ಕಾವ್ಯ ಸಂಗಾತಿ
ಸರಸ್ವತಿ ಕೆ.ನಾಗರಾಜ್
“ಭಾವ ಲಹರಿ”


ಗೀಚಿದ್ದೆಲ್ಲವೂ ಕವಿತೆಯಲ್ಲ,
ಕೆಲವೊಮ್ಮೆ ಅದು ಆತ್ಮದ ಬಿಕ್ಕಳಿಕೆ;
ಮಾತಿಗೆ ಮಣಿಯದ ಮೌನದ ಭಾರ,
ಅಕ್ಷರಕ್ಕಿಳಿದಾಗ ಸಿಗುವ ಸಮಾಧಾನದ ತಣಿಕೆ.
ಹೃದಯದ ಗೂಡಲಿ ಬಂಧಿಯಾದ ಭಾವ,
ಶಬ್ದಗಳ ನೆಪದಲ್ಲಿ ರೆಕ್ಕೆ ಬಿಚ್ಚುತ್ತವೆ;
ಹೇಳಲಾಗದ ಸಾವಿರ ನೋವು,ನಲಿವು,
ಸಾಲಿನ ಮಧ್ಯದ ಖಾಲಿ ಜಾಗದಲ್ಲಿ ಅಡಗುತ್ತವೆ.
ಕವಿತೆಯೆಂದರೆ ಬರಿ ಪದಗಳ ಜೋಡಣೆಯಲ್ಲ,
ಅದು ಅಂತರಾತ್ಮದ ಅವ್ಯಕ್ತ ರೋದನೆ;
ಹೇಳಲಾಗದ ಭಾವನೆಗಳು ಲೇಖನಿಯ ತುದಿಗಿಳಿದಾಗ,
ಅದಕ್ಕೇ ಹೆಸರಿಡುವುದು ಈ ಜಗತ್ತು ‘ಕವನ’ವೆಂದು.
ಅರ್ಥವಾಗದ ಮೌನವೆ ಇಲ್ಲಿ ಹೆಚ್ಚು,
ಆ ಮೌನಕ್ಕೆ ಭಾಷೆಯ ಹಂಗಿಲ್ಲ;
ಮೌನವಾಗಿ ಬರೆಯುವವನ ಎದೆಯ ಭಾರ ಇಳಿದಾಗ ಮಾತ್ರ,
ಅಲ್ಲಿ ಕವಿತೆಯಾಗುತ್ತದೆ,
ಸರಸ್ವತಿ ಕೆ ನಾಗರಾಜ್.



