ಕಾವ್ಯ ಸಂಗಾತಿ
ಸುಮತಿ ನಿರಂಜನ
“ಪತಂಗ ಸಂಗ-ತಿ”


ಹಾರೋಣ ಬನ್ನಿರಿ ಗೆಳೆಯರೇ ಹಾರೋಣ
ನೀಲಿ ಆಕಾಶಕ್ಕೆ ಹಾಕೋಣ ಲಗ್ಗೆ
ಒಂದೇ ದಿನವೆಂದು ಕುಂದದೆ ನಾವಿಂದು
ಒಂದಾಗಿ ಚಂದದಲಿ ನಲಿಯೋಣ
ಚಂದಿರನ ಹೊಲದಲಿ ಚಿಕ್ಕೆಯ ಕುಯಿಲು
ಸಿಕ್ಕಷ್ಟು ಬಾಚಿ ತಬ್ಬೋಣ ಸುಗ್ಗಿಯ
ಸಗ್ಗದ ಸುಖವ ಸವಿಯೋಣ !
ಬೇರೆ ಬೇರೆ ರಂಗು ಬೇರೆ ಬೇರೆ ಗುಂಗು
ಲಂಗುಲಗಾಮಿಲ್ಲದೇ ಹಾರೋಣ
ಒಬ್ಬರ ಬಿತ್ತರ ಇನ್ನೊಬ್ಬರೆತ್ತರ
ಕಂಡು ಕರುಬದೆ ಮೇಲೆ ಹಾರೋಣ
ರೆಕ್ಕೆ ಕತ್ತರಿಸದೆ ಕೊಕ್ಕಿಂದ ಚುಚ್ಚದೆ
ಸಕ್ಕರೆ ಅಚ್ಚು ಹಂಚೋಣ ಸ್ನೇಹಿತರೆ
ಅಕ್ಕರೆಯಿಂದ ಹರಸೋಣ ಕಣ್ಣಲ್ಲೆ
ಕನಸಿನ ಗೋಪುರ ಕಟ್ಟೋಣ
ಕೊನೆಯಿಲ್ಲ ಕಲ್ಪನೆ ಕ್ಷಿತಿಜಕ್ಕೆ ಕೆಳೆಯರೇ
ಮಿತಿಯಿಲ್ಲ ಆತುಮ ಬಲಕೆ ಸಾಹಸಕೆ
ಬನ್ನಿರಿ ಗೆಳೆಯರೆ ತನ್ನಿರಿ ಸುಮಶರ
ಕಾಮನ ಬಿಲ್ಲ ಹೆದೆಗೇರಿಸೋಣ
ಕಟ್ಟೋಣ ತೋರಣ ಬಾನ ಬಾಗಿಲಿಗೆ
ಮುತ್ತಿನ ತೋರಣ ಕಟ್ಟೋಣ ಬನ್ನಿರಿ
ಅಕ್ಷರ ದೀಪವ ಬೆಳಗೋಣ !!
ಸುಮತಿ ನಿರಂಜನ



