
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಹೊಸತೇನಿಲ್ಲ


ಸಾವಿರಾರು ಪಟಾಕಿಗಳ ಘರ್ಜನೆಯಲಿ ಪರಿಸರದ
ಪರಿಗಮನವೂ ಇಲ್ಲದೇ..
ನೂರಾರು ಜೀವಿಗಳ (ಮಾಂಸ)
ತಿಂದು ತೇಗುತ್ತಾ..
ನಶೆಯಲ್ಲಿ ನಿರ್ಗಮಿಸುತ್ತಾ
ನಶೆಯಲ್ಲಿಯೇ ಆಗಮಿಸುವ
ಹೊಸ ವರುಷವೇ ನಿನಗೆ ಸ್ವಾಗತ
ಹೊಸತನದ ಆಶೆಯಷ್ಟೇ
ಹನ್ನೆರಡು ತಿಂಗಳ ತುಂಬು ಗರ್ಭದಲಿ ಮತ್ತೊಂದು ಜನನ
ಜನನ ೨೦೨೬ ಹೊಸತೇನಿಲ್ಲ !
ಮತ್ತೇರಿದ ಮಸ್ತಕದಲ್ಲಿ
ಹೊಸತನದ ಆಶೆಯಹೊತ್ತು
ಹಳೆಯ ನೋವುಗಳ ಹೊಸಕಿ
ಹಾಕುತ್ತಾ ಬರುವ ಹೊಸ
ವರುಷವೇ ನಿನಗೆ ಸ್ವಾಗತ
ಹೊಸತನದ ಬಯಕೆ ಅಷ್ಟೇ
ಕಳೆದ ಸಾಲಿನ ಸಂಕಟ
ಸಡಗರವಾಗಿ ಬದಲಾಗಿ ಹೋದವರುಷದ ಸಂಭ್ರಮ ಸವೆಯದೇ ಗಟ್ಟಿಯಾಗಿರಿ
ಸುತ್ತಾ ಬಂದುಬಿಡು ಹೊಸತನವೇ ನಿನಗೆ ಸ್ವಾಗತ
ಹೊಸತನದ ಕನಸಷ್ಟೇ
ಗತಕಾಲದ ನೆನಪುಗಳು
ನಶಿಸಿ ನೋವುಗಳ ನಶೆಯ ಅಳಿಸಿ ಕಂಡ ಕನಸುಗಳ ನನಸಾಗಿಸಲು ಬರುತ್ತಿರುವ
ನವ ನವೀನ ವರುಷವೇ ನಿನಗೆ ಸ್ವಾಗತ
ಹೊಸತೇನಿಲ್ಲ !
ಹೊಸತನದ ಆಶೆಯಷ್ಟೇ…
ಹಳೆಬೇರು ಹೊಸಚಿಗುರು
ಹೂವಾಗಿ ಕಾಯಿ ಫಲಿಸಿ
ಹಣ್ಣಾಗಲಿದೆಂಬ ಭರವಸೆಯಷ್ಟೇ…
ಹರುಷದ ಹೊನಲು ಹರಿಸಿ
ಬಾಂಧವ್ಯ ಗಳ ಬೆಸೆಯುತ್ತಾ
ಜಾತಿ ವಿಜಾತಿಗಳ ಹೊಲಸು
ತೊಳೆಯುತ್ತಾ ಎಲ್ಲರೊಂದೇ
ಎಂಬ ಭಾವ ಪಸರಿಸುತ್ತಾ
ಬಂದುಬಿಡು ಹೊಸವರುಷವೇ
ನಿನಗೆ ಸ್ವಾಗತ
ಆಯುಷ್ಯದಲ್ಲಿ ಮತ್ತೊಂದು
ವರುಷ ಕಡಿತವಾಗಿದೆ ಮತ್ತೇನಿಲ್ಲ ಹೊಸತೇನಿಲ್ಲ
ಹೊಸತನದ ಆಶೆಯಷ್ಟೇ…
ಇಮಾಮ್ ಮದ್ಗಾರ



