ಜೀವನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಜಪಾನೀಯರ ದೀರ್ಘಾಯುಷ್ಯದ ಗುಟ್ಟು”


ಇತ್ತೀಚಿಗಿನ ವರದಿಯ ಪ್ರಕಾರ ಜಪಾನಿನಲ್ಲಿ 95,000ಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಆರೋಗ್ಯವಾಗಿ ಓಡಾಡಿಕೊಂಡು ತಮ್ಮ ದೈನಂದಿನ ಬದುಕನ್ನು ನಡೆಸುತ್ತಿರುವ ಅವರನ್ನು ನೋಡಿದಾಗ ಅಬ್ಬಾ ಎಂಥ ಅದೃಷ್ಟವಂತರು ಇವರು ಎಂದು ನಮಗೆ ಅನಿಸಿದರೆ ತಪ್ಪಿಲ್ಲ.
ಆದರೆ ಇಲ್ಲಿ ಕೇವಲ ಅದೃಷ್ಟದ ಪಾಲು ಇಲ್ಲ. ದೀರ್ಘಾಯುಷ್ಯ ಅವರ ವಂಶವಾಹಿಗಳಲ್ಲಂತೂ ಮೊದಲೇ ಇಲ್ಲ….. ಹಾಗಿದ್ದರೆ ಅವರ ದೀರ್ಘಾಯುಷ್ಯದ ಗುಟ್ಟೇನು? ಎಂದು ಕೇಳಿದರೆ
ಅವರ ಶಾಂತ ಸ್ವಭಾವ, ಉದ್ದೇಶ ಹಾಗೂ ಆಳವಾದ ಬುದ್ದಿವಂತಿಕೆ ಎಂದು ಹೇಳಬಹುದು.
ಬದುಕಿನಲ್ಲಿ ಅವರ ಕೆಲವು ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳೋಣ
* ಅವರು ಅತ್ಯಂತ ಧಾನಪೂರ್ವಕವಾಗಿ ಆಹಾರವನ್ನು ಸೇವಿಸುತ್ತಾರೆ ಹಾಗೂ ಅನವಶ್ಯಕವಾಗಿ ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ
ಅವರು ಸೇವಿಸುವ ಆಹಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
ತಾಜಾ ಆಗಿರುವ, ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ, ಹಣ್ಣು, ಆಹಾರಗಳನ್ನು ಅವರು ಸೇವಿಸುತ್ತಾರೆ.
ಸಾಧ್ಯವಿದ್ದಷ್ಟು ತರಕಾರಿಗಳು, ಅಕ್ಕಿ, ಮೀನು ಹಾಗೂ ಹುದುಗು ಬರಿಸಿದ ಆಹಾರ ಪದಾರ್ಥಗಳು ಅವರ ಮೊದಲ ಆದ್ಯತೆ.
ತಮ್ಮ ಅವಶ್ಯಕತೆಯ 80% ನಷ್ಟು ಆಹಾರವನ್ನು ಮಾತ್ರ ಅವರು ಸೇವಿಸುತ್ತಾರೆ…. ಅಂದರೆ ಹೊಟ್ಟೆ ತುಂಬುವ ಮುನ್ನವೇ ಅವರು ಆಹಾರ ಸೇವನೆಯನ್ನು ನಿಲ್ಲಿಸುತ್ತಾರೆ.
‘ಹರಾ ಹಚೀ ಬು’ ಎಂದರೆ ನಿಮ್ಮ ಅವಶ್ಯಕತೆಯ ಕೇವಲ 80 ಶೇಕಡಾ ಆಹಾರವನ್ನು ನೀವು ಸೇವಿಸಿ ಎಂಬ ನಿಯಮವನ್ನು ಅವರು ಪಾಲಿಸುತ್ತಾರೆ.
*ಸಾಮಾನ್ಯವಾಗಿ ಅವರು ಅತ್ಯಂತ ಸಹಜವಾಗಿ, ನೈಸರ್ಗಿಕವಾಗಿ ಪ್ರತಿದಿನ ನಡೆದಾಡುತ್ತಾರೆ.
ಮನೆಯ ಕೈದೋಟಗಳನ್ನು ನಿರ್ವಹಿಸುತ್ತಾ ಓಡಾಡುತ್ತಾರೆ.
ಇತರರನ್ನು ಅವಲಂಬಿಸದೆ ಮನೆಯ ಸ್ವಚ್ಛತೆಯನ್ನು ತಾವೇ ಮಾಡಿಕೊಳ್ಳುತ್ತಾರೆ.
ಚಿಕ್ಕ ಪುಟ್ಟ ದೂರವನ್ನು ಮಾತ್ರವಲ್ಲದೆ ತುಸು ಹೆಚ್ಚಿನ ದೂರವನ್ನು ಕೂಡ ಅವರು ನಡೆದು ಪೂರೈಸುತ್ತಾರೆ
ಪ್ರತಿದಿನ ಕೆಲ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾರೆ.
ಅವರು ವ್ಯಾಯಾಮ ಮಾಡಲು ಜಿಮ್ ನಂತಹ ಯಂತ್ರಗಳ ಅವಲಂಬನೆಯನ್ನು ಮಾಡದೆ ಅತ್ಯಂತ ಸಹಜವಾಗಿ ಅವರು ಓಡಾಡಿಕೊಂಡು ತಮ್ಮ ನಿತ್ಯ ಬದುಕನ್ನು ನಡೆಸುತ್ತಾರೆ.
ಪ್ರತಿದಿನ ಮುಂಜಾನೆ ಬೇಗನೆ ಏಳಲು ಅವರಿಗೆ ಅವರದ್ದೇ ಆದ ಕಾರಣವಿದೆ. ಇಕಿಗಾಯಿ ಎಂದು ಅದಕ್ಕೆ ಹೆಸರು.
ಅದೆಷ್ಟೇ ಚಿಕ್ಕದಾದ ವಸ್ತು, ವಿಷಯವಿರಲಿ ಅದರಲ್ಲಿ ಒಂದು ಉದ್ದೇಶವನ್ನು ಅವರು ಹೊಂದಿರುತ್ತಾರೆ.
ಸದಾ ಚಟುವಟಿಕೆಯಿಂದ ಇರುತ್ತಾರೆ.ಎಂದೂ ನಿವೃತ್ತರಾಗುವುದಿಲ್ಲ. ಸಾಧ್ಯವಾದಷ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಪ್ರತಿ ಹುಟ್ಟುಹಬ್ಬಕ್ಕೂ ಮತ್ತಷ್ಟು ಆರೋಗ್ಯವಂತರಾಗಿರುವ ಆಶಯವನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ.
*ಮಕ್ಕಳನ್ನು, ಮೊಮ್ಮಕ್ಕಳನ್ನು ಕಾಳಜಿ ಮಾಡುವ ಅವರೇ ಎಲ್ಲ ಕೆಲಸ ಕಾರ್ಯಗಳನ್ನು ಅವರು ನಿರ್ವಹಿಸಲು ಸಹಾಯ ಮಾಡುವರು. ಚಿಕ್ಕ ಸಸಿ ಇರಲಿ ದೊಡ್ಡ ಮರವಿರಲಿ ಅದನ್ನು ಕೂಡ ಅತ್ಯಂತ ಕಾಳಜಿ ಪೂರ್ವಕವಾಗಿ ಬೆಳೆಸುತ್ತಾರೆ .
ಸಮಾಜದ ಹಾಗೂ ಸಮುದಾಯದ ಕುರಿತು ಕೂಡ ಅದೇ ಪ್ರಮಾಣದ ಕಾಳಜಿಯನ್ನು ಅವರು ಹೊಂದಿರುತ್ತಾರೆ.
ತಮ್ಮನ್ನು ತಾವು ಅತ್ಯಂತ ಉಪಯುಕ್ತ ಮತ್ತೊಬ್ಬರ ಅವಶ್ಯಕತೆಗೆ ಜೊತೆಯಾಗುವ ಹಾಗೂ ಅವರೊಂದಿಗೆ
ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ
ಅತ್ಯಂತ ಬಲವಾದ ಸಾಮಾಜಿಕ ಬಂಧುಗಳನ್ನು ಕೂಡ
ಅವರು ಕಾಯ್ದುಕೊಳ್ಳುತ್ತಾರೆ
*ಕುಟುಂಬ ಮತ್ತು ನೆರೆಹೊರೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹಾಗೂ ನಿರಂತರ ಸಂಪರ್ಕವನ್ನು ಹೊಂದಿರುತ್ತಾರೆ.
ಹಿರಿಯರಿಗೆ ಅನಾದರ ತೋರದೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.
ಒಂಟಿತನವನ್ನು ಅವರು ಬಯಸುವುದಿಲ್ಲ ಸದಾ ಸಮಾಜದ ಸಮುದಾಯದ ಜೊತೆ ಬೆರೆತು ಅದರ ಆಗುಹೋಗುಗಳಲ್ಲಿ ಒಂದಾಗಿ ನಡೆಯುತ್ತಾರೆ
ಅತ್ಯಂತ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಇದು ಅವರ ನರವ್ಯೂಹವನ್ನು ಶಾಂತಗೊಳಿಸುತ್ತದೆ.
ಬದುಕಿನಲ್ಲಿ ಅತ್ಯಂತ ಕಡಿಮೆ ಅವಶ್ಯಕತೆಗಳು ಹಾಗೂ ಹೆಚ್ಚು ಉಪಯುಕ್ತತೆ ಯನ್ನು ಬಯಸುವ ವ್ಯಕ್ತಿತ್ವ ಅವರದಾಗಿದ್ದು ಅತ್ಯಂತ ನಿಧಾನ ಆದರೆ ಅಷ್ಟೇ ಅರ್ಥಪೂರ್ಣವಾದ ಶೈಲಿಯ ಬದುಕು ಅವರದಾಗಿರುತ್ತದೆ.
ನಿರಂತರವಾಗಿ ಎಲ್ಲವನ್ನು ವಿರೋಧಿಸದೆ ಒಪ್ಪಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ.
ಹಣ, ಆಸ್ತಿ, ಅಂತಸ್ತುಗಳ ಕುರಿತು ಅವರಿಗೆ ವಿಶೇಷ ಮೋಹ ಇರುವುದಿಲ್ಲ. ಇತರರೊಂದಿಗೆ ಹೋಲಿಕೆ ಮಾಡಿಕೊಂಡು ವ್ಯಥೆ ಪಡುವ ಸ್ವಭಾವ ಕೂಡ ಅವರದಲ್ಲ.
* ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಅವರದ್ದು
ಮನೆಯಲ್ಲಿ ಅತಿಯಾಗಿ ಲೈಟುಗಳನ್ನು ಫ್ಯಾನುಗಳನ್ನು ಉರಿಸುವುದಿಲ್ಲ ನೈಸರ್ಗಿಕ ಗಾಳಿ, ಬೆಳಕನ್ನು ಹೆಚ್ಚು ಆಸ್ವಾದಿಸುತ್ತಾರೆ.
ಅವರ ದಿನಚರ್ಯ ಹಾಗೂ ಋತುಚರ್ಯಗಳಿಗೆ ಅನುಸಾರವಾಗಿ ಬದುಕನ್ನು ನಡೆಸುತ್ತಾರೆ.
ಬದುಕಿನ ಕುರಿತು ಅಪಾರ ಗೌರವವನ್ನು ಹೊಂದಿರುವ ಅವರು ಆಹಾರ ಸೇವನೆಯ ಕುರಿತು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರುತ್ತಾರೆ ಯಾವುದನ್ನೇ ಆಗಲಿ ಪೋಲು ಮಾಡದೆ ಬಳಸುವ ರೂಢಿಯನ್ನು ಹೊಂದಿರುತ್ತಾರೆ.
ತಮ್ಮ ದೇಹದ ಕುರಿತು ಕೂಡ ಅಷ್ಟೇ ಕಾಳಜಿ, ಗೌರವವನ್ನು ಹೊಂದಿದ್ದು ಪ್ರೀತಿಪೂರ್ವಕ ಪೋಷಣೆ ಅವರದ್ದಾಗಿರುತ್ತದೆ.
*ಸಂತೋಷಕ್ಕಾಗಿ ಅವರು ಹಪಹಪಿಸುವುದಿಲ್ಲ ಬೆನ್ನತ್ತುವುದಿಲ್ಲ…. ಅವರು ಬದುಕಿನಲ್ಲಿ ಸಮತೋಲನವನ್ನು ಇಚ್ಚಿಸುತ್ತಾರೆ ಹಾಗೂ ಅದನ್ನೇ ಅಳವಡಿಸಿಕೊಳ್ಳುತ್ತಾರೆ.
ಅವರು ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ
ಬದುಕಿನ ತಾತ್ಕಾಲಿಕ ವಿಷಯ ಸುಖಗಳ ಕುರಿತು ಅವರಿಗೆ ಅರಿವು ಇದ್ದು ಅಶಾಶ್ವತತೆಯನ್ನು ಒಪ್ಪಿಕೊಂಡು ಬಾಳುತ್ತಾರೆ.
ಯಾವುದೇ ರೀತಿಯ ದ್ವೇಷ ಅಸಹನೆ ಅಸಮಾಧಾನಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಮಾನಸಿಕವಾಗಿ ಬೇಯುವುದಿಲ್ಲ…. ಹೋಗಲಿ ಬಿಡು ಎಂದು ವಿಷಯಗಳನ್ನು ಅವು ಇರುವಂತೆಯೇ ಒಪ್ಪಿ ಅಪ್ಪಿಕೊಳ್ಳುತ್ತಾರೆ.
ನೋಡಿದಿರಾ ಸ್ನೇಹಿತರೆ,
ಬುದ್ಧನ ಎಲ್ಲ ಬೋಧನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಅವರು
ಹೇರಳತೆಯ ವಿರುದ್ಧ ವಿರಳತೆಯನ್ನು
ಅತಿ ಬಳಕೆಯ ವಿರುದ್ಧ ಸರಳತೆಯನ್ನು
ಭೋಗ ಮತ್ತು ಲಾಲಸೆಯ ಬದುಕಿನ ಮೇಲೆ ಮಿತಿಯನ್ನು
ತಮ್ಮನ್ನು ವಿಚಲಿತಗೊಳಿಸುವ ವಿಷಯಾಸಕ್ತಿಗಳ ಕುರಿತು ಅರಿವನ್ನು ಹೊಂದಿರುತ್ತಾರೆ
ಒಬ್ಬಂಟಿತನದ ವಿರುದ್ಧ ಸಮುದಾಯದ ಜೊತೆಗಿನ ಭಾಗವಹಿಸುವಿಕೆಯನ್ನು ಹೊಂದಿರುತ್ತಾರೆ. ಇವೆಲ್ಲವೂ ಬೌದ್ಧ ಧರ್ಮದ ಬೋಧನೆಯ ಜಾಣ್ಮೆಯನ್ನು ಬದುಕಿನ ಕನ್ನಡಿಯಲ್ಲಿ ಅಳವಡಿಸಿಕೊಂಡು ನಮ್ಮನ್ನು ನಾವು ನೋಡಿಕೊಳ್ಳಲು ಅವರು ಬಳಸುವ ವಿಧಾನಗಳು.
ಅಂತಿಮವಾಗಿ ದೀರ್ಘಾಯುಷ್ಯ ಎಂದರೆ ಬದುಕಿನ ದಿನಗಳಿಗೆ ಮತ್ತಷ್ಟು ಆಯುಷ್ಯವನ್ನು ತುಂಬುವುದು ಅಲ್ಲ.ಮತ್ತಷ್ಟು ಹೆಚ್ಚು ವರ್ಷ ಬಾಳುವುದಂತೂ ಅಲ್ಲವೇ ಅಲ್ಲ…. ಇದು ಬದುಕಿನಲ್ಲಿ ನಮಗೆ ನಿಧಾನ ವಿಷವಾಗಿ ಪರಿಣಮಿಸುವ ವಸ್ತು, ವಿಷಯ ಹಾಗೂ ವ್ಯಕ್ತಿಗಳನ್ನು ನಿರಾಕರಿಸುವ ದೂರವಿಡುವ ಒಂದು ಪ್ರಕ್ರಿಯೆ.
ಹಾಗಾದರೆ ಬದುಕಿನಲ್ಲಿ ನಿಧಾನ ವಿಷವಾಗಿ ಪರಿಣಮಿಸುವ ವಿಷಯಗಳು ಯಾವುವು ಎಂದರೆ
* ಅತಿಯಾದ ಒತ್ತಡ
*ಅತಿಯಾದ ಆಹಾರ ಸೇವನೆ
*ಒಬ್ಬಂಟಿತನ
*ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವುದು / ಆತುರತೆಯನ್ನು ತೋರುವುದು
*ಅರ್ಥ ರಹಿತ ಬದುಕನ್ನು ನಡೆಸುವುದು ಹಾಗೂ ಅಂತಿಮವಾಗಿ ಇನ್ನೊಬ್ಬರೊಂದಿಗೆ ನಮ್ಮ ಬದುಕನ್ನು ಹೋಲಿಸಿಕೊಂಡು ವ್ಯಕ್ತಪಡುವುದು
ಸ್ನೇಹಿತರೇ…ಜಪಾನೀಯರು ದೀರ್ಘಾಯುಷಿಗಳಾಗಲು ಕಾರಣ ಅವರು ಹೆಚ್ಚೇನು ಮಾಡಿಲ್ಲ ಬದಲಾಗಿ ಜಾಣತನದಿಂದ ತಮ್ಮ ಬದುಕನ್ನು ನಡೆಸುವ ಮೂಲಕ ಅನಾವಶ್ಯಕ ವಿಷಯಗಳನ್ನು ದೂರವಿಟ್ಟಿದ್ದಾರೆ.
ಬಹಳಷ್ಟು ಬಾರಿ ದೀರ್ಘಾಯುಷ್ಯದ ಗುಟ್ಟು ಯಾವುದೇ ಔಷಧಿ ಚಿಕಿತ್ಸೆಗಳಲ್ಲಿ ಇಲ್ಲ… ಬೇರೆಯವರು ನಮ್ಮ ಕುರಿತು ಗಮನ ಹರಿಸದೇ ಇದ್ದಾಗಲೂ ಕೂಡ ನಾವು ಹೇಗೆ ನಮ್ಮ ಬದುಕನ್ನು ನಡೆಸುತ್ತೇವೆ ಎಂಬುದು ನಮ್ಮ ದೀರ್ಘಾಯುಷ್ಯದ ಗುಟ್ಟಾಗಿರಬೇಕು.
ವೀಣಾ ಹೇಮಂತ್ ಗೌಡ ಪಾಟೀಲ್



