ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
“ನಾನು ಬಸವನ ಒಕ್ಕಲು”


ಇನ್ನು ಇದೆ ಹೇಳುವುದು…
ಕೇಳಿಕೊಳ್ಳಿ ಬಂಧುಗಳೇ
ನಿಮ್ಮ ಜೊತೆ ಬಹುಪಾಲು ವಿಷಯ
ಹಂಚಿಕೊಳ್ಳಬೇಕಿದೆ
ಸಮಯ ಗಮನ ಕೊಟ್ಟು ಕೇಳಿ
ನಾನು ನೀವು ಇಲ್ಲಿ ಬದುಕ ಬೇಕಿದೆ.
ಮೋಸ ವಂಚನೆ ಸುಳ್ಳುಗಳು
ಅಧಿಕಾರ ಹಿಡಿದಿರುವಾಗ
ಹತ್ತಿಕುವುದು ದಮನಿಸುವುದು
ಕಾನೂನು ಕಟ್ಟಳೆಯಾಗಿವೆ
ಸತ್ಯಕ್ಕೆ, ನ್ಯಾಯಕ್ಕೆ ಸಂಘರ್ಷಕೆ
ಇನ್ನೂ ಇದೆಯಾ ಬದುಕು?
ಸತ್ಯವ ನುಡಿದರೆ
ಭಯೋತ್ಪಾದಕ ಎನ್ನುವರು
ನ್ಯಾಯವ ಕೇಳಿದರೆ
ನಗರ ನಕ್ಷಲೈಟ್ ಎನ್ನುವರು
ಮಾರಾಟವಾಗಿವೆ ಕೋರ್ಟ್ ಕಚೇರಿ
ಹಕ್ಕಿಗೆ ಕೂಗುವ ಹಾಗಿಲ್ಲ
ಧ್ವನಿ ಎತ್ತುವ ಹಾಗಿಲ್ಲ
ಚಳುವಳಿ ಮಾಡುವ ಸ್ಥಿತಿಯಿಲ್ಲ
ಪೊಲೀಸರ ಗುಂಡು ಬೂಟಿನ ಸದ್ದು
ರಾತ್ರಿಗೆ ಹಗಲೆನ್ನಬೇಕು
ಕೋಳಿಗೆ ನವಿಲೆನ್ನಬೇಕು
ಬುದ್ಧ ಬಸವ ಎಂದರೆ
ತಾಲಿಬಾನಿ ಎನ್ನುವರು
ಜಾತಿ ಧರ್ಮದ ದ್ವೇಷ ಬಿತ್ತುವರು
ವೋಟಿನ ಮಾರುಕಟ್ಟೆಗೆ
ಬಿಕರಿಯಾಗಿವೆ ಮಠ ಮಸೀದಿ
ಚರ್ಚ್ ವಿಹಾರ ಬಸದಿಗಳು
ಇನ್ನೂ ಇದೆಯಾ ಭವಿಷ್ಯ ?
ದೇಶ ಹತ್ತಿ ಉರಿಯುತ್ತಿದೆ
ರಾಜರ ವಿದೇಶಿ ಪ್ರವಾಸ
ಮಂತ್ರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ
ಬುದ್ಧಿ ಜೀವಿಗಳ ಗಾಢ ನಿದ್ದೆ
ಪತ್ರಿಕೆ ಟಿವಿ ನೋಡುವ ಜನರು
ಇನ್ನೂ ಎದ್ದಿಲ್ಲ ದೇಶಕ್ಕೆ ನಾಡಿಗೆ
ದಸರಾ ಪಲ್ಲಕ್ಕಿಯಲಿ ಮೆರವಣಿಗೆ
ಸೋತವರ ಸತ್ತವರ ಗೊಂಬೆ ಕುಣಿತ
ಪೊಲೀಸರ ಕವಾಯತ ನಮನ
ಆನೆ ಒಂಟಿ ಕುದುರೆ ಸವಾರಿ
ಮೋಸವೋ ಮೋಜು ಗೊತ್ತಾಗುತ್ತಿಲ್ಲ
ಕೂಗುವ ಹಾಗಿಲ್ಲ ಶೋಷಕರ ವಿರುದ್ಧ
ಇಂಕಿಲಾಬ್ ಘೋಷಣೆ
ಒಬ್ಬನ ಸುಡಲು ಸಿದ್ಧ
ನೂರು ಕೆಜಿ ಸಿಡಿ ಮದ್ದು
ನ್ಯಾಯಕ್ಕೆ ಬೆಲೆಯಿಲ್ಲ ಜಾಮೀನಿಲ್ಲ
ಸತ್ಯವಂತರ ಹತ್ಯೆ ನಿತ್ಯ ನಡೆದಿವೆ
ಅದಕೆಂದೇ ನಾನೂ
ಕೂಗಿ ಹೇಳುತ್ತೇನೆ…
ನಾನು ಬಸವ ಧರ್ಮಿ
ಗಣಾಚಾರವೇ ನನ್ನ ಅಸ್ತ್ರ
ನಾನು ಇರುಳಿಗೆ ಹಗಲೆನ್ನುವುದಿಲ್ಲ
ಕೋಳಿಗೆ ನವಿಲೆನ್ನುವುದಿಲ್ಲ
ಈಗ ಮುಸ್ಸಂಜೆ ಕರಾಳ
ಕತ್ತಲೆಯಾಗುವುದು
ಜೈಲಿನ ಬಿರುಕು ಗೋಡೆಯಲ್ಲಿ
ಚಿಗುರಿದೆ ಬುದ್ಧನ ಅರಳಿ ಮರ
ಮುಂಜಾನೆ ಕ್ರಾಂತಿಯ ಸೂರ್ಯ
ಮತ್ತೆ ಹುಟ್ಟುವನು
ಭ್ರಮೆ ಭ್ರಾಂತಿ ಅಳೆದು
ಬನ್ನಿ ಎದ್ದೇಳಿ ದುಷ್ಟ ಕಾರಸ್ಥಾನಕ್ಕೆ
ಬಲಿಯಾದವರ ಉಳಿಸ ಬನ್ನಿ
ನಿಮ್ಮ ಹಕ್ಕಿಗೆ ಘೋಷಣೆಯಾಗ ಬನ್ನಿ
ಬುದ್ಧ ಬಸವ ಬಾಪು ಬಾಬಾಸಾಹೇಬರ
ಮತ್ತೆ ಭುವಿಗೆ ಹೊತ್ತ ತನ್ನಿ
ನಾನು ಬಸವನ ಒಕ್ಕಲು
ಬಸವ ಪಥಿಕ ಬಸವ ಧರ್ಮಿ
ಎದ್ದು ಬನ್ನಿ ಗುದ್ದು ಬನ್ನಿ
ಅಸಮತೆ ಅನ್ಯಾಯ ಶೋಷಣೆಗೆ
ಕೊನೆ ಹೇಳೋಣ ಬನ್ನಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




ಅತ್ಯಂತ ಅಪರೂಪದ ವಾಸ್ತವಿಕ ನೆಲೆಗಟ್ಟಿನ ಕವನ ಸರ್
ನಿಜಕ್ಕೂ ಅಕ್ಷರ ಸಹ ಸತ್ಯ ಸರ್. ಹೀಗೆ ಸಾಗಿರುವದು ಜಗತ್ತು. ಆ ಬ್ರಾಂತಿ ಬಿಟ್ಟು ಹೊರಬರಲು ಕರೆ ನೀಡಿರುವಿರಿ ಅದಕ್ಕೆ ನಮ್ಮ ಬೆಂಬಲ ಇದೆ.
ಅತ್ಯುತ್ತಮ ಕ್ರಾಂತಿಕಾರಿ ಕವನ ಸರ್
ಸಿದ್ದು ಪಾಟೀಲಕ್
ಉತ್ತಮ ಕವನ ಮತ್ತು ವಾಸ್ತವ ಅನುಭವವನ್ನು ಹಂಚಿಕೊಂಡ ಶ್ರೇಷ್ಠ ಪರಿಪೂರ್ಣ ಅಭಿವ್ಯಕ್ತಿ
ನಾವೂ ಬಸವನ ಒಕ್ಕಲು ಆಗುವ ಸಮಯ ಬಂದಿದೆ ಸರ್
Excellent poem By Dr Shashikant Pattan Sir
ಕ್ರಾಂತಿಕಾರಕ ಸಂಘರ್ಷಗಳಲ್ಲಿ ಹೊಸ ವರ್ಷದ ಭರವಸೆ ಮೂಡಿಸುವ ಈ ನಿಮ್ಮ ಕವನ ಸರ್
ಉತ್ತಮ ಕವನ ಮತ್ತು ವಾಸ್ತವಿಕ ಮಾಹಿತಿ ನೀಡುವ ಕವನ
ಕ್ರಾಂತಿಕಾರಕ ಮೌಲಿಕ ಕವನ
ಸಂಘರ್ಷಮಯ ಕ್ರಾಂತಿಗೆ ಚೇತಾವಣಿ ನೀಡುವ ಕವನ ಸರ್
Bhala channagi mudi bandide
Truly revolutionary poem great poetry by Dr Shashikant Pattan Sir
ಅರ್ಥಪೂರ್ಣ ಕಾವ್ಯ ಸರ್
ನಿಮ್ಮ ಕ್ರಾಂತಿಕಾರಿ ನುಡಿಗಳು,ಕಹಿ,ಕಠೋರ, ಸತ್ಯವನ್ನು ಮರೆಮಾಚಲು ಆಗದು.ನಿಮ್ಮ ಬತ್ತಳಿಕೆಯಲ್ಲಿ ಹೊರಹೊಮ್ಮಿವೆ ನಿಜ ಅರ್ಥದಲ್ಲಿ ಇದೆ. ಆ ಭ್ರಾಂತಿ ಬಿಟ್ಟು ,ಸಾಗೋಣ ಬಸವಾದಿ ಶರಣರ ಬೆಂಬಲ ನಿಮಗಿದೆ.
ನಾನು ಬಸವನ ಒಕ್ಕಲು… ಕವನದ ಶೀರ್ಷಿಕೆಯಲ್ಲಿಯೇ ಎಲ್ಲವೂ ಅಡಗಿದೆ
ಸರ್
ಅಸಮತೆ ಮತ್ತು ಅನ್ಯಾಯದ ಶೋಷಣೆಯ ವಿರುದ್ಧ ನಾವೆಲ್ಲರೂ ಒಂದಾಗುವ ಕಾಲ ಕೂಡಿ ಬಂದಿದೆ ಎಂದು ಎಚ್ಚರಿಕೆ ನೀಡುವ ಕವನ ಎಲ್ಲರೂ ವಿಚಾರ ಮಾಡುವಂತೆ ಮಾಡಲು ಮುಂಚೂಣಿ ವಹಿಸುವಂತಿದೆ
ಸುಧಾ ಶಿವಾನಂದ