ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಓ ಮೌನವೇ! ಮಹಾಮೌನವೇ!
ನೀರವ ನಿರಾಳ ಮೌನವೇ!
ಬಾ ನನ್ನೆದೆಯಾಳದಲಿ
ನಿಶ್ಚಲವಾಗಿ ನೆಲೆಸು
ಶರಣಾಗಿರುವೆ ನಿನಗೀಗ
ಸೋತು ಬಂದಿರುವೆ ನಿನ್ನ ಬಳಿಗೀಗ
ಕರುಣೆದೋರು ದಯೆತೋರಿ||

ಓ!ಅನಂತ ಮಹಾಮೌನವೇ!
ನಿನ್ನ ಮೌನಗರ್ಭದಲಿ ಮಿಸುಕಾಡುತಿರುವ
ಭಾವಕೂಸುಗಳೆಲ್ಲ ಸುಂದರ ಪದಗಳೇ
ಒಂದೊಂದು ಮೌನ ಮಹಾಕಾವ್ಯಗಳೇ||

ತೀಡಿ ಬಂದ ತಂಗಾಳಿಯು
ತೂಗಿ ತಂದ ಮಣ್ಣ ಗಂಧವೆಲ್ಲ
ಬಾಳ ಗಂಧವೇl
ತುಂಬಿ ಬಂದ ತಾಯ್ ಮಮತೆಯೆಲ್ಲ
ಮಡಿಲ ಮಗುವಿಗೆ ಜೋಗುಳವೇ l
ಮೌನದ ಬಿಸಿ ಅಪ್ಪುಗೆಯದು
ಸುಂದರ ಭಾಷೆಯೇ ll

ಪ್ರಕೃತಿಯ ಭಾಷೆಯೆಲ್ಲವೂ ಮೌನವೇl
ಮೊಗ್ಗೆಯೊಡೆದು ಅರಳುವ ಅರಳೇ!
ಒಲವಿನ ಬೆಳಕೇ!
ಸದ್ದಿಲ್ಲದೇ ನಡೆಯುವ ಸಂಭ್ರಮವೇ!

ಓ ಮೌನವೇ!
ಸೂರ್ಯೋದಯ ಚಂದ್ರೋದಯ
ನಿನ್ನ ಪದ ಲಾಲಿತ್ಯವೇ l
ದಣಿದ ಮನಗಳಿಗೆ ನಿನ್ನ ಮಡಿಲದು
ಹೂವಿನ ಹಾಸಿಗೆಯೇ ll

ಗಾಳಿಯ ಮೃದು ಸ್ಪರ್ಶಕೆ ತೂಗುವ
ಸಸ್ಯ ಕುಲವೇ ಭೂ ದೇವಿಯ ದಣಿವಿಗೆ
ಬೀಸಿದ ಮೌನ ಚಾಮರವೇ ll
ಅಯ್ಯೋ!ಗಳಿಗೆಗೊಂದು ತೆರೆ ಬಂದು
ಕಲಕುತಿದೆ ಕಡಲ ಧ್ಯಾನವನೆ l
ಹಕ್ಕಿಗಳಿಂಚರವದು ತೇಲಿ ಬಂದು
ಕದಡುತಿದೆ ಅನಂತಕಾಲದ ಬನದ ತಪವನೆ l
ನೀರವತೆಯಲೂ ಮೌನವೇ
ಸದ್ದಿನಲ್ಲೂ ನಿದ್ದೆಯೇ l
ಮೌನವೇ ಇದೆಲ್ಲ ನಿನ್ನ ಲೀಲೆಯೇ ll

ಋಷಿಮುನಿಗಳ ಕವಿಪುಂಗವರೆದೆಯಲಿ
ವಿರಮಿಸಿದ ಮಾತೆಯೇ!ಮೌನ ತಪಸ್ವಿನಿಯೇ!
ಜಗದ ಸುಂದರ ಭಾಷಿಣಿ ನೀನೆಯೇ ll
ಕರುಣೆದೋರಿ ಬಾ ನನ್ನೊಳಗೆ ತಾಯಿಯೇ l
ಮೌನದೇವಿಯೇ!
ಅನಂತಯಾನಕೆ ಮೌನದಲಿ
ಕೈಹಿಡಿದು ನಡೆಸೆನ್ನನುl

ಶರಣಾಗಿರುವೆ ನಾನೀಗ ನಿನಗೆ
ಓ!ಮೌನದೇವತೆಯೇ
ನಾನೀಗ ಶರಣಾಗಿರುವೆ ನಿನ್ನಡಿಗಳಿಗೆ
ಓ!ಮೌನ ದೇವತೆಯೇ
ಶರಣಾಗಿರುವೆ ನಿನಗೀಗ ಶರಣಾಗಿರುವೆ.


About The Author

Leave a Reply

You cannot copy content of this page

Scroll to Top