ಕಾವ್ಯ ಸಂಗಾತಿ
ಮಹಾಂತೇಶ್.ಬಿ.ನಿಟ್ಟೂರು
“ಹೊಸ ವರ್ಷದ ಹೊಸ್ತಿಲು ದಾಟುವಾಗ”


ಒಂದೊಂದು ಹೊಸ ವರ್ಷದ
ಹೊಸ್ತಿಲು ದಾಟುವಾಗ ಮುಂದೇನು
ಎಂದು ಹೇಳಲಾಗದಿದ್ದರೂ……
ಅದೇ ಗಾಳಿ; ಮತ್ತದರ ಪಾಳಿ
ದಿಕ್ಕು ಬದಲಿಸಿ
ಕಚಗುಳಿ ಇಡುವ ಚಾಳಿ
ಅದೇ ನೀರು;
ಮಳೆ ಬಂದಾಗ ಹರಿಯುವುದು ಜೋರು
ಇಲ್ಲದಿರೆ ಬರದ ಕಾರು-ಬಾರು
ಅದೇ ಬೆಳಕು; ಜ್ಞಾನದ ಸೆಳಕು ಮಡಿ-ಮೈಲಿಗೆಯಿಂದಾಗಿದೆ
ಭಯಂಕರ ಕೊಳಕು
ಅದೇ ಭಾನು;
ಮೋಡಗಳ ಹಾಜರಿ
ಗೈರು ಹಾಜರಿಯ ನಡುವೆ ಕಮಾನು ಕಟ್ಟಿದ ಬಾನು
ಅದೇ ಹಗಲು;
ಸಕಲ ಜೀವ ಸಂಕುಲದ ಹೆಗಲು
ಹೆಜ್ಜೆಯ ಗೆಜ್ಜೆಯ ತುಂಬಾ ದಿಗಿಲು
ಅದೇ ಇರುಳು;
ಒಡಲು ತುಂಬುವ ಕರುಳು
ಕನಸಿನ ಕಿಟಕಿಯಿಂದ ಕಾಣುವ
ನನಸು ಮಾಡುವ ಮನದ
ಮಾತುಗಳ ತಿರುಳು
ಅದೇ ನೆಲ;
ಬಿತ್ತಿದಂತೆ ಬೆಳೆಯುವ ಹೊಲ
ದೇಕರಿಕೆಗೆ ತಕ್ಕಂತೆ ಸಿಕ್ಕುವುದು ಫಲ
ಅದೇ ಗೋಡೆಗೆ ನೇತು ಹಾಕುವ
ಹೊಸ ವರ್ಷದ ಕ್ಯಾಲೆಂಡರ್
ಸಾರಿ ಹೇಳುತ್ತದೆ; ಬದಲಾವಣೆ ಜಗದ ನಿಯಮ
ಇಂತಿರಲು……..
ಕುಡಿದು, ತಿಂದು, ಕೇಕೆ ಹಾಕಿ
ಚರಂಡಿಗೆ ಬಿದ್ದು, ಹೊರಳಾಡಿ ಎದ್ದು
ಮನೆಗೆ ತಲುಪಿದಾಗ ಚಂದ್ರನೂರಿನಲ್ಲಿ ನಕ್ಷತ್ರಗಳ ಚಪ್ಪಾಳೆ ಸದ್ದು
ಭೂಮಿಗೆ ಮುಟ್ಟಿತ್ತು
ಯಥಾ ಪ್ರಕಾರ ಮುಂಜಾವಿಗೆ
ಕೋಳಿ ಕೂಗಿತ್ತು
ಹೊಸ ವರ್ಷದ ಹೊಸ್ತಿಲು ದಾಟುವಾಗ
ವಿನಾಕಾರಣ ಎಡವಿ ಬೀಳದಿರಲಿ,
ಜಗತ್ತಿಗೆ ಕೇಡುಗಳು ಬಾರದಿರಲಿ,
ಎಲ್ಲರಿಗೂ ಶುಭವಾಗಲಿ…
ಮಹಾಂತೇಶ್.ಬಿ.ನಿಟ್ಟೂರು




Timely one super