ಗಜಲ್ ಸಂಗಾತಿ
ಡಾ. ಮಲ್ಲಿನಾಥ ಎಸ್. ತಳವಾರ
“ಗಜಲ್ ಮನಸುಗಳಿಗಾಗಿ,
ಗಜಲ್ ಕುರಿತು
ಒಂದಿಷ್ಟು ವಿಚಾರಗಳು.”


ಎಲ್ಲರಿಗೂ ನಮಸ್ಕಾರಗಳು…
ಗಜಲ್.. ಇದು ಕೇವಲ ಕಾವ್ಯ ಪ್ರಕಾರವಲ್ಲ, ಇದೊಂದು ಜೀವನ ಶೈಲಿ, ತಹಜೀಬ್ ಹಾಗೂ ಸಂವೇದನೆಗಳ ಒಂದು ಭಾಗ. ಹೃದಯದ ಆಳದಿಂದ ಹೊರಬರುವ ನಿಜವಾದ ಧ್ವನಿ. ಇದು ಭಾವನೆಗಳು, ಪ್ರೀತಿ, ನೋವು ಮತ್ತು ಭರವಸೆಯ ಸುಂದರ ಅಭಿವ್ಯಕ್ತಿ. ಇದೊಂದು ಎಕ್ಸರೇ ಇದ್ದಂತೆ, ನಮ್ಮೊಳಗಿನ ಗಾಯ ತೋರಿಸಿ ಅರಿತುಕೊಳ್ಳಲು ಸಹಕರಿಸುತ್ತದೆ.
ಗಜಲ್… ಕನ್ನಡದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ಹೆಚ್ಚೆಚ್ಚು ಓದುಗರನ್ನೂ- ಬರಹಗಾರರನ್ನು ಸೆಳೆಯುತ್ತಿರುವ ಕಾವ್ಯ ಪ್ರಕಾರ. ಕನ್ನಡದ ಭಾಗಶಃ ಸಾಹಿತ್ಯಾಸಕ್ತರು ಗಜಲ್ ಗಳನ್ನು ಬರೆಯಲು, ಓದಲು ಹಾಗೂ ಗಜಲ್ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ. ಇಂಥ ಗಜಲ್ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿ ಅರ್ಧ ಶತಮಾನವೇ ಉರುಳಿದೆ. ಇಂದು ಗಜಲ್ ಕಾವ್ಯ ಪ್ರಕಾರ ಅಸಂಖ್ಯಾತ ಸಹೃದಯಿಗಳಿಂದ ಕನ್ನಡ ಸಾಹಿತ್ಯ ಪರಪಂಚದಲ್ಲಿ ಸಕ್ರೀಯವಾಗಿದೆ. ಈ ಗಜಲ್ ಕಾವ್ಯ ಪ್ರಕಾರ ಹತ್ತು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಆಂತರಿಕ ಹಾಗೂ ಬಾಹ್ಯ ಲಕ್ಷಣಗಳೆಂದು ವಿಂಗಡಿಸಲಾಗಿದೆ. ಇಂದು ನಾವು ಈ ಲಕ್ಷಣಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ, ಅಳವಡಿಸಿಕೊಳ್ಳುತಿದ್ದೇವೆ ಹಾಗೂ ಆ ದಿಸೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಮತ್ಲಾ, ಮಕ್ತಾ, ರದೀಫ್ ಹಾಗೂ ಕಾಫಿಯಾ… ಇವು ಗಜಲ್ ನ ನಾಲ್ಕು ಅಂಗಗಳು. ಇವುಗಳಲ್ಲಿ ‘ರದೀಫ್’ ಐಚ್ಛಿಕವಾಗಿದ್ದು, ಉಳಿದವುಗಳು ಗಜಲ್ ನ ಜೀವಾಳವಾಗಿವೆ. ಇವುಗಳ ಹೊರತು ಗಜಲ್ ರಚನೆಯಾಗದು. ಯಾರಾದರೂ ಬರೆದಿದ್ದಾರೆ, ಬರೆಯುತ್ತಾರೆ ಎಂದರೆ ಅದು ಗಜಲ್ ಎಂದೆನಿಸಿಕೊಳ್ಳದೆ, ಕಾವ್ಯ ಎಂದೆನಿಸಿಕೊಳ್ಳುವುದು!
ಗಜಲ್ ಮೂಲಭೂತವಾಗಿ ಷೇರ್ ಮಾದರಿಯಲ್ಲಿ ಇರುವಂತದ್ದು. ಈ ಷೇರ್ ನ ಪ್ರತಿ ಮಿಸ್ರಾ ಸ್ವತಂತ್ರವಾಗಿದ್ದು, ಒಂದಕ್ಕೊಂದು ಪೂರಕವಾಗಿಯೋ ಅಥವಾ ವಿರುದ್ಧಮುಖವಾಗಿಯೊ ಇರಬೇಕು. ಮಿಸ್ರಾ-ಎ-ಊಲಾದ ಕೊನೆಯಲ್ಲಿಯ ಕೌತುಕತೆ ಮಸ್ರಾ-ಎ-ಸಾನಿಯ ಆರಂಭದಲ್ಲಿ ರೂಪ ಪಡೆಯಬೇಕು. ಅವು ಒಂದರೊಳಗೊಂದು ತಳುಕು ಹಾಕಿಕೊಂಡಿರಬಾರದು. ಇದುವೇ ಕಾವ್ಯವನ್ನು ‘ಗಜಲ್’ ಆಗಿಸುವತ್ತ ಮುನ್ನಡೆಯುತ್ತದೆ. ಇಂಥ ಗಜಲ್ ಗೆ ‘ಮತ್ಲಾ’ ತುಂಬಾ ಅವಶ್ಯಕ. ಇದು ಮನೆಗೆ ಹೊಸ್ತಿಲು ಇರುವಂತೆ! ಇನ್ನೂ ‘ಮತ್ಲಾ’ ಅಂದರೆ ಆರಂಭ, ಉದಯ ಎಂದರ್ಥ. ಇಲ್ಲಿ ಏನು ಹೇಳಬೇಕಾಗಿದೆ ಎನ್ನುವುದರ ನಿರ್ಣಯ, ಗಜಲ್ ಕಾರರ ಉದ್ದೇಶವಿರುತ್ತದೆ. ಗಜಲ್ ಒಳಗೊಂಡಿರಬಹುದಾದ, ಒಳಗೊಳ್ಳಬಹುದಾದ ವಿಷಯ, ಮೀಟರ್, ವಜನ್, ಬೆಹರ್ ಹಾಗೂ ಕವಾಫಿ (ಕಾಫಿಯಾಗಳು) ಆಯ್ಕೆಯನ್ನು ನಿರ್ಧರಿಸುತ್ತದೆ. ‘ಮತ್ಲಾ’ ಏನು ಒಳಗೊಂಡಿರುತ್ತದೆಯೋ ಅದುವೇ ಇಡೀ ಗಜಲ್ ನ ಉದ್ದಕ್ಕೂ ಬರಬೇಕು. ಅದು ಅಲಾಮತ್ ಆದರೂ ಸರಿ, ಮೀಟರ್, ಬೆಹರ್ ಆದರೂ ಸರಿಯೆ! ಅಂತೆಯೇ ಶಾಯರ್/ಶಾಯರಾ ಆದವರು ಮತ್ಲಾವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡು ಹೋಗಬೇಕು. ಇದೊಂದು ರೀತಿಯಲ್ಲಿ ಗಜಲ್ ನ ಉಳಿದ ಅಶ್ಆರ್ ಗೆ ಸ್ಪಷ್ಟಿಕರಣ ಕೊಡುವ ರೀತಿಯಲ್ಲಿ ಇರುತ್ತದೆ, ಇರಬೇಕು! ಇದು ಗಜಲ್ ನ ಸೌಂದರ್ಯಕ್ಕೆ ಬಾಗಿಲು, ಭಾವ ಲೋಕಕ್ಕೆ ಪ್ರವೇಶದ್ವಾರವಿದ್ದಂತೆ. ಇದು ಅಷ್ಟೊಂದು ಸರಳವಲ್ಲ, ಸುಲಭವೂ ಅಲ್ಲ. ಪ್ರತಿಯೊಬ್ಬರೂ ಇದನ್ನು ‘ಸವಾಲು’ ಎಂದು ಸ್ವೀಕರಿಸಿ ಗಜಲ್ ರಚನೆಗೆ ಮುಂದಾಗಬೇಕು.
‘ಮಕ್ತಾ’ ಎಂದರೆ ಅಂತ್ಯ, ಮುಕ್ತಾಯ. ಗಜಲ್ ಗೆ ‘ಮತ್ಲಾ’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ‘ಮಕ್ತಾ’. ಇದು ಗಜಲ್ ಗೆ ಒಂದು ತಾರ್ಕಿಕ ಹಾಗೂ ಭಾವನಾತ್ಮಕ ಅಂತ್ಯವನ್ನು ನೀಡುತ್ತದೆ. ಅಂದರೆ, ಶಾಯರ್/ಶಾಯರಾ ಅವರ ಇಂಗಿತ, ಆಶಯ ಹಾಗೂ ಉದ್ದೇಶವನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂದರೆ, ಅವರ ಅಂತಿಮ ಮಾತು, ಸಂದೇಶ ಹಾಗೂ ವೈಯಕ್ತಿಕ ಧ್ವನಿಗೆ ವೇದಿಕೆಯನ್ನು ಒದಗಿಸುತ್ತದೆ. ಈ ಷೇರ್ ಓದುತಿದ್ದಂತೆಯೇ ಗಜಲ್ ಮುಗಿಯಿತು ಎಂಬ ಭಾವ ಸಹೃದಯ ಓದುಗರಲ್ಲಿ, ಕೇಳುಗರಲ್ಲಿ ಬರುತ್ತದೆ, ಬರಬೇಕು. ಇಂತಹ ‘ಮಕ್ತಾ’ಗೆ ಇನ್ನೊಂದು ಬಹುಮುಖ್ಯವಾದ ಲಕ್ಷಣವಿದೆ. ಅದೆಂದರೆ ‘ತಖಲ್ಲುಸ’. ತಖಲ್ಲುಸ್ ಅಂದರೆ ಶಾಯರ್/ಶಾಯರಾ ಅವರ ಗುರುತು. ಇಲ್ಲಿ ಅವರು ತಮ್ಮ ಹೆಸರು, ಇಲ್ಲವೇ ತಮ್ಮ ಇಷ್ಟದ ಹೆಸರನ್ನು ಬಳಸುತ್ತಾರೆ. ಇದು ಹೆಚ್ಚಾಗಿ ‘ನಾಮವಾಚಕ’ವಾಗಿಯೇ ಬಳಕೆಯಾಗಿದೆ. ಆದಾಗ್ಯೂ ಈ ತಖಲ್ಲುಸ್ ರೂಪಕವಾಗಿ ಬಳಕೆಯಾದರೆ ‘ಮಕ್ತಾ’ಗೆ ಒಂದು ಅನುಪಮ ಕಳೆ ಬರುತ್ತದೆ. ‘ತಖಲ್ಲುಸ್’ ಬಳಕೆ ಐಚ್ಛಿಕವಾಗಿದ್ದರೂ ಅದರ ಉಪಸ್ಥಿತಿಯೇ ‘ಮಕ್ತಾ’ಗೆ ಅನ್ವರ್ಥಕವಾಗಿದೆ. ಒಂದುವೇಳೆ ಬೇಮಕ್ತಾ ಷೇರ್ ಇದ್ದರೆ ಅದನ್ನು ಗಜಲ್ ನ ಕೊನೆಯ ಷೇರ್ ಎಂದು ಗುರುತಿಸುವುದು ಕಷ್ಟ!
ಇನ್ನೂ ಕಾಫಿಯಾ… ಗಜಲ್ ನ ಉಸಿರು, ಕವಾಫಿ (ಕಾಫಿಯಾಗಳು) ಹೊರತುಪಡಿಸಿ ಗಜಲ್ ಅನ್ನು ಊಹಿಸಿಕೊಳ್ಳಲೂ ಆಗದು! ಕಾಫಿಯ ಆಯ್ಕೆ ಶಾಯರ್/ಶಾಯರಾ ಅವರ ಸೃಜನಶೀಲತೆ, ಗಜಲ್ ಮೇಲಿನ ಪ್ರೀತಿ-ಹುಚ್ಚನ್ನು ಅವಲಂಬಿಸುತ್ತದೆ. ಗಜಲ್ ಕಲಿಕೆಯ ಆರಂಭಿಕ ಹಂತದಲ್ಲಿ ‘ಕಾಫಿಯಾ’ವನ್ನು ಸಾಮಾನ್ಯವಾಗಿ ‘ಪ್ರಾಸ’ ಎಂದು ಗುರುತಿಸಲಾಗುತ್ತದೆ. ಆದರೆ ‘ಪ್ರಾಸ’ ಎಂಬ ಸಾಮಾನ್ಯೀಕರಣ ತುಂಬಾ ಅಪಾಯಕಾರಿ! ಏಕೆಂದರೆ ಕಾಫಿಯಾ ಎಂದರೆ ಕೇವಲ ಪ್ರಾಸವಲ್ಲ, ರವಿ/ರವೀಶ್ ಹೊಂದಿದ್ದರೆ ಸಾಲದು. ಸಾಧ್ಯವಾದಷ್ಟು ಸಮತೂಕ ಹಾಗೂ ಸಮ ಅಕ್ಷರಗಳಿಂದ ಕೂಡಿದ್ದು ರೌಫ್, ಕೈದ್ ಒಳಗೊಂಡಿರಬೇಕು. ಏಕ ಅಲಾಮತ್ -ಬಹು ಅಲಾಮತ್ ರೂಢಿಸಿಕೊಂಡಿರಬೇಕು. ಇದು ಅಷ್ಟೊಂದು ಸುಲಭವಲ್ಲ, ಇದಕ್ಕೆ ಬದ್ಧತೆ ಮತ್ತು ಅಭ್ಯಾಸ ಬೇಕು. ಇದು ಸೃಜನಶೀಲತೆಗೆ ಅಡ್ಡಿಪಡಿಸುತ್ತದೆ ಎಂದು ಭಾವಿಸುವುದು ತರವಲ್ಲ, ಬದಲಿಗೆ ಇದುವೇ ಸೃಜನಶೀಲತೆ ಎಂದು ಬಯಸಬೇಕು! ಪರಿಪೂರ್ಣ ಕವಾಫಿಯ ಆಯ್ಕೆಯೇ ಗಜಲ್ ಅನ್ನು ಗೆಲ್ಲಿಸುತ್ತದೆ. ಅಂತೆಯೇ ಕವಾಫಿ ಗಜಲ್ ನ ಧ್ವನಿಯನ್ನು ಬಲಪಡಿಸುವಂತಿರಬೇಕು, ಗಜಲ್ ನ ಭಾವಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಇರಬೇಕು. ಇಂತಹ ‘ಕಾಫಿಯಾ’ ಇಲ್ಲದ ಬರಹ ಕಾವ್ಯವಾಗಬಹುದೇ ಯಾವತ್ತೂ ಗಜಲ್ ಆಗದು! ಇದು ಕಹಿಯೆನಿಸಿದರೂ ಸತ್ಯ!
ರದೀಫ್.. ಗಜಲ್ ಗೆ ಹಾಡುಗಬ್ಬದ ಪೋಷಾಕು ತೊಡಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ‘ಗಜಲ್’ ಶಿಷ್ಟ ಸಾಹಿತ್ಯ ಪ್ರಕಾರವಾದರೂ ರದೀಫ್ ಇದಕ್ಕೆ ಜಾನಪದೀಯ ರೂಪವನ್ನು ನೀಡುವಲ್ಲಿ ಶ್ರಮಿಸುತ್ತದೆ. ಗಜಲ್ ಗೆ ವಿಶಿಷ್ಟ ಗೇಯತೆ, ಲಾಲಿತ್ಯ ಮತ್ತು ಭಾವತೀವ್ರತೆಯನ್ನು ನೀಡುತ್ತದೆ. ಇದುವೇ ಜನರ ನಾಲಿಗೆಯ ತುದಿಯಲ್ಲಿ ಜೀವಂತವಾಗಿ ಉಳಿಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ರದೀಫ್ ನ ಆಯ್ಕೆಗೆ ಸಮರ್ಪಕ ಯೋಚನೆ ಅವಶ್ಯಕ. ಅನಗತ್ಯ ಪದಗಳ, ಶಬ್ಧಗಳ ಬಳಕೆ ರಸಭಂಗ ಮಾಡುತ್ತದೆ ಎಂಬುದನ್ನು ಮರೆಯಬಾರದು! ಸಾಮಾನ್ಯವಾಗಿ ದಿನನಿತ್ಯ ಬಳಸುವ ಪದಗಳಿಗಿಂತ ವಿಭಿನ್ನವಾಗಿಯೂ, ಗಾಢಭಾವ, ಸುಲಭವಾಗಿ ಉಚ್ಚರಿಸಬಲ್ಲಂತಹ ಪದಗಳ ಆಯ್ಕೆ ಮಾಡಬೇಕು. ರದೀಫ್ ಗಜಲ್ ನ ಕಾಂತಿ, ರಮ್ಯತೆ ಹಾಗೂ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೆ ‘ರದೀಫ್’ ಅತ್ಯವಶ್ಯಕ. ಆದಾಗ್ಯೂ ಇದರ ಬಳಕೆ ಐಚ್ಛಿಕವಾಗಿದೆ!
ಇನ್ನೂ ಗಜಲ್ನ ಭಾಷೆ ಲಾಲಿತ್ಯಪೂರ್ಣ, ಸಂಕೇತಾತ್ಮಕ ಮತ್ತು ಸಂವೇದನಾಶೀಲವಾಗಿರಬೇಕು. ನೇರವಾದ ಹೇಳಿಕೆಗಳ ಬದಲು ಸೂಚನೆ, ಸಂಕೇತ ಮತ್ತು ರೂಪಕಗಳ ಮೂಲಕ ಭಾವವನ್ನು ಹೇಳುವುದು ಗಜಲ್ನ ಮುಖ್ಯ ಲಕ್ಷಣವಾಗಿದೆ. ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಗಾಢತೆ ಹೊಂದಿರಬೇಕು. ರೂಪಕ, ಪ್ರತೀಕ, ಅಲಂಕಾರ, ವ್ಯಂಗ್ಯಗಳ ಸಮೃದ್ಧ ಬಳಕೆಯಾಗಬೇಕು. ಪ್ರತಿ ಷೇರ್ ಸ್ವತಂತ್ರವಾಗಿದ್ದರೂ ಭಾಷೆಯ ಲಯ ಮತ್ತು ಭಾವದ ತೀವ್ರತೆ ಗಜಲ್ಗೆ ಏಕತೆಯನ್ನು ನೀಡಬೇಕು. ಉರ್ದೂ ಗಜಲ್ ಪರಂಪರೆಯಲ್ಲಿ ಪರ್ಷಿಯನ್–ಅರಬಿ ಪದಗಳ ಪ್ರಭಾವ ಕಂಡುಬಂದರೂ, ಕನ್ನಡ ಗಜಲ್ನಲ್ಲಿ ದೇಸಿ, ತದ್ಭವ ಮತ್ತು ತತ್ಸಮ ಪದಗಳ ಸಮನ್ವಯ ಕಾಣಸಿಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್ನ ಭಾಷೆ ಹೇಳುವುದಕ್ಕಿಂತ ಸೂಚಿಸುವುದರ ಕಡೆಗೆ, ವಿವರಿಸುವುದಕ್ಕಿಂತ ಅನುಭವಿಸಿಸುವುದರ ಕಡೆಗೆ ಗಮನ ಹರಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ಅಂದರೆ ಗಜಲ್ ಕೋಮಲ, ಮೃದುತ್ವ ಮತ್ತು ಹೃದಯ ತಟ್ಟುವ ಪದಗಳ ಬಳಕೆಯನ್ನು ನಿರೀಕ್ಷಿಸುತ್ತದೆ. ಅಂತೆಯೇ ಇಲ್ಲಿ ಬೌದ್ಧಿಕತೆಗಿಂತ ಹೃದಯವಂತಿಕೆ ಅತ್ಯವಶ್ಯಕ!
ಇಂದು ಗಜಲ್ ಕೇವಲ ಪ್ರೇಮಕ್ಕೆ ಸೀಮಿತವಾಗಿ ಉಳಿದಿಲ್ಲ; ಮಾನವನ ಅಂತರಂಗ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತಿದೆ. ಪ್ರೇಮ ಮತ್ತು ವಿರಹ, ನೋವು ಮತ್ತು ಮನೋವ್ಯಥೆ, ತತ್ತ್ವ ಮತ್ತು ಅಸ್ತಿತ್ವದ ಪ್ರಶ್ನೆಗಳು, ಸಾಮಾಜಿಕ ವ್ಯಂಗ್ಯ ಮತ್ತು ವಿರೋಧ, ಆಧ್ಯಾತ್ಮಿಕ ಮತ್ತು ಸೂಫಿ ಭಾವನೆ, ನೆನಪು, ಕನಸು ಮತ್ತು ಹಂಬಲ.. ಎಲ್ಲವನ್ನೂ ಗಜಲ್ ಒಳಗೊಳ್ಳುತ್ತಿದೆ! ಆದರೆ ಒಂದನ್ನು ನಾವು ಮರೆಯಬಾರದು, ಅದೆಂದರೆ ಅಭಿವ್ಯಕ್ತಿಯ ಕ್ರಮ! ಗಜಲ್ ಯಾವುದೇ ವಿಷಯವನ್ನು ಒಳಗೊಳ್ಳಬಹುದು, ಆದರೆ ಅದು ಸಹೃದಯ ಓದುಗರ, ಕೇಳುಗರ ಹೃದಯದ ಕದ ತಟ್ಟಬೇಕು!
ಪ್ರತಿಯೊಂದು ಕಾವ್ಯದ ಬಗ್ಗೆ ಮಾತಾಡುವಾಗಲೆಲ್ಲ ನಾವು ‘ಆತ್ಮ’ದ ಉಲ್ಲೇಖ ಮಾಡುತ್ತೇವೆ. ಅಂದರೆ, ಬಾಹ್ಯ ಲಕ್ಷಣಗಳಿಗಿಂತಲೂ ಆಂತರಿಕ ಭಾವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ನೆಲೆಯಲ್ಲಿ! ಹೌದು, ಪ್ರತಿ ಬರಹದ ಮೂಲ ಸ್ಥಾಯಿಯೇ ಅದು ಒಳಗೊಂಡಿರಬಹುದಾದ ಧ್ವನಿ, ರಸ! ಹಾಗಂತ ಬಾಹ್ಯ ಲಕ್ಷಣಗಳನ್ನು ನಿರಾಕರಿಸುವಂತಿಲ್ಲ. ಏಕೆಂದರೆ ನಮಗೆ ಮೊದಲು ಗೋಚರಿಸುವುದೆ ಭೌತಿಕ ಶರೀರ, ನಂತರವಷ್ಟೇ ಆತ್ಮದ ಪರಿಚಯ! ಇಲ್ಲಿ ಇನ್ನೊಂದು ಅಪಾಯವಿದೆ, ಏನೆಂದರೆ ಲಕ್ಷಣಗಳು ಕೇವಲ ‘ಹಿಟ್ಟಿನ ಹುಂಜ’ವನ್ನು ತಯಾರಿಸುವಂತಾಗಬಾರದು! ಆಂತರಿಕ ಹಾಗೂ ಬಾಹ್ಯ ಲಕ್ಷಣಗಳ ಸಾಮರಸ್ಯ ಶಾಯರ್/ಶಾಯರಾ ಸಾಧಿಸುವಂತಾಗಬೇಕು. ಆವಾಗಲೇ ಗಜಲ್ ಉದಯಿಸಲು ಸಾಧ್ಯ, ಸಾರಸ್ವತ ಲೋಕದಲ್ಲಿ ನೆಲೆಯೂರಲು ಸಾಧ್ಯ ಹಾಗೂ ರಸಿಕರ ನಾಲಿಗೆಯ ತುದಿಯಲ್ಲಿ ನುಲಿಯಲೂ ಸಾಧ್ಯ!
ಡಾ. ಮಲ್ಲಿನಾಥ ಎಸ್. ತಳವಾರ
ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು,
ಕನ್ನಡ ಅಧ್ಯಯನ ವಿಭಾಗ,
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,
ಕಲಬುರಗಿ ೫೮೫ ೧೦೩



