ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮ
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ..


ಜೀವನದ ಮತ್ತೊಂದು ವರ್ಷ ಕಳದು ಹೋಯ್ತು. ಏನು ಬದಲಾಯ್ತು , ನಾವೇಷ್ಟು ಬದಲಾದೆವು ಮತ್ತ ಎಷ್ಟು ತಿಳವಳಿಕಿ ಉಳ್ಳವರಾದೇವು , ನಮಗ ನಾವೆ ಪ್ರಶ್ನೆ ಮಾಡ್ಕೋಬೇಕು.ಹೊಸ ವರ್ಷ ಅಂತ ಸಂಭ್ರಮ ಪಡುವವರ ಜೋತಿಗಿ ನಾವು ಸಂಭ್ರಮಿಸಿದ್ರಾಯ್ತು. ಚಳಿದಾಗ ರಾತ್ರಿ ಎಲ್ಲಾ ಕುಣದು ಕೇಕ್ ಕತ್ತರಿಸಿ ಜನವರಿ ತಿಂಗಳಿಗಿ ಸ್ವಾಗತಮಾಡೊ ಸಂಭ್ರಮ ಮುಗಿತು.ಎಷ್ಟೊ ಮಂದಿ ಯುವಕರು ಹೊಸವರ್ಷದ ಜೋಶ್ ನಾಗ ಕುಡದು ಯರ್ರಾಬಿರ್ರಿ ಬೈಕ್ ಓಡ್ಸಿ ಬಿದ್ದು ತಲಿ ಒಡಕೊಂಡು ದವಾಖಾನಿದಾಗ ಅಡ್ಮಿಟ್ ಆಗ್ಯಾರಂತ.ಪ್ರತಿ ಹೊಸವರ್ಷದಾಗ ಇಂತಹ ಘಟನೆಗಳು ಸಾಮಾನ್ಯ. ತಿಳಿದು ತಿಳಿದು ಮತ್ತದೆ ಮಾಡೊದಕ್ಕ ಮೂರ್ಖತನ ಅನ್ನಬೇಕ ಅಷ್ಟ.
ಈಗಿನ ಯುವಕಯುವತಿಯರ ಉನ್ಮಾದ ಅತೀ ಅನಿಸುವಷ್ಟು ಆಗಲತದ.ತಮ್ಮ ಯೌವನದ ಭರದಾಗ ಅವರಿಗಿ ತಮ್ಮ ಜೀವದ ಪರಿವೆ ಇಲ್ದಹಂಗ ವರ್ತಿಸಲತಾರ.ಅಥವಾ ಅವರ ಯೌವನದ ಹುರುಪು ಅವರನ್ನ ಹಂಗ ಮಾಡೊಹಂಗ ಮಾಡತದ.
ಚಿಕ್ಕವಯಸ್ಸಿನಲ್ಲೇ ಪ್ರೀತಿ ಪ್ರೇಮಕ್ಕ ಬಿದ್ದ ಯುವ ಜನಾಂಗ ಪಡಬಾರದ ಪಾಡು ಪಟ್ಟು ತಮ್ಮ ಜೀವನಾನೆ ಹಾಳು ಮಾಡಕೊಳ್ಳತಿದ್ದಾರ.ಪ್ರೀತಿಯ ವಿಷಯ ಬಂದಾಗ ಅದಕ್ಕಾಗಿ ಆಗೋ ಕೊಲೆ ರಂಪಾಟಗಳು ಕಳವಳಕ್ಕಿಡು ಮಾಡ್ತವ.ಈ ವಿಷಯದಾಗ ಮಕ್ಕಳು ಮತ್ತ ಹೆತ್ತವರ ನಡುವೆ ಆಗುವ ಘರ್ಷಣೆ ಗಳು ಅದೇಷ್ಟು ಅತೀರೇಕಕ್ಕ ಹೊಗ್ತಾವಂದ್ರ ತಮ್ಮ ಮಾತು ಕೇಳದ ಹೆತ್ತ ಕುಡಿಗಳನ್ನೆ ಕೊಲ್ಲುವಷ್ಟು.
ಜಾತಿ ಧರ್ಮಗಳ ತಿಕ್ಕಾಟ ಈ ಅಧುನಿಕ ಯುಗದಾಗ ಕಡಿಮಿ ಆಗ್ತಿರಬಹುದು ಎಂದು ತಿಳಕೊಂಡಿರೋದು ತಪ್ಪು , ಈ ಸಂಘರ್ಷಗಳು ಇನ್ನೂ ಹೆಚ್ಚು ಹೆಚ್ಚು ಆಗ್ತಿದ್ದಾವ.ಮಡಿವಂತಿಕೆಗಳು ವಿಜೃಂಭಿಸತಿದ್ದಾವ.ಶ್ರೇಷ್ಟತೆಯ ವ್ಯಸನ ಅದೇಷ್ಟು ಹೆಚ್ಚಾಗತಿದೆ ಅಂದ್ರ ಎಲ್ಲರೂ ನಾ ಹೆಚ್ಚು ನೀ ಹೆಚ್ಚು ಎಂದು ಹೋಡದಾಡಿಕೊಳ್ಳೊವಷ್ಟು.
ಸಮಾನತೆಗಾಗಿ ಹೋರಾಡಿದ ಬಸವ , ಅಂಬೇಡ್ಕರ್ , ಗಾಂಧಿಜಿಯವರ ಸಿದ್ದಾಂತಗಳು ಈಗ ಬರಿ ಬಾಯಿಮಾತುಗಳು ಅಷ್ಟೆ , ಬಸವಣ್ಣಗ , ಅಂಬೇಡ್ಕರ್ ಗ ಡಿಜೆ ಹಚ್ಚಿ ಕುಣಕ್ಕೊಂತ ಮೆರವಣಿಗಿ ಮಾಡಿಸೊದ್ರಾಗ ಇರೋ ಆಸಕ್ತಿ ಅವರ ಸಿದ್ದಾಂತ ಜೀವನದಾಗ ಅಳವಡಿಸಿಕೊಳ್ಳೊದ್ರಾಗ ಇಲ್ಲ.ಬಸವಾದಿ ಶರಣರೆಲ್ಲರೂ ಈಗ ಒಂದೊಂದು ಜಾತಿಯ ರಾಯಭಾರಿಗಳಾಗಿ ಗುರುತಿಸಿಕೊಳ್ಳುವಂತೆ ಮಾಡೊದ್ರಾಗೆ ಮಾತ್ರ ನಾವು ಶರಣರನ್ನು ನೆನಪಿಸಿಕೊಳ್ಳತಿದ್ದಿವಿ. ಇದ್ರ ಹೊರತಾಗಿ ಮಕ್ಕಳಿಗಿ ಶರಣರ ಆಶಯ , ತತ್ವ , ಸಿದ್ದಾಂತ ಗಳ ಬಗ್ಗೆ ಹೇಳೋ ಆಸಕ್ತಿ ನಮ್ಮಲ್ಲಿ ಇರೋದು ಅಷ್ಟಕಷ್ಟೆ.
ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸಬೇಕಾದ ಶಿಕ್ಷಣ ಸಂಸ್ಥೆಗಳು ಏನು ಕಲಿಸತಿದ್ದಾವ ಮಕ್ಕಳಿಗಿ..! ದಲಿತರು ಮಾಡಿದ ಅಡುಗೆ ಊಟ ಮಾಡಲಾರದಂಗ ನಿರಾಕರಿಸುವ ಮಕ್ಕಳ ಮತ್ತು ಅವರ ಪೋಷಕರ ಈ ಮಟ್ಟಿಗಿನ ಮನಸ್ಥಿತಿ ಗೆ ಕಾರಣ ಆದ್ರು ಏನು..ಇಂತಹ ಅನಾಗರಿಕ ವರ್ತನೆಯಿಂದ ಸಮಾಜದಲ್ಲಿ ನಾವು ಏನು ಸಾಧಿಸಬೇಕು ಅನ್ನಕೊಂಡಿವಿ.
ಶಾಲೆಗಳಲ್ಲಿ ಹಿಂದುಳಿದ ಮಕ್ಕಳಿಂದ ಶೌಚಾಲಯ ತೊಳೆಸುವ ಅಲ್ಲಿನ ಶಿಕ್ಷಕರ ಮತ್ತು ಸಿಬ್ಬಂದಿ ವರ್ಗದವರ ಮನಸ್ಥಿತಿ ಎಷ್ಟು ಹೀನ. ಶಾಲೆಗಳನ್ನು ಸ್ವಚ್ಛ ವಾಗಿಟ್ಟುಕೊಳ್ಳೊದು ಮಕ್ಕಳ ಕರ್ತವ್ಯ.ಆದ್ರ ಇದಕ್ಕ ಕೇವಲ ಒಂದು ಜನಾಂಗದ ಮಕ್ಕಳನ್ನು ಮಾತ್ರ ಉಪಯೋಗಿಸಿಕೊಳ್ಳೊದು ಖಂಡಿಸಲೆಬೇಕು.
ಈಗಲೂ ಎಷ್ಟೋ ಮನೆಗಳಲ್ಲಿ ಅನ್ಯ ಜಾತಿಯವರಿಗೆ ಪ್ರತ್ಯೇಕ ತಾಟು ಗ್ಲಾಸಗಳಲ್ಲಿ ತಿಂಡಿ ಟೀ ಕೋಡೊದು ಮಾಡ್ತಾರ.ವಯಸ್ಸಾದವ್ರು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯಗಳನ್ನು ಬಿಡಿಸೋದು ಅಷ್ಟು ಸುಲಭ ಅಲ್ಲ.ಆದ್ರ ವಿದ್ಯಾವಂತ ರಾದವ್ರು ಕೂಡ ಹಿಂಗ ಮಾಡೊದು ಅನಾಗರಿಕತೆ ಅಷ್ಟೆ. ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿಗಳ ದೌರ್ಜನ್ಯ ಹಿಂದೆ ಯು ಇತ್ತು , ಈಗಲೂ ಮುಂದುವರಿತಾನೆ ಇದೆ.
ಅಂತರ್ಜಾತಿ ವಿವಾಹಗಳ ಬಗ್ಗೆ ಅಷ್ಟು ಸುಲಭವಾಗಿ ನಿರ್ಧಾರಕ್ಕ ಬರಲಿಕ್ಕ ಆಗಲ್ಲ.ಒಂದು ಪ್ರಬುದ್ದವಯಸ್ಸಿನ ಇಬ್ಬರು ತೆಗೆದುಕೊಂಡ ನಿರ್ಧಾರ ಅವರ ವಯಸ್ಸು ಮತ್ತು ಅವರ ಎಷು ಸ್ವಾವಲಂಬಿ ಗಳಾಗಿದ್ದಾರ ಎಂದು ತಿಳಕೊಂಡು ನಿರ್ಧರಿಸಬೇಕಾಗತದ.ಇನ್ನೂ ಚಿಕ್ಕ ವಯಸ್ಸಿನಲ್ಲಿ ಪ್ರೆಮಕ್ಕ ಬಿದ್ದು ವಿದ್ಯಾಬ್ಯಾಸ ಬಿಟ್ಟು ಮನಿ ಬಿಟ್ಟು ಓಡಿಹೋಗಿ ಅನ್ನ ನೀರ ಇಲ್ದೆ ಬದುಕು ಏನು ಅಂತ ಅರ್ಥ ಆಗುವಷ್ಟರಲ್ಲಿ ಮಕ್ಕಳು ಬಳಲಿಬಿಟ್ಟಿರತಾರ.
ಮಕ್ಕಳು ಪ್ರೀತಿಸೊ ವಿಷಯ ತಿಳಿದ ಕೂಡಲೆ ಪೋಷಕರು ಮೈದಾಗ ವೀರಭದ್ರ ಬಂದಂಗ ಕುಣಿಯೋದು ಬಿಟ್ಟು ಸ್ವಲ್ಪ ಅವರ ಜೋಡಿ ಸಮಾಧಾನದಾಗ ಮಾತಾಡಬೇಕು.ಇನ್ನೂ ಓದೋದು ಮುಗಿದಿಲ್ಲ ಅಂದ್ರ ಅವರಿಗಿ ತಿಳಿಸಿ ಹೇಳಿ ಓದು ಮುಗಿಸಲಕ್ಕ ಪ್ರೇರೆಪಿಸಬೇಕು.ಅದು ಬಿಟ್ಟು ಅವರು ಪ್ರೇಮಿಸಿದವರಿಗೆ ಬಿಟ್ಟು ತರಾತುರಿದಾಗ ಇನ್ನೊಂದು ಸಂಭಂಧ ನೋಡಿ ಮರ್ಯಾದೆ ಉಳಸಿಕೊಳ್ಳೊ ಪ್ರಯತ್ನ ಮಾಡತಿದ್ರ ಒಂದೋ ಅವರು ಓಡಿ ಹೋಗತಾರ ಇಲ್ಲ ಆತ್ಮಹತ್ಯೆ ಮಾಡ್ಕೋತಾರ , ಸ್ವಲ್ಪ ಅವಕಾಶ ಕೊಟ್ರ ಅವರಿಗೆ ತಮ್ಮ ಪ್ರೇಮಸಂಭಂದದ ಮ್ಯಾಲ ತಾನಾಗೆ ತಿಳವಳಿಕಿ ಬರತದ. ನಾವು ಮುಂದೆ ವರಿಬೇಕೋ ಬೇಡ್ವೋ ಎಂಬ ನಿರ್ಧಾರ ಸ್ವಲ್ಪ ಕಾಲ ಆದಮ್ಯಾಲ ತಗೋರಿ ಎಂಬ ಬೆಂಬಲ ನಾವು ಮಾಡ್ಲೇಬೇಕು.
ಇಷ್ಟಕ್ಕೂ ಹಠಮಾಡಿ ಮದುವೆ ಮಾಡ್ಕೊಂಡ್ರ ಅವರನ್ನು ಕೊಲ್ಲೊಮಟ್ಟಕ್ಕ ಹೋಗೊ ಹೆತ್ತವರ ವಿಕೃತಿಗೆ ಎನನ್ನಬೇಕು..ಬೇರೆ ಜಾತಿಯಲ್ಲಿ ಮದುವೆ ಆದ ಮಾತ್ರಕ್ಕ ಇಷ್ಟು ದ್ವೇಷ , ಸಿಟ್ಟು , ಹೆತ್ತ ಕೂಸು ಎಂಬ ನೆನಪು ಇಲ್ಲದೆ ಕೊಲ್ಲುವಷ್ಟು ಅದಾವ ಶ್ರೆಷ್ಟತೆಯ ಅಹಂಕಾರ.ದಯೆಯೆ ಇಲ್ಲದ ಧರ್ಮ ನಿರರ್ಥಕ. ಬದುಕುವ ಹಕ್ಕು ಕಸಿದುಕೊಳ್ಳಲು ಹೇಳಿದ ಧರ್ಮ ಖಂಡನೀಯ.ಜಾತಿ ಶ್ರೇಷ್ಠ ತೆಯಿಂದ ಮಾಡಿದ ಇಂತಹ ಹೀನ ಕೆಲಸಕ್ಕೆ ಕ್ಷಮೇಯೆ ಇಲ್ಲ.
ಮರ್ಯಾದಾ ಹತ್ಯೆ ಗಳು ಘಟಿಸಬೇಕಾದ್ರ ಅವರಲ್ಲಿ ಅದೇಷ್ಟು ಜಾತಿ ಬಗ್ಗೆ ದುರಾಭಿಮಾನ ಇರಬೇಕು.ಇಂತವಕ್ಕೆ ಪ್ರೇರಣೆ ಕೊಡುವ ಒಂದು ಗುಂಪು ಈ ತರ ಘಟನೆಗಳನ್ನು ಬೆಂಬಲಿಸ್ತದ ಅಂದ್ರ ನಿಜಕ್ಕೂ ನಾಚಿಕಿ ವಿಷಯ.ಅಂತರ್ಜಾತಿ ಪ್ರೇಮ ಅಂದ ತಕ್ಷಣ ಬಾಳ ಜನ ಹೆತ್ತವರು ಸಾಯುವ ಮಾತು ಆಡ್ತಾರ. ಇಲ್ಲ ಕೊಲ್ಲುವ ಮಾತು ಆಡ್ತಾರ. ಬದುಕಲಿಕ್ಕ ಬಿಡಲಾರದಂಗ ವಿರೋಧಿಸುವ ಮನಸ್ಥಿತಿ ಗಳಿಗಿ ಧಿಕ್ಕಾರ. ಇಂತ ಅಪರಾಧಗಳಿಗಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಘೋಷಿಸಲೇಬೇಕು. ಹನ್ನರಡನೆ ಶತಮಾನದಲ್ಲಿ ಬಸವಣ್ಣ ಕಂಡ ಸಮಾನತೆ ಕನಸು ನನಸಾಗಲು ಪ್ರೇರೆಪಿಸಬೇಕಾದ ಈಗಿನ ಜನಾಂಗ ಇನ್ನೂ ಹೆಚ್ಚು ಜಾತಿಯ ದುಳ್ಳುರಿಯಲ್ಲಿ ಬೆಯುತ್ತಿರೋದು ಎಷ್ಟೋಂದು ಶೋಚನೀಯ ಸಂಗತಿ.
ಈಗಿನ ಅಧುನಿಕ ವಿದ್ಯಾವಂತರ ಯುಗದಲ್ಲೂ ಕೆಳವರ್ಗದವರಿಗೆ ಊರಿನ ಬಾವಿಯಿಂದ ನೀರು ತರಲು ವಿರೊಧಿಸುವದು , ಊರಿನ ಹೇರ್ ಸಲೂನ್ ನಲ್ಲಿ ಕೂದಲು ಕತ್ತರಿಸಲು ನಿರಾಕರಿಸುವದು.ದಲಿತರು ಮಾಡಿದ ಅಡುಗೆ ಉಣ್ಣುವದಿಲ್ಲ ಎಂದು ಮುಷ್ಕರ ಹೂಡುವದು , ಇವೆಲ್ಲವೂ ಮತ್ತೆ ಮತ್ತೆ ಘಟುಸುತ್ತಲೆ ಇವೆ. ಇವು ನಾಗರೀಕ ಸಮಾಜ ತಲೆ ತಗ್ಗಿಸಬೇಕಾದ ವಿಷಯಗಳು.
ಪರಸ್ಪರರನ್ನು ಪ್ರೀತಿಸೋದು , ಕರುಣೆ ಮತ್ತು ಉದಾರತೆಗಳನ್ನು ಹೊಂದಿರುವದು ಎಲ್ಲಾ ಧರ್ಮಗಳ ಸಾರ , ಯಾವ ಧರ್ಮಗ್ರಂಥಗಳು ಮೇಲು ಕೀಳು ಎಂದು ಭೇದ ಭಾವ ಮಾಡುವುದನ್ನು ಸಾರಿಲ್ಲ .ಹುಟ್ಟಿನಿಂದ ಯಾರು ಶ್ರೇಷ್ಟರಾಗುವದಿಲ್ಲ.ಶ್ರೇಷ್ಟತೆ ,ದೊಡ್ಡಸ್ತಿಕೆ ಬರುವದು ನಮ್ಮ ವ್ಯಕ್ತಿತ್ವದಿಂದ , ವರ್ತನೆಯಿಂದ , ಗುಣಗಳಿಂದ ಮಾತ್ರ.
ಜ್ಯೋತಿ , ಡಿ .ಬೊಮ್ಮಾ.




