ಕಾವ್ಯ ಸಂಗಾತಿ
ಎ.ಹೇಮಗಂಗಾ
ತನಗಗಳು


ಚಿಕ್ಕದೊಂದು ರಂಧ್ರವೂ
ಬಲಶಾಲಿಯೇ ಹೌದು
ತೇಲುವ ಹಡಗನ್ನು
ಮುಳುಗಿಸುವುದದು
ಸಾಗರದ ಮೇಲಿದೆ
ಪುಟ್ಟ ಹಿಮ ಪರ್ವತ
ಆಳದಲ್ಲಿದೆ ಇನ್ನೂ
ಕಾಣಲಾಗದು ಕಣ್ಣು
ಭೂಮಂಡಲ ಅಗಾಧ
ನಶ್ವರ ಜೀವಿ ನಾನು
ಒಯ್ಯಲಾರೆ ಏನನ್ನೂ
ಸಾವಪ್ಪಲು ನನ್ನನ್ನು
ಪ್ರಾರ್ಥಿಸು ದೇವರಲಿ
ಆಸೆ ಫಲಿಸಲೆಂದು
ಶ್ರಮದಿ ಸಾಧಿಸಲು
ಆತ್ಮ ಶಕ್ತಿ ನೀಡೆಂದು
ಮನುಜ ಬುದ್ಧಿಜೀವಿ
ಕಟ್ಟುತ್ತಾನೆ ಈಗಲೂ
ಹಿಮದ ದಿಮ್ಮಿ ಮನೆ
ಹೆಸರಾಗಿದೆ ‘ ಇಗ್ಲೂ ‘
ಹಕ್ಕಿಯಂತೆ ಹಾರಿವೆ
ಪುಕಾರುಗಳು ಇಂದು
ರೆಕ್ಕೆ ಪುಕ್ಕ ಪಡೆದು
ಬಾಯಿಯಿಂದ ಬಾಯಿಗೆ
ಚುಮು ಚುಮು ಚಳಿಗೆ
ಕಂಬಳಿ ಹೊದ್ದ ಮಂದಿ
ಆಗಿದ್ದಾರೆ ಮುಂಜಾನೆ
ಮನೆಯೊಳಗೇ ಬಂದಿ
ಚಳಿಗಾಲದ ಚಳಿ
ಬೇಸಿಗೆಯಲ್ಲಿ ಬಿಸಿ
ಎರಡು ಹೆಚ್ಚಾದರೂ
ಜನಕ್ಕೆ ತಲೆ ಬಿಸಿ
ಬೆಳೆಯಬೇಕು ನೀನು
ಯಾರೆಷ್ಟೇ ತುಳಿದರೂ
ಗರಿಕೆ ಹುಲ್ಲಿನಂತೆ
ಛಲವ ಬಿಡದಂತೆ
ದಣಿವನ್ನು ತೋರದೇ
ದುಡಿಯುವಳು ತಾಯಿ
ನಗುತ್ತಲೇ ಹೊಣೆಯ
ಪೂರೈಸುವಳು ಮಾಯಿ
ಸಾವ ತೆಕ್ಕೆಯೊಳಗೆ
ಜೀವಗಳು ನಿರ್ಜೀವ
ಅನಲ ಅನಾಹುತ
ಸೂತ್ರಧಾರಿ ವಿಧಾತ
ಬೆಂಕಿಯು ವ್ಯಾಪಿಸಿತು
ಎಲ್ಲೆಡೆ ಸರಸರ
ಕೊನೆಗೆ ಉಳಿಯಿತು
ಬಸ್ಸಿನ ಕಳೇಬರ
ಎ. ಹೇಮಗಂಗಾ



