ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್


ಅವನು ಬಾಳ ಪುಸ್ತಕಕೆ ಮುನ್ನುಡಿ ಬರೆದಿದ್ದಾನೆ
ಬದುಕಿನ ಪುಟ ಪುಟಕೂ ಚೆನ್ನುಡಿ ಬರೆದಿದ್ದಾನೆ
ಲೋಕದ ಸುಖವೆಲ್ಲ ನನಗೆ ಇರಲೆಂಬ ಹಂಬಲ
ಮುಖಪುಟಕೆ ಬಣ್ಣ ತುಂಬಿ ನಲ್ನುಡಿ ಬರೆದಿದ್ದಾನೆ
ಅನಂತತೆಯ ಹರವಿನಲಿ ನಾನೊಂದು ಬಿಂದು
ಅಕ್ಷರ-ಅಕ್ಷರ ಸರಿಪಡಿಸಿ ಹೊನ್ನುಡಿ ಬರೆದಿದ್ದಾನೆ
ತಾನೆಟ್ಟ ಸಸಿ ಆಗಸದೆತ್ತರಕೆ ಹಬ್ಬಲೆಂಬ ಆಶಯ
ಉಳಿಯಲೆಂದು ಕಾಪಿಟ್ಟು ಜೇನ್ನುಡಿ ಬರೆದಿದ್ದಾನೆ
ಬೆರಗಿನಲ್ಲಿ ಜಗವಿದನು ಓದಬೇಕೆಂಬ ಹರಕೆ ಅವನದು
ಮುಗುದೆ ಅರುಣಾಳ ಬೆನ್ನು ತಟ್ಟಿ ಬೆನ್ನುಡಿ ಬರೆದಿದ್ದಾನೆ
ಅರುಣಾ ನರೇಂದ್ರ




ನಿಮ್ಮ ಮಾತುಗಳನ್ನು’ಗಜಲ್’ ರೂಪ ದಲ್ಲಿ ಹಿಡಿದಿಟ್ಟ ಸಾಹಿತ್ಯ ಸುಂದರ.