ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್


ನಂಬಿದೆದೆಯಲಿ ಇಂಬಿರದೆ ಬಿಕ್ಕುತಿದೆ ಹಕ್ಕಿ
ಜೊತೆ ನಡೆದ ಗುರುತಿರದೆ ಅಳುತಿದೆ ಹಕ್ಕಿ
ಮುರಿದು ಹೋಯಿತು ತಾ ಕುಳಿತ ಕೊಂಬೆ
ಹಾರಲು ಬಲವಿರದೆ ನೋಯುತಿದೆ ಹಕ್ಕಿ
ಸುರಿಯುತಿದೆ ಮಳೆ ಬೀಸುತಿದೆ ಬಿರುಗಾಳಿ
ಸುತ್ತ ಕತ್ತಲಲಿ ದಿಕ್ಕಿರದೆ ತೋಯುತಿದೆ ಹಕ್ಕಿ
ರೆಕ್ಕೆಯ ಬಣ್ಣ ಮಾಸಿದೆ ಕೊರಳು ಬಿಗಿದಿದೆ
ದುಃಖದಿ ಜೊತೆಯಿರದೆ ಕಾಯುತಿದೆ ಹಕ್ಕಿ
ಮೂಕವಾಗಿವೆ ಗಿಡ ಮರ ಹೂ ಬಳ್ಳಿಗಳು
ಕಾನು ಕಣಿವೆ ಹಿತವಿರದೆ ಕೊರಗುತಿದೆ ಹಕ್ಕಿ
ದೂರವಾಗಿದೆ ಬಲು ಬಿತ್ತರದ ನೀಲಿ ಬಾನು
ಅವನ ಪ್ರೀತಿಯಿರದೆ ಸೋಲುತಿದೆ ಹಕ್ಕಿ
ಬದುಕಿಗಾಗಿ ಗಟ್ಟಿಗೊಳ್ಳಬೇಕು ಅರುಣಾ
ನಲಿವಿನಲಿ ನೋವಿರದೆ ಬಾಳುತಿದೆ ಹಕ್ಕಿ
ಅರುಣಾ ನರೇಂದ್ರ



