ಕಾವ್ಯ ಸಂಗಾತಿ
ಶ್ರೀನಿವಾಸ ಕೆ.ಎಂ
ಎರಡು ಕವಿತೆಗಳು


ಕವಿತೆ-೧

ಕುರುಡು ನಂಬಿಕೆ
ನಿನ್ನಲ್ಲಿ ಮನೆ ಮಾಡಿ
ಸಂಶಯ ಹುತ್ತಗಟ್ಟಿ
ಸುರುಳಿ ಸುತ್ತಿ ಸುಳಿದಾಡಿದೆ
ನಿನ್ನ ಸುತ್ತ..
ಹುಸಿ ಮಾತಿಗೆ ಕಿವಿಗೊಟ್ಟು
ಆಲಿಸುವ ರಿಸೀವರ್‌ಗಳ
ಮಾತಿಗೆ ಮರಳಾಗುವ
ಮಾಯ ಬಜಾರಿನ ಜಗತ್ತು,
ಅಜ್ಜಿಗೆ ಅರಿವೆ ಚಿಂತೆಯಾದರೆ
ಮೊಮ್ಮಗಳಿಗೆ ಮತ್ತೇನೋ
ಚಿಂತೆ, ಮೈಕ್ ಇಲ್ಲದ
ಸ್ಪೀಕರ್ ಗಳು ಕಿವಿಡೆಬ್ಬಿಸಿವೆ
ಜಗವ ಕೇಳುವಂತೆ,
ಇದ್ದ ಮೂರು ಜನರ ನಡುವೆ
ಮಳ್ಳ ಬೆಕ್ಕಿನಂತೆ ನೋಡಿದ ಕಣ್ಣು,
ಹಿತ್ತಾಳೆ ಕಿವಿಯಂತೆ ಆಲಿಸಿದ ಕಿವಿ,
ಬೊಗಳೆ ಮಾತಿನ ಮನೆಯ ಕಟ್ಟಿದ
ಬಾಯಿಯಲ್ಲವೇ?
ನಿದ್ದೆಯಿಂದೆದ್ದ ಮನಸ್ಸಿಗೆ ತಿಳಿದಿದೆ
ಕುರುಡು ನಂಬಿಕೆಯ ಬಟ್ಟೆ ಕಿತ್ತೆಸೆದು
ಸಂಶಯದ ಹುತ್ತವ ಕೆಡವಿ
ನಂಬಿಕೆಯ ಮನೆಯ
ಕಟ್ಟಬೇಕೆಂದು.
ಕವಿತೆ-೨

ಅನುದಿನದಿ ಕುದಿವ ಮನದ ಬೇಗೆ
ನಭದೆತ್ತರಕೆ ಚಿಮ್ಮುವ ಜ್ವಾಲಾಮುಖಿ,
ಆಕ್ರೋಶದಿ ತುಡಿಯುವ ಮೂಕ
ಮನಸ್ಸು
ಸಾಸಿವೆಯಷ್ಟು ಸಮಾಧಾನವಿಲ್ಲ,
ಇಹಪರಗಳಾಚೆಗೂ ನಿಲುಕದ ಮಾಯೆ
ತನ್ನೊಳಗೆ ಮನೆಯ ಮಾಡಿ
ಗುಂಗಿ ಹುಳುವಿನಂತೆ ಕೊರೆದು
ಕಾಡಿ ಪೀಡಿಸುತಿದೆ,
ತನ್ನೊಳಗೆ ಹುದುಗಿರುವ ಮಾಯೆಯ
ಬಲೆಯ ಕಳಚಲು,
ಅಟ್ಟ-ಬೆಟ್ಟಗಳ ದಾಟಿ,
ಕಾಡು-ಕಣಿವೆಯ ಸುತ್ತಿ,
ಬಟ್ಟ ಬಯಲನು ಇಳಿದು
ಮುನ್ನಡೆಯಬೇಕು,
ಜಗದ ಕತ್ತಲ ಕಳೆಯಲು
ಅರಿವೆಂಬ ಹಣತೆಯ
ಹೊತ್ತಿಸಲೇ ಬೇಕು.
ಶ್ರೀನಿವಾಸ ಕೆ.ಎಂ
ಕನ್ನಡ ಸಹಾಯಕ ಪ್ರಾಧ್ಯಾಪಕರು
ವೇದಾಂತ ಪದವಿ ಕಾಲೇಜು,
ಬೆಂಗಳೂರು.




ಕವಿತೆಯನ್ನು ಪ್ರಕಟಿಸಿದಕ್ಕೆ ಸಂಪಾದಕರಿಗೆ
ಧನ್ಯವಾದಗಳು
He is my teacher!!! The best teacher ❤️ so far I have seen
Thank you
ಬಹಳ ಚೆನ್ನಾಗಿದೆ ಕವನಗಳು. ಅಭಿನಂದನೆಗಳು ಸರ್…
ಧನ್ಯವಾದಗಳು ಮೇಡಂ