ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
“ಜಾತ್ರೆಯೊಂದು ಮುಗಿದಿತ್ತು”


ಜಂಭದಿಂದ , ಗತ್ತು ತೋರಿದ್ದ ,
ಡೊಳ್ಳು , ನಗಾರಿಯ ಸದ್ದು
ಮೂಲೆ ಸೇರಿತ್ತು.
ಹಗಲು , ರಾತ್ರಿ ಗಂಟಲು
ಅರಚಿಕೊಂಡ ಧ್ವನಿವರ್ಧಕ ,
ತಣ್ಣಗಾಗಿದ್ದವು.
ತಮ್ಮ ಸರಕಿಗೆ ಬೆಲೆ ಕೂಗಿದ
ಮಾರಾಟಗಾರರು , ಹುರುಪಿನಿಂದ
ಲಾಭ ನಷ್ಟದ ಲೆಕ್ಕದಲ್ಲಿದ್ದರು.
ಮನೆ , ಮನೆಗಳಲ್ಲಿ ತುಂಬಿದ
ನೆಂಟರು , ನಕ್ಕು ನಲಿದು
ಸ್ವ ಊರಿಗೆ ಮುಖ ಮಾಡಿದರು.
ಊರಿನ ಹಾದಿ , ಬೀದಿಯಲಿ
ಕಸದ ರಾಶಿ ಸಣ್ಣಗೆ ಕೊಳೆತು
ಗಬ್ಬು ನಾರಲು ಶುರುವಾಯಿತು .
ದಣಿವರಿಯದೇ ಹುರುಪಿನಿಂದ
ಸಿಂಗರಿಸಿಕೋಂಡು , ಅತ್ತಿತ್ತ ಸುಳಿದ
ತರುಣ , ತರುಣೀಯರು ಸುಸ್ತಾಗಿದ್ದರು
ಉತ್ಸವದಲ್ಲಿ ಪಲ್ಲಕ್ಕಿ ಹೊತ್ತವರು
ಪುನೀರಾದೆವೆಂದು ಬೀಗಿದ್ದರು ,
ಮೂರ್ತಿ ಮಾತ್ರಾ ಶಾಂತವಾಗಿತ್ತು.
ಗುಡಿಯಲ್ಲಿರುವ ದೇವರು
ಜಾತ್ರೆಗೆ ಬಂದ ಭಕ್ತರ
ಪಾಪ – ಪುಣ್ಯಗಳ ಲೆಕ್ಕಾಚಾರದಲ್ಲಿದ್ದ.
ಮುಗಿದಿದ್ದ ಜಾತ್ರೆ ಬರೀ ದೇವರದ್ದಲ್ಲ ,
ಮುಂದೊಂದು ದಿನ,
ನಮ್ಮ ಬದುಕಿನದ್ದೂ ಸಹ .
ಇದ್ದಾಗಿನ ಸದ್ದು ಗದ್ದಲ ಒಮ್ಮೆಗೆ
ನಿಶ್ಯಬ್ದವಾಗುತ್ತದೆ , ಆತ್ಮವೆಂಬ ದೇವರು
ಪಾಪ – ಪುಣ್ಯಗಳ ತೂಕ ಹಾಕುವುದು….
ಪರವಿನಬಾನು ಯಲಿಗಾರ



