ಕಾವ್ಯ ಸಂಗಾತಿ
ಸಿ.ಎಚ್.ಮಧುಕುಮಾರ
“ಕವಿಪತ್ನಿಯ ಅಳಲು”


ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿ
ಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದು
ಊರೂರು ಸುತ್ತುವ ಅರೆಜೋಗಿಯೇ
ಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳ
ನೆನೆನೆನೆದು ಹಣ್ಣಾಗಿರುವೆ
ಈ ಹೆಣ್ಣಿಗಾಗಿ ಚೂರು ಸಮಯವಿದೆಯೆ?
ನೀನಿತ್ತ ಆ ಎರಡು ಮಕ್ಕಳೋ
ನಿನ್ನದೇ ಅಪರಾವತಾರ ಎಂಬಂತೆ
ಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!
ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ
ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು?
ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’
ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲ
ನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!
ಅರ್ಥೈಸಿಕೊಳ್ಳಲಾಗುತ್ತಿಲ್ಲ
ಚೂರೇ ಚೂರು ಸಮಯವಿದ್ದರೆ
ಬಂದು ಬಿಡಿ ಒಂದು ಬಾರಿ ನನ್ನೊಂದಿಗೆ.
ಅರಿಸಿನ ಕುಂಕುಮ ತೆಗೆದುಕೊಳ್ಳಲು
ಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನು
ನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿ
ಹೊರಟು ಬನ್ನಿ ಮನೆಗೆ
ನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ!
– ಸಿ.ಎಚ್.ಮಧುಕುಮಾರ




ಚೆನ್ನಾಗಿದೆ
ತುಂಬಾ ಸೊಗಸಾದ ಸಾಲುಗಳು…..ಹೆಂಡತಿಯ ಭಾವನೆಗಳೊಂದಿಗೆ…..
ಸೊಗಸಾದ ಭಾವ. ಏನೇ ಆದರೂ ಕಿವಿಗೆ ಸ್ಪೂರ್ತಿ,ಕಿವಿ ಹಿಂಡುವ ಕೆಲಸ ಏನಿದ್ದರೂ ಪತ್ನಿಯದೇ..