ಕಾವ್ಯ ಸಂಗಾತಿ
ಸುಮತಿ ನಿರಂಜನ
“ಹೊಸ ಹೊತ್ತಿ-ಗೆ” ಕವಿತೆ,


ಇಷ್ಟು ಬೇಗ ಮುಗಿಯಿತೇ
ಈ ಹೊತ್ತಿಗೆ?
ದಿನಕೊಂದು ಪುಟವೆಂದು
ಪಟಪಟನೆ ಹಾರಿ ಹೋದವು
ಕೇಳಬಹುದೇ ಎಲ್ಲೆಂದು ?
ಓದಲಾದೀತೇ ಎಲ್ಲವನು ?
ಮುದುಡಿದ ನಾಯಿಕಿವಿಗಳು
ಖಾಲಿ ಕೆಲವು ಹಾಳೆಗಳು
ಕೆಲವು ಕಪ್ಪು ಕ್ಷಣಗಳು
ಕಣ್ಣೀರ ಕಲೆಗಳು ಕೆಲವು
ಕಸ್ತೂರಿ ಕಣಗಳು..
ಕಣಕ ಒಂದೇ ಎಲ್ಲರಿಗು ಆದರೆ
ಹೂರಣವೆ ಬೇರೆ ಬೇರೆ
ಬೇರೆ ಪರಿವಿಡಿ ಬೇರೆ ವಿಷಯ
ಬೇರೆಯೇ ಆದಿ ಬೇರೆಯೇ ಅಂತ್ಯ!
ತಿರುವಿ ಹಾಕಲಿಕ್ಕಿಲ್ಲ ಮತ್ತೊಮ್ಮೆ
ಈ ರೂಲು ಮಾತ್ರ ಎಲ್ಲರಿಗು ಒಂದೇ !
ಹೊತ್ತಿಗೆಯ ಕೊನೆಗೆ
ಹಾಕಲೇಬೇಕು ರದ್ದಿಗೆ…
ಹೊರುವವರು ಯಾರೆ
ಸತ್ತ ಪುಸ್ತಕದ ಹೊರೆ ?
ತುಸುವೆ ತೆರೆದಿದೆ ಕದವು
ಹಾರಿ ಬರಲಿವೆ ಇತ್ತ
ಗರಿಗೆದರಿ ಪುಟಗಳು
ಗರಿಗರಿ ಹೊಸ ಘಮಲು
ಹೊತ್ತು, ಏನಿದೆ, ಏನಿಲ್ಲ
ಹೊತ್ತಿಗೆಯ ಒಳಗೆ ?
ಏನು ಬರೆದಿದೆಯೋ
ಯಾರು ಬರೆದಿಹರೋ
ಉಳಿದಿಹುದೇ ನನಗಾಗಿ
ಒಂದಿಷ್ಟು ಖಾಲಿ ಜಾಗ
ಗೀಚಿ ಪುಟಗಳ ಮಧ್ಯೆ
ಇಡುವೆನೊಂದು ನವಿಲುಗರಿ
ನೋಡಬೇಡವೇ ಇಡುವುದೆ ಮರಿ ?
ಸುಮತಿ ನಿರಂಜನ




ಕಣಕ ಒಂದೇ ಹೂರಣ ಬೇರೇ ಬೇರೇ, ಎಷ್ಟು ವಾಸ್ತವ ಅಂಶ ಅಲ್ಲವೇ! ಕೊನೆಯಲ್ಲಿ ನವಿಲುಗರಿ ಮರಿ ಇಡುವ ಬಾಲ್ಯದ ನೆನಪು ತಂದಿದೆ ಕವನ.
ಪ್ರತಿ ವರ್ಷವೂ ಏನೋ ನಿರೀಕ್ಷೆ, ಏನೋ ಕನಸು- ಅದಕೆ ನವಿಲುಗರಿಯ ನವಿರು, ಬಳುಕು
ಹೊತ್ತು ಹಾಕುವ ಪ್ರತೀ ಕಾಲ- ಹೆಜ್ಜೆಗೆ ಒಂದು ಪರಿವರ್ತನೆಗೆ ಬೀಜವಾಗುವ ಸಾಧ್ಯತೆ ಇದೆ. ಹಾಗೊಂದು ಟ್ರಾನ್ಸಿಷನ್ ಹೊಸವರ್ಷದತ್ತ ಕಾಲಿಡುವಾಗಲೂ ಅನುಭವಿಸುತ್ತೇವೆ. ಅದೇ ಕಾಲಪ್ರವಾಹವನ್ನು ಹೊತ್ತಿಗೆ ಎಂಬ ಪದ ಬಳಸಿ ಪುಸ್ತಕದ ಪ್ರತಿಮೆ, ದಿನ ಪುಟಗಳ ಪ್ರತಿಬಿಂಬ ಕೊಟ್ಟು ನಡೆದ ಸುಂದರ ಕವಿತೆ. ಸುಮತಿ ನಿರಂಜನ್ ಅವರಿಗೆ ಅಭಿನಂದನೆಗಳು.
ಮಹಾದೇವ ಕಾನತ್ತಿಲ