ಕಾವ್ಯ ಸಂಗಾತಿ
ಸರಸ್ವತಿ ಕೆ ನಾಗರಾಜ್
“ಹೌದು, ಗಂಡಸರೆ ಹೀಗೇ!!”


ಗಂಡಸರು ಸ್ವಲ್ಪ ಕೆಟ್ಟವರೇ ಹೌದು,
ಆದರೆ ಜವಾಬ್ದಾರಿಯ ಸಾಹುಕಾರರು.
ಮಾತಿನಲ್ಲಿ ಕಠಿಣತೆ ಇದ್ದರೂ,
ಮನದೊಳಗೆ ಕರ್ತವ್ಯದ ಭಾರ ಹೊತ್ತವರು.
ಹೌದು, ಅವರು ಕೆಟ್ಟವರೇ ಸರಿ,
ಭಾವನೆ ತೋರಿಸೋದು ಅವರು ಕಲಿತಿಲ್ಲ.
ನೋವುಗಳನ್ನು ನಗು ಮುಖಕ್ಕೆ ಮರೆಸಿಕೊಂಡು,
ಜೀವನದ ಹೊರೆ ಹೊತ್ತು ನಡೆಯುವವರು.
ತಮ್ಮ ಕನಸುಗಳನ್ನು ಬಲಿಕೊಟ್ಟು,
ಕುಟುಂಬದ ನಗುವಲ್ಲಿ ಸಂತೋಷ ಕಂಡವರು.
ಮೌನದಲ್ಲೇ ಪ್ರೀತಿ ತೋರಿ,
ನಗುವ ಮಾರಿಯೇ ಬದುಕಿದವರು.
ಕಣ್ಣೀರು ಕಣ್ಣಲ್ಲಿ ನಿಂತರೂ,
“ನಾನು ಬಲಿಷ್ಠ” ಎನ್ನುವ ಮುಖವಾಡ.
ಕುಟುಂಬದ ನಾಳೆಗೆ ಆಶ್ರಯವಾಗಿ,
ಇಂದಿನ ನೋವನ್ನು ನುಂಗಿದವರು.
ಹೆಣ್ಣಿಗೆ ಸಹಾಯ ಮಾಡಿದರೆ,
ಅವನು “ಕಾಮುಕ” ಎಂಬ ಬಿರುದು.
ಉದ್ದೇಶದ ಪಾವಿತ್ರ್ಯ ಕಾಣದೆ,
ಸಮಾಜವೇ ತೀರ್ಪು ಬರೆಯುವುದು.
ಒಳ್ಳೆಯತನಕ್ಕೂ ಸಂಶಯದ ಕಣ್ಣು,
ಸಹಾಯಕ್ಕೂ ತಪ್ಪು ಅರ್ಥ.
ಮೌನವಾಗಿ ಹಿಂದೆ ಸರಿದು,
ತಮ್ಮ ಮನಸನ್ನೇ ಮುಚ್ಚಿಕೊಂಡವರು.
ಹೌದು ಗಂಡಸರೆ ಹೀಗೆ
ಅವರು ದೂರ ಉಳಿದರು,
ಭಾವನೆ ತೋರಿಸೋ ಧೈರ್ಯ ಕಳೆದುಕೊಂಡರು.
ತಪ್ಪಾಗಿ ಅರ್ಥವಾಗುವ ಭಯದಲ್ಲಿ,
ಒಳ್ಳೆಯತನವನ್ನೇ ಮರೆಮಾಚಿಕೊಂಡರು.
ಹೌದು ಗಂಡಸರೆ ಹೀಗೆ,
ಅತ್ತರು ಅವಮಾನ,
ನಕ್ಕರು ಅವಮಾನ,
ಭಾವನೆ ತೋರಿಸದಿದ್ದರೆ,ಕಲ್ಲು ಹೃದಯದವರು.
ಅವರಿಗೆ ಯಾರೂ ಹೇಳಲಿಲ್ಲ,
“ನಿನ್ನ ಅಳುವಿಗೂ ಅರ್ಥ ಇದೆ” ಎಂದು.
ಕಣ್ಣೀರಿಲ್ಲದೇ ಅಳುವುದನ್ನ ಕಲಿತು,
ಹೃದಯವನ್ನೇ ಸಮಾಧಿ ಮಾಡಿಕೊಂಡವರು.
ಈ ಗಂಡಸರು.
ಹೌದು ಈ ಗಂಡಸರೆ ಹೀಗೆ
ಸರಸ್ವತಿ ಕೆ ನಾಗರಾಜ್.



