ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದು ಹೀಗೆ ಆಗುತ್ತದೆಂಬ ಭ್ರಮೆ ಒಮ್ಮೆ ಹಾದು ಹೋದರು, ನಾವುಗಳು ಮತ್ತೊಂದು ವಿಚಾರದತ್ತ ನಮ್ಮನ್ನು  ಸಕ್ರಿಯವಾಗಿಸಿಕೊಂಡಿರುತ್ತೆವೆ.
ಮನುಷ್ಯನ ಜನ್ಮ ಬರಿ ನಿರೀಕ್ಷೆಯಲ್ಲೇ ಕಳೆದು ಹೋಗಿದ್ದು ಗೊತ್ತೆಯಾಗಲ್ಲ.ನೂರೆಂಟು ಕನಸುಗಳು ನನಸಾಗುವ ಹೊಸ್ತಿಲಿನಲ್ಲಿ ಮುಗ್ಗರಿಸಿ ಬಿಕರಿಯಾದ ಕನಸುಗಳು ಒಡೆದ ಗಾಜಿನ ಚೂರಿನಂತೆ.ಹೌದು
ಈ ವರುಷ ಇದನ್ನು ಸಾಧಿಸಬೇಕೆಂಬ ಆಸೆ ಹೊತ್ತರು,ಆಸೆಗೆ ಮಿತಿಬೇಕಲ್ಲ.ಹೊಂಟದಾರಿ ಒಂದಾದರೆ,ಎದುರಾಗುವ ಸಂಕಷ್ಟಗಳು ನೂರಾರು!ಯಾವುದನ್ನು ಮೊದಲು ಪರಿಹರಿಸಬೇಕು? ಎಂಬ ನಿಖರತೆ ಮನಸ್ಸು ನೀಡದಿರುವುದು ಮತ್ತು ಹೃದಯ ಮೌನವಾಗಿರುವುದು ಒಂದು ನಿದರ್ಶನ.

ಕಳೆದು ಹೋದ ಘಟನೆಗಳು ಮತ್ತೆ ಮರುಳಿಸುವ ಸಂಭವ ಸಾಧ್ಯತೆ ಕಡಿಮೆ.ಆದರೆ ಅವು ನೀಡಿದ ನೋವುಗಳು  ಶಾಶ್ವತ. ಪ್ರತಿಯೊಬ್ಬರ ಬದುಕಲ್ಲಿ ಕಹಿ-ಸಿಹಿ ಅಂಶಗಳು ತಮ್ಮದೇ ಆದ ಛಾಪನ್ನು ಮೂಡಿಸಿರುತ್ತವೆ.”ವಿದಾಯ” ಯಾವುದಕ್ಕೆ ಹೇಳಬೇಕು? ವರುಷಕ್ಕಾ? ಅಥವಾ ನಾವು ಬಳಸುವ ಕ್ಯಾಲೆಂಡರ್ ಗಾ? ಮನಸ್ಸನ್ನು ನುಚ್ಚು ನೂರು ಮಾಡಿದ ಕನಸುಗಳಿಗಾ? ನಂಬಿಕೆಯ ಅಡಿಪಾಯ ಕಳಚಿದ್ದಕ್ಕಾ? ಯಾವುದಕ್ಕೆ ಎಂಬ ಪ್ರಶ್ನೆ? ಸತ್ಯ ಅಲ್ಲವಾ? “ವಿದಾಯ”ಎಂಬ ಸರಳ ಪದ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಯಾರು ಉಹಿಸಲು ಸಾಧ್ಯವಿಲ್ಲ!. ಕಳೆದುಕೊಳ್ಳುವುದು ಅತ್ಯಂತ ಸುಲಭದ ಸರಕಾಗಿ ನಿಂತಿದೆ.ವಸ್ತುವಾದರೂ ಸರಿ,ವ್ಯಕ್ತಿಯಾದರು ಸರಿ..ಅವಕಾಶ ಕೊನೆಯಾದಾಗ ಇಲ್ಲವೇ ವಾಸ್ತವ ನಿಲುಗಡೆಯ ಹಾದಿ ಹಿಡಿದಾಗ…ಎಲ್ಲೊ ಒಂದುಕಡೆ ಬಿರುಕಾದ ಸಂಬಂಧ ಬಿರುಸಾಗಿ ಗಾಳಿಗುಂಟ ಹಾರಿ ಹೋದಾಗ ‘ವಿದಾಯ’ ಅನಿವಾರ್ಯ.

2025 ಅಂತಹ ಸುಂದರ ಕನಸುಗಳನ್ನು ಹೆಣೆದಂತೆ ಭಾಸವಾದರೂ,ನೋವನ್ನು ಇಂಚಿಂಚಾಗಿ ಅನುಭವಿಸುವ ಭಾಗ್ಯ ನೀಡಿದ್ದು ವಿಶೇಷ. ನೋವು ತಡೆದುಕೊಳ್ಳಬಹುದು…ಆದರೆ ಬದುಕನ್ನೇ ನುಂಗಿ ಬಿಟ್ಟರೆ ಸಂಭ್ರಮಿಸುವ ಹೊಣೆ ಹೊರಲಾದಿತೆ? ಆದರೂ ಜೀವನ ನಿಂತ ನೀರಲ್ಲ!. ಉಸಿರಿರುವ ತನಕವೂ ಹೋರಾಡಲೇ ಬೇಕು ನಮ್ಮೊಳಗಿನ ಚೈತನ್ಯ ಕೈಚೆಲ್ಲುವ ತನಕ!. ಪ್ರತಿವರ್ಷವೂ ಹೊಸ ಚಿಂತನೆಗಳನ್ನು ಹಮ್ಮಿಕೊಳ್ಳುವ ನಾವು,ಯಾವ ಯೋಚನೆಗೆ ಚಾಲನೆ ನೀಡಿದ್ದಿವಿ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವುದನ್ನೇ ಮರೆತು ಬಿಡುತ್ತವೆ. ಮರೆವು ಮನುಷ್ಯನ ಸಹಜ ಗುಣ.ಅದಿಲ್ಲದಿದ್ದರೆ, ಮೆದುಳೆಂಬ ಮೆಮರಿಕಾರ್ಡ ಬ್ಲಾಸ್ಟ್ ಆಗುವುದರಲ್ಲಿ ಸಂಶಯವಿಲ್ಲ. ಪುಟ್ಟ ಮೆದುಳು ಏನೆಲ್ಲಾ ಅಂಶಗಳನ್ನು ತನ್ನೊಳಗೆ ಸಂಗ್ರಹಿಸಿಕೊಳ್ಳಬೇಕು? ಯಾವ ನರಕ್ಕೆ ಯಾವ ಸಂದೇಶ ರವಾನಿಸಬೇಕು ಎಂಬ ಚಿಂತೆ ಕಾಡದಿರದು!. ಅದಕ್ಕೆ ಒಮ್ಮೊಮ್ಮೆ ಕಣ್ಣಿಗೆ ಕತ್ತಲು ಆವರಿಸಿ ಎಚ್ಚರ ತಪ್ಪುವುದು ಇದೆ. ಇದೊಂದು ನೋವಿನ ಸಂಗತಿಯಾದರೂ,ಜೀವನ್ಮರಣದ ನಡುವೆ ಒದ್ದಾಡುವ ಜೀವಗಳು ಬಯಸುವುದು ಶೂನ್ಯವೆಂಬುದನ್ನು ಮರೆಯುವಂತಿಲ್ಲ.

ವರ್ಷದ ಅಂತ್ಯಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವುದು ಸಹಜವೆನ್ನಿಸಿದರು,ಮಾಡಿಕೊಳ್ಳುವವರು ಯಾರು ಅನ್ನುವ ಪ್ರಶ್ನೆ?.ಪ್ರೀತಿ ಪ್ರೇಮ,ಮೋಸ,ವಂಚನೆ,ಅಕ್ರಮ,ಆತ್ಮಹತ್ಯೆ, ಅತ್ಯಾಚಾರ, ಅಪಘಾತ,ಕೊಲೆಗಳಿಗೆ ಬಲಿಯಾದ ಅದೆಷ್ಟೋ ಮುಗ್ದರ ವೃತ್ತಾಂತವು ಹೃದಯ ಕಲುಕದೆ ಇರದು.ಕಣ್ಣಂಚಲಿ ನೋವಿನ ಕಣ್ಣೀರು ಜಿನುಗದೆ ಇರದು…ಇಂತಹ ಘಟನೆಗಳು  ನಮಗೆ ಹತ್ತಿರವಾದವರಾಗಿದ್ದರಂತೂ ಕರುಳು ಮಿಡಿಯದೆ ಇರದು….ಮೊನ್ನೆ ಮೊನ್ನೆಯಷ್ಟೇ…ಗೆಳತಿಯ ಸಾವು ಇಡೀ ಕುಟುಂಬಕ್ಕೆ ಆಘಾತ ನೀಡಿದ್ದು…ನಂಬಲು ಅಸಾಧ್ಯ!. ಮೆದುಳು ಕೇಳುವಷ್ಟು,ಹೇಳುವಷ್ಟು, ಕೇಳಿದ್ದಕ್ಕೆ ಉತ್ತರಿಸುವಷ್ಡು ಇದ್ದರೆ ಮಾತ್ರ ಸುರಕ್ಷಿತ!. ಆದರೆ ಮಿತಿಮೀರಿ ಚಿಂತಿಸುವ ಕೆಲಸಕ್ಕೆ ಸೇರಿದ ಮೇಲಂತೂ, ನಿದ್ರೆಯೆಂಬ ಅಸ್ತಿತ್ವ ಮರಿಚೀಕೆ!. ನಾವೆಲ್ಲ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕಿದ್ದೆವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಕೂಲ್ ಆಗಿರಬೇಕು, ಅನ್ನೊರಿಗೆ cool ನ ಅರ್ಥ ಕೇಳಬೇಕು.ವಿದಾಯ ಹೇಳಿ ಹೋದವರಿಗೆ
ಪುನಃ ಬರಲಾಗದೆ ತಮ್ಮೊಳಗೆ ಒದ್ದಾಟ ನಡೆಸಿರುವರು…

ನಿಜ ಕಣ್ರಿ,ಮರಳಿ ಬಾರದ ಊರಿಗೆ ಪಯಣ ಬೆಳೆಸಿದ ಅದೆಷ್ಟೋ ಜೀವಗಳು ಎಷ್ಟು ನಲುಗಿರಬಹುದು? ಅವರು ಕಂಡ ಕನಸುಗಳು ಅರೆಬೆಂದಾವಸ್ಥೆಯಲ್ಲಿ ಇನ್ನೂ ಇಲ್ಲೆ ಇರುವುದನ್ನು ಅಲ್ಲಗಳೆಯುವಂತಿಲ್ಲ
ನಾವೆಲ್ಲ ಒಂದಲ್ಲ ಒಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೆವೆ. ಸಂಬಂಧಗಳ ಸಂಕೋಲೆಯಲ್ಲಿ ಬಿಕ್ಕುವ ಗಳಿಗೆ ಹೆಜ್ಜೆ ಹೆಜ್ಜೆಗೂ
ಬಂಧಿಸಿದೆ.ಯಾರೆಲ್ಲ ಈ ಪ್ರಪಂಚದಲ್ಲಿ ಉಸಿರಾಡುತ್ತಿದ್ದಾರೋ ಎಲ್ಲರಿಗೂ ವಿದಾಯದ ಕಿರುಕಾಣಿಕೆ.ಕೇವಲ ಸಾಂಕೇತಿಕವಾಗಿ ಕ್ಯಾಲೆಂಡರ್ ಬದಲಾಗಿದೆ…ಅದು ಕ್ಯಾಲೆಂಡರ್ ಅಷ್ಟೇ ಅಲ್ಲ ಜೀವನದ ಮಹತ್ವದ ದಿನಗಳು.ವಿದಾಯ ಸಾರಿದ್ದು ನಮಗೆ ಗೊತ್ತೆಯಾಗಿಲ್ಲ.

ಒಟ್ಟಾರೆ ಹೇಳುವುದಾದರೆ ವಿದಾಯದ ಕಹಿ ಸಿಹಿ ನೆನಪು ತುಂಬಾನೆ ದುಃಖ ಮತ್ತು ಖಿನ್ನತೆ ನೀಡುವ ಮೂಲ ಸಾಧನಗಳು.ಹೀಗಿರುವಾಗ ನಾವುಗಳು ಅಹಿತಕರ ಘಟನೆಗಳನ್ನು ನಿರ್ಲಕ್ಷಿಸಿ ಸಕಾರಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಸುಲಭವಾದರೂ,ಆಚರಣೆಗೆ ತರುವುದು ಕಷ್ಟವೆಂಬುವುದು ನಮಗೆಲ್ಲ ತಿಳಿದಿದೆ.ಕಳೆದುಕೊಂಡ ವಸ್ತು ಪುನಃ ಸಿಗಬಹುದೇನೋ,ಆದರೆ ನಂಬಿಕೆ,ವಿಶ್ವಾಸ, ಪ್ರೀತಿ ಹಾಗೂ ಪ್ರೀತಿಪಾತ್ರರಾದವರು…ಪುನಃ ಸಿಗಲಾರದು…!ಜೀವನದ ಮಜಲುಗಳನ್ನು ಮೆಲುಕು ಹಾಕುವುದು,ಹೊಸ ಕ್ಯಾಲೆಂಡರ್ ತಂದು ಹಾಕುವುದು ಒಂದೇ ಆದಿತೆ?… ನೆನಪು ಜೀವನ್ಮರಣದ ಬೆಸುಗೆ…ವಿದಾಯ ಕಣ್ಣೀರಿಗೆ ಮಾತ್ರ ಅಲ್ಲ ಹೃದಯಕ್ಕೂ ಸಂಬಂಧಿಸಿದ್ದು…..ಅರ್ಥೈಸಿಕೊಳ್ಳಲು ಸಮಯ ಬೇಕು ಅಷ್ಟೇ!…


About The Author

4 thoughts on ““ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್”

  1. ಹೌದು,….. ವಿದಾಯ ಅಷ್ಟು ಸುಲಭವಲ್ಲ ಆದರೆ ಅನಿವಾರ್ಯ ಕಾಲನಗರ್ಭದ ಪ್ರವಾಹಕ್ಕೆ ಕೆಲವರು ಕೊಚ್ಚಿ ಹೊದರೆ ಕೆಲವರಾದರೂ ಅದರ ವಿರುದ್ಧ ಈಜಲೇ ಬೇಕು…… ಲೇಖನ ಸುಂದರವಾಗಿ ಮೂಡಿ ಬಂದಿದೆ ಅಭಿನಂದನೆಗಳು ಮೆಡಮ್

Leave a Reply

You cannot copy content of this page

Scroll to Top