ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ಚೂರಾದ ಹೃದಯ ತೆರೆದು ತೋರಿಸಲಿ ಹೆಂಗ ಹೇಳ
ನೋವಿನಲಿ ಒದ್ದಾಡೊ ಮನಸ ಬಚ್ಚಿಡಲಿ ಹೆಂಗ ಹೇಳ
ನೂರು ಮಾತು ಎದೆಯಲ್ಲೇ ಉಳಿದು ಕೊರೆಯುತಿವೆ
ಉಕ್ಕೊ ಬಯಕೆ ಬಾಂಧಳವ ಬತ್ತಿಸಲಿ ಹೆಂಗ ಹೇಳ
ದುಃಖದೊಡಲ ಕೊರೆದ ನೋವಿನಲೆಗಳು ಬೊಬ್ಬಿಡುತಿವೆ
ದಿನರಾತ್ರಿ ಕಂಡ ಕನಸನೆಲ್ಲ ಕೊಂದುಬಿಡಲಿ ಹೆಂಗ ಹೇಳ
ತುಂಟತನದಿ ಮಾಡಿದ ಆ ಗಾಯಕೆ ಮುಲಾಮು ಸಿಕ್ಕೀತೇ
ಕಂಗೋಳಿಸುವ ಆಸೆಗಳ ತೋಟಕೆ ಕಿಚ್ಚಚ್ಚಲಿ ಹೆಂಗ ಹೇಳ
ಕಾದು ಕಾದು ಕಂಗೆಟ್ಟು ಬೆಂಗಾಡ ಹೊಕ್ಕು ಬೆಚ್ಚಿಬಿದ್ದಿರುವೆ
ಒತ್ತರಿಸಿ ಬರೋ ಹಂಬಲದ ಹಸಿವ ಹಿಂಗಿಸಲಿ ಹೆಂಗ ಹೇಳ
ಸಂಗದಾಟ ತಂದ ಸಂಕಷ್ಟದ ಬೇನೆ ಸುಡುತಿವೆ ನನ್ನೊಡಲ
ತಾಳದ ತುಡಿತಗಳ ತಾಪವೇರಿರಲು ತಗ್ಗಿಸಲಿ ಹೆಂಗ ಹೇಳ
ಅನು ಹತ್ತು ಜನುಮಕಾಗುವಷ್ಷು ಅನುರಾಗ ಕಟ್ಟಿಟ್ಟಿದ್ದಳು
ತೋಡಿದ ಒಲವಿನೊರತೆ ಬತ್ತುತಿರಲು ಸಹಿಸಲಿ ಹೆಂಗ ಹೇಳ
ಡಾ ಅನ್ನಪೂರ್ಣ ಹಿರೇಮಠ



