ಕಾವ್ಯ ಸಂಗಾತಿ
“ಯಾರೂ ಅನಿವಾರ್ಯರಲ್ಲ ಇಲ್ಲಿ”
ವೈ ಎಂ ಯಾಕೊಳ್ಳಿ


ಈ ಲೋಕ ತನ್ನಷ್ಟಕ್ಕೆ ತಾನೇ ಓಡುತ್ತದೆ
ಯಾರೂ ಅನಿವಾರ್ಯರಲ್ಲ
ಯಾರೋ ನಮ್ಮನ್ನಗಲಿ ಹೋದಾಗ
ನಾವು ಇನ್ನು ಬದುಕಲಾರೆವೇನೊ ಎನ್ನುತ್ತೇವೆ
ಆದರೂ ಕೆಲವೆ ದಿನಗಳಲ್ಲಿ ಮತ್ತೆ ಕಾಲ
ಎಂದಿನಂತೆ ಓಡತೊಡಗುತ್ತದೆ
ಅಂದೊಮ್ಮೆ ಆ ಕ್ಷಣ ಅವರು ಅಗಲಿದಾಗ
ಇನ್ನು ಬದುಕುವುದೆ ಅಸಾಧ್ಯ ವೆಂದು
ಕೊಂಡಿದ್ದವರು, ಅದೆ ಹಗಲು ಅದೇ ರಾತ್ರಿ
ಅದೇ ಬದುಕನ್ನು ಯಥಾವತ್ತಾಗಿ
ಅನುಭವಿಸತೊಡಗುತ್ತಾರೆ
ವ್ಯತ್ಯಾಸ ಇಷ್ಟೇ ಅವರಷ್ಟೇ ಹೋಗಿರುತ್ತಾರೆ
ನಾವೆಲ್ಲರೂ ಇಲ್ಲೇ ಇರುತ್ತೇವೆ.
ಚಂದ್ರ ಸೂರ್ಯರೂ ಇಲ್ಲವಾದಾಗ
ಪರ್ಯಾಯ ವ್ಯವಸ್ಥೆಯನ್ನು ಬಳಸಿಕೊಂಡ
ಈ ಲೋಕಕ್ಕೆ ಎಲ್ಲವನು ಮರೆಯುವದು ಗೊತ್ತು
ಬಹುಶಃ ತಾವು ಅನಿವಾರ್ಯ
ಎಂದು ತಿಳಿದದ್ದು ಅಗಲಿ ಹೋದವರಷ್ಟೇ.
ಇದು ನಾವು ಹೋದಾಗಲೂ ಅಷ್ಟೇ!
ಇನ್ಯಾರೋ ಹೋದಾಗಲೂ ಅಷ್ಟೇ!!
ಜಗತ್ತಿನಲ್ಲಿ ಬೇಕಾದವರು ಒಂದಿಷ್ಟು ದಿನ
ಕಣ್ಣೀರು ಹಾಕಿ ಮತ್ತೆ ಮರೆಯುತ್ತಾರೆ.
ಇನ್ನೊಂದು ರಾತ್ರಿ ಕೊಡವಿಕೊಂಡು ಎದ್ದು
ಹಗಲಾಗಿರುತ್ತದೆ.
ವೈ.ಎಂ.ಯಾಕೊಳ್ಳಿ



