ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಯದ ಕಥೆಯಿದು
ಸುಡುತ್ತೇವೆ
ನೂರಾರು ಮೇಣದಬತ್ತಿಯನ್ನು
ಬಿಗಿಯುತ್ತೇವೆ ಭಾಷಣ
ದುಃಖಿಸುತ್ತೇವೆ, ಕೊರಗುತ್ತೇವೆ
ನೆನೆ ನೆನೆದು
‘ಅಯ್ಯೋ ಸಣ್ಣ ಮಗುವಂತೆ’
ಉದ್ಘರಿಸುತ್ತೇವೆ,
ಚೆಲ್ಲುವೆವು ನಿಟ್ಟುಸಿರ
ಚಿಂತಿಸುವೆವು ಮುಂದೇನೆಂದು
ಹೆಣ್ಣೇಕೆ ಹುಟ್ಟಿತೆಂದು
ಕೊಡುತ್ತೇವೆ ನೂರಾರು ಸಲಹೆಗಳನ್ನು
ಮರೆತು ಬಿಡುತ್ತೇವೆ
ಆಕ್ಷಣವನ್ನು

ನಡೆಯುತ್ತದೆ? ——- ಏನು?
ಮತ್ತೊಮ್ಮೆ ಮಗದೊಮ್ಮೆ  
ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋ
ಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿ
ದಿವ್ಯ ನಿರ್ಲಕ್ಷ್ಯ ನಮ್ಮದು
ಅದೇ ಪುನರಾವರ್ತನೆ
ದೂಷಿಸುತ್ತೇವೆ , ಮರುಗುತ್ತೇವೆ
ಹಾಗೆಯೇ ತೇಲಿಬಿಡುತ್ತೇವೆ ವಿಷಯವನು

ಹೊಣೆಯಾಗಿಸುತ್ತೇವೆ
ಪಕ್ಷಗಳನ್ನು , ಜಾತಿಗಳನ್ನು, ಧರ್ಮಗಳನ್ನು
ತಿಳಿಯಲಾರೆವು ಮೂಲ ಕಾರಣವ
ನಿಂದಿಸಿ, ಆರೋಪಿಸಿ, ನಡೆಸಿ ಜಾಥಾ,
ಮಾಧ್ಯಮಗಳಲ್ಲಿ ಕುಳಿತು
ನಡೆಸುವಾಗ ವಿತಂಡವಾದವ
ಟಿ ಆರ್ ಪಿ ಯ ಸರಕಾಗುತ್ತದೆ ಅವಳ ಕಣ್ಣೀರು
ಮರೆಯುತ್ತೇವೆ ಮತ್ತೆ
ತಣ್ಣಗಾಗುತ್ತೇವೆ ಎಂದಿನಂತೆ
ಏನೂ ಆಗದಂತೆ

ಬಳಸುತ್ತವೆ
ಪಕ್ಷಗಳು ತಮ್ಮ ಬೇಳೆಯ ಬೇಯುವಿಕೆಗೆ
ಹಳಿಯುತ್ತದೆ  ವಿರೋಧ ಪಕ್ಷವು
ಆಡಳಿತ ಪಕ್ಷವನು
ಕೊನೆಗೊಮ್ಮೆ ನೀಡುತ್ತಾರೆ ಧರ್ಮ ಜಾತಿಯ
ಹಣೆ ಪಟ್ಟಿಯನು
ನಗು ನಗುತ್ತಾ ಚರ್ಚಿಸುವರು ಸದನದಲಿ
ಘೋಷವಾಕ್ಯವೊಂದು ತಯಾರಾಗುತ್ತದೆ
‘ಮಲಗಿ ಆನಂದಿಸಿ’

ಬಿಸಿ ತಟ್ಟುತ್ತದೆ ಒಮ್ಮೆ
ಸಂತ್ರಸ್ತೆ ನಮ್ಮದೇ ಮನೆಯ ಮಗಳಾದಾಗ
ಎಚ್ಚರವಿರಲಿ

ಮೊದಲಾಗಲಿ ಬದಲಾವಣೆ ನಮ್ಮಿಂದಲೇ
ತಡೆಯೋಣ ಮುಂದಾಗದಂತೆ ಅತ್ಯಾಚಾರಗಳು
ನಿರೂಪಿಸೋಣ ಅಬಲೆಯಲ್ಲ ಅವಳು ಸಬಲಳು
ಬಲಹೀನತೆಯ ತೊರೆದು
ನನಸಾಗಿಸೋಣ ಸ್ವಸ್ಥ ಸಮಾಜದ ನಮ್ಮ ಕನಸು


About The Author

Leave a Reply

You cannot copy content of this page

Scroll to Top