ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಒಂದೊಂದೇ ಹನಿ ರಕ್ತ ನೆಲಕ್ಕೆ ಬೀಳುತ್ತಿತ್ತು.‌ ಒಂದು ನೊಣ ಬಂದು  ರಕ್ತವನ್ನೊಮ್ಮೆ ಮೂಸಿ ಹಾರಿತು. ಸ್ವಲ್ಪ ಸಮಯದ ಬಳಿಕ ಮತ್ತೆ ನಾಲ್ಕು ನೊಣಗಳು ರಕ್ತದ ಮೇಲೆ ಕುಳಿತು, ಹಾರಿ, ಮತ್ತೆ ಕುಳಿತು ನೆಕ್ಕುವ ಕಾರ್ಯದಲ್ಲಿ ನಿರತವಾದವು.
‘ತಪ್ಪು ಮಾಡಿ ಬಿಟ್ನಾ?’ ಸುತ್ತ ಕತ್ತಲೆ ಕವಿದಂತಾಯಿತು.
ಅಮ್ಮನ ಹತ್ರ ಮುದ್ದೆ, ನಾಟಿ ಕೋಳಿ ಸಾರು ಮಾಡು ಅಂದಿದ್ದೆ…ಸಂಜೆ ಬರ್ತಾ ಹೂವ ತಂದು ಬಿಡು…ಶುಕ್ರವಾರಲಾ ದೇವ್ರಿಗೆ ಹಾಕೋಕೆ  ಅಂದಿದ್ಲು…ಅದಕ್ಕೂ ಮೊದಲು ಸುಮಾ ಆಂಜನೇಯ ಗುಡಿ ಹತ್ರ ಸಿಕ್ತೀನಿ ಅಂದಿದ್ಲು…ಎಲ್ಲವೂ ಕಣ್ಣೆದುರು ಒಂದು ಕ್ಷಣ ತೇಲಿ ಹೋದವು.
ಆವತ್ತೇನಾಗಿತ್ತು….
ಅಮ್ಮ, ಏಳಮ್ಮ…ಮೈ ಕೈ ಸುಡ್ತಾ ಇದ್ಯಲಾ…ತಾಯಿಯ ಹಣೆ ಮುಟ್ಟಿದ ರಾಘು ಸಣ್ಣಗೆ ಕಂಪಿಸಿದ. ಭಯಗೊಂಡ. ಯಾವಾಗಲೂ ಲವಲವಿಕೆಯಿಂದ, ಮನೆ ಕೆಲಸ, ಜೊತೆ ಸಾಹುಕಾರರ ಮನೆ ಕೆಲಸ ಮಾಡಿಕೊಂಡಿದ್ದ ತಾಯಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದರೆ ಮಗನಿಗೆ ಹೇಗಾಗಬೇಡ…ಊರಿನ ಆಸ್ಪತ್ರೆಗೆ ತೋರಿಸಿದಾಗ ಹೊಟ್ಟೆಯಲ್ಲಿ ಬೆಳೆದಿರುವ ಗಡ್ಡೆ ಬಗ್ಗೆ…ಆಪರೇಷನ್ ಮಾಡಿಸಲು ನಗರದ ಆಸ್ಪತ್ರೆಯನ್ನು ಸೂಚಿಸಿದರು.
ಪಕ್ಕದ ಮನೆಯರೆಲ್ಲ ಮನೆಗೆ ಬಂದು ನೂರು ಮಾತಾಡಿದರು. ಮಗನಿಗೆ ಕಷ್ಟ ಕೊಡಬಾರದೆಂದು ತಾಯಿ ಇಷ್ಟು ವರ್ಷಗಳ ಕಾಲ ಹೊಟ್ಟೆ ನೋವು ಸಹಿಸಿಕೊಂಡಿದ್ದರ ಮುಂದೆ ಲಕ್ಷಾಂತರ ಖರ್ಚು ದೊಡ್ಡದಾಗಿ ಕಾಣಲಿಲ್ಲ ರಾಘುಗೆ. ಆದ್ರೆ, ದುಡ್ಡಿಗಾಗಿ ಏನ್ ಮಾಡೋದು?
ತಾನು ಕೆಲಸ ಮಾಡುತ್ತಿದ್ದ ತೋಟದ ಒಡೆಯನ ಮುಂದೆ ಹೋಗಿ ಕೈಯೊಡ್ಡಿದ.
‘ಅಷ್ಟೊಂದ್ ದುಡ್ಡು ಕೊಡೋಕಾಗಲ್ಲಯ್ಯ…’ ಎಂದು ಬಿಟ್ಟಿದ್ದರು. ಸಾಲ ಕೊಡೋರು ಯಾರು ಸಿಕ್ಕಿರಲಿಲ್ಲ. ಆಗಲೇ ರಾಘು ತಪ್ಪು ಮಾಡಿದ್ದ. ಆ ಕ್ಷಣಕ್ಕೆ ಅವನಿಗೆ ಸರಿ ಕಂಡಿದ್ದು ಅದೊಂದೆ.‌
ಅಂದೊಂದು ದಿನ ಧನಿಯ ಪತ್ನಿಯ ಚಿನ್ನದ ಸರ ಕದ್ದು ಬಿಟ್ಟ. ಅದ್ಯಾರಲ್ಲೋ ಅಡವಿಟ್ಟು ಹಣ ಪಡೆದು ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ಅತ್ತ ಆಪರೇಷನ್ ನಡೆಯುತ್ತಿದ್ದರೆ, ಇತ್ತ ರಾಘುವೇ ಚಿನ್ನ ಕದ್ದಿರುವುದೆಂದು ಗೊತ್ತಾಗಿ ಕೈಗೆ ಕೋಳ ಹಾಕಲಾಯಿತು.

****

ಅವತ್ ನಾನು ಆ ತಪ್ಪು ಮಾಡದೇ ಹೋಗಿದ್ರೆ ಅಮ್ಮನ ಉಳಿಸಿಕೊಳ್ಳಲಾಗ್ತಿತ್ತೆ? ರಾಘು ಕಣ್ಣಿಂದ ಒಂದು ಹನಿ ಕಣ್ಣೀರು ಜಾರಿ ನೆಲಕ್ಕೆ ಬಿದ್ದಿದ್ದ ರಕ್ತದ ಹನಿಗಳ ಜೊತೆಯಾಯಿತು. ಈಗ ರಕ್ತದ ಮೇಲೆ ನೊಣಗಳು ಮಾತ್ರವಲ್ಲ ಇರುವೆಗಳ ಸಂಚಾರವೂ ಶುರುವಾಗಿತ್ತು. ಕೈ ಮೇಲೆ ಹಾರಾಡುತ್ತಿದ್ದ ನೊಣಗಳು ರಾಘುವಿಗೆ ಹಿಂಸೆ ಎನಿಸುತ್ತಿರಲಿಲ್ಲ. ಮನಸ್ಸಿನೊಳಗಿನ ಸಾವಿರ ಯೋಚನೆಗಳು ಹೊರಪ್ರಪಂಚದ ಚಲನ ವಲನಗಳ ಮೇಲೆ ನಿಗಾ ಇಡಲು ಅವಕಾಶ ಕೊಡಬಲ್ಲುದೇ…
ರಾಘು ತಾಯಿ ಚೇತರಿಸಿಕೊಳ್ಳುತ್ತಿದ್ದಂತೆ ಮಗ ಜೈಲು ಸೇರಿರುವ ವಿಚಾರ ತಿಳಿಯಿತು. ತನಗಾಗಿ ಮಗ ಮಾಡಿದ ತಪ್ಪಿಗೆ ಸಂಕಟ ಪಟ್ಟ ಆಕೆ ಧನಿಯ ಮುಂದೆ ಅಂಗಾಲಾಚಿದಳು. ಆಕೆಯ ದುಃಖ ಅರಿತ ಧನಿಯ ಪತ್ನಿ ಪತಿಯಲ್ಲಿ ಹೇಳಿ ರಾಘುವನ್ನು ಸೆರೆ ಮನೆಯಿಂದ ಹೊರ ಬರುವಂತೆ ಮಾಡಿದಳು.
***
ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದವನಿಗೆ ಮತ್ತೆ ಕೆಲಸ ಕೊಡಲೊಪ್ಪಲಿಲ್ಲ ತೋಟದ ಯಜಮಾನ. ಕಂಗೆಟ್ಟು ಹೋದ ರಾಘುಗೆ ದಾರಿ ತೋರಿಸಿದ್ದು, ಮಣ್ಣು. ಹಿತ್ತಲಿನಲ್ಲಿದ್ದ ಪುಟ್ಟ ಜಾಗದಲ್ಲಿ ಬಸಳೆ, ಹರಿವೆ ನಲಿದವು. ತೊಂಡೆ ಕಾಯಿ ಚಪ್ಪರ ನಕ್ಕಿತು. ಬೆಂಡೆ ಕಾಯಿ, ಅಲಸಂಡೆ ಕೈ ಕುಲುಕಿದವು.

ರಾಘು ಚೆಂದದ ಜೀವನ ಆರಂಭಿಸಿದ್ದ. ಮಾವನ ಮಗಳು ಸುಮಾ ಬದುಕ ಪಯಣಕೆ ಜೊತೆಯಾಗಲು‌ ಅಣಿಯಾದಳು.
 ಆದರೆ, ಅವರ ಕನಸುಗಳಿಗೆ ವಿಧಿ ಹರಸಲಿಲ್ಲ…
***
ತಾಯಿಗಾಗಿ ರಾಘು ಕದ್ದಿದ್ದ…ಆದರೆ, ಕೆಲವರು ಆತನ ಆ ತಪ್ಪನ್ನು ಕೆಣಕುತ್ತಿದ್ದರು. ಅವರಲ್ಲಿ ಮಂಜು, ಭದ್ರ ಕೂಡ ಇಬ್ಬರು.
ಅಂಗಡಿಗೆ ಬಂದವರೆ ‘ಕಳ್ಳ, ಇದಕ್ಕೆಷ್ಟೋ, ಅದಕ್ಕೆಷ್ಟೋ’, ‘ಕಳ್ಳ ಎಲ್ಲಿಂದ ಕದ್ಕೊಂಡ್ ಬಂದ್ಯೋ ಸೊಪ್ಪನ್ನ’ ಎಂದು ದಿನ ನಿತ್ಯ ಹಂಗಿಸುತ್ತಿದ್ದರು. ರಾಘು ತಾಳ್ಮೆಯಿಂದಲೇ ಇದ್ದ.‌ ಆದ್ರೆ, ಅವತ್ತು ಅದೇನಾಯ್ತೋ ಬುದ್ಧಿಯ ಮೇಲೆ ಕೋಪಾಗ್ನಿ ಉರಿಯಿತು.
‘ಕಳ್ಳಂಗೆ ಮದ್ವೆ ಅಂತೆ…ಹುಡ್ಗಿ ಕಳ್ಳಿನೇ ಇರ್ಬೇಕು…ಅಥವಾ…’ ಮಂಜು, ಭದ್ರನಾ ನಗು ಕೆರಳಿಸಿತು.    ಹಲ್ಲು ಕಚ್ಚಿ ನಿಂತ. ‘ಕಳ್ಳ ಯಾಕೋ ಮಾತಾಡ್ತಿಲ್ಲ’ ರಾಘುಗೆ ತಡೆಯಲಾಗಲಿಲ್ಲ. ಅಲ್ಲೇ ಇದ್ದ ಚಾಕುವನ್ನು ಹಿಡಿದ. ರಾಘುವಿನ ಅನಿರೀಕ್ಷಿತ ದಾಳಿಗೆ ಭದ್ರ, ಮಂಜು ತತ್ತರಿಸಿ ಹೋದರು. ನೆಲಕ್ಕುರುಳಿದ ಇಬ್ಬರ ಮೇಲೂ ರಾಘು ಕೈಯಲ್ಲಿದ್ದ ಚಾಕು ತನಗಿಷ್ಟ ಬಂದಹಾಗೆ ಇರಿದು ಬಿಟ್ಟಿತ್ತು.‌ ಒದ್ದಾಡಿ ಒದ್ದಾಡಿ ಇಬ್ಬರು ಉಸಿರು ಚೆಲ್ಲಿದರು.
ರಾಘು ಕುಸಿದು ಕುಳಿತ…ಇಬ್ಬರ ಹೆಣಗಳ ನಡುವೆ…ಕೈಯಲ್ಲಿ ರಕ್ತ ಸಿಕ್ತ ಚಾಕು…ಎದೆಯೊಳಗೆ ಭಾರ!
ದೊಡ್ಡ ತಪ್ಪು ಮಾಡ್ದೆ…ಕಳ್ಳ‌‌…ಅಲ್ಲ…ಕೊಲೆಗಾರ ಆದ್ನ…..ರಾಘು ಎದ್ದ…ಓಡಲಾರಂಭಿಸಿದ…ಅಮ್ಮ…ಸುಮಾ…ಕಣ್ಣ ಮುಂದೆ ಹಾದು ಹೋದಂತಾಯಿತು. ರಾಘು ಓಡುತ್ತಿದ್ದ. ಕೈಯಲ್ಲಿದ್ದ ಚಾಕು ಎಸೆದ. ದುಃಖದ ಸಂಕೇತವಾಗಿ ಕಣ್ಣಿಂದ ಜಾರುತ್ತಿದ್ದ  ನೀರನ್ನು ತೋಳಿನಿಂದ ಒರೆಸಿಕೊಳ್ಳುತ್ತಾ ಓಡುತ್ತಿದ್ದ.


About The Author

Leave a Reply

You cannot copy content of this page

Scroll to Top