಂದಾಳತ್ವದ ಮೆರವಣಿಗೆ. 

    ಸರಸರನೆ ಸರಿದಾಡುತ್ತಿದ್ದ ಸುರ ಸಿರಿಕೃಷ್ಣ ಸಮೂಹಕ್ಕೆ ಎದುರಾಯಿತದೋ ಸರೋವರ. ಸರೋವರದಲ್ಲರಳಿನಿಂತಿದ್ದ ಸರಸಿಜವನ್ನು ಕಂಡೊಡನೆಯೇ ಸರಸ ಭಾವದವನಾದ ಶ್ರೀಕೃಷ್ಣ. ವಿನೋದ ಪ್ರಜ್ಞೆಯಲಿ ಮಡದಿ ರುಕ್ಮಿಣಿಯನ್ನು ಕಾಡುವ ಯೋಚನೆ ಮೂಡಿತು ಅವನಲ್ಲಿ. ಅವಳ ಮಸ್ತಿಷ್ಕವನ್ನು ಕೆಣಕುವ ರೀತಿಯ ಮಾತನ್ನು ಆಡಿದ. “ಈ ಸರೋವರದಲ್ಲಿರುವುದು ತಾವರೆ. ಹೆಣ್ಣಾಗಿ ಪರಿಭಾವಿಸಿಕೊಂಡರೆ ಅವಳು ಪದ್ಮಿನಿ. ರಾಜಹಂಸದ ಜೊತೆ ಒಡನಾಟವಿದೆ. ಆನೆಯ ಸಹವಾಸವಿದೆ. ದುಂಬಿಗಳ ಸಮೂಹದ ಸಾಹಚರ್ಯವಿದೆ. ಸೂರ್ಯನ ಅರಸಿಯೆಂದು ಗುರುತಿಸಿಕೊಂಡಿದ್ದಾಳೆ. ಆದರೂ ನನ್ನೆದೆಯನ್ನು ಸೇರುವ ಆಸೆಯನ್ನು ಮುಚ್ಚಿಡಲಾರಳು. ಹೆಂಗಳೆಯರ ಈ ಬಗೆಯ ಚಪಲ, ಚಾಂಚಲ್ಯ ಅದೆಷ್ಟು ವಿಚಿತ್ರವಾದದ್ದು!” ಎಂದು ನಗುತ್ತಾ ನುಡಿದನು ಕೃಷ್ಣ. 

     ತನ್ನಲ್ಲಿ ಹುಸಿಮುನಿಸನ್ನು ಮೂಡಿಸುವ ಮರುಳು ಮೋಹನನ ಮುದ್ದು ತಂತ್ರವಿದು ಎನ್ನುವುದರ ಅರಿವಿತ್ತು ರುಕ್ಮಿಣಿಗೆ. ಕೋಪಿಸದೆಯೇ ಹೇಳತೊಡಗಿದಳು, ಪದ್ಮಿನಿಯ ಬಗೆಯನ್ನು ಸಮರ್ಥಿಸುವ ಧಾಟಿಯಲ್ಲಿ. “ರಾಜಹಂಸ, ಆನೆ, ದುಂಬಿಗಳ ಜೊತೆಗೆ ಪದ್ಮಿನಿ ಇರುವುದರಲ್ಲಿ ಅದೇನು ದೋಷವಿದೆ. ಮಾತೆಯಾದವಳು ಮಕ್ಕಳ ಜೊತೆಗಿರುವುದರಲ್ಲಿ ಏನಿದೆ ತಪ್ಪು! ಚಲನಶೀಲತೆಯನ್ನು ಮರೆತ ಜಲವದು ಒಂದೇ ಕಡೆ ನೆಲೆನಿಲ್ಲಲು ಆ ಕೆಸರಿನಲ್ಲಿ ಉದಿಸಿದವಳು ಈ ಪದ್ಮಿನಿ. ಕೃಷ್ಣ ಹೃದಯವನ್ನು ಪ್ರವೇಶಿಸುವ ಅವಳ ಮನದಿಂಗಿತದಲ್ಲಿ ಯಾವ ದೋಷವೂ ಇಲ್ಲ. ಪರಾಕ್ರಮಿಯಾದವನನ್ನು ಸೇರಬೇಕೆಂಬ ಸ್ತ್ರೀಚಿತ್ತ ಸಹಜವಾದದ್ದು. ಅದರಲ್ಲಿ ಚಂಚಲತೆ ಏನಿದೆ!” ಎಂದು ನುಡಿದಳು ರುಕ್ಮಿಣಿ. 

   ಕೆಸರಿನಿಂದ ಉದ್ಭವಿಸಿಬಂದ ಕಮಲವದು ರುಕ್ಮಿಣಿಯ ಕಣ್ಣಿಗೆ ಕಡುಕಷ್ಟದಿಂದ ಮೇಲೆದ್ದುಬಂದ ಹೆಣ್ಣಿನಂದದಿ ತೋರಿತು. ಆ ಕಾರಣಕ್ಕೇ ಸಮರ್ಥನೆಯ ನುಡಿ ಹೊಮ್ಮಿಬಂತು ಅವಳ ಅಂತರಾಳದಿಂದ. ರುಕ್ಮಿಣಿಯ ಮಾತನ್ನು ಒಪ್ಪಿಕೊಂಡ ಶ್ರೀಕೃಷ್ಣ. ನಸುನಗುವ ಬೀರಿದ. ಮಡದಿಯ ಮೆದುಳಿನೊಳಗೆ ಮಾತುಮಂಥನದ ಮುನ್ನುಡಿಯಾಗಿದೆಯೆಂದು ಮುಗುಳುನಗುವಲಿ ಮೆರೆದನು ಮೋಹಕ ಮೋಹನ. 

    ಹಸ್ತಿನಾವತಿಯನ್ನು ತಲುಪಿದ ಶ್ರೀಕೃಷ್ಣ ಪರಿವಾರಕ್ಕೆ ಮೊದಲ ಸ್ವಾಗತ ದೊರೆತದ್ದು ಅಲ್ಲಿನ ಪುರಜನರಿಂದ. ಅನಿತು ಮಂದಿಯ ಕಾಣುತ್ತ ಆನಂದ ಪಡೆದ ಅರವಿಂದವದನ ಚಂದದಿ ನಗುತ, ಅಂದದಿ ಮೆರೆಯುತ ಅರಮನೆಯೆದುರಿಗೆ ಬಂದ. ಸಂತಸದಿ ಬಂದ ಯಮನಂದನ ವಸುದೇವಕಂದನ ಮೊಗದ ಅಂದಿನ ಆ ನಗುವನ್ನು ಕಣ್ತುಂಬಿಕೊಳ್ಳುತ್ತಾ ಮನದುಂಬಿದ ಸ್ವಾಗತವನ್ನು ನೀಡಿದ. ದ್ವಾರಕೆಯ ಪೂರ್ಣ ಪರಿವಾರವದು ಪಾಂಡವ ಪ್ರೀತಿಯ ಸಾಗರದಲ್ಲಿ ಲೀನವಾಯಿತು. 

    ದ್ರೌಪದಿಯ ಜೊತೆಗಿನ ಮಾತುಕತೆಗೆ ಮನಸ್ಸು ಮಾಡಿದ ಮಾಧವ ಮಡದಿ ಸತ್ಯಭಾಮೆ “ಹದಿನಾರು ಸಾವಿರ ಸ್ತ್ರೀಯರಿದ್ದರೂ ಶ್ರೀಕೃಷ್ಣನನ್ನು ನಿನ್ನ ತೆರದಲ್ಲಿ ಒಲಿಸಿಕೊಂಡವರಿಲ್ಲ. ನೀನೇ ಚತುರೆ” ಎಂದಳು. “ಕಾರುಣ್ಯನಿಧಿ ಕೃಷ್ಣೋತ್ತಮನನ್ನು ಒಲಿಸಿಕೊಳ್ಳದಿದ್ದರೆ ಇನ್ನಾರು ನನ್ನನ್ನು ಕಾಯುವವರಿದ್ದರು ಆ ಗಳಿಗೆಯಲ್ಲಿ!” ಎಂದ ಕೃಷ್ಣೆ ಸಭಾಪಮಾನದ ಆ ದುರ್ಗಳಿಗೆಯನ್ನು ನೆನಪಿಸಿಕೊಂಡಳು. ಅವಳ ಮಾತು ಮುಗಿದಿತ್ತು. 

    ನಿಂತಿದ್ದ ಜನರನ್ನು ಆಚೀಚೆಗೆ ಚದುರಿಸಿ ಯಾಗದ ಕುದುರೆಯನ್ನು ಅಲ್ಲಿ ತಂದು ನಿಲ್ಲಿಸಲಾಯಿತು. ಯಜ್ಞಾಶ್ವವನ್ನು ಅಲ್ಲಿಗೆ ಆ ಕ್ಷಣದಲ್ಲಿಯೇ ಕರೆಸಬೇಕೆಂದು ಸೂಚಿಸಿದವನು ಶ್ರೀಕೃಷ್ಣ. ಹಯವನ್ನು ತನ್ನಿ ಎಂದು ಸೇವಕರಿಗೆ ಆಜ್ಞಾಪಿಸಿದವನು ಧರ್ಮರಾಯ. ಮೋಹಕ ಮಾಯೆಯ ಮೃಗವದು ಮೂಲೋಕವನ್ನು ಮೌನಗೊಳಿಸುವ ಮರುಳುಚೆಲುವಲ್ಲಿ ಮೊಗ ತೋರಿಸುತ್ತಾ ನಿಂತಿತ್ತು. ಅಲ್ಲಿದ್ದವರೆಲ್ಲರೂ ಕೌತುಕದಿಂದ ಆ ಶ್ರೇಷ್ಠ ಕುದುರೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ವಸ್ತç ಆಭರಣ ಪುಷ್ಪ ಗಂಧ ಅಕ್ಷತೆಗಳಿಂದ ಅದನ್ನು ಪೂಜಿಸುವ ಶಾಸ್ತçವದು ಮೊದಲ್ಗೊಂಡಿತು. 

    ಹೀಗೆ ಕುತೂಹಲ, ಸಂತಸದ ಭಾವಗಳನ್ನು ಹೊತ್ತುನಿಂತಿದ್ದ ಆ ತಾಣ ಅಚ್ಚರಿ, ಅನುಮಾನ, ಆತಂಕಗಳ ಸುಳಿಗೆ ಸಿಲುಕಿದ್ದು ಅನುಸಾಲ್ವ ಎನ್ನುವವನು ತಕ್ಷಣವೇ ಬಂದು, ಕುದುರೆಯನ್ನು ಹಿಡಿದೆತ್ತಿಕೊಂಡು ಅಲ್ಲಿಂದ ಹೋದಾಗಲೇ! 

    ಕುದುರೆಯನ್ನು ಅವನು ಹೊತ್ತೊಯ್ಯಲು ಏನು ಕಾರಣ ಎನ್ನುವುದು ನಮಗಾರಿಗೂ ಗೊತ್ತಿರಲಿಲ್ಲ. ಆದರೆ ಪರಮಪಾವನ ಪರಮಾತ್ಮ ಶ್ರೀಕೃಷ್ಣನಿಗೆ ಗೊತ್ತಿತ್ತು!


About The Author

Leave a Reply

You cannot copy content of this page

Scroll to Top