ಕಾವ್ಯ ಸಂಗಾತಿ
“ಮಹಾತ್ಮ” ಕವಿತೆ
ಇಮಾಮ್ ಮದ್ಗಾರ

ನೀಲಗಗನದಲಿ ಲೀನನಾದೆ
ನೀ ಬೆಳಗಿದಾ ಬೆಳಕು ಜಗವೆಲ್ಲ ಹರಡಿತ್ತು ಮತ್ತೆಲ್ಲಿಹುದು ?
ಸತ್ಯದಾ ಕಿರಣ !
ಮಿಥ್ಯೆಯ ಗಾಳಿಗೆ ಸತ್ಯದ ಹಣತೆ ನಂದಿಹೋಯಿತು
ಸಂಧ್ಯಾಸಮಯ ರಾಘವನ ಪೂಜೆಗೆ ಅಣಿಯಾದದೇಹ
ನಡೆಯುತ್ತಿತ್ತು ಎಂದಿನಂತೆ
ದೇವರ ದಾರಿಯಲಿ…
ಹಂತಕನ ಕಾಡುತೂಸು ಕಾಯುತ್ತಿತ್ತು ಸತ್ಯದಾ ಜ್ಯೋತಿ ನಂದಿಸಲೆಂದೇ
ಬರಸಿಡಿಲಿನಂತೆ ಬಂದೆರಗಿದ ಗುಂಡು ನಾಟಿತೆದೆಗೆ.ಜಗವನ್ನೆ ನಡುಗಿಸಿದ್ದ ಗುಬ್ಬಿಯಷ್ಟಿದ್ದ ದೇಹ ಸಾವ ಸುಖವನಪ್ಪುತ್ತಾ ಸತ್ಯದಾ..ರಕುತ ಭಾರತಂಬೆಯ ನೆಲವ ತೋಯಿಸಿತ್ತು ತಾನೇ ಬಿಡುಗಡೆ ಗೊಳಿಸಿದ ನೆಲವಂದು ಬಿಕ್ಕಳಿಸುತ್ತಿತ್ತು
ನಗುವ ಮುಖದಲಿ ಕ್ಷಮೆಯ ಕಳೆಯಿತ್ತು ತ್ಯಾಗವೇ ಜೀವನ ತಿಳಿಭಾವವಿತ್ತು
ಅವಸರ ವೇನಿತ್ತೊ ಬಲ್ಲವರಾರು ?
ನಾಕಕ್ಕೂ ಸ್ವಾತಂತ್ರ್ಯ ಕೊಡಿಸಲು ಅವಸರಸಿ ಪಯಣಿಸಿದ ಮಹಾತ್ಮನೇ
ನಿಮಗಿಂದು ಗೌರವ ಪೂರ್ಣ
ನಮನಗಳು
ಇಮಾಮ್ ಮದ್ಗಾರ




