ಕಥಾ ಸಂಗಾತಿ
ನಾಗರಾಜ ಬಿ. ನಾಯ್ಕ
“ಒಬ್ಬ”


ಗುಡ್ಡದ ತುದಿಗೆ ಒಂಟಿ ಮನೆ. ಅಲ್ಲಿಂದ ಹೊರಗೆ ನೋಡಿದರೆ ಕಣ್ಣು ಮುಟ್ಟುವಷ್ಟು ಕಡಲು. ಅವನು ಆಗಾಗ ನಿಂತು ಆ ಕಡಲನ್ನು ನೋಡುವನು. ಅಲೆಗಳ ಕುಣಿತ ಅವನೊಳಗೆ ಹೊಸ ಸಂಚಲನವ ನೀಡುವುದು. ತನಗೆ ಎಷ್ಟು ವರ್ಷ ಗೊತ್ತಿಲ್ಲ ಅವನಿಗೆ. ತನ್ನವರು ಎನ್ನುವರು ಯಾರೂ ಪರಿಚಯವಿಲ್ಲ ಅವನಿಗೆ. ಸುಮ್ಮನೆ ದುಡಿಯುವುದು, ತಿನ್ನುವುದು ಅದೊಂದೇ ಅವನ ಗುರುತು. ಎಲ್ಲರಿಗೂ ಅವನು ಬೇಕು. ಆದರೆ ಅವನು ಮಾತ್ರ ಒಂಟಿ. ಯಾವ ಹಂಗೂ ಇರದ ಬದುಕು ಅವನದ್ದು . ಒಮ್ಮೊಮ್ಮೆ ಆಕಾಶ ನೋಡುತ್ತಾ ಮಲಗುವ. ನೋಡಿದ ಆಗಸದಲ್ಲಿ ಯಾರದೋ ಮುಖ ಅವನಿಗೆ ಕಾಣುವುದು. ವಿಚಿತ್ರ ಎನಿಸುವುದು ಅವನಿಗೆ ಮೋಡಗಳಲ್ಲಿ, ಆಕಾಶದಲ್ಲಿ ಮುಖಗಳು ಕಾಣುವುದು. ಒಮ್ಮೊಮ್ಮೆ ಓಡಾಡುವ ಜನರ ನಡುವಿನ ಮುಖದ ಭಾವವನ್ನ ಅವನು ಗುರುತಿಸುವ. ಅವರಾರು ತನ್ನವರಲ್ಲ ಎನಿಸುವುದು ಅವನಿಗೆ. ವ್ಯವಹಾರ ಎನಿಸುವ ಜೀವನ ಅವನಿಗೆ ಬೇಸರ ತರಿಸುವುದು. ಆದರೂ ಅವನು ಬದುಕುವನು ಅವರೊಟ್ಟಿಗೆ. ಅವರೆಲ್ಲರೂ ಒಂಟಿ ಅಂದುಕೊಳ್ಳುವನು ಆಗಾಗ. ಆದರೆ ಅವರ ಮುಖಭಾವದಲ್ಲಿ ಅವರಾರು ಒಂಟಿ ಎನ್ನುವುದು ಇರುವುದಿಲ್ಲ ಎಂದುಕೊಂಡು ಮನೆಗೆ ಹೋದರೆ ಮಾತನಾಡಿಸುವ ಜೀವಗಳು ಅನೇಕ ಅವರಿಗೆ ಎಂದುಕೊಳ್ಳುವನು. ಆದರೆ ಅವನಿಗೆ ಯಾರಿಲ್ಲ ಮಾತನಾಡುವವರು. ಯಾರು ಇಲ್ಲದ ಮನೆಯಲ್ಲಿ ಸಾಕಿದ ಬೆಕ್ಕು, ಸಾಕಿದ ನಾಯಿ ಒಂದೆರಡು ಆಕಳು ಇವುಗಳನ್ನು ಬಿಟ್ಟರೆ ಅವನಿಗೆ ತನ್ನವರು ಎನ್ನುವರು ಯಾರು ಇಲ್ಲ. ಆದರೆ ಅವುಗಳೇ ಅವನ ಸರ್ವಸ್ವ. ಕಾಡಿನ ದಾರಿ. ದಿನಾಲು ಒಂಟಿ ಸಾಗುವವನು. ಅವನೆಂದುಕೊಂಡಂತೆ ಅವನ ಬದುಕು. ಹಸಿವೆಯಾದರೆ ತಿನ್ನುವನು ಅನ್ನವನ್ನು. ಯಾರೋ ಕೊಟ್ಟ ಹಣ್ಣನ್ನು ,ಯಾರು ಕಟ್ಟಿಕೊಟ್ಟ ರೊಟ್ಟಿಯನ್ನು. ಹಸಿವಿಗೆ ಎಂದು ಉಣ್ಣುವಾಗ ಕೊಟ್ಟ ಕರಗಳನ್ನು ಎಣಿಸುವ ಆತ ಮುಖವನ್ನ ಸ್ಮರಿಸುವ ಹಂಚಿ ತಿನ್ನುವ ತನ್ನೊಟ್ಟಿಗೆ ಬಂದ ಬೆಕ್ಕು ನಾಯಿ ದನ ಕರುಗಳ ಜೊತೆ.
ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತಾಗ ಅವನಲ್ಲಿ ಹೊಸ ಹುರುಪು. ಮರದ ನೆರಳಿಗೆ ಎಂದು ಬಂದು ಕುಳಿತಾಗ ಹಕ್ಕಿಗಳು ಉಲಿವವು. ಸುತ್ತ ಹುಟ್ಟಿದ ಮರಗಿಡಗಳಲ್ಲಿ ಅನೇಕ ಹಕ್ಕಿಗಳು ಬಂದು ಚಿಲಿಪಿಲಿ ಎನ್ನುವವು. ತಿಂದು ಎಸೆದ ಬೀಜಗಳು ಸಸಿಯಾಗಿ ಹುಟ್ಟಿ ಮರವಾಗಿ ಬೆಳೆದು ನಿಂತು ಉಪಕರಿಸುವ ರೀತಿಗೆ ಅವನು ಸೋಲುತ್ತಾನೆ. ಎತ್ತರವಾಗಿ ಬೆಳೆದು ನಿಂತ ಮರದ ನೆರಳಿಗೆ ಕುಳಿತು ಗುಡ್ಡದ ಕೆಳಗೆ ಇರುವ ಕಡಲಲ್ಲಿ ರವಿ ಮುಳುಗುವ ವಿಹಂಗಮ ನೋಟವನ್ನು ಕಾಣುತ್ತಾನೆ. ಸೂರ್ಯ ಒಂದು ಪ್ರಶ್ನೆ ಅವನಿಗೆ. ಎಷ್ಟೆಲ್ಲಾ ಕಲಾಕೃತಿಗಳು ಅವನ ಬೆಳಕಿನ ಸೃಷ್ಟಿ ಎಂಬುದರಿತು ಹೆಮ್ಮೆ ಪಡುತ್ತಾನೆ. ಕೆಂಬಣ್ಣದ ಆಗಸದಲ್ಲಿ ಬೆಳ್ಳಕ್ಕಿಗಳ ಸಾಲೊಂದು ಓಡುವ ಸಂಭ್ರಮವ ನೋಡಿ ಅಂತರಂಗದಿ ಕರಗುತ್ತಾನೆ. ಪಯಣದ ದಿಕ್ಕುಗಳ ನೋಡಿ ಆನಂದಿಸಿ ಸುಮ್ಮನಾಗುತ್ತಾನೆ. ತನ್ನೊಳಗೆ ತಾನೇ ಪ್ರಶ್ನೆಯ ಎಳೆದುಕೊಂಡು ಎಲ್ಲೆಲ್ಲೂ ಸುತ್ತಿ ಬರುತ್ತಾನೆ. ಸಂಜೆಯ ಕತ್ತಲಿಗೆ ಗುಡ್ಡದ ಜೀರುಂಡೆಗಳ ಸದ್ದು ಕೇಳುತ್ತದೆ. ಮರಗಿಡಗಳಲ್ಲಿ ಹಕ್ಕಿ ಮಲಗಿರುವ ಮೌನ ಕತ್ತಲೆಗೆ ಒರಗಿ ನಿದ್ದಿಸುವ ಕೌತುಕಕ್ಕೆ ಬೆರಗಾಗುತ್ತಾನೆ. ಕತ್ತಲೆಯ ಮಧ್ಯೆ ಬೆಳಗುವ ಚಂದಿರನ ಕಂಡು ನಸು ನಗುತ್ತಾನೆ. ನನ್ನಂತೆ ನೀನು ಸುಖಿ ಎನ್ನುತ್ತಾನೆ. ಅಚ್ಚರಿಗಳ ಆಶಾ ಗೋಪುರ ಅವನದಾಗುತ್ತದೆ. ತಾನು ಒಬ್ಬನೇ ಎನ್ನುವ ಅವನಲ್ಲದ ಭಾವ ಅವನನ್ನು ತಾಕದೇ ಮರೆಯಾಗುತ್ತದೆ. ಹಸಿವೆ, ನಿದ್ದೆಯ ದಾಟಿ ಬೆಳಕು ಹರಿಯುತ್ತದೆ. ಹೊಸ ಬೆಳಕಿನ ಸೃಷ್ಟಿಗೆ ಕಾದು ಎದ್ದು ಹೊರಡುತ್ತಾನೆ. ಬಾಗಿಲಿಲ್ಲದ ಮನೆಯ ಬಿಟ್ಟು. ಸಾಕಿದ ಬೆಕ್ಕು ಬಂದು ಮ್ಯಾಂವ್ ಎಂದು ಕಳುಹಿಸಿ ಹೋಗುತ್ತದೆ. ಊರ ದಾರಿಗಳಲ್ಲಿ ಸಾಗುವಾಗ ಮಂದಹಾಸ ಬೀರುತ್ತ ನಡೆವ. ನಡೆವಾಗ ಎದುರಾದ ಯಾರೋ ಹೆಸರು ಹೇಳಿ ಕರೆಯುವರು. ಓ ಎಂದು ನಾಲ್ಕು ಮಾತು ಆಡಿ ಹೋಗಿಬಿಡುವ. ಕರೆದ ಮನೆಯ ಅಂಗಳದಲ್ಲಿ ಕುಳಿತು ಕೊಟ್ಟ ಕೆಲಸವ ಮಾಡಿ ಹೊರಡುವವ. ಅವನ ಕೆಲಸದ ಚಾಕ ಚಕ್ಯತೆ ಒಂದು ಕುಶಲತೆ ಎನಿಸುತ್ತಿತ್ತು. ಅವನು ನೆಟ್ಟ ಗಿಡ ತಾನೇ ತಾನಾಗಿ ಚಿಗುರು ಬಿಡುತ್ತಿತ್ತು. ಹಸಿರು ಅವನ ಕೈಯಾರೆ ಬೆಳೆದು ಇಳೆಯ ಹಸಿರಿಗೊಂದು ಹೆಸರಾಗುತ್ತಿತ್ತು. ಆತ್ಮ ಅಭಿಮಾನ ಗೌರವಕ್ಕೆ ಋಣಿ ಎಂದುಕೊಳ್ಳುತ್ತಿದ್ದ. ಅವನೇ ಬೆಳೆಸಿ ಉಪಕರಿಸಿದ ಮರಗಳು ಬೆಳೆದು ಊರ ತುಂಬಾ ಹರಡಿದ್ದವು.
ಕಾಲದ ಕನ್ನಡಿಗೆ ಹಲವು ಗುರುತು. ಅವನು ಆಗಾಗ ಅಂದುಕೊಳ್ಳುವ. ಅದಾರೋ ಕೊಟ್ಟ ತಿಂಡಿ ತಿಂದು ಅಲ್ಲಿ ಇಲ್ಲಿ ಬೆಳೆದು ದೊಡ್ಡವನಾದ ಮೇಲೆ ಈ ಊರಿಗೆ ಬಂದು ನಿಂತವ. ತನ್ನವರಲ್ಲದ ಜನರ ನಡುವೆ ಜಾತ್ರೆಗೆಂದು ಬಣ್ಣ ತುಂಬಲೆಂದು ಬಂದವ. ಅದೇನೋ ಖುಷಿ ಅನಿಸಿ ಈ ರೀತಿ ದಿನ ಒಂದೊಂದು ಊರು ಅಲೆಯುವುದು ಸಾಕಾಗಿ ಇಲ್ಲೇ ಉಳಿದರೆ ಸಾಕು ಎಂದು ಉಳಿದವ. ದೂರದ ಗುಡ್ಡದಂಚಿನ ಮರದ ಕೆಳಗೆ ಮಲಗಿ ಹಲವು ದಿನ ಕಳೆದವ. ಒಂಟಿತನ ಕಾಡಲಿಲ್ಲ ಅವನಿಗೆ. ಏಕೆಂದರೆ ಒಂಟಿಯಾಗಿ ಬೆಳೆದವನಿಗೆ ಅದು ಕರಗತ. ಈಗೀಗ ನಗುವುದು ಕಲಿತಿದ್ದ. ತನ್ನಂತೆ ಇದ್ದ ಇತರರ ನೆನಪಿಸಿಕೊಂಡ. ಅವರೆಲ್ಲಾ ಎಲ್ಲಿ ತಲುಪಿರಬಹುದು ಎಂದು ಯೋಚಿಸಿದ. ತಾನೇ ಸುಖಿ ಎಂದುಕೊಂಡ. ಹಸಿವೆಯಾದಾಗ ಗುಡ್ಡದಿಂದ ಇಳಿದು ಬಂದು ಊರ ದಾರಿ ಹಿಡಿದ. ಯಾರೋ ಊಟ ಕೊಟ್ಟರು. ಕೆಲಸ ಕೊಟ್ಟರು. ಒಂಟಿಯಾದರೂ ಜೀವನ ಸಾಗಿತು. ಅದೊಂದು ದಿನ ವಯಸ್ಸಾದ ಅಜ್ಜಿಯೊಬ್ಬಳ ಮನೆಗೆ ಹೋಗಿದ್ದ. ಇದ್ದ ಒಬ್ಬ ಮಗ ಬಾರದ ನೋವು ಅಜ್ಜಿಗೆ ಕಾಡಿತ್ತು. ತುಂಬಾ ಮಾತನಾಡಿದ ಅಜ್ಜಿ ಜೊತೆಗೆ. ಅಜ್ಜಿಗೆ ಮಗ ಸಿಕ್ಕಂತಾಯಿತು. ಅವನೂ ಖುಷಿ ಪಟ್ಟ. ಈ ಲೋಕದ ಮಾಯೆಗೆ ಬೆರಗಾದ. ಕಾಲದ ಕರೆಗಂಟೆಯಲ್ಲಿ ಕರಗಿಹೋದ ನೋವುಗಳ ಎಣಿಸಿದ. ಅವನ ಮನೆಗೆ ಕಿಟಕಿ ಬಾಗಿಲು ಯಾವುದು ಇರಲಿಲ್ಲ. ಚಪ್ಪರದೊಳಗಿನ ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿದ್ದ. ಹತ್ತಾರು ವರ್ಷಗಳ ಕಾಲ ಉಳಿದ. ಈಗ ಅವನಿಗೆ ಊರಿನ ಜನರ ನಂಟು ಹೆಚ್ಚಾಗಿತ್ತು . ಕರೆವವರು ಬಹಳ ಅವನಿಗೆ. ಅದೊಂದು ದಿನ ಆ ಊರಿನ ಜಾತ್ರೆ ನಡೆಯುತ್ತಿತ್ತು. ಅವನು ಜಾತ್ರೆಗೆ ಹೋದ. ಕಂಡ ಮುಖಗಳಲ್ಲಿ ಬದುಕಿನ ಭಾವಗಳ ಹುಡುಕಿದ. ಅರೇ ಹೌದಲ್ಲ ಇದೇ ನನ್ನ ಬದುಕಾಗಿತ್ತು. ಜಾತ್ರೆಗೆ ಬಂದ ಎಲ್ಲರೂ ಸೇರಿ ಸಂಭ್ರಮದಿಂದ ನಡೆವಾಗ ಹೆಮ್ಮೆ ಎನಿಸುತ್ತಿತ್ತು. ಅದೆಷ್ಟು ಜಾತ್ರೆಗಳ ಸುತ್ತಿದ್ದ ಅವನು. ಮತ್ತೆ ಅದೇ ಬದುಕು ಅವನ ಸುತ್ತಿ ಕೊಂಡಿತು. ಜಾತ್ರೆ ಇದ್ದಷ್ಟು ದಿನ ಅಲ್ಲೇ ಉಳಿದ. ಜಾತ್ರೆ ಮುಗಿಯಿತು. ಬಂದವರು ಹೊರಟರು ಒಂಟಿಯಾಗಿ. ಅವನೆಂದುಕೊಂಡ ಇವರೊಡನೆ ಹೊರಟರೆ ಹೇಗೆ ಅಂದುಕೊಂಡ. ಆ ಗುಡ್ಡದ ಗುಡಿಸಲೇ ವಾಸಿ ಎನಿಸಿ ಮರಳಿದ…….. ಇರುವವರೆಗೆ ಒಬ್ಬನಾಗಿಯೇ ಉಳಿದ. ಊರಿಗೆ ಮರಳಿದ ಅವನ ಕಂಡವರಿಗೆ ಖುಷಿ ಎನಿಸಿತು. ತಾನೇ ಕಟ್ಟಿದ ಗುಡಿಸಲಿಗೆ ಬಂದು ಕುಳಿತು ಹೊರಗೆ ನೋಡಿದ. ಅಸ್ತದ ವಿಶಾಲ ನೋಟ ಅಚ್ಚರಿಯೊಳಗಿನ ಬಂಧುತ್ವ ಎನಿಸಿತು. ಜಗದ ನಿಯಮಕೆ ಎಲ್ಲವೂ ವಾಸ್ತವದ ಪ್ರತಿಬಿಂಬಗಳು. ನನ್ನ ಉಸಿರು ಕೂಡಾ ಹಾಗೆ ಅಂದುಕೊಂಡ. ಬದುಕಿದ. ಎಲ್ಲರೊಳಗೆ ನಾನು ಒಬ್ಬ ಎಂದು ಅಂದುಕೊಂಡ. ಸಾಗುವ ಬದುಕಿನ ಚಿತ್ರದಲ್ಲಿ ಸಾಗಿ ಹೋದ ಒಬ್ಬನಾಗಿ.
ನಾಗರಾಜ ಬಿ. ನಾಯ್ಕ.



