ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
“ಹೊಸ ವರ್ಷ”


ಮದಿರೆಯ ಮತ್ತಿನಲ್ಲಿ ತೇಲುವವರು ,
ಮಂಗಾಟದ ಮಂಪರಿನಲ್ಲೆ ಇರುಳ
ಕಳೆಯುವವರು ,
ಹಾದಿ ಬೀದಿಯಲಿ ಬಿದ್ದು ಹೊರಳಾಡುವವರು ,
ಮೈ ಮನದ ಮಲೀನತೆಯಲಿ
ಮುಳುಗಿದವರು ,
ಸಂಭ್ರಮಿಸುವ ಹೊಸ ವರ್ಷ…
ಹೊತ್ತಿನ ತುತ್ತಿಗೆ ಹಾತೊರೆಯುವವರು ,
ಹಲುಬುವ ಹಸುಳೆಗೆ ಹಾಲುಣಿಸಲು
ಹೆಣಗುವವರು ,
ಹೊತ್ತಿ ಉರಿಯುವ ಬಿಸಿಲಲಿ
ಬೇಯುವವರು ,
ಕೋರೆವ ಚಳಿಯಲಿ ಚಡಪಡಿಸುವವರು ,
ಮೈ ಮಾನ ಮುಚ್ಚಲು ಏಗುವವರು ,
ಬೇಸರಿಸಿದರೆ ಬೇಯದಿರುವ ಕೂಳು
ಎಂದು ನಿಟ್ಟುಸಿರು ಬಿಡುವವರು ,
ಎಷ್ಟು ಹೊಸ ವರ್ಷ ಬಂದರೆನು , ಹೋದರೆನು
ಇಂತಹ ಶಾಪಗ್ರಸ್ತರಿಗೆ ಎಂದು ಬರುವುದು
ಹೊಸ ವರ್ಷ ?
ಇವರೆಂದು ಕಾಣುವುದು ಹೊಸ ಕನಸ ?
ಪರವಿನ ಬಾನು ಯಲಿಗಾರ



